ಇಗುವಾಜು ಜಲಪಾತ – ಪ್ರಪಂಚದ ಅದ್ಭುತ ಸೃಷ್ಟಿ

ಇಗುವಾಜು ಜಲಪಾತ – ಪ್ರಪಂಚದ ಅದ್ಭುತ ಸೃಷ್ಟಿ

ಈ ಭೂಮಿಯು ಪ್ರಕೃತಿಯ ವೈಚಿತ್ರದ ಸೃಷ್ಟಿಯಾಗಿದ್ದು ಈ ಭೂಮಿಯಲ್ಲಿ ಏನಿದೆ ಮತ್ತು ಏನಿಲ್ಲ ಎಂದು ಹೇಳುವುದೇ ಅಸಾಧ್ಯ. ಇಲ್ಲಿ ಮಣ್ಣು, ನೀರು ಗಾಳಿ, ನದಿ ತೊರೆ, ಕಾಡು ಮತ್ತು ಪರ್ವತಗಳಿದ್ದು, ಎತ್ತರವಾದ ಪ್ರದೇಶದಿಂದ ತಗ್ಗು ಪರ್ದೇಶಗಳಿಗೆ ಧುಮುಕುವ ಅದೆಷ್ಟೋ ನದಿಗಳು ಸಾವಿರಾರು ಜಲಪಾತಗಳು ಇಲ್ಲಿ ಸೃಷ್ಟಿಯಾಗಿವೆ. ಜಲಪಾತವೆಂದರೆ ಒಂದು ನದಿಯು ಒಂದೆಡೆ ಕೇಂದ್ರೀಕೃತಗೊಂಡು ಕೆಲವು ಕವಲುಗಳಾಗಿ ಧುಮುಕುತ್ತದೆ. ಆದರೆ ಇಲ್ಲೊಂದು ಜಲಪಾತವಿದ್ದು ಇದು ಬರೋಬ್ಬರಿ 275 ಕವಲು ಅಥವಾ ಉಪ ಜಲಪಾತಗಳಾಗಿ ಸುಮಾರು 82ಮೀ ಎತ್ತರದಿಂದ ರಭಸವಾಗಿ ಧುಮುಕುತ್ತದೆ. ಇದು ಪ್ರಕೃತಿಯ ವಿಶಿಷ್ಟ ಸೃಷ್ಟಿಯಾಗಿದ್ದು, ಇದುವೇ ಬ್ರೆಜಿಲ್, ಅರ್ಜೆಂಟೀನಾ ಮತ್ತು ಪೆರುಗ್ವೆ ದೇಶಗಳ ಗಡಿಯಲ್ಲಿರುವ ‘ಇಗುವಾಜು ಜಲಪಾತ’.

ಇದು ವಿಶ್ವದ ಅತ್ಯಂತ ಅಗಲವಾದ ಜಲಪಾತವೆಂಬ ಹೆಗ್ಗಳಿಕೆ ಪಡೆದಿದ್ದು, ಇಗುವಾಜು ನದಿಯು ಬ್ರೆಜಿಲ್‌ ನ ಪರಾನಾ ರಾಜ್ಯದಲ್ಲಿ ಹುಟ್ಟಿ, ಬ್ರೆಜಿಲ್ ಹಾಗೂ ಅರ್ಜೆಂಟೈನಾ ದೇಶಗಳ ಗಡಿಯಲ್ಲಿ ಹರಿಯುವುದರಿಂದ ಈ ನದಿಯೇ ಉಭಯ ದೇಶಗಳ ಗಡಿಯನ್ನು ನಿರ್ಧರಿಸುತ್ತದೆ. ಈ ನದಿಯ ಬಹು ಭಾಗವು ಬ್ರೆಝಿಲ್ ದೇಶದಲ್ಲಿ ಹರಿದರೆ ಜಲಪಾತದ ಹೆಚ್ಚಿನ ಭೂಪ್ರದೇಶವು ಅರ್ಜೆಂಟೀನಾ ದೇಶದಲ್ಲಿದೆ. ಗೌರಾನಿ ಭಾಷೆಯಲ್ಲಿ ‘ಇಗುವಾಜು’ ಎಂದರೆ ‘ಗ್ರೇಟ್ ವಾಟರ್’ (ದೊಡ್ಡ ಪ್ರಮಾಣದ ನೀರು) ಎಂದರ್ಥ. ಈ ಜಲಪಾತವು ಒಂದೆಡೆ ಕೇಂದ್ರೀಕೃತಗೊಂಡು ಹರಿಯದೇ ಹಲವಾರು ಸರಣಿ ಜಲಪಾತಗಳಾಗಿ ಹರಿಯುತ್ತದೆ. ಹೊರ ಪ್ರಪಂಚಕ್ಕೆ ಈ ಜಲಪಾತವನ್ನು 1541 ರಲ್ಲಿ ವಿಶ್ವಕ್ಕೆ ಪರಿಚಯಿಸಿದವನು ಸ್ಪಾನಿಷ್ ಸಾಹಸಿ ಅಲ್ವಾರ್ ನ್ಯುನೆಜ್ ಕಾಬೆಝಾ ಡೆ ವಕಾ.

ಜಲಪಾತದ ಇತಿಹಾಸ

ಸುಮಾರು 10,000 ವರ್ಷಗಳ ಹಿಂದೆ ಇಗುವಾಜು ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಡೋರಾಡೆನ್ಸ್ ಪಂಗಡದ ಬೇಟೆಗಾರರು ವಾಸಿಸುತ್ತಿದ್ದರು. ಹೊಸ ಕೃಷಿ ತಂತ್ರಜ್ಞಾನಗಳನ್ನು ಇಲ್ಲಿ ಪರಿಚಯಿಸಿದ ಇವರನ್ನು ಸುಮಾರು 1000 ವರ್ಷಗಳ ಹಿಂದೆ ಬೇರೆಡೆಗೆ ಸ್ಥಳಾಂತರಿಸಲಾಯಿತು ಬ್ರೆಜಿಲ್‌ನ ಸೇನಾಧಿಕಾರಿ ಎಡ್ಮಂಡೊ ಡಿ ಬ್ಯಾರೊಸ್ 1897 ರಲ್ಲಿ ಜಲಪಾತದ ಬಳಿ ರಾಷ್ಟ್ರೀಯ ಉದ್ಯಾನವನವನ್ನು ರಚಿಸಲು ಪ್ರಸ್ತಾಪಿಸಿದರು. ಆದರೆ ಈ ಜಲಪಾತವು ಬ್ರೆಜಿಲ್ ಮತ್ತು ಅರ್ಜೆಂಟೀನಾ ನಡುವಿನ ಗಡಿಯ ಒಂದು ಭಾಗವಾಗಿದೆ ಎಂದು ತಿಳಿಯುತ್ತಿದ್ದಂತೆ, ಆ ಗಡಿಗಳನ್ನು ನಿಯಮ ಪ್ರಕಾರ ಸ್ಪಷ್ಟವಾಗಿ ಗುರುತಿಸಲಾಯಿತು. ನಂತರ ಎರಡು ದೇಶಗಳೂ ಪ್ರತ್ಯೇಕ ರಾಷ್ಟ್ರೀಯ ಉದ್ಯಾನವನಗಳನ್ನು ಸ್ಥಾಪಿಸಲು ಉದ್ದೇಶಿಸಿ 1934 ರಲ್ಲಿ ಅರ್ಜೆಂಟೀನಾ ಮತ್ತು ಬ್ರೆಜಿಲ್, 1939 ರಲ್ಲಿ ಇಗುವಾಜು ರಾಷ್ಟ್ರೀಯ ಉದ್ಯಾನವನಗಳನ್ನು ಸ್ಥಾಪಿಸಿದವು.

ಪರುಗ್ವೆ ಮತ್ತು ಬ್ರೆಜಿಲ್ ಜಂಟಿಯಾಗಿ 1991 ರಲ್ಲಿ ಈ ನದಿಗೆ ಬೃಹತ್ ಅಣೆಕಟ್ಟನ್ನು ನಿರ್ಮಿಸುವವರೆಗೂ ಈ ಜಲಪಾತದ ಶಕ್ತಿಯನ್ನು ಪೂರ್ತಿಯಾಗಿ ಬಳಸಿಕೊಳ್ಳುತ್ತಿರಲಿಲ್ಲ. ಈ ಅಣೆಕಟ್ಟಿನ ತಂತ್ರಜ್ಞಾನವು ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಹಾಗೂ ವಿಶ್ವದ ಅತಿ ದೊಡ್ಡ ಅಣೆಕಟ್ಟಾಗಿದ್ದು, ಇದರಿಂದ ಇಂದು ಬ್ರೆಜಿಲ್ ಮತ್ತು ಅರ್ಜೆಂಟೀನಾ ದೇಶದ ಒಟ್ಟು ಅವಶ್ಯಕತೆಯ 40% ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ.

ಭೂಮಿಯ ರಚನೆ ಮತ್ತು ಭೌಗೋಳಿಕ ವಿಶೇಷತೆ

ಸಾಮಾನ್ಯವಾಗಿ ಜಲಪಾತಗಳು ಕಿರಿದಾದ ಕೊರಕಲಿಗೆ ಧುಮುಕುತ್ತವೆ. ಆದರೆ ಇಲ್ಲಿ ಈ ನದಿಯು ವಿಶಾಲವಾಗಿ ಹರಿಯುತ್ತಲೇ ವಿಶಾಲವಾದ ಭೂ ಪ್ರದೇಶದಲ್ಲಿ ಹಲವಾರು ಕವಲುಗಳಾಗಿ ಧುಮುಕುತ್ತಿರುವುದು ವಿಶೇಷ. ಈ ಜಲಪಾತವನ್ನು ದೂರದಿಂದ ನೋಡಿದಾಗ ಎರಡು ಮಟ್ಟಿಲುಗಳಿಗೆ ಧುಮುಕುತ್ತಿರುವಂತೆ ಕಾಣಿಸುತ್ತದೆ. ಈ ಮೆಟ್ಟಿಲುಗಳು ಬಸಾಲ್ಟ್ ಶಿಲೆಯಿಂದ ರೂಪುಗೊಂಡಿದ್ದು, ಈ ಹಂತಗಳು 35 ಮತ್ತು 40 ಮೀ ಎತ್ತರವಿದೆ. ಸ್ತಂಭಾಕಾರದಲ್ಲಿ ಜೋಡಿಸಿದಂತೆ ಕಾಣುವ ಬಸಾಲ್ಟ್ ಶಿಲಾ ರಚನೆಗಳು ಪ್ಯಾಲಿಯೊಜೋಯಿಕ್ – ಮೆಸೊಜೊಯಿಕ್ ಪರಾನಬಾಸಿನ್‌ನೊಳಗಿನ ಸೆರಾ ಜೆರಲ್ ರಚನೆಯಿಂದ ಕೂಡಿದೆ. ಈ ಹಂತಗಳ ಮೇಲ್ಭಾಗವು 8-10ಮೀ ಬಸಾಲ್ಟ್ ನಿಂದ ರಚಿತವಾಗಿದ್ದು, ಈ ಪದರಗಳ ನಡುವಿನ ಸಂಪರ್ಕವು ಜಲಪಾತದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಜಲಪಾತವು ಬಸಾಲ್ಟ್ ಶಿಲೆಗಳ ಮೇಲೆ ಧುಮುಕುವ ವೇಗಕ್ಕೆ ಇಲ್ಲಿನ ಶಿಲೆಯು ಪ್ರತೀ ವರ್ಷ ಅಂದಾಜು 1.4 ಸೆಂ.ಮೀ ನಿಂದ 2.1 ಸೆಂ.ಮೀನಷ್ಟು ಸವೆಯುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ.

ಇಗುವಾಜು ಜಲಪಾತವು ಪರಾನ್ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, ಇಗುವಾಜು ಮತ್ತು ಪರಾನಾ ನದಿಯ ಸಂಗಮ ಸ್ಥಳದಿಂದ 23 ಕಿ.ಮೀ ಮೇಲಕ್ಕೆ ಎತ್ತರದ ಸ್ಥಳದ ಅಂಚಿನಲ್ಲಿ 2.7 ಕಿ.ಮೀ ಉದ್ದಕ್ಕೆ ಹಲವಾರು ಸಣ್ಣ ಸಣ್ಣ ಮಣ್ಣಿನ ದಿನ್ನೆಗಳು ಒಂದು ಜಲಪಾತವನ್ನು ಅನೇಕ ಸಂಖ್ಯೆಯ ಪ್ರತ್ಯೇಕ ಜಲಪಾತಗಳನ್ನಾಗಿ ವಿಭಾಗಿಸುತ್ತದೆ. ಈ ಜಲಪಾತಗಳು 197 ಅಡಿಯಿಂದ 269 ಅಡಿ ಎತ್ತರವಿದೆ. ಈ ಜಲಪಾತದಲ್ಲಿ ಉಪ ಜಲಪಾತಗಳ ಸಂಖ್ಯೆಯು ನೀರಿನ ಹರಿವಿನ ಪ್ರಮಾಣಕ್ಕೆ ಅನುಗುಣವಾಗಿ 150 ರಿಂದ 300 ಸಂಖ್ಯೆಯವರೆಗೆ ಏರಿಳಿತಗೊಳ್ಳುತ್ತಿರುತ್ತದೆ. ಈ ಜಲಪಾತದಿಂದ ಧುಮುಕುವ ನೀರಿನ ಅರ್ಧದಷ್ಟು ಭಾಗವು ಡೆವಿಲ್ಸ್ತ್ರೋಟ್ ಎಂದು ಕರೆಯಲ್ಪಡುವ ಉದ್ದ ಮತ್ತು ಕಿರಿದಾದ ಕಣಿವೆಯನ್ನು ಸೇರುತ್ತದೆ.

ಜಲಪಾತದಿಂದ ಕೆಳಭಾಗದಲ್ಲಿರುವ ಡೆವಿಲ್ಸ್ತ್ರೋಟ್ ಕಣಿವೆಯು 90 ಮೀ ಅಗಲ ಮತ್ತು 80 ಮೀ ಆಳವಿದೆ. ಈ ಕಣಿವೆಯ ಮತ್ತೊಂದು ಭಾಗವು 160 ರಿಂದ 200 ಉಪ ಜಲಪಾತಗಳನ್ನು ಮತ್ತೆ ಸೃಷ್ಟಿಸಿದ್ದು ಪ್ರಕೃತಿಯ ಅದ್ಭುತ ರಚನೆಯೆಂದರೆ ತಪ್ಪಾಗಲಾರದು. ಇದರಲ್ಲಿರುವ ಅತಿದೊಡ್ಡ ಜಲಪಾತಗಳನ್ನು ಸ್ಯಾನ್ ಮಾರ್ಟಿನ್, ಆಡಮ್ ಮತ್ತು ಇವಾ, ಪೆನೊನಿ ಮತ್ತು ಬರ್ಗಾನೊ ಎಂದು ಹೆಸರಿಸಲಾಗಿದೆ. ಬ್ರೆಜಿಲ್ ದೇಶದ ಫೊಜ್ ಡೊ ಇಗುವಾಜು, ಅರ್ಜೆಂಟೀನಾ ದೇಶದ ಪೋರ್ಟೊ ಇಗುವಾಜು, ಮತ್ತು ಪರುಗ್ವೆ ದೇಶದ ಸಿಯುಡಾಡ್ ಡೆಲ್ ಎಸ್ಟೇ ನಗರಗಳು ಇಗುವಾಜು ನದಿಗೆ ಪ್ರವೇಶವನ್ನು ಹೊಂದಿದ್ದು, ಇವುಗಳು ಮೂರು ರಾಷ್ಟ್ರಗಳ ಗಡಿಗಳಾಗಿವೆ.

ಅರ್ಜೆಂಟೀನಾ ಮತ್ತು ಬ್ರೆಜಿಲ್ ದೇಶಗಳ ಗಡಿಯ ಜಲಪಾತ

ಇಗುವಾಜು ಜಲಪಾತವು ಪ್ರಾಕೃತಿಕವಾಗಿ ಆಂಗ್ಲ ಭಾಷೆಯ ‘ಜೆ’ (ಎ) ಅಕ್ಷರವನ್ನು ಹೋಲುವಂತೆ ನಿರ್ಮಾಣಗೊಂಡಿರುವುದು ವಿಶೇಷ. ಜಲಪಾತದಿಂದ ಧುಮುಕಿದ ನೀರು ಡೆವಿಲ್ಸ್ತ್ರೋಟ್ ಕಣಿವೆಯ ಮೂಲಕ ಅರ್ಜೆಂಟೀನಾ ಮತ್ತು ಬ್ರೆಜಿಲ್ ಗಡಿಯಲ್ಲಿ ಸಾಗುತ್ತದೆ. ನದಿಯ ಬಲ ಭಾಗದಲ್ಲಿ ಬ್ರೆಜಿಲ್ ದೇಶವಿದ್ದು, ಇದು ಇಗುವಾಜು ನದಿಯ 95% ಜಲಾನಯನ ಪ್ರದೇಶವನ್ನು ಹೊಂದಿದೆ. ಜಲಪಾತದ ಕೇವಲ 20% ಭಾಗವು ಈ ದೇಶಕ್ಕೆ ಸೇರಿದೆ. ನದಿಯ ಎಡ ಭಾಗದಲ್ಲಿ ಅರ್ಜೆಂಟೀನಾ ದೇಶವಿದ್ದು, ಜಲಪಾತದ ಸುಮಾರು 80% ಭಾಗವನ್ನು ಹೊಂದಿದೆ.

ಪ್ರವಾಸೋದ್ಯಮ

ಅರ್ಜೆಂಟೀನಾದ ಕ್ಯಾಟರಾಟಾಸ್ ಡೆಲ್ ಇಗುವಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಆರ್) ಮತ್ತು ಬ್ರೆಜಿಲ್‌ನ ಫೋಜ್ ಡೊ ಇಗುವಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು (ಐಜಿಯು) ಇಗುವಾಜು ಜಲಪಾತಕ್ಕೆ ಸಮೀಪದಲ್ಲಿವೆ. ವಿಮಾನ ನಿಲ್ದಾಣದಿಂದ ಜಲಪಾತಕ್ಕೆ ಯಥೇಚ್ಛವಾದ ಬಸ್ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿದೆ. ಉದ್ಯಾನದೊಳಗಿನ ವಿವಿಧ ಸ್ಥಳಗಳಿಗೆ ಉಚಿತ ಬಸ್ಸುಗಳನ್ನು ಒದಗಿಸಲಾಗುತ್ತದೆ. ಅರ್ಜೆಂಟೀನಾದಿಂದ ಡಿಸ್ನಿಯ ಅನಿಮಲ್ ಕಿಂಗ್ಡಮ್ ನಲ್ಲಿರುವ ರೈನ್‌ ಫಾರೆಸ್ಟ್ ಪರಿಸರ ಸ್ನೇಹಿ ರೈಲಿನ ಮೂಲಕವೂ ಡೆವಿಲ್ಸ್ತ್ರೋಟ್‌ವರೆಗೆ ಸಾಗಬಹುದು.

ಜಲಪಾತವನ್ನು ತಲುಪುವುದು ಹೇಗೆ?

ಈ ಜಲಪಾತವನ್ನು ಬ್ರೆಜಿಲ್‌ನ ಫೋಜ್ ಡೊ ಇಗುವಾ, ಅರ್ಜೆಂಟೀನಾದ ಪ್ಯುಯೆರ್ಟೊ ಇಗುವಾ ಮತ್ತು ಪರುಗ್ವೆಯ ಸಿಯುಡಾಡ್ ಡೆಲ್ ಎಸ್ಟೇ ಮೂಲಕ ತಲುಪಬಹುದು. ಈ ಜಲಪಾತವನ್ನು ಇಗುವಾ ರಾಷ್ಟ್ರೀಯ ಉದ್ಯಾನ (ಅರ್ಜೆಂಟೀನಾ) ಮತ್ತು ಇಗುವಾಜು ರಾಷ್ಟ್ರೀಯ ಉದ್ಯಾನಗಳು (ಬ್ರೆಜಿಲ್) ಹಂಚಿಕೊಂಡಿವೆ. ಈ ಎರಡೂ ಉದ್ಯಾನವನಗಳನ್ನು ಕ್ರಮವಾಗಿ 1984 ಮತ್ತು 1986 ನೇ ವರ್ಷದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿ ಘೋಷಿಸಿತು. ಇಲ್ಲಿಗೆ ತೆರಳಲು ಇಗುವಾಜು ರಾಷ್ಟ್ರೀಯ ಉದ್ಯಾನವನವು ಶುಲ್ಕವನ್ನು ಆಯಾ ದೇಶಗಳಿಂದ ಪ್ರವೇಶಕ್ಕೆ ಅನುಗುಣವಾಗಿ ವಿಧಿಸುತ್ತಿದ್ದು, ಇದಕ್ಕಾಗಿ ಅಲ್ಲಲ್ಲೇ ಟಿಕೆಟ್ ಕೌಂಟರ್ ಸ್ಥಾಪಿಸಿದೆ. ಆನ್‌ಲೈನ್ ಮೂಲಕವೂ ಟಿಕೆಟ್ ಪಡೆದುಕೊಳ್ಳಲು ಅವಕಾಶವಿದೆ. ಇಲ್ಲಿ ಒಬ್ಬ ಪ್ರವಾಸಿಗನಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ರಹಿತವಾಗಿ ಸರಾಸರಿ ರೂ.2,088/- ($29) ಶುಲ್ಕವನ್ನು ನಿಗದಿಪಡಿಸಿದೆ.

ಯಾವಾಗ ಇಲ್ಲಿಗೆ ಹೋಗುವುದು ಸೂಕ್ತ? ಪ್ರವಾಸಿಗರು ಇಗುವಾಜು ಜಲಪಾತಕ್ಕೆ ವರ್ಷಪೂರ್ತಿ ಭೇಟಿ ನೀಡಬಹುದು. ಅದರಲ್ಲೂ ಜುಲೈ ನಿಂದ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಮತ್ತು ಫೆಬ್ರವರಿಯಿಂದ ಏಪ್ರಿಲ್ ತಿಂಗಳ ಮಧ್ಯದಲ್ಲಿ ಹೋಗುವುದು ಸೂಕ್ತ. ಏಕೆಂದರೆ ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅದ್ಭುತವಾಗಿರುವುದಲ್ಲದೆ ಪ್ರವಾಸಿಗರ ದಟ್ಟಣೆ ಕಡಿಮೆಯಿರುತ್ತದೆ. ಈ ಜಲಪಾತದ 70-80% ಭಾಗವು ಅರ್ಜೆಂಟೀನಾದ ಬದಿಯಲ್ಲಿರುವುದರಿಂದ, ಈ ಕಡೆಯಿಂದ ಜಲಪಾತದ ಬಹು ಭಾಗವನ್ನು ನೋಡಲು ಸಾಧ್ಯವಿಲ್ಲವಾದ್ದರಿಂದ ಬ್ರೆಜಿಲ್ ಕಡೆಯಿಂದ ಆಗಮಿಸುವುದು ಉತ್ತಮ. ಇಲ್ಲಿ ಜಲಪಾತದ ವಿವಿಧ ಕೋನಗಳನ್ನು ನೋಡಬಹುದು, ಜಲಪಾತದ ಕೆಳ ಭಾಗಕ್ಕೂ ತೆರಳಿ ನೀರಿನ ಹನಿಗಳಲ್ಲಿ ಒದ್ದೆಯಾಗಬಹುದು. ಇಲ್ಲಿಂದ ಜೆಟ್ ದೋಣಿಯ ಮೂಲಕ ಜಲಪಾತದ ತಳಭಾಗದವರೆಗೆ ತೆರಳಿ ವೀಕ್ಷಿಸಬಹುದು. ಇಲ್ಲಿ ಗಾಳಿ ತುಂಬಿದ ವಿಶಿಷ್ಟ ದೋಣಿ ಸೇವೆಯು ಪ್ರವಾಸಿಗರನ್ನು ಜಲಪಾತಕ್ಕೆ ಹತ್ತಿರಕ್ಕೆ ಕರೆದೊಯ್ಯುತ್ತವೆ. ಟೂರ್ ಆಪರೇಟರ್‌ಗಳು ಪ್ರವಾಸಿಗರಿಗೆ ನೀರಿನ ಹನಿಗಳಿಂದ ರಕ್ಷಣೆಗಾಗಿ ನೀರಿನ ಬಿಗಿಯಾದ ಚೀಲಗಳನ್ನು ನೀಡುತ್ತಾರೆ. ಬ್ರೆಜಿಲ್ ಕಡೆಯಿಂದ ಇಗುವಾಜು ಜಲಪಾತಕ್ಕೆ ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 5.00 ರವರೆಗೆ, ಅರ್ಜೆಂಟೀನಾ ಕಡೆಯಿಂದ ಬೆಳಿಗ್ಗೆ 8.00 ರಿಂದ ಸಂಜೆ 4.30 ರವರೆಗೆ ಪ್ರವೇಶವನ್ನು ಕಲ್ಪಿಸಲಾಗಿದೆ.

ಈ ಜಲಪಾತದ ಪ್ರಮುಖ ಆಕರ್ಷಣೆಯೆಂದರೆ ಪ್ರವಾಸಿಗರು ಕೃತಕವಾಗಿ ನಿರ್ಮಿಸಲಾದ 2 ಕಾಂಕ್ರೀಟ್ ಕಾಲುದಾರಿಯ ಮೂಲಕ ಡೆವಿಲ್ಸ್ತ್ರೋಟ್ ಕಣಿವೆಯಿಂದ ಫಾಲ್ಸ್ ತಳದವರೆಗೂ ಸಾಗಿ ಜಲಪಾತದ ಸೌಂದರ್ಯವನ್ನು ವೀಕ್ಷಿಸಬಹುದು. ನೀರಿನ ಮಧ್ಯದಲ್ಲಿ ನಿಂತು ವೀಕ್ಷಿಸಲು ಹಲವು ವೀಕ್ಷಣಾ ಗೋಪುರಗಳು, ಹಾಗೂ ಜಲಪಾತದ ತಳಕ್ಕೆ ಹಾಗೂ ಮೇಲ್ಭಾಗದವರೆಗೂ ಸಾಗಿ ವೀಕ್ಷಿಸಲು ಎರಡು ಪ್ರತ್ಯೇಕ ಕಾಂಕ್ರೀಟ್ ಕಾಲು ದಾರಿಯನ್ನು ನಿರ್ಮಿಸಿರುವುದರಿಂದ ವೀಕ್ಷಣೆಯು ರೋಮಾಂಚನವನ್ನು ನೀಡುತ್ತದೆ. ಬ್ರೆಜಿಲ್ ಕಡೆಯಿಂದ ಆಗಮಿಸಿದಲ್ಲಿ ಜಲಪಾತವನ್ನು ಹೆಲಿಕಾಪ್ಟರ್ ಸವಾರಿಯ ಮೂಲಕವೂ ಮೇಲಿನಿಂದ ಕಣ್ತುಂಬಿಕೊಳ್ಳಬಹುದು. ಆದರೆ ಅರ್ಜೆಂಟೀನಾ ಸರಕಾರವು ಜಲಪಾತದ ಸುತ್ತಮುತ್ತಲಿನ ಪರಿಸರ, ಜೀವವೈವಿಧ್ಯಗಳಿಗೆ ತೊಂದರೆಯಾಗುವ ಕಾರಣದಿಂದ ಹೆಲಿಕಾಪ್ಟರ್ ಸವಾರಿಯನ್ನು ನಿಷೇಧಿಸಿದೆ. ಇಲ್ಲಿಗೆ ತೆರಳುವ ವಾಹನಗಳಿಗೆ ಸರಾಸರಿ ಇಂತಿಷ್ಟು ಮಂದಿ ಪ್ರಯಾಣಿಕರು ಇರಲೇಬೇಕೆಂಬ ಕಟ್ಟುನಟ್ಟಿನ ನಿಯಮವನ್ನು ಮಾಡಿರುವುದರಿಂದ ಬೇಕಾಬಿಟ್ಟಿಯಾಗಿ ಇಲ್ಲಿ ವಾಹನಗಳು ಸಂಚರಿಸುವುದಿಲ್ಲ. ಇದರಿಂದಾಗಿ ಅನಾವಶ್ಯಕ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ ಇಂಧನ ಮಿತವ್ಯಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣದ ಉದ್ದೇಶವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.

ಇಲ್ಲಿನ ವಿಶಿಷ್ಟ ಸಾರಿಗೆ ವ್ಯವಸ್ಥೆಯಲ್ಲಿ 72 ಪ್ರಯಾಣಿಕರ ಸಾಮರ್ಥ್ಯದ ಬಸ್ ಇದ್ದು, ಇದರಲ್ಲಿ ಸುತ್ತಲೂ ಗಾಜಿನ ಹೊರಮೈಯನ್ನು ನಿರ್ಮಿಸಿ ಸುತ್ತಲಿನ ಪಾರದರ್ಶಕ ನೋಟಕ್ಕೆ ಅನುವು ಮಾಡಿಕೊಡಲಾಗಿದೆ. ಇಲ್ಲಿನ ಬಸ್‌ಗಳು ಪರಿಸರ ಸ್ನೇಹಿ ಕೊನಮಾ (ಹಂತ 5) ಮತ್ತು ಯುರೋ (ಹಂತ 5) ತಂತ್ರಜ್ಞಾನವನ್ನು ಹೊಂದಿರುವುದರೊಂದಿಗೆ ಇಲ್ಲಿನ ಪ್ರವಾಸೋದ್ಯಮದ ಜತೆಗೆ ಪರಿಸರದ ಕಾಳಜಿಯನ್ನು ವಹಿಸುತ್ತಿರುವುದು ಧನಾತ್ಮಕ ಅಂಶವಾಗಿದೆ. ಇಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ, ಶಬ್ದದ ಮಟ್ಟ ಮತ್ತು ಕಡಿಮೆ ವೇಗದಿಂದಾಗಿ ಪ್ರವಾಸಿಗರು ಹಾದಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯ ಕಾಡು ಪ್ರಾಣಿಗಳನ್ನು ವೀಕ್ಷಿಸಬಹುದು. ಪ್ರತಿ ಬಸ್‌ಗಳಿಗೂ ವಿಶೇಷವಾದ ಬಣ್ಣದ ಯೋಜನೆಯಿದ್ದು, ಈ ಕಾಡಿನ ಜೀವ ವೈವಿಧ್ಯಗಳಾದ ಮಚ್ಚೆಯುಳ್ಳ ಜಾಗ್ವಾರ್‌ಗಳು, ಚಿಟ್ಟೆಗಳು, ರಕೂನ್‌ಗಳು, ಪ್ರಿಗೊ ಕೋತಿಗಳು, ಹವಳದ ಹಾವುಗಳು, ಟೂಕನ್‌ಗಳು, ಗಿಳಿಗಳು ಮತ್ತು ಹಳದಿ ಎದೆಯ ಕೈಮನ್‌ಗಳ ಬಣ್ಣವನ್ನು ಬಳಿಯಲಾಗಿದೆ.

ಮಹಾನದಿಯ ವಿಶೇಷತೆ

ಜಲಪಾತದ ತಳದಲ್ಲಿ ಸಾಹಸ ಕ್ರೀಡೆಗಳನ್ನು ಕೈಗೊಳ್ಳಬಹುದು. ಜಲಪಾತದ ವಿಹಂಗಮ ನೋಟವನ್ನು, ಅವಿಸ್ಮರಣೀಯ ಅನುಭವವನ್ನು ಪಡೆಯುವುದಕ್ಕಾಗಿ ಇಗುವಾಜು ನದಿಗೆ ಅಡ್ಡವಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಅಲ್ಲಿ ಜಲಕ್ರೀಡೆ ಹಾಗೂ ಬೃಹತ್ಗಾತ್ರದ ಬಂಡೆಗಳನ್ನು ಏರುವಂತಹ ಸಾಹಸ ಕ್ರೀಡೆಗಳನ್ನು ಕೈಗೊಳ್ಳಬಹುದು. ವಿಶ್ವದಲ್ಲೇ ಅತೀ ಹೆಚ್ಚು ವಾರ್ಷಿಕ ನೀರಿನ ಹರಿವನ್ನು ಹೊಂದಿರುವ ಜಲಪಾತವೂ ಇದೇ ಆಗಿದೆ. ಪ್ರತಿ ಸೆಕೆಂಡಿಗೆ ನೀರಿನ ಸರಾಸರಿ ಹರಿವು 1,300 ರಿಂದ 1,500 ಘನ ಮೀಟರ್‌ಗಳು. ಇಲ್ಲಿ ಜಲಪಾತದ ಹೊರತಾಗಿ ಸುತ್ತಲೂ ಹಬ್ಬಿರುವ ಕಾಡಿನಲ್ಲಿ ಅನೇಕ ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳಿವೆ. ಸುಮಾರು 500 ಬಗೆಯ ಕಾಡುಹಕ್ಕಿಗಳು, 80 ಬಗೆಯ ಸಸ್ತನಿಗಳು, ಸರೀಸೃಪಗಳು, ಮೀನು, ಕೀಟಗಳು ಹಾಗೂ ಚಿಟ್ಟೆಗಳಿವೆ. ಇಲ್ಲಿ ಕೆಲವು ಮೋಜಿನ, ರೋಮಾಂಚನಕಾರಿ ಬೋಟ್ ರೈಡಿಂಗ್, ಸಾಹಸ ಕ್ರೀಡೆಗಳನ್ನು ಆಯೋಜಿಸಿರುತ್ತಾರೆ. 3 ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಇಗುವಾಜು ಜಲಪಾತವು ಪ್ರವಾಸಿಗರ ನೆನಪಿನಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ. ವಾರ್ಷಿಕ ಸುಮಾರು ಒಂದು ದಶಲಕ್ಷ ಪ್ರವಾಸಿಗರು ಇಗುವಾಜು ಜಲಪಾತವನ್ನು ನೋಡಲು ಭೇಟಿ ನೀಡುತ್ತಾರೆ.

ಈ ಜಲಪಾತವು ಕೇವಲ ಪ್ರವಾಸಿ ಹಾಗೂ ಮನೋರಂಜನೆಯ ತಾಣವಷ್ಟೇ ಆಗಿರದೇ ಇತರೆಲ್ಲಾ ದೇಶಗಳ ಪ್ರವಾಸೋಧ್ಯಮ ಇಲಾಖೆಗಳೂ ಅಧ್ಯಯನ ಮಾಡಿ ತಮ್ಮ ದೇಶಗಳಲ್ಲೂ ಅಳವಡಿಸಿಕೊಳ್ಳಬಹುದಾದ ವ್ಯವಸ್ಥೆಗಳು ಹಾಗೂ ಪರಿಸರಸ್ನೇಹಿ ಅಂಶಗಳಿಂದ ಕೂಡಿರುವುದು ಗಮನಿಸಬೇಕಾದ ಅಂಶವಾಗಿದೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಜಲಪಾತಗಳ ಮೂಲ ಸ್ವರೂಪಕ್ಕೆ ಹಾಗೂ ಅಲ್ಲಿನ ಪರಿಸರ ಹಾಗೂ ಜೀವವೈವಿಧ್ಯಗಳಿಗೆ ಧಕ್ಕೆಯಾಗದಂತೆ ನಿರ್ವಹಿಸಿ ದೇಶದ ಆರ್ಥಿಕತೆಗೂ ಸಹಕಾರವಾಗುವಂತೆ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

Leave a Reply

Your email address will not be published. Required fields are marked *