ಆಸೆಯೇ ದುಃಖಕ್ಕೆ ಮೂಲ

“ಆಸೆಯೇ ದುಃಖಕ್ಕೆ ಮೂಲ, ಆಸೂಯೆ ಒಳ್ಳೆಯದಲ್ಲ, ಬೆಳ್ಳಗೆ ಇರೋದೆಲ್ಲಾ ಹಾಲಲ್ಲ.’’ ಎಂತಹ ಅರ್ಥಗರ್ಭಿತವಾದಂತಹ ಅದ್ಭುತ ಹಾಡು”.

ಹೌದು ಆಸೆ ಯಾವತ್ತೂ ದುಃಖಕ್ಕೆ ಕಾರಣವಾಗುತ್ತದೆ. ಆಸೆ ಇತಮಿತವಾಗಿದ್ದರೆ ಚೆನ್ನ. ಇತ್ತೀಚೆಗೆ ಯಾಕೋ ನಾವುಗಳು ಇನ್ನೊಬ್ಬರೊಂದಿಗೆ ಪೈಪೋಟಿಗೆ ಬಿದ್ದು ಇಲ್ಲಸಲ್ಲದ ಆಸೆಗಳ ಹಿಂದೆ ಹೋಗಿ ನಮ್ಮ ಜೀವನವನ್ನು ನರಕಸದೃಶವನ್ನಾಗಿಸಿಕೊಳ್ಳುತ್ತಿದ್ದೇವೆ.

ಆಸೆ ನಮಗೆ ಶಾಪವೋ ವರವೋ ಅನ್ನುವುದು ನಮಗೆ ಬಿಟ್ಟ ವಿಚಾರ. ಅನೇಕ ಮಹಾಪುರುಷರು ಸಾಧು ಸಂತರು ಆಸೆಯನ್ನು ದುಃಖಕ್ಕೆ ಹೋಲಿಸಿದ್ದಾರೆ ಆದರೆ, ಆಸೆಯನ್ನು ತ್ಯಜಿಸಿದವರು ಮಹಾತ್ಮರಾಗುತ್ತಾರೆ ಎನ್ನುತ್ತಾರೆ. ಹಾಗಾದರೆ ಇವರಿಗೆ ಆಸೆ ಇಲ್ಲವೇ. ಖಂಡಿತವಾಗಿಯೂ ಇದೆ. ಆದರೆ ಇವರದ್ದೆಲ್ಲ ಮನುಕುಲದ ಒಳಿತಿಗಾಗಿ ಇರುವಂತಹ ಆಸೆಗಳು. ಪ್ರತಿಯೊಂದು ಸಣ್ಣ ಜೀವಿಯಿಂದ ಬಂದು ಮನುಷ್ಯನವರೆಗೂ ಆಸೆಗಳು ಇದ್ದದ್ದೆ. ಆಸೆಯಿಂದಲೇ ಸ್ಥಿತಿ ಹಾಗು ಲಯ, ಆಸೆಯನ್ನು ಅಳಿಸಿದರೆ ಮಾನವ, ಅದನ್ನು ತನ್ನೊಳಗೆ ಅದುಮಿಟ್ಟರೆ ಅವನು ದಾನವ. ಆಸೆಯನ್ನು ತೊರೆದು ಸಿದ್ದಾರ್ಥ ಬುದ್ಧನಾದ ಕತೆ ನಮಗೆಲ್ಲರಿಗೂ ಗೊತ್ತೇ ಇದೆ. ಹಾಗೇನೆ ಭಗವಾನ್ ಮಹಾವೀರ್ ರವರು ನೀಡಿದ ಸಂದೇಶವನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ”ಮಾನವ ನಿನ್ನನ್ನು ನೀನು ನಿಯಂತ್ರಿಸಿಕೊ. ಅದರಿಂದ ನೀನು ದುಃಖಗಳಿಂದ ಮುಕ್ತನಾಗುವೆ. ಶರೀರ ನೌಕೆಯಂತೆ. ಆತ್ಮ ನಾವಿಕನಂತೆ. ಸಂಸಾರ ಸಮುದ್ರದಂತೆ. ಈ ಸಂಸಾರ ಎನ್ನುವ ಸಾಗರವನ್ನು ಸಂಸ್ಕಾರ ಪಡೆದ ನಾವಿಕ ಧರ್ಮದ ಹುಟ್ಟು ಹಾಕಿ ಪಾರುಗೊಳಿಸುವನು”.

ಭಗವಾನ್ ಮಹಾವೀರ್

ಮನುಷ್ಯನನ್ನು ಬಿಟ್ಟು ಉಳಿದ ಜೀವಿಗಳೆಲ್ಲಾ ದುರಾಸೆ ಇಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಬದುಕದೆ ಪರೋಪಕಾರಿಯಾಗಿ ತಮ್ಮ ಆಸೆಗಳ ಇತಿಮಿತಿಯಲ್ಲಿ ಜೀವಿಸುತ್ತದೆ. ನಮ್ಮ ಅಭಿವೃದ್ಧಿಯಾಗಬೇಕೆಂದರೆ ನಮಗೆ ಆಸೆಗಳಿರಬೇಕು ಉತ್ತಮ ಯೋಚನೆ ಹಾಗು ಅದರ ಹಿಂದೆ ಒಳ್ಳೆಯ ಉದ್ದೇಶವಿರಬೇಕು. ಆ ಆಸೆಗಳನ್ನು ಸಾಧಿಸುವ ಭರದಲ್ಲಿ ನಮ್ಮ ಉದ್ದೇಶಗಳು ಮರೆಯದಂತಿರಬೇಕು. ಆಸೆಗೆ ಕಡಿವಾಣ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ನೆಮ್ಮದಿ ಹಾಳುಮಾಡಿಕೊಂಡು ಶರೀರವನ್ನು ಕಾಯಿಲೆಗಳ ಗೂಡು ಮಾಡಿಕೊಳ್ಳಬೇಕಾಗುತ್ತದೆ. ನಾವಿಂದು ನಮ್ಮ ಜೀವನದ ಬಗ್ಗೆ ಅವಲೋಕಿಸಿಕೊಳ್ಳದೆ ಇನ್ನೊಬ್ಬರ ಜೀವನದ ಬಗ್ಗೆ ಅವಲೋಕಿಸುತ್ತಿದ್ದೇವೆ. ಇನ್ನೊಬ್ಬರ ಜೀವನದೊಂದಿಗೆ ತುಲನೆ ಮಾಡಿಕೊಳ್ಳುತ್ತಿದ್ದೇವೆ, ಆಸೆಗಳಿಗೆ‌ ಇದೂ ಒಂದು ಕಾರಣವು ಹೌದು.

ಇನ್ನೊಬ್ಬರೊಂದಿಗೆ ತುಲನೆ‌ಮಾಡಿಕೊಂಡಾಗ ಮಾತ್ರ ನಮ್ಮ ಆಸೆಗಳು ಗರಿಗೆದರುವುದು. ಹಾಸಿಗೆ ಇದ್ದಷ್ಟೆ ಕಾಲು ಚಾಚು ಎಂಬುದು ನಾಣ್ನುಡಿ. ಇದರ ಅರ್ಥನೂ ಇದೆ ನಿನ್ನ ಆಸೆಗಳಿಗೆ ಕಡಿವಾಣ ಹಾಕಿ ನಿನ್ನ ಇತಿಮಿತಿಯಲ್ಲಿ ಜೀವನ ಮಾಡು ಎಂದು. ಆದರೆ ನಮ್ಮ ಜೀವನ ಹಾಗಲ್ಲ ಪಕ್ಕದ ಮನೆಯವರೊಂದಿಗೆ ನಮ್ಮ ಜೀವನದ ತುಲನೆಮಾಡಿಕೊಂಡು ಜೀವನವನ್ನು ಅಧೋಗತಿಗೆ ತಂದೊಡ್ಡುತ್ತೇವೆ.

ನಮ್ಮ ಮನಸ್ಸಿನಲ್ಲಿ ಆಸೆಯ ಬೀಜವನ್ನು ಬಿತ್ತಿದವರು ನಾವೇ ಅಲ್ಲವೇ.  ಅದು ಈಡೇರದೆ ಇದ್ದಾಗ ದುಃಖಿಸುವವರು ನಾವೇ ಅಲ್ಲವೇ. ಇದಕ್ಕಾಗಿಯೆ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಯದೃಚ್ಛಾಲಾಭಸಂತುಷ್ಟ ಅಂದರೆ, ಇರುವುದರಷ್ಟರಲ್ಲೇ ತೃಪ್ತಿ ಪಡು ಎಂದು ಹೇಳಿದ್ದಾರೆ. ಹಾಗಾದರೆ ಅಸೆ ಪಡುವುದು ತಪ್ಪೇ ಎನ್ನವುದಾದರೆ, ಖಂಡಿತವಾಗಿಯೂ ತಪ್ಪಲ್ಲ. ಅಸೆ ಎನ್ನುವುದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಅಸೆ ಪಡುವುದರಿಂದ ನಮ್ಮ ಜೀವನದಲ್ಲಿ ಮುಂದಿನ ನಡೆಗೆ ಹುರುಪು, ಜೀವನೋತ್ಸಾಹ ನೀಡುತ್ತದೆ.

ಅತಿಯಾದರೆ ಅಮೃತವು ವಿಷನೆ. ಹಾಗೆಯೆ ಆಸೆಯು ದುರಾಸೆಯಾದರೆ ಅಥವಾ ಆಸೆ ನಮ್ಮ ಸ್ವಾರ್ಥಕ್ಕಾದರೆ ಅದರಿಂದ ಸಮಸ್ಯೆ ಎಂದಿಗೂ ತಪ್ಪದು. ಕೊನೆಗೊಂದು ದಿನ ನಮ್ಮ ಕುತ್ತಿಗೆಗೆ ನೇಣಿನ ಕುಣಿಕೆಯಾಗಿ ಪರಿಣಮಿಸದೆ ಇರದು. “ಸ್ಟೇಟಸ್” ನ ಹಿಂದೆ ಓಡಿ ಆಸೆಗಳ ಹಿಡಿತವಿಲ್ಲದೆ ಮಾನಸಿಕ ಹಾಗು ದೈಹಿಕವಾಗಿ ಕಾಯಿಲೆಗಳಿಗೆ ಗುರಿಯಾಗಿ ನೂರಾರು ಕಾಲ ಬದುಕುವ ನಾವು ಅಲ್ಪಾಯುಷಿಗಳಾಗುತ್ತಿದ್ದೇವೆ.

ದೇವರು ಕೊಟ್ಟಿರುವಂತಹ ಈ ಅಮೂಲ್ಯವಾದ ಜೀವನದಲ್ಲಿ ಸ್ಟೇಟಸ್ ಹಿಂದೆ ಹೋಗದೆ ಆಸೆಗಳ ಇತಿಮಿತಿಯಲ್ಲಿ ಇರುವುದರಲ್ಲಿ ನೆಮ್ಮದಿ ಜೀವನದೊಂದಿಗೆ ಇರುವ ನಮ್ಮ ನಾಲ್ಕು ದಿನದ ಜೀವನದ ಸವಿಯನ್ನು ಕುಟುಂಬದೊಂದಿಗೆ, ನಮ್ಮ ಸ್ನೇಹಿತರೊಂದಿಗೆ, ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಬೆರೆತು ಜೀವನದ ಸವಿಯನ್ನು ಅನುಭವಿಸೋಣ. ಸಾಧ್ಯವಾದರೆ ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಮಾಡೋಣ. ನಮ್ಮಿಂದ ನಮ್ಮ ದುರಾಸೆಗೆ ಯಾರನ್ನು ಬಲಿ ಕೊಡದಿರೋಣ.

ನುಡಿಸುವುದು ಸತ್ಯವನು ಕೆಡಿಸುವುದು ಧರ್ಮವನು

ಒಡಲನೆ ಕಟ್ಟಿ ಹಿಡಿಸುವುದು – ಲೋಭದ ಗಡಣ ಕಾಣಯ್ಯ ಸರ್ವಜ್ಞ||

ಸೌಮ್ಯ ನಾರಾಯಣ್

Related post

Leave a Reply

Your email address will not be published. Required fields are marked *