ಅಯ್ಯೋ….. ಮಳೆಯೇ!
ಬಾನು ಭೂಮಿ ಒಂದಾದಂತೆ ಮಳೆ. ಅದೆಷ್ಟು ಕಾಲದ ಹಸಿವೋ ಎಂಬಂತೆ ಮುಸಲಧಾರೆ. ಕಾಡೆಂದರೆ ಕಾಡಿಲ್ಲ, ಊರೆಂದರೆ ಊರಿಲ್ಲ ; ಅಂಥಾರ‍್ಭಟದ ಜಲಪ್ರ ಳಯ.ಇಡೀ ಒಂದು ರಾತ್ರಿ ಸುರಿದ ಮಳೆಗೆ ಆ ಹಳ್ಳಿ ಗಾಣಕ್ಕೆ ಸಿಕ್ಕಿದ ಕಬ್ಬಾಗಿತ್ತು .
ಮುಂಜಾನೆ ಆಯ್ತು ಅನ್ನೋವಷ್ಟ ರಲ್ಲಿ ಏನೂ ಆಗಿಲ್ಲದ ಮದುವಣಗಿತ್ತಿಯ ಮೈ ಘಮದ ಭಾವ ಊರ ನೆಲದ್ದು . ಬಿದ್ದ ಮರ, ಕಳಚಿದ ಕಂಬ, ಕೊರೆದ ಹಳ್ಳ , ಕೊಚ್ಚಿ ಹೋದ ಫಸಲು, ಕಾಣೆಯಾದ ದನ- ಕರ. ಊರಿಗೆ ಊರೇ ಕಳೆದು ಹೋದವುಗಳ ಹುಡುಕಾಟದಲ್ಲಿ ತಲ್ಲೀನ. ದೊಡ್ಡ ದೊಡ್ಡ ಚರಂಡಿಗಳೂ ಹೊಳೆಯ ಅಪರಾವತಾರ!
ಕೇಸರಿ ಬಣ್ಣದ, ಹಸಿರು ಬಣ್ಣದ, ತ್ರಿವರ‍್ಣದ ಬಾವುಟಗಳು ಊರ ಮುಂದಲ ಕೆರೆಯಲ್ಲಿ ಹಾಯಾಗಿ ಈಜುತ್ತಿವೆ. ಮಸೀದಿಯ ಹಜಾರದ ಊದಿನಕಡ್ಡಿಗಳು, ಹನುಮನ ಗುಡಿಯ ಮಂಗಳಾರತಿ ತಟ್ಟೆ , ಜೊತೆಯಾಗಿಯೇ ಮಳೆ ನೀರಲ್ಲಿ ಓಟ; ಕ್ರಮೇಣ ಮಾಯ…ಕಸ ಕಡ್ಡಿ, ಹೂವು ಹಣ್ಣು, ಚಾಪೆ, ಕಾಗದ ಎಲ್ಲಾ ಕಷ್ಟ ಸುಖ ಮಾತಾಡ್ಕೋತ
ನೀರಲ್ಲಿ ಸಾಗುತ್ತಿದ್ದವು!
ಅಲ್ಲೆಲ್ಲೋ ದೂರದಲ್ಲಿ ಒಂದೇ ಸಮನೆ ಕೂಗು ಹೋ…ಯಾವುದೋ ಹೆಣ…ಹೆಣ….ಚರಂಡಿ ಕಲ್ಲಿಗೆ ಸಿಕ್ಕಿದೆ; ಸಣ್ಣ ಹುಡುಗನ ಹೆಣವದು. ಹತ್ತೋ ಹನ್ನೊಂದೋ ವಯಸ್ಸಿರಬೇಕು. ಅಲ್ಲಿದ್ದವರು ಹೆಂಗೋ ಓಡಾಡಿ
ಕಷ್ಟ ಪಟ್ಟು ಗಳ ತಂದು ತಿವಿದು ಹೇಗೋ ಹೊರ ತೆಗೆದರು, ನೋಡಿದರು, ದಿಟ್ಟಿಸಿದರು… ಗುಂಪಿನಲ್ಲಿ ಯಾರೋ ಒಬ್ಬನೆಂದ” ಅಯ್ಯೋ… ಇದು ಸಾಬರ ಹುಸೇನಿ ಕಣೋ….ಐದನೇ ಕ್ಲಾಸ್ ಓದ್ತಿದ್ದ ….ಜೊತೆಲಿದ್ದವನು ‘ಏನಾತಲೇ
ಸಾಬ್ರನಾದ್ರೆ ಅವನೇನು ಮನುಷ್ಯ ಅಲ್ವಾ ? ಹೇಳಿ ಕೇಳಿಮಗು ಅಲ್ವಾ ? ಶವ, ಶಿವನ ಸಮಾನ ಅಂತಾರೆ. ಸಮಾಜದಲ್ಲಿ ಜೀವಿಸ್ತಿ ರೋ ನಾವು ಇಂಥಾ ಅನಿಷ್ಟನ ಮನಸಲ್ಲಿ ಇಟ್ಕೊಳಕಾಗ್ತದಾ ? ಹೆತ್ತೊಟ್ಟೆ ಎಷ್ಟು ಉರಿಯಬೇಡ.. .. ಪಾಪ! ಇವರಪ್ಪನೇ ಅಲ್ವ ಹನುಮನ ಗುಡಿಗೆ ಬಣ್ಣ ಬಳಿತಾ ಕಾಲ್ ಜಾರಿ ಬಿದ್ದು ಹೋದ್ವಾರ ಸತ್ತದ್ದು ….ಅದೇನು ಗ್ರಾ ಚಾರನೋ ಪಾಪ ಈ ಮನೆಗೆ. ಏಟಿನ ಮೇಲೆ ಏಟು. ಜೀವನ ಅಂದ್ರೆ ಆ ದೇವರು ಹುಡುಗಾಟ
ಅಂದ್ಕೊಂಡಿದ್ದಾನೆ.
ಪಾಪ ಎತ್ಕೊಳ್ರೋ ಇವರವ್ವನ ಗುಡಿಸಲತ್ರ ….ಅಯ್ಯೋ… ಆ ಕುರುಡಿಗೆ ಇವನ ಸುದ್ದಿ ಗೊತ್ತೋ ಇಲ್ಲೋ….ಊರಾಗ್ ನಾಕ್ ಮನೆ ಸಾಬ್ರ ವಿದ್ವು, ಯಾವುದೋ ಗೋಡೆ ಮಗ್ಗು ಲಲ್ಲಿ ಟೋಪಿ ಹಾಕಿ ನಮಾಜ್
ಮಾಡ್ತಿದ್ರು ,ನಮ್ಮ ಉಗಾದಿ, ದೀಪಾವಳಿ ಹಬ್ಬಗಳೂ ಮಾಡ್ತಿ ದ್ರು …ಛೆ..ಎನ್ನುತ್ತಾ ಹೆಣ ಎತ್ತಿದರು.
ಮಳೆ ನೀರು ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ತಣ್ಣಗೆ ಹರಿತಾ ಇತ್ತು . ಸರ‍್ವ ಜನಾಂಗದ ಶಾಂತಿಯ ತೋಟ…. ಹಾಡು ದೂರದಲ್ಲೆಲ್ಲೋ ಕೇಳುತ್ತಿತ್ತು!
ಅವ್ವ ಪುಸ್ತಕಾಲಯ ಹಾಗು ಸಾಹಿತ್ಯಮೈತ್ರಿ ಆಯೋಜಿಸಿದ್ದ ನ್ಯಾನೋ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದ ಕಥೆ.
ಸಂತೆಬೆನ್ನೂರು ಫೈಜ್ನಟ್ರಾಜ್
ಸಂತೆಬೆನ್ನೂರು
ಬ್ರಾಹ್ಮಣರ ಬೀದಿ
ಸಂತೆಬೆನ್ನೂ ರು – 577552
ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ,
ದೂ – 9902935999