ಆರೋಗ್ಯ ರಕ್ಷಕ ದೊಡ್ಡಪತ್ರೆ

ಆರೋಗ್ಯ ರಕ್ಷಕ ದೊಡ್ಡಪತ್ರೆ

ಇದೇನಪ್ಪಾ ಹೀಗೊಂದು ದೊಡ್ಡದಾದ ಪತ್ರೆ (ಎಲೆ) ಎಂದುಕೊಂಡಿದ್ದೀರಾ? ಇದೊಂದು ರೀತಿಯಲ್ಲಿ ದೊಡ್ಡದಾದ ಪತ್ರೆಯೇ ಹೌದು. ಸಂಸ್ಕೃತದ ಭಾಷೆಯಲ್ಲಿ ಪತ್ರೆ ಎಂದರೆ ಎಲೆ ಎಂದರ್ಥ. ‘ಹಿತ್ತಿಲ ಗಿಡ ಮದ್ದಲ್ಲ’ ಎಂಬ ನಾಣ್ಣುಡಿಯಂತೆ ಅದೆಷ್ಟೋ ಮಂದಿಗೆ ತಮ್ಮ ಮನೆಗಳ ಹಿತ್ತಿಲಲ್ಲಿ ಬೆಳೆಯುವ ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ತಿಳಿದೇ ಇಲ್ಲವೆನ್ನಬಹುದು. ಏಕೆಂದರೆ ಮಲೆನಾಡಿನ ಬಹುತೇಕ ಮನೆಗಳಲ್ಲಿ ಹಾಗೂ ಕೃಷಿ ಜಮೀನಿನಲ್ಲಿ ಈ ಸಸ್ಯವು ಸಾಮಾನ್ಯವಾಗಿದ್ದರೂ ಇವುಗಳ ಬಳಕೆಯೆ ಬಹುತೇಕರಿಗೆ ತಿಳಿಯದಿರುವುದು ದುರಂತವೇ ಸರಿ.

‘ದೊಡ್ಡಪತ್ರೆ’ ಸಸ್ಯವನ್ನು ಆಯುರ್ವೇದ ಶಾಸ್ತ್ರದಲ್ಲಿ ‘ಪಾಷಾಣ ಬೇಧಿ ಕರ್ಪೂರವಳ್ಳಿ’, ‘ಸಾಂಬಾರು ಬಳ್ಳಿ’ ಎಂದು, ಆಂಗ್ಲ ಭಾಷೆಯಲ್ಲಿ ಇದನ್ನು ‘ಕೋಲಿಯಸ್ ಅಂಬೊನಿಕಸ್’ ಎಂದು ಕರೆಯುತ್ತಾರೆ. ಈ ಸಸ್ಯದ ಮೂಲ ಪೂರ್ವ ಮತ್ತು ಪಶ್ಚಿಮ ಆಫ್ರಿಕಾವಾಗಿದ್ದು, ಈ ಸಸ್ಯವು ‘ಲ್ಯಾಮಿನೋಸಿ’ ಎಂಬ ಸಸ್ಯ ಪ್ರಬೇಧಕ್ಕೆ ಸೇರಿದ್ದು, ಶಾಸ್ತ್ರದಲ್ಲಿ ಇದನ್ನು ‘ಕೋಲಿಯಸ್ ಆರೋಮಾಟಿಕಸ್’ ಎಂದು ಕರೆಯುತ್ತಾರೆ. ಇದರ ಎಲೆಯನ್ನು ಇತರ ಸಸ್ಯದ ಎಲೆಗಳಿಗೆ ಹೋಲಿಸಿದಾಗ ಮುಟ್ಟಿದಾಗ ಅತ್ಯಂತ ದಪ್ಪವಾಗಿರುವ ಕಾರಣ ಇದಕ್ಕೆ ‘ದೊಡ್ಡಪತ್ರೆ’ ಎಂಬ ಹೆಸರು ಅನ್ವರ್ಥವಾಗಿದೆ. ಈ ಸಸ್ಯವನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಿದ್ದು, ಅದನ್ನು ಅಲಂಕಾರಕ್ಕಾಗಿ, ಮನೆ ಔಷಧಿಗಾಗಿ ಹಾಗೂ ಆಹಾರವಾಗಿಯೂ ಬಳಸುತ್ತಾರೆ.

ಈ ಸಸ್ಯವು ಗಾತ್ರದಲ್ಲಿ ಸುಮಾರು ಮೂವತ್ತರಿಂದ ತೊಂಬತ್ತು ಸೆಂ.ಮೀ ಎತ್ತರಕ್ಕೆ ಬೆಳೆಯಬಲ್ಲವುಗಳಾಗಿದ್ದು, ಇವುಗಳ ಹೂವು ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುತ್ತದೆ. ಆಫ್ರಿಕಾದ ದೇಶಗಳಲ್ಲಿ ಇದರ ಎಲೆಯನ್ನು ಪುದೀನ ಸೊಪ್ಪಿಗೆ ಪರ್ಯಾಯವಾಗಿ ಮಾಂಸಾಹಾರ ತಯಾರಿಯಲ್ಲಿ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಇದರಿಂದ ತಯಾರಿಸಿದ ಚಟ್ನಿ, ತಂಬುಳಿ ಮತ್ತು ಗೊಜ್ಜು ಅತ್ಯಂತ ರುಚಿಕರ.

ಈ ಸಸ್ಯದ ಎಲೆಯನ್ನು ಕಿವುಚಿದಾಗ ‘ಕರ್ಪೂರದ’ ವಾಸನೆಯನ್ನು ಹೊಂದಿರುವುದರಿಂದ ಇದಕ್ಕೆ ‘ಕರ್ಪೂರವಳ್ಳಿ’ ಎಂಬ ಹೆಸರು ಬಂದಿದ್ದು, ಇದು ಒಂದು ರೀತಿಯಲ್ಲಿ ಬಳ್ಳಿಯೂ ಅಲ್ಲದ ಸಂಪೂರ್ಣವಾಗಿ ಸಸ್ಯವೂ ಅಲ್ಲದಂತಹ ಪ್ರಬೇಧಕ್ಕೆ ಸೇರಿದೆ. ಈ ಸಸ್ಯವು ಅತ್ಯಂತ ಹೆಚ್ಚಿನ ಪ್ರಮಾಣದ ಔಷಧೀಯ ಗುಣವನ್ನು ಹೊಂದಿರುವ ಕಾರಣದಿಂದ ಸಣ್ಣ ಮಕ್ಕಳು ಮತ್ತು ಶಿಶುಗಳಿಗೆ ಮನೆ ಔಷಧಿಯಾಗಿ ಚಿಕಿತ್ಸೆಯನ್ನು ನೀಡಲು ಮನೆಯಂಗಳದಲ್ಲಿ ಹಾಗೂ ಹಿತ್ತಿಲಲ್ಲಿ ಹಿರಿಯರು ಯಥೇಚ್ಛವಾಗಿ ಬೆಳೆಯುತ್ತಿದ್ದರು. ದೊಡ್ಡಪತ್ರೆಯ ಎಲೆಯನ್ನು ಚೆನ್ನಾಗಿ ಜಜ್ಜಿ ರಸವನ್ನು ಜೇನು ನೊಣದ ಕಡಿತ, ಕೀಟ ಕಡಿತ, ಚರ್ಮದ ಉರಿಯೂತ ಮತ್ತು ಚರ್ಮದ ಗಾಯಗಳನ್ನು ವೇಗವಾಗಿ ಶಮನಗೊಳಿಸುತ್ತದೆ. ಇದರ ಎಲೆಯನ್ನು ಚೆನ್ನಾಗಿ ಶುಚಿಗೊಳಿಸಿ ಶುಂಠಿ ರಸದಲ್ಲಿ ಅದ್ದಿ ನಂತರ ಹದವಾದ ಉರಿಯಲ್ಲಿ ಸುಟ್ಟು ಅದರ ರಸವನ್ನು ತಲೆಗೆ ಚೆನ್ನಾಗಿ ಲೇಪಿಸುವುದರಿಂದ ಕಟ್ಟಿದ ಮೂಗು, ಕೆಮ್ಮು ಮತ್ತು ತಲೆನೋವು ಶೀಘ್ರವಾಗಿ ಕಡಿಮೆಯಾಗುವುದು. ಇದರ ಎಲೆಯನ್ನು ಸ್ವಚ್ಛಗೊಳಿಸಿ ಜೇನುತುಪ್ಪದೊಂದಿಗೆ ಚೆನ್ನಾಗಿ ಕಿವುಚಿ ತಿಂದಲ್ಲಿ ಗಂಟಲು ಕೆರೆತವು ಉಪಶಮನಗೊಳ್ಳುತ್ತದೆ. ಇದರ ಎಲೆಯನ್ನು ಚೆನ್ನಾಗಿ ಅರೆದು ಅದರ ವಾಸನೆಯನ್ನು ಮೂಗಿನ ಮೂಲಕ ಸೇವಿಸಿದರೆ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ.

ದೊಡ್ಡಪತ್ರೆ ಎಲೆಯನ್ನು ಹತ್ತು ಹದಿನೈದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ನಂತರ ಅದನ್ನು ಅರೆದು ಶಾಂಪೂವಿನಂತೆ ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದರೆ ‘ತಲೆಹೊಟ್ಟು’ ಮಾಯವಾಗುತ್ತದೆ. ಇದು ಶ್ವಾಸಕೋಶವನ್ನು ಆರೋಗ್ಯಕರವಾಗಿಡುವ ‘ಡಯಾಫೋರ್ಟಿಕ್’ ಆಗಿಯೂ ಕೆಲಸ ನಿರ್ವಹಿಸುತ್ತದೆ. ಇದರ ಎಲೆಯ ಜ್ಯೂಸ್‌ ಅನ್ನು ಕುಡಿಯುವುದರಿಂದ ‘ಯುರಿಕಟೇರಿಯಾ’ ಮತ್ತು ಅಲರ್ಜಿಯ ಸಮಸ್ಯೆಯು ನಿವಾರಣೆಯಾಗುತ್ತದೆ. ನಿಯಮಿತವಾಗಿ ದೊಡ್ಡಪತ್ರೆಯ ಎಲೆಯ ರಸವನ್ನು ಕುಡಿಯುವುದರಿಂದ ಮಹಿಳೆಯರ ಗರ್ಭಾಶಯದ ಸ್ನಾಯುಗಳನ್ನು ಮತ್ತು ಕರುಳನ್ನು ತೀಕ್ಷಣಗೊಳಿಸುವುದರೊಂದಿಗೆ ಸ್ನಾಯುಗಳ ವಿಶ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರ ಎಲೆಯಲ್ಲಿ ಅತೀ ವಿಶಿಷ್ಟವಾದ ‘ಗ್ಲುಕೋಸೈಡ್’, ‘ಲಯೂಟಿಯೋಲಿನ್’ ಮತ್ತು ‘ಆಪಿಗೆನಿನ್’ ಅಂಶಗಳನ್ನು ಒಳಗೊಂಡಿದ್ದು, ದೇಹದ ಆರೋಗ್ಯವರ್ಧನೆಗೆ ಅತ್ಯಂತ ಉಪಯುಕ್ತವಾಗಿದೆ. ಈ ಎಲೆಯು ಕೆಮ್ಮು ಮತ್ತು ಶೀತಕ್ಕೆ ರಾಮಬಾಣವಾಗಿದ್ದು, ಗ್ಯಾಸ್ಟಿಕ್ ಸಮಸ್ಯೆಯನ್ನು ನಿವಾರಿಸುವುದರೊಂದಿಗೆ ದೇಹದಲ್ಲಿರುವ ನಂಜು ಮತ್ತು ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಈ ಎಲೆಯು ದೇಹದಲ್ಲಿ ಪೋಷಕಾಂಶಗಳ ಹೀರುವಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಮಹಿಳೆಯರ ಋತುಚಕ್ರವನ್ನು ನಿಯಂತ್ರಿಸುವಲ್ಲಿಯೂ ಪ್ರಮುಖವಾದ ಕೆಲಸವನ್ನು ನಿರ್ವಹಿಸುತ್ತದೆ. ಇದು ಮನುಷ್ಯನ ದೇಹದಲ್ಲಿ ಹೊಸತಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಪುನರುತ್ಪಾದಿಸಲು ಸಹಾಯ ಮಾಡುವುದರೊಂದಿಗೆ ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುತ್ತದೆ.

ಇಷ್ಟೆಲ್ಲಾ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ‘ದೊಡ್ಡಪತ್ರೆ’ ಯು ಇಂದು ವಿನಾಶದ ಅಂಚಿನಲ್ಲಿದ್ದು, ಇದನ್ನು ಅಳಿಯದಂತೆ ನೋಡಿಕೊಳ್ಳಬೇಕಾಗಿದೆ. ಈ ಸಸ್ಯವನ್ನು ಮನೆ ಮನೆಗಳಲ್ಲೂ ಆರೋಗ್ಯವರ್ಧಕ ಸಸ್ಯವನ್ನಾಗಿ ಬೆಳೆಯವ ಮೂಲಕ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ.

ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ
ದೂ: 9742884160

Related post

Leave a Reply

Your email address will not be published. Required fields are marked *