ಅಮ್ಮ ನಾನು ಇನ್ನೂ ಮಗು
ನಿನ್ನ ಎದೆಯ ಹಾಸಿಗೆಯ ಮೇಲೆ
ನಿನ್ನುಸಿರ ಸ್ವರ ಕೇಳುತ್ತ ಮಲಗಿದವನು ನಾನು.
ಆ ಸ್ವರದೀ ಏರಳಿತವ ಕಲಿತ ನಿನ್ನ ಮೊದಲ ವಿದ್ಯಾರ್ಥಿಯು ನಾನೇನಮ್ಮ.
ಜೋಗುಳದ ವೇಗಕ್ಕೆ ಭಯವಾಗಿ
ನಿನ್ನ ಹೆಗಲ ಏರಲು ಅತ್ತವನು
ನಿನ್ನ ಎದೆಯ ಅಮೃತವ ಸವಿಯಲು
ಕೃತಕ ಹಸಿವಿನಿಂದ ಕಿರುಚಿದವನು
ನಿನ್ನ ಸೆರಗಿನೊಳಗಿನ ಬ್ರಹ್ಮಾಂಡಕ್ಕೆ
ಬೇಡಿಕೆ ಇಟ್ಟವನು ನಾನೇನಮ್ಮ.
ಅತ್ತಾಗ ಎತ್ತು ಮುದ್ದಾಡುವೆಯೆಂಬ
ಆಸೆಗೆ ಪದೇ ಪದೇ ಅತ್ತಿದ್ದೆ,
ನೀ ಸಿಹಿ ಮುತ್ತು ನೀಡಿದಾಗ ಒಳಗೊಳಗೆ ನಕ್ಕಿದ್ದೆ
ನೀ ಎದುರಿಗೆ ಇದ್ದರೆ ಅದೇನೊ ಖುಷಿ ಅಮ್ಮ.
ನಾ ನಡೆಯುವಾಗ ನಿನ್ನ ತುದಿ ಬೆರಳು ನನಗೆ ಆಧಾರ
ಆ ಅಭಯದಿಂದಲೇ ನನ್ನ ಹೆಜ್ಜೆಯ ಹಿಂದಿನ ಶಕ್ತಿ ಅಪಾರ
ಪರಶುರಾಮ್. ಎ