ಅಳಿವಿಲ್ಲದ ಸ್ಥಾವರ – ಸಿ ಆರ್ ಸತ್ಯ
ಪುಸ್ತಕ ಪರಿಚಯ:ಅಳಿವಿಲ್ಲದ ಸ್ಥಾವರ
ಲೇಖಕರು:ಸಿ ಆರ್ ಸತ್ಯ
ಪ್ರಕಾಶಕರು :ಹೇಮಂತ ಪ್ರಕಾಶನ
Senteineils of glory ಸಿ.ಆರ್.ಸತ್ಯ ಅವರದೇ ಮೂಲಕೃತಿ “ಅಳಿವಿಲ್ಲದ ಸ್ಥಾವರ “ದ ಭಾಷಾಂತರ.
ಕರ್ನಾಟಕ – ಕೇರಳ ರಾಜ್ಯಗಳ ಸಾಂಸ್ಕೃತಿಕ ಕೊಂಡಿಯಾಗಿ ಸಿ.ಆರ್.ಸತ್ಯರವರ ಸಾಧನೆ ಗಣನೀಯ.
ಬರಹಗಾರರಾಗಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಅವರ “ಅಳಿವಿಲ್ಲದ ಸ್ಥಾವರ’ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯ ನಿರ್ಮಾಣದ ಹಿಂದಿನ ತಂತ್ರಗಾರಿಕೆಯನ್ನು ಕುರಿತು ಬೆಳಕು ಚೆಲ್ಲುತ್ತದೆ.
ಸಿ ಆರ್ ಸತ್ಯರವರ ಸಂಶೋಧನಾ ಪುಸ್ತಕ – ‘ಅಳಿವಿಲ್ಲದ ಸ್ಥಾವರ’ ವನ್ನು ಓದಿದರೆ ಮಾತ್ರ ನಿಮಗೆ ಈ ಮಾಹಿತಿ ಸಿಗುತ್ತದೆ. 1.65 ಟನ್‌ಗಳಷ್ಟು ಕಲ್ಲುಗಳನ್ನು ಬಳಸಿ ಕಟ್ಟಿದ ಈ ದೇವಸ್ಥಾನದ ಕಲ್ಲಿನ ಕಥೆಯೇ ರೋಚಕ ಎಂಬುದು ಈ ಪುಸ್ತಕದಿಂದಲೇ ನಿಮಗೆ ಗೊತ್ತಾಗುತ್ತದೆ. ಅಲ್ಲಿ ಸಿಕ್ಕಿದ ಚಿನ್ನಾಭರಣಗಳ ಮೂಲದ ಬಗ್ಗೆ ನಮಗೆ ಈಗಂತೂ ಏನೂ ಗೊತ್ತಾಗುವುದಿಲ್ಲ. ಆದರೆ ಸತ್ಯರವರು ಬರೆದ ಈ ಪುಸ್ತಕದಲ್ಲಿ ಕಲ್ಲಿನ ಕಥೆ ಖಚಿತವಾಗಿದೆ.
ಕನ್ನಡಿಗರಾದ ಸಿ ಆರ್ ಸತ್ಯರವರು ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿದ ತಾಂತ್ರಿಕ ಸಲಹೆಗಾರರು. ಅವರು 1965 ರಿಂದ ತಿರುವನಂತಪುರದಲ್ಲೇ ಇದ್ದವರು. ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಲವು ಸಲ ಭೇಟಿ ಕೊಟ್ಟವರು. ಯಾವುದೋ ಒಂದು ಸಾಕ್ಷ್ಯಚಿತ್ರಕ್ಕಾಗಿ ದೇವಸ್ಥಾನದ ಚರಿತ್ರೆಯನ್ನು ಹುಡುಕುತ್ತ ಹೋದ ಅವರಿಗೆ ಅಲ್ಲಿದ್ದ ಕಲ್ಲುಗಳೇ ಆಕರ್ಷಣೆ ಹುಟ್ಟಿಸಿದವು. ದೇವಸ್ಥಾನದ ಇತಿಹಾಸವನ್ನು ಓದುತ್ತ, ಅನಂತಪದ್ಮನಾಭ ದೇವರನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತ ಬಂದ ವೇನಾಡ್ ರಾಜಮನೆತನದ ಹಿರಿಯರೊದಿಗೆ ಚರ್ಚಿಸುತ್ತ, ಸಿಕ್ಕಿದ ಮೂಲಗಳನ್ನೆಲ್ಲ ಕೆದಕುತ್ತ ಹೋದ ಸತ್ಯರವರು 136 ಪುಟಗಳಲ್ಲಿ ಒಂದು ರೋಚಕ ಇತಿಹಾಸ – ವಿಜ್ಞಾನ – ಸಂಸ್ಕೃತಿ ಭರಿತ ಕಥನವೊಂದನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ, ಲೇಖಕರ ಹಿರಿಯ ಸಹೋದ್ಯೋಗಿ ಡಾ|| ಎ ಪಿ ಜೆ ಅಬ್ದುಲ್ ಕಲಾಂರವರೇ ಅಕ್ಕರೆಯ ಮುನ್ನುಡಿ ಬರೆದಿದ್ದಾರೆ.
ಈ ಪುಸ್ತಕ ಎಷ್ಟು ರೋಚಕವಾಗಿದೆ ಎನ್ನುವುದಕ್ಕೆ ಒಂದೇ ಉದಾಹರಣೆ ಕೊಡುತ್ತೇನೆ: ದೇವಸ್ಥಾನದಲ್ಲಿ ಬಳಸಿದ ಕಲ್ಲುಗಳ ಗಣಿ ಎಲ್ಲಿರಬಹುದು ಎಂದು ಲೆಕ್ಕ ಹಾಕಿದ ಲೇಖಕರು ತಿರುಮಲೈ ಬೆಟ್ಟದಲ್ಲಿ ಅಡ್ಡಾಡುತ್ತ ಅರ್ದಂಬರ್ಧ ಕೆತ್ತನೆಯಾಗಿದ್ದ ಕಲ್ಲುಗಳನ್ನು ಕಾಣುತ್ತಾರೆ. ಪಕ್ಕದಲ್ಲಿದ್ದ ಶ್ರೀ ನೀಲಕಂಠ ಸ್ಮಾರಕ ಆಧ್ಯಾತ್ಮಿಕ ಸಂಘದ ಬ್ರಹ್ಮಶ್ರೀ ಮಾಧವಸ್ವಾಮಿಯರ ಬಗ್ಗೆ ಗೊತ್ತಾಗಿ ಅವರಲ್ಲಿಗೆ ಹೋಗಿ ತಮ್ಮ ಅನುಮಾನಗಳನ್ನು ಹಂಚಿಕೊಳ್ಳುತ್ತಾರೆ. ಆಗ ಆ ಸ್ವಾಮೀಜಿಯವರು ತಾವು ಆ ಸ್ಥಳದಲ್ಲಿ ಸಂಗ್ರಹಿಸಿದ್ದ ಒಂಬತ್ತು ಉಕ್ಕಿನ ಉಳಿಗಳನ್ನು ಲೇಖಕರಿಗೆ ಕೊಡುತ್ತಾರೆ. ಈ ಉಕ್ಕಿನ ಉಳಿಗಳು 21 ನೇ ಶತಮಾನದ ಉಳಿಗಳಿಗಿಂತ ಎಷ್ಟೋ ಪಟ್ಟು ಶಕ್ತಿಯುತವಾದವು ಎಂದು ಕಂಡುಕೊಳ್ಳುತ್ತಾರೆ. ತಿರುಮಲೈ ಉಳಿಗಳ ಉಕ್ಕಿನ ತಾಂತ್ರಿಕತೆ ಅತಿ ವಿಶಿಷ್ಟವಾದದ್ದು. ನಮ್ಮ ಪೂರ್ವಜರು ಮ್ಯಾಂಗನೀಸ್ ತರಹದ ಸಹಾಯಕ ಲೋಹವನ್ನು ಉಪಯೋಗಿಸದೇ ಗಂಧಕದ ಪ್ರಮಾಣವನ್ನು ಬಹುವಾಗಿ ತೆಗೆದುಹಾಕಿ ಅತ್ಯಂತ ಕಠಿಣವಾದ ಉಕ್ಕನ್ನು ತಯಾರಿಸಿ ಅದರಿಂದ ಉಳಿಗಳನ್ನು ತಯಾರಿಸಿದ್ದರು!’.
ಇಷ್ಟಕ್ಕೇ ಲೇಖಕರ ಕುತೂಹಲ ತಣಿಯುವುದಿಲ್ಲ. ಅವರು ಈ ಉಕ್ಕು ಎಲ್ಲಿ ತಯಾರಾಯಿತು ಎಂದು ಮತ್ತಷ್ಟು ಹುಡುಕುತ್ತಾರೆ. ಅದೇ ಸೇಲಂ! ಈಗ ಆಧುನಿಕ ಉಕ್ಕು ತಯಾರಿಕಾ ಕೇಂದ್ರವಾದ ಸೇಲಂ ಪ್ರಾಚೀನ ಕಾಲದಿಂದಲೂ ಉಕ್ಕು ತಯಾರಿಕೆಗೆ ಹೆಸರುವಾಸಿಯಾಗಿತ್ತು ಎಂಬುದು ಲೇಖಕರಿಗೆ ಖಚಿತವಾಗುತ್ತದೆ. ಎಲ್ಲಿಂದ ಎಲ್ಲಿಗೆ? ಲೇಖಕರ ಈ ಸಂಶೋಧನಾ ಪ್ರವೃತ್ತಿಯಿಂದ ಈ ಪುಸ್ತಕವು ಇಂಥ ಹಲವು ಐತಿಹಾಸಿಕ, ವೈಜ್ಞಾನಿಕ ಸುದ್ದಿಕೊಂಡಿಗಳನ್ನು ಒಳಗೊಂಡ ಸ್ಫೋಟಕ ಆಕರವಾಗಿದೆ ಎನ್ನಲಡ್ಡಿಯಿಲ್ಲ.
ದೇಗುಲದಲ್ಲಿರುವ ಒತ್ತಕ್ಕಲ್ ಎಂಬ ಭಾರೀ ಗಾತ್ರದ (ಸುಮಾರು 50 ಟನ್ ಎಂಬ ಅಂದಾಜು) ಕಲ್ಲಿನ ಕಥೆಯನ್ನೂ ಲೇಖಕರು ಬಿಡಿಸಿದ್ದಾರೆ. ಈ ಎಲ್ಲ ಕಥೆಗಳನ್ನು ವಿವರಿಸಲು ಅವರು ಐತಿಹಾಸಿಕ ದಾಖಲೆಗಳನ್ನೇ ಬಳಸಿದ್ದಾರೆ. ಕನಿಷ್ಠ 12 ಶತಮಾನಗಳ ಅಧಿಕೃತ ಮತ್ತು ಇನ್ನೂ ಹಲವು ಶತಮಾನಗಳ ಅನಧಿಕೃತ ಇತಿಹಾಸದ ಹೊಂದಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಇಷ್ಟು ಚಿಕ್ಕ ಪುಸ್ತಕದಲ್ಲಿ ಎಲ್ಲವನ್ನೂ ವಿವರಿಸಲು ಸಾಧ್ಯವಿಲ್ಲ. ಆದರೆ ಲೇಖಕರು ತಮ್ಮ ವಿಷಯದ ಮಿತಿಯಲ್ಲಿ ಕಂಡುಕೊಂಡ ಸತ್ಯಾಂಶಗಳೇ ಪುಸ್ತಕವನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕಕ್ಕೆ ಅಗತ್ಯವಾದ ರೇಖಾಚಿತ್ರಗಳನ್ನೂ ತಾವೇ ಬರೆದ ಲೇಖಕರು 23 ವರ್ಷಗಳ ತಮ್ಮ ಹವ್ಯಾಸಿ ಸಂಶೋಧನೆಯನ್ನು ಶಿಸ್ತಾಗಿ ಮೂಡಿಸಿದ್ದಾರೆ.
ಇಂತಹ ಪುಸ್ತಕಗಳು ನಿಮ್ಮ ಸಂಗ್ರಹಾಲಯದಲ್ಲಿ ಇದ್ದರೆ ಎಷ್ಟೋ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ದಾಟಿಸಲು ಅನುಕೂಲವಾಗುತ್ತದೆ.
ಸುನೀಲ್ ಹಳೆಯೂರು
ಆಧಾರ: ವಿವಿಧ ಮೂಲಗಳು
1 Comment
ವಿಶೇಷ ವಿಚಾರ. ಅರಿತೆ. ಮನವರಿತೆ
ಸಾರ್ಥಕ ಸಾಧನೆ. ಹಾಗೆಯೇ ಸತ್ಯ ಶುದ್ಧ ಕಾಯಕದ ಬೋಧನೆ. ವಿಜ್ಞಾನ ದಣಿಯಿತೆ!?
ಸುನಿಲರ ಬರೆಹ ಮುಗ್ಧತೆಯಲಿ ಸ್ನಿಗ್ಧತೆ
ಓದಿದೆ. ಈಗಿರುವುದೊಂದೇ ಧನ್ಯತೆ !
ಧನ್ಯವಾದಗಳು