ಆವರ್ತ – ಮನಸಿನ ಅರಿಗಳ ಅರಸುತ್ತಾ

ಆವರ್ತ-ಮನಸಿನ ಅರಿಗಳ ಅರಸುತ್ತಾ

ಆಶಾ ರಘು ಅವರೇ ಹೇಳುವಂತೆ, ’ಆವರ್ತ’ ಅವರ ಮಹತ್ವಾಕಾಂಕ್ಷೆಯ ಕಾದಂಬರಿ. ʻಹೌದು, ಇದು ಒಂದು ಮಹತ್ವಾಕಾಂಕ್ಷೆಯ ಕಾದಂಬರಿಯೇʼ ಎಂದು ಓದುಗರನ್ನೂ ಒಪ್ಪಿಸಬೇಕಾದರೆ ಎಷ್ಟು ಸಶಕ್ತವಾಗಿ ಇರಬೇಕು ಎನ್ನುವ ಕಲ್ಪನೆ, ಬಹಶಃ ಆಶಾ ಅವರಿಗೆ ಸುಲಭವಾಗಿ ಅರ್ಥವಾಗಿಬಿಟ್ಟಿರುವಂತಿದೆ. ಹಾಗಾಗಿಯೇ ʻಆವರ್ತʼ ಓದುತ್ತಾ ಹೋದಂತೆ ಅದು ಓದುಗನನ್ನು ಆವರಿಸಿಕೊಂಡು ಬಿಡುತ್ತದೆ. ಎಲ್ಲ ನವರಸಗಳು ಓದುಗನ ಮೇಲೆ ಮುಕುರಿ ಬಿದ್ದು ಅವನು ಭಾವನೆಗಳ ತೀವ್ರ ಏರಿತಗಳನ್ನು ಗಾಢವಾಗಿ ಅನುಭವಿಸುವುದು ಉಚಿತವೆನಿಸಿ ತನ್ಮೂಲಕ ಅನಿವಾರ್ಯವೂ ಆಗಿ ಬಿಡುತ್ತದೆ. ನಮ್ಮ ಮನಸ್ಸಿನ ಭೂಮಿಕೆಯಲ್ಲಿ ವಿಶಾಲವಾಗಿ ತೆರೆದುಕೊಳ್ಳುವ ಪ್ರತೀಪನ ರೋಮಾಂಚಭರಿತ ಬದುಕಿನ ಪಯಣ.. ಅದು ಒಂದು ನೆಲೆಗೆ ನಿಲ್ಲುವವರೆಗೂ ನಮ್ಮನ್ನೂ ಅವನ ಜೀವನದ ಏರಿಳಿತಗಳ ಹೊಯ್ದಾಟಗಳಲ್ಲಿ ರಭಸವಾಗಿ ಕೊಂಡೊಯ್ಯುತ್ತದೆ.

ʻಆವರ್ತʼ ಹೆಸರೇ ಹೇಳುವಂತೆ, ಕಾದಂಬರಿಯು ನೂರಾರು, ಪ್ರಮುಖವಾಗಿ ಪ್ರತೀಪನ ಜೀವನದ ಘಟನಾವಳಿಗಳ ನಿರೂಪಣೆ. ತನ್ನ ಜೀವನದ ಸಿಂಹಾವಲೋಕನ ಮಾಡಿಕೊಳ್ಳುವ ಪ್ರತೀಪ, ತನ್ನ ಹುಟ್ಟು, ಬೆಳವಣಿಗೆ, ವಿದ್ಯಾಭ್ಯಾಸ, ಜೀವನದುದ್ದಕ್ಕೂ ಕಾಪಿಟ್ಟುಕೊಂಡ ಮೊದಲ ಪ್ರೇಮ, ಅವನ ಜೀವನದಲ್ಲಿ ಬಂದ ಹೆಣ್ಣುಗಳು, ಅರಿಷಡ್ವರ್ಗಗಳ ಮೇಲಾಟ, ಪಶ್ಚಾತ್ತಾಪ, ಪ್ರಾಯಶ್ಚಿತ್ತ, ವೈರಾಗ್ಯ ಎಲ್ಲವನ್ನೂ ಸವಿಸ್ತಾರವಾಗಿ ಹೇಳುತ್ತಾ ಹೋಗುತ್ತಾನೆ. ಕಾದಂಬರಿಯ ಹರಹು ಎಷ್ಟು ವಿಶಾಲ ಎಂದರೆ, ಕಾದಂಬರಿ ಮುಗಿಯುವ ಹೊತ್ತಿಗೆ ನಿಧಾನವಾಗಿ ನಾವೂ ಅವನ ಸಾಮ್ರಾಜ್ಯದ ಪ್ರಜೆಗಳಂತಾಗಿ ಅವನಿಗಾಗಿ ಮರುಗುತ್ತೇವೆ, ಸಿಟ್ಟಾಗುತ್ತೇವೆ, ಅಸಹ್ಯ ಪಟ್ಟುಕೊಳ್ಳುತ್ತೇವೆ, ದುಃಖ ಪಡುತ್ತೇವೆ, ಬೆರಗಾಗುತ್ತೇವೆ. ಜೀವನದ ಸಮಸ್ತ ಮುಖಗಳ ಪರಿಚಯವಾಗುತ್ತದೆ.

ಈಗಾಗಲೇ ಸಾಕಷ್ಟು ವಿಮರ್ಶಕರು ʻಆವರ್ತʼ ವನ್ನು ಅರಿಷಡ್ವರ್ಗಗಳ ನೆಲೆಯಲ್ಲಿ ನೋಡಿದ್ದಾರಾದ್ದರಿಂದ, ನಾನು ನನ್ನ ಈ ಲೇಖನದಲ್ಲಿ ಕಾದಂಬರಿಯನ್ನು ಸಾಮಾಜಿಕ ನೆಲೆಯಲ್ಲಿ ಅರಿತುಕೊಳ್ಳಲು ಯತ್ನಿಸಿದ್ದನ್ನು ತಿಳಿಸಬೇಕೆಂದಿದ್ದೇನೆ.

ಇತ್ತೀಚೆಗಿನ ಆಶಾ ಅವರ ಕಾದಂಬರಿ, ʻಮಾಯೆʼ, ೧೨ನೆಯ ಶತಮಾನದಲ್ಲಿ ನಡೆಯುವ ಕತೆಯನ್ನು ಹೇಳುತ್ತದೆ. ʻಆವರ್ತʼ ಪ್ರಾಚೀನ ಕಾಲಘಟ್ಟದಲ್ಲಿ ನಡೆಯುವ ಕತೆಯಾಗಿದೆ. ಸಂಸ್ಕೃತವೇ ಆಡುಭಾಷೆಯಾಗಿದ್ದ ಕಾಲದಲ್ಲಿ ಕತೆ ನಡೆಯುತ್ತದೆ. ಮನುಷ್ಯನ ಬದಲಾಗದ ಗುಣಸ್ವಭಾವಗಳ ಗಾಥೆಯಂತಿರುವ ಈ ಕತೆ, ಆಶಾ ಅವರ ಪರೀಕ್ಷಕ ದೃಷ್ಟಿ, ಅಧ್ಯಯನಶೀಲತೆಗೆ, ಕತೆ ಕಟ್ಟುವ ಸೂಕ್ಷ್ಮೆ, ಉಚ್ಛ ಕಲ್ಪನಾಶೀಲತೆಗೆ ಬಾಷ್ಯದಂತಿದೆ.

ನಮಗೆ ಪ್ರಾಚೀನ ಕಾಲದ ಬಗ್ಗೆ ಇರುವ ಕುತೂಹಲ ಯಾವತ್ತೂ ತಣಿಯದಂಥದ್ದು. ಅತ್ಯಾಧುನಿಕ ಕಾಲದಲ್ಲಿ ಆರಾಮದಾಯಕ ಜೀವನ ನಡೆಸುತ್ತಿರುವ ನಾವು, ಯಾವ ಆಧುನಿಕ ಸೌಕರ್ಯಗಳೂ ಇಲ್ಲದೆ, ಅಂತಹ ವೈಭವಯುತ ಜೀವನವನ್ನು ಅಂದಿನ ಜನ ಹೇಗೆ ಜೀವಿಸಿದ್ದರು? ಏನು ಊಟ ಮಾಡುತ್ತಿದ್ದರು? ಉಡುಗೆ ತೊಡುಗೆಗಳು ಹೇಗಿತ್ತು? ಅವರ ಇರಸರಿಕೆ ಹೇಗಿತ್ತು? ರಾಜ ರಾಣಿಯರ ಅಂತರಿಕ ಜೀವನ ಹೇಗಿರುತ್ತಿತ್ತು? ಹೀಗೆ… ನಮ್ಮ ಕುತೂಹಲಗಳು ಅನಿಯಂತ್ರಿತವಾಗಿ ನಮ್ಮನ್ನು ಕಾಡಿಸುತ್ತವೆ. ಪ್ರಾಚೀನ ಕಾಲವನ್ನು ಓದುಗ ಮೊದಲಿಗೇ ಮನದಲ್ಲಿ ಮೂಡಿಸಿಕೊಂಡಿರುತ್ತಾನೆ. ಆಶಾ ಅವರ ಆ ಕಾಲದ ವಿವರಣೆಗಳು ಓದುಗನ ಕಲ್ಪನೆಯೊಂದಿಗೆ ತಾಳೆಯಾಗುವುದೇ ರಮ್ಯವೆನಿಸುತ್ತದೆ. ಅಂತಹ ಒಂದು ವಿಶಿಷ್ಟ ಲೋಕದ ನೈಜ ಅನಾವರಣ ಕಾದಂಬರಿಗೆ ಬೇಕಾದ ವಾತಾವರಣವನ್ನು ಕಟ್ಟಿಕೊಟ್ಟು ಓದುಗರನ್ನು ಭಾವಲೋಕದ ಪಯಣಕ್ಕೆ ಅಣಿ ಮಾಡುತ್ತದೆ.

ಪ್ರತೀಪನ ಜೀವಿತಾವಧಿಯ ಮೊದಲ ಹಂತ ಗುರುಕುಲದೊಂದಿಗೆ ತಳುಕು ಹಾಕಿಕೊಂಡಿದೆ. ಗುರುಕುಲದ ವರ್ಣನೆ, ಅಲ್ಲಿನ ಪದ್ಧತಿಗಳು, ನಿಯಮಗಳು, ಅಲ್ಲಿ ಬದುಕು ಸಾಗುವ ಬಗೆ, ಮಾತಾ-ಪಿತೃಗಳಂತೆ ಪೊರೆಯುವ ಗುರು ಮತ್ತು ಗುರುಮಾತೆ, ಸಮಿತ್ತು, ಹವಿಸ್ಸು, ಗೋಶಾಲೆ, ಯಜ್ಞ ಅಗ್ನಿಹೋತ್ರ, ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಪ್ರತೀಪನ ಮುಂದಿನ ಜೀವನ ತೆರೆದುಕೊಳ್ಳುವುದು ಅರಮನೆಗಳಲ್ಲಿ. ಅರಮನೆಗಳ ವೈಭವವನ್ನು ಕಣ್ಣಮುಂದೆ ಕಡೆದಿಟ್ಟಿದ್ದಾರೆ. ಕಾದಂಬರಿಯಲ್ಲಿ ಭವ್ಯವಾದ ಮಹಲುಗಳು 3-4 ಇವೆ. ಅಭಿಷ್ಯಂತನ, ಮುಂದೆ ಪ್ರತೀಪನದ್ದಾದ ಮುಖ್ಯ ಅರಮನೆ, ಸತ್ಯವತಿಯ ಸೌಗಂಧಿಕಾ ಮಹಲು, ಪ್ರಮದ್ವರೆಗಾಗಿ ನಿರ್ಮಿಸಲ್ಪಟ್ಟ ಗುಲಕಮಲೆ, ಬೇಟೆಯಾಡಿದ ಪ್ರಾಣಿಗಳ ಚರ್ಮ, ತಲೆಗಳಿಂದ ಅಲಂಕರಿಸಲ್ಪಟ್ಟ ಕಾಡಿನ ಮಧ್ಯೆಯಿದ್ದ ಶ್ಲಾಘ್ಯಳ ವಿಲಕ್ಷಣ ಭವನ, ಇವುಗಳೆಲ್ಲದರ ಪ್ರಸ್ತಾಪ ಕಾದಂಬರಿಯಲ್ಲಿ ಉಲ್ಲೇಖವಾಗಿದೆ. ಇವುಗಳ ವೈಭವ-ಆಡಂಬರ, ಉಪ್ಪರಿಗೆಗಳು, ಕಂಬಗಳ ಮೇಲಿನ ಕುಸುರಿ ಕೆತ್ತನೆ, ಛಾವಣಿಯಲ್ಲಿನ ಪ್ರಸಂಗಗಳ ಶಿಲ್ಪ, ಗೋಡೆಗಳನ್ನು ಅಲಂಕರಿಸಿರುಸುವ ವರ್ಣಚಿತ್ರಗಳು, ಪರದೆಗಳು, ಅರಮನೆಯನ್ನು ಬೆಳಗಿಸುವ ಅಸಂಖ್ಯ ದೀಪಗಳು, ಅವು ಆರಿದಾಗ ಬರುವ ಕಮಟು ವಾಸನೆ, ದಾಸಿಯರ ಕಲರವ, ಬೀಸಣಿಗೆ, ಚಾಮರ, ರಥಗಳು ಇವೆಲ್ಲವೂ ಅರಮನೆಯ ಭವ್ಯತೆಯನ್ನು ಚಿತ್ರಿಸಿ, ಮುಂದೆ ಪ್ರತೀಪನ ಕುಟೀರಗಳಲ್ಲಿನ, ಅರಣ್ಯದಲ್ಲಿನ ವಾಸ, ನಡೆದಾಟದ ಸಮಯದಲ್ಲಿ, ದುರಂತದ ತೀವ್ರತೆಯನ್ನು ನಮ್ಮ ಎಣಿಕೆಗೆ ಸಿಗುವಂತೆ ಮಾಡುತ್ತವೆ.

ಅರಮನೆಗಳ ವೈಭವವನ್ನು ಹೇಳುವ ಲೇಖಕಿ, ಅರಮನೆಯಿಂದ ಅನತಿ ದೂರದಲ್ಲಿ ಇರುವ ಸೈನಿಕರ ಬಿಡಾರಗಳ ದುರವಸ್ಥೆ, ಅನೈರ್ಮಲ್ಯ, ಅವ್ಯವಸ್ಥೆಯನ್ನು ಬಣ್ಣಿಸುವಾಗ, ನಾವು ಕಾಣುವ ಅಸಮಾನತೆಯ ಹಿಂದಿನ ಸುದೀರ್ಘ ಇತಿಹಾಸದ ಬೇರಲ್ಲದಿದ್ದರೂ ಬುಡದ ಬಳಿ ಹೋದ ಅನುಭವವಾಗುತ್ತದೆ. ಈ ತಾರತಮ್ಯ ಇಂದು ನಿನ್ನೆಯದಲ್ಲ ಎಂಬ ಅರಿವು ಮೂಡುತ್ತದೆ. ಲೇಖಕಿ ಪ್ರಾಚೀನ ಕಾಲದ ಸೈನ್ಯದ ಸೇನಾಮುಖ, ಗುಲ್ಮ, ಗಣ, ವಾಹಿನಿ, ಪೃಥನಾ, ಚಮೂ, ಅನೀಕಿನಿ, ಅಕ್ಷೌಹಿಣಿಗಳನ್ನು ವಿವರಿಸುತ್ತಾರೆ.

ಆಶಾ ಅವರು ಕಾದಂಬರಿಯ ಉದ್ದಕ್ಕೂ ನಮ್ಮನ್ನು ಕಾಡಿನಲ್ಲಿ ಅಲೆದಾಡಿಸಿ ಬಿಡುತ್ತಾರೆ. ಪ್ರತೀಪನ ಜೊತೆಗೆ ನಾವು ಮಾಲಿನ್ಯವಿಲ್ಲದ, ಜುಳುಜುಳು ಎಂದು ಹರಿಯುವ ತೊರೆಯ, ಹಕ್ಕಿ ಪಕ್ಷಿಗಳ ಕೂಜನದಿಂದ ಮಾರ್ದನಿಸುವ, ತಂಪಾದ ಗಾಳಿ ಬೀಸುವ, ಫಲ ಪುಷ್ಪಭರಿತ ವೃಕ್ಷಗಳಿರುವ, ನಿಬಿಡ ಅರಣ್ಯವನ್ನು ಲೆಕ್ಕವಿಲ್ಲದಷ್ಟು ಬಾರಿ ಸುತ್ತಿ ಬರುತ್ತೇವೆ. ಕಾಲಿನಲ್ಲೇ ಅವನೊಂದಿಗೆ, ನಾಡಿಕಾ-ಪ್ರಹರ ಕಾಲದಲ್ಲಿ, ಕ್ರೋಶ, ಯೋಜನ ಅಥವಾ ಒಂದು ದಿನದ ದಾರಿಗಳನ್ನು ಕ್ರಮಿಸುತ್ತೇವೆ! ಎಡ ಬಲಗಳ ಲೆಕ್ಕ ಬಿಟ್ಟು, ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣಗಳೆಂದು ದಾರಿ ಹುಡುಕುತ್ತೇವೆ. ಗಡಿಯಾರದಿಂದ ವಿಮುಖರಾಗಿ ಸೂರ್ಯನನ್ನು ನೋಡಿ ಸಮಯ ಲೆಕ್ಕಹಾಕುವಂತಾಗುತ್ತದೆ! ಅಷ್ಟರಮಟ್ಟಿಗೆ ಹಿಂದಕ್ಕೆ ಕರೆಯ್ಯುತ್ತಾರೆ ಲೇಖಕಿ!

ಇನ್ನು ಅವರು ʻಆವರ್ತʼ ದ 149 ಪಾತ್ರಗಳಿಗೆ, ಪ್ರದೇಶಗಳಿಗೆ, ಭವನಗಳಿಗೆ ನೀಡಿರುವ ಹೆಸರುಗಳು… ನಾಯಕನ ಹೆಸರೇ ವಿರಳ ವಿಶಿಷ್ಟ, ಪ್ರತೀಪ. ಪ್ರಮದ್ವರೆ, ಶ್ಲಾಘ್ಯ, ಲಾಕ್ಷಿ, ಕಾಂತಲತೆ, ಸ್ಫುರಿತೆ, ಕುಜ್ಝಟಿಕಾ, ಪ್ರಹೇಲಿಕಾ, ಸುರಲೀಲ, ಸ್ತವ, ಪೋತ್ರ, ಅಶ್ವಶಲ್ಯ, ಸುಮೇರು, ಉದ್ಯೋತ, ಕಾಕಿನಿ, ಅಜಗಂಧಿಕಾವನ, ಶಲಾಕ ರಾಜ್ಯ, ಚಣಕ, ಹಂಸದ್ವಾರಾ ನಗರಿ, ತ್ರಿಭುವನಂದನಗರಿ, ಗುಲಕಮಲೆ ಭವನ, ವಿತಸ್ಥಿ, ಧವಳಪುರಿ…! ಪುರಾಣಕಾಲದ ಭಾವವನ್ನು ತುಂಬಿಬಿಡುತ್ತವೆ. ಎಲ್ಲ ಪಾತ್ರಗಳನ್ನು ಕಾದಂಬರಿಯ ಶುರುವಿನಿಂದ ಅಂತ್ಯದವರೆಗೂ ಹದ ತಪ್ಪದಂತೆ ನಿರ್ವಹಿಸಿರುವ ಲೇಖಕಿ, ಎಲ್ಲಿಯೂ ಪಾತ್ರಗಳ ವರ್ತನೆ ಅಸಂಬದ್ಧವಾಗುವಂತೆ ಚಿತ್ರಿಸಿಲ್ಲ. ಬೃಹತ್‌ ಕಾದಂಬರಿಯಲ್ಲಿ ಪಾತ್ರಗಳು ಕಾಣೆಯಾಗುವುದಿಲ್ಲ. ಬದಲಿಗೆ ನಿಧಾನಕ್ಕೆ ಎಲ್ಲ ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ ಕಾವ್ಯನ್ಯಾಯವನ್ನು ಪ್ರತಿಪಾದಿಸುತ್ತವೆ. ಸ್ಕಂದ-ಮಧುವಂತಿಯರ ಕತೆ ಇದಕ್ಕೆ ಉತ್ಮ ಉದಾಹರಣೆ. ಅಲ್ಲದೆ, ಪ್ರತೀಪನಿಗೆ ಕೊನೆಗೆ ಸರಿಯಾದ ದಾರಿ ತೋರುವ ಪ್ರತೀಪನ ತಂದೆ ಹಿಮಧ್ವಜನ ಹೊಸಜನ್ಮವಾದ ಯತಿ.

ಪ್ರತೀಪನಲ್ಲಿ ನಾವು ಅರಿಷಡ್ವರ್ಗಗಳನ್ನು ನೋಡುತ್ತೇವೆ, ಚಕ್ರವರ್ತಿಯಾದ ಅವನೂ ಹೇಗೆ ಈ ಅರಿಗಳ ದಾಸನಾಗಿ ಕೀಳು ಮಟ್ಟಕ್ಕೆ ಇಳಿಯುತ್ತಾನೆ ಎಂಬುದನ್ನು ಅತ್ಯಂತ ಮನೋವೈಜ್ಞಾನಿಕ ರೀತಿಯಲ್ಲಿ ರೂಪಿಸಿದ್ದಾರೆ ಲೇಖಕಿ. ವೀರಾಧಿವೀರನಾದ ಅವನು, ಎಲ್ಲವನ್ನೂ ತಿರಸ್ಕರಿಸಿ, ಸ್ವವಿಮರ್ಶೆ ಮಾಡಿಕೊಳ್ಳುತ್ತಾ ಸಾಗುವಾಗ, ನಮ್ಮ ನಮ್ಮ ಒಳಗನ್ನು, ನಡೆಗಳನ್ನು ನುಡಿಗಳನ್ನು, ನಾವೂ ಹೀಗೆಯೆ ವಿಮರ್ಶಿಸಿಕೊಂಡರೆ ಒಳಿತಲ್ಲವೇ ಎಂದು ಥಟ್ಟನೆ ಅನಿಸುವುದು ಕಾದಂಬರಿಯ ವಸ್ತುವಿನ, ನಿರೂಪಣೆಯ ಶಕ್ತಿ. ಅವನು ಸಂಬಂಧ ಬೆಳೆಸಿದ ಮಧುವಂತಿ, ಪ್ರಮದ್ವರೆ, ಸತ್ಯವತಿ, ಲಾಕ್ಷಿ, ಶ್ಲಾಘ್ಯ, ಕಾಂತಲತೆ ಎಲ್ಲರೂ ಅರಿಷಡ್ವರ್ಗಗಳನ್ನು ಪ್ರತಿನಿಧಿಸುತ್ತಾರಾದರೂ, ಕಾದಂಬರಿಯ ಪ್ರತಿ ಹೆಣ್ಣೂ, ಸ್ತ್ರೀ ಸಹಜ ಲಾಲಿತ್ಯ ಸೊಬಗಿನಿಂದ ಕಂಗೊಳಿಸುತ್ತಿದ್ದರೂ, ಅತ್ಯಂತ ಶಕ್ತ ಸ್ತ್ರೀಯರು ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಮಧುವಂತಿ ಅನ್ಯಾಯವಾಗಿ ವೇಶ್ಯೆಯಾದರೂ, ತಾನು ಕಾಣದ ಸ್ಕಂದನನ್ನು, ಪರಿಶುದ್ಧವಾಗಿ ಪ್ರೇಮಿಸಿದವಳು, ಅವನನ್ನು ಸದಾಕಾಲ ಹೃದಯದಲ್ಲಿರಿಸಿಕೊಂಡು, ಪೂಜಿಸಿದವಳು. ಅವನು ಎಲ್ಲೋ ಕೊನೆಯುಸಿರೆಳೆದಾಗ, ಇವಳ ಹೊಟ್ಟೆಯಲ್ಲಿ ಸಂಕಟವಾಗುವಷ್ಟು ತೀವ್ರತರವಾಗಿ ಆರಾಧಿಸಿದ ಪ್ರೇಮಮೂರ್ತಿ ಮಧುವಂತಿ. ಪ್ರತೀಪನನ್ನು ಇನ್ನಿಲ್ಲದಂತೆ, ಪೂಜಿಸಿ, ಆರಾಧಿಸಿ, ಮೋಹಿಸಿ, ಪ್ರೀತಿಸಿದರೂ, ಅವನ ವಿಮುಖತೆಗಿಂತಾ ಹಿಂದೆ ತೋರಿಸಿದ ಅಕ್ಕರೆಯ ನೆನಪೇ ಸಾಕೆಂದು ಅವನಿಂದ ದೂರವಾಗುವ ಗಟ್ಟಿ ನಿರ್ಣಯ ತೆಗೆದುಕೊಂಡ ಪ್ರಮದ್ವರೆ. ಕುಟಿಲತೆಯಿಂದಲೇ ಸಂಬಂಧ ಬೆಳೆಸಿದ ಪ್ರತೀಪನ ಪ್ರತಿಯೊಂದು ಸಂಚುಗಳು ಬಯಲಾದ ಮೇಲೂ, ಅವನನ್ನು ಪ್ರೀತಿಸಿ ಗೌರವಿಸಿ, ಅವನ ಆಟಾಟೋಪ ಮೇರೆ ಮೀರಿದಾಗ, ಧೈರ್ಯ, ಸಾಹಸ, ಜಾಣ್ಮೆಗಳಿಂದ ಪ್ರತೀಪನನ್ನು ಹಿನ್ನೆಲೆಗೆ ಸರಿಸಿ ರಾಜ್ಯವನ್ನು ಮುನ್ನಾಡೆಸಿದ ಸತ್ಯವತಿ, ಸುಕೋಮಲ ಗಂಧರ್ವ ಕನ್ನೆಯೆಂದೆನಿಸಿದರೂ ದ್ರೌಪದಿ ಪಗಡೆಯಾಟದ ಸಂದರ್ಭದಲ್ಲಿ ತನ್ನ ಪಣವನ್ನು ಅತ್ಯಂತ ನ್ಯಾಯಯುತವಾಗಿ ಧಿಕ್ಕರಿಸಿ, ಪ್ರಶ್ನಿಸುವಂತೆ, ದಿಟ್ಟತನದಿಂದ ಪ್ರತೀಪನನ್ನು ಎದುರಿಸಿದ ಕಾಂತಲತೆ. ಅಹಂಕಾರಿ ಎನಿಸಿದರೂ, ಅಪರೂಪದ ನಿಶ್ಚಯ ಶಕ್ತಿ ಹೊಂದಿರುವ ಲಾಕ್ಷಿ, ಅತ್ಯಾಚಾರಿ ಪತಿಯಿಂದ ಮುಗ್ಧ ಬಾಲೆಯನ್ನು ಮಾತ್ರವಲ್ಲದೆ, ರಾಜ್ಯವನ್ನೂ ರಕ್ಷಿಸಿ, ತನ್ನ ಬುದ್ಧಿವಂತಿಕೆಯ ರಾಜಕೀಯ ನಡೆಗಳಿಂದ ಪ್ರತೀಪನಂತಹ ಚಕ್ರವರ್ತಿಯನ್ನು ನಿಯಂತ್ರಿಸಿದ ಶ್ಲಾಘ್ಯೆ. ಚಕ್ರವರ್ತಿ ಪ್ರತೀಪನ ಬದುಕಿನಲ್ಲಿ ಅಸಾಧ್ಯ ಬದಲಾವಣೆಗಳನ್ನು ತರುವ ಇವರೆಲ್ಲರೂ ಸಮಾಜದಲ್ಲಿ ಇಂದಿಗೂ ಇರಲೇಬೇಕಾದ ಗಟ್ಟಿಗಿತ್ತಿಯರು.

ರಾಜ್ಯ ಕೋಶಗಳನ್ನು ತೊರೆದ ಪ್ರತೀಪ, ಸಣ್ಣ ಗುಡಿಸಲಲ್ಲಿ ನೆಮ್ಮದಿಯಿಂದ ಉಳಿದ ಜೀವನ ಸಾಗಿಸುವುದು, ಹುಚ್ಚು ಕುದುರೆಯ ಹಿಂದೆ ಓಡುತ್ತಿರುವ ಆಧುನಿಕರೆಲ್ಲರಿಗೂ ಒಂದು ಕಿವಿಮಾತಿನಂತಿದೆ. ಕಾದಂಬರಿಯ ಅಂತ್ಯದಲ್ಲಿ ಮಳೆ ಮೋಡ ಮಿಂಚು ಗುಡುಗುಗಳು ಕಾಣಿಸಿಕೊಳ್ಳುತ್ತವೆ. ಜೀವನ ಎಂದೂ ಮುಗಿಯದ ಚಕ್ರ, ಅದು ಸದಾ ಹಸಿರು ಎಂಬುದನ್ನು ಲೇಖಕಿ ಸೂಕ್ಷ್ಮವಾಗಿ ಧ್ವನಿಸಿರುವಂತಿದೆ.

ʻಆವರ್ತʼ, ಆಶಾ ರಘು ಅವರ ಮಹತ್ವಾಕಾಂಕ್ಷೆಯ ಕಾದಂಬರಿ, ಕೇವಲ ದೀರ್ಘ ಕಥನವಲ್ಲ. ಅದೊಂದು ಸಾಂಸ್ಕೃತಿಕ ದಾಖಲೆಯಂತಿದೆ. ಅವರ ಪರಿಶ್ರಮ ಕಾದಂಬರಿಗೆ ಇನ್ನಿಲ್ಲದ ಅಧಿಕೃತ ಮುದ್ರೆಯಾಗಿದೆ. ಮಹಾಭಾರತ ಹೇಗೆ ಎಲ್ಲ ಕಾಲದಲ್ಲೂ ಪ್ರಸ್ತುತವೋ ಹಾಗೆಯೇ, ಮನೋವ್ಯಾಪಾರಗಳನ್ನು ತೆರೆದಿಡುವ ʻಆವರ್ತʼ ನಮ್ಮೆಲ್ಲರಿಗೂ ಕನ್ನಡಿಯಂತೆ ಆಗಬಹುದು ಎಂಬುದು ನನ್ನ ಬಲವಾದ ಅನಿಸಿಕೆ.

ತಮಗೆ ‘ಆವರ್ತ’ ಕಾದಂಬರಿ ಬೇಕಾದಲ್ಲಿ ರಘುವೀರ್ ಅವರನ್ನು 99459 39436 ಮೂಲಕ ಸಂಪರ್ಕಿಸಿ, ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತರಿಸಿಕೊಳ್ಳಿ.

ನಿವೇದಿತಾ.ಎಚ್‌.ವಿಜಯ್

Related post

Leave a Reply

Your email address will not be published. Required fields are marked *