ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 6

ಆ ಒಂದು ಕ್ಷಣ ಎನ್ನುವುದು ದೇಶ-ಕಾಲ ಮತ್ತು ಬದುಕಿನ ಜೊತೆ ತಳಕು ಹಾಕಿಕೊಂಡಿದೆ .ಈ ಜಗತ್ತಿನಲ್ಲಿ ಯಾವುದೇ ಒಂದು ಸ್ಥಿತಿ ಅಸ್ತಿತ್ವದಲ್ಲಿ ಉಳಿಯಬೇಕಾದರೆ ಅದಕ್ಕೆ ವ್ಯತಿರಿಕ್ತವಾದ ವಸ್ತು ಸ್ಥಿತಿಯೊಂದರ ಆಧಾರವೂ ಬೇಕಲ್ಲವೇ !?.
ರಾತ್ರಿ- ಹಗಲು ,ಕಷ್ಟ- ಸುಖ ,ಸ್ಥಿತಿ-ಗತಿ, ಲಾಭ- ನಷ್ಟ ಹೀಗೆ ಇವೆಲ್ಲವೂ ಕಾಲನ ಜೊತೆ ತಳಕು ಹಾಕಿಕೊಂಡಿವೆ, ಕ್ಷಣ ಎನ್ನುವುದು ಕಾಲನ ಅಧೀನ. ಭೂಮಿಯ ಅರ್ಧಭಾಗ ಕತ್ತಲು ಆವರಿಸಿಕೊಂಡಿದ್ದರೆ ಮತ್ತೊಂದು ಭಾಗ ಬೆಳಕನ್ನು ಕಾಣುತ್ತಿರುತ್ತದೆ ; ಒಂದೇ ಕಾಲದಲ್ಲಿ ಒಂದಷ್ಟು ಜನ ಸಂತೋಷವಾಗಿದ್ದರೆ ಮತ್ತೊಂದಿಷ್ಟು ಜನ ನೋವು ಸಂಕಟಗಳಲ್ಲಿ ಇರುತ್ತಾರೆ.

ತುಂಬ ನೋವಿನಲ್ಲಿದ್ದರೆ ಕಾಲವೇ ಎಲ್ಲವನ್ನು ಮರೆಯಿಸುತ್ತದೆ ಎನ್ನುತ್ತಾರೆ, ಒಬ್ಬ ವ್ಯಕ್ತಿ ಸಾಕಷ್ಟು ನಷ್ಟ ಅನುಭವಿಸಿದ್ದರೆ ಕಾಲ ಹೀಗೇ ಇರೋದಿಲ್ಲ ನಿನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಸಮಾಧಾನ ಪಡಿಸುತ್ತಾರೆ. ಕಾಲ ಎನ್ನುವುದು ಮನುಷ್ಯನ ಎಲ್ಲ ಚಟುವಟಿಕೆಗಳಿಗೆ ಜೀವಂತ ಸಾಕ್ಷಿಯಾಗಿ ನಿಲ್ಲುವಂತಹದು. ಆದರೆ ವಿಪರ್ಯಾಸವೆಂದರೆ ಸಮಯ ಮಾತ್ರ ಎಂದಿಗೂ ತಟಸ್ಥವಾಗುವುದಿಲ್ಲ. ಕಾಲಚಕ್ರ ಯಾವತ್ತೂ ತನ್ನದೆ ಪರಧಿಯಲ್ಲಿ ತಿರುಗುತ್ತಲೆ ಇರುತ್ತದೆ. ನಾವೆಲ್ಲರೂ ಕಾಲನ ಬಂಧಿಗಳು. ಮನುಷ್ಯ ಕೆಲಸ ಮಾಡುತ್ತಿರಲಿ ಬಿಡುತ್ತಿರಲಿ ಸುಖದಿಂದ ಇರಲಿ, ದುಃಖದಿಂದ ಇರಲಿ ಎನೇ ಆದರೂ ಕಾಲ ಮಾತ್ರ ತನ್ನ ಪಾಡಿಗೆ ತಾನು ತನ್ನ ಕರ್ತವ್ಯ ಮಾಡುತ್ತಲೆ ಇರುತ್ತದೆ.

ಸಮಯ ಅತ್ಯಂತ ಅಮೂಲ್ಯವಾದುದು, ಸಮಯದ ಮಹತ್ವ ತಿಳಿಯದ ಜನರು ಕೊನೆಯಲ್ಲಿ ಪಶ್ಚಾತಾಪ ಪಡುತ್ತಾರೆ. ಇವತ್ತಿದ್ದಂತೆ ನಾಳೆ ಇರುವುದಿಲ್ಲ. ನಾಳೆಯಿದ್ದಂತೆ ನಾಡಿದ್ದು ಇರುವುದಿಲ್ಲ.
ಪ್ರತಿಯೊಂದು ಕ್ಷಣವೂ ಮಹತ್ವವಾದುದೇ. ಪ್ರತಿಯೊಬ್ಬ ವ್ಯಕ್ತಿಗೂ ಕಾಲ ತನ್ನದೇ ಆದ ಪರಿಮಿತಿಯನ್ನು ನೀಡಿರುತ್ತದೆ. ಅದನ್ನು ಅರಿತು ಕೆಲಸ ಮಾಡಿದವರು ಸಾಧಕರಾಗುತ್ತಾರೆ.
ಇಪ್ಪತ್ನಾಲ್ಕು ಗಂಟೆಯೇ ಎಲ್ಲರಿಗೂ ಇರುವಂತಹದ್ದು. ಆದರೆ ಈ ಅವಧಿಯಲ್ಲಿಯೇ ಇನ್ನುಳಿದವರು ಸಮಯ ಸಾಕಾಗಲಿಲ್ಲ ಎಂಬ ಸಬೂಬಿನಲ್ಲಿಯೇ ದಿನ ದೂಡುವುದೂ ಉಂಟು.

ಕಾಲ ಎಂದರೆ ನಿರಂತರತೆ ,ಅದು ಯಾರಿಗೂ ಯಾವತ್ತೂ ಕಾಯುವುದಿಲ್ಲ.ನಮ್ಮ ಬದುಕಿನ ಬಾಹುಳ್ಯ ಎಂದರೆ ಅದು ವಿಶ್ವ ಪ್ರಜ್ಞೆಯ ಕಾಲನ ಲೆಕ್ಕಾಚಾರದಲ್ಲಿ ಕೆಲವಾರು ನಿಮಿಷಗಳಿರಬಹುದು ಅಷ್ಟೆ. ಆ ಕ್ಷಣಗಳ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕೈಲೇ ಇದೆ.
ಹುಟ್ಟಿದ ಕ್ಷಣದಿಂದ ನಾವು ಸಾವಿಗೆ ಹತ್ತಿರವಾಗುತ್ತಲೇ ಇರುತ್ತೇವೆ.
ನಾವು ಬದುಕಿರುವಷ್ಟು ದಿನ ಜೀವನವನ್ನು ಸಾರ್ಥಕದೆಡೆಗೆ ಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಕಾಲ ನಮ್ಮ ಹಿಂದೆಯೆ ನೆರಳಿನಂತೆ ನಿಂತಿರುತ್ತದೆ .

ಕಾಲನ ಕಬಂಧಬಾಹುಗಳಲ್ಲಿ ಆಯುಸ್ಸೆಂಬುದು ಕಳೆಯುತ್ತಲೇ ಇರುತ್ತದೆ. ಆದರೆ ಅದರ ಅರಿವು ಮಾತ್ರ ಮನುಷ್ಯನಿಗಾಗುವುದಿಲ್ಲ‌.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *