ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 17

ಹಿಂದಿನ ಸಂಚಿಕೆಯಿಂದ…

ಕಾವಲುಗಾರನಿಗೆ ಆಶ್ಚರ್ಯವಾಯಿತು. ಅದೊಂದು ಸುರಂಗ ಮಾರ್ಗ. ಮಂದ ಪ್ರಕಾಶದ ದೀಪದ ಬೆಳಕಿನಲ್ಲಿ ಸುರಂಗದ ಒಳಗಿನ ಒಳ ಭಾಗಚೆನ್ನಾಗಿ ಕಾಣುತ್ತಿರಲಿಲ್ಲ. ಆದರೆ ಸುರಂಗವು ಕೋಟೆಯ ಗೋಡೆಯ ಒಳಗೆ ಹುತ್ತದೊಳಗಿನ ಬಿಲಗಳಂತೆ ಬಹಳ ದೂರದವರೆಗೆ ಹೋಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೂಣರು ಅರಮನೆಯನ್ನೇನೋ ಆಕ್ರಮಿಸಿಕೊಂಡಿದ್ದರು. ಆದರೆ ಈ ಗುಪ್ತ ಸುರಂಗದ ವಿಷಯ ಅವರಿಗೆ ಗೊತ್ತಾಗಿರಲಿಲ್ಲ.

ಗುಹನು ಮುಸಿ ಮುಸಿ ನಗುತ್ತ ಆ ಬಿಲದೊಳಕ್ಕೆ ಪ್ರವೇಶ ಮಾಡಿ ಕಾವಲುಗಾರನೂ ಹಿಂಬಾಲಿಸುವಂತೆ ಕೈ ಬೀಸಿದನು. ಸುರಂಗ ಅಷ್ಟೇನೂ ಕಿರಿದಾಗಿರಲಿಲ್ಲ. ಇಬ್ಬರು ಜೊತೆಯಾಗಿ ಅಕ್ಕ ಪಕ್ಕದಲ್ಲಿ ಹೋಗುವಷ್ಟು ವಿಸ್ತಾರವಾಗಿತ್ತು. ಕಾವಲಿನವನು ಚಿತ್ರಕನನ್ನು ಕರೆದುಕೊಂಡು ಒಳಹೊಕ್ಕನು.

ಸ್ವಲ್ಪ ದೂರ ಹೋದ ಮೇಲೆ ಕತ್ತಲೆಯ ಗುಹೆಯಂತಿರುವ ಒಂದು ಜಾಗ ಕಾಣಿಸಿತು. ಆ ಕತ್ತಲೆಯ ಕೂಪದ ನಡುವೆ ಕೆಳಕ್ಕೆ ಇಳಿದು ಹೋಗಲು ಅನುಕೂಲವಾಗುವಂತೆ ಮೆಟ್ಟಿಲುಗಳಿರುವುದು ಕಾಣಿಸಿತು. ಮೆಟ್ಟಿಲ ಕಟಕಟಿ ಬಿಟ್ಟರೆ ಮತ್ತೇನು ಕಾಣಿಸಲಿಲ್ಲ.

ಕಾವಲುಗಾರನಿಗೆ ಆಶ್ಚರ್ಯವೋ ಆಶ್ಚರ್ಯ, ‘ಓ ಇಲ್ಲೊಂದು ಕತ್ತಲೆಯ ಕೋಣೆ ಇರುವ ಹಾಗಿದೆ. ಇದು ಈವರೆಗೆ ಯಾರ ಕಣ್ಣಿಗೂ ಬಿದ್ದಿಲ್ಲವೆಂದು ತೋರುತ್ತದೆ. ಗುಹ, ಇದು ನಿನಗೆ ಹೇಗೆ ತಿಳಿಯಿತು?’ ಎಂದು ಕೇಳಿದನು.

ಗುಹನು ತನ್ನ ಹಣೆಯ ಮೇಲಿನ ಗಾಯದ ಮೇಲೆ ಕೈಯಾಡಿಸುತ್ತ ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಅದು ನೆನಪಿಗೆ ಬರಲಿಲ್ಲ.

ಕಾವಲುಗಾರನು ‘ಒಳ್ಳೆಯದೇ ಆಯಿತು. ಈ ರಾತ್ರಿ ಕಳ್ಳನು ಇಲ್ಲಿಯೇ ಇರಲಿ. ನಾಳೆ ಬೆಳಗ್ಗೆ ಬಂದು ಇವನನ್ನು ಹೊರಗೆ ಕರೆದುಕೊಂಡು ಹೋದರಾಯಿತು- ಪ್ರಾಕಾರದ ಒಳಭಾಗಕ್ಕೆ ಹಣಿಕಿನೋಡಲು ಯಾರಿಗೆ ತಾನೇ ಸಾಧ್ಯ! ಪ್ರಾಕಾರದ ಒಳಗೆ ಸುರಂಗವಿರುವುದಾಗಲೀ, ಕತ್ತಲ ಕೋಣೆ ಇರುವುದಾಗಲೀ ಯಾರಿಗೆ ಗೊತ್ತು. ಅದಿರಲಿ, ಗುಹ! ಈ ವಿಷಯ ನಮ್ಮಿಬ್ಬರಿಗಲ್ಲದೆ ಬೇರೆಯವರಿಗೆ ಗೊತ್ತಾಗಬಾರದು’ ಎಂದು ಹೇಳಿದನು.

ಕಾವಲುಗಾರನ ತಲೆಯಲ್ಲಿ ನಾನಾ ಪ್ರಕಾರದ ವಿಚಾರಗಳು ಸುಳಿದಾಡಲಾರಂಭಿಸಿದವು. ‘ಭೂಗರ್ಭದೊಳಗಿನ ಗುಟ್ಟಾದ ಕೊಠಡಿಗಳಲ್ಲಿ ಹಿಂದಿನ ರಾಜರುಗಳು ತಮಗೆ ಸೇರಿದ ಮುತ್ತುರತ್ನಗಳು ಹಾಗೂ ಸಂಪತ್ತನ್ನು ಬಚ್ಚಿಟ್ಟಿರಬಹುದು. ಯಾರಿಗೆ ಗೊತ್ತು? ಈ ಕಳ್ಳನಿಗೆ ಇದೇನಾದರೂ ತಿಳಿದು ಬಿಟ್ಟರೆ ಏನು ಗತಿ? ಆದರೆ ಇವನು ಹೇಗೂ, ನಾಳೆ ಶೂಲಕ್ಕೇರುವುದು ನಿಶ್ಚಯವಾಗಿರುವುದರಿಂದ ಏನೂ ಭಯವಿಲ್ಲ ಎಂದೆಲ್ಲಾ ಯೋಚಿಸುತ್ತ ಅವನು ಚಿತ್ರಕನನ್ನು ಆ ಅಂಧಕೂಪದಂತಿರುವ ಕೊಠಡಿಯೊಳಕ್ಕೆ ತಳ್ಳಿ ಬಾಗಿಲು
ಎಳೆದುಕೊಂಡು, ಅಗಳಿ ಹಾಕಿಕೊಂಡು, ಗುಹನ ಜೊತೆಯಲ್ಲಿ ಮತ್ತೆ ಹೊರಗಡೆ ಬಂದನು. ಮುಕ್ತವಾದ ಆಕಾಶದ ಕೆಳಗೆ ನಿಂತು ಸಮಾಧಾನದ ನಿಟ್ಟುಸಿರು ಬಿಟ್ಟನು. ಗುಹನ ಕಡೆಗೆ ತಿರುಗಿ ನೋಡುವಷ್ಟರಲ್ಲಿ ಅವನು ಅಶರೀರಿಯ ನೆರಳಿನ ಹಾಗೆ ಸದ್ದಿಲ್ಲದೆ ಮಾಯವಾಗಿದ್ದನು.

ಕತ್ತಲೆ ಕೋಣೆಯ ಬಾಗಿಲು ಮುಚ್ಚಿದ ಮೇಲೆ, ದಟ್ಟವಾದ ಕಗ್ಗತ್ತಲೆಯ ನಡುವೆ ನಿಂತಿರುವುದು ಚಿತ್ರಕನಿಗೆ ಅರಿವಾಯಿತು. ಆ ಕೋಣೆಯಲ್ಲಿ ಗಾಳಿಯ ಸಂಚಾರಕ್ಕೆ ಅಡ್ಡಿ ಇರಲಿಲ್ಲ. ಎಲ್ಲಿಯೋ ಕಣ್ಣಿಗೆ ಕಾಣದ ಎಡೆಯಿಂದ ಗಾಳಿ ಒಳಕ್ಕೆ ನುಗ್ಗುತ್ತಿತ್ತು. ಉಸಿರು ಕಟ್ಟಿ ಸಾಯುವ ಭೀತಿ ಇರಲಿಲ್ಲ.

ಚಿತ್ರಕನ ಎರಡೂ ಕೈಗಳು ಹಗ್ಗದಿಂದ ಹಿಂಭಾಗದಲ್ಲಿ ಕಟ್ಟಲ್ಪಟ್ಟಿದ್ದವು. ಕಾವಲಿನವನು ಬಲವಾಗಿ ಬಿಗಿದಿದ್ದನು. ಚಿತ್ರಕನು ಸ್ವಲ್ಪ ಹೊತ್ತು ಪ್ರಯತ್ನ ಮಾಡಿ ಕಷ್ಟಪಟ್ಟು ಹಾಗೂ ಹೀಗೂ ಕಟ್ಟುಗಳನ್ನು ಸಡಿಲಿಸಿ ಕೈಗಳನ್ನು ಬಿಡಿಸಿಕೊಂಡನು. ಸೈನಿಕರ ವಿಚಿತ್ರ ಜೀವನದಲ್ಲಿ ಇಂಥ ಕೌಶಲವನ್ನು ಅವನು ಮೈಗೂಡಿಸಿಕೊಂಡಿದ್ದನು.

ಅನಂತರ ಅವನು ಕತ್ತಲಿನಲ್ಲಿಯೇ ಮೆಲ್ಲಮೆಲ್ಲಗೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದನು. ಐದಾರು ಮೆಟ್ಟಿಲು ಇಳಿದ ಮೇಲೆ, ಇನ್ನು ಮೆಟ್ಟಿಲುಗಳು ಇಲ್ಲವೆಂದು ಪಾದಸ್ಪರ್ಶದಿಂದಲೇ ಅವನ ಅನುಭವಕ್ಕೆ ಬಂದಿತು. ಅಲ್ಲಿ ಒಂದು ಜಗಲಿ ಇರುವ ಹಾಗೆ ಭಾಸವಾಯಿತು.

ಜಗಲಿ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ತಿಳಿಯುವ ಕುತೂಹಲ ಚಿತ್ರಕನಿಗಿರಲಿಲ್ಲ. ಕತ್ತಲೆ ಕೋಣೆಯಿಂದ ಪಾರಾಗುವ ದಾರಿ ಅಲ್ಲಿರುವ ಸಂಭವವಿಲ್ಲ. ಇದ್ದರೂ ಕಗ್ಗತ್ತಲಲ್ಲಿ ಹುಡುಕುವುದು ಅಸಾಧ್ಯವೇ ಸರಿ. ಚಿತ್ರಕನು ಕೊನೆಯ ಮೆಟ್ಟಿಲ ಮೇಲೆ ಕುಳಿತು ಯೋಚನಾ ಲಹರಿಯಲ್ಲಿ ಮುಳುಗಿ ಹೋದನು. ಜೀವನದ ಕೊನೆಯ ಮೆಟ್ಟಿಲಿಗೆ ಬಂದು ತಲುಪಿದ ಹಾಗೆ ಅವನ ಮನಸ್ಸಿಗೆ ತೋರಿತು. ಅವನಿಗೆ ನಗು ಬಂತು. ನಿಯತಿಯ ಜಾಲದಲ್ಲಿಅವನು ಸಿಕ್ಕಿ ಬಿದ್ದಿದ್ದಾನೆ. ಆದರೆ ಆಶ್ಚರ್ಯ! ಅವನ ನಗಣ್ಯವಾದ ಜೀವನವನ್ನು ಸಮಾಪ್ತಿಯ ದಡದವರೆಗೆ ತಲುಪಿಸಲು ಇಷ್ಟೊಂದು ಕಷ್ಟಕರವಾದ ಪ್ರಯತ್ನವೇ! ಇಷ್ಟೊಂದು ಷಡ್ಯಂತ್ರವೇ! ಅವನು ಯುದ್ಧವೀರ. ಅವನಿಗೆ ಮೃತ್ಯುವಿನ ಜೊತೆ ಘನಿಷ್ಟವಾದ ಪರಿಚಯ! ಆದರೆ ಈಗ ಮೃತ್ಯುವು ನೇರವಾಗಿ ಬಾಣದ ರೂಪದಲ್ಲಿಯೋ ಅಥವಾ ಕತ್ತಿಯ ಅಲಗಿನ ರೂಪದಲ್ಲಿಯೋ ಬರದೆ ಈ ರೀತಿ ಕುಟಿಲ ಮಾರ್ಗದಲ್ಲಿ ಬರುವುದೇಕೆ? ಅವನಿಗೆ ತನ್ನ ಜೀವನದ ಕಥೆಯೆಲ್ಲಾ ನೆನಪಿಗೆ ಬಂದಿತು. ಸಾವು ಅನೇಕ ಬಾರಿ ಅವನ ಬಳಿಗೆ ಬಂದಿತ್ತು. ನಕ್ಕು ತಿರಸ್ಕಾರದಿಂದ ಮತ್ತೆ ಹಿಂದಿರುಗಿತ್ತು. ಆದರೆ ಈ ರೀತಿ ಅಬ್ಬರ ಮಾಡಿಕೊಂಡು ಎಂದೂ ಬಂದಿರಲಿಲ್ಲ!

ಶೈಶವಾವಸ್ಥೆಯ ನೆನಪು ಚಿತ್ರಕನಿಗೆ ಬರುತ್ತಿಲ್ಲ. ಐದು ವರ್ಷ ವಯಸ್ಸಿನವನಿದ್ದಾಗ ಯಾವುದೋ ಒಂದು ಊರಿನಲ್ಲಿ ಒಬ್ಬ ಅಂಗವಿಕಲನ ಜೊತೆಯಲ್ಲಿಅವನು ವಾಸವಾಗಿದ್ದನು. ಆ ವಿಕಲಾಂಗನು ಒಬ್ಬ ಅರೆಹುಚ್ಚನಂತಿದ್ದನು. ಅವನು ಚಿತ್ರಕನಿಗೆ ಒಮ್ಮೊಮ್ಮೆ ಹೊಡೆಯುತ್ತಿದ್ದನು. ಒಮ್ಮೊಮ್ಮೆ ಮುದ್ದಿಸುತ್ತಿದ್ದನು. ಅವನ ಬಳಿ ಸಾಣೆ ಹಿಡಿದ ಚೂರಿಯೊಂದಿತ್ತು. ಆ ಚೂರಿಯಿಂದ ಚಿತ್ರಕನ ದೇಹವನ್ನು ಗಾಯಗೊಳಿಸುತ್ತಿದ್ದನು. ಆ ಮೇಲೆ ಕಾಡಿನಿಂದ ಯಾವುದೋ ಗಿಡದ ಸೊಪ್ಪನ್ನು ತಂದು, ರಸ ಹಿಂಡಿ ಇಲ್ಲವೆ ಅದನ್ನು ಗಾಯದ ಮೇಲೆ ಕಟ್ಟಿ ಗುಣಪಡಿಸುತ್ತಿದ್ದನು. ಒಂದು ದಿನ ಆ ಹುಚ್ಚ ಇದ್ದಕ್ಕಿದ್ದಂತೆ ಎಲ್ಲಿಗೋ ಹೊರಟುಹೋದವನು ಮತ್ತೆ ಬರಲೇ ಇಲ್ಲ.

ಮತ್ತೆ ಕೆಲವು ದಿನಗಳ ಘಟನೆಗಳು ಚಿತ್ರಕನ ನೆನಪಿಗೆ ಬರಲಿಲ್ಲ. ಎಲ್ಲಿ, ಯಾರ ಆಶ್ರಯದಲ್ಲಿ, ಬಾಲ್ಯ ಕಳೆದು ಯೌವನ ಪ್ರಾಪ್ತವಾಯಿತೋ ಆ ಎಲ್ಲವೂ ಅವನ ನೆನಪಿಗೆ ಬಾರದಾಯಿತು.

ಮುಂದುವರೆಯುವುದು…

ಎನ್. ಶಿವರಾಮಯ್ಯ (ನೇನಂಶೀ)

Related post

Leave a Reply

Your email address will not be published. Required fields are marked *