ಅವಳ ಸಂದೇಶ

ಇಂದಿನ ವೈಜ್ಞಾನಿಕ ಯುಗದಲ್ಲಿರುವ ನಮಗೆ ಬಹಳಷ್ಟು ತಂತ್ರಜ್ಞಾನ ಬಳಕೆಯು ಅಭ್ಯಾಸವಾಗಿ ಹೋಗಿದೆ. ಅದರಲ್ಲಿಯೂ ಜಂಗಮವಾಣಿ (ಮೊಬೈಲ್) ಎಷ್ಟು ಸೌಲಭ್ಯಗಳನ್ನು ಹೊಂದಿದೆ ಎಂದರೆ, ಕೂತ ಜಾಗದಿಂದಲೇ ಬೇಕಾದವರನ್ನು ನೋಡಬಹುದು, ರಂಜಿಸಬಹುದು, ಕಲಿಯಬಹುದು, ಮಿತಿಯೇ ಇಲ್ಲದಷ್ಟು ಉಪಯೋಗ ಜಂಗಮವಾಣಿಯಲ್ಲಿ ತುಂಬಿದೆ.

ಜಂಗಮವಾಣಿಯ ಸಹಾಯದಿಂದ ಜನರು ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಸಹಜವಾಗಿದೆ. ಇನ್ನು ಅದರ ದುರ್ಬಳಕೆ ಅವರವರ ಭಾವನೆಗೆ ಬಿಟ್ಟದ್ದು ಅಲ್ಲವೇ?

ಹೀಗೆ ಅದೊಂದು ತಣ್ಣನೆಯ ಚಳಿ ತುಂಬಿದ, ಮಳೆ ಸುರಿಯುತ್ತಿರುವ ಮುಂಜಾನೆ, ನವ ವಿವಾಹಿತ ಸತಿ ಪತಿಯರ ವಿರಹಕಾಲ. ಅತ್ತ ಪತಿ ಕೆಲಸಕ್ಕೆಂದು ಬೇರೊಂದು ಊರಿಗೆ ಹೋಗಿದ್ದು, ಸತಿಯ ಊರಿನಲ್ಲಿ ಮಳೆ ಹನಿಗಳು ಭುವಿಯನ್ನು ಚುಂಬಿಸುತ್ತಿರಲು, ಭುವಿಯ ಪ್ರೀತಿ ನೀರಾಗಿ ಹರಿದು ಆವಿಯಾಗಿ ಗಾಳಿಯಲ್ಲಿ ಸೇರುತಿತ್ತು.

ಎಂತಹ ಕೆಲಸವೇ ಇದ್ದರು, ಕೆಲಸ ಮುಗಿಸಿ ಮನೆಗೆ ಬಂದ ಪತಿಗೆ ತನ್ನರಸಿ ನಗುತ್ತ ಆಹ್ವಾನಿಸಿ ಕೈಯಲ್ಲಿ ಚಹಾ ಇಟ್ಟರೆ ಆ ನಗುವಿನಲ್ಲಿ ಆಯಾಸವೆಲ್ಲ ಕಳೆದು, ಪ್ರೀತಿಯಿಂದ ನೀಡಿದ ಚಹಾ ಕುಡಿಯಲು ಮನ ತಣಿಯುತಿತ್ತು. ಅದಲ್ಲವೇ ಬಾಂಧವ್ಯದ ಸಾಮರಸ್ಯ. ಬೇರೊಂದು ಊರಿನಲ್ಲಿ ಕೆಲಸಕ್ಕೆ ತೆರಳಿರುವ ಪತಿಗೆ ಆಕೆಯ ನಗು ಕಾಣಲಿಲ್ಲವಾದರೂ, ಅವಳ ಒಂದು ಕರೆ ಮತ್ತು ಸಂದೇಶ ಅವನಲ್ಲಿ ಪುನಸ್ಚೇತನವನ್ನು ತುಂಬುತಿತ್ತು. ಅದನ್ನು ತಿಳಿದ ಆಕೆ ತಪ್ಪದೆ ಕರೆ ಮಾಡಿ ನಗುತ್ತ ಮಾತನಾಡುವುದು ನಿತ್ಯ ವೈಖರಿಯಾಗಿತ್ತು.

ಅದೇಕೋ ಅಂದು ಸಂಜೆ ಮಳೆಯಲ್ಲಿ ತೋಯ್ದು ಮನೆಗೆ ಬಂದ ಸತಿಗೆ, ಅಡುಗೆ ಮನೆಯಲ್ಲಿ ಕೆಲಸ ಹೆಚ್ಚಿರಲು, ಬೆಚ್ಚನೆ ಒಲೆಯ ಮುಂದೆ ಅಡುಗೆ ಮಾಡುತ್ತಾ ನಿಂತಳು. ಇತ್ತ ಗಡಿಯಾರದ ಮುಳ್ಳು ಅದೇಕೋ ಓಡಿಹೋಗಿದ್ದವು. ಅತ್ತ ಪತಿರಾಯ ಅವಳ ಕರೆಗಾಗಿ ಕಾದು ಕಾದು ಮನ ನೊಂದಿರಲು, ಅವನ ಕರೆ ತಡವಾಗಿ ಬರಲು, ಅವಳ ಅನುಮಾನ ನಿಜವಾಗಿತ್ತು. ತನ್ನ ತಪ್ಪಿನ ಅರಿವಾಗುವುದರಲ್ಲಿ ಕಾಲ ಮೀರಿ ಹೋಗಿತ್ತು. ಅವಳ ತಪ್ಪಿಗೆ ಪತಿಯ ಮುನಿಸು ಸೇರಿ ಆ ರಾತ್ರಿ ಜೋಡಿ ಹಕ್ಕಿಗಳು ವಿರಹ ವೇದನೆಯಲ್ಲಿ ಕಳೆದರು.

ಅದೊಂದು ಕರೆ ಅಥವಾ ಸಂದೇಶ, ಒಂದು ನಗು, ಒಳ್ಳೆಯ ಮಾತು ನಮ್ಮ ಪ್ರೀತಿ ಪಾತ್ರರ ಮನಸ್ಸನ್ನು ಎಷ್ಟು ಮುದ ಗೊಳಿಸುವ ಸಾಮರ್ಥ್ಯವಿದೆ ಅಲ್ಲವೇ. ನಮ್ಮನ್ನು ಪ್ರೀತಿಸುವವರಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟಲ್ಲಿ ಬಾಂಧವ್ಯ ಹೆಚ್ಚಾಗುವುದೇ ಹೊರತು ಗೌರವ ಕುಂದುವುದಿಲ್ಲ.

ಶಿಲ್ಪ

Related post

Leave a Reply

Your email address will not be published. Required fields are marked *