ಅದೃಷ್ಟದ ಆಟ – ಕಾದಂಬರಿ ಪರಿಚಯ
ಮೂಲ : ಶ್ರೀ ಶರದಿಂದು ಬಂದ್ಯೋಪಾಧ್ಯಾಯ
ಅನುವಾದ : ಎನ್. ಶಿವರಾಮಯ್ಯ – ನೇನಂಶಿ
ಶರದಿಂದು ಬಂದೋಪಾಧ್ಯಾಯ ಒಬ್ಬ ಭಾರತೀಯ ಬಂಗಾಳಿ ಭಾಷೆಯ ಬರಹಗಾರ. ಅವರು ಬಂಗಾಳಿ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಕಾದಂಬರಿಗಳು, ಸಣ್ಣ ಕಥೆಗಳು, ಅಪರಾಧ ಮತ್ತು ಪತ್ತೇದಾರಿ ಕಥೆಗಳು, ನಾಟಕಗಳು ಮತ್ತು ಚಿತ್ರಕಥೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಕಥೆಗಳನ್ನು ರಚಿಸಿದ್ದಾರೆ. ಈ ಕಾದಂಬರಿಯನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಲು ಕೃಪೆ ಮಾಡಿ ಅನುಮತಿ ಕೊಟ್ಟ ಶ್ರೀ ಗುರುದತ್ತ ಸಂಕೇತದತ್ತ ಅವರಿಗೆ ಪತ್ರಿಕೆ ಚಿರಋಣಿಯಾಗಿರುತ್ತದೆ. ಈ ವಾರದಿಂದ ಈ ಕಾದಂಬರಿಯು ಧಾರವಾಹಿ ರೂಪದಲ್ಲಿ ಪ್ರತಿ ವಾರ ಪ್ರಕಟವಾಗುತ್ತದೆ. ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು sahityamaithri@gmail.com ಗೆ ಮೇಲ್ ಮುಖಾಂತರ ತಿಳಿಸಬೇಕಾಗಿ ವಿನಂತಿ.
ಮೂಲ ಲೇಖಕರ ನುಡಿ
‘ಈ ಕಥೆಯ ಐತಿಹಾಸಿಕ ಭೂಮಿಕೆಯು ರಾಖಾಲದಾಸ್ ಬಂದ್ಯೋಪಾಧ್ಯಾಯರು ಬರೆದ ‘ಬಂಗಾಳದ ಇತಿಹಾಸ’ ಗ್ರಂಥದಲ್ಲಿ (ಪ್ರಥಮ ಭಾಗ, ದ್ವಿತೀಯ ಸಂಸ್ಕರಣ) ಹೀಗೆ ಕಾಣಬರುತ್ತದೆ. “ಮಹಾರಾಜಾಧಿರಾಜ ಪ್ರಥಮ ಕುಮಾರಗುಪ್ತನ ಮರಣಾನಂತರ ಅವನ ಹಿರಿಯ ಮಗ ಸ್ಕಂದಗುಪ್ತನು ಸಿಂಹಾಸನವನ್ನೇರಿದನು. ಇವನು ತನ್ನ ಆಳ್ವಿಕೆಯಲ್ಲಿ ಪುಷ್ಯಮಿತ್ರ ಹಾಗೂ ಹೂಣರನ್ನು ಪರಾಜಿತಗೊಳಿಸಿ,ತನ್ನ ತಂದೆಯ ರಾಜ್ಯವನ್ನು ರಕ್ಷಿಸಿದನು. ಯುವರಾಜನಾದ ಭಟ್ಟಾರಕ ಸ್ಕಂದಗುಪ್ತನು ತಂದೆಯ ಮರಣಾನಂತರ ವಿಚಲಿತಳಾದ ರಾಜ್ಯಲಕ್ಷ್ಮಿಯನ್ನು ಪುನಃ ಪಡೆಯಲು ನೆಲದ ಮೇಲೆ ಮಲಗಿ ಮೂರು ರಾತ್ರಿಗಳನ್ನು ಕಳೆದನೆಂದು ಹೇಳುತ್ತಾರೆ. ಮೊದಲು ಪರಾಜಿತರಾದ ಹೂಣರು ಉತ್ತರಾಪಥದ ಆಕ್ರಮಣವನ್ನು ನಿಲ್ಲಿಸಲಿಲ್ಲ. ಪ್ರಾಚೀನ ಕಪಿಶಾ ಮತ್ತು ಗಾಂಧಾರವನ್ನು ಸ್ಥಾಪಿಸಿದರು. ಕ್ರಿ.ಶ. 465ರ ನಂತರ ಮತ್ತೆ ಭಾರತಕ್ಕೆ ಹಿಂದಿರುಗಿ ಗುಪ್ತ ಸಾಮ್ರಾಜ್ಯದಲ್ಲಿ ಪುನಃ ಆಕ್ರಮಣ
ಮಾಡುತ್ತಾರೆ.” ಈ ಕಥೆ ಸಂಪೂರ್ಣವಾಗಿ ಕಾಲ್ಪನಿಕ. ಆದರೆ ಸ್ಕಂದಗುಪ್ತನ ಪಾತ್ರ ಮಟ್ಟಿಗೆ ಐತಿಹಾಸಿಕ. ಈ ಆಖ್ಯಾಯಿಕೆಯನ್ನು ಸಂಪೂರ್ಣವಾಗಿ ಕಲ್ಪಿತ ಕಥೆ ಎನ್ನಬಹುದಾದರೂ, ಅದರ ಜೊತೆಗೆ ಇನ್ನೂ ಒಂದು ಉದ್ದೇಶವಿದೆ. ಅದನ್ನು ರವೀಂದ್ರನಾಥ ಠಾಕೂರರ ಮಾತಿನಲ್ಲಿ ಹೀಗೆ ಹೇಳಬಹುದು.
“ಹೇಥಾಯ್ ಆರ್ಯ್, ಹೇಥಾ ಅನಾರ್ಯ್,
ಹೇಥಾಯ್ ದ್ರಾಬಿಡ್ ಚೀನ್|
ಶಕ್, ಹೂಣ್‍ದೊಲ್, ಪಾಠಾಣ್, ಮೊಗಲ್,
ಏಕ್ ದೇಹೇ ಹೋ’ ಲೊ ಲೀನ್ ||”
ಇಲ್ಲಿಯೇ ಆರ್ಯರೂ, ಆರ್ಯರಲ್ಲದವರೂ, ದ್ರಾವಿಡರೂ, ಚೀನಿಯರು, ಶಕರೂ, ಹೂಣರೂ, ಪಠಾಣರೂ, ಮೊಗಲರೂ ಒಂದೇ ದೇಹದಲ್ಲಿ (ಒಂದಾಗಿ) ಬೆರೆತುಹೋಗಿದ್ದಾರೆ. ‘ಹಿಂದೆ ನಡೆದು ಹೋದ ಘಟನೆಗಳೇ ಮತ್ತೆ ಮತ್ತೆ ಭವಿಷ್ಯದಲ್ಲಿಯೂ ಘಟಿಸುವುವು’ ಎನ್ನುವ ಇತಿಹಾಸದ ಸತ್ಯತೆಯನ್ನು ನಂಬದೆ ಇರುವುದಕ್ಕೆ ಆಗುವುದಿಲ್ಲ. ಮನುಷ್ಯ- ಮನುಷ್ಯನಲ್ಲಿ ಭೇದ ಬುದ್ಧಿಯನ್ನು ಸ್ಥಿರ
ಗೊಳಿಸಲಿಚ್ಛಿಸುವ ವ್ಯಕ್ತಿಗಳು ಇತಿಹಾಸದ ಮೇರೆಯನ್ನು ಮೀರಿ ಮುನ್ನುಗ್ಗುತ್ತಾರೆ. ಅವರು ವಿಚಾರ ಮೂಢರೇ ಅಲ್ಲ. ಮಿಥ್ಯಾಚಾರಿಗಳೂ ಹೌದು. ಕಡೆಯಲ್ಲಿ ಈ ಕಥೆಗೆ ಸಂಬಂಧಿಸಿದಂತೆ ಒಂದು ವ್ಯಕ್ತಿಗತ್ತ ವಿಚಾರವುಂಟು.
ಅದನ್ನು ಪಾಠಕದಲ್ಲಿ ನಿವೇದಿಸಿಕೊಳ್ಳಲು ಮನಸ್ಸಾಗುತ್ತಿದೆ. ನಾನು 1938ರಲ್ಲಿ ‘ಮುಂಗ’ದಲ್ಲಿದ್ದಾಗ ಈ ಕಥೆಯನ್ನು ಬರೆಯಲು ಆರಂಭಿಸಿದೆ. ಕೆಲವು ಪರಿಚ್ಛೇದಗಳನ್ನು ಬರೆದ ನಂತರ ಸುದೂರ ಬೊಂಬಾಯಿಯಿಂದ ಕರೆ ಬಂದಿತು. ಜೀವನದ ಸಮಸ್ತ ಕಾರ್ಯಕ್ರಮಗಳು ಅದಲು ಬದಲಾದವು. ಅದಾದ ನಂತರ ಹತ್ತು ವರ್ಷಗಳು ಕಳೆದರೂ ಈ ಕಥೆಯನ್ನು ಪುನಃ ಬರೆಯಲು ನನಗೆ
ಸಾಧ್ಯವಾಗಲಿಲ್ಲ. ಕೇವಲ ಸಮಯದ ಅಭಾವವೇ ಅಲ್ಲ, ಈ ಕಥೆಯನ್ನು ಬರೆಯಲು ಬೇಕಾದ ಅನನ್ಯ ಚಿತ್ತೈಕಾಗ್ರತೆ ಸಿಗದಿದ್ದುದರಿಂದ ಹೀಗೆ ಮಾಡಬೇಕಾಯಿತು. ನಂತರ 1948ರಲ್ಲಿ ಪಟ್ಟಾಗಿ ಕುಳಿತು ಕಥೆಯ ಹಂದರವನ್ನುಸೇರಿಸಿದ್ದೇನೆ. ಹೀಗೆ ಪ್ರಾರಂಭ ಮಾಡಿದ ಹನ್ನೆರಡು ವರ್ಷಗಳ ಬಳಿಕ ಇದನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಹನ್ನೆರಡು ವರ್ಷಗಳ ನಡುವೆ ಮನುಷ್ಯನ ಮನಸ್ಸು ಒಂದೇ ಸಮನಾಗಿ ಇರುವುದಿಲ್ಲ; ರಸ ಹಾಗೂ ಪಾತ್ರ ನಿರೂಪಣೆಯ ದೃಷ್ಟಿಕೋನ ಬದಲಾಗಲು ಸಾಕಷ್ಟು ಅವಕಾಶವಿದೆ; ಪಾತ್ರಗಳನ್ನು ಸೃಜಿಸುವ ಶಕ್ತಿಯಲ್ಲಿಯೂ ತಾರತಮ್ಯವುಂಟಾಗುವ ಸಂಭವವಿದೆ. ಹನ್ನೆರಡು ವರ್ಷಗಳ ಈ ನಡುವಣ ಭೇದ- ವ್ಯತ್ಯಾಸಗಳನ್ನು ವಾಚಕರು ಸಹಜವಾಗಿಯೇ ಗುರುತಿಸಬಹುದು. ಒಂದು ವೇಳೆ ಅದು ಅವರಿಂದ ಗುರುತಿಸಲಾಗದಿದ್ದರೆ ನನ್ನ ಮನೋಲೋಕದಲ್ಲಿ ಮಹಾಕಾಲನ ಕೈತಾಳದ ಧ್ವನಿ ಇಲ್ಲಿಯವರೆಗೂ ಅದರ ತಾಳ-ಗತಿ ಕೆಡದೆ,
ಒಂದೇ ರೀತಿಯಲ್ಲಿ ನುಡಿಸುತ್ತಿದೆ ಎಂದು ಭಾವಿಸುತ್ತೇನೆ.
ಅನುವಾದಕರ ಮಾತು
‘ಕಾಲೇರ್ ಮಂದಿರಾ’ ಒಂದು ಕಾಲ್ಪನಿಕ ಕಾದಂಬರಿ. ಇದಕ್ಕೆ ಐತಿಹಾಸಿಕ ಹಿನ್ನೆಲೆಯ ಮೆರುಗು ಕೊಡಲಾಗಿದೆ. ಸ್ಕಂದಗುಪ್ತನ ಕಾಲದಲ್ಲಿ ನಡೆದದ್ದು ಎಂದು ಕಲ್ಪಿಸಲಾಗಿದೆ. ಹೂಣರು ಭಾರತದ ಮೇಲೆ ದಾಳಿ ಮಾಡಿ, ಅನೇಕ ರಾಜಮನೆತನವನ್ನು ಧ್ವಂಸ ಮಾಡಿ, ರಕ್ತ ಸಂಬಂಧವನ್ನು ಬೆಳೆಸಿ ತಮ್ಮ ಆಧಿಪತ್ಯ ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಹೂಣರ ದಾಳಿಗೆ ಸಿಕ್ಕಿ ತಂದೆ-ತಾಯಿ
ಗಳನ್ನು ಕಳೆದುಕೊಂಡು ಅನಾಥನಾಗಿದ್ದ ರಾಜಕುಮಾರನೊಬ್ಬ ಆಗ ಇನ್ನೂ ಹಾಲು ಕುಡಿಯುವ ಹಸುಗೂಸು. ಮೈಯೆಲ್ಲ ಗಾಯಗಳಾಗಿ ರಕ್ತಸಿಕ್ತವಾಗಿದ್ದ ಜೀವಂತ ಶಿಶುವು ಶತ್ರುವಿನ ಪಾಲಾಗಿ ಹೇಗೋ ಬದುಕಿ, ದೊಡ್ಡವನಾಗಿ, ಬೇರೆ ಬೇರೆ ವಾತಾವರಣದಲ್ಲಿ ಬೆಳೆದು ದೇಶಭ್ರಷ್ಟನಾಗಿ ವಿಟಂಕ ರಾಜ್ಯವನ್ನು ಪ್ರವೇಶಿಸುತ್ತಾನೆ. ಇಲ್ಲಿಂದ ಕಥೆಯ ಪ್ರಾರಂಭ. ಅಲ್ಲಿಂದ ಮುಂದೆ ಅವನು ಪಡಬಾರದ ಕಷ್ಟನಷ್ಟಗಳನ್ನು ಅನುಭವಿಸಿ ಕಡೆಗೆ ತನ್ನ ರಾಜ್ಯವನ್ನು ಪಡೆದ ಕಥೆ ಇದರಲ್ಲಿ ಅಡಕವಾಗಿದೆ. ಅವನ ಜೀವನದಲ್ಲಿ ಅದೃಷ್ಟವು ತೆರೆಯ ಹಿಂದೆ ನಿಂತು ಹೇಗೆ ಅವನನ್ನು ಆಡಿಸುತ್ತದೆ ಎಂಬುದನ್ನು ಕಾದಂಬರಿ ಓದಿಯೇ
ತಿಳಿಯಬೇಕು. ಕಾದಂಬರಿಯ ರಚನೆ ಎಷ್ಟು ಸೊಗಸಾಗಿದೆ ಎಂದರೆ, ಓದುಗರನ್ನು ಅತ್ತಿತ್ತ ಚಲಿಸದಂತೆ ಕಟ್ಟಿ ಹಾಕುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದರೆ `ಮುಂದೇನು?’ ಎಂಬ ಕುತೂಹಲ ಮೂಡಿಸುತ್ತ ಹೋಗುತ್ತದೆ. ಪುಸ್ತಕವನ್ನು ಕೆಳಗಿಡಲು ಮನಸ್ಸೇ ಆಗುವುದಿಲ್ಲ. ಎಲ್ಲಿಯೂ ತೊಡಕಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಈ ಕಾದಂಬರಿಯಲ್ಲಿ ನಾನು ಕಂಡ ವಿಶೇಷತೆ.
ಮೂಲ ಲೇಖಕರು ಈ ಕೃತಿಯನ್ನು ಬರೆಯಲು ಪ್ರಾರಂಭಿಸಿ ಕೆಲವಾರು ಅಧ್ಯಾಯಗಳನ್ನು ಬರೆದು ಕಾರಣಾಂತರಗಳಿಂದ ಅರ್ಧಕ್ಕೇ ನಿಲ್ಲಿಸಬೇಕಾಗುತ್ತದೆ. ಮತ್ತೆ ಹತ್ತು ವರ್ಷಗಳ ನಂತರ ಪಟ್ಟಾಗಿ ಕುಳಿತು ಉಳಿದ ಭಾಗವನ್ನು ಪೂರೈಸುತ್ತಾರೆ. ಒಟ್ಟು ಪ್ರಾರಂಭ ಹಾಗೂ ಮುಕ್ತಾಯದ ನಡುವೆ ಹನ್ನೆರಡು ವರ್ಷಗಳು ಉರುಳಿಹೋಗುತ್ತವೆ. ಇದೇನು ಕಾಕತಾಳೀಯವೋ ನಾನು ಈ ಕಾದಂಬರಿಯ ಅನುವಾದವನ್ನು 1965ರಲ್ಲಿ ಪ್ರಾರಂಭಿಸಿ ಮೂರನೇ ಅಧ್ಯಾಯಕ್ಕೆ ಬರುವಷ್ಟರಲ್ಲಿ ಬರವಣಿಗೆ ನಿಂತು ಹೋಯಿತು. ಹೊಟ್ಟೆಪಾಡಿಗಾಗಿ ಹೆಚ್ಚಿನ ವಿದ್ಯಾಭ್ಯಾಸ, ಸಾಂಸಾರಿಕ ತಾಪತ್ರಯ, ಉದ್ಯೋಗದಲ್ಲಿ ವರ್ಗಾವಣೆಗಳು- ಹೀಗೆ ಒಂದಲ್ಲ, ಹತ್ತಾರು ಅಡಚಣೆಗಳು ಬಂದು ಬರವಣಿಗೆ ಸಂಪೂರ್ಣವಾಗಿ ನಿಂತುಹೋಯಿತು. 1991ರಲ್ಲಿ ಉದ್ಯೋಗದಿಂದ ನಿವೃತ್ತನಾದೆ. ಮತ್ತೆ ಕೌಟುಂಬಿಕ ಸಮಸ್ಯೆಗಳು, ಮತ್ತೆ ಉದ್ಯೋಗ ಅರಸುವುದು ಹೀಗೆ ಒಂದಿಲ್ಲೊಂದು ಸಮಸ್ಯೆಗಳ ಮಧ್ಯೆ ಅನುವಾದ ಕಾರ್ಯವು ಮರೆತೇ ಹೋಯಿತು. ಯಾವುದೋ ಪುಸ್ತಕವನ್ನು ಹುಡುಕುವ ನೆಪದಲ್ಲಿ ಬೀರು ಬಾಗಿಲನ್ನು ತೆರೆದಾಗ ಅರ್ಧಕ್ಕೇ ನಿಲ್ಲಿಸಿದ್ದ ಬರವಣಿಗೆಯ ಹಾಳೆಗಳು ದೊರೆತವು. ಮತ್ತೆ ಬಿಡುವು ಮಾಡಿಕೊಂಡು ಪಟ್ಟಾಗಿ ಕುಳಿತು ಅನುವಾದವನ್ನು ಪೂರೈಸಬೇಕೆಂದು ನಿಶ್ಚಯಿಸಿದೆ. ಮಧ್ಯೆ ಮಧ್ಯೆ ತೊಂದರೆಗಳು ಉಂಟಾಗಿ ಅನುವಾದ ಕುಂಟುತ್ತಾ ಸಾಗಿತು. ಕಡೆಗೆ 2005 ನೇ ಇಸವಿಯಲ್ಲಿ ಅನುವಾದ ಪೂರ್ಣವಾಯಿತು. ಒಮ್ಮೆ ಪ್ರಾರಂಭಿಸಿದ ಅನುವಾದ ಕಾರ್ಯ ಮುಗಿಯಲು 40 ವರ್ಷಗಳು ಬೇಕಾಯಿತು. ನಮ್ಮ ದೂರದ ಸಂಬಂಧಿ ಕೀರ್ತಿಶೇಷ ಹೆಚ್. ವಾಸುದೇವರಾವ್ ಎಂಬುವವರು ಮಧುಗಿರಿ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಅವರು ಶಾಲೆಯಲ್ಲಿ ಓದಿದವರಲ್ಲ. ಹಳ್ಳಿಯಲ್ಲಿದ್ದುಕೊಂಡೇ ಬಂಗಾಳಿ, ಮರಾಠಿ, ಒರಿಸ್ಸಾ ಭಾಷೆ (ಒಡಿಯಾ), ತೆಲುಗು, ಸಂಸ್ಕೃತ ಭಾಷೆ ಗಳನ್ನು ಕಲಿತಿದ್ದರು. ಅದು ಹೇಗೆ ಅಷ್ಟೊಂದು ಭಾಷೆಗಳನ್ನು ಕಲಿತರೋ
ನನಗೆ ತಿಳಿಯದು. ನನಗೆ ಬಂಗಾಳಿ ಭಾಷೆ ಬರುತ್ತದೆ ಎಂದು ತಿಳಿದ ಅವರು ತುಮಕೂರಿನ ನಮ್ಮ ಮನೆಗೆ ಬಂದು, `ಕಾಲೇರ್ ಮಂದಿರಾ ಮತ್ತು ಛಾಯಾ ಪಥಿಕ್’ ಎಂಬ ಎರಡು ಬಂಗಾಳಿ ಕಾದಂಬರಿಗಳನ್ನು ಕೊಟ್ಟು, ಆಶೀರ್ವದಿಸಿ, ಇವುಗಳನ್ನು ಕನ್ನಡಕ್ಕೆ ಅನುವಾದ ಮಾಡು ಎಂದು ಹೇಳಿ ಹೋದರು. ಅವರು ಇನ್ನೊಮ್ಮೆ ಮದುವೆ ಸಮಾರಂಭಕ್ಕೆ ಬಂದಿದ್ದಾಗ ಎರಡು ಅಧ್ಯಾಯಗಳಷ್ಟು ಅನುವಾದ ಕಾರ್ಯ ಮುಗಿದಿತ್ತು. ಅದನ್ನೇ ಅವರಿಗೆ ತೋರಿಸಿದೆ. ಅವರು ಓದಿ ಮೆಚ್ಚುಗೆ ಸೂಚಿಸಿದರು. ಅದಾದ ಕೆಲವು ವರ್ಷಗಳ ನಂತರ ಅವರು ತೀರಿಕೊಂಡರು. ಅಷ್ಟು ಹೊತ್ತಿಗೆ ನನ್ನ ಅನುವಾದ ಕಾರ್ಯವೂ ನಿಂತುಹೋಗಿತ್ತು.
ಇನ್ನು ಬಂಗಾಳಿ ಭಾಷೆಯನ್ನು ಕಲಿಯಲು ನೆರವಾದ ನನ್ನ ಮಿತ್ರ ಶ್ರೀ ಎಂ. ಚಿತ್ರಲಿಂಗಯ್ಯ ಎಂ.ಎ., ಅವರನ್ನು ಈ ಸಂದರ್ಭದಲ್ಲಿ ನೆನೆಯುವುದು ನನ್ನ ಕರ್ತವ್ಯ. ಅವರು ಮೈಸೂರಿನ ಮಹಾರಾಜಾ ಸಂಜೆ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿದ್ದರು. ಅವರು ಬಹುಭಾಷಾ ಪರಿಣತರು. ಮೇಲಾಗಿ ಭಾಷಾ ವಿಜ್ಞಾನಿಗಳು. ಉರ್ದು, ಪರ್ಶಿಯನ್ ಭಾಷೆಗಳಲ್ಲಿ ವಿಶೇಷ ಪರಿಣತಿ ಸಾಧಿಸಿದ್ದರೆ, ಅವರು ನನಗೆ ಬಂಗಾಳಿ ಭಾಷೆ ಕಲಿಯಲು ಪ್ರೇರಣೆ ನೀಡಿ, ‘ಬಂಗಾಳಿ ಹಿಂದೀ ಸ್ವಯಂ ಶಿಕ್ಷಕ’ ಹಾಗೂ ‘ಬಂಗಾಳಿ ಹಿಂದೀ ಶಬ್ದಕೋಶ’ ತರಿಸಿಕೊಳ್ಳಲು ವಿಳಾಸ ನೀಡಿ ಉಪಕರಿಸಿದ ಮಹಾನುಭಾವರು. ಇಂದು ಅವರು ನಮ್ಮ ಕಣ್ಣಮುಂದೆ ಇಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
2005 ರಲ್ಲಿ ಪೂರ್ಣಗೊಂಡ ಈ ಕೃತಿ ಬೆಳಕು ಕಾಣಲು ಕಾರಣಕರ್ತರು ಕಿರಣ್ ಬುಕ್ ಡಿಸ್ಟ್ರಿಬ್ಯುಟರ್ಸ್ ನ ಮಾಲೀಕರಾದ ಶ್ರೀಮತಿ ಉಷಾಕಿರಣ್ ಅವರಿಗೆ ನನ್ನ ಧನ್ಯವಾದಗಳು.
ಎನ್. ಶಿವರಾಮಯ್ಯ, (ನೇನಂಶಿ)