ಅಳಿದ – ಅಳಿವಿನಂಚಿನ ವನ್ಯಜೀವಿಗಳು – ಡೋಡೋ ಪಕ್ಷಿ ಹಾಗು ಪೋರ್ಚುಗೀಸರು

ಡೋಡೋ ಪಕ್ಷಿ ಹಾಗು ಪೋರ್ಚುಗೀಸರು

ಮಾನವ ಜನ್ಮ ಶ್ರೇಷ್ಠವಂತೆ! ಏಕೆಂದರೆ ತನ್ನ ಮೆದುಳಿನ ವಿಕಾಸದಿಂದ ಇಡೀ ಭೂಮಂಡಲದಲ್ಲಿ ಪ್ರಕೃತಿಯನ್ನೊಂದು ಬಿಟ್ಟು ಇನ್ನೆಲದರ ಮೇಲು ತನ್ನ ಅಧಿಪತ್ಯ ಸಾದಿಸಿದ್ದಾನೆ. ಇಲ್ಲಿ ಅವನು ಸೃಷ್ಟಿಸಿರುವುದು ಏನಿಲ್ಲ, ಇದದ್ದನ್ನೇ ಕಂಡದ್ದನ್ನೇ ಹೊಸ ಹೊಸದಾಗಿ ಕಂಡು ಹಿಡಿಯುತ್ತಾ ಹೋಗಿದ್ದಾನೆ ಅಷ್ಟೇ. ಹೊಸದನ್ನು ಕಟ್ಟುತ್ತಾನೆ ಕಟ್ಟುವುದಕ್ಕೂ ಮೊದಲು ಹಳೆಯದನ್ನು ಹೊಡೆಯುತ್ತಾನೆ, ಅವನು ಕಟ್ಟಿದ್ದನ್ನು, ತಯಾರಿಸಿದ್ದನ್ನು, ಬೆಳೆಸಿದ್ದನ್ನು ಹೊಡೆಯುತ್ತ ಕಟ್ಟುತ್ತಾ ಬೆಳೆಸುತ್ತಾ ಬಂದಿದ್ದಾನೆ ಆದರೆ ಹಿಂದಿನ ಸೃಷ್ಟಿಯನ್ನು ನಾಶ ಮಾಡುತ್ತಾ ಬಂದಿರುವುದು ಬರುತ್ತಿರುವುದು ಎಷ್ಟು ಸರಿ? ನಾಶ ಮಾಡುವವನು ಅವನೇ ನಾಶಗೊಂಡಿದ್ದಕ್ಕಾಗಿ ಪರಿತಪಿಸಿ ಮತ್ತೆ ಅದನ್ನು ಉಳಿಸಿಕೊಳ್ಲಲು ನಾನಾ ರೀತಿಯಿಂದ ಇಂದಿಗೂ ಪ್ರಯತ್ನ ಪಡುತ್ತಿರುವುದು ಅವನೇ. ಇದು ಮನುಷ್ಯನ ದ್ವಂದ್ವ ಪ್ರವೃತ್ತಿಯೆನ್ನಬಹುದೇನೋ! ಇದಕ್ಕೊಂದು ಉದಾಹರಣೆಯೆಂದರೆ ಕೇವಲ ಇನ್ನೂರು ವರ್ಷಗಳ ಒಳಗೆ ಸಂಪೂರ್ಣವಾಗಿ ನಾಶವಾಗಿ ಹೋದ “ಡೋಡೋ” ಎಂಬ ಪಕ್ಷಿ.

15 ನೇ ಶತಮಾನದಲ್ಲಿ ಪೋರ್ಚುಗೀಸ್ (ಡಚ್) ನಾವಿಕರು ನಮ್ಮ ಭಾರತಕ್ಕೆ ಸೇರಿದ ಮಾರಿಷಸ್ ದ್ವೀಪದಲ್ಲಿ ಮತ್ತು ಹಿಂದೂ ಮಹಾಸಾಗರದ ವ್ಯಾಪ್ತಿಯಲ್ಲಿನ ದ್ವೀಪಗಳಲ್ಲಿ ಡೋಡೋ ಎಂಬ ಪಕ್ಷಿಗಳು ಹೇರಳವಾಗಿ ಓಡಾಡಿಕೊಂಡಿರುವುದನ್ನು (ಅವಕ್ಕೆ ಹಾರಲು ಬರುವುದಿಲ್ಲ) ಕಾಣುತ್ತಾರೆ. ಆ ಡೋಡೋ ಹಕ್ಕಿಗಳೋ ಮೊದಲ ಬಾರಿಗೆ ಮನುಷ್ಯನನ್ನು ಕಂಡಾಗ ಭಯವೇ ಪಟ್ಟಿಲ್ಲ ಏಕೆಂದರೆ ಅಲ್ಲಿಯವರೆಗೂ ಅವುಗಳಿಗೆ ತನ್ನದೇ ಆದ ಶತ್ರುಗಳನ್ನು ಕಂಡು ಕೂಡ ಗೊತ್ತಿರಲಿಲ್ಲ, ಅವುಗಳಿಗೆ ಪರಭಕ್ಷಕ ಜೀವಿಗಳ ಹಾವಳಿ ಇರಲಿಲ್ಲ. ಅವು ಅಲ್ಲಿನ ದ್ವೀಪದಲ್ಲಿನ ಗಿಡಮರಗಳಿಂದ ಬಿದ್ದ ಹಣ್ಣು, ಗೆಡ್ಡೆ ಗೆಣೆಸು ಕೆಲವೊಮ್ಮೆ ಸಮುದ್ರದಲ್ಲಿನ ಏಡಿಗಳು ಹಾಗು ಚಿಪ್ಪು ಮೀನುಗಳನ್ನು ತಿಂದುಕೊಂಡು ಹಾಯಾಗಿದ್ದವು. ಮನುಷ್ಯನ ಕಣ್ಣು ಇವುಗಳ ಮೇಲೆ ಬೀಳುವುದರ ತನಕ.

ಈ ಪೋರ್ಚುಗೀಸರು ಅಲ್ಲಿ ಬರುವುದಕ್ಕೂ ಮುಂಚೆ ಅಲ್ಲಿನ ಕಾಡಿನಲ್ಲಿದ್ದ ಆದಿವಾಸಿಗಳ ಸಂಖ್ಯೆ ಬಹಳಷ್ಟು ಕಡಿಮೆ. ಪೋರ್ಚುಗೀಸರು ಮಾರಿಷಸ್ ದ್ವೀಪಕ್ಕೆ ಬರುವುದಕ್ಕೂ ಮುಂಚೆಯೇ ಅಲ್ಲಿ ಬಹಳಷ್ಟು ಅರಬ್ ಹಡಗುಗಳು ಸಂಚರಿಸಿದ್ದವು ಹಾಗು ತಾತ್ಕಾಲಿಕ ನೆಲೆ ನಿಂತಿದ್ದವು ಆದರೆ ಪೋರ್ಚುಗೀಸರು 15 ನೇ ಶತಮಾನದ ಅಂತ್ಯದಲ್ಲಿ ಮಾರಿಷಸ್ ದ್ವೀಪವನ್ನು ಆಕ್ರಮಿಸಿಕೊಂಡು ತಮ್ಮ “ಈಸ್ಟ್ ಇಂಡಿಯಾ ಕಂಪನಿ” ಹಡಗುಗಳು ವ್ಯಾಪಾರ ನಿಮಿತ್ತ ಸುತ್ತ ಮುತ್ತಲ ದೇಶಗಳಿಗೆ ಸಂಚರಿಸಲು ನೆಲೆ ಸ್ಥಾಪಿಸಿಕೊಂಡರು ಎಂದು ಇತಿಹಾಸ ಮಾಹಿತಿಗಳು ಹೇಳುತ್ತವೆ. ಈ ಡೋಡೋ ಎಂಬ ನತದೃಷ್ಟ ಹಕ್ಕಿಯ ಅನ್ವೇಷಣೆ, ಮಾರಣಹೋಮ, ಅವನತಿ ಆನಂತರದ ದಾಖಲಾತಿ ಇವೆಲ್ಲವೂ 15 ರಿಂದ 16 ನೇ ಶತಮಾನ ಮುಗಿಯುವಷ್ಟರಲ್ಲಿ ನೆಡೆದಿರುವಂತದ್ದು. ಪೋರ್ಚುಗೀಸರು ಅಲ್ಲಿ ನೆಲೆ ನಿಲ್ಲಲು ಶುರು ಮಾಡಿದಾಗ ಡೋಡೋ ಹಕ್ಕಿಗಳಿಗೆ ಅವರೆಲ್ಲರೂ ಸ್ನೇಹಿತರಂತೆ ಕಂಡಿರಬಹುದು. ಇಡೀ ದ್ವೀಪಗಳಲ್ಲಿ ಎಲ್ಲೆಂದರಲ್ಲಿ ನಿರ್ಭೀತಿಯಿಂದ ಓಡಾಡಿಕೊಂಡಿದ್ದ ಅವುಗಳನ್ನು ಕಂಡು ಪೋರ್ಚುಗೀಸರಿಗೆ ಆಶ್ಚರ್ಯ! ಹಾಗು ಕಂಡುಕೊಂಡ ಇನ್ನೊಂದು ಸಂಗತಿಯೆಂದರೆ ಅವು ಮೇಲಕ್ಕೆ ಹಾರಲಾರವು ಎಂದು. ಶುರುವಾಯಿತು ಡೋಡೋ ಗಳ ದುರಂತ ದಿನಗಳು.

“ಡೋಡೋ” ಇದು ಡಚ್ ಮೂಲದ ಹೆಸರಾಗಿದ್ದು ಇದರ ವೈಜ್ಞಾನಿಕ ಹೆಸರು  “ರಾಫಾಸ್ ಕುಕುಲ್ಲಾಟಸ್” (Raphus cucullatus) ಎಂದು. ಇವು ಏಶಿಯನ್ ಪಾರಿವಾಳಗಳ ವಂಶಕ್ಕೆ ಸೇರಿದವು. ಡೋಡೋ ಹಕ್ಕಿಗಳು ಇದುವರೆಗೂ ನೆಡೆದಿರುವ ಅಧ್ಯಯನಗಳ ಪ್ರಕಾರ 23 ಕೆಜಿಯಷ್ಟು ತೂಗುತಿತ್ತು, ಗಾತ್ರದಲ್ಲಿ ಟರ್ಕಿ ಪಕ್ಷಿ ಅಥವಾ ಬಾತುಕೋಳಿಯ ಎರಡರಷ್ಟು. ತಲೆಯ ಗಾತ್ರ ದೊಡ್ಡದಾಗಿದ್ದು ಚೂಪಾದ ಕೊಕ್ಕನ್ನು ಹೊಂದಿತ್ತು. ಮೈತುಂಬ ನೀಲಿ ಬೆರೆತ ಬೂದು ಗರಿಗಳನ್ನು ಹೊಂದಿದ್ದರು ಹಾರಲು ಆಗದಂತದ್ದು. ಆದ್ದರಿಂದ ಇವುಗಳ ಸಂತಾನಾಭಿವೃದ್ಧಿ ಏನಿದ್ದರೂ ಅದು ನೆಲದಲ್ಲಿ ಮಾತ್ರ. ಒಮ್ಮೆಗೆ ಒಂದೇ ಮೊಟ್ಟೆಯನ್ನು ಇಡುತಿದ್ದ ಡೋಡೋ ಹಕ್ಕಿಗಳು ಅವನ್ನೇ ನೆಲದಲ್ಲೇ ಪೊದೆಗಳ ಸಂದಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಕಾವು ಕೊಟ್ಟು ಸಂತಾನಾಭಿವೃದ್ಧಿ ಮಾಡುತ್ತಿದ್ದವು. ಆ ಪರಿಸರದಲ್ಲಿ ಪರಭಕ್ಷಕ ಅಥವಾ ಇನ್ನಿತರೇ ಶತ್ರುಗಳೇ ಡೋಡೋ ಹಕ್ಕಿಗಳಿಗೆ ಇರದಿದ್ದರಿಂದ ಪೋರ್ಚುಗೀಸರನ್ನು ಕಂಡು ಅವು ಭಯ ಪಟ್ಟಿಲ್ಲದಿರಬಹುದು. ದ್ವೀಪದಲ್ಲಿ ನೆಲೆ ಕಾಣುತಿದ್ದ ಪೋರ್ಚುಗೀಸರಿಗೆ ಸುಲಭವಾಗಿ ಡೋಡೋ ಹಕ್ಕಿಗಳು ಕೈಗೆ ಸಿಕ್ಕಿಬಿಟ್ಟವು, ಪೋರ್ಚುಗೀಸರು ಆಗ ಸಿಕ್ಕಷ್ಟು ಡೋಡೋ ಹಕ್ಕಿಗಳನ್ನು ಸುಲಭವಾಗಿ ಸಾಮೂಹಿಕವಾಗಿ ಬೇಟೆಯಾಡಿ ಅಲ್ಲಿದ್ದ ಅಷ್ಟೂ ಜನರಿಗೆ ಆಹಾರವಾಗಿ ಒದಗಿಸಲಾಯಿತಾದರೂ ಅದರ ಮಾಂಸದ ರುಚಿ ಅಷ್ಟೇನು ಅಲ್ಲಿದ್ದ ಜನರಿಗೆ ಇಷ್ಟವಾಗಲಿಲ್ಲ ಎನ್ನುತ್ತದೆ ಅಧ್ಯಯನಗಳ ಮಾಹಿತಿಗಳು. ಹಾಗಾದರೆ ಡೋಡೋ ಹಕ್ಕಿಗಳ ಸಂಪೂರ್ಣ ಅವನತಿ ಹೇಗಾಯಿತು?

ಅಲ್ಲಿ ನೆಲೆ ಕಾಣುತಿದ್ದ ಪೋರ್ಚುಗೀಸರ ಜೊತೆಗೆ ಹಡುಗುಗಳ ತುಂಬಾ ಹಂದಿ, ಕೋತಿ, ನಾಯಿ ಬೆಕ್ಕುಗಳು ಹಾಗು ಹೆಗ್ಗಣಗಳ ಹಿಂಡೇ ಬಂದಿದ್ದವು. ಇವುಗಳಿಗೆ ಸುಲಭವಾಗಿ ನೆಲದಲ್ಲಿದ್ದ ಡೋಡೋ ಹಕ್ಕಿಗಳ ಗೂಡುಗಳು ಮತ್ತು ಅದರಲ್ಲಿದ್ದ ಮೊಟ್ಟೆಗಳು ಕಾಣತೊಡಗಿ ಅವೆಲ್ಲಾ ದಿನಕಳೆದಂತೆ ಭಕ್ಷಿಸಲ್ಪಟ್ಟವು. ಅಲ್ಲಿ ನೆಲೆಸಲು ಶುರು ಮಾಡಿದ ಪೋರ್ಚುಗೀಸರು ತಾವು ತಂದುಕೊಂಡ ಕಬ್ಬು, ಅಕ್ಕಿ, ತಂಬಾಕು ತರಕಾರಿಗಳು ಮತ್ತು ಇನ್ನಿತರ ಬೆಳೆ ಬೆಳೆಯಲು ಅಲ್ಲಿನ ಕಾಡಿನ ಮರಗಳನ್ನು ಕಡಿಯಲು ಶುರುಮಾಡಿದರು. ಇದರಿಂದಾಗಿ ಡೋಡೋ ಹಕ್ಕಿಗಳು ಆವಾಸ ನಷ್ಟವನ್ನು ಸಹ ಅನುಭವಿಸುವಂತಾಯಿತು. ಒಂದು ಕಡೆ ಮನುಷ್ಯರ ಭೀತಿ, ಇನ್ನೊಂದು ಕಡೆ ಕಾಡನ್ನು ಕಡಿದಿದ್ದರಿಂದ ಮನುಷ್ಯರು ಕರೆ ತಂದಿದ್ದ ನಾಯಿ ಹಂದಿ ಹಾಗು ಬೆಕ್ಕುಗಳಿಂದ ಮೊಟ್ಟೆಗಳನ್ನು ರಕ್ಷಿಸಲು ಗೌಪ್ಯತೆಯೇ ಇಲ್ಲದಂತಾಗಿದ್ದು, ಇಷ್ಟು ಸಾಕಲ್ಲವೇ ಒಂದು ಜೀವಸಂತತಿಯ ಅವನತಿ ಪ್ರಾರಂಭವಾಗಲು. 15 ನೇ ಶತಮಾನದಲ್ಲಿ ಕಂಡಂತಹ ಡೋಡೋ ಹಕ್ಕಿ 16 ನೇ ಶತಮಾನದ ಕೊನೆಯಲ್ಲಿ ಇಲ್ಲವೇ ಇಲ್ಲ ಎಂಬಂತೆ ಸಂಪೂರ್ಣ ನಾಶವಾಗಿದೆಯೆಂದು ಮಾಹಿತಿಗಳು ಹೇಳುತ್ತವೆ.

ಸುಲಭವಾಗಿ ಬೇಟೆಗೆ ಸಿಕ್ಕ ಇವಕ್ಕೆ ಪೋರ್ಚುಗೀಸರು ಇಟ್ಟ ಹೆಸರು “ಡೋಡೋ” ಎಂದು, ಇದು ಪೋರ್ಚುಗೀಸ್ ಪದವಾಗಿದ್ದು ಇದರ ಅರ್ಥ “ಅಜ್ಞಾನಿ, ಮೊದ್ದು, ಪೆದ್ದ, ಮೂರ್ಖ” ಎಂದು. ನಿಜವಾಗಲೂ ಡೋಡೋ ಹಕ್ಕಿ ಅಷ್ಟೂ ಪೆದ್ದಾಗಿತ್ತ? ಇಲ್ಲ, “ಈ ಹಕ್ಕಿಯು ಸಾಕಷ್ಟು ಬುದ್ದಿಯುಳ್ಳದ್ದಾಗಿತ್ತು, ಇದರ ಜಾತಿಯಾದ ಪಾರಿವಾಳ ಪಕ್ಷಿಯಂತೆ ಇದಕ್ಕೆ ತರಬೇತಿ ಪಡೆಯುವಷ್ಟು ಶಕ್ತಿ ಅದರ ಮೆದುಳಿಗಿತ್ತು, ಇತರೆ ಪಕ್ಷಿಗಳಂತೆ ಇದರ ಮೆದುಳಿನ ಭಾಗ ವಾಸನೆಗಳನ್ನು ಗ್ರಹಿಸಿ ಕಣ್ಣಿಗೆ ತಲುಪಿಸಿ ಆಹಾರ ಹುಡುಕುಲು ಮತ್ತು ಅಪಾಯದಿಂದ ಪಾರಾಗಲು ನೆರವಾಗುತಿತ್ತು” ಹೀಗೆಂದು ಕಳೆದ ಕೆಲವು ವರ್ಷಗಳ ಹಿಂದೆ ಲಿನ್ನೆಯಾನ್ ಸೊಸೈಟಿ ಯ ಜೀವಶಾಸ್ತ್ರದ ಪತ್ರಿಕೆಯೊಂದು ಡೋಡೋ ಹಕ್ಕಿಯ ಬುರುಡೆಯನ್ನು ಸಂಶೋಧಿಸಿದ ಆಧಾರದ ಮೇಲೆ ವರದಿಯೊಂದನ್ನು ಪ್ರಕಟಿಸಿದೆ.

ಮೂರು ತರಹದ ಡೋಡೋ ಪಕ್ಷಿಗಳ (ಇದರಲ್ಲಿ ಬಿಳಿಯ ಡೋಡೋ ಕೂಡ ಇದೆ) ಪಳಿಯುಳಿಕೆಗಳನ್ನು ಮಾರಿಷಸ್ ದ್ವೀಪದಿಂದ ಕೊಂಡೊಯ್ದು ಇಂಗ್ಲೆಂಡಿನ “ಆಕ್ಸ್ಫರ್ಡ್ ಯೂನಿವರ್ಸಿಟಿ” ಮ್ಯೂಸಿಯಂ ನಲ್ಲಿ ಸಂಗ್ರಹಿಸಿ ಇಡಲಾಗಿದೆ. ಕಂಡ ಕೇವಲ ಇನ್ನೂರು ವರ್ಷಗಳ ಒಳಗೆ ಒಂದು ಪಕ್ಷಿಯ ಸಂತತಿ ಇನ್ನಿಲ್ಲದಾಗಿದ್ದು ಬಹು ದೊಡ್ಡ ದುರಂತ. ಡೋಡೋ ಹಕ್ಕಿಗಳ ಪಳಿಯುಳಿಕೆಗಳು ವಿಜ್ಞಾನಿಗಳಿಗೆ ಮೊದಲು ಕಂಡದ್ದು 1832 ರಲ್ಲಿ, ಅಂದಿನಿಂದ ಸಿಕ್ಕ ಪಳಿಯುಳಿಕೆಗಳ ಡಿಎನ್ಎ ಆಧಾರದ ಮೇಲೆ ಡೋಡೋ ಹಕ್ಕಿಗಳನ್ನು ಪುನರ್ ಸೃಷ್ಟಿಸುವ ಪ್ರಯತ್ನ ನೆಡೆದಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಅಧ್ಯಯನದಲ್ಲಿ ನಿರತರಾಗಿರುವ ಜೀವಶಾಸ್ತ್ರಜ್ಞ “ಬೆತ್ ಶಾಪಿರೋ” ಮತ್ತಿತರರ ತಂಡ ಕೆಲವು ವರ್ಷಗಳಿಂದ ಹಿಂದೂ ಮಹಾಸಾಗರ ದ್ವೀಪಗಳಲ್ಲಿ ಡೋಡೋ ಪಳಿಯುಳಿಕೆಗಳ ಪುನರ್ ಸಂಗ್ರಹಣೆ ಮಾಡುತ್ತಿದೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸೋಣ.

ಅದಕ್ಕಲ್ಲವೇ ಹೇಳಿದ್ದು ನಾಶ ಮಾಡುವುದು ಅದಕ್ಕಾಗಿ ಪರಿತಪಿಸುವುದು ಮತ್ತೆ ಪುನರ್ ಸೃಷ್ಟಿಸಲು ಇನ್ನಿಲ್ಲದಂತೆ ಪ್ರಯತ್ನ ಪಡುವುದು ಇದು ಮಾನವನ ದ್ವಂದ್ವ ಪ್ರವೃತ್ತಿ ಎಂದು. ಇನ್ನಾದರೂ ಅಳಿವಿನಂಚಿನಲ್ಲಿರುವ ಜೀವಿಗಳನ್ನು ರಕ್ಷಿಸಿಕೊಳ್ಳೋಣ ಅದಕ್ಕಿಂತ ಮೊದಲು ಕಾಡುಗಳನ್ನು ರಕ್ಷಿಸಿಕೊಳ್ಳೋಣ.

ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….

ಕು ಶಿ ಚಂದ್ರಶೇಖರ್
ಲೇಖನ ಪ್ರೇರಣೆ: ಶ್ರೀ ಪೂರ್ಣಚಂದ್ರ ತೇಜಸ್ವಿ
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *