ಅಸಹಾಯಕತೆ
ಮಲಗಿದಲ್ಲೇ ಮಲಗಿರುವ ರೋಗಿ
ಅವನ ಕಂಡು ಎಲ್ಲರೂ ಮರುಗಿ
ನೋಡುತಿಹರು ಎಲ್ಲರೂ ತಿರುತಿರುಗಿ
ಇತ್ತ ರೋಗಿಯ ಮನದಲ್ಲಿ ಕಾಡುತಿದೆ ನೋವೊಂದು
ಕೈಕಾಲು ಆಡದೇ ಮಾತು ಹೊರಡದೇ
ತಲೆಯಾಡಿಸಲಾಗದೇ ನೋವುಂಡು
ಪಿಳಿ ಪಿಳಿ ಕಣ್ಣು ಬಿಡುತಲಿ ಅತ್ತಿತ್ತ ನೋಡುತಿರೆ
ದಪ್ಪನೆಯ ನೊಣವೊಂದು ಮೂಗಿನ ಮೇಲೆ ಕುಳಿತು
ಅಣಕಿಸುತಿದೆ ನನ್ನೇನು ಮಾಡುವೆ ನೀನು ಎಂದು
ಕಿವಿ ಪಕ್ಕದಲ್ಲಿ ಸೊಳ್ಳೆಗಳ ಝೇಂಕಾರವ ತಾಳದೇ
ದಪ್ಪಗಾತ್ರದ ನೊಣವ ಓಡಿಸಲಾರದೇ
ಯಾರನ್ನೂ ಕರೆಯಲಾರದೇ ರೋಧಿಸುತಿದೆ ಮನ
ನೂರೆಂಟು ತಂತಿಗಳು ಬಿಗಿದಿವೆ ನನ್ನನ್ನು
ಸೂಜಿಗಳು ಮಾಡಿವೆ ತೂತು ಮೈಯನ್ನು
ಮನವಾಗಿದೆ ಹಣ್ಣು ಹಣ್ಣು
ಇಷ್ಟಾದರೂ ಮನದಲಿ ಮತ್ತೆ ಓಡಾಡುವಾಸೆ
ಮಕ್ಕಳಲಿ ಮಗುವಾಗಿ ನಲಿದಾಡುವಾಸೆ
ನೆರವೇರಲಿದೆ ಸದ್ಯದಲ್ಲೇ ನನ್ನಾಸೆ….
ಈ ಆಶಾಭಾವದಲಿ ರೋಗಿಯು ಚಿಂತಿಸಿರೆ
ರೋಗವು ಓಡುವ ತವಕದಲಿ ಮೂಟೆ ಕಟ್ಟುವುದು
ಅಖಂಡ ವನವಾಸವು ಕೊನೆಯಾಗುವುದಿಂದು…
ಸಿ.ಎನ್. ಮಹೇಶ್