ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ

ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ

ಓಸೆಲೇಟೆಡ್ ಟರ್ಕಿ (ಮೆಲಿಯಾಗ್ರಿಸ್ ಒಸೆಲ್ಲಾಟಾ) ಟರ್ಕಿ ಕೋಳಿ ಜಾತಿಯ ತಳಿಯಾಗಿದ್ದು, ಇವುಗಳು ಮುಖ್ಯವಾಗಿ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಇವುಗಳು ಕಾಡು ಟರ್ಕಿಯ (ಮೆಲಿಯಾಗ್ರಿಸ್ ಗ್ಯಾಲೋಪಾವೊ) ಪ್ರಬೇಧಕ್ಕೆ ಸೇರಿದ್ದು, ಅಗ್ರಿಯೊಚಾರಿಸ್ ಜಾತಿಗೆ ಸೇರಿದ್ದೆಂದೂ ಹೇಳಲಾಗುತ್ತದೆ. ಇದು ವಿಶಿಷ್ಟವಾದ ಹಾಗೂ ದೈಹಿಕವಾಗಿ ದೊಡ್ಡ ಗಾತ್ರದ ಹಕ್ಕಿಯಾಗಿದೆ. ಈ ಹಕ್ಕಿಗಳು ಸರಾಸರಿ 70 ರಿಂದ 122 ಸೆಂ.ಮೀ ಉದ್ದ, ಹೆಣ್ಣು ಹಕ್ಕಿಯು ಸರಾಸರಿ 3 ಕೆ.ಜಿ ಮತ್ತು ಗಂಡು ಹಕ್ಕಿಗಳು ಸರಾಸರಿ 5 ಕೆ.ಜಿ ತೂಕವಿರುತ್ತವೆ.

ಈ ಪಕ್ಷಿಗಳು ಮೆಕ್ಸಿಕೊದ ಯುಕಾಟಾನ್ ಪೆನಿನ್ಸುಲಾದ 50,000 ಚದರ ಮೈಲಿ ವ್ಯಾಪ್ತಿಯಲ್ಲಿ ಮಾತ್ರ ವಾಸವಿದ್ದು, ಇವುಗಳನ್ನು 2002 ರಿಂದ ಮೆಕ್ಸಿಕನ್‌ ನ ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಗೆ ಸೇರಿಸಲಾಗಿದೆ. 2009 ರಲ್ಲಿ ಐ.ಯು.ಸಿ.ಎನ್ ಸಂಸ್ಥೆಯು ಈ ಪಕ್ಷಿ ಸಂಕುಲಕ್ಕೆ ಮಾನವನಿಂದ ಸಂಚಕಾರವಿದೆಯೆಂದು ವರದಿಯನ್ನು ನೀಡಿದೆ. ಅಳಿವಿನಂಚಿನಲ್ಲಿದ್ದರೂ ಈ ಪಕ್ಷಿ ಸಂಕುಲವು ನಿಧಾನಗತಿಯಲ್ಲಿ ಬೆಳೆಯುತ್ತಿದ್ದು, ಯುಕಾಟಾನ್ ಪೆನಿನ್ಸುಲಾ ಪ್ರದೇಶದಲ್ಲಿ ವಾಸಿಸುವ ವಲಸೆ ಕಾರ್ಮಿಕರು ಮಾಂಸದ ಉದ್ದೇಶಕ್ಕೆ ಮತ್ತು ವಾಣಿಜ್ಯಿಕ ಉದ್ದೇಶದ ಮಾರಾಟಕ್ಕಾಗಿ ಇವುಗಳನ್ನು ಬೇಟೆಯಾಡುತ್ತಿರುವುದು ಈ ಪಕ್ಷಿಯ ಜಾತಿಯು ಅವನತಿಯೆಡೆಗೆ ಸಾಗಲು ಕಾರಣವೆನ್ನಲಾಗಿದೆ.

ಗಂಡು ಮತ್ತು ಹೆಣ್ಣು ಓಸೆಲೇಟೆಡ್ ಟರ್ಕಿ ಪಕ್ಷಿಯ ದೇಹದ ಗರಿಗಳು ಕಂಚಿನ ಬಣ್ಣ ಮತ್ತು ಹಸಿರು ವರ್ಣವೈವಿಧ್ಯದ ಸಮ್ಮಿಶ್ರಣವಾಗಿದೆ. ಹೆಣ್ಣು ಹಕ್ಕಿಯು ಗಾಢ ಹಸಿರು ಬಣ್ಣದಿಂದ ಕೂಡಿದ್ದು, ಎದೆಯ ಭಾಗದ ಗರಿಗಳು ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಭಿನ್ನವಾಗಿರುವುದಿಲ್ಲ ಮತ್ತು ಬಣ್ಣದಿಂದಷ್ಟೇ ಈ ಪಕ್ಷಿಗಳ ಲಿಂಗವನ್ನು ನಿರ್ಧರಿಸುವುದೂ ಕಷ್ಟ. ಗಂಡು ಮತ್ತು ಹೆಣ್ಣು ಪಕ್ಷಿಗಳ ಬಾಲ ಗರಿಗಳು ನೀಲಿ ಮತ್ತು ಬೂದು ಬಣ್ಣದ್ದಾಗಿದ್ದು, ಕಣ್ಣಿನ ಸುತ್ತಲೂ ನೀಲಿ ಮತ್ತು ಕಂಚಿನ ಬಣ್ಣ ಹಾಗೂ ಗಾಢ ಬಂಗಾರದ ಬಣ್ಣವನ್ನು ಹೊಂದಿರುತ್ತದೆ. ಬಾಲದಲ್ಲಿ ಗಂಡು ನವಿಲು ಹೊಂದಿರುವಂತಹ ಗಾಢ ನೀಲಿ ಬಣ್ಣದ ಮಚ್ಚೆಯಿರುತ್ತದೆ. ಇವುಗಳ ರೆಕ್ಕೆಯ ಮೇಲ್ಭಾಗದ ಗರಿಗಳು ಬಹುತೇಕ ಕಂದು ಬಣ್ಣವನ್ನು ಹೊಂದಿದ್ದು ಕೆಳಭಾಗದ ಗರಿಗಳ ತುದಿಯು ಬಿಳಿ ಬಣ್ಣವನ್ನು ಹೊಂದಿರುತ್ತದೆ.

ಎಡಗಡೆ – ಗಂಡು ಬಲಗಡೆ -ಹೆಣ್ಣು

ಗಂಡು ಮತ್ತು ಹೆಣ್ಣು ಓಸಲೇಟೆಡ್ ಟರ್ಕಿ ಪಕ್ಷಿಗಳ ತಲೆಯು ನೀಲಿ ಬಣ್ಣವನ್ನು, ನೀಲಿ ಬಣ್ಣದ ಕಿರೀಟವನ್ನು ಹೊಂದಿರುವುದರೊಂದಿಗೆ ತಲೆ ಮತ್ತು ಕತ್ತಿನಲ್ಲಿ ಕೆಂಪು ಅಥವಾ ಕಿತ್ತಳೆ ಬಣ್ಣದ ಸುರುಳಿಯಂತಹ ವಿಶಿಷ್ಟವಾದ ಗಂಟುಗಳು ಕಂಡುಬರುತ್ತವೆ. ಇವುಗಳ ಸಂತಾನೋತ್ಪತ್ತಿಯ ಅವಧಿಯಲ್ಲಿ ಗಂಡು ಪಕ್ಷಿಗಳಲ್ಲಿ ನೀಲಿ ಬಣ್ಣದ ಕಿರೀಟವು ಸ್ವಲ್ಪ ಹೆಚ್ಚು ದಪ್ಪವಾಗಿ ಊದಿಕೊಂಡು ತಲೆ ಹಾಗೂ ಕತ್ತಿನ ಗಂಟುಗಳು ಹಳದಿ ಮತ್ತು ಕಿತ್ತಳೆ ವರ್ಣದೊಂದಿಗೆ ಸ್ಪಷ್ಟವಾಗಿ ಗೋಚರಿಸುವುದರೊಂದಿಗೆ ಕಣ್ಣುಗಳು ಗಾಢ ಕೆಂಬಣ್ಣದಿಂದ ಹೆಚ್ಚು ಕಾಂತಿಯುತವಾಗಿ ಗೋಚರಿಸುತ್ತದೆ.

ಇವುಗಳ ಕಾಲುಗಳು ಗಾಢ ಕೆಂಬಣ್ಣದಿಂದ ಕೂಡಿ ಇತರ ಕೋಳಿಯ ಜಾತಿಯ ಪಕ್ಷಿಗಳ ಕಾಲಿಗಿಂತ ಗಿಡ್ಡ ಹಾಗೂ ತೆಳ್ಳಗಿರುತ್ತದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಗಂಡು ಪಕ್ಷಿಗಳ ಕಾಲಲ್ಲಿ ಸರಾಸರಿ 4-6 ಸೆಂ.ಮೀ ಅಳತೆಯ ಸ್ಪರ್ಸ್ ಹೊಂದಿದ್ದು ವಯಸ್ಕ ಹೆಣ್ಣು ಕೋಳಿಗಳು ಮೊಟ್ಟೆ ಇಡುವ ಅವಧಿಯಲ್ಲಿ ಸುಮಾರು 4 ಕೆ.ಜಿ ಮತ್ತು ಉಳಿದ ಅವಧಿಯಲ್ಲಿ 3 ಕೆ.ಜಿ ಮತ್ತು ವಯಸ್ಕ ಗಂಡು ಪಕ್ಷಿಗಳು ಸಂತಾನೋತ್ಪತ್ತಿ ಅವಧಿಯಲ್ಲಿ 5 ರಿಮದ 6 ಕೆ.ಜಿ ತೂಕವಿರುತ್ತವೆ.

ಓಸಲೇಟೆಡ್ ಟರ್ಕಿ ಪಕ್ಷಿಗಳು ನಡೆದಾಡುತ್ತಲೇ ಅತ್ತಿಂದಿತ್ತ ಸಂಚರಿಸುತ್ತಾ ಅಪಾಯದ ಸಂದರ್ಭದಲ್ಲಷ್ಟೇ ತಪ್ಪಿಸಿಕೊಳ್ಳಲು ಹಾರಾಟವನ್ನು ನಡೆಸುತ್ತವೆ. ಇವುಗಳು ಬಹಳ ದೂರಕ್ಕೆ ಹಾರಲಾರವಾದರೂ ಕಡಿಮೆ ಅಂತರವನ್ನು ಅತ್ಯಂತ ವೇಗವಾಗಿ ಮತ್ತು ಶಕ್ತಿಯುತವಾಗಿ ಹಾರಬಲ್ಲವು. ರಾತ್ರಿಯ ಬೇಟೆಯಾಡುವ ಪರಭಕ್ಷಕಗಳಾದ ಜಾಗ್ವಾರ್‌ಗಳಿಂದ ರಕ್ಷಿಸಿಕೊಳ್ಳಲು ಇವುಗಳು ಗುಂಪಾಗಿ ಎತ್ತರದ ಮರಗಳಲ್ಲಿ ವಿಶ್ರಮಿಸುತ್ತವೆ. ಒಸಲೇಟೆಡ್ ಟರ್ಕಿ ಪಕ್ಷಿಗಳು ಆಹಾರವಾಗಿ ಜೀರುಂಡೆಗಳು, ಪತಂಗಗಳು ಮತ್ತು ಎಲೆಗಳ ಕತ್ತರಿಸುವ ಇರುವೆಗಳು, ಹುಲ್ಲಿನ ಬೀಜಗಳು, ಮತ್ತು ವಿವಿಧ ರೀತಿಯ ಮೇವುಗಳನ್ನು ತಿನ್ನುತ್ತವೆ. ಸಂತಾನೋತ್ಪತ್ತಿಯ ಅವಧಿಯಲ್ಲಿ ಗಂಡು ಓಸಲೇಟೆಡ್ ಟರ್ಕಿ ಕೋಳಿಗಳು ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸುತ್ತವೆ. ಸಂತಾನೋತ್ಪತ್ತಿ ಕಾಲಕ್ಕೆ ಮುಂಚಿತವಾಗಿ ವಯಸ್ಕ ಗಂಡು ಕೋಳಿಗಳು ಸಾಮಾನ್ಯವಾಗಿ ಮೂರು ಪ್ರಬುದ್ಧ ಹೆಣ್ಣು ಪಕ್ಷಿಗಳಿರುವ ಹಿಂಡಿನಲ್ಲಿ ಕಂಡುಬರುತ್ತವೆ. ಉಳಿದ ಅವಧಿಗಳಲ್ಲಿ 8ಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಿಗಳ ಹಿಂಡುಗಳಲ್ಲಿ ವಾಸಿಸುತ್ತವೆ. ಫೆಬ್ರವರಿ ಆರಂಭದಲ್ಲಿ ಆಸಿಲೇಟೆಡ್ ಟರ್ಕಿ ಪಕ್ಷಿಗಳ ಸಂತಾನೋತ್ಪತ್ತಿ ಪ್ರಾರಂಭವಾಗಿ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಕೊನೆಗೊಳ್ಳುತ್ತದೆ. ಗಂಡು ಪಕ್ಷಿಗಳು ಹೆಣ್ಣು ಪಕ್ಷಿಗಳನ್ನು ಆಕರ್ಷಿಸಲು ಹೆಚ್ಚಿನ ಉತ್ಸಾಹಭರಿತ ಪ್ರದರ್ಶನವನ್ನು ಮಾಡುತ್ತವೆ.

ಪುರುಷ ಪಕ್ಷಿಗಳು ವೇಗವಾಗಿ ನೆಲಕ್ಕೆ ನಿರಂತರವಾಗಿ ಬಡಿಯುತ್ತಾ, ತಮ್ಮ ಬಾಲದ ಗರಿಗಳನ್ನು ಅಕ್ಕ- ಪಕ್ಕಕ್ಕೆ ಚಲಿಸುತ್ತಾ, ವೇಗವಾಗಿ ರೆಕ್ಕೆಗಳನ್ನು ನೆಲಕ್ಕೆ ವಿರುದ್ದವಾಗಿ ಕಂಪಿಸುತ್ತಾ ಹೆಣ್ಣು ಪಕ್ಷಿಯ ಮಿಲನಕ್ಕೆ ಸೂಚನೆಯನ್ನು ನೀಡುತ್ತದೆ. ಗಂಡು ನೃತ್ಯವನ್ನು ಮಾಡುತ್ತಾ ಹೆಣ್ಣು ಟರ್ಕಿಯನ್ನು ಆಕರ್ಷಿಸಲು ಸುತ್ತಲೂ ಓಡಾಡುತ್ತದೆ. ಹೆಣ್ಣು ಪಕ್ಷಿಯು ಮೇ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಚೆನ್ನಾಗಿ ಮರೆಮಾಡಿದ ಗೂಡಿನಲ್ಲಿ 8 ರಿಂದ 15 ಮೊಟ್ಟೆಗಳನ್ನಿಡುತ್ತದೆ. ನಂತರ 28 ದಿನಗಳ ಕಾಲ ಕಾವು ಕೊಟ್ಟನಂತರ ಒಸಲೇಟೆಡ್ ಟರ್ಕಿ ಕೋಳಿಗಳು ಹೊರಬರುತ್ತವೆ. ತಾಯಿಯು ತನ್ನ ಮರಿಗಳನ್ನು ಪರಭಕ್ಷಕಗಳಿಂದ ರಕ್ಷಿಸಲು ಕೆಂಪು ಮಿಶ್ರಿತ ಕಂದು ಬಣ್ಣದ ಪುಕ್ಕಗಳ ಗೂಡಿನಿಂದ ಮುಚ್ಚಿ ರಕ್ಷಿಸುತ್ತದೆ. ಮರಿಗಳಾದ ನಂತರ ಕೇವಲ ಒಂದೇ ರಾತ್ರಿಯಲ್ಲಿ ಮರಿಗಳು ಗೂಡಿನಿಂದ ಹೊರಬಂದು ಫ್ರೌಢಾವಸ್ಥೆಗೆ ಬರುವವರೆಗೂ ತಮ್ಮ ತಾಯಿಯನ್ನು ಹಿಂಬಾಲಿಸುತ್ತಿರುತ್ತವೆ. ನಂತರದಲ್ಲಿ ಇವುಗಳು ತಮ್ಮ ಹೊಸ ಗುಂಪನ್ನು ರಚಿಸಿಕೊಂಡು ಪ್ರತ್ಯೇಕವಾಗಿ ಸಹಜೀವನವನ್ನು ಮಾಡುತ್ತವೆ.

ಬೇಟೆಯಾಡಿ ಸಂಭ್ರಮಿಸುತ್ತಿರುವ ಹಂತಕರು

ಗಂಡು ಪಕ್ಷಿಗಳನ್ನು ‘ಗಬಲ್’ ಎಂದು ಕರೆಯಲಾಗುವುದರಿಂದ ಇವುಗಳ ಧ್ವನಿಯು ಇತರ ಇದೇ ಪ್ರಬೇಧದ ಪಕ್ಷಿಗಳಿಗೆ ಹೋಲಿಸಿದಾಗ ಭಿನ್ನವಾಗಿದೆ. ಗಂಡು ಒಸೆಲೇಟೆಡ್ ಟರ್ಕಿಗಳು ಕಾಡು ಟರ್ಕಿಗಳಂತೆ ಗಲಾಟೆ ಮಾಡುವುದಿಲ್ಲ. ಇವುಗಳ ಧ್ವನಿಯು ವಿಭಿನ್ನವಾಗಿದ್ದು, ಇವುಗಳು ತಮ್ಮ ಕತ್ತು ಮತ್ತು ತಲೆಯನ್ನು ಸಂಪೂರ್ಣವಾಗಿ ನೆಟ್ಟಗೆ ಮಾಡಿ 6 ರಿಂದ 7 ವಿಧದ ಶಬ್ಧಗಳನ್ನು ಇವುಗಳು ಹೊರಡಿಸುತ್ತವೆ. ಇವುಗಳು ಸೂರ್ಯೋದಯಕ್ಕೆ 20 ರಿಂದ 25 ನಿಮಿಷಗಳ ಮೊದಲು ಬಾಯಿಯಿಂದ ವಿಭಿನ್ನವಾದ ಶಬ್ದವನ್ನು ಹೊರಡಿಸಲು ಪ್ರಾರಂಭಿಸುತ್ತವೆ.

ಎಂದಿನಂತೆ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಮತ್ತೆ ರಕ್ಷಿಸಬೇಕಾಗಿರುವುದು ಮನುಷ್ಯನ ಆದ್ಯ ಕರ್ತವ್ಯ ಯಾಕೆಂದರೆ ಭಕ್ಷಿಸುವವನು ಅವನೇ ರಕ್ಷಿಸುವವನು ಅವನೇ ಎಂಥ ವಿಪರ್ಯಾಸ! ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲು https://ebird.org/species/ocetur1 ಗೆ ಭೇಟಿ ನೀಡಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.
ದೂ: 9742884160
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *