ಅಮೇಜಾನ್ ಮತ್ತು ಸಹಾರಾ

ಅಮೇಜಾನ್ ಮತ್ತು ಸಹಾರಾ

ಪ್ರಕೃತಿಯಲ್ಲಿ ವಾಯುವನ್ನ ನೇರವಾಗಿ ನೋಡಲಾಗದಿದ್ದರೂ ಅದರ ಅರೂಡಾವಸ್ತೆಯಲ್ಲಿ ಅನುಭವಿಸುತ್ತೇವೆ. ಸರೂಪಗಳ ಮೇಲೆ ಗಾಳಿ ತನ್ನ ವಿವಿಧ ಸ್ತಿತಿಗಳಲ್ಲಿ ಉಂಟುಮಾಡುವ ಪರಿಣಾಮದ ಚಿತ್ರಗಳಲ್ಲಿ ಅದು ಗೋಚರವಾಗುತ್ತದೆ;
ತನ್ನ ಗರಿಗಳನ್ನೆಲ್ಲ ಒಕ್ಕಡೆಗೆ ಚಾಚಿ, ಬಾಗಿ,ತೂಗಾಡುತ್ತಿರುವ ತೆಂಗಿನ ಮರದ ಚಿತ್ರದಲ್ಲಿ, ಬರ್ರನೇ ಬೋರ್ಗರೆಯುತ್ತಾ ತೀರವನ್ನಪ್ಪಳಿಸುತ್ತಿರುವ ಕಡಲಿನ ತೆರೆಗಳಲ್ಲಿ,
ಆಕಾಶದಲ್ಲಿ ರಿಂಗಣಗುಣಿಯುತ್ತಿರುವ ಹುಲ್ಲಿನ ಚಿಂದಿಗಳಲ್ಲಿ, ಬಾನಂಗಳದಲ್ಲಿ ಚಲಿಸುವ ಕಾರ್ಮೋಡಗಳಲ್ಲಿ, ಒಯ್ಯೇಂದು ತಲೆದೂಗುವ ಹೂಮರ ಲತೆಬಳ್ಳಿಗಳಲ್ಲಿ ..
ಇಂತಹ ನೂರಾರು ಚಿತ್ರಗಳಲ್ಲಿ , ಬಲ್ಗಾಳಿಯಾಗಿ, ಕಾರ಼್ಗಾಳಿಯಾಗಿ, ಬಿರುಗಾಳಿಯಾಗಿ, ತಿರಿಗಾಳಿಯಾಗಿ, ತಂಗಾಳಿಯಾಗಿ, ಮೇಲ್ಗಾಳಿಯಾಗಿ ಅನೇಕಾವಸ್ಥೆಯಲ್ಲಿ ವಾಯು ನಮ್ಮ ಅನುಭವಕ್ಕೆ ಬರುತ್ತದೆ.

‌ಅಮೇರಿಕಾದ ಫ್ಲೋರಿಡಾ,ಯೂರೋಪ್ , ಆಫ್ರಿಕಾ, ಆಸ್ಟೇಲಿಯಾ, ಏಶಿಯಾ, ನ್ಯೂಜಿಲೆಂಡ್‌ ಸೇರಿದಂತೆ ಅನೇಕ ಪ್ರಾಂತ್ಯಗಳ ಬಯಲು ಪ್ರದೇಶಗಳಲ್ಲಿ ಪ್ರತೀ ವರ್ಷ ಅಪ್ಪಳಿಸುವ ಸುಂಟರಗಾಳಿ / ಬಿರುಗಾಳಿಗಳನ್ನ “ಟಾರ್ನೆಡೊ” ಎಂದು ಕರೆಯಲಾಗುತ್ತದೆ. ಅಮೇರಿಕಾದ ಫ್ಲೋರಿಡಾ ಬಯಲುಪ್ರದೇಶಗಳಲ್ಲಿ ಅತಿಹೆಚ್ಚು ಬೀಸುವ ಈ “ಟಾರ್ನೆಡೊ” ಗಳು ಸಾಕಷ್ಟು ಆಸ್ತಿಹಾನಿ, ಪ್ರಾಣಹಾನಿಗೆ ಕಾರಣವಾಗುತ್ತವೆ. ವೈಜ್ನಾನಿಕ ದೃಷ್ಟಿಕೋನದಿಂದ ಅಭ್ಯಸಿಸಲು ಸರಳವಾಗಲಿ ಮತ್ತು ಯಾವ ಪ್ರದೇಶದಲ್ಲಿ ಯಾವ ವರ್ಷದಲ್ಲಿ ಯಾವಾಗ ಈ “ಟಾರ್ನೆಡೊ” ಗಳು ಸಂಭವಿಸಿದವು ಎಂದು ತಿಳಿಯಲೆಂದು ಇವುಗಳಿಗೆ ಅನೇಕ ವಿದವಾಗಿ ಹೆಸರಿಸಿ ಕರೆಯುತ್ತಾರೆ ..

ವಿಜ್ನಾನಿಗಳು ಬಯಂಕರವಾಗಿ ಬೀಸುವ ಈ ಸುಂಟರಗಾಳಿಗಳ ಮಧ್ಯೆ ಮೈ ನವಿರೇಳಿಸುವ ಸಾಹಸದಿಂದ ರೇಡಿಯೋ ಟ್ರಾನ್ಸಮಿಟರ್ ಮತ್ತು ಸೂಕ್ಷ್ಮ ಕ್ಯಾಮರಾ ಅಳವಡಿಸಿರುವ ಕ್ರಿಕೆಟ್ ಬಾಲ್ ನಷ್ಟು ಚಿಕ್ಕ ಗಾತ್ರದ ಚೆಂಡುಗಳನ್ನ ತೂರಿಸುತ್ತಾರೆ. ಅತ್ಯಂತ ಜಾಗೃತೆಯಿಂದ ಈ “ಟಾರ್ನೆಡೊ” ಗಳನ್ನ ಬೆನ್ನತ್ತುವ ಸಾಹಸಿ ವಿಜ್ನಾನಿಗಳು ಇವುಗಳ ಮಧ್ಯ ಚೆಂಡುಗಳನ್ನ ತೂರಿಸುವ ಪರಿ ಸ್ಪೇನ್ ದೇಶದಲ್ಲಿ ನಡೆಯುವ ಗೂಳಿ ಕಾಳಗವನ್ನ ನೆನಪಿಸುತ್ತದೆ. ಕೊಂಚ ಯಾಮಾರಿದರೂ “ಟಾರ್ನೆಡೊ” ತನ್ನೊಂದಿಗೆ ವಿಜ್ನಾನಿಗಳನ್ನೂ ಹೊತ್ತೊಯ್ದು ದೂರದ ಯಾವುದೋ ಪ್ರದೇಶದಲ್ಲಿ ಅವರ ದೇಹದ ಮೂಳೆ ಸಹ ಸಿಗದಂತೆ ಬೀಸಾಡುತ್ತದೆ.

ಅತ್ಯಂತ ವೇಗದಿಂದ ತಿರ್ರನೇ ತಿರುಗುವ ಸುಂಟರಗಾಳಿಯ ಮಧ್ಯ ಸಿಲುಕಿ ಮೇಲೇರುವ ಕ್ರಿಕೆಟ್ ಬಾಲ್ ಗಾತ್ರದ ಈ ಚೆಂಡುಗಳು, ಆ ಸುಂಟರಗಾಳಿಗಳಲ್ಲಾಗುವ ಪ್ರತಿಯೊಂದು ಬದಲಾವಣೆಯನ್ನ ಇಂಚಿಂಚು ಬಿಡದೆ ರೆಕಾರ್ಡ ಮಾಡುವುದಲ್ಲದೇ ದೂರದ ತಮ್ಮ ವಾಹನಗಳಲ್ಲಿರುವ ವಿಜ್ನಾನಿಗಳಿಗೆ ಟ್ರಾನ್ಸಮಿಟ್ ಮಾಡುತ್ತದೆ. ಆ ಮೂಲಕ ವಿಜ್ನಾನಿಗಳು ಪ್ರಕೃತಿಯಲ್ಲಾಗುವ ವಿಸ್ಮಯಗಳನ್ನ ಅಭ್ಯಸಿಸುತ್ತಾರೆ .ಇದಿಷ್ಟೇ ಅಲ್ಲ ಆ ಟಾರ್ನೆಡೊಗಳ ಚಿತ್ರಗಳನ್ನ ಸ್ಯಾಟಲೈಟ್ ಮೂಲಕವೂ ಸೆರೆಹಿಡಿದು ಅವುಗಳಿಂದಾಗುವ ಪರಿಣಾಮಗಳನ್ನ ಅಭ್ಯಸಿಸುತ್ತಾರೆ.

ದಕ್ಷಿಣ ಅಮೇರಿಕಾದ (ಖಂಡದ) 9 ದೇಶಗಳಲ್ಲಿ, ಒಟ್ಟಾರೆ ಸರಿ ಸುಮಾರು 5,500,000 ಯಿಂದ 6,000,000 ಕಿ.ಮೀ (ಐದೂವರೆಯಿಂದ ಆರು ದಶಲಕ್ಷ ಸ್ಕೇರ್ ಕಿ.ಮಿ) ನಷ್ಟು ವಿಸ್ತಾರವಾದ ಪ್ರದೇಶದಲ್ಲಿ ವಿಸ್ತರಿಸಿರುವ “ಅಮೇಜಾನ್” ಉಷ್ಣವಲಯದ ಮಳೆ ಕಾಡುಗಳು ಭೂಮಿಯ ಒಟ್ಟಾರೆ ಶೇ 20 % ನಷ್ಟು ಆಮ್ಲಜನಕ ಉತ್ಪಾದಿಸುತ್ತವಾದ್ದರಿಂದ ಇವು ನಮ್ಮ ಭೂಮಿಯ ಶ್ವಾಸಕೋಶಗಳೆನಿಸಿವೆ. ಬ್ರೆಜಿಲ್ ತನ್ನ ಗಡಿಪ್ರದೇಶದಲ್ಲಿ ಹೆಚ್ಚು ಶೇ 58 % ನಷ್ಟು ಅಮೇಜಾನ್ ಅರಣ್ಯವಲಯವನ್ನ ಹೊಂದಿದೆ. ಇನ್ನುಳಿದ 42% ನಷ್ಟು ಅರಣ್ಯವಲಯ ಇಕ್ವಿಡಾರ್, ವೆನಿಜ್ಯುವೆಲಾ,ಪೇರು, ಬೊಲಿವಿಯಾ ಮತ್ತು ಪ್ರೆಂಚ್ ಗಯಾನ ದೇಶಗಳಲ್ಲಿ ವಿಸ್ತರಿಸಿಕೊಂಡಿದೆ.

40,000 ವಿವಿಧ ಬಗೆಯ ಸಸ್ಯರಾಶಿಗಳು,1300 ಕ್ಕಿಂತಲೂ ವಿವಿಧ ಬಗೆಯ ಪಕ್ಷಿಸಂಕುಲ, 3000 ವಿವಿಧ ರೀತಿಯ ಮತ್ಸ್ಯಗಳು ,427 ಕ್ಕೂ ಅಧಿಕ ಸಸ್ತಿನಿಗಳು, 2.5 ಮಿಲಿಯನ್ ವಿವಿದ ರೀತಿಯ ಕೀಟಗಳನ್ನ ತನ್ನೋಡಲಲ್ಲಿ ಬಚ್ಚಿಟ್ಟುಕೊಂಡಿರುವ ಅಮೇಜಾನ್ ಅನೇಕಾನೇಕ ವಿಸ್ಮಯಗಳಿಂದ ಸಾಮಾನ್ಯರೂ ಸೇರಿದಂತೆ ಜೀವವಿಜ್ನಾನಿಗಳಿಗೂ ಕುತೂಹಲ ಕೌತುಕವನ್ನ ಕೆರಳಿಸುತ್ತದೆ. ಅಮೇಜಾನ್ ಕುರಿತಾಗಿ ಅನೇಕಾನೇಕ ನಂಬಲಸಾಧ್ಯವಾದಂತ ದಂತಕಥೆಗಳಿವೆ.

ಸಾಮಾನ್ಯವಾಗಿ ರೈತರು ತಮ್ಮ ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಗೊಬ್ಬರದ ಜೊತೆಗೆ ಖನಿಜಗಳನ್ನ ಪಾಸ್ಪೇಟ್ ರೂಪದಲ್ಲೋ ಸಲ್ಪೇಟ್ ರೂಪದಲ್ಲೋ ಕೊಡುವುದನ್ನ ನಾವು ನೋಡುತ್ತೇವೆ.

ಚಿತ್ರವಿಚಿತ್ರ ಸಸ್ಯರಾಶಿ ಗಿಡಮರಗಳನ್ನ ಹೊಂದಿ ದಟ್ಟವಾಗಿ ಬೆಳೆಯುವ ಇಲ್ಲಿನ ಕಾಡುಗಳಿಗೆ ಜೈವಿಕ ಗೊಬ್ಬರದಷ್ಟೇ ಖನಿಜಾಂಶಗಳು ಸಹ ಅವಶ್ಯವಾಗಿವೆ. ಜೈವಿಕ ಗೊಬ್ಬರ ಉದುರಿದ ಎಲೆ,ಕಸಕಡ್ಡಿ, ಪ್ರಾಣಿಗಳು ವಿಸರ್ಜನೆ ಮತ್ತು ಒಣಮರದ ಕಟ್ಟಿಗೆಗಳನ್ನ ಹುಳಹುಪ್ಪಟೆಗಳು ತುಂಡರಿಸಿದ ನಂತರ ಬರುವ ಪುಡಿಹುಡಿಗಳು ಮಳೆಗಾಲದಲ್ಲಿ ಕೊಳೆತು ತಯ್ಯಾರಾದರೆ ಖನಿಜಾಂಶಗಳು ಅದರಲ್ಲೂ ಮುಖ್ಯವಾಗಿ ಪ್ರತೀವರ್ಷ ಮಳೆಗೆ ಕೊಚ್ಚಿಹೋಗುವ ಪಾಸ್ಪರಸ್ (Phosphorus) ಒದಗುವುದು ..

ಆಫ್ರಿಕಾದ “ಸಹಾರಾ” ಮರಭೂಮಿಯಿಂದ .

ಎಲ್ಲಿಯ ಅಮೇರಿಕಾ ಎಲ್ಲಿಯ ಆಫ್ರಿಕಾದ ಮರಭೂಮಿ ಎಂದಿರಾ ?

ಹೌದು ಇದೇ ಕೌತುಕಭರಿತ ವಿಸ್ಮಯ .ಮೂರು (3) ಮಿಲಿಯನ್ ಸ್ಕೇರ ಮೈಲ್ ವಿಸ್ತಾರ ಭೂಪ್ರದೇಶದಲ್ಲಿ ಹರಡಿರುವ “ಸಹಾರಾ” ಜಗತ್ತಿನ ಅತಿದೊಡ್ಡ ಮರಭೂಮಿ. ಮೇಲೆ ತಿಳಿಸಿದಂತೆ ಅಮೇರಿಕಾದ ಫ್ಲೋರಿಡಾದಲ್ಲಿ ಸಂಭವಿಸುವ “ಟಾರ್ನೆಡೊ” ಬಿರುಗಾಳಿಗಳಂತೆಯೇ ಆಫ್ರಿಕಾದ ಸಹಾರಾ ಮರಭೂಮಿಯಲ್ಲಿಯೂ “ಸಿಮೂನ್” ಎನ್ನುವ ಬಯಂಕರ ರೌದ್ರರೂಪದ ಸುಂಟರಗಾಳಿಗಳು ಬಿರುಗಾಳಿಗಳು ಬೀಸುತ್ತವೆ.

ಸ್ಯಾಟಲೈಟ್ ಮೂಲಕ ಸೆರೆಹಿಡಿಯಲಾದ ಸಹಾರ ಮರುಭೂಮಿಯ ಪಾಸ್ಪರಸ್ ಯುಕ್ತ ಧೂಳು ಮತ್ತು ಮರಳು

ಈ ಗಾಳಿಗಳು ಪ್ರತೀವರ್ಷ 182 ಮಿಲಿಯನ್ ಟನ್ ಸಹಾರಾ ಮರಭೂಮಿಯ “ಪಾಸ್ಪರಸ್” ಯುಕ್ತ ಮರಳು ಮತ್ತು ದೂಳಿನ ಕಣಗಳನ್ನ ಆಕಾಶದಲ್ಲಿ ಹೊತ್ತೋಯ್ಯುತ್ತವೆ . ಇಲ್ಲಿಂದ ಬೀಸುವ ವಾಣಿಜ್ಯ ಮಾರುತಗಳು ಅಟ್ಲಾಂಟಿಕ್ ಸಾಗರದ ಮೇಲಿಂದ 3000 ಕಿ.ಮೀ ಕ್ರಮಿಸಿ ತಮ್ಮೊಂದಿಗೆ ಈ ಮರಳು ಮತ್ತು ದೂಳಿನ ಕಣಗಳನ್ನ ಹೊತ್ತೋಯ್ದು ಅಮೇಜಾನ್ ಅರಣ್ಯವಲಯದಲ್ಲಿ ಎಸೆಯತ್ತವೆ. ಅಮೇಜಾನ್ ಅರಣ್ಯ ಪ್ರದೇಶಗಳಲ್ಲಿ ಪ್ರತೀವರ್ಷ 27 ಮಿಲಿಯನ್ ಟನ್ ಗಳಷ್ಟು ಪಾಸ್ಪರಯುಕ್ತ ಮರಳು ಮತ್ತು ದೂಳು ಈ ರೀತಿ ಸೇರಿ ಅಲ್ಲಿನ ಗಿಡಮರಗಳು ಈ ಖನಿಜವನ್ನು ಹೀರಿಕೊಂಡು ಸಮೃದ್ದವಾಗಿ ಬೆಳೆಯುತ್ತವೆ ..

ಇದೇ ಪ್ರಕೃತಿಯಲ್ಲಾಗುವ ಮಹಾಯಜ್ಞ…….

ಈ ಯಜ್ಞದ ಕರ್ತೃ “ಪ್ರಕೃತಿ , ಅರ್ಘ್ಯ ಪಾಸ್ಪರಸ್ ,
ಬಿರುಗಾಳಿಯೇ “ದೇವತೆ”, ಯಜ್ಞದ ಫಲ ಆಕ್ಷಿಜನ್ ,
ಭೂಮಿಯ ಮೇಲೆ ಉಸಿರಾಡುವ ಪ್ರತಿಯೊಂದು ಜೀವಿಯೂ ಯಜ್ಞದ ಪಲಾನುಭವಿಗಳು.ಮತ್ತು ಈ ಮಹಾಯಜ್ಞಕ್ಕೆ ಅಡಚಣೆ ಮಾಡುವ ದುರುಳರು ಸ್ವಾರ್ಥಿ ಮಾನವರೇ ರಾಕ್ಷಸರು.

ವಿಜ್ನಾನ ನಂಬಿಕೆಗಳನ್ನ ಪ್ರೆಶ್ನಿಸುವುದಿಲ್ಲ , ಅದು ಪುರಾವೆಯಿಲ್ಲದೆ ನಂಬಿಕೆಗಳನ್ನ ಸಮರ್ಥಿಸುವುದೂ ಇಲ್ಲ.ಅದು ಪ್ರಕೃತಿಯ ಸತ್ಯವನ್ನ ಮಾತ್ರ ಕಣ್ಮುಂದೆ ತೆರೆದಿಡುತ್ತದೆ .ಯಾವುದು ಸತ್ಯವೋ ಯಾವುದು ಮಿಥ್ಯವೋ ವಿಮರ್ಷಿಸಿ ಸ್ವೀಕರಿಸಬೇಕಾದವರು ನಾವು. ಅವರವರ ಆಯ್ಕೆ ಅವರವರಿಗೆ ಬಿಟ್ಟದ್ದು.

ಮೃತ್ಯುಂಜಯ ನಾರಾ

Related post

Leave a Reply

Your email address will not be published. Required fields are marked *