ಅವನೆಂದರೆ ಈಗಲೂ ಕೋಪ ನನಗೆ
ಯಾಕೆಂದರೆ,
ಅವಳಿಗೆ ನನ್ನ ಮಾರುದ್ದ ಕವಿತೆ
ವಾಂತಿ ತರಿಸಿತು
ಅವನ ಎರಡೇ ಸಾಲುಗಳು
ಅವಳ ಹೃದಯ ಹೊಕ್ಕಿದವು
ಕ್ಷಣಕ್ಕೆ ನನ್ನ ಪ್ರೀತಿಯ ಮರೆತು
ಮಾರುಹೋದಳು ಮೂವತ್ನಾಲ್ಕು ಬಾರಿ
ಯಾರದೋ ಬಾಹ್ಯ ಸೌಂದರ್ಯಕ್ಕೆ
ನನ್ನ ಮಾನ ಹರಾಜಿಗಿಟ್ಟಳು
ದೂರಿದಳು ಸುಖಾ ಸುಮ್ಮನೆ
ಕೊಳ್ಳುವವರು ಸಿಗದೆ
ನನ್ನ ಮಾನ ಬೀದಿಯಲ್ಲಿ ಕೊಳೆಯಿತು
ತುಂಬಾ ಕಾಡಿದಳು
ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದೆ
ಈಗ ಆಕರ್ಷಣೆ ಎಂಬ
ವಿಷದ ಮಾತ್ರೆಗೆ ಅಂಟಿ
ತನ್ನನ್ನೇ ಸಾಯಿಸಿಕೊಳ್ಳುತ್ತಿದ್ದಾಳೆ
ನನ್ನ ಪ್ರೀತಿಯನ್ನೂ ಕೂಡ
ಲೆಕ್ಕವಿಲ್ಲದ ಹಾಗೆ ಮೆಟ್ಟಿ ನಿಂತಿದ್ದಾಳೆ
ಅದೆಷ್ಪೋ ಬೇಡಿಕೊಂಡೆ
ಇನ್ನೆಷ್ಟೋ ಪರದಾಡಿದೆ
ಮುಳ್ಳು ಬೇಲಿ ಬಿಡಿಸಿ ದಾರಿ ಮಾಡಿದೆ
ಆದರೆ,
ಮುಳ್ಳನ್ನೇ ತಿನ್ನಲು ತಯಾರಾಗಿ ಹೋಗುತ್ತಿದ್ದಾಳೆ
ಎದೆಯು ಸಿಡಿದು
ಪ್ರೇಮ ಕಾವ್ಯ ಹೊರಬಂದರೂ..
ಕದ್ದು ಗೀಚಿದ ಎರಡು ಸಾಲುಗಳಿಗೆ
ತನ್ನನ್ನೇ ಅರ್ಪಿಸಿಕೊಳ್ಳುತ್ತಿದ್ದಾಳೆ
ಶುದ್ಧ ಪ್ರೀತಿಯ ಅರಿಯದೆ
ಮಗ್ಧಳಾಗಿ ಹೋಗುತ್ತಿದ್ದಾಳೆ
ಕಾದು ಕಾದು ಊಟ ಬಿಟ್ಟೆ
ಕನಸುಗಳ ಹಾವಳಿಂದ ನಿದ್ದೆಗೆಟ್ಟು
ಬರೆಯುವುದನ್ನೂ ಬಿಟ್ಟೆ
ಅವಳಿಗೆ ಮರೆಯಲು ಸಾಧ್ಯವಿಲ್ಲವೇನೋ..
ಆ ಎರಡು ಸಾಲುಗಳನ್ನು
ನನ್ನ ಬದುಕ ತಿಂದುಕೊಂಡ
ಬರೀ ಎರಡು ಸಾಲುಗಳನ್ನು
ಅವಳನ್ನು ಹಾಳುಮಾಡಿದ
ಕೇವಲ ಎರಡು ಸಾಲುಗಳನ್ನು..
ಅನಂತ ಕುಣಿಗಲ್