ಅಧ್ಬುತ ಶಿಲ್ಪಕಲಾ ವೈಭವ – ಕೈದಳದ ಚನ್ನಕೇಶವ

ತುಮಕೂರಿನಿಂದ ಕುಣಿಗಲ್‍ಗೆ ಹೋಗುವ ಮಾರ್ಗದಲ್ಲಿ ಗೂಳೂರು ಎಂಬ ಊರಿನ ಹತ್ತಿರ ಬಲಕ್ಕೆ ತಿರುಗಿ ಅರ್ಧ ಕಿಮೀ ಹೋದರೆ ಸಿಗುವುದೇ ಕೈದಳ ಚನ್ನಕೇಶವಸ್ವಾಮಿ ದೇವಸ್ಥಾನ. ದ್ರಾವಿಡ ಶೈಲಿಯಲ್ಲಿರುವ ದೇವಸ್ಥಾನವನ್ನು ನಿರ್ಮಿಸಿದವನು ಶಿಲ್ಪಿ ಜಕಣಾಚಾರಿ. 1150 ನೇ ಇಸವಿಯಲ್ಲಿ ಈ ದೇವಸ್ಥಾನವನ್ನು ಇದೇ ಊರಿನವನಾಗಿದ್ದ ಜಕಣಾಚಾರಿ ನಿರ್ಮಿಸಿದ್ದನೆಂದು ಶಾಸನಗಳು ಹೇಳುತ್ತದೆ. ಕೈದಳ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಊರಿನ ಮೊದಲ ಹೆಸರು ಕ್ರೀಡಾಪುರವೆಂದಾಗಿತ್ತು. ಅಮರ ಶಿಲ್ಪಿ ಎಂಬ ಹೆಸರಿನಿಂದ ಪ್ರಖ್ಯಾತನಾದ ಜಕಣಾಚಾರಿ ಇದೇ ಊರಿನವನು ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ.

ಇಲ್ಲಿ ಚನ್ನಕೇಶವಸ್ವಾಮಿ ದೇವಾಲಯದ ಜೊತೆ ಗಂಗಾಧರೇಶ್ವರ ದೇವಸ್ಥಾನವೂ ಇದ್ದು ಬೇರೆ ದೇವಸ್ಥಾನಗಳಂತೆ ಇವು ಜನರನ್ನು ಆಕರ್ಷಿಸುತ್ತದೆ. ಇಲ್ಲಿರುವ ಶ್ರೀ ಚನ್ನಕೇಶವ ಮೂರ್ತಿಯೇ ಜಕಣಾಚಾರಿ ನಿರ್ಮಿಸಿದ ಕೊನೆಯ ಮೂರ್ತಿಯಾಗಿದೆ ಯಲ್ಲದೇ ಇದೇ ಈ ದೇವಸ್ಥಾನದ ಪ್ರಮುಖ ಆಕರ್ಷಣೆ. ಕಪ್ಪು ಶಿಲೆಯಲ್ಲಿ ಕೆತ್ತಿರುವ ಮಂದಸ್ಮಿತ ಮುಖಾರವಿಂದವನ್ನು ಹೊಂದಿರುವ ಎಂಟು ಅಡಿ ಎತ್ತರದ ಮೂರ್ತಿ ಜಕಣಾಚಾರಿಯ ಶಿಲ್ಪಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ. ದೇವಸ್ಥಾನದ ಸಮುಚ್ಚಯವನ್ನು ದೊಡ್ಡ ಕಲ್ಲಿನ ಗೋಡೆ ಆವರಿಸಿದ್ದು ಕೋಟೆಯಂತೆ ಕಾಣುತ್ತದೆಯಲ್ಲದೇ ದೇವಸ್ಥಾನದ ಆವರಣದಲ್ಲಿ ಅಲ್ಲಲ್ಲಿ ಮಂಟಪಗಳಿದೆ. ದೇವಸ್ಥಾನದ ಒಳಗಿರುವ ಕಲ್ಲಿನ ಕಂಬಗಳು ಅತ್ಯಂತ ಆಕರ್ಷೀಣಿಯವಾಗಿದೆ. ದೇವಸ್ಥಾನದ ಹೊರಗೋಡೆಯ ಮೇಲೆ ದಂಪತಿಯ ಚಿತ್ರವಿದ್ದು ಅದು ಜಕಣಾಚಾರಿಯ ತಾಯಿತಂದೆಯ ಚಿತ್ರವೆಂದು ಹೇಳಲಾಗುತ್ತದೆ.

ಈ ದೇವಸ್ಥಾನದ ಪ್ರಮುಖ ಆಕರ್ಷಣೆ ಇಲ್ಲಿರುವ ಚನ್ನಕೇಶವನ ಆಳೆತ್ತರದ ಮೂರ್ತಿ. ಈ ಮೂರ್ತಿಯ ಕೆತ್ತನೆಯ ಹಿಂದೆ ಒಂದು ಸುಂದರ ಕಥೆಯಿದೆ. ಶಿಲ್ಪಗಳನ್ನು ಕೆತ್ತುವುದರಲ್ಲಿ ಹೆಸರುವಾಸಿಯಾಗಿದ್ದ ಜಕಣಾಚಾರಿ ಇನ್ನು ಹೆಚ್ಚಿನದನ್ನು ಕಲಿಯಬೇಕೆಂಬ ಹಾಗೂ ಹೆಸರು ಮಾಡಬೇಕೆಂಬ ಉದ್ದೇಶದಿಂದ ತನ್ನ ಹೆಂಡತಿ ಮಗುವನ್ನು ಬಿಟ್ಟು ಮನೆ ಬಿಟ್ಟು ಸೂಕ್ತ ಗುರುವಿನ ಹುಡುಕಾಟದಲ್ಲಿ ಹೊರಟುಬಿಡುತ್ತಾನೆ. ಹೀಗೆ ತಿರುಗುತ್ತಾ ತಿರುಗುತ್ತಾ ತನ್ನ ತಿರುಗುವಿಕೆಯಲ್ಲಿ ಅನೇಕ ದೇವಸ್ಥಾನಗಳನ್ನು ಮೂರ್ತಿಗಳನ್ನು ಕೆತ್ತುತ್ತಾನೆ. ಅವುಗಳಲ್ಲಿ ಪ್ರಸಿದ್ದ ಬೇಲೂರು ಹಳೇಬೀಡಿನ ದೇವಸ್ಥಾನಗಳೂ ಒಂದು. ಅವನು ತನ್ನ ಕೆಲಸದಲ್ಲಿ ಎಷ್ಟು ತಲ್ಲೀನನಾಗಿ ಬಿಡುತ್ತಾನೆಂದರೆ ತನ್ನ ಹೆಂಡತಿ ಮಗುವನ್ನು ಮರೆತುಬಿಡುತ್ತಾನೆ. ಇತ್ತ ಜಕಣಾಚಾರಿಯ ಮಗ ಡಕಣಾಚಾರಿಯೆಂಬ ಹೆಸರಿನಿಂದ ದೊಡ್ಡವನಾಗುತ್ತಾನಲ್ಲದೇ ತನ್ನ ತಂದೆಯ ಶಿಲ್ಪಕಲೆಯನ್ನು ತಾನು ಮೈಗೂಡಿಸಿಕೊಂಡಿರುತ್ತಾನೆ. ತನ್ನ ತಂದೆಯನ್ನು ಹುಡುಕುತ್ತಾ ಬೇಲೂರಿಗೆ ಬಂದಾಗ ಅಲ್ಲಿ ಚನ್ನಕೇಶವನ ದೇವಸ್ಥಾನ್ದ ನಿರ್ಮಾಣ ಕಾರ್ಯ ನೆಡೆಯುತ್ತಿರುತ್ತದೆ.

ದೇವಸ್ಥಾನದ ಹತ್ತಿರ ಬಂದಾಗ ಅವನಿಗೆ ಜಕಣಾಚಾರಿ ಕೆತ್ತಿದ್ದ ಚನ್ನಕೇಶವನ ಮೂರ್ತಿಯಲ್ಲಿ ದೋಷವಿರುವುದಾಗಿ ಹೇಳುತ್ತಾನೆ. ಇದನ್ನು ಕೇಳಿದ ಜಕಣಾಚಾರಿ ಹಾಗೇನಾದರೂ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಹೇಳುತ್ತಾನೆ. ಮೂರ್ತಿಯನ್ನು ಪರಿಕ್ಷೀಸುವ ಸಲುವಾಗಿ ಮೂರ್ತಿಯ ತುಂಬಾ ಗಂಧವನ್ನು ತೈಯ್ದು ಹಚ್ಚಲಾಗುತ್ತದೆ. ಹೊಟ್ಟೆಯ ಭಾಗವನ್ನು ಬಿಟ್ಟು ಮೂರ್ತಿಯ ಉಳಿದ ಭಾಗದಲ್ಲಿ ಒಣಗುತ್ತದೆ. ಹೊಟ್ಟೆಯ ಭಾಗದಲ್ಲಿ ನೋಡಿದಾಗ ಅಲಿ ಮರಳು ಕಪ್ಪೆ ನೀರು ಸಿಗುತ್ತದೆ. ತನ್ನ ತಪ್ಪನ್ನು ಅರಿತ ಜಕಣಾಚಾರಿ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುತ್ತಾನೆ. ನಂತರ ಅವನಿಗೆ ಡಕಣಾಚಾರಿ ತನ್ನ ಮಗನೆಂದು ಗೊತ್ತಾಗುತ್ತದೆ. ತನ್ನ ಸ್ವಂತ ಊರಾದ ಕ್ರೀಡಾಪುರದಲ್ಲೂ ಚನ್ನಕೇಶವ ಸ್ವಾಮಿಯ ದೇವಸ್ಥಾನವನ್ನು ನಿರ್ಮಿಸಬೇಕೆಂದು ಜಕಣಾಚಾರಿಗೆ ಮನಸ್ಸಾಗುತ್ತದೆ. ಅಂತೆಯೇ ತನ್ನ ಊರಿಗೆ ಬಂದ ಜಕಣಾಚಾರಿ ಬರಿ ಎಡಗೈಯಲ್ಲೇ ಮಗನ ಸಹಾಯದಿಂದ ದೇವಸ್ಥಾನ ಹಾಗೂ ಸುಂದರ ಚನ್ನಕೇಶವನ ಮೂರ್ತಿಯನ್ನು ನಿರ್ಮಿಸುತ್ತಾನೆ. ದೇವಸ್ಥಾನಕಾರ್ಯ ಮುಗಿಯುವಷ್ಟರಲ್ಲಿ ಚನ್ನಕೇಶವನ ಕೃಪೆಯಿಂದ ಜಕಣಾಚಾರಿಗೆ ಬಲಗೈ ಬರುತ್ತದೆ ಆದ ಕಾರಣ ಈ ಊರಿಗೆ “ಕೈದಳ” ಎಂಬ ಹೆಸರು ಬಂದಿತೆಂದು ಪ್ರತೀತಿ.

ತನ್ನ 86ನೇ ವಯಸ್ಸಿನಲ್ಲೀ ಅಮರಶಿಲ್ಪಿ ಜಕಣಾಚಾರಿ ಕೆತ್ತಿರುವ ಈ ಮೂರ್ತಿಯಷ್ಟು ಸುಂದರವಾದ ಮೂರ್ತಿ ಪ್ರಪಂಚದಲ್ಲಿ ಇನ್ನೆಲ್ಲೂ ಇರುವ ದಾಖಲೆಯಿಲ್ಲ. ಕೃಷ್ಣಶಿಲೆಯಲ್ಲಿ ಕೆತ್ತಿರುವ ಆಳೆತ್ತರದ ಮೂರ್ತಿ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಜಕಣಾಚಾರಿಯ ಶಿಲ್ಪಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ ಈ ಮೂರ್ತಿ. ಮೂರ್ತಿಯ ಹಿಂಭಾಗದಲ್ಲಿರುವ ಪ್ರಭಾವಳಿಯಲ್ಲಿ ದಶಾವತಾರದ ಸುಂದರ ಚಿತ್ರಗಳನ್ನು ಅತ್ಯಾಕರ್ಷಕವಾಗಿ ಕೆತ್ತಲಾಗಿದೆ. ಚನ್ನಕೇಶವಸ್ವಾಮಿಯ ಕೈಬೆರಳಿನಲ್ಲಿರುವ ಉಂಗುರದಲ್ಲಿ ಕಡ್ಡಿಯನ್ನು ತುರಿಸಬಹುದಾಗಿದ್ದು ಈಗಿನ ಗ್ರಿಲ್ ವರ್ಕ್ ಕೆಲಸದ ತಂತ್ರಜ್ಞಾನ ಅಗಲೇ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷಿ , ಜಕಣಾಚಾರಿಯ ಕೆಲಸದಲಿದ್ದ ಶ್ರದ್ಧೆ ಹಾಗೂ ಪರಿಪೂರ್ಣತೆಗೆ ಹಿಡಿದ ಕೈಗನ್ನಡಿ !! ಸ್ವಾಮಿಯು ಹಿಡಿದಿರುವ ಶಂಖ, ಚಕ್ರ, ಗದೆಯನ್ನು ಅತ್ಯಂತ ಸೂಕ್ಷವಾಗಿ ಕೆತ್ತಲಾಗಿದ್ದು ಉಡುಗೆ ಆಭರಣಗಳು ಸಹ ಅತ್ಯಂತ ಸೂಕ್ಷ್ಮವಾಗಿ ಕೆತ್ತಲಾಗಿದೆ. ಪ್ರಭಾವಳಿಯಲ್ಲಿರುವ ಸೂಕ್ಷ್ಮ ಕೆತ್ತನೆಯ ರಂದ್ರಗಳನ್ನು ಬೆಳಕಿನ ಹಿನ್ನೆಲೆಯಲ್ಲಿ ನೋಡಬಹುದು. ದೇವಾಲಯದ ಒಳಾಂಗಣ ಕೆತ್ತನೆ ಸಹ ಮನಸೂರೆಗೊಳ್ಳುತ್ತದೆ. ದೇವಸ್ಥಾನದ ಪ್ರಶಾಂತವಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ತುಮಕೂರಿನ ಕಡೆ ಹೋದರೆ ಈ ಅಪೂರ್ವ ಚನ್ನಕೇಶವನನ್ನು ನೋಡಲು ಮರೆಯದಿರಿ.

ಪ್ರಕಾಶ್ ಕೆ.ನಾಡಿಗ್

ಚಿತ್ರಗಳು : ಗೂಗಲ್

Related post

Leave a Reply

Your email address will not be published. Required fields are marked *