ಆಫ್ರಿಕಾದ ಚೀತಾಗಳು ಭಾರತಕ್ಕೆ

ಆಫ್ರಿಕಾದ ಚೀತಾಗಳು ಭಾರತಕ್ಕೆ

ಹಲವು ತಿಂಗಳುಗಳಿಂದ ವನ್ಯಪ್ರಾಣಿ ಪ್ರಿಯರು ಕಾಯುತಿದ್ದ ಹಾಗೂ ಪರ ವಿರೋಧದ ಚರ್ಚೆಗಳಿಗೆ ಗ್ರಾಸವಾಗಿದ್ದ ‘ಆಫ್ರಿಕನ್ ಚೀತಾಗಳು’ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕಿಗೆ ಬಂದಾಗಿದೆ.

ಬಿಡುಗಡೆಯ ಸಮಯದಲ್ಲಿ

ಇಂದು ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದ ಪ್ರಯುಕ್ತ ಚೀತಾಗಳನ್ನು ಅದಕ್ಕೆಂದೇ ಮೀಸಲಿಟ್ಟದ್ದ ಕುನೋ ಅರಣ್ಯಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ನಮೀಬಿಯಾ ದಿಂದ ಬೋಯಿಂಗ್ 717 ವಿಶೇಷ ವಿಮಾನದಲ್ಲಿ ಇವುಗಳನ್ನು ತರಲಾಗಿದ್ದು ಭಾರತದಲ್ಲಿ ಏಷ್ಯಾಟಿಕ್ ಚೀತಾಗಳು ನಶಿಸಿಹೋದ 70 ವರ್ಷಗಳ ನಂತರ ಇದನ್ನು ಆಯೋಜಿಸಲಾಗಿದೆ. ಮುಂದಿನ ತಿಂಗಳು ಇನ್ನೂ ಹನ್ನೆರಡು ಚೀತಾಗಳು ಬರಲಿವೆ.

ಆಫ್ರಿಕಾದ ಚೀತಾಗಳನ್ನು ಭಾರತಕ್ಕೆ ಪರಿಚಯಿಸಿದ ಈ ಸಂಧರ್ಭದಲ್ಲಿ ಶ್ರೀ ನಾಗರಾಜ್ ಬೆಳ್ಳೂರ್ ರವರ ಲೇಖನದಲ್ಲಿ ಚೀತಾಗಳ ಬಗ್ಗೆ ವಿವರವಾದ ಮಾಹಿತಿ ನಿಮಗಾಗಿ…

ಚೀತಾ – Hunting Leopard

ಚೀತಾ ಅಥವಾ ಸೀವಂಗಿ ಬೆಕ್ಕಿನ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸಸ್ತನಿ, ಇದರ ಹೋಲಿಕೆ ಸಾಧಾರಣವಾಗಿ ಚಿರತೆಯದ್ದು, ಮೈ ಮೇಲೆ ಚಿಕ್ಕ ಕಲೆಗಳಿವೆ, ಇವು ಬೊಟ್ಟು ಇಟ್ಟಂತೆ ಕಪ್ಪಾಗಿವೆ, ಉದ್ದ ಕಾಲು,ಎತ್ತರ ಸೊಂಟ ತೆಳು ಶರೀರ ವೇಗದ ಓಟಕ್ಕೆ ಹೇಳಿ ಮಾಡಿಸಿದಂತಿವೆ. ಇದು ಜಗತ್ತಿನಲ್ಲೇ ಅತೀ ವೇಗದ ಪ್ರಾಣಿ ತಾಸಿಗೆ 100 ಕಿ,ಮೀ ವೇಗದಲ್ಲಿ ಓಡಬಲ್ಲದು.

ಚೀತಾ ಕಣ್ಣುಗಳ ಒಳ ಭಾಗದ ಅಂಚಿನಿಂದ ಬಾಯಿಯವರೆಗೆ ಎದ್ದು ಕಾಣುವ ಎರಡುಗೆರೆಗಳಿಂದಾಗಿ ನೋಡಲು ಸ್ವಲ್ಪ ಅಳು ಮುಖದ ಪ್ರಾಣಿಯಂತೆ ಕಾಣುತ್ತದೆ, ಇದರ ಕೂದಲು ಚಿರತೆಯಂತೆ ನಯವಲ್ಲ, ಸ್ವಲ್ಪ ಒರಟು.ಬೆಕ್ಕಿನಂತೆ ಗುರುಗುಟ್ಟುವ ಸ್ವಭಾವ,ಗರ್ಜನೆಯ ಧ್ವನಿ ಇಲ್ಲ. ಮರಿಗಳನ್ನು ಕರೆಯುವಾಗ or ಮರಿಗಳಿಗೆ ಅಪಾಯವಿದ್ದಾಗ ಬೇರೆ ಬೇರೆ ಧ್ವನಿಯನ್ನು ಹೊರಡಿಸುತ್ತವೆ.

ಆಂಗ್ಲದಲ್ಲಿ ಇದಕ್ಕೆ ಚೀತಾ ಅಥವಾ ಹಂಟಿಂಗ್ ಲೆಪರ್ಡ್ ಎನ್ನುವರು , ನಮ್ಮಲ್ಲಿ ಬೇಟೆ ಚಿರತೆ ಎನ್ನುತ್ತಾರೆ. ಚೀತಾ ಈ ಹೆಸರು ನಮ್ಮ ದೇಶದ್ದು ಚೀತಾ ಎಂದರೆ ಕಲೆಯುಳ್ಳ ಎಂದು ಅರ್ಥ.

40-70 Kg ಭಾರವಿರುವ ಇದರ ಜೀವಿತಾವಧಿ ಸುಮಾರು 15 ವರ್ಷಗಳು, ಹೆಣ್ಣಿಗಿಂತ ಗಂಡು ದೊಡ್ಡದು, ಮರ ಏರಬಲ್ಲದು ಆದರೆ ಇಳಿಯುವಾಗ ಹಾರುತ್ತದೆ ಕಾರಣ ಇದಕ್ಕೆ ಬೆಕ್ಕುಗಳಂತೆ ಉಗುರುಗಳು ಇರುವುದಿಲ್ಲ!!!
ಹೌದು ಬೆಕ್ಕಿನ ಬಳಗದ ಎಲ್ಲಾ ಪ್ರಾಣಿಗಳ ಉಗುರುಗಳು ಓಡಾಡುವಾಗ ಒಳಗೆ ಮುಚ್ಚಿಕೊಂಡಿರುತ್ತವೆ, ಆದರೆ ಚೀತಾದ ಉಗುರುಗಳು ಯಾವಾಗಲು ಹೊರಗೆ ಚಾಚಿಕೊಂಡಿರುತ್ತವೆ ಒಳಕ್ಕೆ ಮಡಚುವುದಿಲ್ಲ.

ಹೆಣ್ಣು ಚೀತಾಗಳು 2 ವರ್ಷದ ನಂತರ ಬೆದೆಗೆ ಬರುತ್ತವೆ, ಗರ್ಭಾವಧಿ 90-92 ದಿನಗಳು , ಒಂದು ಸೂಲದಲ್ಲಿ 1-6 ಮರಿ ಹಾಕುತ್ತವೆ. ಮರಿಗಳು 10 ದಿನಗಳ ನಂತರ ಕಣ್ಣು ತೆರೆಯುತ್ತವೆ.

ಬೇಟೆಯ ತಂತ್ರ

ಚೀತಾ ವೇಗದ ಪ್ರಾಣಿಯಾದರೂ ಬೇಟೆಯನ್ನು ಹಿಡಿಯುವಾಗ ಬಹಳ ದೂರ ಓಡುವುದಿಲ್ಲ. ಗಂಟೆಗೆ 100 ಕಿಮೀ ವೇಗದಲ್ಲಿ ಚಿಂಕಾರ (Guzzle) ಗಳನ್ನು ಬೆನ್ನಟ್ಟಿದಾಗ ದೇಹದ ಉಷ್ಣತೆ ಏರುತ್ತದೆ , ಹೃದಯ ಬಡಿತ ಗರಿಷ್ಠ ವೇಗ ತಲುಪುತ್ತದೆ ಹಾಗಾಗಿ ಕೆಲವೇ ಸೆಕೆಂಡುಗಳ ಒಳಗೆ ಬಲಿ ಪ್ರಾಣಿ ಹಿಡಿಯಬೇಕು ಇಲ್ಲವೆ ಬೆನ್ನಟ್ಟುವುದನ್ನು ನಿಲ್ಲಿಸಬೇಕು, ಹೀಗೆ ಮಾಡದಿದ್ದರೆ ಚೀತಾದ ಹಾರ್ಟ್ ಫೇಲ್ಯೂರ್ ಆಗಬಹುದು ಅಥವಾ ಸ್ನಾಯು ಕುಸಿತ (muscle collapse) ಆಗಬಹುದು. ಹಾಗಾಗಿ ಬೇಟೆಯನ್ನು 20 ಸೆಕೆಂಡ್ ಗಳಿಂದ ಸುಮಾರು ಒಂದು ನಿಮಿಷದ ಒಳಗಾಗಿ ಹಿಡಿಯುವ ವೀಡಿಯೋಗಳನ್ನು ನೋಡುತ್ತೇವೆ.

ಚೀತಾ ಅಪಾಯಕಾರಿಯಲ್ಲ , ಚಿರತೆ (leopard) ಗಳು ಮನುಷ್ಯನ ಮೇಲೆರಗಿ ಕೊಂದ ಘಟನೆಗಳು ಬಹಳಷ್ಟಿವೆ, ಆದರೆ ಚೀತಾ ಮನುಷ್ಯರಿಗೆ ಹಾನಿ ಮಾಡಿದೆ ಯಾವುದೇ ದಾಖಲೆಗಳು ಇಲ್ಲ. ಮಹರಾಜರ ಕಾಲದಲ್ಲಿ ಇವುಗಳನ್ನ ಸಾಕಿ ಪಳಗಿಸಿ ಬೇಟೆಗೆ ಬಳಸುತ್ತಿದ್ದರು.

ನಮ್ಮ ದೇಶದಲ್ಲಿಯೂ ಚೀತಾ ಇತ್ತು ಈಗ ಚೀತಾ ಗಳು ಆಫ್ರಿಕಾದಲ್ಲಿವೆ ಆದರೆ ಹಿಂದೊಮ್ಮೆ Asiatic ಚೀತಾ ನಮ್ಮ ದೇಶದಲ್ಲೂ ಇತ್ತು. ನಮ್ಮ ದೇಶದ ಪ್ರಬೇಧವನ್ನು Acinonyx jubatus venticus ಎಂದು ಕರೆಯುತ್ತಾರೆ, 1900-1950 ಇಸವಿಯ ನಡುವೆ ನಡೆದ ಬೇಟೆಯಂತಹ ಅಮಾನುಷ ಹತ್ಯೆಗಳು ಇವುಗಳನ್ನು ವಿನಾಶದತ್ತ ತಂದವು ವಿನೋದಕ್ಕಾಗಿ ನಡೆದ ಕೃತ್ಯಗಳು, Trophy Hunting ಇನ್ನಿಲ್ಲದಂತೆ ನಡೆದವು. ನಮ್ಮ ದೇಶದಲ್ಲಿ ಇವುಗಳ ಕೊನೆಯ ಅಧಿಕೃತ ದಾಖಲೆ ಎಂದರೆ ಮದ್ಯ ಪ್ರದೇಶದ ಬಸ್ತಾರ ಜಿಲ್ಲೆಯಲ್ಲಿ 3 ಗಂಡು ಚೀತಾಗಳನ್ನು ಗುಂಡಿಕ್ಕಿ ಕೊಂದದ್ದು. ಆ ನಂತರ ಇವುಗಳನ್ನು ನೋಡಿದ ದಾಖಲೆ ಇಲ್ಲ.ಇರಾನಿನ ಕೆಲವು ಭಾಗದಲ್ಲಿ ಈಗಲೂ ಏಷಿಯಾಟಿಕ್ ಚೀತಾ ಬೆರಳೆಣಿಕೆಯಷ್ಟಿವೆ (Critically endangered) ಅವುಗಳು ಕೂಡ ವಿನಾಶದಂಚಿನಲ್ಲಿವೆ. ನಮ್ಮ ದೇಶದಲ್ಲಿ ಚೀತಾ ಅಳಿದು ಹೋದ ಪ್ರಾಣಿಗಳ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಕುನೋ ಅರಣ್ಯಪ್ರದೇಶದಲ್ಲಿ

ನಮ್ಮಲ್ಲಿರುವ ಕೃಷ್ಣಮೃಗ, ಚಿಂಕಾರಗಳನ್ನು ಬೆನ್ನಟ್ಟಿ ಹಿಡಿಯುವುದು ಚೀತಾಗೆ ಮಾತ್ರ ಸಾಧ್ಯ.ಆದರೆ ಚೀತಾ ನಮ್ಮಲ್ಲಿ ಇರಲಿಲ್ಲ. ಭಾರತದಲ್ಲಿ ಆಫ್ರಿಕಾ ಚೀತಾವನ್ನು ನಮ್ಮ ಕಾಡಿಗೆ ಪರಿಚಯಿಸುವ ಯೋಜನೆಗೆ ಕೋರ್ಟ್ ಕೂಡ ಅಸ್ತು ಎಂದು ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತಂದಾಗಿದೆ, ಚೀತಾಗಳು ಬೇಟೆಯನ್ನು ಓಡಿಸಿ ಹಿಡಿಯುವುದರಿಂದ ಅವುಗಳಿಗೆ ಕೃಷ್ಣಮೃಗ, ಚಿಂಕಾರ, ಜಿಂಕೆಗಳಿರುವ ವಿಶಾಲ ಬಯಲುಗಳ ಕುರುಚಲು ಕಾಡಿನ ಅಗತ್ಯ ಇದೆ, ಈ ಬಯಲುಗಳು 800 – 1000 ಚದುರ ಕಿಮೀ ವಿಶಾಲವಾಗಿರಬೇಕು ಹಾಗು ಮಾನವನ ಹಸ್ತಕ್ಷೇಪ ಇರಬಾರದು ಆದರಿಂದ ಇದಕ್ಕಾಗಿಯೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜಾಗವನ್ನು ಮೀಸಲಿಟ್ಟಿತು. ಆದರೂ ಇದರ ಜಾಗ ಚೀತಾಗಳಿಗೆ ಸಾಕಾಗುವುದಿಲ್ಲ ಎಂಬುದು ವನ್ಯತಜ್ಞರ ಅಭಿಪ್ರಾಯ.

ಆಫ್ರಿಕಾದ ಚೀತಾಗಳನ್ನು ಭಾರತಕ್ಕೆ ಪರಿಚಯಿಸುತ್ತಿರುವ ಈ ಹೊತ್ತಲ್ಲಿ, ಭಾರತದ ವನ್ಯಜೀವಿಯೊಂದನ್ನು ಪರ ದೇಶದಲ್ಲಿ ಪರಿಚಯಿಸಿ ಯಶಸ್ವಿಯಾದ ಘಟನೆಯ ಕುರಿತು ನೋಡೋಣ.
ಇಲ್ಲಿ ಯಶಸ್ಸಿನ ಕಾರಣಗಳನ್ನು ಬದಿಗಿಡೋಣ, ಇದೇ ರೀತಿ ನಮ್ಮಲ್ಲಿ ಚೀತಾ ಪರಿಚಯಿಸುವ ಯೋಜನೆ ಯಶಸ್ವಿಯಾಗುತ್ತದೆ ಅಂತಾನೂ ಅಲ್ಲ, ಆಗುವುದಿಲ್ಲ ಅಂತಾನೂ ಅಲ್ಲ. ಕಾದು ನೋಡಿದರಾಯಿತು.
ನಮ್ಮಲ್ಲಿನ ಕೃಷ್ಣಮೃಗ, ಗಂಡೆರಳೆ ಅಥವಾ ಬ್ಲಾಕ್ ಬಕ್ ಹುಲ್ಲೆಯನ್ನು (antelope) 1930 ರ ದಶಕದಲ್ಲಿ ಭಾರತದಿಂದ ಒಯ್ದು ಅಮೆರಿಕಾದ ಟೆಕ್ಸಾಸ್ ರಾಜ್ಯದ ಕುರುಚಲು ಕಾಡು ಹಾಗೂ ಹುಲ್ಲುಗಾವಲಿನಿಂದ ಕೂಡಿದ ಎಡ್ವರ್ಡ್ ಪ್ರಸ್ಥಭೂಮಿಯಲ್ಲಿ ಪರಿಚಯಿಸಲಾಯಿತು. ಅಲ್ಲಿ ಕೃಷ್ಣಮೃಗಗಳ ಸಂತಾನ ಯಶಸ್ವಿಯಾಗಿ ಬೆಳೆದು ಈಗ 20 ಸಾವಿರಕ್ಕೂ ಅಧಿಕ ಕೃಷ್ಣಮೃಗಗಳನ್ನು ಕಾಣಬಹುದು,ಅಲ್ಲಿ ವಿನೋದಕ್ಕಾಗಿ ಟ್ರೋಪಿ ಹಂಟ್ ನಡೆಸಿ ಕೆಲವು ಕೃಷ್ಣಮೃಗಗಳನ್ನು ಕೊಲ್ಲಲಾಗುತ್ತದೆ.

ಅನ್ಯಗ್ರಹಗಳಲ್ಲಿ ಜೀವಿಗಳು ಇವೆಯೇ ಎಂದು ದೂರದರ್ಶಕ ಹಿಡಿದು ಕೂರುವ ನಾವು ನಮ್ಮಲ್ಲಿರುವ ಭೂ ಗ್ರಹ ಹಾಳು ಮಾಡಿ , ಇಲ್ಲಿನ ಜೀವಿಗಳ ನಾಶಕ್ಕೆ ಕಾರಣರಾಗಿದ್ದೇವೆ.ಇಲ್ಲಿನ ಸ್ಥಳೀಯ ಜೀವ ವೈವಿಧ್ಯತೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿರುವಾಗ, ದೂರದ ಖಂಡದಿಂದ ಪ್ರಾಣಿಗಳನ್ನು ತಂದು ನಮ್ಮ ಕಾಡಿಗೆ ಬಿಡುವ ಅಗತ್ಯ ಇದೆಯೆ? ಈ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.

ನಾಗರಾಜ್ ಬೆಳ್ಳೂರ್
ನಿಸರ್ಗ ಕನ್ಸರ್ವೇಷನ್ ಟ್ರಸ್ಟ್
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *