ಅಮರಗೋಳದ ಬನಶಂಕರಿ ದೇವಾಲಯ

ಅಮರಗೋಳದ ಬನಶಂಕರಿ

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ನಡುವೆ ಇರುವ ನವನಗರದ ಸಮೀಪ ಅಮರಗೋಳ ಎಂಬ ಊರೊಂದಿದೆ. ಅಲ್ಲಿ ಪುರಾತನ ಕಾಲದ ದೇವಾಲಯವಿದ್ದು, ಅದು ಬನಶಂಕರಿಗೆ ಸಂಬಂಧಿಸಿದ ಪುರಾತನ ದೇವಾಲಯವಾಗಿದೆ.

ಈ ದೇವಾಲಯದ ಸಮೀಪವೇ ಜಕ್ಕಣಾಚಾರ್ಯರು ನಿರ್ಮಿಸಿದ ಶಂಕರಲಿಂಗನ ದೇವಸ್ಥಾನವಿದೆ. ಈ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಈ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಮೆಟ್ಟಿಲು-ವಜ್ರ ಮತ್ತು ಚಚ್ಚೌಕ ಯೋಜನೆ ಇರುವ ನಾಗರ ಶೈಲಿಯನ್ನು ಹೊಂದಿವೆ. ಇಲ್ಲಿ ದೊರೆತಿರುವ ಶಾಸನದಲ್ಲಿ ಅಮರಗೋಳ ಊರನ್ನು ‘ಆಂಬರಗೋಳ’ ಎಂದು ಕರೆದಿರುವ ಬಗ್ಗೆ ಉಲ್ಲೇಖ ಇದೆ.

ಕ್ರಿ.ಶ. ಸುಮಾರು 11-12ನೇ ಶತಮಾನದ ಕಾಲಾವಧಿಯಲ್ಲಿ ಮರಳುಗಲ್ಲಿನಿಂದ ನಿರ್ಮಿತವಾದ ಈ ದೇವಾಲಯ ಪೂರ್ವಾಭಿಮುಖವಾಗಿದೆ. ದ್ವಿಕೂಟ ತಳವಿನ್ಯಾಸ ಹೊಂದಿರುವ ಇದು ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ಗರ್ಭಗುಡಿಗಳನ್ನು ಹೊಂದಿದೆ. ಇವುಗಳಿಗೆ ಹೊಂದಿಕೊಂಡಂತೆ ಅರ್ಧಮಂಟಪ ಮತ್ತು ನವರಂಗವಿದೆ. ಒಂದು ಗರ್ಭಗೃಹದಲ್ಲಿರುವ ಪಾಣಿಪೀಠದ ಮೇಲೆ ಭೈರವಿಯ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನೊಂದು ಗರ್ಭಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.ದೇವಾಲಯದ ಹೊರಭಿತ್ತಿಯು ಅರ್ಧಕಂಬ ಮತ್ತು ದೇವಕೋಷ್ ಅಲಂಕರಣದಿಂದ ಕೂಡಿದೆ.

ಭಾಗಶ: ಪಾಳುಬಿದ್ದಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ದುರಸ್ತಿಪಡಿಸಿ ಪ್ರಸ್ತುತ ಸುಸ್ಥಿತಿಯಲ್ಲಿ ಇಟ್ಟುಕೊಂಡಿದೆ ಎನ್ನಬಹುದು. ಈ ದೇವಾಲಯದ ಸುತ್ತಲೂ ವಿಶಾಲ ಸ್ಥಳಾವಕಾಶವಿದ್ದು, ಸುತ್ತಲೂ ಪ್ರಾಂಗಣ ರಚಿಸಲಾಗಿದೆ. ದೇವಾಲಯದ ನಿರ್ವಹಣೆ ಮತ್ತು ಪ್ರವಾಸಿಗರಿಗೆ ಮಾಹಿತಿ ನೀಡಲು ನೌಕರನನ್ನು ನೇಮಿಸಲಾಗಿದೆ. ಇದೊಂದು ದ್ವಿಕೂಟ ಮಾದರಿಯ ದೇವಾಲಯವಾಗಿದ್ದು, ಗರ್ಭಗುಡಿಗಳು, ಪ್ರತ್ಯೇಕ ತೆರೆದ ಅಂತರಾಳಗಳನ್ನು ಮತ್ತು ಸಾಮಾನ್ಯ ನವರಂಗವನ್ನು ಹೊಂದಿವೆ. ಈ ದೇವಾಲಯಕ್ಕೆ ಎರಡು ಮುಖಮಂಟಪಗಳು ಇದ್ದು, ಅವು ಗರ್ಭಗುಡಿಗಳು ಇರುವ ದಿಕ್ಕಿಗೇ ಇವೆ ಮತ್ತು ಇವು ನವರಂಗಕ್ಕೇ ತೆರೆದುಕೊಳ್ಳುತ್ತವೆ. ಈ ದೇವಾಲಯದ ಶಿಖರವು ಶಿಥಿಲಗೊಂಡು ಬಿದ್ದಿದ್ದು, ಹೊರಗಿನ ಗೋಡೆಯಲ್ಲಿ ಸಣ್ಣ ಸಣ್ಣ ಗೋಪುರಗಳು ಮತ್ತು ಖಾಲಿ ಇರುವ ದೇವಕೋಷ್ಠಗಳು ಇವೆ.

ಈ ನವರಂಗದಲ್ಲಿ ಒಟ್ಟು 16 ಕಂಬಗಳು ಇದ್ದು, ಮಧ್ಯದಲ್ಲಿ ‘ನಾಟ್ಯರಂಗ’ ಎಂದು ಉಲ್ಲೇಖಿಸಿರುವ ಅರ್ಧ ಅಡಿ ಎತ್ತರದ ವೇದಿಕೆಯ ಮೇಲಿರುವ ನಾಲ್ಕು ಕಲಾತ್ಮಕ ಕಂಬಗಳು ಈ ದೇವಾಲಯದ ಪ್ರಮುಖ ಆಕರ್ಷಣೆ. ಇದರ ಕಂಬಗಳ ಸುತ್ತಲೂ ಅತ್ಯದ್ಭುತ ಕೆತ್ತನೆಗಳನ್ನು ಕೆತ್ತಲಾಗಿದ್ದು, ಈ ಕಂಬಗಳು ಪ್ರವಾಸಿಗರ ಕಣ್ಮನಗ ಸೂರೆಗೊಳಿಸುತ್ತದೆ. ಈ ಕಂಬಗಳ ತುದಿಯಲ್ಲಿ ವಿವಿಧ ರೀತಿಯ ತೋರಣಗಳು, ಮಧ್ಯದಲ್ಲಿ ಕುಸುರಿ ಮತ್ತು ಕಲಾತೋರಣಗಳು ಹಾಗೂ ತಳಭಾಗದಲ್ಲಿ ಪ್ರಭಾವಳಿಗಳ ಕೆತ್ತನೆಗಳಿವೆ. ಪ್ರತಿಯೊಂದ ಕಂಬಗಳ ಕೆತ್ತನೆಯೂ ಅತ್ಯಾಕರ್ಷಕ ಆಗಿದೆ. ಈ ದೇವಾಲಯದ ಕಂಬಗಳಲ್ಲಿ ಗಣೇಶ, ವರಾಹ, ಈಶ್ವರ, ಬ್ರಹ್ಮ, ಸೂರ್ಯದೇವ, ವಿಷ್ಣು, ಲಕ್ಷ್ಮೀ, ನರಸಿಂಹ, ಉಗ್ರನರಸಿಂಹ, ಸರಸ್ವತಿ ಮತ್ತು ಚಾಮುಂಡಿ ಮೊದಲಾದ ದೇವರ ಕೆತ್ತನೆಗಳು ಇವೆ.
ಮೂರನೇ ಶಾಖೆಯ ಮಧ್ಯದಲ್ಲಿ ಪೂರ್ಣಕುಂಭ ಕಲಶವನ್ನು ವೈವಿಧ್ಯಮಯವಾಗಿ ಸಿಂಗರಿಸಿ ಸಾಂಕೇತಿಕವಾಗಿ ತೋರಿಸಿರುವುದೂ ಇಲ್ಲಿನ ವೈಶಿಷ್ಟ್ಯತೆಗಳಲ್ಲಿ ಒಂದು.

ಪಶ್ಚಿಮ ದಿಕ್ಕಿನಲ್ಲಿ ಇರುವ ಪ್ರಮುಖ ಗರ್ಭಗುಡಿಯು ಐದು ಶಾಖೆಗಳಿರುವ ದ್ವಾರವನ್ನು ಹೊಂದಿದ್ದು ಇದರ ಹಣೆಯಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಇದರ ಶಾಖೆಗಳಲ್ಲಿ ವಜ್ರತೋರಣ, ನಾಟ್ಯಗಾರರು, ವಾದ್ಯಗಾರರು, ಪ್ರಾಣಿಗಳು ಮತ್ತು ಬಳ್ಳಿತೋರಣಗಳ ಕೆತ್ತನೆಗಳನ್ನು ಕಾಣಬಹುದು. ಈ ಕಂಬಗಳ ನಾಲ್ಕೂ ಪಾರ್ಶ್ವಗಳ ಕಲಾಸೌರಭವನ್ನು ಆಸ್ವಾದಿಸುವುದರಲ್ಲಿ ಸಮಯ ಸರಿದ ಅರಿವೇ ಆಗುವುದಿಲ್ಲ. ಪ್ರಭಾವಳಿ ಕೆತ್ತನೆಗಳಂತೂ ಮನಸೂರೆಗೊಳ್ಳುತ್ತವೆ. ಐದು ಶಾಖೆಗಳಿಗೆ ಸಮನಾಗಿ ಮುಖ್ಯದ್ವಾರದ ಮೇಲ್ಭಾಗದಲ್ಲಿ ಐದು ಶಿಖರಗಳಿವೆ. ಇದರಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯ ಚಿತ್ರವನ್ನು ಕೆತ್ತಲಾಗಿದೆ. ದ್ವಾರದ ತಳಭಾಗದಲ್ಲಿ ರತಿ ಮನ್ಮಥರು ಮತ್ತು ಅವರ ಸೇವಕ ಸೇವಕಿಯರ ಕೆತ್ತನೆಯಿದೆ.

ಉತ್ತರ ದಿಕ್ಕಿನಲ್ಲಿ ಇರುವ ಮತ್ತೊಂದು ಗರ್ಭಗುಡಿಯು ಅಲಂಕಾರ ಇಲ್ಲದ ಪಂಚಶಾಖಾ ದ್ವಾರವನ್ನು ಹೊಂದಿದ್ದು, ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀ, ಮತ್ತು ಮೇಲ್ಭಾಗದಲ್ಲಿ ಪಂಚಶಿಖರಗಳು ಇವೆ. ಇಲ್ಲೂ ಪಂಚಶಿಖರಗಳಲ್ಲಿ ಗಣೇಶ, ತ್ರಿಮೂರ್ತಿಗಳು ಮತ್ತು ದೇವಿಯ ಕೆತ್ತನೆಯಿದೆ. ಈ ದೇವಾಲಯದಲ್ಲಿ ಪ್ರಸ್ತುತ ಇರುವ ಬನಶಂಕರಿ ದೇವಿ ಮತ್ತು ಶಿವಲಿಂಗ ಇವೆರಡೂ ಇಲ್ಲಿನ ಮೂಲ ಮೂರ್ತಿಗಳಲ್ಲ. ಇಲ್ಲಿ ದೊರೆತಿರುವ 1120ರ ಏಕೈಕ ಶಿಲಾಶಾಸನ ಪ್ರಕಾರ ಪಶ್ಚಿಮ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ‘ಜಕ್ಕರಸ’ ಎಂಬಾತನು ಕೇಶವ ಮತ್ತು ಭೈರವ ದೇವರ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದನು.

ಎಲ್ಲಿದೆ?: ಅಮರಗೋಳವು ಧಾರವಾಡ ಮತ್ತು ಹುಬ್ಬಳ್ಳಿ ನಡುವೆ, ಹುಬ್ಬಳ್ಳಿ ನಗರದಿಂದ ಸುಮಾರು 9 ಕಿ.ಮೀ ದೂರದ ನವನಗರದ ಪಕ್ಕದಲ್ಲಿದೆ. ಈ ದೇವಾಲಯವು ಉಣಕಲ್ ಕೆರೆ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ ಹುಬ್ಬಳ್ಳಿಯಿಂದ 4 ಕಿಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಹೋಗಲು ನವನಗರ ಪಟ್ಟಣಕ್ಕಿಂತ 100 ಮೀಟರ್ ಮೊದಲು ಸಿಗುವ ಫ್ಲೈಓವರ್ ಕೆಳಗಡೆಯಿಂದ ಬಲಕ್ಕೆ ತಿರುಗುವ ರಸ್ತೆಯಲ್ಲಿ ತಿರುಗಿ ಸ್ವಂತ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನದ ಮೂಲಕವೂ ಸಾಗಬಹುದು. ಇಲ್ಲಿ ಯಾವುದೇ ಹೋಟೆಲ್ ಮತ್ತು ಅಂಗಡಿಗಳು ಲಭ್ಯವಿಲ್ಲ ಆದ್ದರಿಂದ ನವನಗರ ಪಟ್ಟಣದಿಂದಲೇ ವ್ಯವಸ್ಥೆ ಮಾಡಿಕೊಳ್ಳಬೇಕು.

ಕಾಲಕ್ರಮೇಣ ಇಲ್ಲಿನ ಈ ಎರಡೂ ಮೂರ್ತಿಗಳು ಇಲ್ಲಿಂದ ಕಾಣೆಯಾದವು. ನಂತರ ಮುಖ್ಯ ಗರ್ಭಗುಡಿಯಲ್ಲಿ ಬನಶಂಕರಿಯ ವಿಗ್ರಹವನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಸುಮಾರು 10-15 ವರ್ಷಗಳ ಹಿಂದೆ ದೇವಾಲಯದ ಉತ್ತರ ದಿಕ್ಕಿನಲ್ಲಿ ಇರುವ ಗರ್ಭಗುಡಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಈ ದೇವಸ್ಥಾನವು ಒಂದು ದ್ರಾವಿಡ ಶೈಲಿಯ ಮತ್ತು ಒಂದು ನಾಗರ ಶೈಲಿಯ ದೇವಾಲಯವನ್ನು ಹೊಂದಿದೆ. ಈ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವು ಪ್ರವಾಸಿಗರಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತೆರೆದಿರುತ್ತವೆ. ಸ್ಮಾರಕದ ಸುತ್ತಲಿನ 100 ಮೀಟರ್ ವ್ಯಾಪ್ತಿಯು ನಿಷೇಧಿತ ಪ್ರದೇಶವಾಗಿದ್ದು, 100 ರಿಂದ 300 ಮೀಟರ್ ವ್ಯಾಪ್ತಿಯನ್ನು ‘ಪ್ಲಾಸ್ಟಿಕ್ ಮುಕ್ತ ಪ್ರದೇಶ’ ಎಂದು ಘೋಷಿಸಲಾಗಿದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ಸವಚ್ಛವಾಗಿ ಇಡಲು ಅಲ್ಲಲ್ಲಿ ಕಸದಡಬ್ಬಿಗಳನ್ನು ಇಟ್ಟಿದ್ದು, ಅದರಲ್ಲೇ ತ್ಯಾಜ್ಯಗಳಲ್ಲು ಹಾಕುವ ಮನೋಭಾವವನ್ನು ಪ್ರವಾಸಿಗರು ತೋರಬೇಕು. ಹಾಗೂ ಸ್ಮಾರಕದ ಒಳಗಡೆ ಆಹಾರ ಪದಾರ್ಥಗಳನ್ನು ತಂದು ತಿನ್ನುವಂತಿಲ್ಲ.

ಇದು ಭಾರತೀಯ ಪುರಾತತ್ವ ಇಲಾಖೆಯ ಸರ್ವೇಕ್ಷಣೆಗೆ ಒಳಪಟ್ಟಿದ್ದು, ಈ ದೇವಾಲಯದ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ, ಪ್ರಾರಂಭದಲ್ಲಿ ಒಂದು ಪ್ರತ್ಯೇಕ ಊರಾಗಿದ್ದ ಅಮರಗೋಳವು ಇಂದು ತನ್ನ ಸಮೀಪದ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಬೆಳವಣಿಗೆಯ ಕಾರಣದಿಂದ ಈ ಎರಡು ನಗರ ನಡುವೆ ವಿಲೀನಗೊಂಡಿದೆ. ಈ ಬನಶಂಕರಿ ದೇವಾಲಯವು ಪ್ರವಾಸಿಗರಿಗೆ ವಾಸ್ತುಶಿಲ್ಪ ಶೈಲಿಯ ದೇವಾಲಯವನ್ನು ಅಧ್ಯಯನ ಮಾಡಬಯಸುವವರಿಗೆ ಭೇಟಿ ನೀಡಲು ಯೋಗ್ಯವಾದ ಆಕರ್ಷಕ ದೇವಾಲಯವಾಗಿದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post