ಅಳಿದ – ಅಳಿವಿನಂಚಿನ ವನ್ಯಜೀವಿಗಳು – ಬರ್ಕ

ಬರ್ಕ – (ಬರಿಂಕ) Mouse Deer

ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ.

ಹೊರಟು ಸ್ವಲ್ಪ ಹೊತ್ತಾಗಿದೆಯಷ್ಟೇ ಕಾಡಿನ ಪೊದೆಯ ಮರೆಯ ತರಗೆಲೆಗಳ ಮೇಲೆ ಏನೋ ಚಲಿಸುತ್ತಿರುವ ಸದ್ದು. ಯಾವುದೋ ಕಾಡು ಪ್ರಾಣಿ ಇರಬಹುದೆಂಬ ಭಯದಿಂದ ಎದೆಬಡಿತ ಹೆಚ್ಚಾಗತೊಡಗಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ತರಗೆಲೆಗಳ ಸದ್ದು ಮತ್ತಷ್ಟು ಹೆಚ್ಚಾಯಿತು, ಕುತೂಹಲದಿಂದ ಅತ್ತ ನನ್ನ ಕೈಯಲ್ಲಿದ್ದ ಟಾರ್ಚ್ ಲೈಟಿನ ಬೆಳಕನ್ನು ಬೀರಿದೆ. ಯಾವುದೋ ಒಂದು ಪುಟ್ಟ ಪ್ರಾಣಿ ಏನನ್ನೋ ಕಿತ್ತು ತಿನ್ನುತ್ತಿತ್ತು. ಕಾಡು ಹಂದಿ ಇರಬಹುದು ಎಂದು ಭಾವಿಸಿದೆ. ಆದರೆ ಅದು ಕಾಡು ಹಂದಿ ಅಲ್ಲ, ಇನ್ನೇನೋ ಬೇರೆ ಪ್ರಾಣಿ ಇರಬೇಕು ಎಂದು ಸಹೋದರ ಹೇಳಿದ. ಟಾರ್ಚ್ ಬೆಳಕಿನಲ್ಲಿ ನೋಡಿದಾಗ ದೊಡ್ಡ ಗಾತ್ರದ ಇಲಿಯ ಮುಖಚಹರೆ, ಅತ್ಯಂತ ಸಣ್ಣ ಗಾತ್ರದ ಜಿಂಕೆಯ ಮೈಕಟ್ಟು ಹಾಗೂ ಮೈಬಣ್ಣ. ನಮ್ಮ ಹೆಜ್ಜೆ ಸದ್ದನ್ನು ಕೇಳಿದ ಆ ವಿಚಿತ್ರ ಪ್ರಾಣಿಯು ಅಲ್ಲಿಂದ ಛಂಗನೆ ಜಿಗಿದು ಜಿಂಕೆಯ ವೇಗದಲ್ಲಿ ಗುಡ್ಡದಲ್ಲಿ ಮರೆಯಾಯಿತು.

ಮನೆಗೆ ತಲುಪುವವರೆಗೂ ಇಬ್ಬರಲ್ಲೂ ಒಂದೇ ಯೋಚನೆ ಯಾವುದಿರಬಹುದು ಆ ಪ್ರಾಣಿ, ಆ ಪ್ರಾಣಿಯನ್ನು ಮೊದಲು ನೋಡಿದವರು ನಾವೇ ಇರಬಹುದೇ? ಹೊಸ ಜೀವಿಯನ್ನು ಅನ್ವೇಷಣೆ ಮಾಡಿದವರು ನಾವೇ ಆಗಿರಬಹುದೇ? ಎಂಬೆಲ್ಲ ಯೋಚನೆ ಮತ್ತು ಚರ್ಚೆಯೊಂದಿಗೆ ತಡರಾತ್ರಿ ಮನೆಗೆ ತಲುಪಿದೆವು. ಅಪ್ಪ ಅಮ್ಮ ಆಗಲೇ ನಿದ್ರಿಸಿದ್ದರಿಂದ ನಾವು ನೋಡಿದ ಹೊಸ ಜೀವಿಯ ಕುರಿತು ಏನೂ ಹೇಳದೇ ನಾಳೆ ಬೆಳಗ್ಗೆ ಹೇಳೋಣವೆಂದು ನಿರ್ಧರಿಸಿ ಅದಾಗಲೇ ಸುಸ್ತಾಗಿದ್ದ ನಾವು ನಿದ್ರೆಯ ತೆಕ್ಕೆಗೆ ಜಾರಿದೆವು. ಬೆಳಗ್ಗೆದ್ದ ಕೂಡಲೆ ನಮಗಿಬ್ಬರಿಗೂ ರಾತ್ರಿ ನೋಡಿದ ವಿಚಿತ್ರ ಜೀವಿಯದ್ದೇ ಚಿಂತೆ, ಹಾಗೂ ಹೀಗೂ ಸ್ನಾನ ಮುಗಿಸಿ ಪೂಜೆ ಮುಗಿಸಿ ಉಪಹಾರ ಸೇವಿಸುತ್ತಿದ್ದ ಅಪ್ಪನಲ್ಲಿ ಆ ವಿಚಿತ್ರ ಜೀವಿಯ ವಿಚಾರವನ್ನು ನಾವೇ ಅಂತಹ ಜೀವಿಯನ್ನು ಮೊದಲು ನೋಡಿದವರೆಂಬಂತೆ ತುಸು ವೈಭವೀಕರಿಸಿಯೇ ಪ್ರಸ್ತಾಪಿಸಿದೆವು. ಇಲಿಯ ಮುಖ ಮತ್ತು ಜಿಂಕೆಯಂತಹ ಮೈಕಟ್ಟು ಎಂದು ನಾವು ಹೇಳಿದ ತಕ್ಷಣ ಅಪ್ಪ ಅದು ಮಲೆನಾಡಿನ ಕೃಷಿ ಜಮೀನುಗಳ ಸಮೀಪವಿರುವ ಚದುರಿದ ಕಾಡುಗಳಲ್ಲಿ ಕಾಣಸಿಗುವ ‘ಬರಿಂಕ’ ಅಥವಾ ‘ಬರ್ಕ’ ಎಂದು ಹೇಳಿದರು. ನಮಗಂತೂ ಈ ಹೆಸರು ಮತ್ತು ಈ ಪ್ರಾಣಿಯೇ ಹೊಸದಾಗಿತ್ತು.

ಕೆಲವಷ್ಟು ಮಂದಿ ‘ಬರ್ಕ’ ಎಂದು ಹೇಳಿದಾಕ್ಷಣ ಆ ಪ್ರಾಣಿ ‘ಬಹಳ ದೊಡ್ಡ ಗಾತ್ರದ’ ಪ್ರಾಣಿ ಇರಬಹದು, ಆ ಪ್ರಾಣಿಗೆ ಕೆದಕಲು ಉದ್ದುದ್ದ ಉಗುರು’ ಇರಬೇಕು, ಹಾಗೂ ಮಾಂಸಾಹಾರಿ ಅಥವಾ ಮಿಶ್ರಹಾರಿಯಿರಬೇಕು ಎಂಬ ಏನೇನೋ ಕಲ್ಪನೆಗಳು ಮನದಲ್ಲಿ ಮೂಡಿದ್ದವು. ಆದರೆ ಗೊರಸು ಇರುವುದು ದೊಡ್ಡ ಗಾತ್ರದ ಪ್ರಾಣಿಗಳಿಗೆ ಮಾತ್ರವೆನ್ನುವ ಕಲ್ಪನೆಯೂ ಮನದಲ್ಲಿದ್ದು ಈ ಪ್ರಾಣಿಯ ಕುರಿತು ಗೊಂದಲದಲ್ಲಿದ್ದೆ. ಅಂತರ್ಜಾಲ ಕ್ಷೇತ್ರದಲ್ಲಿ ಮಹಾಕ್ರಾಂತಿ ಆದ ಮೇಲಂತೂ ಈ ಜೀವಿಯ ಕುರಿತು ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.

‘ಬರಿಂಕ’ ಅಥವಾ ‘ಬರ್ಕ’ ಎನ್ನುವುದು ಬಲು ಪುಟ್ಟ ಪ್ರಾಣಿಯಾಗಿದ್ದು, ಗಾತ್ರದಲ್ಲಿ ದೊಡ್ಡ ಹೆಗ್ಗಣಕ್ಕಿಂತ ತುಸು ದೊಡ್ಡದಾಗಿರುತ್ತದೆ. ಇವುಗಳು ಸಾಮಾನ್ಯವಾಗಿ ಮನುಷ್ಯರ ಕಣ್ಣಿಗೆ ಬೀಳೊದೇ ಇಲ್ಲ ಎನ್ನುಷ್ಟು ಮನುಷ್ಯನಿಂದ ದೂರವಿರುವ ತೀರಾ ಭಯಗ್ರಸ್ತ ಪ್ರಾಣಿಗಳು. ನೆಲದ ಮೇಲೆಯೇ ಓಡಾಡುತ್ತವೆಯಾದರೂ ಇವುಗಳಿಗೆ ನಿರ್ದಿಷ್ಟವಾದ ಬಿಲ, ಮರದ ಪೊಟರೆ, ಕಲ್ಲಿನ ಗುಹೆ ಅಥವಾ ಗೂಡು ಮುಂತಾದ ನಿರ್ದಿಷ್ಟವಾದ ವಾಸಸ್ಥಳ ಇಲ್ಲ. ಇವುಗಳು ಪಕ್ಕಾ ಸಸ್ಯಾಹಾರಿ ಪ್ರಾಣಿಗಳಾಗಿದ್ದು, ಇವುಗಳಿಗೆ ಕಾಲಿನಲ್ಲಿ ದನ ಅಥವಾ ಜಿಂಕೆಗಳಲ್ಲಿ ಇರುವಂತಹ ಗೊರಸುಗಳಿರುತ್ತವೆ.

ಈ ಪ್ರಾಣಿಯನ್ನು ಭಾರತೀಯ ಇಲಿ ಜಿಂಕೆ (Mouse Deer) ಎಂದು ಕರೆಯುತ್ತಾರೆ. ಇವುಗಳಲ್ಲಿ ಹಲವು ಪ್ರಬೇಧಗಳಿದ್ದು, ಇವು ಏಷ್ಯಾ (ಆಗ್ನೇಯ ಏಷ್ಯಾ) ಖಂಡದಲ್ಲೆಲ್ಲಾ ಹರಡಿವೆ. ವಿಯೆಟ್ನಾಮ್‌ನಲ್ಲಿ ಇರುವ ಇದರ ಹತ್ತಿರದ ಸಂಬಂಧಿ ಪ್ರಾಣಿಗೆ ಕೋರೆ ಹಲ್ಲುಗಳಿವೆ. ಇವುಗಳು ಜಿಂಕೆಯ ಜಾತಿಗೆ ಸೇರಿದ ಪ್ರಾಣಿಗಳಾಗಿದ್ದು, ಸಾಮಾನ್ಯವಾಗಿ 1.5 ರಿಂದ 2 ಅಡಿ ಎತ್ತರ ಮತ್ತು ಒಟ್ಟು 2 ಅಡಿ ಉದ್ದವಿರುತ್ತವೆ. ಈ ಪ್ರಾಣಿಯ ಒಟ್ಟು ತೂಕ ಗರಿಷ್ಠ 3 ಕೆ.ಜಿ ತೂಕವಿದ್ದು, ಇವುಗಳಿಗೆ ಕೋಡುಗಳಿರುವುದಿಲ್ಲ. ಹೆಚ್ಚಾಗಿ ಈ ಪ್ರಾಣಿಗಳು ಒಂಟಿಯಾಗಿಯೇ ಇರುತ್ತವಾದರೂ ಕೆಲವೊಮ್ಮೆ ಜೋಡಿಯಾಗಿ ಇರುತ್ತವೆ. ಇವುಗಳು ತಮ್ಮ ನಿರ್ದಿಷ್ಟ ಆವಾಸಸ್ಥಾನದಲ್ಲಷ್ಟೇ ವಾಸಿಸುವುದರಿಂದ ಇವುಗಳು ಗುಂಪಾಗಿ ಇರುವುದಿಲ್ಲ ಮತ್ತು ವಲಸೆ ಹೊಗುವುದಿಲ್ಲ. ಇವುಗಳು ಸಸ್ಯಾಹಾರಿಗಳಾಗಿದ್ದು, ಹುಲ್ಲು, ಕುರುಚಲು ಸಸ್ಯಗಳು, ನೆಲಕ್ಕೆ ಬಿದ್ದ ಹಣ್ಣುಗಳು, ಕಾಯಿ, ಬೀಜ, ತರಗೆಲೆ ಮತ್ತು ಕೆಲವೊಂದು ಗಿಡದ ಬೇರುಗಳನ್ನು ಇವುಗಳು ಅಗೆದು ತಿನ್ನುತ್ತವೆ. ಈ ಪ್ರಾಣಿಗೆ ಬರಿಂಕ ಅಥವಾ ಬರ್ಕ ಎನ್ನುವ ಹೆಸರು ಇವುಗಳು ಆಹಾರಕ್ಕಾಗಿ ನೆಲವನ್ನು ತಮ್ಮ ಕಾಲುಗಳಿಂದ ಅಗೆಯುವ ಕಾರಣದಿಂದಲೇ ಬಂದಿರಬಹುದು ಎನ್ನುವುದು ಹಿರಿಯರ ಅಂಬೋಣ.

ಈ ಪ್ರಾಣಿಗಳಲ್ಲಿ ಹಲವು ಉಪಪ್ರಬೇಧಗಳಿದ್ದು, ಸುಮಾರು 10ಕ್ಕೂ ಅಧಿಕ ಉಪಪ್ರಬೇಧಗಳು ಇಂದು ಎಲ್ಲೂ ನೋಡಲು ಸಿಗುವುದಿಲ್ಲ. ಇನ್ನೂ ಕೆಲವು ಅತಿ ವಿರಳ ಸಂಖ್ಯೆಯಲ್ಲಿದ್ದು, ವಿನಾಶದ ಅಂಚಿನಲ್ಲಿವೆ. ‘ಬರಿಂಕ’ ಗಳೂ ಭಾರತದಲ್ಲಿ ಅತ್ಯಂತ ವಿನಾಶದಂಚಿನಲ್ಲಿದ್ದು, ನಮ್ಮ ಮುಂದಿನ ಪೀಳಿಗೆಗೆ ಇವುಗಳನ್ನು ನೋಡುವ ಅದೃಷ್ಟವಿರಲಿಕ್ಕಿಲ್ಲ.

ಪ್ರಾದೇಶಿಕವಾಗಿ ಇಲಿಜಿಂಕೆ ಎಂದು ಕರೆಯಲ್ಪಡುವ ಈ ಪ್ರಾಣಿಯು ನೋಡಲು ಜಿಂಕೆಯಂತಹ ನೋಟವನ್ನು ಹೊಂದಿದ್ದು ಸಣ್ಣ ಗೊರಸುಗಳನ್ನು ಹೊಂದಿರುವ ಅತಿ ಸಣ್ಣ ಗಾತ್ರದ ಪ್ರಾಣಿಯಾಗಿದೆ. ಇದು ‘ಟ್ರಾಗುಲಿಡೆ’ ಎಂಬ ಪ್ರಬೇಧಕ್ಕೆ ಸೇರಿದ್ದು, ಇಲಿ ಜಿಂಕೆಗಳು ‘ಇನ್ಫಾರ್ಡರ್ ಟ್ರಾಗುಲಿನಾ’ ಕುಟುಂಬದಲ್ಲಿ ಈಗ ಉಳಿದಿರುವ ಏಕೈಕ ಪ್ರಾಣಿಯಾಗಿದೆ. ಟ್ರಾಗುಲಿಡೆ ಪ್ರಬೇಧದಲ್ಲಿ ಸುಮಾರು 10 ಉಪಪ್ರಭೇದಗಳು ಅಸ್ತಿತ್ವದಲ್ಲಿದ್ದು ಅವುಗಳನ್ನು ಮೂರು ತಳಿಗಳಾಗಿ ವಿಂಗಡಿಲಾಗಿದೆ. ಆದರೆ ಹೆಚ್ಚಿನೆಲ್ಲಾ ಉಪಪ್ರಬೇಧಗಳ ಪಳೆಯುಳಿಕೆಗಳಷ್ಟೇ ಇಂದು ಕಂಡುಬರುತ್ತದೆ. ಸದ್ಯ ಅಸ್ತಿತ್ವದಲ್ಲಿರುವ ಪ್ರಭೇದಗಳು ಇಂದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಮಳೆಕಾಡುಗಳಲ್ಲಿ ಏಕೈಕ ಪ್ರಭೇದವಿದ್ದು, ಅವು ಒಂಟಿಯಾಗಿ ಅಥವಾ ಜೋಡಿಯಾಗಿ ವಾಸಿಸುತ್ತವೆ. ಬಹುತೇಕವಾಗಿ ಇವು ಸಸ್ಯಜನ್ಯ ಆಹಾರವನ್ನು ಸೇವಿಸುತ್ತವೆ. ಇವುಗಳು ವಿಶ್ವದಲ್ಲೇ ಗೊರಸುಗಳಿರುವ ಸಸ್ತನಿಗಳ ಪೈಕಿ ಅತ್ಯಂತ ಅಪರೂಪದ ಪ್ರಾಣಿಗಳಾಗಿವೆ.

ಏಷ್ಯಾದಲ್ಲಿ ಕಾಣಸಿಗುವ ಪ್ರಭೇದಗಳು 700 ಗ್ರಾಂ ನಿಂದ 8 ಕೆ.ಜಿ (1.5 ಮತ್ತು 17.6 ಪೌಂಡು) ತೂಕವನ್ನು ಹೊಂದಿರುತ್ತವೆ. ಆದರೆ ಆಫ್ರಿಕಾದಲ್ಲಿ ಲಭ್ಯವಿರುವ ಈ ಪ್ರಾಣಿಗಳಿಗೆ ಕೋರೆ ಹಲ್ಲುಗಳಿದ್ದು, ಇವು 7 ರಿಂದ 16 ಕೆ.ಜಿ (15–35 ಪೌಂಡು) ತೂಗುವಷ್ಟು ದೊಡ್ಡ ಗಾತ್ರವನ್ನು ಹೊಂದಿವೆ. ನವೆಂಬರ್ 2019 ರಲ್ಲಿ, ವನ್ಯಜೀವಿ ಸಂರಕ್ಷಣಾ ವಿಜ್ಞಾನಿಗಳು ವಿಯೆಟ್ನಾಂ ಕಾಡಿನಲ್ಲಿ ಮೈಯಲ್ಲಿ ಬೆಳ್ಳಿಯ ಚುಕ್ಕೆಗಳಿರುವ ದೊಡ್ಡ ಗಾತ್ರದ ಪ್ರಾಣಿಗಳ (ಟ್ರಾಗುಲಸ್ ವರ್ಸಿಕಲರ್) ಛಾಯಾಚಿತ್ರವನ್ನು ಸೆರೆಹಿಡಿದಿದ್ದಾರೆ.

ಬರಿಂಕ’ ದ ಹೆಸರಿನ ಮೂಲ

ಇವುಗಳು ‘ಚೆವ್ರೋಟೈನ್’ ಜಾತಿಯ ಪ್ರಾಣಿಗಳಾಗಿದ್ದು, ‘ಚೆವ್ರೊಟೈನ್’ ಪದವು ಫ್ರೆಂಚ್ ಶಬ್ದವಾದ ‘ಚೆವ್ರೊಟ್’ (ಎಂದರೆ ಮಗು ಅಥವಾ ಜಿಂಕೆ) ನಿಂದ ಬಂದಿದೆ, ಇದು ಮಧ್ಯ ಫ್ರೆಂಚ್ ಶಬ್ದವಾದ ‘ಚಾವ್ರೆ’ ಎಂದರೆ ಮೇಕೆ ಎಂಬ ಅರ್ಥವನ್ನು ಹೊಂದಿದೆ. ಈ ಆಫ್ರಿಕನ್ ಪ್ರಭೇದವನ್ನು ಸ್ಥಿರವಾಗಿ ‘ಚೆವ್ರೊಟೈನ್’ ಎಂದು ಕರೆಯಲಾಗುತ್ತದೆ. ಆಫ್ರಿಕನ್ ಪ್ರಬೇಧವನ್ನು ‘ಚೆವ್ರೊಟೈನ್’ ಮತ್ತು ಏಷ್ಯಾದ ಪ್ರಬೇಧವನ್ನು ‘ಇಲಿಜಿಂಕೆ’ (ಮೌಸ್ ಡೀರ್) ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೂ ಸಾಮಾನ್ಯವಾಗಿ ‘ಮೊಸ್ಚಿಯೋಲಾ’ ಮತ್ತು ‘ಇಲಿಜಿಂಕೆ’ ಕುಲದ ಜಾತಿಗಳಿಗೆ ‘ಚೆವ್ರೊಟೈನ್’ ಎಂದೇ ಕರೆಯಲಾಗುತ್ತದೆ. ದೇಹದಲ್ಲಿ ಮಸುಕಾದ ಚುಕ್ಕೆ ಅಥವಾ ಪಟ್ಟೆಯನ್ನು ಹೊಂದಿರುವ ಎಲ್ಲಾ ಪ್ರಭೇದಗಳನ್ನು ‘ಚೆವ್ರೊಟೈನ್’ ಎಂದು ಕರೆದರೆ, ದೇಹದಲ್ಲಿ ಚುಕ್ಕೆಯ ಪಟ್ಟೆಯನ್ನು ಹೊಂದಿರದವುಗಳನ್ನು ‘ಇಲಿಜಿಂಕೆ’ ಎಂದು ಕರೆಯಲಾಗುತ್ತದೆ. ಇದನ್ನು ತೆಲುಗಿನಲ್ಲಿ ‘ಜರಿನಿ ಪಾಂಡಿ’ ಎಂದು ಕರೆಯುತ್ತಾರೆ, ಇದರ ಅರ್ಥ ‘ಜಿಂಕೆ ಮತ್ತು ಹಂದಿ’. ಕನ್ನಡದಲ್ಲಿ ಇದನ್ನು ‘ಬರ್ಕಾ’, ಮಲಯಾಳಂನಲ್ಲಿ ಇದನ್ನು ‘ಖೂರನ್’, ಕೊಂಕಣಿಯಲ್ಲಿ ‘ಬರಿಂಕಾ’, ತಮಿಳಲ್ಲಿ ‘ಸಿಲಾಚುಡ್ ಸಾರುಕುಮಾ’ ಎಂದರೆ ‘ಎಲೆ ರಾಶಿಯ ಜಿಂಕೆ, ಸಿಂಹಳ ಹೆಸರು ‘ಮೀಮಿನ್ನಾ’ ಎಂದಾಗಿದ್ದು, ಒಟ್ಟಾರೆಯಾಗಿ ಇದರ ಅರ್ಥ ಸ್ಥೂಲವಾಗಿ ‘ಇಲಿಯಂತಹ ಜಿಂಕೆ’ ಎಂದು.

ಬರಿಂಕದ ಜೀವವಿಕಾಸ

ಒಲಿಗೋಸೀನ್ ಜೀವಿಗಳ ಕಾಲ್ಪನಿಕ ಚಿತ್ರ

ಈ ಕುಟುಂಬವು 34 ದಶಲಕ್ಷ ವರ್ಷಗಳ ಹಿಂದೆ ಜೀವವಿಕಾಸದ ಸಂದರ್ಭದಲ್ಲಿ ‘ಒಲಿಗೋಸೀನ್’ ಎಂಬ ಜೀವಿಗಳಿಂದ ‘ಮಯೋಸೀನ್’ಗಳಾಗಿ ವಿಕಸನಗೊಂಡವು. ಆ ಸಮಯದಲ್ಲಿ ಇವುಗಳು ವಿಕಸನಗೊಂಡಂತೆಯೇ ಈಗಲೂ ಬದಲಾಗದೇ ಉಳಿದಿರುವುದು ವಿಶೇಷ. ಇವುಗಳಿಗೆ ತಾವು ತಿನ್ನುವ ಆಹಾರವನ್ನು ಪೂರ್ತಿಯಾಗಿ ಜೀರ್ಣಗೊಳಿಸಲು ಹೊಟ್ಟೆಯಲ್ಲಿ ನಾಲ್ಕು ಕೋಣೆಗಳಿವೆ. ಒಂದು, ಎರಡು ಮತ್ತು ನಾಲ್ಕನೆಯ ಕೋಣೆಗಳು ಜೀರ್ಣಕ್ರಿಯೆಗೆ ಬಹಳಷ್ಟು ಸಹಕಾರವನ್ನು ನೀಡಿದರೆ, ಮೂರನೆಯ ಕೋಣೆಯು ಅಷ್ಟೊಂದು ಅಭಿವೃದ್ಧಿಗೊಂಡಿಲ್ಲ. ಇವುಗಳು ಸಸ್ಯಾಹಾರಿಗಳಾಗಿದ್ದು, ನೀರಿನ ಚೆವ್ರೊಟೈನ್‌ಗಳು ಕೆಲವೊಮ್ಮೆ ಕೀಟಗಳು ಮತ್ತು ಏಡಿಗಳು, ಮಾಂಸ ಮತ್ತು ಮೀನುಗಳನ್ನೂ ತಿನ್ನುವುದಿದೆ. ಇವುಗಳು ಗರ್ಭಾವಸ್ಥೆಯ ಅವಧಿ 159 ದಿನಗಳಾಗಿದ್ದು, ಒಮ್ಮೆಗೆ ಕೇವಲ ಒಂದೇ ಮರಿಗೆ ಜನ್ಮ ನೀಡುತ್ತವೆ. ಇವುಗಳಿಗೆ ಕೊಂಬುಗಳಿರುವುದಿಲ್ಲವಾದರೂ, ಗಂಡು ಹೆಣ್ಣು ಎರಡಕ್ಕೂ ಉದ್ದವಾದ ಕೋರೆ ಹಲ್ಲುಗಳಿದ್ದು, ಇವು ಗಂಡು ಬರ್ಕದಲ್ಲಿ ತುಸು ಉದ್ದವಾಗಿರುತ್ತದೆ. ಈ ಕೋರೆಗಳು ಕೆಳ ದವಡೆಯ ಎರಡೂ ಬದಿಗಳಲ್ಲಿ ಹೊರಬಂದಿದ್ದು, ತಮಗೆ ಅಪಾಯ ಎದುರಾದಾಗ ವೈರಿಗಳ ವಿರುದ್ಧ ಸೆಣಸಾಡಲು ಬಳಸುತ್ತವೆ. ಬರ್ಕಗಳ ಕಾಲುಗಳು ಸಣ್ಣದಾಗಿದ್ದು, ತೆಳ್ಳಗಿರುತ್ತವೆ. ಇವುಗಳು ಅಷ್ಟೊಂದು ಚುರುಕುತನದ ಪ್ರಾಣಿಗಳಲ್ಲವಾದರೂ ಇವುಗಳ ಸಣ್ಣ ಕಾಲುಗಳು ಪರಿಸರದ ದಟ್ಟವಾದ ಪೊದೆಗಳ ನಡುವೆ ಓಡಲು ಸಹಕಾರಿಯಾಗಿದೆ.

ಇವುಗಳ ಕಾಲುಗಳಲ್ಲಿ ಎರಡು ಗೊರಸುಗಳಿದ್ದರೆ ಕಾಲಿನ ಸ್ವಲ್ಪ ಮೇಲ್ಭಾಗದಲ್ಲಿ ಎರಡು ಸಣ್ಣ ಸಣ್ಣ ಬೆರಳುಗಳು ಪ್ರತೀ ಕಾಲುಗಳಲ್ಲೂ ಇರುತ್ತದೆ. ಇವುಗಳು ಏಕಾಂಗಿಯಾಗಿ ಇಲ್ಲವೆ ಗಂಡು ಮತ್ತು ಹೆಣ್ಣುಗಳು ಜೋಡಿಯಾಗಿ ವಾಸಿಸುತ್ತವೆ. ಇವುಗಳ ಮರಿಗಳು ಹುಟ್ಟಿದ ನಂತರ ಸುಮಾರು ಮೂರು ತಿಂಗಳ ವರೆಗೂ ತಾಯಿಯ ಮೊಲೆಹಾಲನ್ನು ಕುಡಿಯುತ್ತವೆ. ಬರ್ಕಗಳು ಹುಟ್ಟಿದ ೫ ರಿಂದ ೧೦ ತಿಂಗಳ ಅವಧಿಗೇ ಲೈಂಗಿಕವಾಗಿ ಪ್ರಬುದ್ಧಗೊಳ್ಳುತ್ತವೆ. ಇವುಗಳು ತಮ್ಮ ಮರಿಗಳನ್ನು ಅಷ್ಟೊಂದು ವಿಶೇಷವಾಗಿ ಕಾಳಜಿವಹಿಸುವುದಿಲ್ಲ. ಇವುಗಳಿಗೆ ತಮ್ಮ ಶತ್ರುಗಳನ್ನು ಗುರುತಿಸಲು ಗಲ್ಲದಲ್ಲಿ ವಿಶೇಷವಾದ ಗ್ರಂಥಿಯನ್ನು ಹೊಂದಿವೆ. ಇವುಗಳ ಆವಾಸಸ್ಥಾನವು ತೀರಾ ಚಿಕ್ಕದಾಗಿದ್ದು, ಕೇವಲ ೧೩–೨೪ ಹೆಕ್ಟೇರ್ ಪ್ರದೇಶಗಳಷ್ಟೇ ಈ ಪ್ರಾಣಿಗಳ ಆವಾಸಸ್ಥಾನವಾಗಿ ಉಳಿದಿದೆ. ಇವುಗಳು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿ ಇರದೇ ಪರಸ್ಪರ ದೂರವೇ ಇರುತ್ತವೆ. ಇವುಗಳಲ್ಲಿ ಕೆಲವು ಉಪಪ್ರಭೇದಗಳು ನೀರಿನೊಂದಿಗೆ ಅವಿನಾಭಾವ ಸಂಬAಧ ಹೊಂದಿದ್ದು, ತಮ್ಮ ಮೇಲೆ ಇತರ ಪ್ರಾಣಿಗಳು ಧಾಳಿ ಮಾಡಿದಾಗ ಅವುಗಳಿಂದ ತಪ್ಪಿಸಿಕೊಳ್ಳಲು ಬಹಳ ಸಮಯದವರೆಗೂ ನೀರಿನಲ್ಲಿ ಮುಳುಗಿಯೇ ಇರಬಲ್ಲವು. ಇವುಗಳಿಂದಲೇ ತಿಮಿಂಗಿಲಗಳು ವಿಕಸನಗೊಂಡಿವೆ ಎಂಬ ಕಲ್ಪನೆಗೆ ಇದು ಬೆಂಬಲ ನೀಡಿದೆ. ಇವುಗಳು ಒಣ, ಮುಳ್ಳಿನ ಪೊದೆಗಳ ಕಾಡನ್ನು ಹೆಚ್ಚು ಆಶ್ರಯಿಸಿಕೊಂಡು ಬದುಕುತ್ತವೆ.

ಬಾಹ್ಯ ಬೆದರಿಕೆಗಳು

ಇವುಗಳು ಅಷ್ಟೊಂದು ಚುರುಕಾಗಿ ಓಡುವ ಪ್ರಾಣಿಗಳಲ್ಲದ ಕಾರಣದಿಂದ ಕಾಡುಬೆಕ್ಕುಗಳು, ಚಿರತೆಗಳು ಮತ್ತು ಸಾಕು ನಾಯಿಗಳಿಂದ ಹೆಚ್ಚು ಅಪಾಯವನ್ನು ಎದುರಿಸುತ್ತವೆ. ಇವುಗಳು ರೈತನ ಕೃಷಿ ಜಮೀನಿಗೆ ಹೊಂದಿಕೊಂಡೇ ವಾಸಿಸುವುದರಿಂದ ಸ್ಥಳೀಯ ಬೇಟೆಗಾರರು ಮತ್ತು ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಜಮೀನಿನ ಬೇಲಿಗಳಲ್ಲಿ ಅಳವಡಿಸುವ ಬಲೆಗಳಿಂದಲೂ ಹೆಚ್ಚು ಅಪಾಯಕ್ಕೊಳಗಾಗುತ್ತಿವೆ. ಇವುಗಳು ತಮ್ಮ ಕಾಲಿನ ಗೊರಸುಗಳ ತುದಿಯನ್ನು ಬಳಸಿಕೊಂಡು ಬಹಳ ಎಚ್ಚರಿಕೆಯಿಂದ ಹೆಚ್ಚಿನ ಸದ್ದಾಗದಂತೆ ಮತ್ತು ತನ್ನ ಶತ್ರುಗಳಿಗೆ ತಿಳಿಯದಂತೆ ಕಾಡುಗಳಲ್ಲಿ ನಡೆದಾಡುತ್ತವೆ.

ಇವುಗಳು ಪ್ರಪಂಚದಾದ್ಯಂತ ಇನ್ನು ಎಷ್ಟು ಉಳಿದಿವೆ ಮತ್ತು ಅವು ನಿಖರವಾಗಿ ಎಲ್ಲಿ ವಾಸಿಸುತ್ತವೆಯೆಂದು ಸಂಶೋಧಕರಿಗೆ ಇನ್ನೂ ನಿರ್ಧಿಷ್ಟವಾಗಿ ಹೇಳಲಾಗಿಲ್ಲ. ಅಧ್ಯಯನದ ಕೊರತೆ ಮತ್ತು ಈ ಪ್ರಾಣಿಗಳ ಕುರಿತಾದ ಸಮರ್ಪಕ ದತ್ತಾಂಶಗಳ ಕೊರತೆಯಿಂದಾಗಿ ಅವುಗಳ ಸಂರಕ್ಷಣೆಯು ಇನ್ನೂ ಸಾಧ್ಯವಾಗಿಲ್ಲ. ಬರ್ಕಗಳು ಗಣನೀಯವಾಗಿ ವಾಸಿಸುವ ತಾಣಗಳನ್ನು ಗುರುತಿಸುವಂತಾದರೆ ಅಲ್ಲಿನ ಸ್ಥಳೀಯ ಜನರಿಗೆ ಈ ಪ್ರಾಣಿಗಳ ಕುರಿತು ಜಾಗೃತಿಯನ್ನು ಮೂಡಿಸಿ ಬೇಟೆಯನ್ನು ತಡೆಯಲು ಗಸ್ತು ಮುಂತಾದ ರಕ್ಷಣಾ ಕ್ರಮಗಳನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡಬಹುದು. ಅತಿಯಾದ ಅಕ್ರಮ ಬೇಟೆಯ ಕಾರಣದಿಂದಾಗಿ ಇವು ದೀರ್ಘಾವಧಿಯವರೆಗೆ ಬದುಕುವುದೇ ಅಪರೂಪವಾಗಿದೆ. ಬರ್ಕಗಳು ನಾಚಿಕೆಯ ಸ್ವಭಾವದವುಗಳಾಗಿದ್ದು, ಹೆಚ್ಚು ಒಂಟಿಯಾಗಿರಲು ಬಯಸುತ್ತವೆ. ಅಳಿವಿನಂಚಿನಲ್ಲಿರುವ ಅಥವಾ ಸಂಪೂರ್ಣವಾಗಿ ಕಳೆದೇ ಹೋಗಿರುವ ಈ ಪ್ರಬೇಧದ ಮರುಶೋಧನೆಯ ವಿಚಾರವನ್ನು ಇತ್ತೀಚೆಗೆ ‘ನೇಚರ್ ಇಕೋಲೊಜಿ ಆಂಡ್ ಎವಲ್ಯೂಶನ್’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *