ಆಯುರ್ವೇದಿಯ ಔಷದಿಗಳೆಷ್ಟು ಸುರಕ್ಷಿತ ?

ಆಯುರ್ವೇದಿಯ ಔಷದಿಗಳೆಷ್ಟು ಸುರಕ್ಷಿತ ?

ಆಯುರ್ವೇದಿಯ ಔಷದಶಾಸ್ತ್ರಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಶತಶತಮಾನಗಳಿಂದಲೂ ಕೆಲವೊಂದು ಗಿಡಮೂಲಿಕೆಗಳನ್ನು ನಾರುಬೇರುಗಳನ್ನು ಔಷದಿಯಾಗಿ – ಆಹಾರವಾಗಿ ಬಳಸುತ್ತಿದ್ದಾರೆ. ಆಯುರ್ವೇದ ಔಷದಿಗಳು ನೈಸರ್ಗಿಕವಾಗಿ ದೊರೆಯುವುದರಿಂದ ಇವು ಸುರಕ್ಷಿತ ಎಂಬ ತಪ್ಪು ತಿಳುವಳಿಕೆ ಜನ ಸಾಮಾನ್ಯರಲ್ಲಿದೆ. ಇತ್ತೀಚಿನ ಸಂಶೋಧನೆಗಳು ಇವುಕೂಡ ಅಸುರಕ್ಷಿತ ಹಾಗೂ ಅಡ್ಡಪರಿಣಾಮ ಬಿರಬಲ್ಲದು ಎಂದು ಸಾಬೀತು ಪಡಿಸಿದೆ.

ದೇಶದಲ್ಲಿ ದೊರೆಯುವ ಹಲವಾರು ಆಯುರ್ವೇದ ಔಷದಿಗಳಿಗೆ ಅವುಗಳು ಉಪಯೋಗಕ್ಕೆ ಎಷ್ಟು ಸುರಕ್ಷಿತ ಎಂಬ ದಾಖಲೆ, ಅಥವಾ ಅವರಲ್ಲಿರುವ ವಿಷಯುಕ್ತ ವಸ್ತುಗಳು (Toxic substances) ಯಾವ ಪ್ರಮಾಣದಲ್ಲಿದೆ ? ಹಾಗೂ ಈ ಗಿಡಮೂಲಿಕೆಗಳನ್ನು ಅವುಗಳ ಉತ್ಪನ್ನಗಳ ತಯಾರಿಕೆಗೆ ಕನಿಷ್ಟ ಮಾನದಂಡಗಳು ಹಾಗೂ ಗುಣಮಟ್ಟ ನಿಯಂತ್ರಣ ಖಾಯಿದೆಗಳಿಲ್ಲದಿರುವುದು ಆಯುರ್ವೇದ ಉತ್ಪನ್ನಗಳು ಅಸುರಕ್ಷಿತವೆಂದೇ ಹೇಳುತ್ತದೆ. ಆಯುರ್ವೇದ ಔಷದಿಗಳಲ್ಲಿ ಅಡ್ಡಪರಿಣಾಮಗಳಿರುವುದಿಲ್ಲ ಎಂಬ ಕಾರಣಕ್ಕೆ ಅವು ತುಂಬಾ ಪಾಪ್ಯುಲರ್ ! ಮನುಷ್ಯನ ಹುಟ್ಟಿನೊಂದಿಗೆ ಈ ನಾರು ಬೇರುಗಳ ಉಪಯೋಗ ಆಗುತ್ತ ಬಂದಿದೆ. ನಮ್ಮ ಇತ್ತೀಚಿನ ಕೆಲ ರಕ್ತದೊತ್ತಡ ನಿವಾರಕಗಳು ಡಿಜಿಟಾಕ್ಸಿನ್, ಅಟ್ರೋಸಿನ್ ಹಾಗೂ ಅಟ್ರೋವಿನ್ ನಾರ್‌ಕೋಟಿಕ್ ಉತ್ಪನ್ನಗಳು ಗಿಡ ಮೂಲಿಕೆಗಳಿಂದಲೇ ಸಂಸ್ಕರಿಸಿ ಶುದ್ದಪಡಿಸಿರುವಂತವು. ಒಂದು ಅಂದಾಜಿನ ಪ್ರಕಾರ ಪ್ರಪಂಚದ ಶೇ 80 ರಷ್ಟು ಜನಸಂಖ್ಯೆ ಇಂದಿಗೂ ಕೂಡ ಈ ಸಾಂಪ್ರದಾಯಿಕ ಗಿಡಮೂಲಿಕೆಗಳ ಔಷದವನ್ನು ಅವಲಂಬಿಸಿದ್ದಾರೆ. ಯೂರೇಪ್‌ನಂತಹ ದೇಶದಲ್ಲೂ ಕೂಡ ಈ ಆಯುರ್ವೇದಿಯ ಔಷದಿಗಳು ಔಷದೋದ್ಯಮದ ಬಹುಪಾಲು ಷೇರನ್ನು ಆಕ್ರಮಿಸಿದೆಯೆಂದರೆ ಆಶ್ವರ್ಯವಾಗುತ್ತದೆ ಅಲ್ಲವೇ ?

ಹಲವಾರು ರೋಗಿಗಳು ಅದರಲ್ಲೂ ನಮ್ಮ ಭಾರತದಲ್ಲಿ ಖಾಯಿಲೆ ಬಿದ್ದಾಗ ಮನೆಯಲ್ಲೇ ತಲತಲಾಂತರದಿಂದ ಬಂದ ನಾರು ಬೇರಿನ ಔಷದಿಯನ್ನು ಸಿದ್ದ ವೈದ್ಯರಿಂದ ತೆಗೆದುಕೊಳ್ಳುವ ಪರಿಪಾಠವಿದೆ, ಹಲವಾರು ನಾರು ಬೇರುಗಳು ಔಷದಿಯ ಗುಣವುಳ್ಳದ್ದು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಇದರಲ್ಲಿರುವ ಯಾವ ಅಂಶ ಖಾಯಿಲೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಇನ್ನೂ ಅಸ್ಪಷ್ಟ ಏಕೆಂದರೆ ಗಿಡಮೂಲಿಕೆಯಲ್ಲಿ ಒಂದೇ ರೀತಿಯ ರಾಸಾಯನಿಕ ಅಂಶವಿರುವುದಿಲ್ಲ. ರಾಸಾಯನಿಕ ಮಿಶ್ರಣದಲ್ಲಿ ಯಾವುದೇ ಒಂದು ನಿಮ್ಮ ಖಾಯಿಲೆಯನ್ನು ಗುಣಪಡಿಸಬಹುದು, ಹಾಗಾದರೆ ಉಳಿದ ರಾಸಾಯನಿಕ ಅಂಶಗಳು ನಿಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಗೊತ್ತಿದೆಯೇ ? ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ! ಉಳಿದ ರಾಸಾಯನಿಕಗಳ ಅಂಶ ನಮ್ಮ ಮೇಲೆ ಅಡ್ಡ ಪರಿಣಾಮ ಬೀರಬಹುದಲ್ಲವೇ ? ಅಲ್ಲದೇ ಈ ರೀತಿ ತಯಾರಾಗಿ ಮಾರುಕಟ್ಟೆ ಪ್ರವೇಶಿಸುವ ಆಯುರ್ವೇದಿಯ ಔಷದಿಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶ ಹಾಗೂ ಖಾಯಿಲೆಗೆ ಇದನ್ನು ತೆಗೆದುಕೊಂಡಾಗ ಯಾವ ರೀತಿ ಖಾಯಿಲೆಯನ್ನು ಹೋಗಲಾಡಿಸುತ್ತವೆ, ಇವುಗಳ ಪ್ರಭಾವ ಹಾಗೂ ಸುರಕ್ಷೆತೆಯ ವಿಷಯಗಳು, ಸಾಭೀತಾಗದೇ ಇರುವುದು ಇವುಗಳು ಸೇವನೆಗೆ ಯೋಗ್ಯವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ಶತಶತಮಾನಗಳಿಂದ ಈ ನಾರು ಬೇರುಗಳು ಉಪಯೋಗವಾಗುತ್ತಿದ್ದರೂ ಅವು ಹೇಗೆ ಪರಿಣಾಮ ಬಿರುತ್ತದೆ ಎಂಬ ಬಗ್ಗೆ ಸಾಕ್ಷ್ಯಾಧಾರಗಳು ಇಲ್ಲ ಈ ರೋಗಕ್ಕೆ ಈ ನಾರು ಬೇರು ಎಂಬ ಅನುಭವದ ಆಧಾರದ ಮೇಲೆ ಇದು ನೆಡೆದುಕೊಂಡು ಬಂದಿದೆಯೆಂದರೆ ತಪ್ಪೇನಿಲ್ಲ! ಅಲ್ಲದೇ ನಮ್ಮ ದೇಹಕ್ಕೆ ಯಾವುದಾದರೂ ಸಣ್ಣಪುಟ್ಟ ಕಾಯಿಲೆ ಬಂದರೆ 3-4 ದಿನದಲ್ಲಿ ನಮ್ಮ ದೇಹದ ಆ್ಯಂಟಿಬಾಡೀಸ್‌ಗಳಿಂದ ರೋಗ ನಿರೋಧಕ ಶಕ್ತಿಯಿಂದಾಗಿಯೂ ಖಾಯಿಲೆ ಗುಣವಾಗಿಬಹುದು ಅಲ್ಲವೇ ?

ಈ ಆಯುರ್ವೇದಿಕ ಔಷಧಿಗಳು ಕಾನೂನು ರೀತಿಯಲ್ಲಿ ಒಪ್ಪಿಕೊಂಡಿರುವ ಅಲೋಪತಿ ಔಷದಿಗಳಿಗೆ ಸಮನಾಗುವುದಿಲ್ಲ ಎಂದರೆ ತಪ್ಪೇನಿಲ್ಲ ! ಹಲವಾರು ಆಯುರ್ವೇದಿಯ ಔಷದಿಗಳನ್ನು ಕಷಾಯದ ಪುಡಿ, ಟೀ ಪುಡಿ ಹಾಗೂ ಪುಡ್ ಸಪ್ಲಿಮೆಂಟ್‌ಗಳ ರೂಪದಲ್ಲಿ ಮಾರಾಟ ಮಾಡುತ್ತಾರೆ ಏಕೆಂದರೆ ಆಹಾರ ರೂಪದಲ್ಲಿದ್ದರೆ ಅದರ ಪರಿಣಾಮ ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ನಮೂದಿಸಬೇಕಾಗಿಲ್ಲ “ ಔಷದಿ ಗುಟುಕಿನ (DOSE) ರೂಪದಲ್ಲಿ ಡಾಕ್ಟರ್‌ ರಿಂದ ಬರೆಯಲ್ಪಟ್ಟರೆ ಅದರ ಪರಿಣಾಮ ಸಾಬೀತಾಗಿದೆಯೆಂದು ಅರ್ಥ “. ಇನ್ನು ಅಲೋಪತಿ ಔಷದಿಗಳು ತಯಾರಿಕೆಗೆ ಅತ್ಯಂತ ಕಠಿಣವಾದ ಪರೀಕ್ಷಾ ಮಾನದಂಡವಿದೆ ಆದರೆ ಆಯುರ್ವೇದ ಔಷದಿಗಳ ತಯಾರಿಕೆಗೆ ಇಂತಹ ಮಾನಂಡಗಳಲ್ಲದಿರುವುದು ಇವುಗಳ ಮಾರಟಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ಆಯುರ್ವೇದಿಯ ಔಷದಿಗಳನ್ನು ಉಪಯೋಗಿಸುವ ಮುನ್ನ ಗ್ರಾಹಕರು ಒಮ್ಮೆ ಯೋಚಿಸಬೇಕಾಗಿದೆ.

ಗುಡುಚಿ

ಈ ಆಯುರ್ವೇದ ಗಿಡಮೂಲಿಕೆಗಳಲ್ಲಿ ಅವುಗಳಲ್ಲಿರುವ ರಾಸಾಯನಿಕ ಅಂಶ ಅಥವಾ ಔಷದೀಯ ಗುಣ ಅವು ಬೆಳೆಯುವ ಮಣ್ಣಿನಗುಣ, ಸಸ್ಯದ ವಂಶವಾಹಿ, ವಾತಾವರಣ, ತೇವಾಂಶ, ಬೆಳಕು ಎಲ್ಲವನ್ನು ಅವಲಂಬಿಸಿರುತ್ತದೆ, ಉದಾಹರಣೆ ಉತ್ತಮ ಗುಣಮಟ್ಟದ, ಮಣ್ಣು ತೇವಾಂಶ, ಬೆಳಕು ಹಾಗೂ ಸರಿಯಾದ ಸಮಯದಲ್ಲಿ ಕಿತ್ತು ಸಂರಕ್ಷಿಸಲ್ಪಟ್ಟ ಗುಡುಚಿಯಲ್ಲಿ ಔಷದೀಯ ಗುಣ ಹೆಚ್ಚಿನ ಪ್ರಮಾಣದಲ್ಲಿರಬಹುದು ಆದರೆ ಇವುಗಳ ವಿರುದ್ಧ ವಾತಾವರಣದಲ್ಲಿ ಬೆಳೆದ ಗುಡುಚಿಯಲ್ಲಿ ಔಷದೀಯ ಗುಣ ಕಡಿಮೆ ಪ್ರಮಾಣದಲ್ಲಿರಬಹುದು ಇದರ ಮಟ್ಟವನ್ನು ಪತ್ತೆ ಹಚ್ಚಲು ಯಾವುದೇ ರೀತಿಯ ಪರೀಕ್ಷೆಗಳಿಲ್ಲ ಅಲ್ಲದೇ ಇಂತಹ ಸಮಯದಲ್ಲಿ ಇದರಿಂದ ತಯಾರಾದ ಔಷದಿಯ “ಗುಟುಕನ್ನು” (DOSE) ನಿರ್ಧರಿಸುವುದು ಕಷ್ಟವಾಗುತ್ತದೆ !

ಸಾಂಪ್ರದಾಯಿಕ ರೀತಿಯಲ್ಲಿ ಇವುಗಳನ್ನು ಕಿತ್ತುವುದು ಕತ್ತರಿಸುವುದು, ಹಾಗೂ ಇವುಗಳನ್ನು ಸರಿಯಾಗಿ ಸಂರಕ್ಷಿಸದೇ ಹೋದಲ್ಲಿ ಈ ನಾರು ಬೇರುಗಳಿಗೆ ಶೀಲಿಂದ್ರಗಳ ದಾಳಿ ತಪ್ಪಿದ್ದಲ್ಲ. ಸಸ್ಯಶಾಸ್ತ್ರದ ಬಗ್ಗೆ ತಿಳುವಳಿಕೆ ಇಲ್ಲದೇ ಇನ್ಯಾವುದೇ ಸಸ್ಯಗಳನ್ನು ಔಷದೀಯ ತಯಾರಿಕೆಯಲ್ಲಿ ಬಳಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆಯುರ್ವೇದಿ ಔಷದಿಗಳ ತಯಾರಿಕಾ ಕಂಪನಿಗಳಲ್ಲಿ ಉಪಯೋಗಿಸುವ ನಾರುಬೇರುಗಳು ಹಾಗೂ ಅಂತಿಮ ಪದಾರ್ಥಗಳು ಸಾಮಾನ್ಯವಾಗಿ ನೋಡಲು ಒಂದೇ ರೀತಿ ಕಾಣುತ್ತದೆ.

ಉತ್ತಮ ರೀತಿಯ ಗುಣಮಟ್ಟ ನಿಯಂತ್ರಣ ವಿಧಾನಗಳಿಲ್ಲದಿದ್ದರೆ ಇವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಲೇಬಲ್ ಮೇಲೆ ನಮೂದಿಸಿರುವ ಪದಾರ್ಥಗಳೆಲ್ಲವೂ ಔಷದಿಯೊಳಗೆ ಇದೆಯೆಂದು ಹೇಳುವ ಯಾವುದೇ ರೀತಿಯ ಗುರುತುಹಚ್ಚುವ ಪ್ರಯೋಗಗಳು ಆಯುರ್ವೇಧ ಔಷದಿಗಳಿಗೆ ಮಾಡುವುದಿಲ್ಲ, ಇದ್ದರೂ ನಿಖರವಾಗಿ ಅದರ ಪ್ರಮಾಣ ಎಷ್ಟಿದೆಯೆಂದು ಹೇಳುವುದಿಲ್ಲ. ಆಯುರ್ವೇದ ಔಷದಿಗಳ ಲೇಬಲ್ ಮೇಲೆ (APPROXIMATELY) ಎಂದರೆ ‘ಸರಿಸುಮಾರು’ ಎಂದು ನಮೂದಿಸಿರುವುದನ್ನು ನೀವು ಗಮನಿಸಿರಬಹುದು. ಈ ಸರಿ ಸುಮಾರು ಪ್ರಮಾಣ ಕೂಡ ಅದಲ್ಲಿರುವ ನಾರು ಬೇರಿನ ಪುಡಿಯ ಪ್ರಮಾಣವೇ ಹೊರತು ಅದರಲ್ಲಿರುವ ರಾಸಾಯನಿಕ ಅಂಶವೆಂಬುದಲ್ಲವೆಂದು ಇಲ್ಲಿ ಗಮನಿಸಬೇಕು. ಅದೇ ಅಲೋಪತಿಕ್ ಔಷಧಿಯನ್ನು ಗಮನಿಸಿ ಕರಾರುವಕ್ಕಾಗಿ ಇಷ್ಟೇ ಪ್ರಮಾಣದಲ್ಲಿ ಔಷಧಿ ಪ್ರತಿ ಮಾತ್ರೆಯಲ್ಲಿ ಅಥವಾ ಕ್ಯಾಪ್ಸೂಲ್‌ನಲ್ಲಿದೇ ಎಂದು ಹೇಳುತ್ತದಲ್ಲದೇ ಕರಾರುವಕ್ಕಾಗಿ ಅಷ್ಟೇ ಪ್ರಮಾಣದಲ್ಲಿ ಇದೆಯೇ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವ ಪರೀಕ್ಷೆಗೆ ಕೂಡ ಈ ಅಲೋಪತಿಕ್ ಔಷದಿಗಳು ಒಳಪಟ್ಟಿರುತ್ತದೆ. ಆಯುರ್ವೇದ ಔಷದಿಗಳಿಗೂ ಕೂಡ ಈ ಕಾರ್ಯ ಆಗಬೇಕಾಗಿದೆ, ಮೊದಲೆ ತಿಳಿಸಿದಂತೆ ಅಲೋಪತಿಕ್ ಔಷದಗಳ ತಯಾರಿಕೆಯಲ್ಲಿ ಔಷದೀಯ ಗುಣ ಹೊಂದಿರುವ ರಾಸಾಯನಿಕವನ್ನು ಗುರುತಿಸುವ, ಅದರ ಗುಟುಕು ( DOSE ) ನಿರ್ಧಸಿರುವ, ಹಾಗೂ ಮಾರುಕಟ್ಟೆ ಪ್ರವೇಶಿಸುವ ಮೊದಲು ಅನೇಕ ರೀತಿಯ ರಾಸಾಯನಿಕ, ಬ್ಯಾಕ್ಟೀರಿಯಾಗಳ, ಇರುವಿಕೆಗಾಗಿ ಪರೀಕ್ಷೆಯನ್ನು ಮಾಡುತ್ತಾರೆ. ಅಲ್ಲದೇ ಈ ಔಷದ ತಯಾರಿಕೆಯಲ್ಲಿ ಬಳಸುವ ನೀರಿನ, ಗುಣಮಟ್ಟವನ್ನು ಕೂಡ ಪರೀಕ್ಷಿಸುತ್ತಾರೆ ಗೊತ್ತೇ ? ಆದರೆ ಈ ಆಯುರ್ವೇದ ಔಷದಿಗಳ ತಯಾರಿಕೆಗೆ ಈ ರೀತಿಯ ಯಾವುದೇ ಮಾನದಂಡಗಳಿಲ್ಲದಿರುವುದು ಅಪಾಯಕಾರಿ.

ಅಲೋಪತಿಕ್ ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಈ ಇಂಗ್ಲೀಷ್ ಮೆಡಿಸಿನ್‌ಗಳ ತಯಾರಿಕೆಗೆ ಮಾನದಂಡಗಳನ್ನು ಆಯಾ ದೇಶದ ಔಷದ ನಿಯಂತ್ರಣ ಪ್ರಾದಿಕಾರ ಕೈ ಪಿಡಿಯನ್ನು ಪ್ರತಿ ವರುಷ ಹೊರತರುತ್ತದೆ. ಅದರಂತೆ ಭಾರತದಲ್ಲಿ ಭಾರತೀಯ ಫಾರ್ಮಕೋಪಿಯ (IP-INDIAN PHARMACOPOEIA), US ಫಾರ್ಮಕೋಪಿಯ, ಹಾಗೂ ಬಿ.ಪಿ-ಬ್ರಿಟಿಷ್ ಫಾರ್ಮಕೋಪಿಯಗಳು ಲಭ್ಯವಿದೆ. ಅಲೋಪತಿಕ್ ಔಷದಿ ತಯಾರಿಕಾ ಕಂಪನಿಗಳು ಈ ಫಾರ್ಮಕೋಪಿಯದಲ್ಲಿರುವ ಮಾರ್ಗದರ್ಶನದಂತೆ ಔಷದಿಯನ್ನು ತಯಾರಿಸಿ, ಪರೀಕ್ಷಿಸಿ ಮಾರುಕಟ್ಟೆಗೆ ಬಿಡುಗಡೆಮಾಡುತ್ತದೆ, ಕಚ್ಚಾವಸ್ತು ಹಾಗೂ ಸಿದ್ದವಸ್ತು ಈ ಫಾರ್ಮಕೋಪಿಯಾದಲ್ಲಿ ತಿಳಿಸಿರುವ ಯಾವುದೇ ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣವಾದರೂ ಅದನ್ನು ಮಾರುಕಟ್ಟೆಗೆ ಬಿಡುವಂತಿಲ್ಲ ಅಷ್ಟೇ ಅಲ್ಲ ಈ ಎಲ್ಲಾ ಔಷದಿಗಳು ಉತ್ತೀರ್ಣವಾಗಿ ಮಾರುಕಟ್ಟೆ ಪ್ರವೇಶಿಸಿದ ಮೇಲೂ, ಆಯ್ದ ಕೆಲವು ಬ್ಯಾಚ್‌ಗಳ ಮೇಲೆ ಆ ಔಷದಿ ಮರುಕಟ್ಟೆಯಲ್ಲಿರುವಷ್ಟು ದಿನವೂ ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಡುತ್ತಾ ಅವುಗಳ ಗುಣಲಕ್ಷಣಗಳ ವಿವರಗಳು ದಾಖಲಾಗುತ್ತಲೇ ಇರುತ್ತದೆ. ಇದನ್ನು ವಸ್ತುವಿನ “ದೃಡತೆ” ಪರೀಕ್ಷೆ (STABILITY TEST) ಎನ್ನುತ್ತಾರೆ.

ಅಲ್ಲದೇ ಯಾವುದಾದರೊಂದು ಮಾತ್ರೆಯೋ, ಟಾನಿಕ್, ಇಂಜೆಕ್ಷನ್ ಮೊದಲಬಾರಿ ತಯಾರಿಸಲಾದಾಗ ಅದನ್ನು ತಕ್ಷಣ ಮಾರುಕಟ್ಟೆಗೆ ಬಿಡುವಂತಿಲ್ಲ. ಇವುಗಳನ್ನು 6 ತಿಂಗಳ ಕಾಲ 45 ಉಷ್ಟತೆ ಹಾಗೂ 75 ಶೇಕಡಾ ತೇವಾಂಶವಿರುವ ಕೊಠಡಿಗಳಲ್ಲಿ ಇಟ್ಟು ಪ್ರತಿ 30 ದಿನಕೊಮ್ಮೆ ಅನೇಕ ರೀತಿಯ ಪರೀಕ್ಷೆ ಮಾಡುತ್ತಾರೆ. ಎಲ್ಲ ಪರೀಕ್ಷೆಗಳಲ್ಲಿ ಪಾಸ್ ಆದರೆ ಈ ಪಾರ್ಮೂಲಾದಂತೆ ತಯಾರಾದ ಔಷದಿ ಮಾರುಕಟ್ಟೆ ಪ್ರವೇಶಿಸಲು ಸಾಧ್ಯ, ಫೇಲಾದರೆ ಮತ್ತೊಂದು ಹೊಸ ಫಾರ್ಮುಲಾ ತಯಾರಿಸಬೇಕು. ಇಂತಹ ತೇವಾಂಶ ಹಾಗೂ ಉಷ್ಣತೆಗೆ ಒಡ್ಡಿದ್ದಾಗ ಅವುಗಳಲ್ಲಿ ಯಾವ ರೀತಿಯ ರಾಸಾಯನಿಕ ಕ್ರಿಯೆ ನಡೆಯುತ್ತದೆ ಮತ್ತು ಇವುಗಳನ್ನು ಪ್ಯಾಕ್ ಮಾಡಲು ಯಾವ ರೀತಿಯ ಪ್ಯಾಕಿಂಗ್ ಮೆಟಿರಿಯಲ್‌ಗಳನ್ನು ಉಪಯೋಗಿಸಬೇಕೆಂದು ಇದರಲ್ಲಿ ನಿಪುಣತೆಯನ್ನು ಪಡೆದ ತಂಡ ನಿರ್ಧರಿಸುತ್ತದೆ.

ಮೇಲೆ ಹೇಳಿದ ಯಾವುದೇ ರೀತಿಯ ಗುಣಮಟ್ಟ ನಿಯಂತ್ರಣ ಪರೀಕ್ಷೆಯನ್ನು ಆಯುರ್ವೇದ ಔಷದ ತಯಾರಿಕಾ ಕಂಪನಿಗಳು ನಡೆಸುವುದಿಲ್ಲ ! ಮಾತ್ರೆ ಔಷದಿಯ ಬಣ್ಣ ಹೇಗಿದೆ, ಆಕಾರ ಹೇಗಿದೆ, ರುಚಿ ಹೇಗಿದೆ ಎಂಬ ಬೆರಳೆಣಿಕೆಯಷ್ಟು ಬಾಹ್ಯ ಪರೀಕ್ಷೆಗಳನ್ನು ಮಾಡುವುದನ್ನು ಬಿಟ್ಟರೆ ಅದರಲ್ಲಿರುವ ಔಷದೀಯ, ಅಂಶ ಎಷ್ಟಿದೆ, ಎಂದು ಪರೀಕ್ಷಿಸುವುದಿಲ್ಲ ಅಲ್ಲದೇ ಅಲೋಪಧಿಯಲ್ಲಿ ಮಾಡುವ ( STABILITY TEST ) ಗಳನ್ನು ಸಹ ಇಲ್ಲಿ ಮಾಡುವುದಿಲ್ಲ ಮಾಡಿದರೂ ಬಾರಿ ಬಾಹ್ಯ ವಿವರಣೆ ನೀಡುವ ಪರೀಕ್ಷೆಗಳಗಷ್ಟೆ ನಿಮಿತ !

ಅಲೋಪಥಿಯಲ್ಲಿ ದೃಢತೆ ಪರೀಕ್ಷೆ (Stability Test) ಮಾಡುವ ಮೂಲಕ ಯಾವುದೇ ಔಷದಿಯನ್ನು ಎಷ್ಟು ದಿನ ಉಪಯೋಗಿಸಬಹುದು ಎಂದು (EXPIRY) ನಿರ್ಧರಿಸುತ್ತಾರೆ. ಅಲೋಪತಿಯಲ್ಲಿ ಉಪಯೋಗಿಸುವ ಔಷದೀಯ ರಾಸಾಯನಿಕ ದೇಹದಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ, ಅದರ ಅಡ್ಡ ಪರಿಣಾಮವೇನು ಎಷ್ಟು ಗುಟುಕು (DOSE) ಕೊಡಬೇಕು ಎಂಬುದಕ್ಕೆ ಸಾಕ್ಷಿ ಸಹಿತ ದಾಖಲೆಗಳು ಲಭ್ಯ ! ಆದರೆ ಆಯುರ್ವೇದ ಔಷದಿಗಳಿಗೆ ಈ ಮಾಹಿತಿಗಳು ಅಲಭ್ಯ ಏಕೆಂದರೆ ಒಂದು ಆಯುರ್ವೇದಿಯ ಔಷದಿಯನ್ನು ತಯಾರಿಸುವಾಗ ಅನೇಕ ರೀತಿಯ ನಾರು, ಬೇರು, ತೊಗಟೆ ಉಪಯೋಗಿಸುತ್ತಾರೆ ಇವುಗಳಲ್ಲಿ ಔಷದೀಯ ಗುಣವುಳ್ಳ ರಾಸಾಯನಿಕಗಳ ಮಿಶ್ರಣವೇ ಇರುತ್ತದೆ ಯಾವ ರಾಸಾಯನಿಕ ಯಾವ ರೋಗದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇನ್ನು ಅಸ್ಪಷ್ಟ ಔಷದೀಯ ಗುಣ ಇರುವ ಅಂಶವನ್ನು ಸಸ್ಯಗಳಲ್ಲಿ ಗುರುತಿಸಿ ಅದನ್ನು ಮಾತ್ರ ಸಂಸ್ಕರಿಸಿ ಅಲೋಪತಿಯಲ್ಲಿ ಬಳಸುವ ಏಕಮಾತ್ರ ರಾಸಾಯನಿಕಗಳ ಹಾಗೆ, ಔಷಧಿ ತಯಾರಿಸಿದಾಗ ಅದಕ್ಕೂ ಇನ್ನೂ ಮಹತ್ವ ಬರಬಹುದು. ಅತ್ಯಾಧುನಿಕ ಪರಿಕರಗಳನ್ನು ಬಳಸಿ ಹೀಗೆ ಸಂಸ್ಕರಿಸಿದ ಆಯುರ್ವೇದ ಕಣದ ಗುರುತು ಹಚ್ಚುವ ಪರೀಕ್ಷೆ ಹಾಗೂ ಅದರ ಪ್ರಮಾಣವನ್ನು ಪತ್ತೆ ಹಚ್ಚುವ ಕೆಲಸ ಇನ್ನೂ ಹೆಚ್ಚಾಗಿ ಆಗಬೇಕಾಗಿದೆ.

ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ಆಯುರ್ವೇದ ಔಷದಿಗಳಲ್ಲಿ ಹಲವಾರು ವಿಷಯುಕ್ತ ಖನಿಜಗಳು, ಕೀಟನಾಶಕಗಳು, ಬಾರಯುಕ್ತ ಲೋಹಗಳು ಪತ್ತೆಯಾಗಿರುವುದು ಆತಂಕಕಾರಿ ವಿಷಯ ಬಾರಯುಕ್ತ ಲೋಹಗಳಾದ ಆರ್ಸೆನಿಕ್, ಕ್ಯಾಡಿಂಯ, ಪಾದರಸ, ಸೀಸ ಹಾಗೂ ಅಲೋಪತಿಯ ಫೆಡ್ಯೂಲ್ ಹೆಚ್‌ ನಲ್ಲಿ ಬರುವ ಫಿನ್ಸೆಲ್ ಜ್ಯೂಟಾಜೋನ್, ಅಮ್ಯೆನೋ ಫಿಲಿನ್, ಪ್ರಿಡ್ನಿಸೋನ್, ಟೆಸ್ಟೊಸ್ಟಿರಾನ್ ಇಂಡೋ ಮೆಟಾಸಿನ್ ಹಾಗೂ ಡ್ಡೆಜಿಪಾಮ್ ಅಂಶಗಳು ಆಯುರ್ವೇದಿಯ ಉತ್ಪನ್ನಗಳಲ್ಲಿ ಕಂಡು ಬಂದಿದೆ ! ಕೆಲವೊಂದು ಲೋಹಗಳನ್ನು ಶಾಸ್ತ್ರೀಯ ಭಾಷೆಯಿಂದ ಉದಾಹರಣೆಗೆ ಪಾದರಸವನ್ನು “ಪಾರದವೆಂದೂ” ಕಬ್ಬಿಣವನ್ನು “ಲೋಹವೆಂದೂ” TIಓನ್ನು ವಂಗ ಎಂತಲೂ ಸೀಸವನ್ನು ನಾಗ ಎಂದು, ಜಿಂಕ್‌ನ್ನು ಜಶದ ಎಂತಲೂ ಕೆಲವೊಂದು ಆಯುರ್ವೇದಿಯ ಉತ್ಪನ್ನಗಳಲ್ಲಿ ಬಳಸುತ್ತಾರೆ. ಇಲ್ಲಿ ಇವುಗಳನ್ನು ಉಪಯೋಗಿಸುವ ಮೊದಲು ಶುದ್ದೀಕರಿಸುವ ವಿಧಾನವನ್ನು ಅನುಸರಿಸುತ್ತಾದರೂ ಇವುಗಳ ಅಂಶ ಇದ್ದೇ ಇರುತ್ತದೆ. ಆಯುರ್ವೇದ ಔಷದಿಗಳಲ್ಲಿ ಈ ಲೋಹಗಳನ್ನು ಉಪಯೋಗಿಸುವುದರಿಂದ ಅಸ್ತಿಮಜ್ಜಿ ಕುಗ್ಗುವುದು (BONE MRAROW DEPRESSION) ಅಧಿಕ ರಕ್ತದೊತ್ತಡ, ನಾಡಿಮಿಡಿತದಲ್ಲಿ ಏರಿಳಿತ, ರಕ್ತಸ್ರಾವ ಹಾಗೂ ಗ್ರಾನುಲೋಸ್ಯೆಟೋಸೀಸ್‌ ನಂತಹ ಅಡ್ಡಪರಿಣಾಮಗಳು ದಾಖಲಾಗಿದೆ ! ಅಯುರ್ವೇದ ಔಷದಿ ತಯಾರಿಕಾ ಪದ್ದತಿಯಲ್ಲಿ ಉತ್ಪಾದನೆಯ ಒಂದು ಭಾಗವಾಗಿ ಈ ಬಾರಯುಕ್ತ ಲೋಹಗಳನ್ನು ಉಪಯೋಗಿಸುತ್ತಾರೆ. 35 ವರ್ಷದ ವ್ಯಕ್ತಿಯೊಬ್ಬ ಸಕ್ಕರೆ ಖಾಯಿಲೆಗೆ “ಶಕ್ತಿ” ಮತ್ತು “ಪುಷ್ಪ ದ್ರಾವಣ ರಸ” ಎಂಬ ಮಾತ್ರ ತೆಗೆದುಕೊಂಡಾಗ ಅವರಲ್ಲಿದ್ದ ಅಧಿಕ ಸೀಸದ ಪರಿಣಾಮವಾಗಿ (LEAD POISONING ನಿಂದ) ಬಳಲಿದ ಅವನನ್ನು ಆಸ್ಪತ್ರೆಗೆ ದಾಖಲಿಸಿದ ನಿದರ್ಶನವಿದೆ, ನಂತರ ಆತ ತೆಗೆದುಕೊಂಡ ಮಾತ್ರೆಯನ್ನು ಪರೀಕ್ಷೆಸಿದಾಗ ಅದರಲ್ಲಿ ಅಧಿಕ ಮಟ್ಟದ ಸೀಸ ಪಾದರಸ ಹಾಗೂ ಆರ್ಸೆನಿಕ್ ಪತ್ತೆಯಾಗಿದೆ.

ಅಲೋಪಥಿಕ್ ಔಷದಿಗಳಂತೆ ಆಯುರ್ವೇದಿಕ್ ಔಷದಿಗಳು ದೀರ್ಘಕಾಲದ ಬಳಿಕ ಅನೇಕ ರೀತಿಯ ಅಡ್ಡಪರಿಣಾಮ ಬೀರುತ್ತದೆ. ಅಲೋಪಥಿಯ ಅಡ್ಡಪರಿಣಾಮ ಹಾಗೂ ಅದರ ತುರ್ತು ಚಿಕಿತ್ಸೆ ವಿಧಾನ ಸಾಕ್ಷಿ ಸಹಿತ ದಾಖಲೆಯ ರೂಪದಲ್ಲಿ ಲಭ್ಯವಿರುತ್ತದೆ. ಆದರೆ ಇದು ಆಯುರ್ವೇದ ಪದ್ದತಿಯಲ್ಲಿ ಅಲಭ್ಯ ನಮ್ಮ ದೇಹದ ರಕ್ಷಣಾ ವ್ಯವಸ್ಥೆ (DEFENCE MECHANISM) ನಾರು ಬೇರಿನ ಕೆಲವು ರಾಸಾಯನಿಕಗಳನ್ನು ಒಪ್ಪಿಕೊಳ್ಳುವುದಿಲ್ಲ ಆಗ ಅಡ್ಡಪರಿಣಾಮ ಖಂಡಿತಾ ಆಗುತ್ತದೆ. ಹೊಟ್ಟೆ ನೋವು ಕಡಿಮೆ ಮಾಡುವ “ಲಿಕೋರೈಸ್” ನಿಂದ ಹೊಪೊಲ್ಯುಕೇಮಿಯಾ ರಕ್ತದೊತ್ತಡ ಜಾಸ್ತಿಯಾದ ಹಾಗೂ ದೇಹದಲ್ಲಿ ಲವಣಗಳ ಕೊರತೆಯಾದ ಉದಾಹರಣೆಗಳಿದೆ ದೇಹದ ತೂಕ ಇಳಿಸಲು ಉಪಯೊಗಿಸಿದ ಆಯುರ್ವೇದಿಯ ಔಷದಿ 48 ಚೈನಾ ಮಹಿಳೆಯರಲ್ಲಿ ಮೂತ್ರಕೋಷದ ವೈಪಲ್ಯಕ್ಕೆ ನಾಂದಿಹಾಡಿದೆ. ಸರಿಯಾಗಿ ಸಂಸ್ಕರಿಸಿದ ಕೆಲವೊಂದು ಆಯುರ್ವೇದ ಔಷದಿಯಲ್ಲಿ ಬೆಳೆಯುವ ಶಿಲಿಂದ್ರಗಳು ಉತ್ಪತ್ತಿ ಮಾಡುವ ರಾಸಾಯನಿಕಗಳು ನರಮಂಡಲ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರಿದೆ. “ಜಿನ್‌ಸೆಂಗ್” ಎಂಬ ಅತಿ ಉಪಯುಕ್ತ ಆಯುರ್ವೇದ ಔಷದ ಕೂಡ ರಕ್ತದೊತ್ತಡ, ನರದೌರ್ಬಲ್ಯ, ಚರ್ಮದ ತುರಿಕೆ, ನಿದ್ದೆ ಬಾರದಿರುವಿಕೆಯಂತ ಅಡ್ಡಪರಿಣಾಮ ಬೀರುತ್ತದೆ.

ಅಯುರ್ವೇದ ಔಷದಿ ತೆಗೆದುಕೊಂಡವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅಧ್ಯಯನದ ದಾಖಲೆ ಇಲ್ಲ, ಅಲೋಪತಿಯಲ್ಲಿ ಯಾವುದಾರೊಂದು ಹೊಸ ಔಷದಿ ಅವಿಷ್ಕಾರವಾದಾಗ ಅದು ಮನುಷ್ಯನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ದೇಹದಲ್ಲಿ ಎಷ್ಟು ಹೊತ್ತು ಇರುತ್ತದೆ. ಎಷ್ಟು ಸಮಯದ ನಂತರ ಅದರ ಪ್ರಭಾವ ಪ್ರಾರಂಭವಾಗುತ್ತದೆ, ದೇಹದಿಂದ ಹೊರಗೆ ಯಾವ ರೂಪದಲ್ಲಿ ಹೋಗುತ್ತದೆ. ಪ್ರತಿ ಮನುಷ್ಯನಿಗೆ ಆತನ ತೂಕವನ್ನಾದರಿಸಿ ಎಷ್ಟು ಗುಟುಕು (DOSE) ಕೊಡಬೇಕು ಯಾವ ರೀತಿಯ ಅಡ್ಡಪರಿಣಾಮ ಬೀರುತ್ತದೆ. ಅದರ ಚಿಕಿತ್ಸಾವಿದಾನ ಹಾಗೂ ಎಂತಹವರಿಗೆ ಈ ಔಷದಿಯನ್ನು ಕೊಡಬಾರದು ಎಂಬ ಇತ್ಯಾದಿ ವಿವರಗಳನ್ನು “ಕ್ಲಿನಿಕಲ್ ಟ್ರಯಲ್ಸ್” ಮೂಲಕ ಸಂಗ್ರಹಿಸುವುದರಿಂದ ಆ ಹೊಸ ಔಷದಿಗೆ ಸಂಭಂದಪಟ್ಟ ಎಲ್ಲಾ ಮಾಹಿತಿ ನಿಮಗೆ ಲಭ್ಯವಾಗುತ್ತದೆ ಆದರೆ ಈ ರೀತಿಯ ಕ್ಲಿನಿಕಲ್ ಡೇಟಾ ಆಯುರ್ವೇದದ ಔಷದಿಗಳಿಗೂ ಲಭ್ಯವಾಗಬೇಕು ಅನಾದಿಕಾಲದಿಂದಲೂ ಅಜ್ಜ ಮುತ್ತಜ್ಜಂದಿರು ಉಪಯೋಗಿಸಿದ ಜ್ಞಾನದ ಆಧಾರದ ಮೇಲೆ ಈ ಆಯುರ್ವೇದಿಕ್ ಔಷದಿಗಳು ರೋಗಿಗಳನ್ನು ತಲುಪುತ್ತಿದೆ. ಅಲೋಪಥಿಕ್ ಔಷದಿಗಳ ಉತ್ಪಾದನ ಪರೀಕ್ಷೆಗೆ ICH (INTERNATIONAL CONFERENCE ON HARMONIZATION) ಎಂಬ ಮಾನದಂಡವಿದೆ ಅದರಂತೆ ಯೂರೋಪ್ 30k22 ಎಂಬ ಸೆಕ್ಷೆನ್ ಅಡಿಯಲ್ಲಿ ಆಯುರ್ವೇದ ಔಷದಿಗಳ ಗುಣಮಟ್ಟದ ಬಗ್ಗೆ ಕೆಲವೊಂದು ಮಾನದಂಡಗಳನ್ನು 1989 ರಲ್ಲಿಯೇ ಜಾರಿಗೆ ತಂದಿದೆ, ಇದರ ಅನ್ವಯ ಎಲ್ಲ ಆಯುರ್ವೇದಿಯ ಔಷದಿ ತಯಾರಕರು ‘ ಗುಣಮಟ್ಟ ನಿಯಂತ್ರಣ ವಿಧಾನ’ ಅಂದರೆ ಕಚ್ಚಾವಸ್ತುವಿನಿಂದ ಹಿಡಿದು ಸಿದ್ದವಸ್ತುವಿನವರೆಗೂ ಪದಾರ್ಥವನ್ನು ಪರೀಕ್ಷಿಸುವುದು ಔಷದದ ದೃಡತೆ (STABILITY TEST) ಅಂದರೆ ಎಷ್ಟು ದಿನಗಳವರೆಗೂ ಈ ಔಷದಿ ಬಳಸಲು ಸಾಧ್ಯ ಎಂಬ ಮಾಹಿತಿಯನ್ನು, ಸಂಗ್ರಹಿಸಬೇಕು ಅಲ್ಲದೇ ಅಲೋಪತಿ ಔಷದಿ ತಯಾರಿಕೆಯಲ್ಲಿ ಬಳಸುವ “ಉತ್ತಮ ಉತ್ಪಾದನಾ ವಿದಾನ” (GOOD MANUFACTURING PRACTICE-GMP) ವನ್ನು ತಾವೂ ಸಹ ಅಳವಡಿಸಿಕೊಳ್ಳಬೇಕು, ಇದರ ಬಗ್ಗೆ 1940 ರ ಔಷದ ಹಾಗೂ ಕಾಂತಿವರ್ದಕ ಕಾಯಿದೆ “ಫೆಡ್ಯೂಲ್ ಎಂ ನಲ್ಲಿ” ವಿವರವಾಗಿ ತಿಳಿಸಲಾಗಿದೆ, ಅಲ್ಲದೇ ಅಲೋಪಥಿಗೆ ಅನುಸರಿಸುವಂತೆ ಕಚ್ಚಾವಸ್ತುವಿನಿಂದ ಸಿದ್ದವಸ್ತುವಿನವರೆಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಅವುಗಳ ದಾಖಲೆಗಳನ್ನು ಇಡಬೇಕೆಂದು ತಾಕೀತು ಮಾಡಿದೆ.

ಅಯುರ್ವೇದ ಔಷದಿಗಳ ಸುರಕ್ಷೆತೆಯ ಬಗ್ಗೆ ಹಲವಾರು ಪ್ರಪಂಚದಾದ್ಯಂತ ಇರುವ ಆರೋಗ್ಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದೆ. ಸಂಯುಕ್ತ ಸಂಸ್ಥಾನದ “ಔಷದಿ ಆರೋಗ್ಯದ ಕಾನೂನು, ಸಂಸ್ಥೆ” (MHRA Medicines Health Care Regulatory agency) 2002 ರಲ್ಲಿ ನಾರು ಬೇರು ಔಷದಿಗಳ ಸುರಕ್ಷೆತೆಗೆ ಸಂಬAಧಿಸಿದಂತೆ ವರದಿಯೊಂದನ್ನು ಸಿದ್ದಪಡಿಸಿದೆ. ಇದರಲ್ಲಿ ಆಯುರ್ವೇದಿಯ ಔಷದಿಗಳಿಂದಾಗುವ ಅಡ್ಡಪರಿಣಾಮಗಳನ್ನು ದಾಖಲಿಸಲಾಗಿದೆ.

ಅಮೇರಿಕಾದಲ್ಲಿ ಈಗಲೂ ಗಿಡಮೂಲಿಕೆಗಳನ್ನು ಆಹಾರ ರೂಪದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಮಾರಬಹುದು. ಹಾಗೂ ಆರೋಗ್ಯಕ್ಕೆ ಸಂಭಂದಪಟ್ಟ ಯಾವುದೇ ಮಾಹಿತಿಯನ್ನು ಇದರ ಮೇಲೆ ನಮೂದಿಸುವ ಹಾಗಿಲ್ಲ. ಅಲೋಪಥಿ ಔಷದಿಗಳನ್ನು ಮಾರುವುದಕ್ಕೆ ಪರವಾನಿಗೆ ಪಡೆಯಬೇಕು. ಆದರೆ ಈ ಗಿಡಮೂಲಿಕೆಯಿಂದ ತಯಾರಾದ ಆಹಾರ ಮಾರುಕಟ್ಟೆ ಮಾಡಲು ಈ ನಿಬಂಧನೆ ಇಲ್ಲ, ಆಯುರ್ವೇದದ ಔಷದಿಗಳ ಮಾರುಕಟ್ಟೆಗಳ ಕಠಿಣ ಕಾನೂನುಗಳು ರೂಪಿತವಾಗುತ್ತಿದ್ದು ಈ ನಿಟ್ಟಿನಲ್ಲಿ ಭಾರತವೂ ಹಿಂದೆ ಒಪ್ಪಿಲ್ಲ ಭಾರತದ ಅಲೋಪಥಿ ಔಷದಿ ತಯಾರಿಕೆಗೆ ಮಾನದಂಡಗಳನ್ನು ರೂಪಿಸಿರುವ ಭಾರತದ ಔಷದ ತಯಾರಿಕಾ ಕೈಪಿಡಿ “ಭಾರತೀಯ ಫಾರ್ಮಕೋಪಿಯ” (Indian Pharmacopo EIA-IP) ತನ್ನ 2014 ರ ಆವೃತ್ತಿಯಲ್ಲಿ ಆಯುರ್ವೇದದಲ್ಲಿ ಸಾಮಾನ್ಯವಾಗಿ ಉಪಯೊಗಿಸುವ ಅರ್ಜುನ, ಅಮಲಕಿ, ಆಮ್ಲು, ಆರ್ಟಮಿಸಿಯಾ, ಗುಡುಚಿ, ಬೃಂಗರಾಜ, ಹರಿಟಾಕಿ, ಮಂಜಿಪ್ಪ, ವಿಪ್ಪಲಿ, ಪುನರ್ ನವಾ ಸತಾವರಿ, ತುಳಿಸಿ ಮುಂತಾದ 23 ಆಯುರ್ವೇದಿಯ ಗಿಡಮೂಲಿಕೆಗಳನ್ನು ಸೇರಿಸಿದ್ದಾರಲ್ಲದೇ ಅದರ ಅನೇಕ ಮಾನದಂಡಗಳನ್ನು ನಿಗದಿಪಡಿಸಿರುವುದು ಸ್ವಾಗತಾರ್ಹ ವಿಚಾರ ಆದರೆ ಈ ಆಯುರ್ವೇದ ಔಷದಿ ತಯಾರಿಸುವ ಕಂಪೆನಿಗಳು ಈ ನಿಯಮವನ್ನು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂದು ಗಮನಿಸುವ ಕೆಲಸ ಔಷದಿ ಪರೀವಿಕ್ಷಕರದ್ದು.

ಸುರಕ್ಷಿತ ಆಯುರ್ವೇದ ಔಷದಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ “ವಿಶ್ವ ಆರೋಗ್ಯ ಸಂಸ್ಥೆ” (WHO) ಕೂಡ ಈ ಆಯುರ್ವೇದ ಔಷದಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಲು ಕೆಲವೊಂದು ಮಾನದಂಡಗಳನ್ನು ರೂಪಿಸಿದೆ. WHO ನ ಸದಸ್ಯ ರಾಷ್ಟ್ರಗಳು ಈ ಮಾನದಂಡಗಳನ್ನು ತಮ್ಮ ದೇಶದಲ್ಲಿ ಸುರಕ್ಷಿತವಾದ ಆಯುರ್ವೇದ ಔಷದಿಗಳನ್ನು ತಯಾರಿಸಲು ಬಳಸಬಹುದು.

ಶತಮಾನಗಳಿಂದ ಉಪಯೋಗದಲ್ಲಿರುವ ಈ ಗಿಡಮೂಲಿಕೆಗಳು ಹಲವಾರು ರೋಗಗಳಿಗೆ ರಾಮಬಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಲವಾರು ವೈದ್ಯರ ಬಳಿಗೆ ಹೋಗುವ ಮುನ್ನವೇ ಈ ಔಷದಿಗಳನ್ನು ಉಪಯೋಗಿಸುತ್ತಾರೆ ಕಾರಣ ಆಯುರ್ವೇದ ಸುರಕ್ಷಿತ ಎಂಬ ತಪ್ಪು ತಿಳುವಳಿಕೆ. “ಪ್ಯಾರಾಸೆಲ್ಫ್ಸ್” ಹೇಳುವಂತೆ “ಎಲ್ಲ ವಸ್ತುಗಳು ವಿಷವೇ ಯಾವುದು ಸುರಕ್ಷಿತವಲ್ಲ, ಸೇವನೆಗೆ ಉತ್ತಮವೇ ಎಂದು ಗುಟುಕು – DOSE ಮಾತ್ರ ನಿರ್ಧರಿಸುತ್ತದೆ”, ಇದು ಗಿಡಮೂಲಿಕಾ ಔಷದಿಗಳಿಗೆ ಭಾಗಶಃ ಅನ್ವಯವಾಗುತ್ತದೆ ಸರಿಯಾದ ವೈದ್ಯರ ಮಾರ್ಗದರ್ಶನವಿಲ್ಲದೇ ಈ ಔಷದಿಗಳ ಉಪಯೋಗ ಕೆಲವೊಮ್ಮೆ ಖಂಡಿತಾ ಮಾರಕವಾಗಬಹುದು ಅತಿಯಾದ ಗುಟುಕು (DOSE) ಸರಿಯಾಗಿ ಉತ್ಪಾದಿಸದೇ ಇರುವುದು, ಗೊತ್ತಿಲದೇ ಬೇರೆ ಗಿಡಮೂಲಿಕೆಗಳ ಬಳಕೆ ರಾಸಾಯನಿಕ ಔಷದಿಗಳ ಕಲಬೆರಕೆ. ಇವುಗಳ ಉತ್ಪಾದನೆಯಲ್ಲಿ ಬಾರಯುಕ್ತ ಲೋಹಗಳ ಬಳಕೆ ಅಪಾಯಕ ಅಡಿಪಾಯ ಹಾಕಬಹುದು ತಲತಲಾಂತರದಿಂದ ನೈಸರ್ಗಿಕವಾಗಿ ದೊರೆಯುತ್ತಿರುವ ಈ ಗಿಡಮೂಲಿಕೆಗಳ ಉಪಯೋಗ ಹಲವಾರು ರೋಗಕ್ಕೆ ಉಪಯೋಗವಾಗುತ್ತಿರಬಹುದು ಅಂದ ಮಾತ್ರಕ್ಕೆ ಇವು ಸುರಕ್ಷಿತವೆಂಬ ತಿಳುವಳಿಕೆ ತಪ್ಪು! ಅಲೋಪಥಿಯ ಔಷದಿಗಳ ಹಾಗೆ ಇವುಗಳಿಗೂ ಕಠಿಣ ಪರೀಕ್ಷಾ ಹಾಗೂ ಕಾನೂನಿನ ಮಾನದಂಡಗಳು ಅಗತ್ಯವಾಗಿದೆ.

ಡಾ|| ಪ್ರಕಾಶ್ ಕೆ ನಾಡಿಗ್
ಚಿತ್ರಗಳು: ಗೂಗಲ್ ಅಂತರ್ಜಾಲ

Related post

Leave a Reply

Your email address will not be published. Required fields are marked *