ಅಪ್ಪ ಹೇಳಿದ ಕಥೆ
ಅಪ್ಪನ ಮುದ್ದಿನ ಮಗಳು ಧನ್ವಿತಾ, ಅತ್ಯಂತ ಚುರುಕು ಹುಡುಗಿಯಷ್ಟೇ ಅಲ್ಲದೇ ಎಲ್ಲಾ ಚಟುವಟಿಕೆಗಳಲ್ಲೂ ಅತ್ಯಂತ ಲವಲವಿಕೆಯಿಂದ ಭಾಗವಹಿಸುತ್ತಿದ್ದಳು. ಏಕೋ ಅದೊಂದು ದಿನ ಧನ್ವಿತಾ ಅಳುತ್ತಾ ಅಪ್ಪನ ಬಳಿಗೆ ಬಂದಳು. ಮಗಳ ಅಳುವನ್ನು ನೋಡಿದ ಅಪ್ಪ ಏನಾಯಿತು ಪುಟ್ಟಾ ಎಂದು ಕೇಳಿದರು. ‘ಪಪ್ಪಾ ನಾನು ಎಷ್ಟು ಚೆನ್ನಾಗಿ ಚಿತ್ರ ಬಿಡಿಸಿದರೂ ನನ್ನನ್ನು ಚಿತ್ರಕಲಾ ಸ್ಪರ್ಧೆಗೆ ಮೇಷ್ಟ್ರು ಸೇರಿಸಿಕೊಳ್ಳಲೇ ಇಲ್ಲ, ಅವರು ನನ್ನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುದ್ದಾರೆ’ ಎಂದು ಧನ್ವಿತಾ ಅಪ್ಪನಿಗೆ ಅಳುತ್ತಾ ಹೇಳಿದಳು.
ಆಗ ಅಪ್ಪನು ಧನ್ವಿತಾ ಪುಟ್ಟಾ ನಾ ನಿನಗೊಂದು ಕಥೆ ಹೇಳುತ್ತೇನೆ ಆದರೆ ನೀನು ಅಳಬಾರದು, ನಂತರವೂ ನಿನಗೆ ಅಳಬೇಕು ಎಂದೆನಿಸಿದರೆ ಧಾರಾಳವಾಗಿ ಅಳು ಎಂದರು. ಧನ್ವಿತಾ ಅದಕ್ಕೆ ಸರಿಯೆಂದು ತಲೆಯಾಡಿಸಿದಳು.
ಸಿಂಗರಾಪುರ ಪಟ್ಟಣದಲ್ಲಿ ಒಂದು ಗೊಂಬೆಗಳ ಅಂಗಡಿ ಇತ್ತು. ಅಲ್ಲಿ ವಿವಿಧ ಗಾತ್ರದ, ವೈವಿಧ್ಯಮಯ ಬೆಲೆಯ, ವಿವಿಧ ಬಣ್ಣದ ಆಕರ್ಷಣೀಯ ಗೊಂಬೆಗಳಿದ್ದವು. ಆ ಗೊಂಬೆಗಳ ಪೈಕಿ ಒಂದು ಅತ್ಯಂತ ಬೆಲೆಬಾಳುವ ಮತ್ತು ರತ್ನಖಚಿತ ಕಣ್ಣುಗಳಿರುವ ದೊಡ್ಡ ಗೊಂಬೆಯೂ ಇತ್ತು. ಬಡವರು ಸಣ್ಣ ಸಣ್ಣ ಗೊಂಬೆಗಳನ್ನು ಕೊಂಡರೆ, ಮಧ್ಯಮ ವರ್ಗದ ಜನರು ಇತರೆ ಸ್ವಲ್ಪ ದುಬಾರಿ ಬೆಲೆಯ ಗೊಂಬೆಗಳನ್ನು ಖರೀದಿಸಿದರು. ಆದರೆ ಎಲ್ಲರೂ ಈ ಚಿನ್ನದ ಕಣ್ಣುಗಳಿರುವ ಗೊಂಬೆಯನ್ನು ನೋಡಿ ಖುಷಿಪಟ್ಟು ಹೊರಟು ಹೋದರೇ ವಿನಃ ಯಾರೊಬ್ಬರೂ ಅದನ್ನು ಖರೀದಿಸಲಿಲ್ಲ ಮತ್ತು ಮುಟ್ಟಿ ನೋಡಲೂ ಇಲ್ಲ. ಇದರಿಂದ ಚಿನ್ನದ ಕಣ್ಗಳಿರುವ ಗೊಂಬೆಗೆ ಬೇಸರಾಯಿತು. ಆ ವೇಳೆಗೆ ಕತ್ತಲಾಗುತ್ತಿತ್ತು, ವ್ಯಾಪಾರಿಯ ಚಿನ್ನದ ಕಣ್ಣುಗಳ ಗೊಂಬೆಯನ್ನು ಉಳಿದು ಬಹುತೇಕ ಎಲ್ಲಾ ಗೊಂಬೆಗಳೂ ಮಾರಾಟವಾಗಿದ್ದವು. ಗೊಂಬೆಗೆ ತನ್ನ ಆಕರ್ಷಕ ಕಣ್ಣುಗಳ ಬಗ್ಗೆಯೇ ಅನುಮಾನ ಮೂಡಿ ತಾನು ಯಾರಿಗೂ ಬೇಡವಾದೆನೇ ಎಂದು ಮರುಕಪಟ್ಟಿತು. ಪ್ರತಿ ದಿನವೂ ಸಂಜೆ ವ್ಯಾಪಾರಿಯು ಗೊಂಬೆಗಳನ್ನು ಸ್ವಚ್ಚಗೊಳಿಸಿ ಇಡುತ್ತಿದ್ದ. ಆದರೂ ಯಾರೂ ಗೊಂಬೆಯನ್ನು ಖರೀದಿಸಲು ಮುಂದೆ ಬರಲಿಲ್ಲ.
ಒಂದು ದಿನ ಐಶಾರಾಮಿ ಕಾರಿನಲ್ಲಿ ಒಂದು ಶ್ರೀಮಂತ ಕುಟುಂಬವು ಬಂದು ಆ ಗೊಂಬೆಯನ್ನು ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿಸಿ ರೇಷ್ಮೆಯ ವಸ್ತ್ರದಲ್ಲಿ ಸುತ್ತಿಕೊಂಡು ತಮ್ಮ ಬಂಗಲೆಗೆ ಕೊಂಡೊಯ್ದಿತು. ಮಾರನೇ ದಿನ ಚಿನ್ನದ ಕಣ್ಣುಗಳ ಗೊಂಬೆಯು ಆ ಬಂಗಲೆಯ ಬೃಹತ್ ಶೋಕೇಸಿನಲ್ಲಿ ಸ್ತಾನವನ್ನು ಪಡೆಯಿತು. ಮನೆಗೆ ಬಂದವರೆಲ್ಲರೂ ಆ ವಿಶಿಷ್ಟ ಕಣ್ಣುಗಳ ಗೊಂಬೆಯನ್ನು ನೋಡಿ, ಮುಟ್ಟಿ ಖುಷಿಪಡುತ್ತಿದ್ದರು. ಅದು ಶ್ರೀಮಂತ ಕುಟುಂಬಕ್ಕೆಂದೇ ದೇವರೇ ನಿಗದಿ ಮಾಡಿದ್ದ ಗೊಂಬೆಯಾಗಿತ್ತು. ಸಾಮಾನ್ಯ ಜನರು ಮುಟ್ಟಲೂ ಸಾಧ್ಯವಿಲ್ಲದಂತಹ ಅಮೂಲ್ಯ ಗೊಂಬೆ ಅದಾಗಿತ್ತು ಎಂದು ಹೇಳಿ ಅಪ್ಪ ಕಥೆಯನ್ನು ನಿಲ್ಲಿಸಿದ.
ಇದು ಕೇವಲ ಕಥೆಯಷ್ಟೇ ದನ್ವಿತಾ ಪುಟ್ಟಾ. ಬದುಕಿನಲ್ಲಿ ನಿನಗೆ ಅವಕಾಶ ಸಿಗಲಿಲ್ಲ ಅಥವಾ ನೀಡಲಿಲ್ಲ ಎಂದು ಕೊರಗಬೇಡ. ನೀನು ಇನ್ಯಾವುದೋ ಪ್ರಮುಖವಾದ ಉದ್ದೇಶಕ್ಕಾಗಿಯೇ ಈ ಭೂಮಿಯಲ್ಲಿ ಜನಿಸಿದ್ದೀಯ. ನಿನ್ನನ್ನು ಇತರರು ನಿರ್ಲಕ್ಷಿಸುತ್ತಿದ್ದಾರೆ ಎಂದರೆ ಉಳಿದವರು ನಿನ್ನಷ್ಟು ಮೌಲ್ಯವಂತರು ಅಲ್ಲ ಎಂದರ್ಥ.
ನಿನಗೆ ಅವಕಾಶ ಸಿಗಲು ವಿಳಂಬ ಆಗುತ್ತಿದೆ ಎಂದರೆ ನಿನಗೆ ಮಹತ್ತರ ಅವಕಾಶ ಮುಂದಕ್ಕೆ ಕಾದಿದೆ ಅಂದರ್ಥ. ಈ ಕಾಯುವ ಅವಧಿಯಲ್ಲಿ ಸಮಯವನ್ನು ಕಾಯುತ್ತಾ ವ್ಯರ್ಥ ಮಾಡದೇ ಹೊಸ ಕೌಶಲಗಳನ್ನು ಗಳಿಸಿಕೊಂಡು ಅದರಲ್ಲಿ ಪರಿಣತಳಾಗು. ಇದನ್ನು ಕೇಳಿದ ಮೇಲೂ ನೀನು ಅಳುತ್ತೀಯಾ ಧನ್ವಿತಾ ಪುಟ್ಟಾ ಎಂದು ಅಪ್ಪ ಕೇಳಿದಾಗ, ಧನ್ವಿತಾ ಇಲ್ಲಪ್ಪಾ ಎಂದು ಮುಗುಳ್ನಗೆ ಬೀರಿದಳು. ಬದುಕಿನಲ್ಲಿ ನಾನು ಯಾವುದಕ್ಕೂ ಲಾಯಕ್ಕಲ್ಲ ಎನ್ನುವ ಋಣಾತ್ಮಕ ಭಾವಕ್ಕೆ ಒಳಗಾಗುವ ಬದಲು ತನ್ನ ಶಕ್ತಿ ಮತ್ತು ಆಸಕ್ತಿಯ ಕ್ಷೇತ್ರಗಳನ್ನು ಅರಿತುಕೊಂಡು ಆ ಕ್ಷೇತ್ರಗಳಲ್ಲಿ ನಿಪುಣರಾದಾಗ ಅವಕಾಶಗಳ ಬಾಗಿಲು ತೆರೆಯುತ್ತಾ ಹೋಗುತ್ತದೆ.
ನಾನು ಯಾವುದಕ್ಕೂ ಲಾಯಕ್ಕಲ್ಲ ಎನ್ನುವ ಋಣಾತ್ಮಕ ಭಾವಕ್ಕೊಳಗಾಗದೇ ತಾಳ್ಮೆಯಿಂದ ಮುನ್ನಡೆಯಿರಿ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160