ಆಪ್ರಿಕಾದ ಸೌಮ್ಯದೈತ್ಯರು

ಆಪ್ರಿಕಾದ ಸೌಮ್ಯದೈತ್ಯರು

ಉಗಾಂಡಾ ಹಲವಾರು ಬುಡಕಟ್ಟು ಜನಾಂಗಗಳನ್ನ ಹೊಂದಿದ ಆಫ್ರಿಕಾದ ಒಂದು ಬಡರಾಷ್ಟ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ರಾಜಕೀಯ ಅಸ್ಪಷ್ಟತೆ ಅಸ್ಥಿರತೆಯಿಂದ, ಬುಡಕಟ್ಟು ಜನಾಂಗದ ನಡುವಿನ ಕಲಹ ಅಂತರ್ಯುದ್ಧದ ಹಿಂಸೆಯಿಂದ ನರಳಿದೆ . ಅಧಿಕೃತವಾಗಿ ಇಂಗ್ಲಿಷ್ ಮತ್ತು ಸ್ವಹೀಲಿ ( Swahili) ಮಾತನಾಡುವ ಈ ದೇಶದ ಜನಸಂಖ್ಯೆ ನಾಲ್ಕುವರೆ ಕೋಟಿಗಿಂತಲೂ ಅಧಿಕ.

ಒಂದು ಕಾಲಕ್ಕೆ ಆಫ್ರಿಕಾದ ಮುತ್ತು ಎಂದೇ ಪರಿಗಣಿಸಲಾಗುತ್ತಿದ್ದ ಈ ದೇಶ ನೈಸರ್ಗೀಕ ಸಂಪನ್ಮೂಲ, ದಟ್ಟಾರಣ್ಯ ಹುಲ್ಲುಗಾವಲುಗಳಿಂದ ಭರ್ತಿಯಾಗಿತ್ತು.

1970 ರಲ್ಲಿ ಈದಿ ಅಮೀನ್ ಎನ್ನುವ ವ್ಯಕ್ತಿ ಅಧ್ಯಕ್ಷನಾದ ಮೇಲೆ 80 ಮತ್ತು 90 ರ ದಶಕಗಳಲ್ಲಿ ಇಲ್ಲಿನ ಪರಿಸ್ತಿತಿ ಹದಗೆಟ್ಟಿತು. ಸೈನ್ಯ ಮತ್ತು ಗೆರಿಲ್ಲಾ ಯುದ್ದಕೋರರ ನಡುವೆ ಸದಾ ನಡೆಯುತ್ತಿದ್ದ ಯುದ್ದಗಳಿಂದ ಇಲ್ಲಿನ ಉತ್ತರ ಭಾಗದ ಅರಣ್ಯ ಪ್ರದೇಶಗಳು ಅಕ್ಷರಶಃ ಯುದ್ದಭೂಮಿಯಾಗಿ ಪರಿವರ್ತಿತವಾದುವಲ್ಲದೇ, ಸಮೃದ್ದವಾಗಿದ್ದ ಜಿರಾಫೆ, ಉಗಾಂಡಾದ ಆನೆ, ಜೀಬ್ರಾ ಸೇರಿದಂತೆ ಅನೇಕ ವನ್ಯಜೀವಿಗಳು ಅಳಿವಿನ ಅಂಚಿಗೆ ಬಂದುನಿಂತವು.

1960 ರಲ್ಲಿ 14,000 ಇದ್ದ ಆನೆಗಳ ಸಂಖ್ಯೆ ಕ್ಷೀಣಿಸಿ 1980 ರ ಹೊತ್ತಿಗೆ 1400 ರಷ್ಟಾಗಿತು.1990 ರಲ್ಲಿ ಪರಿಸ್ತಿತಿ ಇನ್ನೂ ಬಿಗಡಾಯಿಸಿ 250 ಕ್ಕೆ ತಲುಪಿತು. ಅರ್ಧ ಲಕ್ಷದಷ್ಟಿದ್ದ ಕಾಡುಕೋಣಗಳು ಕೇವಲ ಸಾವಿರಕ್ಕೆ ತಲುಪಿತು. ಸಿಂಹಗಳು ಹೆಚ್ಚುಕಮ್ಮಿ ನಶಿಸಿಯೇ ಹೋದಂತಾಗಿದ್ದವು. ಇಲ್ಲಿನ ನೈಲ್ ನದಿಯ ಉತ್ತರದಲ್ಲಿದ್ದ Rothschild’s giraffes ಎನ್ನುವ ವಿಶೇಷ ಪ್ರಜಾತಿಯ ಜಿರಾಫೆಗಳ ಸಂಖ್ಯೆ 250 ಕ್ಕೆ ಕುಸಿಯಿತು.

ಆಫ್ರಿಕಾದಲ್ಲಿ 9 ತಳಿಗಳ ಜಿರಾಫೆಗಳಿವೆ. ಈ ಜಿರಾಫೆಗಳಿಂದ ಅರಣ್ಯ ಪ್ರದೇಶಗಳಲ್ಲಿ ಯಥೇಚ್ಚವಾಗಿ ಪರಾಗಸ್ಪರ್ಶ ಕ್ರಿಯೆ ನಡೆಯುತ್ತವೆ .ಕಪ್ಪಗಿನ ಉದ್ದನೆಯ ನಾಲಿಗೆಯಿಂದ ಕುರುಚಲು ಸಸ್ಯ ಮರಗಿಡಗಳ ರಸಭರಿತ ಎಲೆ ಟೊಂಗೆಗಳನ್ನ ಎಳೆದು ತಿನ್ನುವ ಇವುಗಳಿಂದ ಆಫ್ರಿಕಾದ ಅರಣ್ಯ ಮತ್ತು ಹುಲ್ಲುಗಾವಲು ತುಂಬೆಲ್ಲಾ ಬೀಜಗಳ ಪ್ರಸಾರಣವಾಗುತ್ತದೆ. ಜಿರಾಫೆಗಳಿಲ್ಲದಿದ್ದರೆ ಆಫ್ರಿಕಾದ ಸವಾನ್ನಾ ಹಾಗು ಸರಂಗೇಟಿ ಯಂತ ವಿಸ್ತಾರವಾದ ಅರಣ್ಯ ಹುಲ್ಲುಗಾವಲುಗಳು ಭಾಗಶಃ ಅಳಿದು ಹೋಗುತ್ತವೆ. ಅಲ್ಲಿನ ಪರಿಸರದಲ್ಲಿ ಅಷ್ಟರ ಮಟ್ಟಿಗೆ ಪ್ರಧಾನವಾಗಿವೆ ಜಿರಾಫೆಗಳು.

ಇನ್ನೊಂದೆಡೆ Murchison falls ನ ಅರಣ್ಯವಲಯದಲ್ಲಿ ಮಾಂಸ ಮತ್ತು ಆನೆದಂತಕ್ಕೋಸ್ಕರ ಕಾಡುಗಳ್ಳರಿಂದ ವನ್ಯಪ್ರಾಣಿಗಳ ಹತ್ಯೆ, ಮಾರಾಟ ಇತ್ಯಾದಿ ಅನೈತಿಕ ಚಟುವಟಿಕೆಗಳಿಂದಾಗಿ ಅಲ್ಲಿನ ಪರಿಸ್ತಿತಿ ಸಂಪೂರ್ಣ ಹದಗೆಟ್ಟಿತ್ತು. ಅಲ್ಲಿನ ಸಾಮಾನ್ಯ ಕಾಡುಗಳ್ಳರ ಬಳಿ AK 47 ನಂತಹ ರೈಫಲ್ ಇರುವುದು ಸಾಮಾನ್ಯದ ಸಂಗತಿ. ತಾಂಜೇನಿಯಾದ ಕಾಡುಗಳ್ಳರು ನೂರಾರು ಫಾರೆಸ್ಟ್ ಗಾರ್ಡ ರೇಂಜರ್ಸ್ ಗಳನ್ನ ಒಂದೇ ವರ್ಷದಲ್ಲಿ ಕೊಂದು ಹಾಕಿದ್ದಾರೆ.

1996 ರಲ್ಲಿ ಅಲ್ಲಿನ ಸರಕಾರ ಅದುನಿಕ ಶಸ್ತ್ರಾಸ್ತಗಳಿಂದ ಸುಸಜ್ಜಿತವಾದ ವನ್ಯಜೀವಿ ಸಂರಕ್ಷಣಾ ಪಡೆಯನ್ನ ರಚಿಸಿತು. ಅಲ್ಲಿನ ನ್ಯಾಶನಲ್ ಆರ್ಮಿ ನೈಲ್ ನದಿಯ ಜಲಪಾತದ ಹತ್ತಿರದ ಕಾಡಿನಲ್ಲಿ (Murchison falls‌) ಬಿಡಾರ ಹೂಡಿದ್ದ ಕಾಡುಗಳ್ಳರನ್ನೂ ಬಂಡುಕೋರರನ್ನ ಸಶಕ್ತವಾಗಿ ಸದೆಬಡೆದರು. ಮರ್ಕಿಸನ್ ಜಲಪಾತದ ಸುತ್ತಲಿದ್ದ ಅರಣ್ಯಪ್ರದೇಶ ಸುರಕ್ಷವಲಯವಾದ್ದರಿಂದ Rothschild’s Giraffes ಗಳು ಚೂರು ಸುರಕ್ಷಿತವಾದವು

ಆದರೇ ಈ ಜಿರಾಫೆಗಳಿರುವ ಹುಲ್ಲುಗಾವಲು ಕುರುಚಲು ಅರಣ್ಯದ ಕೆಳಗಡೆ ಉಗಾಂಡಾದ ಹೇರಳ ಪೆಟ್ರೋಲಿಯಂ ಬಂಡಾರವಿರುವುದನ್ನ ಪತ್ತೇಹಚ್ಚಲಾಯ್ತು. ಭೂಮಿಯ ಆಳದಲ್ಲಿರುವ ಖನೀಜ ಹಾಗೂ ಪೆಟ್ರೊಲಿಯಂ ನಿಕ್ಷೇಪಗಳಿಗೋಸ್ಕರ ತೀವ್ರ ಪೈಪೋಟಿ ಶುರುವಾಗಿತ್ತು. ಅಮೇರಿಕಾ ಚೈನಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಅಲ್ಲಿ ಪೆಟ್ರೋಲಿಯಂ ಪಧಾರ್ಥಗಳನ್ನ ಹೊರತೆಗೆಯಲು ಬಂಡವಾಳ ಹಿಡಿದುಕೊಂಡು ತುದಿಗಾಲಮೇಲೆ ನಿಂತಿವೆ. ಆಯಿಲ್ ಹೊರತೆಗೆಯಲು ಪ್ಲಾನಿಂಗ್ ಕೂಡ ನಡೆಸಲಾಗಿದೆ.

ಆದರೇ ಈ ಅತ್ಯಮೂಲ್ಯ ಜಿರಾಫೆಗಳನ್ನ ಉಳಿಸುವುದು ಅವಶ್ಯವಾಗಿತ್ತು ಮತ್ತು ಅದೊಂದು ಕಠಿಣ ಸವಾಲಾಗಿತ್ತು. ಕೊನೆಗೆ ಜಿರಾಫೆಗಳನ್ನ ಆಯಿಲ್ ಡ್ರಿಲ್ಲಿಂಗ್ ಪ್ರದೇಶದಿಂದ ನೈಲ್ ನದಿಯ ಆಚೆಕಡೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಅದಕ್ಕೆಂದು ಇಪ್ಪತ್ತು ವರ್ಷಗಳಿಂದ ಇಲ್ಲಿನ ಜಿರಾಫೆಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದ ಆಸ್ಟ್ರೇಲಿಯಾದ ಫೆನ್ನಿಜೇ ಮತ್ತಾತನ ಪತ್ನಿ ಸ್ಟಿಫನೀ ಯವರ ನೇತ್ರತ್ವದಲ್ಲಿ ಆಪರೇಶನ್ #Twiga ನಡೆಸಿ ಜಿರಾಫೆಗಳನ್ನ ಸ್ಥಳಾಂತರಿಸಲು ಸುಸಜ್ಜಿತ ಪಡೆ ರಚಿಸಲಾಯ್ತು. ಆ ಕಾರ್ಯಾಚರಣೆಗೆ ದಕ್ಷ ಅಧಿಕಾರಿ Tom Okello ಅವರನ್ನ ನಿಯಮಿಸಲಾಯ್ತು. ಜಿರಾಫೆಗಳನ್ನ ಹಿಡಿಯುವುದರಲ್ಲಿ ಪರಿಣಿತರಾದ ಡಾ. Pete Morkel ಅವರನ್ನ ಕರೆಸಲಾಯ್ತು.

ದಕ್ಷ ಅಧಿಕಾರಿ ಕರೆನೀಡಿದ ಹಿನ್ನಲೆಯಲ್ಲೇ ಅಲ್ಲಿನ ಅರಣ್ಯ ಸಿಬ್ಬಂದಿ ಸರ್ವರೀತಿಯಲ್ಲಿ ಸನ್ನದ್ದರಾಗಿ ಬಂದಿತಾದರೂ ಬೃಹತ್ ಗಾತ್ರದ ಜಿರಾಫೆಗಳನ್ನ ಬಂದಿಸಿ ಸ್ಥಳಾಂತರಿಸುವುದು ಅಷ್ಟೋಂದು ಸುಲಭವಾಗಿರಲಿಲ್ಲ. ಜಿರಾಫೆಗಳನ್ನ ಬಂದಿಸುವುದು ಅಷ್ಟು ಸುಲಭವಲ್ಲ. ಅದರ ಕಾಲಿನ ಒದೆತಕ್ಕೆ ಸಿಂಹದ ಹೊಟ್ಟೆಯೇ ಸೀಳಿಹೋಗುತ್ತದೆಯಾದ್ದರಿಂದ ಮೊದಲು ಅಣಕುವ್ಯೂಹ್ಯ ರಚಿಸಿ ಅಭ್ಯಸಿಸಿದರು. ಜಿರಾಫೆಗಳು ಬಲವಾದ ತಮ್ಮ ಕತ್ತನ್ನ ಕಾದಾಡಲು ಸಲೀಸವಾಗಿ ಬಳಸಬಲ್ಲವು ಮತ್ತು ಕತ್ತಿನಿಂದಲೇ ಜೋರಾದ ಹೊಡೆತ ಕೊಡಬಲ್ಲವಾದ್ದರಿಂದ ಅವುಗಳ ಕತ್ತಿನಿಂದಲೂ ದೂರವಿರುವುದು ಅವಶ್ಯಕವಾಗಿತ್ತು. ಸಿಬ್ಬಂದಿಗೆ ಸಾಧ್ಯವಾದಷ್ಟು ಜಿರಾಫೆಯ ಕಾಲು ಕತ್ತು ಗಳಿಂದ ದೂರವಿದ್ದು ಕಾರ್ಯಾಚರಣೆ ಮಾಡುವುದಲ್ಲಿ ಪರಿಣಿತಿ ಪಡೆಯಬೇಕಾಗಿತ್ತು .ಈ ಟ್ರೇನಿಂಗ್ ಕಾರ್ಯಕ್ಕೆ ಡಾ Petel morkel ಅವರು ಜಿರಾಫೆಗಳ ಕಾಲು ಕತ್ತುಗಳಿಂದ ದೂರವಿದ್ದುಕೊಂಡೇ ಕಾರ್ಯಾಚರಣೆ ನಡೆಸುವ ರೀತಿಯ ಮಾರ್ಗದರ್ಶನವಿತ್ತರು. ಸಿಬ್ಬಂದಿಯವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಯೆಂದರೆ ಜಿರಾಫೆಗಳಿಗೆ ಒಂಚೂರು ಗಾಯವಾಗದಂತೆ ನೋಡಿಕೊಳ್ಳುವುದಾಗುತ್ತು. ಮತ್ತಿದೂ ಅತ್ಯಂತ ಸೂಕ್ಷ್ಮ ಮತ್ತು ಕಠಿಣ ಕಾರ್ಯಾಚರಣೆಯಾಗಿತ್ತು.

ಕಾರ್ಯಾಚರಣೆಗೆ ಸರ್ವ ಸನ್ನದ್ದರಾದ ಸಿಬ್ಬಂದಿ ವರ್ಗ ಬೆಳಗಿನ ಐದು ಗಂಟೆಗೆ ತಮ್ಮ ಜೀಪು ಮತ್ತು ಜಿರಾಫೆಗಳನ್ನ ಬಂದಿಸಿಡಲೆಂದೇ ತಯ್ಯಾರಿಸಲಾಗಿದ್ದ ವಿಶೇಷವಾದ ಬೃಹತ್ ಟ್ರಕ್ಕುಗಳ ಜೊತೆಗೆ ದಟ್ಟಕಾಡಿಗೆ ಹೊರಟರು.ಮರಿ ಜಿರಾಫೆಯೊಂದಕ್ಕೆ ಬಂದೂಕಿನಿಂದ ಅರವಳಿಕಾ (Sedative) ಮದ್ದಿನ ಸೂಜಿ ಹಾರಿಸಿ ಪ್ರಜ್ಞೆ ತಪ್ಪಿಸಿ ಬಂದಿಸಲು ಪ್ರಯತ್ನಿಸಿದಾದರೂ ಇಪ್ಪತ್ತು ನಿಮಿಷದಲ್ಲಿಯೇ ಅದರ ಆರೋಗ್ಯ ಸಂಪೂರ್ಣ ಪರೀಕ್ಷಿಸಿ ಅದು ಪ್ರಜ್ಞಾವಸ್ತೆಗೆ ಹಿಂತಿರುಗಲು (Antidote) ಇನ್ನೊಂದು ಸೂಜಿ ಚುಚ್ಚಬೇಕಾಗಿತ್ತು, ಮತ್ತು ಅಷ್ಟರೊಳಗೆ ಅದನ್ನ ಸುಸಜ್ಜಿತ ಟ್ರಕ್ಕಿನಲ್ಲಿ ಏರಿಸಬೇಕಾಗಿತ್ತು. ಅವರ ಮೊದಲ ಪ್ರಯತ್ನ ಸಂಪೂರ್ಣ ವಿಫಲವಾಯ್ತು.

ಛಲಬಿಡದ ಅರಣ್ಯ ಸಿಬ್ಬಂದಿಯವರು‌ ಮಧ್ಯಾಹ್ನದ ಹೊತ್ತಿಗೆ ಇನ್ನೊಂದು ಜಿರಾಫೆಯ ಕತ್ತು ಹೊಟ್ಟೆಗೆ ಹಗ್ಗ ಹಾಕಿ ಮುಖಕ್ಕೆ ಬಟ್ಟೆಯ ಹೊದಿಕೆಯಿಂದ ಮು‍ಚ್ಚಿ ಟ್ರಕ್ ಏರಿಸುವುದರಲ್ಲಿ ಸಫಲರಾದರು. ಇತ್ತಕಡೆ ಇನ್ನೊಂದು ಸಿಬ್ಬಂದಿಯವರು ಟ್ರಕ್ಕುಗಳಲ್ಲಿ ಕರೆತರುವ ಜಿರಾಫೆಗಳಿಗೋಸ್ಕರ ನದಿಯ ಪಕ್ಕದ ತೀರದಲ್ಲಿ ಕಟ್ಟಿಗೆಗಳಿಂದ ತಯ್ಯಾರಿಸಲಾದ ಎತ್ತರದ ಬೇಲಿ (Boma) ತಯ್ಯಾರಿಸಿದ್ದರು .ಜಿರಾಫೆಗಳು ಹೆಚ್ಚಾಗಿ ಸಂಘಜೀವಿಯಾದ್ದರಿಂದ ಒಂದೊಂದನ್ನೇ ಸಾಗಿಸುವುದು ಅಷ್ಟೋಂದು ಸಮಂಜಸವಲ್ಲವೆಂದು ಡಾ. Petel Morkel ಅಭಿಪ್ರಾಯಪಟ್ಟಿದ್ದರು.

ಒಂದೊಂದಾಗಿ ಎಲ್ಲಾ ಜಿರಾಫೆಗಳನ್ನ ಬಂದಿಸಿ ಟ್ರಕ್ ಮುಖಾಂತರ ನದಿಯ ತಟಕ್ಕೊಯ್ದು ಬೇಲಿಗಳಲ್ಲಿರಿಸಿ ಆನಂತರ ಮತ್ತೇ ಟ್ರಕ್ಕ್ ಸಮೇತ ಬಾರ್ಝಿಗೆ ಏರಿಸಿ ನೈಲ್ ನದಿಯ ಅತ್ತಕಡೆ ಇರುವ ಪ್ರದೇಶದಲ್ಲಿ ಬಿಡಲಾಯ್ತು. ಈ ಸಂಧರ್ಭದಲ್ಲಿ ಜಿರಾಫೆಗಳಿಗೆ ಈಜು ಬರುವುದಿಲ್ಲವಾದ್ದರಿಂದ ಅವಕ್ಕೆ ಇನ್ಸುರೆನ್ಸ್ ಮಾಡಿಸಲಾಗಿತ್ತು. ಈ ಎಲ್ಲಾ ಜಿರಾಫೆಗಳಿಗೆ ಸ್ಯಾಟಲೈಟ್ ರೇಡಿಯೋ ಕಾಲರ್ ಅಳವಡಿಸಿದ್ದು ಪ್ರತಿಕ್ಷಣವೂ ಅವುಗಳನ್ನ ಕಾಯಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆ ಇತಿಹಾಸದಲ್ಲೇ ಇದೊಂದು ರೋಚಕ ಘಟನೆ.

2016 ರಲ್ಲಿ ಆರಂಬವಾಗಿ 2020 ರಲ್ಲಿ ಈ ಕಾರ್ಯಾಚರಣೆ ಸಂಪೂರ್ಣಗೊಂಡಿತು. ಮೊದಲ ಹಂತದಲ್ಲಿ ಇಪ್ಪತ್ತು ಜಿರಾಫೆಗಳನ್ನ ಸ್ಥಳಾಂತರಿಸಲಾಗಿತ್ತು . ಪನ್ನೀಜೆ ಸ್ಟಿಫನಿ ದಂಪತಿಗಳು _ ಡಾ : Petel Morkel , Tom Okello ಸೇರಿದಂತೆ ಎಲ್ಲಾ ಸಿಬ್ಬಂದಿಯವರು ಯಶಸ್ವಿ ಕಾರ್ಯಾಚರಣೆಗೆ ಪರಸ್ಪರ ಅಭಿನಂದಿಸಿದರು. ಮತ್ತೀಗ ನೈಲ್ ನದಿಯ ಉತ್ತರಭಾಗದಲ್ಲಿ ಈ ಜಿರಾಫೆಗಳು ಒಂಚೂರು ನೆಮ್ಮದಿಯಾಗಿವೆಯಾದರೂ ರಿಪಬ್ಲಿಕ್ ಆಫ್ ಕಾಂಗೋ ದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಕಾಡುಗಳ್ಳರಿಂದ ಉಪಟಳ ಶುರುವಾಗಿದೆಯೆಂಬ ವರದಿಗಳಿವೆ.

ಮೃತ್ಯುಂಜಯ ನ. ರಾ.

Related post