ಅವನ ನೆನಪು
ಅವ ಬಂದಿದ್ದ
ಹುಣ್ಣಿಮೆಯ ಚಂದ ಕನಸಿನಂತೆ
ವಿರಹದಿ ಬೆಂದ ರಾಧೆಗೆ
ಕೃಷ್ಣ ಕಂಡಂತೆ
ಬಸವಳಿದ ಗೋಪಿಯ
ಬರಸೆಳೆದು ಅಪ್ಪಿದ
ಗೋಪಿಲೋಲನಂತೆ
ಬಂದಿದ್ದ ಅವ
ಬೇಸಿಗೆಯಲಿ ತಂಪನೂಡುವ
ಮಳೆಯಂತೆ
ಚಳಿಗಾಲದ
ಮಧ್ಯಾಹ್ನದ ಹೊಂಬಿಸಿಲಂತೆ
ಬಂದಿದ್ದ ಅವ
ಕಡುಬಡವನೆದುರು
ಕೊಪ್ಪರಿಗೆ ಐಶ್ವರ್ಯ
ಬಂದು ಬಿದ್ದಂತೆ
ತಾಯಿಯೊಡಲಿಂದ ಅಗಲಿದ
ಮಗುವು ಮತ್ತೆ
ಅಮ್ಮನ ತೊಡೆಯೇರಿದಂತೆ
ಅವ ಬಂದಿದ್ದ
ಜನ್ಮಜನ್ಮಗಳ ಪಾಪ
ತೊಳೆದಂತೆ
ಪುಣ್ಯ ಫಲವೆಲ್ಲವೂ
ಸಂಚಯವಾಗಿ
ಮಾನವರೂಪ ಪಡೆದಂತೆ
ಮನದಾನಂದದಂತೆ
ನಿಂತಿದ್ದ ಎದೆಬಡಿತ
ಮತ್ತೆ ಶುರುವಾದಂತೆ
ಹೀಗೆ ಬಂದು ಹಾಗೆ ದೇವರಂತೆ
ಮಾಯವಾದವನ ಕಾಣಲು
ಮತ್ತೆಷ್ಟು ತಪಗೈಯಬೇಕೋ
ಇನ್ನೆಷ್ಟು ಕಾಯಬೇಕೋ
ತಿಳಿದಿಲ್ಲವಾದರೂ
ಅವ ಕೊಟ್ಟ ನೆನಪುಗಳ
ಭದ್ರವಾಗಿಟ್ಟುಕೊಳ್ಳುವ
ಎದೆಗೂಡಂತೂ ಗಟ್ಟಿಯಿದೆ
ಮನದೊಳಗವನ ಭಿತ್ತಿಚಿತ್ರವಿದೆ.
ಸೌಜನ್ಯ ದತ್ತರಾಜ