ಅರುಣಿಮಾ ಸಿನ್ಹಾ – ಕೃತಕ ಕಾಲಿನಿಂದ ಎವರೆಸ್ಟ್ ಏರಿದ ಪ್ರಥಮ ಮಹಿಳೆ

ಅರುಣಿಮಾ ಸಿನ್ಹಾ

ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹಾ ಎಂಬ ಹುಡುಗಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಹುಟ್ಟಿ ಬೆಳೆದವಳು. ಈಕೆ ತನ್ನ 3 ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಳು. ಈಕೆ ಭಾರತೀಯ ಸೈನ್ಯದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಆಟಗಳಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲಿನ ವಿಭಿನ್ನ ಪ್ರತಿಭೆಯಾಗಿದ್ದಳು. ತನ್ನ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಮಿಂಚಿದ್ದಳು. ತನ್ನ ಅಪ್ಪರ ಕ್ರೀಡಾಸಕ್ತಿಯಿಂದಾಗಿ ಅರೆ ಸೈನಿಕ ಪಡೆಗೆ ಸೇರಲು ನಿರ್ಧರಿಸಿ ಸಿ ಐ ಎಸ್ ಎಫ್ (Central Industrial Security Force) ಗೆ ಅರ್ಜಿಯನ್ನು ಸಲ್ಲಿಸಿದಳು.

ದೆಹಲಿಯ ಸಿ ಐ ಎಸ್ ಎಫ್ ನಿಂದ ಒಂದು ದಿನ ಪತ್ರ ಬಂದಿತು. ಆ ಕರೆ ಪತ್ರ ಮೇಲ್ನೋಟಕ್ಕೆ ಆಕೆಯ ಅದೃಷ್ಟವನ್ನು ತೆರೆಯುವಂತಿದ್ದರೂ, ಆ ಕರೆಯ ಪಯಣ ಆಕೆಯ ಬದುಕಿನಲ್ಲಿ ದುಃಖಕರವಾದ ತಿರುವು ನೀಡಿತು. ದೆಹಲಿಯ ಕರೆಗೆ ಓಗೊಟ್ಟು ಉತ್ತರ ಪ್ರದೇಶದಿಂದ ದೆಹಲಿಗೆ ಪದ್ಮಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು.

ಕಟುಕರ ಅಮಾನವೀಯತೆ

ರೈಲಿನ ಪಯಣದಲ್ಲಿ ಮಧ್ಯರಾತ್ರಿ ಈಕೆಯಿದ್ದ ರೈಲಿನ ಬೋಗಿಗೆ ನುಗ್ಗಿದ ಡಕಾಯಿತರ ಗುಂಪು ಪ್ರಯಾಣಿಕರನ್ನು ದೋಚತೊಡಗಿದಾಗ ಸಹ ಪ್ರಯಾಣಿಕರ ರಕ್ಷಣೆಗೆ ಮುಂದಾದ ಕ್ರೀಡಾಳು ಅರುಣಿಮಾ ಸಿನ್ಹಾಳನ್ನು ಡಕಾಯಿತರು ರೈಲಿನಿಂದ ಹೊರಗೆ ಎಸೆದಿದ್ದರು. ಡಬಲ್ ಟ್ರ‍್ಯಾಕ್ ಇರುವ ಹಳಿಯಲ್ಲಿ ವೇಗವಾಗಿ ಗಾಳಿಯನ್ನು ಸೀಳಿಕೊಂಡು ಕಗ್ಗತ್ತಲಲ್ಲಿ ಚಲಿಸುತ್ತಿದ್ದ ರೈಲಿನಿಂದ ಅರುಣಿಮಾ ಪಕ್ಕದ ರೈಲು ಟ್ರ‍್ಯಾಕ್‌ಗೆ ಬಿದ್ದಳು. ಇನ್ನೇನು ಹಳಿಯಿಂದ ಏಳಬೇಕೆನ್ನುವಷ್ಟರಲ್ಲಿ ಅದೇ ಹಳಿಯ ಮೇಲೆ ವೇಗವಾಗಿ ಬಂದ ಮತ್ತೊಂದು ರೈಲನ್ನು ಗಮನಿಸಿದ ಅರುಣಿಮಾ ಪಕ್ಕಕ್ಕೆ ಸರಿದರೂ ರೈಲು ಆಕೆಯ ಬಲಗಾಲ ಮೇಲೆಯೇ ಹಾದುಹೋಗಿ ಆಕೆಯ ಪ್ರಾಣ ಉಳಿದು ಕಾಲು ಛಿದ್ರವಾಯಿತು. ಅತೀವ ನೋವಿನಿಂದ ಮತ್ತು ರಕ್ತಸ್ರಾವದಿಂದ ಪ್ರಜ್ಞೆಕಳೆದುಕೊಂಡಿದ್ದ ಅರುಣಿಮಾಳ ಬಲಗಾಲ ಮೇಲೆ ಬೆಳಗ್ಗಿನವೆರೆಗೂ ಸುಮಾರು ಮೂವತ್ತಕ್ಕೂ ಹೆಚ್ಚು ರೈಲುಗಳು ಹಾದು ಹೋಗಿದ್ದವು. ಹಲವು ಗಂಟೆಗಳ ತರುವಾಯ ಪ್ರಜ್ಞೆ ಬಂದರೂ ಎದ್ದೇಳುವ ಅಥವಾ ಹಳಿಯಿಂದ ಪಕ್ಕಕ್ಕೆ ಸರಿಯಲೂ ಶಕ್ತಿಯಿಲ್ಲದೇ ನಿತ್ರಾಣಗೊಂಡು ಛಿದ್ರವಾಗಿದ್ದ ಕಾಲಿನ ಮಾಂಸವನ್ನು ಇಲಿ ಹೆಗ್ಗಣಗಳು ಕಿತ್ತು ತಿನ್ನುತ್ತಿದ್ದುದನ್ನು ಅಸಹಾಯಕಳಾಗಿ ನೋಡುತ್ತಾ ಹಳಿಯ ಪಕ್ಕವೇ ಮಲಗಿದ್ದಳು.

ಬೆಳಗ್ಗಿನ ಜಾವ ಯಾರೋ ಹಳಿಯಲ್ಲಿ ಬಿದ್ದಿದ್ದಾರೆನ್ನುವುದನ್ನು ಅರಿತ ರೈಲ್ವೇಸ್‌ನ ಗ್ಯಾಂಗ್‌ಮನ್‌ಗಳು ರೈಲ್ವೇ ಪೋಲೀಸರ ಗಮನಕ್ಕೆ ತಂದಾಗ ಆಕೆಯನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸುತ್ತಾರೆ. ಈಕೆಯ ಕಾಲಿನ ಸ್ಥಿತಿಯನ್ನು ಗಮನಿಸಿದ ವೈದ್ಯರು ಆಕೆಯ ಬಲ ಕಾಲನ್ನು ಮೊಣಕಾಲಿನ ಕೆಳಗಿಂದ ಕತ್ತರಿಸಿ ತೆಗೆದು ಆಕೆಯ ಜೀವವನ್ನು ಕಾಪಾಡುತ್ತಾರೆ. ಆಸ್ಪತ್ರೆಯಲ್ಲಿ ಎಚ್ಚರಗೊಂಡ ಅರುಣಿಮಾ ತನ್ನ ಬಲಗಾಲೆಡೆಗೆ ನೋಡಿದರೆ ಆಕೆಯ ಮಣಿಗಂಟಿನಿಂದ ಕೆಳಗೆ ಕಾಲೇ ಇರದೇ ಕೇವಲ ದೊಡ್ಡದಾದ ಬ್ಯಾಂಡೇಜ್ ಸುತ್ತಿತ್ತು. ಅರುಣಿಮಾ ಅಪಘಾತದಲ್ಲಿ ಸತ್ತು ಬದುಕಿದ್ದರೂ ಮಾನಸಿಕವಾಗಿ ಜರ್ಝರಿತಳಾಗಿದ್ದಳು. ವಾಲಿಬಾಲ್ ಅಂಕಣವಿಡೀ ಚಿಗರೆಯಂತೆ ಓಡಾಡುತ್ತಾ ಆಟಕ್ಕೆ ಮಿಂಚಿನ ಸ್ಪರ್ಷ ನೀಡುತ್ತಿದ್ದ ಅರುಣಿಮಾಳ ವಾಲಿಬಾಲ್ ಕನಸು ಛಿದ್ರವಾಗಿ ಹೋಗಿತ್ತು.

ಸಮಾಜ ಹಾಗೂ ಮಾಧ್ಯಮಗಳು ಈಕೆಗೆ ಬಂದೊದಗಿದ ಈ ಘಟನೆಗೆ ಅವರದ್ದೇ ಆದ ಒಂದೊಂದು ಕಥೆಯನ್ನು ಕಟ್ಟಿದವು. ಕಾಲು ಇಲ್ಲದೆ ಇನ್ನೊಬ್ಬರಿಗೆ ಹೊರೆಯಾಗಿಯೇ ಇಡೀ ಜೀವನವನ್ನು ಹೇಗೆ ಕಳೆಯಲೆಂಬ ನೋವಿನಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು ಎಂದೆಲ್ಲಾ ಹೇಳಿದರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರುಣಿಮಾ ಬದುಕಿನಲ್ಲಿ ತಾನಿರುವ ಸ್ಥಿತಿಯಲ್ಲೇ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದಾಗ ಮನಸಲ್ಲಿ ಕಾಣಿಸಿದ್ದೆ ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್. ಜಗತ್ತಿನ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ ಪ್ರಥಮ ಕಾಲಿಲ್ಲದ ಮಹಿಳೆ ನಾನಾಗಬೇಕೆಂಬ ಕನಸನ್ನು ಕಾಣಲಾರಂಭಿಸಿದಳು.

ಕನಸು – ಸಾಧನೆ

ಕಾಲನ್ನು ಕಳೆದುಕೊಂಡು ತನ್ನ ವಾಲಿಬಾಲ್ ಕನಸು ಛಿದ್ರವಾದರೂ ವಿಚಲಿತಗೊಳ್ಳದೇ ಅರುಣಿಮಾ ತನ್ನ ಗುರಿಯನ್ನು ಸಾಧಿಸುವೆಡೆಗೆ ಗಮನ ಕೇಂದ್ರೀಕರಿಸಿ, ವೇಗವಾಗಿ ಚಿಕಿತ್ಸೆಗೆ ಸ್ಪಂದಿಸತೊಡಗುತ್ತಾಳೆ. ಸಾಮಾನ್ಯವಾಗಿ ಕೃತಕ ಕಾಲಿನ ಜೋಡಣೆಯಾದ ಬಳಿಕ ರೋಗಿಗಳು ಕೃತಕ ಕಾಲಿನಲ್ಲಿ ಸಮರ್ಪಕವಾಗಿ ನಡೆಯಲು ಹಲವು ತಿಂಗಳು ಅಥವಾ ವರ್ಷಗಳೇ ಬೇಕಾಗುತ್ತದೆ. ಆದರೆ ಅರುಣಿಮಾ ತನ್ನಲ್ಲಿದ್ದ ಆತ್ಮಸ್ತೈರ್ಯದಿಂದ ಕೇವಲ ಎರಡೇ ದಿನದಲ್ಲಿ ಎಲ್ಲರಂತೆ ನಡೆಯಲಾರಂಭಿಸಿದ್ದಳು. ಮೌಂಟ್ ಎವರೆಸ್ಟ್ ಏರುವ ಕುರಿತು ಯೋಚಿಸಲಾರಂಭಿಸಿ ಅದಕ್ಕಾಗಿ ಏನು ಮಾಡಬೇಕೆಂದು ಚಿಂತನೆ ನಡೆಸಿದಳು. ಅದಕ್ಕಾಗಿ 1984 ರಲ್ಲಿ ಮೌಂಟ್ ಎವರೆಸ್ಟ್ ಏರಿದ್ದ ಭಾರತದ ಪ್ರಥಮ ಮಹಿಳೆ “ಬಚೆಂದ್ರಿಪಾಲ್” ರನ್ನು ಸಂಪರ್ಕಿಸಿ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್ (ಟಿಎಸ್ಎಎಫ್) ೨೦೧೨ ರ ಉತ್ತರಾಕಾಶಿ ಶಿಬಿರದಲ್ಲಿ ತರಬೇತಿ ಪಡೆಯಲು ಸಹಿ ಹಾಕಿದರು.

ರೈಲು ಅವಘಡ ಸಂಭವಿಸಿ ಸುಮಾರು 2 ವರ್ಷದ ನಂತರ ಅರುಣಿಮಾ ಕಠಿಣ ತರಬೇತಿ ಹಾಗು ತನ್ನ ಆತ್ಮಸ್ಥೈರ್ಯ – ಛಲದಿಂದ ತನ್ನ 26 ನೇ ವಯಸ್ಸಿನಲ್ಲಿಯೇ ಕೃತಕ ಕಾಲಿನ ಮೂಲಕ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ಮಹಿಳೆ ಎನ್ನುವ ಕೀರ್ತಿ ಪತಾಕೆ ಹಾರಿಸಿದಳು. 2013 ರ ಮೇ 21 ರಂದು ಬೆಳಗ್ಗೆ 10:55 ಕ್ಕೆ 17 ಗಂಟೆಗಳ ದೀರ್ಘ ಸಾಹಸದ ಮೂಲಕ ಅರುಣಿಮಾ ಎವರೆಸ್ಟ್ ಶಿಖರದ ಶೃಂಗವನ್ನು ತಲುಪಿದಳು. ಎವರೆಸ್ಟ್ ಶಿಖರದ ಮೇಲೆ ಏರಿದಾಕ್ಷಣ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸ್ಥಾಪಿಸಿ ಅದರ ಮುಂದೆ ವಿವೇಕಾನಂದ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾಳೆ. ಶೃಂಗದಲ್ಲಿ ಆಮ್ಲಜನಕದ ಕೊರತೆಯಿಂದ ಕೊನೆಯುಸಿರೆಳೆಯುವ ಹಂತಕ್ಕೆ ಅರುಣಿಮಾ ತಲುಪಿದಾಗ ಬ್ರಿಟಿಷ್ ಪರ್ವತಾರೋಹಿಯೊಬ್ಬರು ಆಕೆಗೆ ಆಮ್ಲಜನಕ ನೀಡಿದಾಗ ಆಕೆಯ ಉಸಿರಾಟದ ಸಮಸ್ಯೆ ನಿವಾರಣೆಯಾಯಿತು.

ಈಕೆಯ ಸಾಧನೆಯ ಹಸಿವು ಇಷ್ಟಕ್ಕೇ ನಿಲ್ಲದೇ ಆಫ್ರಿಕಾದ “ಮೌಂಟ್ ಕಿಲಿಮಂಜಾರೊ”, ಯೂರೋಪ್‌ನ “ಎಲ್‌ಬ್ರುಸ್”, ಆಸ್ಟ್ರೇಲಿಯಾದ “ಕೋಜಿಸ್ಕೊ”, ಅರ್ಜೆಂಟಿನಾದ “ಅಕೊಂಕಾಗುವ” ಮತ್ತು ಇಂಡೋನೇಷ್ಯಾದ “ಕಾರ್ಸ್ಟೆಂಜ್ ಪಿರಾಮಿಡ್” ಏರಿದ ಸಾಧನೆಯನ್ನು ಸಹ ಈಕೆ ಮಾಡಿದ್ದಾಳೆ. ಶಿಖರವನ್ನು ಏರುವುದು ಈಕೆಯ ಹವ್ಯಾಸವಾಗಿದ್ದು, ಪ್ರಪಂಚದೆಲ್ಲೆಡೆಯ ಶಿಖರವನ್ನೇರುವುದು ಆಕೆಯ ಕನಸಾಗಿದೆ. 2015 ರಲ್ಲಿ ಅರುಣಿಮಾ ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮಶ್ರೀಗೆ ಭಾಜನರಾಗಿದ್ದಾರೆ.

2013 ರಲ್ಲಿ ಈಕೆಯ ಸಾಧನೆಗೆ “ತೇಂಜಿಂಗ್ ಸಾರ್ಗೆ ನ್ಯಾಷನಲ್ ಅಡ್ವೆಂಚರ್” ಪ್ರಶಸ್ತಿ ಹಾಗೂ ಭಾರತದ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿ ಸಹ ದೊರೆತಿದೆ. ಕೇವಲ ಇಷ್ಟಕ್ಕೇ ನಿಲ್ಲದ ಅರುಣಿಮಾಳ ಸಾಧನೆಯು ತನ್ನ ಈ ವಿಶಿಷ್ಟ ಸಾಧನೆಯು ಜೀವನದಲ್ಲಿ ಸೋತವರಿಗೊಂದು ಸ್ಪೂರ್ತಿಯ ಸೆಲೆಯಾಗಬೇಕೆೆಂದು ತನ್ನ ಎವರೆಸ್ಟ್ ಸಾಧನೆಯನ್ನು ‘ಬಾರ್ನ್ ಆನ್ ಎ ಮೌಂಟೇನ್’ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದು, ಈ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಅಂಗವೈಕಲ್ಯತೆಯ ನಡುವೆಯೂ ಅರುಣಿಮಾ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಸಾಧಕಿಯಾಗಿ ಗುರುತಿಸಿಕೊಂಡಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

1 Comment

  • ಕನಸಿನ ಭಾರತ

Leave a Reply

Your email address will not be published. Required fields are marked *