ಕೆಲವೊಮ್ಮೆ ಮನದೊಳಗಿನ ಆಲೋಚನೆಗಳು
ಅಪಾರ್ಟ್ಮೆಂಟಿನ ಕಾಂಪೌಂಡಿನೊಳಗೆ
ವಾಕಿಂಗ್ ಮಾಡಿದಂತೆ ಅಲ್ಲಲ್ಲೇ ಸುತ್ತುತ್ತಿರುತ್ತವೆ
ಕಣ್ಣಿಗೆ ಬೀಳುವಷ್ಟರಲ್ಲೇ ಕಥೆ ಹೆಣೆಯುತ್ತಿರುತ್ತವೆ ||
ನಮ್ಮದು ನೋಡಿ ಹೈಫೈ ಅಪಾರ್ಟ್ಮೆಂಟು
ಹೇಳದಿದ್ದರೆ ನಿಮಗೆ ಅರ್ಥವಾಗುವ ಬಗೆ ಏನುಂಟು ||
ಏರೋಪ್ಲೇನಿನ ಬ್ಯುಸಿನೆಸ್ ಕ್ಲಾಸಿನಂತೆ
ವಿಚಿತ್ರ ನಿಶ್ಯಬ್ದದೊಂದಿಗೆ ಜನರಿಲ್ಲಿ ಜೀವಿಸುತ್ತಾರೆ
ರಾತ್ರಿಯ ನಿರ್ವಾತದಂತೆ ಹಗಲುಗಳೂ ಇಲ್ಲಿ ಖಾಲಿ ಖಾಲಿ ||
ಥೇಟು ಸುತ್ತಿ ಸುತ್ತಿ ಬರುವ ಅವವೇ ಆಲೋಚನೆಗಳಂತೆ
ವಾಕಿಂಗು ಮಾಡುವಾಗ ಕಾಣಿಸುವುದು ಅವವೇ ಮುಖಗಳು
ಪರಿಚಿತರಂತೆ?!? ಪರಿಚಿತರೊಳಗಿನ ಅಪರಿಚಿತರಂತೆ ||
ಕಳೆದ ತಿಂಗಳು ಮೂರು ಕೆಂಪು ಆರು ಬಿಳಿ ಬಳೆ ತೊಟ್ಟು
ಚಡ್ಡಿ ಹಾಕಿಕೊಂಡು ಗಂಡನೊಡನೆ ಕುಲುಕಲು ನಗುತ್ತಾ
ವಾಕಿಂಗು ಬರುತ್ತಿದ್ದವಳು ಇವಳೇ ಅಲ್ಲವೇ…||
ಈಗ ಆರು ಬಿಳಿ ಎಂಟು ಕೆಂಪು ಕೈ ತುಂಬಾ ಬಳೆ
ನೈಟ್ ಪ್ಯಾಂಟಿನಲ್ಲಿ ಕೈ ಕಟ್ಟಿಕೊಂಡು ತಲೆ ತಗ್ಗಿಸಿ ನಡೆಯುತ್ತಿದ್ದಾಳೆ ಒಬ್ಬಳೇ…. ಗೊತ್ತಾಯ್ತು…
ಅತ್ತೆ ಮಾವ ಬಂದಿರಬಹುದೇನೋ……
ಅರೆರೇ ಇವ ಯಾವ ಪುಣ್ಯಾತ್ಮನಪ್ಪಾ….
ಇಷ್ಟು ಹೊತ್ತಿನಲ್ಲಿ ಇನ್ಷರ್ಟನ್ನೂ ತೆಗೆಯದೆ
ಪಾಲಿಷ್ ಮಾಡಿದ ಫಾರ್ಮಲ್ ಶೂಗಳನ್ನೂ ಕಳಚದೇ
ನಡೆಯುತ್ತಲೇ ಇದ್ದಾನೆ… ನಡೆಯುತ್ತಲೇ ಇದ್ದಾನೆ….
ಇವನ ಅತ್ತೆಯೂ ಬಂದಿರಬಹುದೇನೋ…..
ಪಕ್ಕನೆ ಬಂದ ನಗುವನ್ನು ತಡೆ ಹಿಡಿದು ಕಣ್ಣೋಟ ತಪ್ಪಿಸಿ
ತಟ್ಟನೆ ತಲೆ ತಗ್ಗಿಸಿ ನಾನೂ ನಡೆಯುತ್ತಲೇ ಇದ್ದೇನೆ ||
ನೆನಪಾಯ್ತು ಅವನೇ ಇವನು ಥರ್ಡು ಫ್ಲೋರಿನವನು
ನಾವು ಮೆಟ್ಟಿಲು ಇಳಿಯುವಾಗ ಸಿಗುವ
ಮೂಲೆ ಮನೆಯವನು
ಕಳೆದ ವಾರ ಹುಡುಗಿಯೊಡನೆ ಎದುರಾದವನು
ಆ ಹುಡುಗಿ ಅಂದು ಡಿಸೈನರ್ ಚೂಡಿದಾರ ತೊಟ್ಟಿದ್ದಳು
ಡ್ರೆಸ್ಸು ಚೆಂದಿತ್ತು ಆದರದು ಅವಳಿಗಲ್ಲವಾಗಿತ್ತು
ಇವನದ್ದೇ ಇರಬೇಕು ಚಾಯ್ಸು
ಈ ಹುಡುಗರೇ ಒಂಥರಾ ವೇಸ್ಟು
ಬಟ್ಟೆ ಆರಿಸುವುದರಲ್ಲಿ ಏನೆಂದರೂ ಹುಡುಗಿಯರೇ ಬೆಸ್ಟು ||
ಓ….ಈ ಗಂಡ ಹೆಂಡತಿಯರದ್ದೇ ಇರಬೇಕು ಹೊಸ ಕಾರು
ಹಾಗಾಗಿಯೇ ವಾಟ್ಸಾಪು ಗ್ರೂಪಿನಲ್ಲಿ ಬರೀ
ಪಾರ್ಕಿಂಗ್ ಲಾಟಿನದೇ ಮಾತು ಇವರದ್ದು
ದೊಡ್ಡದಿದೆ ಕಾರು ತೋರಿಸಬೇಡವೇ ತಮ್ಮ ಕಾರುಬಾರು ||
ಇವರಾರೋ ಹೊಸದಾಗಿ ಬಂದವರಿರಬೇಕು
ಮನೆಯ ಮುಂಬಾಗಿಲನ್ನು ತೆರೆದಿಟ್ಟು
ಜೋರು ಜೋರಾಗಿ ಮಾತನಾಡುತ್ತಿದ್ದಾರೆ ಬಾಯಿ ಬಿಟ್ಟು
ಬೇಸಿಗೆ ಕಳೆದು ಮಳೆ ಬರುವ ಹೊತ್ತಿಗೆ
ಆಗುತ್ತಾರೆ ಇವರೂ ನಮ್ಮಂತೆಯೇ ನಿಶ್ಯಬ್ದ ನಿರ್ವಿಕಾರ
ಅಚ್ಚರಿಯೇನಿದೆ…ಆಗಿಲ್ಲವೇ ನಾವೂ ಹಾಗೆ
ಚಳಿಗಾಲ ಮುಗಿದು ಬೇಸಿಗೆ ಬರುವುದರೊಳಗೆ ||
ಕೆಲವೊಮ್ಮೆ ಮನದೊಳಗಿನ ಆಲೋಚನೆಗಳು
ಅಪಾರ್ಟ್ಮೆಂಟಿನ ಕಾಂಪೌಂಡಿನೊಳಗೆ
ವಾಕಿಂಗ್ ಮಾಡಿದಂತೆ
ಅಲ್ಲಲ್ಲೇ ಸುತ್ತುತ್ತಲೇ ಇರುತ್ತವೆ
ಕಥೆಯನ್ನೋ ಕವಿತೆಯನ್ನೋ ಹೆಣೆಯುತ್ತಿರುತ್ತವೆ
ತಮ್ಮ ಪಾಡಿಗೆ ತಾವು ನಿಶ್ಯಬ್ದವಾಗಿ ನಿರ್ವಿಘ್ನವಾಗಿ ||

(ಸೌಜನ್ಯ ದತ್ತರಾಜ)