ಅಮ್ಮ ಅಂದ್ರೆ ಭೂಮಿ
ಪುಸ್ತಕ : ಅಮ್ಮ ಅಂದ್ರೆ ಭೂಮಿ
ಲೇಖಕರು: ಸ. ಹರೀಶ್
ಪ್ರಕಟಣೆ : ಉಪಾಸನ ಬುಕ್ಸ್
ದರ : 200/-
ಲೇಖಕರ ಪರಿಚಯ
ಸ.ಹರೀಶ್
ಸಾಹಿತಿ,ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು.
ಈವರೆಗೆ ಐದು ಕಾದಂಬರಿಗಳು, ಐದು ಕಥಾಸಂಕಲನಗಳು,
ಎಂಟು ಸಾವಿರಕ್ಕೂ ಹೆಚ್ಚು ಟಿ.ವಿ.ಧಾರಾವಾಹಿಗಳಿಗೆ ಕತೆ-ಚಿತ್ರಕತೆ-ಸಂಭಾಷಣೆ, ಕನ್ನಡ ಚಲನಚಿತ್ರಗಳಿಗೆ ಗೀತರಚನೆ, ಕತೆ-ಚಿತ್ರಕತೆ-ಸಂಭಾಷಣೆ 2018 ರ ಅತ್ಯುತ್ತಮ ಕತೆಗೆ ಕರ್ನಾಟಕ ರಾಜ್ಯ ಚಲನಚಿತ್ರ ರಾಜ್ಯಪ್ರಶಸ್ತಿ.
ಲೇಖಕರ ನುಡಿ
ಮತ್ತೆ ಸಂಧಿಸುವ ಸಮಯ ಬಂದಿದೆ. ವರ್ಷಕ್ಕೆರಡು ಬಾರಿಯಾದರೂ ನಿಮ್ಮೊಂದಿಗೆ ಮಾತನಾಡಲಿಲ್ಲ ಎಂದರೆ ಸಮಾಧಾನವೇ ಇರುವುದಿಲ್ಲ. ನಮ್ಮ ನಡುವೆ ಔಪಚಾರಿಕತೆ ಏನು ಬಂತು? ಆದರೆ ತಮ್ಮನ್ನು ಬರಿಗೈನಲ್ಲಿ ನೋಡಬಾರದಲ್ಲ, ಹಾಗಾಗಿ ಹಲವು ಕಥೆಗಳನ್ನು ಹುಡುಕಾಡುತ್ತ, ಹಲವು ಪಾತ್ರಗಳೊಂದಿಗೆ ಜೀವಿಸುತ್ತ ಇಷ್ಟುದಿನವಾಗಿ ಹೋಯಿತು. ಅಂತೂ ನಿಮ್ಮ ಭೇಟಿಗೆ ಕಾಲ ಕೂಡಿ ಬಂತು, ಸುಮಾರು ಹತ್ತುಕಥೆಗಳನ್ನು ಹೆಕ್ಕಿಕೊಂಡು ಬಂದಿದ್ದೇನೆ. ಈ ಸಂಕಲನ ಖಂಡಿತ ನಿಮ್ಮನ್ನ ನಿರಾಶೆಗೊಳಿಸುವುದಿಲ್ಲ. ನಿಮಗೇನಾದರು ಖಂಡಿತ ಕೊಟ್ಟು ಹೋಗುತ್ತದೆ ಹಾಗೆಯೇ ಬಿಟ್ಟು ಹೋಗುತ್ತದೆ. ನಾನು ಕೂಡ ಹತ್ತು ಕಥೆಗಳನ್ನು ನಿಮ್ಮ ಮಡಿಲಿಗೆ ಹಾಕಿ, ಬರಿದಾದ ಮೋಡದಂತಾಗಿದ್ದೇನೆ. ಹಲವು ವಿಸ್ಮಯ, ಅಚ್ಚರಿ, ಬೆರಗುಗಳ ಮೂಟೆ ಹೊತ್ತು ತಂದಿದ್ದೇನೆ. ಇಲ್ಲಿ ಹತ್ತು ಹಲವಾರು ಪಾತ್ರಗಳು ನಿಮ್ಮೊಡನೇ ಇರಲಿವೆ. ಹಲವು ಭಾವಗಳು ನಿಮ್ಮದೆಯಲ್ಲೇ ಸೆರೆಯಾಗಲಿವೆ. ಎಲ್ಲ ಬಂಧಗಳನ್ನು ನಿಮ್ಮದು ಎಂದು ಭಾವಿಸಿ, ನಿಮ್ಮಲ್ಲೆ ಇರಿಸಿಕೊಳ್ಳುವ ಪ್ರೀತಿಯನ್ನು ನೀವು ನೀಡುವಾಗ ಒಲ್ಲೆ ಎನ್ನಲಾದೀತೆ? ಓದುವ ಸುಖ ನಿಮ್ಮದು.

‘ಅಮ್ಮ ಅಂದ್ರೆ ಭೂಮಿ’ ಅನ್ನುವುದು ನಮ್ಮೆಲ್ಲರ ನಂಬಿಕೆ ಮತ್ತು ಪ್ರೀತಿ. ‘ಕ್ಷಮಯಾಧರಿತ್ರಿ’ ಅನ್ನುವ ಮಾತೇ ಹೀಗೆ ಮಾರ್ದನಿಸಿದೆ. ಎಲ್ಲ ಮನುಷ್ಯರು ಪ್ರತಿದಿನ ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುತ್ತೇವೆ. ವಿಶೇಷವೆಂದರೆ ನಾವೆ ಕಥೆಯಾಗುತ್ತೇವೆ ಅನ್ನುವುದು ನಮಗೆ ತಿಳಿದಿರುವುದಿಲ್ಲ. ಆದರೆ ಅಮ್ಮನ ಪಾತ್ರ ನಿಭಾಯಿಸುವುದು ಸುಲಭದ ಮಾತಲ್ಲ. ಇದು ಮಮತೆಯ ವಿಷಯ. ಆ ವಿಷಯ ನಿಮಗೆ ತಲುಪಲಿ ಆ ಪ್ರೀತಿಯ ನಾದ ನಿಮ್ಮ ಕಿವಿಗಳಲ್ಲಿ ತುಂಬಲಿ ಎಂಬುದೇ ನನ್ನ ಆಸೆ. ‘ತ್ವಮೇವ ಮಾತ’ ಎನ್ನುತ್ತ ಅಮ್ಮನನ್ನು ಆರಾಧಿಸುವುದು ನಿತ್ಯಸತ್ಯವಾಗಲಿ ಎಂದು ಹೇಳಬಹುದು. ‘ಅಪ್ಪನೆಂಬ ಆಪ್ತನಿಗೆ’ ಎಂದು ಈ ಮುಂಚೆ ಹೇಳಿದ್ದೆ. ‘ಅಮ್ಮ ದಯವಿಟ್ಟು ಕ್ಷಮಿಸು’ ಅಂತಲೂ ಕೇಳಿದ್ದೆ, ಆದರೆ ಈಗ “ಅಮ್ಮ ಅಂದ್ರೆ ಭೂಮಿ”ಎಂಬಲ್ಲಿಗೆ ತಲುಪಿದ್ದೇನೆ. ನಿಮ್ಮ ಹಾರೈಕೆ ಇರಲಿ.
ಈ ಬಾರಿಯ ಹೊತ್ತಗೆಯ ರೂಪ ಕೊಡಲು ಹೊರಟವರು ಉಪಾಸನಾ ಪ್ರಕಾಶನದವರು. ಅದರ ಪ್ರಕಾಶಕಿಯಾದ ಶ್ರೀಮತಿ ಆಶಾರಘು ಅವರು ಒಂದೇ ಒಂದು ಕರೆಯಲ್ಲಿ ಈ ಪ್ರಯತ್ನಕ್ಕೆ ‘ಓಕೆ’ ಅಂದವರು. ಅವರ ವಿಶ್ವಾಸಕ್ಕೆ ನಾನು ಋಣಿ ಅನ್ನುವುದು ತುಂಬಾ ಪುಟ್ಟ ಮಾತಾಗುತ್ತದೆ. ಇಂದು ಈ ಹೊತ್ತಗೆ ನಿಮ್ಮಲ್ಲಿ ಇದೆಯೆಂದರೆ ಅದಕ್ಕೆ ಕಾರಣರಾದವರು ಶ್ರೀಮತಿ ಆಶಾರಘು ಅವರು. ಅವರಿಗೆ ಮತ್ತೊಮ್ಮೆ ಧನ್ಯವಾದಗಳು. ಈ ಹೊತ್ತಗೆಯ ಮೂರ್ತರೂಪ ಕೂಡ ಅವರದ್ದೇ. ಇದರ ರಕ್ಷಾಪುಟದಿಂದ ಹಿಡಿದು, ಪ್ರತಿಪುಟಗಳ ನಿರ್ವಹಣೆಯೂ ಅವರದ್ದೇ. ಹಾಗಾಗಿ ಅವರಿಗೆ ಅಭಾರಿಯಾಗಿದ್ದೇನೆ. ಈ ಹೊತ್ತಗೆಗೆ ಮುನ್ನುಡಿ ಬರೆದು ಶುಭ ಹಾರೈಸಿದ ಕನ್ನಡ-ತೆಲುಗು ಅನುವಾದಕ ಶ್ರೀ ಬದರಿರೂಪನಗುಡಿ ಅವರಿಗೆ ನನ್ನ ಅನಂತ ಧನ್ಯವಾದಗಳು. ಈ ಹೊತ್ತಗೆಯನ್ನು ಪ್ರೀತಿಯಿಂದ ಬರಮಾಡಿಕೊಂಡು ಆದರಿಸುತ್ತೀರಿ ಎಂಬ ನಂಬಿಕೆ ನನ್ನದು. ಪ್ರೀತಿ ನಿಜವಾಗಲಿ, ಮಮತೆ ಸತ್ಯವಾಗಲಿ.
ನಿಮಗೆ ಋಣಿಯಾಗುತ್ತ,
ಸ.ಹರೀಶ
ಪುಸ್ತಕ ಕೊಳ್ಳಲು ಆಸಕ್ತಿಉಳ್ಳವರು ಮೊಬೈಲ್ ಸಂಖ್ಯೆ 9008122991 ಕ್ಕೆ ಸಂಪರ್ಕಿಸಿ.
ಸಾಹಿತ್ಯಮೈತ್ರಿ