ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 3

ಆ ಒಂದು ಕ್ಷಣ….. ಭಾಗ – 03

ಒಬ್ಬ ವ್ಯಕ್ತಿ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನ ಪರಿಸ್ಥಿತಿ ಗಂಭೀರವಾಗಿದೆ.ಅವನನ್ನು ನೋಡಿಕೊಳ್ಳುವ ವೈದ್ಯರ ಮುಂದೆ ಎರಡೇ ಆಯ್ಕೆ ಇದೆ.
ರೋಗಿಗೆ ಆಪರೇಷನ್ ಮಾಡಿದರೆ ಅವನಿಗೆ ಆಗಿರುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿ ಸೂಕ್ತವಾದ ಚಿಕಿತ್ಸೆ ಕೊಡುತ್ತಾ ಕಾಲಾಂತರದಲ್ಲಿ ಅವನನ್ನು ಸಹಜವಾದ ಸ್ಥಿತಿಗೆ ತರುವುದು…ಇಲ್ಲವೇ ಅತ್ಯಂತ ಕ್ಲಿಷ್ಟಕರವಾದ ಈ ಆಪರೇಷನ್ ಕೈ ಬಿಡುವುದು….ಏಕೆಂದರೆ ಈ ಆಪರೇಷನ್ ಕೂಡಾ ಸಾವು ಬದುಕಿನ ಪ್ರಶ್ನೆಯೇ ಆಗಿದೆ.

ಇಂತಹ ಸಂದರ್ಭದಲ್ಲಿ ನುರಿತ ವೈದ್ಯ ಏನು ಮಾಡುತ್ತಾನೆ!?
ಪರಿಸ್ಥಿತಿಯನ್ನು ರೋಗಿಯ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟು ಅವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುತ್ತಾ ಆಪರೇಷನ್ ಮಾಡಲು ಅಣಿಯಾಗುತ್ತಾನೆ.
ವೈದ್ಯನಿಗೆ ವಿಶ್ವಾಸ ಇದೆ…Line of treatment ಬಗ್ಗೆ ಅರಿವಿದೆ…ಎಂದಾದಾಗ ಆಪರೇಷನ್ ಯಶಸ್ವಿಯಾಗಿ ಮುಗಿದು ರೋಗಿಯೂ ಚೇತರಿಸಿಕೊಳ್ಳುತ್ತಾನೆ.
ಅದೇ ವೈದ್ಯ ಕೊಂಚಮಟ್ಟಿಗೆ ವಿಚಲಿತನಾಗಿ ತನ್ನಲ್ಲಿ ಆತ್ಮವಿಶ್ವಾಸ ಕಳೆದುಕೊಂಡರೆ..ರೋಗಿಯ ಜೀವ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುತ್ತದೆ.

ಒಬ್ಬ ವ್ಯಕ್ತಿ ಉತ್ತಮ ವೈದ್ಯ ಎಂದು ಕರೆಸಿಕೊಳ್ಳಲು ತನ್ನ ಖಾಸಗಿ ಜೀವನಕ್ಕಿಂತ ವೈದ್ಯಕೀಯ ಜೀವನಕ್ಕೆ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ನೊಂದ ರೋಗಿಯ ಬದುಕಿನಲ್ಲಿ ಭರವಸೆ ಮೂಡಿಸಬೇಕಾಗುತ್ತದೆ. ಎಷ್ಟೇ ಸುಸ್ತು ಇದ್ದರೂ ಅದನ್ನು ತೋರಿಸಿಕೊಳ್ಳದೆ ಅವನನ್ನು ನಂಬಿ ಬಂದ ರೋಗಿಯನ್ನು ಬದುಕಿಸುವ ಅಥವಾ ರೋಗವನ್ನು ಗುಣಪಡಿಸುವುದೇ ಅವರ ಮುಖ್ಯ ಗುರಿಯಾಗಿರುತ್ತದೆ. ಅದೇ ಅವರ ವೃತ್ತಿಧರ್ಮ.

ನೀಡಬೇಕಾದ ಚಿಕಿತ್ಸೆ ಮತ್ತು ಅದರ ಸಮಯದ ನಿರ್ಧಾರ ಮಾಡಿ ತಾಳ್ಮೆ,ಶ್ರದ್ಧೆ ಮತ್ತು ವಿಶ್ವಾಸದಿಂದ ವೈದ್ಯ ತನ್ನ ಕಾರ್ಯವನ್ನು ಮಾಡಿದಾಗ…

ಎಲ್ಲರ ಮುಖದಲ್ಲಿ ಸಂತಸದ ಹೊನಲು!!! ಆ ಕ್ಷಣದ ಮಹತ್ವ ವರ್ಣಿಸಲು ಅಸಾಧ್ಯ.

ಗಂಭೀರವಾಗಿದ್ದ ರೋಗಿಯ ಆರೋಗ್ಯದ ಸ್ಥಿತಿ,ವೈದ್ಯರ ಪ್ರಯತ್ನ ಮತ್ತು ಚಿಕಿತ್ಸೆಯಿಂದ ಸುಧಾರಿಸಿದಾಗ
ಎಲ್ಲರ ಮುಖದಲ್ಲಿ ಸಂತಸದ ಹೊನಲು!!! ಆ ಕ್ಷಣದ ಮಹತ್ವ ವರ್ಣಿಸಲು ಅಸಾಧ್ಯ.

ಆದರೆ ಆಪರೇಷನ್ ಮಾಡಬೇಕಾದ ಆ ಕ್ಷಣದಲ್ಲಿ ರೋಗಿಯ ಕುಟುಂಬವರ್ಗದವರ ಮನಸ್ಥಿತಿ ಹೇಗಿದ್ದಿರಬಹುದು!?.

ಮನೆಯ ಯಜಮಾನ ಆತ…ದುಡಿಯುವ ಒಂದು ಜೀವ ಇಲ್ಲವಾದರೆ…ಉಳಿದವರ ಗತಿ ಏನಿರಬಹುದು!? ಹೆಂಡತಿ,ಚಿಕ್ಕ ಚಿಕ್ಕ ಮಕ್ಕಳು;ವಯಸ್ಸಾದ ತಂದೆ-ತಾಯಿ ಇವರುಗಳ ಮನೋವೇದನೆ….ಈತನನ್ನು ಕಳೆದುಕೊಂಡರೆ ಮುಂದೇನಪ್ಪಾ ಗತಿ!? ಎನ್ನುವ ಪ್ರಶ್ನೆ…
ನೂರೆಂಟು ಸಮಸ್ಯೆಗಳು ಸಮರೋಪಾದಿಯಲ್ಲಿ ಹುಟ್ಟಿಕೊಂಡು ಕಾಡತೊಡಗಿದರೆ…!?
ಬದುಕು ಬೇಸರ ತರಿಸಬಹುದು,ಅವನ ಜೊತೆಗೆ ನಾವೂ ಹೋಗಿಬಿಡಬೇಕು ಎನ್ನುವ ಅನವಶ್ಯಕ ಆಲೋಚನೆ ಬರಬಹುದು.
ಜೀವನವನ್ನು ಹೇಗೆ ಎದುರಿಸಬೇಕು ಎಂಬ ನಿರ್ಧಾರ ಮಾಡಬೇಕಾದ ಆ ಕ್ಷಣ..ಅದೆಂತಹ ಸವಾಲನ್ನು ಒಡ್ಡುತ್ತದೆ!?.

ಇತ್ತ ವಾಲಿ ನೋಡಿದಾಗ….

ಸಕಾರಾತ್ಮಕ ಆಲೋಚನೆ ಮಾಡಿ…ರೋಗಿಗೆ ಮನೋಸ್ಥೈರ್ಯ ನೀಡುತ್ತ..ನಾವೂ ನಿನ್ನೊಡನೆ ಇದ್ದೇವೆ ಎಂಬ ಭರವಸೆಯೊಂದಿಗೆ ಕುಟುಂಬದ ಸದಸ್ಯರು ನಿಂತಾಗ…
ಅದೆಂತಹ ಕಠಿಣ ಸಮಸ್ಯೆಯನ್ನು ಕೂಡಾ ಆ ಕ್ಷಣದ ಧೈರ್ಯ ಮತ್ತು ವಿಶ್ವಾಸಗಳು ಹೊಡೆದೋಡಿಸಬಲ್ಲವು.
ಸಮಸ್ಯೆ ಬಂದಿದೆ…ಅದನ್ನು ಎದುರಿಸಲೇಬೇಕು…ಹೇಗೆ ಎದುರಿಸೋಣ ಎಂದು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ಇದೇ ಆ ಕ್ಷಣ ನಾವು ತೆಗೆದುಕೊಳ್ಳಬಹುದಾದ ನಿರ್ಧಾರ.

ಅದೆಂತಹ ಕಠಿಣ ಸಮಸ್ಯೆಯನ್ನು ಕೂಡಾ ಆ ಕ್ಷಣದ ಧೈರ್ಯ ಮತ್ತು ವಿಶ್ವಾಸಗಳು ಹೊಡೆದೋಡಿಸಬಲ್ಲವು.
ಸಮಸ್ಯೆ ಬಂದಿದೆ…ಅದನ್ನು ಎದುರಿಸಲೇಬೇಕು…ಹೇಗೆ ಎದುರಿಸೋಣ ಎಂದು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ಇದೇ ಆ ಕ್ಷಣ ನಾವು ತೆಗೆದುಕೊಳ್ಳಬಹುದಾದ ನಿರ್ಧಾರ.

ಹೆಚ್ಚಿನ ಸಂದರ್ಭಗಳಲ್ಲಿ ಸೋಲು- ಗೆಲುವುಗಳನ್ನು ನಮ್ಮ ಮನಃಶಕ್ತಿಯೇ ನಿರ್ಣಯಿಸುತ್ತದೆ.

ಸಮಸ್ಯೆಗಳು ಎದುರಾದಾಗ ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಎಂಬುದರ ಆಧಾರದ ಮೇಲೆ ಗೆಲುವು ನಿಂತಿರುತ್ತದೆ. ಸಾಮಾನ್ಯವಾಗಿ ಸಮಸ್ಯೆ, ಸವಾಲುಗಳನ್ನು ಎರಡು ರೀತಿಯಲ್ಲಿ ಎದುರಿಸಬಹುದು. ಹೇಗೆ?…

ಒಂದು, ಸಮಸ್ಯೆಯನ್ನು ಎದುರಿಸುವುದು ಒಂದು ಬಗೆಯಾದರೆ ! ,ಸಮಸ್ಯೆಯಿಂದ ತಪ್ಪಿಸಿಕೊಂಡು ಓಡಿ ಹೋಗುವುದು ಮತ್ತೊಂದು ಬಗೆಯದು. ಅದೇ ರೀತಿ ನೀವು ಯಾವ ಬಗೆಯವರು? ಎಂಬುದನ್ನು ಯೋಚಿಸಬೇಕಲ್ಲವೇ!?

ಜೀವನವೇ ಒಂದು ಸವಾಲು. ಅದನ್ನು ಎದುರಿಸುವುದು ಹೇಗೆ? ಮಾನವನು ತನ್ನ ಜೀವನವನ್ನು ಶೈಶವಾವಸ್ಥೆಯಿಂದಲೇ ಆರಂಭಿಸಿದ್ದು, ಒಂದೊಂದು ಕ್ಷಣವೂ ಮರಣವನ್ನು ಎದುರಿಸಿ, ಹೋರಾಡಿದ್ದರಿಂದಾಗಿ ‘ಮಾನವ ಕುಲ’ ಉಳಿದುಕೊಂಡಿದೆ.
ಕ್ರೂರ ಮೃಗಗಳು, ವಿಷ ಜಂತುಗಳು,ರೋಗ ರುಜಿನಗಳು ಮಾನವನನ್ನು ಮರಣದ ಬಾಗಿಲಿಗೆ ತಂದು ನಿಲ್ಲಿಸಿದ ಸಾವಿರಾರು ಪ್ರಸಂಗಗಳನ್ನು ನೋಡಿದ್ದೇವೆ,ಕೇಳಿದ್ದೇವೆ!!!.

ಮಾನವನು ಅವುಗಳನ್ನು ಎದುರಿಸಿ, ಹೋರಾಡಿಯೇ ಗೆಲುವನ್ನು ಸಾಧಿಸಿದ್ದು.
ಮಳೆ, ಸಿಡಿಲು, ಭೂಕಂಪ, ಅತಿವೃಷ್ಠಿ ಎಂಬ ಪ್ರಕೃತಿವಿಕೋಪದೊಡನೆ ಇಂದಿಗೂ ಯುದ್ಧ ನಡೆಸುತ್ತಲೇ ಇದ್ದಾನೆ.

ಇಂತಹ ಸಮಸ್ಯೆಗಳನ್ನು ಎದುರಿಸಿ,ಅವುಗಳನ್ನು ಗೆಲ್ಲುವಾಗ ಮಾತ್ರ ನಾವು ಜೀವಿಸಲು ಸಾಧ್ಯ. ಆದ್ದರಿಂದ ಸಮಸ್ಯೆಯನ್ನು ಕಂಡು ಓಡಿ ಹೋಗುವ ಬದಲು, ಆ ಕ್ಷಣವನ್ನು ಎದುರಿಸಿ ನಿಲ್ಲುವುದರಲ್ಲೇ ನಮ್ಮ ಜೀವನ ಅಡಗಿದೆ…ಅಲ್ಲವೇ!?.

ಸಮಸ್ಯೆಯನ್ನು ಕಂಡು ಓಡಿ ಹೋಗುವ ಬದಲು, ಆ ಕ್ಷಣವನ್ನು ಎದುರಿಸಿ ನಿಲ್ಲುವುದರಲ್ಲೇ ನಮ್ಮ ಜೀವನ ಅಡಗಿದೆ…ಅಲ್ಲವೇ!?.

ನಾವು ತೆಗೆದುಕೊಳ್ಳುವ ಒಂದೊಂದು ಕ್ಷಣದ ನಿರ್ಧಾರವೂ ಅತಿ ಮುಖ್ಯ.

ಒಬ್ಬ ವ್ಯಕ್ತಿ ತನ್ನ ವ್ಯಾಪಾರದಲ್ಲಿ ಸಾಕಷ್ಟು ಕೈ ಸುಟ್ಟುಕೊಂಡು ದಿವಾಳಿಯಾಗುವ ಹಂತ ತಲುಪಿದ್ದಾನೆ.ಇವನಿಗೆ ಬರಬೇಕಾದ ಹಣವೂ ಬರದೇ ಆರ್ಥಿಕ ಮುಗ್ಗಟ್ಟು ಉಂಟಾಗಿದೆ,ಸಾಲದ ಹೊರೆ ಜಾಸ್ತಿಯಾಗಿ ಪರದಾಡುತ್ತಿದ್ದಾನೆ.
ಆ ಒಂದು ಕ್ಷಣ ಅವನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ.
ತನಗಾದ ಅವಮಾನ,ನಷ್ಟ ಇವೆಲ್ಲವುಗಳಿಂದ ಕುಗ್ಗಿದ ಆತ ಸಮಸ್ಯೆಯನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಅವನ ಇಡೀ ಕುಟುಂಬ ದುಃಖದಲ್ಲಿ ಮುಳುಗಿರುವಾಗ ಒಂದೆರೆಡು ದಿನಗಳ ನಂತರ ಒಂದು ಸುದ್ದಿ ಬರುತ್ತದೆ.ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಿದ್ದು ಅವನಿಗೆ ಬರಬೇಕಾದ ಹಣ ಕೊಡಲು ಇವನು ವ್ಯವಹರಿಸಿದ್ದ ಕಂಪನಿ ಒಪ್ಪಿಕೊಂಡು ಹಣದ ಚೆಕ್ ಕಳಿಸಿರುತ್ತದೆ!!!.

ಛೇ!!!! ಎಂತಹ ಕೆಲಸ ಮಾಡಿಕೊಂಡುಬಿಟ್ಟನಲ್ಲ…
ಆತ್ಮಹತ್ಯೆಯ ನಿರ್ಧಾರದ ಆ ಕ್ಷಣ ಮುಂದೂಡಿದ್ದರೆ ಜೀವ ಉಳಿಯುತ್ತಿತ್ತು ಎನಿಸುತ್ತದೆ… .

ಜೀವನದಲ್ಲಿ ಸೋಲು, ನಿರಾಸೆ ಮತ್ತು ಕಹಿ ಘಟನೆಗಳಾದಾಗ ಆತ್ಮಹತ್ಯೆ ಯೋಚನೆ ಸಾಮಾನ್ಯ. ಬೇರೆಯವರೊಂದಿಗೆ ಹಂಚಿಕೊಳ್ಳಲು ಕಷ್ಟ. ಅವರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಬೇಸರಪಡಬಹುದೆಂಬ ಭಯ. ಇನ್ನೂ, ಈ ಆಲೋಚನೆಗಳನ್ನು ಹಂಚಿಕೊಳ್ಳುವವರು ಅತಿಯಾಗಿ ಮಾತನಾಡುತ್ತಿರುವಂತೆ, ಭಾವ ಉದ್ರೇಕಕ್ಕೆ ಒಳಗಾದವರಂತೆ ಭಾಸವಾಗುತ್ತಾರೆ.
ಆತ್ಮಹತ್ಯೆ ಕುರಿತ ಆಲೋಚನೆ ಹಂಚಿಕೊಳ್ಳುವುದು ಮನದೊಳಗಿನ ನೋವು ದೊಡ್ಡ ಮಟ್ಟದಲ್ಲಿ ಕಡಿಮೆಯಾಗುತ್ತದೆ.
ಆತ್ಮಹತ್ಯೆ ಆಲೋಚನೆಗಳು ಮರುಕಳಿಸುತ್ತವೆ ಮತ್ತು ಏಕಾಂಗಿಯಾಗಿದ್ದಾಗ, ಕೆಲಸವಿಲ್ಲದೆ ಖಾಲಿ ಇರುವಾಗ ಹೆಚ್ಚಾಗುತ್ತವೆ. ಕುಟುಂಬದವರೊಂದಿಗೆ ಮಾತನಾಡುವುದು ಅಥವಾ ಹತ್ತಿರದ ಸ್ನೇಹಿತರೊಂದಿಗೆ ಇಷ್ಟಕರವಾದ ಚಟುವಟಿಕೆ ಆರಂಭಿಸುವುದು ಆತ್ಮಹತ್ಯೆ ಆಲೋಚನೆಗಳನ್ನು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ ಮನಸ್ಸಿಗೆ ಸಂತೋಷ ಕೊಡುವ ಹವ್ಯಾಸದಲ್ಲಿ ಮತ್ತು ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಆತ್ಮಹತ್ಯೆ ಯೋಚನೆಗಳು ಕಡಿಮೆಯಾಗುತ್ತವೆ.

ಹಿಂದಿನ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ ಉದಾಹರಣೆಗಳನ್ನು ನೆನೆಯುವುದು ಮನಸ್ಸಿಗೆ ಧೈರ್ಯ ತುಂಬುತ್ತದೆ.
ತನ್ನ ಪ್ರಸ್ತುತದ ಸನ್ನಿವೇಶದಿಂದ ಹೊರಬರಲು ಹಿಂದಿನ ಸಂಗತಿಗಳನ್ನು ಬಳಸಿಕೊಂಡು, ಧನಾತ್ಮಕ ಭವಿಷ್ಯದ ಅನುಭವಗಳನ್ನು ಯೋಚಿಸಿದಾಗ ;ಇದು ಆತ್ಮಹತ್ಯೆ ಯೋಚನೆಯನ್ನು ಕುಗ್ಗಿಸುತ್ತದೆ …. ಆ ಕ್ಷಣದ ಮಹತ್ವ ಇರುವುದು ಇಲ್ಲೇ!!!

ಸುನೀಲ್ ಹಳೆಯೂರು

Related post

1 Comment

  • ಒಂದು ಸುಂದರ ಕಥೆ. ರೋಗಿಯ, ವೈದ್ಯರ, ಅವಲಂಬಿತ ಕುಟುಂಬ ವರ್ಗದ ಸಮಗ್ರ ಚಿತ್ರಣ.
    ಇನ್ನೂ ಹೆಚ್ಚು ಕೃತಿಗಳು ನಿಮ್ಮಿಂದ ಹೊರ ಬರಲಿ.

    ಶುಭ ಕಾಮನೆಗಳು.

Leave a Reply

Your email address will not be published. Required fields are marked *