ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4

ಒಂದು ದೊಡ್ಡ ಕಂಪನಿ….. .ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ.ಇತ್ತೀಚಿನ ದಿನಗಳಲ್ಲಿ ಈ ಕಂಪನಿಗೂ ಸವಾಲೊಡ್ಡುವಂತಹ ಕಂಪನಿಗಳು ಮಾರುಕಟ್ಟೆ ಪ್ರವೇಶ ಮಾಡಿವೆ.ಇತರ ಕಂಪನಿಗಳ ಜೊತೆಗೆ ಸ್ಪರ್ಧಿಸಿ ಗೆಲ್ಲುವ, ಜೊತೆಗೆ ಅತ್ಯುತ್ತಮ ಸೇವೆಯನ್ನು ಕೊಡಬೇಕಾದ ಗುರುತರ ಜವಾಬ್ದಾರಿ ಕಂಪನಿಯ ಮೇಲೆ ಇದೆ.

ಆ ಕಂಪನಿಗೆ ಮುಖ್ಯಸ್ಥರಾಗಿ ಬಂದ ವ್ಯಕ್ತಿಯ ಮುಂದೆ ಹಲವು ಸವಾಲುಗಳು…
೧.ತಮ್ಮಲ್ಲಿರುವ ಮಾನವ ಸಂಪನ್ಮೂಲಗಳ ಸದ್ಭಳಕೆ..
೨.ಉದ್ಯೋಗಿಗಳಿಗೆ ಅವಶ್ಯಕವಾದ ಸೌಕರ್ಯಗಳನ್ನು ಒದಗಿಸುವುದು
೩.ಹೆಚ್ಚಿನ ವೇತನ ಅಥವಾ ಸೌಲಭ್ಯಗಳನ್ನು ಹುಡುಕಿ ಇತರೆ ಕಂಪನಿಗಳಿಗೆ ವಲಸೆ ಹೋಗುವ ನೌಕರರನ್ನು …ತಮ್ಮಲ್ಲಿ ಉಳಿಯುವಂತೆ ಮನವೊಲಿಸುವುದು…
೪.ತಮ್ಮ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಯೋಜಿಸುವುದು…

ಇವೆಲ್ಲವೂ ಕ್ಷಣ ಕ್ಷಣವೂ ಮಾಡಲೇಬೇಕಾದ ಕೆಲಸಗಳಾಗಿರುತ್ತವೆ.

ವೀರ ಸನ್ಯಾಸಿ ವಿವೇಕಾನಂದರ ಜೀವನದಲ್ಲೂ ಈ ರೀತಿಯ ಕ್ಷಣಗಳು ಬಂದವು. 1884ನೇ ಇಸವಿಯಲ್ಲಿ ಅವರ ತಂದೆ ತೀರಿಕೊಂಡಾಗ….ಅದಾಗಲೇ ರಾಮಕೃಷ್ಣ ಪರಮಹಂಸರ ಸಂಪರ್ಕಕ್ಕೆ ಬಂದಿದ್ದ ಅವರು ಅಧ್ಯಾತ್ಮದ ಹಾದಿ ತುಳಿಯಬೇಕೆಂದು ನಿರ್ಧರಿಸುತ್ತಿದ್ದ ಹೊತ್ತು. ಶ್ರೀಮಂತವಾಗಿದ್ದ ಕುಟುಂಬ ರಸ್ತೆಗೆ ಬಂದಿದ್ದ ಸ್ಥಿತಿ. ಇಂತಹ ಪರಿಸ್ಥಿಯಲ್ಲಿ ಅವರ ಎದುರು ಎರಡು ರಸ್ತೆಗಳಿದ್ದವು. ಮೊದಲನೆಯದು ಆಧ್ಯಾತ್ಮದ ದಾರಿ. ಎರಡನೆಯದು ಗೃಹಸ್ಥನಾಗಿ ತಾಯಿಯನ್ನು ನೋಡಿಕೊಳ್ಳುವುದು. ದಿಗ್ವಿಜಯಕ್ಕೆ ಹೊರಡುವ ಮನಃಸ್ಥಿತಿ ವಿವೇಕಾನಂದರದ್ದು. ಎಲ್ಲ ಕಷ್ಟಕಾರ್ಪಣ್ಯಗಳು ಕಣ್ಣಮುಂದಿದ್ದರೂ, ಕವಲು ದಾರಿಯಲ್ಲಿ ಆರಿಸಿಕೊಂಡದ್ದು ಆಧ್ಯಾತ್ಮದ ಮಾರ್ಗವನ್ನು…‌

ನಾವೆಲ್ಲರೂ ಜೀವನದ ಯಾವುದೋ ಒಂದು ಕ್ಷಣದಲ್ಲಿ ಕವಲು ದಾರಿಯಲ್ಲಿ ನಿಂತಿರುತ್ತೇವೆ.

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು.

ಇಂಗ್ಲೆಂಡ್ ನಲ್ಲಿ ನಡೆದ ಐ.ಸಿ.ಎಸ್. ಪರೀಕ್ಷೆಯಲ್ಲಿ ನಾಲ್ಕನೆ ಸ್ಥಾನದೊಂದಿಗೆ ಉತ್ತೀರ್ಣರಾದ ಸುಭಾಶ್ ಚಂದ್ರ ಬೋಸರು ವಿದೇಶದಲ್ಲಿ ಕೆಲಸ ಮಾಡಲು ಒಪ್ಪದೇ ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿದವರು.

ಆಗಷ್ಟೇ ದೇಶದಲ್ಲಿ ಕಾವೇರಿದ್ದ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ವಹಿಸಿದ್ದ ಗಾಂಧೀಜಿಯವವರನ್ನು ಭೇಟಿಯಾದ ಬೋಸ್ ತಾವು ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ಯುವಕರನ್ನು ಸಂಘಟಿಸುವಲ್ಲಿ ನಿರತರಾದರು. ಬ್ರಿಟೀಷರನ್ನು ಕುರಿತಂತೆ ಕಾಂಗ್ರೆಸ್ ಪಕ್ಷವು ತಾಳಿದ್ದ ದ್ವಂದ್ವ ನೀತಿಗಳಿಂದ ಬೇಸತ್ತ ಬೋಸ್ ತಾವು ಚಿತ್ತರಂಜನ್ ದಾಸ್ ರವರ ಜತೆಗೂಡಿ “ಸ್ವರಾಜ್ಯ ಪಕ್ಷ”ದ ಸ್ಥಾಪನೆ ಮಾಡಿದರು.

Give me blood and I will give you freedom’ ಎನ್ನುತ್ತಾ, ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ದಾಸ್ಯಮುಕ್ತವನ್ನಾಗಿ ಮಾಡಿದ್ದ ಹೆಗ್ಗಳಿಕೆ ಅವರದ್ದು.

ಅಂದು ತಾವು ಪಡೆದ ಪದವಿಯನ್ನು ತಿರಸ್ಕರಿಸಿ ದೇಶಸೇವೆ ಮಾಡಲು ತೆಗೆದುಕೊಂಡ ಆ ಕ್ಷಣದ ನಿರ್ಧಾರ ಬೋಸರನ್ನು ಐತಿಹಾಸಿಕ ವ್ಯಕ್ತಿಯನ್ನಾಗಿಸಿತು.

ಕವಲು ಹಾದಿಯಲ್ಲಿ ನಿಂತು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದು ನಿಜಕ್ಕೂ ಕಷ್ಟಕರವಾದ ವಿಷಯ…. ಆದರೆ ಅಂತಹ ನಿರ್ಧಾರಗಳನ್ನು ತೆಗೆದುಕೊಂಡವರೇ ಸಮಾಜದ ಎದುರು ಆದರ್ಶವಾಗಿ ನಿಲ್ಲುತ್ತಾರೆ ಎಂಬುದಂತೂ ಸತ್ಯ.

ಕೆಲವು ವರ್ಷದ ಹಿಂದೆ ನಮ್ಮ ದೇಶದ ಪ್ರಧಾನಿ ದೇಶ ನಿರ್ಮಾಣ ಮತ್ತು ಪುನರ್‌ ರಚನೆಯಲ್ಲಿ ಎಲ್ಲರೂ ಒಳಗೊಳ್ಳುವ ವಿಶಿಷ್ಟ ಮತ್ತು ಅಪರೂಪದ ಪ್ರಯತ್ನವೊಂದನ್ನು ಮಾಡಿದರು…ಅದು ನೋಟು ರದ್ಧತಿ ಅಥವಾ ಅನಾಣ್ಯೀಕರಣ.

ಗರಿಷ್ಠ ಮುಖಬೆಲೆಯ ₹ 1,000 ಮತ್ತು ₹ 500 ನೋಟುಗಳು ಮಾನ್ಯತೆ ಕಳೆದುಕೊಂಡಿದ್ದು ಭ್ರಷ್ಟಾಚಾರ, ಕಪ್ಪುಹಣ ಮತ್ತು ಭಯೋತ್ಪಾದನೆ ವಿರುದ್ಧದ ಸರ್ಕಾರದ ನಿರ್ಣಾಯಕ ಹೋರಾಟ ಇದಾಗಿತ್ತು.
ಈ ಅವಧಿಯಲ್ಲಿ ಈ ನಿರ್ಧಾರದ ಬಗ್ಗೆಯೇ ಎಲ್ಲೆಡೆ ವ್ಯಾಪಕ ಚರ್ಚೆ ನಡೆದು ಹೆಚ್ಚಿನಂಶ ಜನರು ಅದನ್ನು ವಿರೋಧಿಸಿದರು.

ಜನಸಾಮಾನ್ಯರು ಹಲವು ಬಗೆಯಲ್ಲಿ ಅನನುಕೂಲತೆ ಎದುರಿಸಬೇಕಾಯಿತು. ಬಾಗಿಲು ಹಾಕಿದ ಇಲ್ಲವೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಎಟಿಎಂಗಳು, ರದ್ದಾದ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಹೊಸ ಕರೆನ್ಸಿಗಳಿಗೆ ಬದಲಿಸುವಲ್ಲಿ ಎದುರಿಸಿದ ಕಿರಿಕಿರಿಗಳು, ಸ್ವಂತದ ಖಾತೆಯಿಂದ ಹಣ ಮರಳಿ ಪಡೆಯುವಲ್ಲಿನ ಸವಾಲುಗಳು ಹೀಗೇ……

ಆ ಕ್ಷಣದ ನಿರ್ಧಾರದಿಂದ ಆದ ಪ್ರಯೋಜನ ಏನು!?
ನೋಟು ಅಮಾನ್ಯೀಕರಣದ ಪರಿಣಾಮ ಭಯೋತ್ಪಾದನೆಗೆ ಹಣ ಸರಬರಾಜು ಮತ್ತು ನಕಲಿ ನೋಟು ದಂಧೆಗೆ ಪ್ರಬಲ ಪೆಟ್ಟು ಬಿದ್ದಿದೆ.

ನೋಟು ರದ್ದಾದ ನಂತರ ಭಯೋತ್ಪಾದಕ ದಾಳಿಗಳು ಶೇ.60 ರಷ್ಟು ಕಡಿಮೆಯಾಗಿವೆ. ಜಮ್ಮು ಕಾಶ್ಮೀರದಲ್ಲಿ‌ ಶೇ.60 ರಷ್ಟು ಉಗ್ರರ ದಾಳಿಗಳು ಕಡಿಮೆಯಾಗಿವೆ.

ನೋಟು ರದ್ದಾದ ನಂತರ ಹವಾಲಾ ವ್ಯವಹಾರ ಶೇ.50 ರಷ್ಟು ಕುಸಿತಗೊಂಡಿದೆ. ಪಾಕಿಸ್ತಾನದಲ್ಲಿ ಮುದ್ರಣವಾಗುತ್ತಿದ್ದ ನಕಲಿ ನೋಟು ದಂಧೆಗೆ ಭಾರೀ ಹಿನ್ನಡೆಯಾಗಿದೆ. ಹೊಸ ನೋಟು ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳಲ್ಲಿನ ಬದಲಾವಣೆ ನಕಲಿ ನೋಟುಗಳ ಮುದ್ರಣಕ್ಕೆ ಕಷ್ಟವಾಗಿದೆ.

ಇಲ್ಲಿಯವರೆಗೂ ಕರಾಚಿ ಮತ್ತು ಕ್ವೆಟ್ಟಾಗಳಲ್ಲಿ ಭಾರತದ ಕರೆನ್ಸಿಯನ್ನು ಪಾಕಿಸ್ತಾನ ಮುದ್ರಿಸುತ್ತಿತ್ತು ಎನ್ನಲಾಗಿದೆ.

ಭಯೋತ್ಪಾದಕರ ಕೈಯಲ್ಲಿದ್ದ ಭಾರೀ ಪ್ರಮಾಣದ ಭಾರತೀಯ ನೋಟುಗಳು ಭಾರತದಲ್ಲಿ ನೋಟು ರದ್ದಾದ ಕಾರಣ ಬೆಲೆ ಕಳೆದುಕೊಂಡಿವೆ.

ರೂ.500 ಮತ್ತು ರೂ.1000 ತೆಗೆದುಕೊಂಡು ಜಮ್ಮು ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ ಕೃತ್ಯಗಳಿಗೆ ಕಡಿವಾಣ ಬಿದ್ದಿದೆ. ನೋಟು ರದ್ದು ಕ್ರಮ ಅಕ್ರಮ ಹಣ ಸರಬರಾಜಿಗೆ ಪೆಟ್ಟು ನೀಡಿದೆ.

ಜೀವನದ ಪ್ರತಿಯೊಂದು ದೊಡ್ಡ ದೊಡ್ಡ ಘಟನೆ ಪ್ರಾರಂಭವಾಗುವುದೇ ಅತ್ಯಂತ ಸಣ್ಣ ವಿಷಯದಿಂದ ….ಆ ಒಂದು ಕ್ಷಣದ ನಿರ್ಧಾರದಿಂದ.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *