ಅಮ್ಮನೆಂದರೆ….

ಅಮ್ಮನೆಂದರೆ….

ಅತೃಪ್ತ ಜೀವವ
ಸಂತೈಸುವ ಮಡಿಲು;
ಚಿಂತೆಯ ಚಿತೆಗೇರಿಸೊ
ಪ್ರಸನ್ನತೆಯ ಮುಗುಳು;

ಅಶಾಂತ ಮನವ
ಶಾಂತಗೊಳಿಪ ಜೋಗುಳ;
ಹಸಿದ ಹೊಟ್ಟೆಯ
ಉರಿಯರಿತ ಕೈತುತ್ತು;

ಅಶಕ್ತ ದೇಹಕೆ ಶಕ್ತಿ
ತುಂಬುವ ಆಲಿಂಗನ;
ಪರರೊಳಿತಿಗೆ ಬೇಡುವ
ಅಚಲ ಪ್ರಾರ್ಥನೆ:

ಮೊಗೆದಷ್ಟೂ ಉಕ್ಕುವ
ಬತ್ತದ ಪ್ರೀತಿಯೊರತೆ;
ನವಚೈತನ್ಯವನೀವ
ಸಗ್ಗದ ಅಮೃತಸುಧೆ :

ಎಡವಿದಾಗ ಮೇಲೆತ್ತಿ
ಹಿಡಿವ ಕರ ಕಮಲ,
ಸೋತ ನೆಗಲಿಗೆ
ಆಸರೆಯಾದ ಹೆಗಲು:

ಕತ್ತಲ ಹಾದಿಯನು
ಬೆಳಗುವ ಕಿರುದೀಪ;
ಚಿಗುರು ನಳನಳಿಸಲು
ನೀರುಣಿಪ ತಾಯಿಬೇರು!!

ಶ್ರೀವಲ್ಲಿ ಮಂಜುನಾಥ

Related post