ಹಿಂದಿನ ಸಂಚಿಕೆಯಿಂದ….
ಯೌವನದ ಆರಂಭದಲ್ಲಿ ಅವನು ಊರಿಂದೂರಿಗೆ ಸಂಚಾರ ಮಾಡುತ್ತ ವ್ಯಾಪಾರ ಮಾಡುವ ಒಬ್ಬ ವ್ಯಾಪಾರಿಯ ಜೊತೆ ಸೇರಿಕೊಂಡು ಊರೂರು ಅಲೆಯುತ್ತಿದ್ದನು. ಅವನ ಸಂಪರ್ಕದಿಂದ ಅಲ್ಪ ಸ್ವಲ್ಪ ಓದು- ಬರೆಹವನ್ನು ಕಲಿತನು. ಸಾರ್ಥವಾಹ ವಣಿಕರು ಒಂಟೆಯ ಬೆನ್ನು ಮೇಲೆ ಸರಕನ್ನು ಹೇರಿಕೊಂಡು ದೇಶ ದೇಶಾಂತರಗಳಲ್ಲಿ ಸಂಚರಿಸಿ ವ್ಯಾಪಾರ ಮಾಡುತ್ತಿದ್ದರು. ಚಿತ್ರಕನು ಅವರ ಜೊತೆ ಇದ್ದುಕೊಂಡು ಅನೇಕ ಸಮೃದ್ಧ ನಗರಗಳನ್ನು ನೋಡಿದ್ದನು. ಪುರುಷಪುರ, ಮಥುರಾ, ವಾರಾಣಸಿ, ಪಾಟಲಿಪುತ್ರ, ತಾಮ್ರ ಲಿಪ್ತಿ, ಉಜ್ಜಯಿನಿ, ಕಾಂಚಿ- ಉತ್ತರಾಪಥ ಹಾಗೂ ದಕ್ಷಿಣಾ ಪಥದ ಅನೇಕ ನಗರಗಳ ನೇರ ಪರಿಚಯ ಚಿತ್ರಕನಿಗೆ ಆಯಿತು.
ವಣಿಕ ಸಂಪ್ರದಾಯದವರು ಜೈನಧರ್ಮಾವಲಂಬಿಗಳು ಅವರು ಮಾಂಸ ತಿನ್ನುತ್ತಿರಲಿಲ್ಲ. ಆದರೆ ಚಿತ್ರಕನಿಗೆ ಮೀನಿನ ಮಾಂಸವೆಂದರೆ ಬಹಳ ಇಷ್ಟ. ಅದು ಅವನ ಪ್ರಕೃತಿ ಸಹಜ ಗುಣ. ಅವನು ಅವಕಾಶ ಸಿಕ್ಕಿದಾಗ ಕದ್ದು ಮುಚ್ಚಿ ದನದ ಮಾಂಸವನ್ನೂ ತಿಂದು ಬಿಡುತ್ತಿದ್ದ. ಒಂದು ದಿನ ಅವನು ಸಿಕ್ಕಿ ಬಿದ್ದ.
ವಣಿಕ ಸಂಪ್ರದಾಯದವರು ಅವನನ್ನು ತಮ್ಮ ಗುಂಪಿನಿಂದ ಹೊರಗಟ್ಟಿದರು. ಚಿತ್ರಕನಿಗೆ ತನ್ನದೆಂಬುವ ಒಂದು ದೇಶವಿಲ್ಲ. ಆತ್ಮೀಯರಿಲ್ಲ. ಜಗತ್ತಿನಲ್ಲಿ ಅವನು ಸಂಪೂರ್ಣವಾಗಿ ಏಕಾಕಿ. ಇಲ್ಲಿಂದ ಮುಂದೆ ಅವನ ಯುದ್ಧ- ಜೀವನದ ಆರಂಭ. ಅವನದು ಬಲಿಷ್ಠವಾದ ದೇಹ. ಅವನು ಸುಲಭವಾಗಿ ಯುದ್ಧ ವಿದ್ಯೆಗಳನ್ನು ಕಲಿತನು. ಅವನು ಒಬ್ಬಂಟಿಗನಾದುದರಿಂದ ಸ್ವಶಕ್ತಿ ಯಿಂದಲೇ ಎಲ್ಲರನ್ನೂ ಕಲಿತನು. ಅವನು ಬುದ್ಧಿ ಹಾಗೂ ಬಾಹುಬಲವನ್ನೇ ಆಧಾರವಾಗಿಟ್ಟುಕೊಂಡು ಜೀವನಯುದ್ಧಕ್ಕೆ ಧುಮುಕಿದರು.
ಆಗ ಆರ್ಯಾವರ್ತದಲ್ಲಿ ಎಲ್ಲೆಲ್ಲಿಯೂ ಸಂಘರ್ಷ ನಡೆಯುತ್ತಿತ್ತು. ಈ ಪಕ್ಷ ಆಪಕ್ಷವೆಂದು ನೋಡದೆ ಯಾವುದೋ ಒಂದು ಪಕ್ಷವನ್ನು ಸೇರಿಕೊಂಡು ಅವರ ಪರವಾಗಿ ಹೋರಾಡುತ್ತಿದ್ದನು. ಯಾವುದೇ ರಾಷ್ಟ್ರದ ಬಗೆಗೆ ಅವನಿಗೆ ಮಹತ್ವವಿಲ್ಲ. ಎಲ್ಲಿ ಅರ್ಥಲಾಭವೋ ಅಲ್ಲಿ ಅವರ ಪರ ಹೋರಾಟಕ್ಕಾಗಿ ಮುಂದಾಗುತ್ತಿದ್ದನು. ಒಂದು ಪಕ್ಷದವರ ಪರಾಜಯದಿಂದ ಯುದ್ಧ ನಿಂತು ಹೋದರೆ, ಬೇರೆ ಕಡೆ ಯುದ್ಧವನ್ನು ಹುಡುಕಿಕೊಂಡು ಹೋಗತ್ತಿದ್ದನು.
ಇದೇ ರೀತಿ ಅವನ ಜೀವನದ ಹತ್ತು ವರ್ಷಗಳು ಕಳೆದವು. ಸೌವೀರ ದೇಶದಲ್ಲಿ ಒಂದು ಅಂತಃಕಲಹದಿಂದುಂಟಾದ ಸಣ್ಣ ಪ್ರಮಾಣದ ಯುದ್ಧ ನಿಂತು ಹೋಗಲು, ಮತ್ತೆ ತನ್ನ ಭಾಗ್ಯದ ಅನ್ವೇಷಣೆಯಲ್ಲಿ ಆ ದೇಶ ಬಿಟ್ಟು ಹೊರ ನಡೆದನು. ಸೌವೀರ ಯುದ್ಧದಲ್ಲಿ ಅವನಿಗೆ ವಿಶೇಷ ಲಾಭವೇನೂ ಆಗಲಿಲ್ಲ. ಅಷ್ಟೇ ಅಲ್ಲ ಅವನ ಕುದುರೆ ಬೇರೆ ಸತ್ತು ಹೋಯಿತು. ಅಲ್ಲಿಂದ ಹೊರಟವನು ಗೊತ್ತು ಗುರಿ ಇಲ್ಲದವನಂತೆ ಅಲೆಯುತ್ತ ಇರುವಾಗ ಗಾಂಧಾರದ
ಗಡಿಭಾಗದಲ್ಲಿ ಯುದ್ಧ ನಡೆಯುವುದೆಂಬ ವದಂತಿ ಅವನ ಕಿವಿಗೆ ಬಿತ್ತು. ಆದ್ದರಿಂದ, ಈ ಕಡೆಗೆ ಪ್ರಯಾಣ ಬೆಳಸಿದ. ಗಾಂಧಾರದ ಮಾರ್ಗವು ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಕಲ್ಲು ಮುಳ್ಳುಗಳಿಂದ ಕೂಡಿದ ಗಿರಿಗಹ್ವರಗಳು. ಪರಿಚಯವಿಲ್ಲದ ದೇಶ, ಸುತ್ತು ಬಳಸಿನ ದಾರಿ. ಹೀಗಾಗಿ ದಾರಿತಪ್ಪಿ, ದೀನಸ್ಥಿತಿಗೆ ಬಂದ ಅವನು ವಿಟಂಕ ರಾಜ್ಯಕ್ಕೆ ಕಾಲಿಟ್ಟನು. ಆಮೇಲೆ ಸುಗೋಪಾಳ ಅರವಂಟಿಗೆಯಿಂದ ಇಂದಿನವರೆಗೂ ಅನೇಕ ಘಟನಾವಳಿಗಳು ನಡೆದು ಕೊನೆಗೆ ಈ ಕತ್ತಲೆ ಕೋಣೆಯಲ್ಲಿ ಅವನ ಜೀವನದ ಕೊನೆಯ ಘಟ್ಟ ಬಂದು ನಿಂತಿತ್ತು.
ಮುಚ್ಚಿದ ಕಣ್ಣುಗಳಿಂದ ಚಿತ್ರಕನು ತನ್ನ ಜೀವನ ಘಟನೆಗಳನ್ನು ಮೆಲುಕು ಹಾಕುತ್ತಿದ್ದನು. ಕೆಲವೊಮ್ಮೆ ಅದರ ಏಕಸೂತ್ರತೆಗೆ ಭಂಗ ಬರುತ್ತಿತ್ತು. ಆದರೆ ಮತ್ತೆ ಅದು ಹೆಣೆದುಕೊಂಡು ಮುಂದುವರಿಯುತ್ತಿತ್ತು. ಬಳಲಿದ ದೇಹ ನಿದ್ರೆಗೆ ಶರಣಾಗುತ್ತಿತ್ತು. ಆದರೆ ಅನೇಕ ಘಟನೆಗಳಿಂದ ನೊಂದ ಮನಸ್ಸು ನಿದ್ರೆಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ.
ನಿದ್ರೆ ಮತ್ತು ಜಾಗರಣೆಯ ನಡುವೆ ಮನಸ್ಸು ಹೊಯ್ದಾಡುತ್ತಿತ್ತು. ಆದರೆ ಸ್ವಲ್ಪ ಹೊತ್ತಿನ ನಂತರ ಚೇತನವು ಸಂಪೂರ್ಣವಾಗಿ ಜಾಗ್ರತೆಯ ಸ್ಥಿತಿಗೆ ಬಂದಿತು. ಯಾರೋ ಅವನ ಮುಖದ ಮೇಲೆ ಮೃದುವಾಗಿ ಕೈಯಾಡಿಸುತ್ತಿರುವ ಹಾಗೆ ಮನಸ್ಸಿಗೆ ಹೊಳೆಯಿತು. ಗಾಢಾಂಧಕಾರದಲ್ಲಿ ಯಾರನ್ನೂ ನೋಡಲು ಸಾಧ್ಯವಾಗುತ್ತಿಲ್ಲ. (ಕತ್ತಲೆಯಾದ ಕಾರಣ ಯಾರೂ ಕಣ್ಣಿಗೆ ಕಾಣುತ್ತಿಲ್ಲ) ಬಾವಲಿಯ ರೆಕ್ಕೆ ತಗುಲಿರಬೇಕು. ಅವು ಕತ್ತಲಲ್ಲಿ ಹಾರಾಡುತ್ತ, ಸ್ಪರ್ಶೇಂದ್ರಿಯದ ಮೂಲಕ ಹಾರಾಟಕ್ಕೆ ತಡೆಯುಂಟು ಮಾಡುತ್ತಿರುವ ವಸ್ತುವನ್ನು ಅನುಭವದಿಂದ ತಿಳಿದು, ದಿಕ್ಕು ಬದಲಾಯಿಸಿಕೊಂಡು ಹಾರುತ್ತಿರಬಹುದು. ಅದು ಬಾವಲಿಯೇ ಇರಬೇಕೆಂದು ಮೊದಲು ಅವನು ಊಹಿಸಿದನು.
ಬಾವಲಿ ಆಗಿರದಿದ್ದರೆ? ಬೇರೆ ಯಾವುದಾದರೂ ಜೀವಂತ ಪ್ರಾಣಿ ಯಾಗಿದ್ದರೆ? ಚಿತ್ರಕನ ಬೆನ್ನು ಹುರಿಯ ಮಧ್ಯದಿಂದ ಒಂದು ರೀತಿಯ ಭೀತಿಯ ನಡುಕ ಉಂಟಾಯಿತು. ಅವನು ಕತ್ತಲಿನಲ್ಲಿಯೇ ಮೈಯೆಲ್ಲ ಕಣ್ಣಾಗಿ ಸತರ್ಕಭಾವದಿಂದ ಕುಳಿತಿದ್ದನು.
ಮತ್ತೆ ಅವನ ಮುಖದ ಮೇಲೆ ಮೃದುವಾದ ಬೆರಳುಗಳಿಂದ ಮುಟ್ಟಿದ ಹಾಗಾಯಿತು. ಯಾರೋ ಅವನ ಮುಖವನ್ನು ಕತ್ತಲಿನಲ್ಲಿ ಹುಡುಕುತ್ತಿರುವ ಹಾಗೆ ಭಾಸವಾಯಿತು. ಅವನ ಕೆನ್ನೆಯ ಮೇಲೆ ಉಗುರಿನಿಂದ ಪರಚಿದ ಹಾಗಾಯಿತು. ಚಿತ್ರಕನೂ ಸಿದ್ಧತೆ ಮಾಡಿಕೊಂಡಿದ್ದನು. ಅವನು ಕೂಡಲೇ ಕೈಯನ್ನು ಅತ್ತಿತ್ತ ಬಾಚುತ್ತ ತನ್ನನ್ನು ಮುಟ್ಟಿದವರನ್ನು ಹಿಡಿಯುವ ಪ್ರಯತ್ನ ಮಾಡಿದನು. ಆದರೆ ಅದು ಸಾಧ್ಯವಾಗಲಿಲ್ಲ. ಆ ಆಕೃತಿ ದೂರ ಸರಿದಿತ್ತು. ಚಿತ್ರಕನು ಜೋರಾಗಿ “ಯಾರು? ಯಾರು ನೀನು’ ಕೂಗಿದನು.
ಸ್ವಲ್ಪ ಹೊತ್ತಾದ ಮೇಲೆ ಅವನ ಮುಂದೆ ಕತ್ತಲಿನಲ್ಲಿ ಜೋರಾಗಿ ನಿಟ್ಟುಸಿರು ಬಿಡುವ ಶಬ್ದ ಕೇಳಿಸಿತು. ಅವನಿಗೆ ರೋಮಾಂಚನವಾಯಿತು. ಮೈಯ ರೋಮವೆಲ್ಲ ಸೆಟೆದು ನಿಂತಿತು. ಅವನು ನಡುಗುವ ದನಿಯಲ್ಲಿ ‘ಯಾರು ನೀನು? ಮನುಷ್ಯನಾಗಿದ್ದರೆ ಉತ್ತರ ಕೊಡು’ ಕೂಗಿ ಹೇಳಿದನು. ಕ್ಷಣಕಾಲ ನೀರವ. ಅನಂತರ ಹತ್ತಿರದಲ್ಲಿಯೇ ಅಸ್ಪಷ್ಟ ಶಬ್ದ ಕೇಳಿಸಿತು. ಅವನು ಕಿವಿ ನಿಮಿರಿಸಿಕೊಂಡು ಕೇಳಿಸಿಕೊಂಡನು. ಮನುಷ್ಯನ ಕಂಠ ಧ್ವನಿಯೇನೋ ಹೌದು. ಆದರೆ ಶಬ್ದಗಳ ಅರ್ಥ ಗೊತ್ತಾಗುತ್ತಿಲ್ಲ. ಭಯಂಕರ ಸ್ವಪ್ನವನ್ನು ಕಂಡ ವ್ಯಕ್ತಿ ಭಯದಿಂದ ಅಸ್ಪಷ್ಟವಾಗಿ ಕೂಗಿಕೊಳ್ಳುವ ಹಾಗಿತ್ತು ಆ ಕಂಠಧ್ವನಿ. ಮನುಷ್ಯ ನೆಂಬುದನ್ನು ಖಚಿತಪಡಿಸಿಕೊಂಡ ಮೇಲೆ ಚಿತ್ರಕನು ಮೊದಲಿನಂತಾದನು. ಅವನು ‘ಶಬ್ದ ಕೇಳಿ ನೀನು ಮನುಷ್ಯನೆಂದು ನನಗೆ ಮನವರಿಕೆಯಾಯಿತು. ಸ್ಪಷ್ಟವಾಗಿ ಹೇಳು- ನೀನು ಯಾರು?’ ಎಂದು ಕೂಗಿ ಹೇಳಿದನು-
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರ ಸಂಗ್ರಹ: ಮಂಜುಳಾ ಸುದೀಪ್