ಇಂಗ್ಲೆಂಡಿನಲ್ಲೊಂದು ತಲೆಕೆಳಗಾದ ವಿಚಿತ್ರ ಮನೆ

ಇಂಗ್ಲೆಂಡಿನಲ್ಲೊಂದು ತಲೆಕೆಳಗಾದ ವಿಚಿತ್ರ ಮನೆ

ಭೂಮಿಯ ಮೇಲಿರುವ ಯಾವುದೇ ಒಂದು ಸಹಜವಾದ ವಸ್ತುವೂ ತಲೆಕೆಳಗಾದರೆ ಅದು ವಿಚಿತ್ರ ಮತ್ತು ಕುತೂಹಲಕಾರಿ ಸಂಗತಿಯಾಗಿಬಿಡುತ್ತದೆ. ಇಂಗ್ಲೆಂಡಿನ ಬ್ರೈಟನ್ ನಗರದಲ್ಲಿಯೂ ಇದೇ ರೀತಿಯ ಒಂದು ವಿಸ್ಮಯವಿದೆ. ಅಲ್ಲಿ ಅಪ್‌ಸೈಡ್ ಡೌನ್ ಆಗಿರುವ ಬೃಹತ್ ಬಂಗಲೆಯೊಂದು ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದೆ. ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಇಲ್ಲಿ ಎಲ್ಲವೂ ತಲೆಕೆಳಗಾಗಿರುವುದರಿಂದ ಇದಕ್ಕೆ ಬ್ರೈಟನ್ ಹೌಸ್ ಎಂದು ಹೆಸರಿಡಲಾಗಿದೆ. ಈ ಮನೆಯೊಳಗೆ ಪ್ರವೇಶಿಸಿದಾಗ ಇದರೊಳಗಿನ ಎಲ್ಲವೂ ತಲೆಕೆಳಗಾಗಿರುವುದನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಇದೊಂದು ಪ್ರವಾಸಿಗರ ಪರಿಪೂರ್ಣವಾದ ಸೆಲ್ಫಿಸ್ಪಾಟ್ ಆಗಿಯೂ ಹೆಸರುಗಳಿಸಿದೆ.

ಈ ಬಂಗಲೆಯಲ್ಲಿರುವ ವಿವಿಧ ರೀತಿಯ ಪೀಠೋಪಕರಣಗಳು ಬಂಗಲೆಯ ತಾರಸಿಯ ಒಳಮೈಯಲ್ಲಿದ್ದು, ಇದರೊಳಗಿನ ಶೌಚಾಲಯವೂ ತಲೆಕೆಳಗಾಗಿದೆ. ಇದರೊಳಗೆ ಅನೇಕ ಕುತೂಹಲಗಳಿದ್ದು, ಇಲ್ಲಿನ ವಿಚಿತ್ರ ದೃಶ್ಯಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಖುಷಿ ಪಡುತ್ತಾರೆ. ಈ ಮನೆಯೊಳಗೆ ಪ್ರವೇಶಿಸಿದರೆ ಎಲ್ಲವೂ ತಲೆಕೆಳಗಾಗಿದ್ದು ಇದರೊಳಗೊಂದು ಹೊಸ ಅನುಭವವನ್ನು ನೀಡುವುದರೊಂದಿಗೆ ಎಲ್ಲರನ್ನೂ ಈ ಬಂಗಲೆಯು ಕನ್ಫ್ಯೂಸ್ ಮಾಡುತ್ತದೆ.

ಇಂಗ್ಲೆಂಡ್ ದೇಶದಲ್ಲಿ ಒಟ್ಟು ಇಂತಹ ನಾಲ್ಕು ಮನೆಗಳಿದ್ದು ಒಂದೇ ಕಂಪನಿಯು ಇಂಥ ವಿಚಿತ್ರವಾದ ಮನೆಗಳನ್ನು ವಿಭಿನ್ನ ಪರಿಕಲ್ಪನೆಯೊಂದಿಗೆ ಸೃಷ್ಟಿಸಿದೆ. ಇಂಗ್ಲೆಂಡಿನ ದಕ್ಷಿಣ ಕರಾವಳಿಯ ಕಡಲ ಕಿನಾರೆ ರೆಸಾರ್ಟ್ ಬೌರ್ನ್ ಮೌತ್‌ನಲ್ಲಿ ದಿ ಟ್ರಯಾಂಗಲ್‌ ಅನ್ನು 2018 ರಲ್ಲಿ ನಿರ್ಮಿಸಲಾಗಿದೆ. ಇಂತಹ ಇನ್ನೆರಡು ಮನೆಗಳನ್ನು ಎಸೆಕ್ಸ್ನ ಲೇಕ್‌ಸೈಡ್ ಮತ್ತು ಡೋರ್ಸೆಟ್‌ನ ಅಡ್ವೆಂಚರ್ ವಂಡರ್ ಲ್ಯಾಂಡ್‌ನಲ್ಲಿ ನಿರ್ಮಿಸಲಾಗಿದೆ.

ಪ್ರತಿ ಋತುವಿನಲ್ಲೂ ಈ ಮನೆಗಳ ಒಳ ಮತ್ತು ಹೊರ ವಿನ್ಯಾಸ ಹಾಗೂ ಬಣ್ಣದಲ್ಲಿ ಬದಲಾವಣೆಯಾಗುತ್ತಿದ್ದು ಚಳಿಗಾಲದಲ್ಲಿ ಇದು ಹಿಮದ ಬಣ್ಣದ ಮನೆಯಾಗಿ ಬದಲಾಗಿ ಇದರಲ್ಲಿ ತಲೆಕೆಳಗಾದ ಸಾರಂಗಗಳು ಬಣ್ಣ ಬಣ್ಣದ ದೀಪಗಳು ಮಿನುಗುತ್ತಿರುತ್ತವೆ. ಹಬ್ಬಗಳ ಸಂದರ್ಭಗಳಲಂತೂ ವಿಭಿನ್ನವಾದ ಒಳಾಂಗಣ ವಿನ್ಯಾಸವನ್ನು ನಿರ್ಮಿಸಲಾಗುತ್ತದೆ. ದಿ ಬ್ರೈಟನ್ ಹೌಸ್ ಬ್ರಿಟಿಷ್ ಏರ್ವೇಸ್‌ ನ I – 360 ವೀಕ್ಷಣಾ ಗೋಪುರದ ಬಳಿಯಿರುವುದು ಇಲ್ಲಿನ ಮತ್ತೊಂದು ವಿಶೇಷ. ಎರಡು ಅಂತಸ್ತಿನ ಕಟ್ಟಡದಲ್ಲಿ ಉತ್ತಮ ಅಳತೆಗಾಗಿ ಗುಲಾಬಿ ಬಣ್ಣವನ್ನು ಚಿತ್ರಿಸಲಾಗಿದ್ದು, ಇದರಲ್ಲಿ ಕಚೇರಿ, ವಾಸಿಸುವ ಸ್ಥಳ, ಮಲಗುವ ಕೋಣೆ ಮತ್ತು ಸ್ನಾನಗೃಹ ಸೇರಿದಂತೆ ಸಂಪೂರ್ಣ ಸುಸಜ್ಜಿತ ಕೊಠಡಿಗಳಿವೆ. ಅಪ್‌ಸೈಡ್ ಡೌನ್ ಹೌಸ್‌ನ ಸಿಇಒ ಆಗಿರುವ ಟಾಮ್ ಡಿರ್ಸೆ ಅವರು ಹೇಳುವಂತೆ ಈ ಮನೆಯನ್ನು ಒಂದಕ್ಕೊಂದು ಕೋನಗಳಲ್ಲಿ ಸರಳವಾಗಿ ಒಟ್ಟಿಗೆ ಹೊಂದಿಕೊಳ್ಳುವ ಮರದ ಫಲಕಗಳಿಂದ ನಿರ್ಮಿಸಲಾಗಿದೆ.

ತಲೆಕೆಳಗಾದ ಮನೆಯನ್ನು ನಿರ್ಮಿಸುವ ಬಗ್ಗೆ ನನ್ನ ವ್ಯಾಪಾರ ಪಾಲುದಾರನಾಗಿರುವ ವ್ಯಕ್ತಿಯೊಬ್ಬರ ಸಹಕಾರದೊಂದಿಗೆ ಈ ವಿಭಿನ್ನ ಮನೆಯನ್ನು ಒಂಬತ್ತು ತಿಂಗಳ ಪರಿಶ್ರಮದಿಂದ ನಿರ್ಮಿಸಿದ್ದೇವೆ ಇದು ತುಂಬಾ ವಿಭಿನ್ನವಾಗಿರುವುದರಿಂದ ಜನರು ಇದರಿಂದ ಆಕರ್ಷಿತರಾಗಿದ್ದಾರೆ. 2013 ರಲ್ಲಿ ಮೈನರ್ ಆನ್ ದಿ ಮೂನ್ ಎಂಬ ಕೃತಿಯಲ್ಲಿ ಕಲಾವಿದನಾಗಿ ಕೆಲಸ ಮಾಡಿದ್ದ ಅಲೆಕ್ಸ್ ಚಿನ್ನೆಕ್ ಎಂಬಾತನೇ ಈ ತಲೆಕೆಳಗಾದ ಮನೆಯನ್ನೂ ನಿರ್ಮಿಸಿದ ಕಲಾವಿದ. ಈ ಮನೆಯು ಮಹಾನಗರಗಳ ವಸತಿ ಸಮಸ್ಯೆಯ ಮಧ್ಯದಲ್ಲಿ ವಿಭಿನ್ನವಾದ ವಿನೋದವನ್ನೂ ನೀಡುತ್ತಿದೆ. ವಿಚಿತ್ರವಾದ ಮನೆಯನ್ನು ಟೇಟ್, ಬೆಟರ್ ಬ್ಯಾಂಕ್‌ಸೈಡ್, ಇಬ್‌ಸ್ಟಾಕ್ ಬ್ರಿಕ್, ನಾರ್ಬೋರ್ಡ್, ಯುರೋಫಾರ್ಮ್, ಯುರೋಬ್ರಿಕ್, ಕೆ-ರೆಂಡ್, ಕಿಂಗ್ಸ್ಪಾನ್, ಲಿಯಾನ್ಸ್ ಅನೂಟ್, ಬೆಂಚ್‌ಮಾರ್ಕ್ ಸ್ಕ್ಯಾಫೋಲ್ಡಿಂಗ್, ಧೇಸಿ ಮತ್ತು ಅರ್ಬನ್ ಸರ್ಫೇಸ್ ಪ್ರೊಟೆಕ್ಷನ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವುದು ವಿಶೇಷ.

ಈ ಮನೆಯೊಳಗೆ ಕಾಲಿಟ್ಟರೆ ತಲೆ ತಿರುಗುತ್ತದೆ

ಮನೆಯ ತಾರಸಿಯ ಒಳಮೈಯಲ್ಲಿ ತಲೆಕೆಳಗಾಗಿ ಕುಳಿತುಕೊಳ್ಳುವ ಬ್ರಿಟನ್ ನಿನ ಮೊದಲ ‘ತಲೆಕೆಳಗಾದ ಮನೆ’ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತದೆ. ಈ ವಿಲಕ್ಷಣ ರಚನೆಯು ಎರಡು ಮಹಡಿಗಳನ್ನು ಹಾಗೂ ಸಂಪೂರ್ಣ ಸುಸಜ್ಜಿತ ಕೊಠಡಿಗಳನ್ನೊಳಗೊಂಡಿದೆ. ಮನೆಯನ್ನು ಹೊರಗಿನಿಂದ ನೋಡಿದಾಗ ಮನೆಯು ಸಂಪೂರ್ಣವಾಗಿ ತನ್ನ ಛಾವಣಿಯ ಮೇಲೆ ನಿಂತಂತೆ ಕಾಣುತ್ತದೆ. ಸಂದರ್ಶಕರಿಗೆ ಪಕ್ಕದ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಮನೆಯೊಳಗೆ ಕಚೇರಿ, ವಾಸಿಸುವ ಸ್ಥಳ, ಮಲಗುವ ಕೋಣೆ ಮತ್ತು ಸ್ನಾನಗೃಹ ಸೇರಿದಂತೆ ಹಲವಾರು ಕೊಠಡಿಗಳಿವೆ. ಮನೆಯೊಳಗೆ ನೈಜ ಪೀಠೋಪಕರಣಗಳು ಮತ್ತು ವಿವಧ ಉಪಕರಣಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಮನೆಯ ಛಾವಣಿಗೆ ತಲೆಕೆಳಗಾಗಿ ಅಳವಡಿಸಲಾಗಿದೆ.

ಕೋಣೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಮರಗಳನ್ನೇ ಬಳಸಲಾಗಿದೆ. ಈ ಮನೆಯ ಕುರಿತಾಗಿ ಸಂದರ್ಶಕರ ಪ್ರತಿಕ್ರಿಯೆಯು ನಂಬಲಾಗದಷ್ಟು ಸಕಾರಾತ್ಮಕವಾಗಿದ್ದು, ಈ ಪರಿಕಲ್ಪನೆಯು ಹೊಸದಾಗಿದ್ದು, ಇದರ ಬಗ್ಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆಂಬ ವಿಷಯದ ಕುರಿತು ತೀರಾ ತೃಪ್ತಿಯಿದೆ ಎಂದು ಇದರ ಸಿ.ಇ.ಒ ಹೇಳಿದ್ದಾರೆ. ಮನೆಯೊಳಗಿನ ಪ್ರವೇಶಕ್ಕಾಗಿ ಸಂದರ್ಶಕರಿಗೆ ಒಬ್ಬರಿಗೆ ಪ್ರವೇಶಕ್ಕಾಗಿ 4 ಪೌಂಡ್ (ಭಾರತೀಯ ಕರೆನ್ಸಿ ರೂ.344/-) ದರವನ್ನು ನಿಗದಿಪಡಿಸಲಾಗಿದೆ. ಇಲ್ಲಿನ ಸೀಲಿಂಗ್ ಟಾಪ್ ಕಲಾಕೃತಿಗಳಲ್ಲಿ ಒಂದು ಕೋಟ್, ಟಾಯ್ಲೆಟ್, ಡೆಸ್ಕ್ ಮತ್ತು ಹಾಸಿಗೆಯಿದ್ದು, ಪ್ರವಾಸಿಗರನ್ನು ವಿಭಿನ್ನವಾಗಿ ಆಕರ್ಷಿಸುತ್ತಿದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.
ದೂ: 9742884160

Related post

Leave a Reply

Your email address will not be published. Required fields are marked *