ಮೌನ ಮಾತುಗಳ
ನಡುವೊಂದು ವೃತ್ತ
ಎಷ್ಟೆಲ್ಲಾ ಸುತ್ತಿ ಬಂದರೂ
ಮತ್ತೆ ನಿನ್ನೆಡೆಗೇ ಹರಿಯುತಿದೆ ಚಿತ್ತ
ಮೌನದೊಳಗಿನ ಮಾಧುರ್ಯ
ಮಾತಿನೊಳಗಿನ ಚಾತುರ್ಯ
ಬಗೆದಷ್ಟೂ ವಿಸ್ಮಯ ನಿನ್ನಾಂತರ್ಯ
ಕೇಳಬೇಕಿದೆ ಕೇಳಿಸಬೇಕಿದೆ
ಮಾತುಗಳ ನಡುವಿನ ಎದೆಬಡಿತ
ಮೌನದೊಳಗಿನ ಸಂಗೀತ
ಹಾಡಬೇಕಿದೆ ಹಾಡಿಸಬೇಕಿದೆ
ಒಂದೆರಡು ಭಾವಗೀತೆಗಳ
ಹೇಳಬೇಕಿದೆ ಹೇಳಿಸಬೇಕಿದೆ
ಹೊಸ ಕನಸುಗಳ ಕಥೆಗಳ
ಕೈ ಕೈ ಹಿಡಿದು ಕೆನ್ನೆ ಹಿಂಡಿ
ಆಗಾಗ ನಡು ಬಳಸಿ
ನಿನ್ನ ಮೂಗಿಗೆ ನನ್ನ ಮೂಗನು ತಿಕ್ಕಿ
ನಕ್ಕಾಗ ಬೀಳುವ ನಿನ್ನ
ಕೆನ್ನೆಯ ಗುಳಿಯ ಗಮನಿಸುತ
ಸಾಗಬೇಕಿದೆ ಸಾಗರದಗುಂಟ
ಸಾಗರದ ಅಲೆಗಳಂತೆ
ನಿನ್ನೆಡೆಗೆ ಉಕ್ಕೇರಿ
ಬಂದು ಬಡಿಯುವ
ಭಾವಗಳಲೆಯ ಲೆಕ್ಕವನು
ಏಳುವ ಅಲೆಗಳೊಡನೆ
ಸಮೀಕರಿಸುತ
ತಪ್ಪೋಣ ಲೆಕ್ಕಚಾರಗಳನು
ಮತ್ತೆ ಮತ್ತೆ ಒಂದಿಷ್ಟು
ಮಾತಾಡುತಾ
ಮಧ್ಯೆ ಮಧ್ಯೆ ಮೌನಕೆ
ಶರಣಾಗುತಾ
ಕಳೆದುಹೋಗಿಬಿಡೋಣ
ಮೌನ ಮಾತುಗಳ ಆವರ್ತದಲಿ
ಸೌಜನ್ಯ ದತ್ತರಾಜ
ಚಿತ್ರ ಕೃಪೆ: The Arts & Crafts Gallery