ಆರಿಫ್ ನ ಕ್ರೌಂಚ ಪಕ್ಷಿ ಪ್ರೇಮ
ಆರಿಫ್ ಖಾನ್ ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಮಂಧ್ಕಾಎಂಬ ಹಳ್ಳಿಯೊಂದರ ರೈತ. ಫೆಬ್ರವರಿ 2022 ರ ಒಂದು ಮುಂಜಾನೆ ತನ್ನ ಹೊಲದಲ್ಲಿ ತಿರುಗಾಡುತಿದ್ದಾಗ ಸಾರಸ್ ಕೊಕ್ಕರೆ ಅಥವಾ ಕ್ರೌಂಚ ಪಕ್ಷಿಯೊಂದು ಬಿದ್ದಿರುವುದನ್ನು ನೋಡಿದನು. ಸತ್ತ ಪಕ್ಷಿಯೆಂದು ತಿಳಿದು ಅದರ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಅದರ ಕಾಲಿಗೆ ಮಾರಣಾಂತಿಕವಾಗಿ ಪೆಟ್ಟು ತಗುಲಿ ಹಾರಲಾರದೆ ಇನ್ನೂ ಉಸಿರಾಡುತ್ತಿರುವುದನ್ನು ಕಂಡು ಕೂಡಲೇ ಅದನ್ನು ತನ್ನ ಮನೆಗೆ ಸಾಗಿಸಿ ತನಗೆ ಗೊತ್ತಿರುವ ಪ್ರಕೃತಿ ಚಿಕಿತ್ಸೆಗಳನ್ನು ಮಾಡಿದನು. ಕಾಲಿಗೆ ತೀವ್ರವಾಗಿ ಗಾಯಗೊಂಡಿದ್ದ ಆ ಕ್ರೌಂಚ ಪಕ್ಷಿಯು ಆರಿಫ್ ನ ಚಿಕಿತ್ಸೆಗಳಿಗೆ ಸ್ಪಂದಿಸಿ ಒಂದು ವಾರದಲ್ಲಿ ಚೇತರಿಸಿಕೊಂಡಿತು, ಚೇತರಿಸಿಕೊಂಡ ಪಕ್ಷಿಯು ಎದ್ದು ನಿಂತು ಜಿಗಿಯತೊಡಗಿತು. ಇದನ್ನು ಕಂಡು ಆರಿಫ್ ಸಂತೋಷದಿಂದ ಪಕ್ಷಿಯನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಸಮೀಪದ ಕಾಡಿನಲ್ಲಿ ಹಾರಲು ಬಿಟ್ಟು ಮನೆಗೆ ವಾಪಸ್ಸು ಬಂದನು.
ಆಶ್ಚರ್ಯವೆಂದರೆ ಬೇರೆಲ್ಲಾ ಸಾಕು ಪಕ್ಷಿಗಳಂತೆ ಅದು ಆರಿಫ್ ನ ಮನೆಯನ್ನ ಮತ್ತೆ ಹುಡುಕಿಕೊಂಡು ವಾಪಸ್ಸು ಬಂದಿತು. ನಂತರ ಆರಿಫ್ ಮತ್ತು ಈ ಕ್ರೌಂಚ ಪಕ್ಷಿಯ ಮದ್ಯೆ ಬಾಂದವ್ಯ ಬೆಳೆದು ಆರಿಫ್ ಅದನ್ನು ಇನ್ನಿಲ್ಲದಂತೆ ಪ್ರೀತಿಸತೊಡಗಿದ. ಈ ಪಕ್ಷಿಯು ಕೂಡ ಬೆಳಿಗ್ಗೆ ಮನೆಯಿಂದ ಹಾರಿಹೋದರೆ ಸಂಜೆ ಸಮಯಕ್ಕೆ ಸರಿಯಾಗಿ ಮನೆಯ ಇನ್ನಿತರ ಸದ್ಯಸರಂತೆ ಮನೆಗೆ ಹಿಂತಿರುಗಿ ಬರುತಿತ್ತು. ಆರಿಫ್ ಹೊಲಕ್ಕೆ ಹೋಗಲಿ ಇನ್ನೆಲ್ಲೇ ಹೋಗಲಿ ಈ ಕ್ರೌಂಚವು ಅವನ ತಲೆಯ ಮೇಲೆ ಹಾರಿಕೊಂಡು ಹಿಂಬಾಲಿಸಿಕೊಂಡು ಬರುತಿತ್ತು. ಕಾಡು ಹಕ್ಕಿಯೊಂದು ಮನುಷ್ಯನ ಪ್ರೀತಿಗೆ ಸ್ಪಂದಿಸಿ ಅವನನ್ನು ಹಚ್ಚಿಕೊಂಡಿದ್ದು ಸೋಜಿಗದ ವಿಷಯವಾಗಿತ್ತು.
ಆರಿಫ್ ಈ ಕ್ರೌಂಚ ಪಕ್ಷಿಯನ್ನು ಎಷ್ಟು ಹಚ್ಚಿಕೊಂಡಿದ್ದನೆಂದರೆ ಅದಕ್ಕಾಗಿಯೇ ತನ್ನ ಹೊಲದಲ್ಲಿನ ಸ್ವಲ್ಪ ಜಾಗವನ್ನು ಅದರ ಆವಾಸಕ್ಕೆಂದು ಬಿಟ್ಟಿದ್ದನು. ಇವರಿಬ್ಬರ ಈ ಬಾಂದವ್ಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿಳಿದು ಯಾರೋ ಒಬ್ಬರು ಇವರಿಬ್ಬರ ಒಡನಾಡಿಯ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟರು. ಇದರಿಂದ ಈ ವಿಷಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ಜನರು ಇವರಿಬ್ಬರನ್ನು ಕಾಣಲು ಆರಿಫ್ ನಿವಾಸಕ್ಕೆ ಪದೇ ಪದೇ ಬರಲು ಶುರುಮಾಡಿದರು. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಎಲ್ಲರಂತೆ ವಿಷಯ ತಿಳಿದು ಸಹಜ ಕೊತೂಹಲದಿಂದ ಆರಿಫ್ ಹೊಲಕ್ಕೆ ಬಂದು ನೋಡಿಕೊಂಡು ಹೋದರು.
ಅಖಿಲೇಶ್ ಯಾದವ್ ಆರಿಫ್ ನನ್ನ ಭೇಟಿಯಾದ ನಂತರ ಈ ವಿಷಯ ರಾಜಕೀಯಕ್ಕೆ ತಿರುಗಿತೋ ಏನೋ! ಅರಣ್ಯಾಧಿಕಾರಿಗಳಿಗೆ ಈ ವಿಷಯ ತಿಳಿದು ಆರಿಫ್ ನಿವಾಸಕ್ಕೆ ಭೇಟಿ ನೀಡಿ ಸಾರಸ್ ಪಕ್ಷಿಯು 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ 3 ರ ಅಡಿಯಲ್ಲಿ ರಕ್ಷಿತವಾಗಿದ್ದು ಅದನ್ನು ಸಾಕುವುದು ಅಥವಾ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಎಂದು ಆರಿಫ್ ನ ಗಮನಕ್ಕೆ ತಂದರು. ಅಧಿಕೃತ ಔಪಚಾರಿಕತೆಯಾಗಿ ನೋಟೀಸ್ ಕೂಡ ನೀಡಿದರು. ಆರಿಫ್ ಅರಣ್ಯಾಧಿಕಾರಿಗಳಿಗೆ ನೆಡೆದದೆಲ್ಲವನ್ನು ತಿಳಿಸಿ ತಾನು ಅದನ್ನು ಕಾಡಿಗೆ ಬಿಟ್ಟರು ಅದಾಗಿಯೇ ಮರಳಿ ಬಂದು ನನ್ನನ್ನು ಸೇರಿಕೊಳ್ಳುತ್ತಿದೆ ಎಂದು ವಿವರಿಸಿದನು.
ವಾಸ್ತವಾಂಶ ಏನೇ ಇದ್ದರು ಅರಣ್ಯಾಧಿಕಾರಿಗಳಿಗೆ ಅದನ್ನು ಸ್ಥಳಾಂತರಿಸದೆ ಬೇರೆ ಮಾರ್ಗವಿರಲಿಲ್ಲ. ಆದ್ದರಿಂದ ಆರಿಫ್ ನನ್ನ ಓಲೈಸಿ ಆ ಪಕ್ಷಿಯನ್ನು ಮುಟ್ಟುಗೋಲು ಹಾಕಿಕೊಂಡು ರಾಯ್ಬರೇಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಿದರು ಅಲ್ಲಿ ಆ ಪಕ್ಷಿಗೆ ಸೂಕ್ತ ವಾತಾವರಣ ಇರದುದ್ದರಿಂದ ಮತ್ತು ಅದು ವರ್ಷವಿಡೀ ಮನುಷ್ಯರ ಸಂಗದಲ್ಲಿ ಇದ್ದುದ್ದರಿಂದ ವೈದ್ಯರ ಸಲಹೆ ಮೇರೆಗೆ ಅದನ್ನು ಕಾನ್ಪುರ್ ಮೃಗಾಲಯದಲ್ಲಿ ಕ್ವಾರಂಟೈನ್ ಮಾಡಲಾಯಿತು.
ಕ್ರೌಂಚ ಪಕ್ಷಿಯನ್ನು ಅರಣ್ಯಾಧಿಕಾರಿಗಳು ತೆಗೆದುಕೊಂಡು ಹೋದ ನಂತರ ಅದರ ಬಗ್ಗೆ ಆರಿಫ್ ನಿಗೆ ಅದರ ಕ್ಷೇಮ ಸಮಾಚಾರ ಹೆಚ್ಚಾಗಿ ತಿಳಿಯಲಿಲ್ಲ ಕ್ರೌಂಚ ಪಕ್ಷಿಯು ಆರಿಫ್ ನ ಜೊತೆ ಒಂದು ವರ್ಷ ಇದ್ದುದ್ದರಿಂದಲೋ ಏನೋ ಆರಿಫ್ ಸಹಜ ಪ್ರೀತಿಯಿಂದ ಅದರ ಭೇಟಿಗೆ ಪ್ರಯತ್ನಪಟ್ಟರೂ ಅರಣ್ಯಾಧಿಕಾರಿಗಳು ಭೇಟಿಗೆ ನಿರಾಕರಿಸಿದರು. ಅದು ಸಹಜವೇ ಆಗಿತ್ತು ಏಕೆಂದರೆ ಪಕ್ಷಿಯು ಮತ್ತು ಆರಿಫ್ ಪರಸ್ಪರ ಹಚ್ಚಿಕೊಂಡಿದ್ದರಿಂದ ಇಬ್ಬರ ಮಾನಸಿಕ ಕ್ಷೇಮಕ್ಕಾಗಿ ಇಬ್ಬರನ್ನು ದೂರವಿಡಲೇಬೇಕಿದ್ದುದರಿಂದ ಆ ನಿರ್ಧಾರ ತಜ್ಞರ ಮೇರೆಗೆ ಅಧಿಕಾರಿಗಳು ತೆಗೆದುಕೊಂಡಿದ್ದರು. ಇದರಿಂದ ಆರಿಫ್ ಕೆಲಕಾಲ ಸುಮ್ಮನೆ ಇರಬೇಕಾಯಿತು.
ಇತ್ತ ಕ್ರೌಂಚ ಪಕ್ಷಿಯು ಕೂಡ ಮೃಗಾಲಯದಲ್ಲಿ ಕ್ವಾರಂಟೈನ್ ಆದ ದಿನದಿಂದ ಖಿನ್ನತೆಗೊಳಗಾಗಿತು. ಸದಾ ಜಿಗಿಯುತ್ತಿದ್ದ ಪಕ್ಷಿಯು ರೆಕ್ಕೆ ಮುರಿದಂತೆ ಒಂದೇ ಕಡೆ ಬಿದ್ದುಕೊಂಡು ಕಾಲ ಕಳೆಯತೊಡಗಿತು. ಆರಿಫ್ ಕೊನೆಗೂ ಕಾಡಿ ಬೇಡಿ ಅರಣ್ಯಾಧಿಕಾರಿಗಳ ಮನ ಓಲೈಸಿ ಅದರ ಭೇಟಿಗೆ ಅಪ್ಪಣೆ ಪಡೆದು ಮೃಗಾಲಯಕ್ಕೆ ಕಾಲಿಟ್ಟೊಡನೆ ಕ್ರೌಂಚ ಪಕ್ಷಿಯು ಇವನನ್ನು ಕಂಡು ಗುರುತು ಹಿಡಿದು ಒಮ್ಮೆಲೇ ಜಿಗಿಯತೊಡಗಿತು. ಇದ್ದಕಿದಂತೆ ಲವಲವಿಕೆಯಿಂದ ಪಕ್ಷಿ ವರ್ತಿಸಿದ್ದನ್ನು ಕಂಡು ಅಲ್ಲಿನ ಸಿಬ್ಬಂದಿಗಳು ಹಾಗು ವೈದ್ಯರು ಆಶ್ಚರ್ಯಪಟ್ಟರು. ಆರಿಫ್ ಪಕ್ಷಿಯು ಕ್ವಾರಂಟೈನ್ ನಲ್ಲಿ ಇದ್ದುದ್ದರಿಂದ ಪಂಜರದ ಹೊರಗೆ ನಿಂತು ಅದರ ಜೊತೆ ಸ್ವಲ್ಪ ಸಮಯಕಳೆದು ಹೊರಟು ನಿಂತಾಗ ಆ ಪಕ್ಷಿಯು ತನ್ನನ್ನು ಬಿಟ್ಟು ಹೋಗುತ್ತಿದ್ದಾನೆಂದು ರೋದಿಸಲು ಶುರುಮಾಡಿತು. ಇದನ್ನು ಕಂಡು ಅಲ್ಲಿದ್ದವರೆಲ್ಲರ ಕಣ್ಣಂಚು ಒದ್ದೆಯಾಯಿತು ಮತ್ತು ಆರಿಫ್ ವಾಸ್ತವತೆಯ ಅರಿವಿದ್ದುದ್ದರಿಂದ ಮಾತನಾಡದೆ ನೋವಿನಿಂದಲೇ ಹಿಂತಿರುಗಿದನು. ಅಲ್ಲಿನ ಪಶುವೈದ್ಯರು ಈ ಪಕ್ಷಿಯು ಇನ್ನೂ ಐದು ವರ್ಷ ಬಿಟ್ಟರು ಆರಿಫ್ ನನ್ನ ಗುರುತು ಹಿಡಿಯುತ್ತದೆ ಎಂದು ಅವರಿಬ್ಬರ ಒಂದು ವರುಷದ ಬಾಂದವ್ಯ ಅಷ್ಟರ ಮಟ್ಟಿಗೆ ಬೆಸೆಯಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಶ್ಚರ್ಯವೆಂದರೆ ಅಂದು ಬಂದಿದ್ದ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಕ್ರೌಂಚ ಪಕ್ಷಿಯನ್ನು ಕಳುಹಿಸಿಕೊಟ್ಟಿದ್ದರೂ ಆರಿಫ್ ನ ವಿರುದ್ಧ ವನ್ಯಜೀವಿ ಕಾನೂನಿನಡಿ ಪ್ರಕರಣ ದಾಖಲಿಸಿಲಾಗಿದೆ. ಆರಿಫ್ ತಾನು ಪಕ್ಷಿಯನ್ನು ಪಂಜರದಲ್ಲಿ ಇಟ್ಟಿರಲಿಲ್ಲವೆಂದು ಅದರ ಇಷ್ಟದ ಹಾಗೆ ಇರಲು ಬಿಟ್ಟಿದ್ದನೆಂದು ಹಾಗು ಅದನ್ನು ಮುತುವರ್ಜಿವಹಿಸಿ ನೋಡಿಕೊಂಡಿದ್ದರು ಸಹ ತನ್ನ ಮೇಲೆ ವನ್ಯಜೀವಿ ಕಾಯ್ದೆಯ ಅಡಿ ಕೇಸು ದಾಖಲಾಗಿರುವುದ್ದಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದಾನೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ತಾನು ಆರಿಫ್ ನನ್ನು ಸಂದರ್ಶಿಸಿ ಅಭಿನಂದನೆಗಳನ್ನು ತಿಳಿಸಲು ಹೋಗಿದ್ದೆನೆಂದು ಈ ಭೇಟಿಯನ್ನು ರಾಜಕೀಯ ಬಣ್ಣಕ್ಕೆ ತಿರುಗಿಸಿರುವುದು ವಿಷಾದನೀಯ ಎಂದು ಹೇಳಿಕೆ ನೀಡಿದ್ದಾರೆ.
ಆಶ್ಚರ್ಯಕರ ಬೆಳವಣಿಗೆಯೆಂದರೆ ಈ ಕ್ರೌಂಚ ಪಕ್ಷಿಯ ಪರವಾಗಿ “ಕ್ರೌಂಚ ಪಕ್ಷಿಯನ್ನು ಹಾರಲು ಬಿಡಿ” ಎಂದು ಸಾರ್ವಜನಿಕ ಮನವಿಯನ್ನು ದಾಖಲಿಸಲಾಗಿದೆ. ಕ್ವಾರಂಟೈನ್ ನೆಪದಲ್ಲಿ ಅನಗತ್ಯವಾಗಿ ಪಕ್ಷಿಯನ್ನು ಮೃಗಾಲಯಕ್ಕೆ ಸಾಗಿಸಿ ಅದರ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಿ ಅದನ್ನು ಮತ್ತೆ ಹಿಂದಿನಂತೆ ಸ್ವತಂತ್ರವಾಗಿ ಹಾರಲು ಬಿಡಬೇಕು ಎಂದು ವಿನಂತಿಸಿ, ಮನುಷ್ಯ ಪಕ್ಷಿಯ ಜೊತೆ ಸ್ನೇಹದಿಂದ ಇದ್ದ ಮಾತ್ರಕ್ಕೆ ಅದನ್ನು ಅಪರಾಧವೆಂದು ಪರಿಗಣಿಸಿದ್ದೇಕೆಂದು ಕೂಡ ಪ್ರಶ್ನಿಸಲಾಗಿದೆ.
ಈ ಕ್ರೌಂಚ ಪಕ್ಷಿಯ ಪರ ಮನವಿಯನ್ನು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಮತ್ತೆ ಹಾರಲು ಬಿಡುತ್ತಾರಾ? ಮತ್ತೆ ಆ ಪಕ್ಷಿಯು ಆರಿಫ್ ನ ಮನೆಯಂಗಳಕ್ಕೆ ಸ್ನೇಹದ ನೆನಪಿನಿಂದ ಮರಳಿ ದಾವಿಸುತ್ತದ? ಕಾದು ನೋಡಬೇಕು.
ಕು ಶಿ ಚಂದ್ರಶೇಖರ್