ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 16

ಪರಿಚ್ಛೇದ – 6
ಬಂದಿನಿ

ಅರಮನೆಯ ತೋರಣದ್ವಾರದ ಕಾವಲುಗಾರರ ಸ್ಥಾನಗೌರವಕ್ಕೆ ಧಕ್ಕೆ ಉಂಟಾಯಿತು. ಸುಗೋಪಾಳ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸ ಇನ್ನಿಲ್ಲವಾಯಿತು. ಇದರ ಮೇಲೆ ರಾತ್ರಿ ಪಾಳಿಯ ಇಬ್ಬರು ನಗರ ರಕ್ಷಕರು ಒಬ್ಬ ಕಳ್ಳನನ್ನು ಕರೆ ತಂದು ಇವನ ವಶಕ್ಕೆ ಕೊಟ್ಟ ಮೇಲಂತೂ ಸುಗೋಪಳೇ ಅಲ್ಲ, ಸಮಸ್ತ ನಾರೀ ಜಾತಿಯ ಮೇಲೆ ತಿರಸ್ಕಾರ ಉಂಟಾಯಿತು. ಅವಳು ರಾಜಕುಮಾರಿಯ ಗೆಳತಿ ಅಲ್ಲದೆ ಬೇರೆ ಯಾರಾದರೂ ಆಗಿದ್ದರೆ ಆ ಕಳ್ಳನನ್ನು ರಾತ್ರಿಯೆಲ್ಲಾ ಕಾಯುವ ಜವಾಬ್ದಾರಿಯನ್ನು ಅವನು ವಹಿಸಿಕೊಳ್ಳುತ್ತಿರಲಿಲ್ಲ. ದೇಶದಲ್ಲಿ
ಶಾಂತಿ ನೆಲೆಸಿತ್ತು. ಯಾವುದೇ ರೀತಿಯ ಉಪದ್ರವವಿರಲಿಲ್ಲ. ಇಂಥ ಸಮಯದಲ್ಲಿ ಅರಮನೆಯ ತೋರಣ ದ್ವಾರದಲ್ಲಿ ಕಾವಲು ಕಾಯುವಾಗ ರಾತ್ರಿಯೆಲ್ಲಾ ಎಚ್ಚರಗೊಂಡಿರಬೇಕಾಗಿರಲಿಲ್ಲ. ಬಾಗಿಲಿಗೆ ಬೆನ್ನುಕೊಟ್ಟು ಕಣ್ಣು ಮುಚ್ಚಿತೆಂದರೆ ಬೆಳಕು ಹರಿದುಬಿಡುತ್ತಿತ್ತು.

ಆದರೆ, ಈಗ ಅಶ್ವಚೋರನಿರುವುದರಿಂದ ಕಣ್ಣು ಮುಚ್ಚುವುದು ಹೇಗೆ? ಕಳ್ಳನೇನಾದರೂ ತಪ್ಪಿಸಿಕೊಂಡರೆ ದೇವರೇ ಗತಿ. ಈಗ ರಾತ್ರಿಯೆಲ್ಲಾ ಎಚ್ಚರವಿದ್ದು ಈ ಕಳ್ಳನನ್ಮಗನ್ನ ಕಾಯಬೇಕಾಗಿದೆ. ಬಹಳ ಬೇಜಾರು ಮಾಡಿಕೊಂಡ ಕಾವಲುಗಾರನು ಚಿತ್ರಕನನ್ನು ಕುರಿತು ‘ಅಯ್ಯೋ ಕುದುರೆಕಳ್ಳ, ನಿನ್ನ ವೇಷಭೂಷಣ ಗಳನ್ನು ನೋಡಿದರೆ ನೀನೊಬ್ಬ ಶಿಷ್ಟ ವ್ಯಕ್ತಿ ಇರಬಹುದು ಎನಿಸುತ್ತದೆ. ನೀನು ಇಂಥ ಕೆಟ್ಟ ಕೆಲಸ ಏಕೆ ಮಾಡಿದೆ? ರಾಜಕುಮಾರಿಯ ಕುದುರೆಯನ್ನು ಏಕೆ ಕದ್ದೆ?’ ಎಂದು ಕೇಳಿದನು.

ಕಳ್ಳನು ಉತ್ತರ ಕೊಡದೆ ಆಕಾಶದ ಕಡೆ ನೋಡುತ್ತಿದ್ದನು. ಕಾವಲುಗಾರ ಮತ್ತೆ ‘ಹೋಗಲಿ ಕದ್ದಿದ್ದೇನೋ ಸರಿ, ಆದರೆ ಏಕೆ ಸಿಕ್ಕಿ ಬಿದ್ದೆ? ಸಿಕ್ಕಿಬಿದ್ದಿದ್ದೇನೋ ಸರಿ, ನಾಳೆ ಬೆಳಗ್ಗೆ ಸಿಕ್ಕಿ ಬಿದ್ದಿದ್ದರೆ ನಿನಗೆ ಏನು ತೊಂದರೆಯಾಗುತ್ತಿತ್ತು?’ ಎಂದು ಪ್ರಶ್ನಿಸಿದನು.

ಈ ಬಾರಿಯೂ ಕಳ್ಳನು ಏನೂ ಉತ್ತರಿಸಲಿಲ್ಲ.

‘ಹೇಗೂ ನೀನು ನಾಳೆ ಬೆಳಗ್ಗೆ ಭಯಂಕರವಾದ ಶೂಲಕ್ಕೇರುವೆ. ಹೀಗಿರುವಾಗ ಈ ರಾತ್ರಿ ನಮಗೆ ತೊಂದರೆ ಕೊಡುವುದರಿಂದ ನಿನಗೇನು ಲಾಭ?’

ಕಾವಲುಗಾರನಿಗೇ ಬೇಸರವಾಗಿ ಕಡೆಗೆ ಸುಮ್ಮನಾದನು. ಅಷ್ಟರಲ್ಲಿ ಅವನ ಪಕ್ಕದಲ್ಲಿ ಒಂದು ಕರಿಯ ಬಣ್ಣದ ಆಕೃತಿ ಬಂದು ನಿಂತ ಹಾಗಾಯಿತು. ಅಂಜಿಕೆಯಿಂದ ಕಾವಲುಗಾರನು ಆ ಕಡೆ ತಿರುಗಿ ನೋಡಿದನು. ನಗರದ ಜೀವಂತ ಪ್ರೇತ ‘ಗುಹ’ ಸದ್ದಿಲ್ಲದೆ ಅವನ ಬಳಿ ಬಂದು ನಿಂತಿದ್ದಾನೆ.

ಈ ಕಥೆಯಲ್ಲಿ ಗುಹನ ಸ್ಥಾನ ಬಹಳ ಸ್ವಲ್ಪವೇ ಆದರೂ ಅವನ ಪರಿಚಯ ಇಲ್ಲಿ ಸ್ವಲ್ಪ ಅವಶ್ಯಕವೆನಿಸುತ್ತದೆ. ಅವನೊಬ್ಬ ಹೂಣ. ಹೂಣರ ಆಕ್ರಮಣದ ಸಂದರ್ಭದಲ್ಲಿ ಇಲ್ಲಿಗೆ ಬಂದವನು. ಅರಮನೆಯ ಘರ್ಷಣೆಯಲ್ಲಿ ಅವನ ತಲೆಗೆ ಬಲವಾದ ಹೊಡೆತ ಬಿದ್ದಿದ್ದಿತು. ಕಪಾಳದ ಎಡಭಾಗದಲ್ಲಿ ಒಂದು ದೊಡ್ಡ ಗಾಯದ ಮಚ್ಚೆ ಈಗಲೂ ಅದರ ಸಾಕ್ಷ್ಯದಂತಿದೆ. ಇದರ ಫಲವಾಗಿ ಗುಹನ ಸ್ಮರಣ ಶಕ್ತಿ ಹಾಗೂ ವಾಕ್‍ಶಕ್ತಿ ಶಾಶ್ವತವಾಗಿ ಲುಪ್ತವಾಗಿ ಹೋಗಿದೆ. ಅಂದಿನಿಂದಲೂ ಅವನು ಅರಮನೆಯ ಪ್ರಕಾರದಲ್ಲಿ ವಾಸವಾಗಿದ್ದಾನೆ. ಯಾರೂ ಅವನೊಡನೆ ಯಾವ ಮಾತನ್ನೂ ಆಡುವುದಿಲ್ಲ. ಹಗಲು ಹೊತ್ತಿನಲ್ಲಿ ಅವನು ಎಲ್ಲಿರುತ್ತಾನೆ ಎಂಬುದು ಯಾರಿಗೂ ಗೊತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ಅರಮನೆಯ ಸುತ್ತ ಮುತ್ತ ಬಡಕಲು ದೇಹದ ಕುಬ್ಜಾಕಾರದ ಛಾಯೆಯ ಹಾಗೆ ಓಡಾಡುತ್ತಿರುತ್ತಾನೆ. ರಾತ್ರಿಯ ಕಾವಲುಗಾರರು ಯಾವಾಗಲಾದರೂ ಅವನನ್ನು ನೋಡುವುದುಂಟು. ಆಗ ತೋರಣ ಸ್ತಂಬದ ಬಳಿ ಕುಳಿತು ನಗುತ್ತಿರುತ್ತಾನೆ. ಅಥವಾ ಅತೃಪ್ತ ಪ್ರೇತದ ಹಾಗೆ ಕತ್ತಲಿನ ಪ್ರಾಕಾರದ ಮೇಲೆ ನಡೆದಾಡುತ್ತಿರುತ್ತಾನೆ. ಕಾವಲುಗಾರರು ಬಲವಂತವಾಗಿ ಅವನನ್ನು ಮಾತನಾಡಿಸಿದರೂ ಗುಹನು ಮಾತ್ರ ಮೌನವಾಗಿಯೇ ಇರುತ್ತಾನೆ. ಅವನ ಲುಪ್ತವಾದ ಸಂಸ್ಕೃತಿಯ ಹಿಂದೆ ಯಾವ ವಿಚಿತ್ರ ರಹಸ್ಯ ಅಡಗಿದೆಯೋ ಯಾರೂ ಊಹಿಸಲಾರರು.

ಗುಹನು ಹತ್ತಿರ ಬಂದು ಚಿತ್ರಕನ ಸುತ್ತ ಕುಣಿಕುಣಿಯುತ್ತ ಹಲವಾರು ಬಾರಿ ಪ್ರದಕ್ಷಿಣೆ ಹಾಕಿದನು. ಅವನ ಮುಖಕ್ಕೆ ಮುಖ ಇಟ್ಟು ಆಘ್ರಾಣಿಸುವನೋ ಎಂಬಂತೆ ನಟಿಸಿದನು. ಅವನನ್ನು ಹಿಂಭಾಗದಿಂದ ಒಂದು ಸಲ ನೋಡಿದನು. ಅನಂತರ ಸದ್ದಿಲ್ಲದೆ ನಗುನಗುತ್ತ ಕಾವಲುಗಾರನನ್ನು ಕೈಬೀಸಿ ಕರೆದನು.

ಚಿತ್ರಕನ ಎರಡೂ ಕೈಗಳನ್ನು ಹಿಂದಕ್ಕೆ ಸರಿಸಿ ಹಗ್ಗದಿಂದ ಕಟ್ಟಲಾಗಿತ್ತು. ಕಾವಲುಗಾರನು ಅತ್ತ ಹೋಗುವುದನ್ನು ಕಂಡ ಚಿತ್ರಕನು ಉಪಾಯಾಂತರದಿಂದ ಬಿಗಿದ ಕಟ್ಟನ್ನು ಸಡಿಲಗೊಳಿಸಿ ಕೈಗಳನ್ನು ಹೊರಗೆಳೆದನು. ಕಾವಲುಗಾರನು ಇದನ್ನು ಕಂಡು ಕೋಪಗೊಂಡು ‘ಏ ನರಿ ಬುದ್ಧಿಯ ಕಳ್ಳ, ನನಗೆ ಚಳ್ಳೆಹಣ್ಣು ತಿನ್ನಿಸಿ’ ತಪ್ಪಿಸಿಕೊಳ್ಳಲು ಬಯಸುತ್ತೀಯಾ?’ ಎಂದು ಹೇಳಿ ಮತ್ತೆ ಕೈಗಳನ್ನು ಬಲವಾಗಿ ಬಿಗಿದನು.

ಗುಹನು ವಿಚಿತ್ರವಾದ ರೀತಿಯಲ್ಲಿ ಕೂಗಿದನು. ಅದು ಅವ್ಯಕ್ತ ನಗುವಿನಂತಿತ್ತು. ಕಾವಲುಗಾರನು ಅವನ ಕಡೆಗೆ ತಿರುಗಿ ‘ಅಯ್ಯೋ ಗುಹ, ನಿನ್ನಿಂದ ಬಹಳ ಉಪಕಾರವಾಯಿತು. ಈ ಕಳ್ಳ ತಪ್ಪಿಸಿಕೊಂಡಿದ್ದರೆ ನನ್ನನ್ನೇ ಶೂಲಕ್ಕೇರಿಸುತ್ತಿದ್ದರು. ಈ ಕೆಟ್ಟನನ್ಮಗನ್ನ ಬಂಧಿಸಿ ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾಗಿದೆ. ಯಾವಾಗ ಏನು ಮಾಡುವನೋ ಗೊತ್ತಿಲ್ಲ. ಎಲ್ಲಿಯಾದರೂ ಒಂದು ಭದ್ರವಾದ ಕತ್ತಲೆಕೋಣೆ ಇದ್ದಿದ್ದರೆ ಈ ಚಾಂಡಾಳನನ್ನು ಅದರೊಳಗೆ ಕೂಡಿ ಹಾಕಿ ನಿಶ್ಚಿಂತೆಯಿಂದ ಇರಬಹುದಾಗಿತ್ತು’ ಎಂದನು.

ಗುಹನಿಗೆ ಏನೋ ಹೊಳೆದ ಹಾಗಾಯಿತು. ಸ್ವಲ್ಪ ಹೊತ್ತು ತನ್ನ ಬೆರಳು ಕಚ್ಚುತ್ತ ಅಲ್ಲಿಯೇ ನಿಂತು ಯೋಚಿಸತೊಡಗಿದನು.

ಕಾವಲುಗಾರನಿಗೆ ಅಶಾಂತಿ ಹೆಚ್ಚುತ್ತಿತ್ತು. ಗುಹನನ್ನು ಕುರಿತು ‘ಅಯ್ಯೋ ಗುಹ, ನಿನಗೊಂದು ಕಿವಿ ಮಾತು, ಈ ಹೆಂಗಸರನ್ನು ಮಾತ್ರ ಎಂದಿಗೂ ನಂಬಬೇಡ. ಅವರಂಥ ಅಪನಂಬಿಕೆಯ, ತೊಂದರೆ ಕೊಡುವ, ದುಷ್ಟ ಸ್ವಭಾವದ…’ ಇನ್ನೂ ಏನೇನೋ ಹೇಳಬೇಕೆಂದಿದ್ದ ವಾಕ್ಯವನ್ನು ಅವನು ಸರಿಯಾದ ವಿಶೇಷಣಗಳು ಕೂಡಲೆ ಹೊಳೆಯದ ಕಾರಣ ಅರ್ಧಕ್ಕೆ ನಿಲ್ಲಿಸಿದನು.

ಹೆಂಗಸರ ವಿಷಯವಾಗಿ ಕಾವಲುಗಾರನು ಹೇಳಿದ ಮಾತಿನಲ್ಲಿ ಸ್ವಲ್ಪ ಸತ್ಯಾಂಶವಿರಬಹುದು. ಇದನ್ನು ಕೇಳಿದ ಕೂಡಲೆ ಗುಹನ ಕಣ್ಣುಗಳು ಸ್ಫೂರ್ತಿಯಿಂದ ಅರಳಿದುವು. ಅವನು ತನ್ನ ತಲೆಯನ್ನು ಅಲುಗಾಡಸಿ ತನ್ನನ್ನು ಹಿಂಬಾಲಿಸುವಂತೆ ಕಾವಲುಗಾರನಿಗೆ ಸಂಜ್ಞೆ ಮಾಡಿ ಮುಂದೆ ನಡೆದನು.

ಎರಡು ತೋರಣಸ್ತಂಭಗಳಲ್ಲಿಯೂ ಎರಡು ಕಾವಲುಗಾರರ ಕೊಠಡಿ ಗಳಿರುವುದು ತಿಳಿದ ವಿಷಯವೇ ಆಗಿದೆ. ಇದೇ ರೀತಿ ಪ್ರಾಕಾರದ ಎಲ್ಲ ಕಡೆಗೂ ಸಮಾನಾಂತರದಲ್ಲಿ ಸ್ತಂಭಗೃಹಗಳಿವೆ. ಇವುಗಳಿಗೆ ಬಾಗಿಲುಗಳಿಲ್ಲ. ಅವುಗಳೇನಿದ್ದರೂ ಕಾವಲುಗಾರರ ವಿಶ್ರಾಂತಿ ಗೃಹಗಳು ಮಾತ್ರ. ಅವುಗಳಲ್ಲಿ ಸೆರೆಯಾಳುಗಳನ್ನು ಕೂಡಿ ಹಾಕಲು ಅವಕಾಶವಿಲ್ಲ. ಈ ನಡುವೆ ತೋರಣದ ಪಕ್ಕದಲ್ಲಿರುವ ಎರಡು ಕೊಠಡಿಗಳನ್ನು ಕಾವಲುಗಾರರು ಬಳಸುವುದರಿಂದ
ಸ್ವಚ್ಛವಾಗಿವೆ. ಉಳಿದವುಗಳನ್ನು ಬಳಸುತ್ತಿಲ್ಲವಾದುದರಿಂದ ಖಾಲಿ ಬಿದ್ದಿವೆ. ಬಹುಕಾಲದಿಂದಲೂ ಖಾಲಿ ಬಿದ್ದಿರುವುದರಿಂದ ಅವುಗಳಲ್ಲಿ ಕಸಕಡ್ಡಿ ತುಂಬಿಕೊಂಡು, ಪ್ರವೇಶದ್ವಾರದಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಗುಹನು ಇಂಥ ಬಳಸದಿರುವ ಕೊಠಡಿಯ ಬಾಗಿಲವರೆಗೂ ಹೋಗಿ ಮತ್ತೆ ಕೈಸನ್ನೆ ಮಾಡಿ ಕಾವಲುಗಾರನನ್ನು ಕರೆದನು.

ಕಾವಲುಗಾರನಿಗೆ ಕುತೂಹಲ ಹೆಚ್ಚಿತು. ಆದರೂ ಕಳ್ಳನೊಬ್ಬನನ್ನೇ ಅಲ್ಲಿ ಬಿಟ್ಟು ಹೋಗುವ ಹಾಗಿಲ್ಲ. ಅವನು ಸ್ವಲ್ಪ ಹೊತ್ತು ಯೋಚಿಸಿ, ಚಿತ್ರಕನ ಕೈಗೆ ಕಟ್ಟಿರುವ ಹಗ್ಗವನ್ನು ಹಿಡಿದು ಎಳೆದುಕೊಂಡು ಹೊರಟನು.

ಸ್ತಂಭಗೃಹದ ಬಾಗಿಲ ಬಳಿ ಬಂದು ಕಾವಲುಗಾರ ನೋಡುತ್ತಾನೆ. ಗುಹ ಚಕಮಕಿಯ ಕಲ್ಲನ್ನು ಕುಟ್ಟಿ ಒಂದು ಸಣ್ಣದೀಪ ಹೊತ್ತಿಸುತ್ತಿದ್ದಾನೆ. ಆ ದೀಪವನ್ನು ಎಲ್ಲಿಂದ ತಂದಿದ್ದನೋ ಅವನೇ ಬಲ್ಲ. ಬಹುಶಃ ಅಲ್ಲಿಗೆ ಯಾವಾಗಲೋ ತಂದು ಇಟ್ಟಿದ್ದನೋ ಏನೋ! ಈ ಯಾರೂ ಬಳಸದ ಕೊಠಡಿಗೆ ಗುಹನು ಹೋಗಿ ಬಂದು ಮಾಡುತ್ತಿದ್ದಿರಬಹುದೆಂದು ಕಾವಲುಗಾರನಿಗೆ ಅನ್ನಿಸಿತು.

ಬಹಳ ಕಾಲದಿಂದ ಬಳಸದೆ ಇರುವುದರಿಂದ ಕಸಕಡ್ಡಿ ತುಂಬಿತ್ತು. ಮೂಲೆಗಳಲ್ಲಿ ಜೇಡರ ಬಲೆ. ಒಂದು ಬಾವಲಿ ಬೆಳಕನ್ನು ಕಂಡು ಹೆದರಿ ಚಕ್ರಾಕಾರವಾಗಿ ತಲೆಯ ಮೇಲೆ ಹಾರಾಡಿತು.

ದೀಪ ಹಿಡಿದುಕೊಂಡು ಗುಹನು ಕೊಠಡಿಯ ಗೋಡೆಯ ಬಳಿಗೆ ಹೋದನು. ಒರಟು ಕಲ್ಲಿನ ಗೋಡೆ. ಎರಡು ಕಲ್ಲುಗಳನ್ನು ಜೋಡಿಸಿರುವ ಜಾಗದಲ್ಲಿ ಆಮೆಯ ಬೆನ್ನಿನ ಗುರುತಿನ ಕೆತ್ತನೆ ಕಾಣಿಸಿತು. ಗುಹನು ದೀಪವನ್ನು ಮೇಲಕ್ಕೆ ಎತ್ತಿ ನೋಡಿದನು. ಅನಂತರ ಬೆರಳುಗಳಿಂದ ಒಂದು ಜಾಗವನ್ನು ಒತ್ತಿದನು. ಆಗ ಗೋಡೆಯಲ್ಲಿ ಚೌಕಾಕಾರದ ಒಂದು ದೊಡ್ಡ ಕಲ್ಲು ಪಕ್ಕಕ್ಕೆ ಸರಿಯಿತು.

ಮುಂದುವರೆಯುವುದು…

ಎನ್. ಶಿವರಾಮಯ್ಯ (ನೇನಂಶಿ)
ಚಿತ್ರ ಸಂಗ್ರಹಣೆ: ಮಂಜುಳಾ ಸುದೀಪ್

Related post

Leave a Reply

Your email address will not be published. Required fields are marked *