ಇಡ್ಲಿ ಹುಟ್ಟಿದ್ದು ಹೀಗೆ!! – ಇಡ್ಲಿಯ ಪುರಾಣ
ಇಡ್ಲಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಮುದುಕರವರೆಗೂ ರುಚಿಯಾದ ಚಟ್ನಿ ಹಾಗೂ ಸಾಂಭಾರ್ ಇದ್ದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇನ್ನು ಹಬೆಯಲ್ಲಿ ಬೇಯುವುದರಿಂದ ರೋಗಿಗಳಿಗಂತೂ ಅತ್ಯಂತ ಉತ್ಕಷ್ಟವಾದ ಆಹಾರ, ಹಾಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪುಷ್ಟಿಕರವಾದ ಹಾಗೂ ಆರೋಗ್ಯಕರವಾದ ಆಹಾರ ಎಂದು ಪರಿಗಣಿಸಿದೆ.
ಇಡ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅಚ್ಚುಮೆಚ್ಚಿನ ತಿಂಡಿಯಾಗಿದೆ. ಬಿಸಿ ಬಿಸಿ ಸಾಂಬಾರ್ ನೊಂದಿಗೆ ಬಿಳಿಗ್ಗೆ ಬಿಸಿ-ಬಿಸಿ ಇಡ್ಲಿ ಇದ್ದರೆ ಸಾಕು, ಬೇರೆ ಏನೂ ಬೇಡ. ಉತ್ತರಭಾರತದ ಕೆಲ ಹೋಟೆಲ್‌ಗಳಲ್ಲೂ ಇದು ಈಗ ಸಿಗುತ್ತದೆಯಲ್ಲದೇ ಅಲ್ಲೂ ಕೂಡ ಇದು ಜನಪ್ರಿಯ. ಹಾಗಾದರೆ ಇಷ್ಟೊಂದು ಜನಪ್ರಿಯವಾದ ಈ ಇಡ್ಲಿಯನ್ನು ಕಂಡು ಹಿಡಿದವರಾರು? ಇದು ಕರ್ನಾಟಕದ್ದೆ? ಕೇರಳದ್ದೇ ಅಥವಾ ತಮಿಳುನಾಡಿನದ್ದೇ? ಪ್ರಶ್ನೆ ತಮಾಷೆ ಎನಿಸಿದರೂ ಕೂತಹಲಕರವಾಗಿದೆ. ಇಡ್ಲಿ ಹುಟ್ಟಿದ್ದು ದಕ್ಷಿಣ ಭಾರತದ ಈ ಮೂರು ರಾಜ್ಯಗಳಲ್ಲೂ ಅಲ್ಲ. ಇಡ್ಲಿಯ ಮೂಲ ಇಂಡೋನೇಷಿಯ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಡೋನೇಶಿಯಾದ ಹಬೆಯಲ್ಲಿ ಬೇಯಿಸುವ ” ಕೇಡ್ಲಿ” ಎಂಬ ಆಹಾರದ ರೂಪಾಂತರವೇ “ಇಡ್ಲಿ” ಎಂದು ಹೇಳಲಾಗುತ್ತದೆ.
ಸರಿ ಹಾಗಾದರೆ ಇದು ಇಂಡೋನೇಶೀಯಾದಿಂದ ಇಂಡಿಯಾಕ್ಕೆ ಬಂದದ್ದಾದರೂ ಹೇಗೆ? ಎಂಬ ಹಿಂದೆ ಕೂತುಹಲಕರ ಕಥೆಯಿದೆ. ಇಂಡೋನೇಶಿಯಾದ ಅತ್ಯಂತ ಜನಪ್ರಿಯ ಆಹಾರ ಇದು. 8 ನೇ ಶತಮಾನದಲ್ಲಿ ಇಂಡೋನೇಶಿಯಾದ ಹಿಂದೂ ರಾಜನೊಬ್ಬ ಮದುವೆಗೆ ಹುಡುಗಿಯನ್ನು ನೋಡಲು ಭಾರತದ ದಕ್ಷಿಣಭಾರತಕ್ಕೆ ಬೇಟಿ ಕೊಟ್ಟಿದ್ದ. ಅವನಿಗೆ ಅಡುಗೆ ಮಾಡಲು ಅಲ್ಲಿಂದಲೇ ಅಡುಗೆ ಭಟ್ಟರನ್ನು ಕರೆತಂದಿದ್ದ. ಅವರು ಮಾಡಿದ್ದ ಕೇಡ್ಲಿಯನ್ನು ನೋಡಿದ ಭಾರತದ ಅಡುಗೆ ಭಟ್ಟರು ತಾವು ಅದನ್ನು ಕಲಿತು ತಯಾರಿಸಲು ಮುಂದಾದರು. ಕೇಡ್ಲಿ ಬರಿ ಉದ್ದಿನಬೇಳೆಯನ್ನು ತಿರುವಿ ಹುದುಗು ಬರಿಸಿ ಕೇಡ್ಲಿ ಮಾಡುತ್ತಿದ್ದರು. ಆದರೆ ನಮ್ಮ ಭಾರತದ ಆಡುಗೆ ಭಟ್ಟರು ಸ್ವಲ್ಪ ಮುಂದುವರೆದು ಅದಕ್ಕೆ ಅಕ್ಕಿಯನ್ನು ಸೇರಿಸಿ ಅದು ಇನ್ನು ಬೇಗ ಹುದುಗು ಬರುವಂತೆ ಮಾಡುವುದನ್ನು ಕಲಿತರು. ಇಡ್ಲಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸಿದರು. ಅದರೆ ಇಡ್ಲಿ ದಕ್ಷಿಣ ಭಾರತದಲ್ಲಿ ಮೊದಲು ಹುಟ್ಟಿದ್ದು ಕರ್ನಾಟಕದಲ್ಲಿ ಎಂಬುದಕ್ಕೆ ಕ್ರಿ.ಶ. 920 ರಲ್ಲಿ ಶಿವಕೋಟಾಚಾರ್ಯ ಬರೆದಿರುವ ವಡ್ಡಾರಾದನೆಯಲ್ಲಿ ಬರಿ ಉದ್ದಿನಬೇಳೆಯ ಹಿಟ್ಟಿನಿಂದ ಹಬೆಯಲ್ಲಿ ತಯಾರಿಸುತ್ತಿದ್ದ ” ಇಡ್ದಾಲ್ಗೆ” ಯ ಉಲ್ಲೇಖವಿದೆ. ಮನೆಗೆ ಬರುತ್ತಿದ್ದ ಬ್ರಹ್ಮಚಾರಿಗಳಿಗೆ ತಿನ್ನಲು ಬಡಿಸುತ್ತಿದ್ದ 18 ರೀತಿಯ ತಿಂಡಿಗಳಲ್ಲಿ ಈ ” ಇಡ್ಲಿ” ಯೂ ಸಹ ಒಂದಾಗಿತ್ತು. ತಮಿಳುನಾಡಿನಲ್ಲಿ “ಇಟ್ಟಾಲಿ” ಎಂಬ ಹಬೆಯಲ್ಲಿ ಬೇಯಿಸುತ್ತಿದ್ದ ತಿಂಡಿ 17ನೇ ಶತಮಾನದಲ್ಲಿ ಬಳಕೆಗೆ ಬಂದಿರಬಹುದೆಂದು ಹೇಳಲಾಗುತ್ತದೆ.
ಇಂಡಿಯಾದಲ್ಲಿ ಹುಟ್ಟಿದ್ದೋ ಇಂಡೋನೇಶಿಯದಲ್ಲೋ, ಆದರೆ ಹಸಿದ ಹೊಟ್ಟೆಯನ್ನು ತೃಪ್ತಿ ಪಡಿಸುವಲ್ಲಿ ಇಡ್ಲಿಗಿರುವ ಸ್ಥಾನ ಬೇರೆ ಯಾವ ತಿಂಡಿಗೂ ಇಲ್ಲವೆಂದೇ ಹೇಳಬೇಕು. ಇದು ದೇಹ ಚಟುವಟಿಕೆಯಿಂದಿರಲು ಪಿಷ್ಟವನ್ನು, ಬೆಳವಣಿಗೆಗೆ ಪ್ರೊಟೀನನ್ನು ಕೊಡುವ ಅತ್ಯುತ್ತಮ ಆಹಾರವೆಂದರೆ ತಪ್ಪೇನಿಲ್ಲಾ. ಹಿಟ್ಟು ಹುದುಗುವಿಕೆ ಅಥವಾ ಹುಳಿಯುವಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉಪಯುಕ್ತ ಬ್ಯಾಕ್ಟೀರಿಯಾ ನಮ್ಮ ದೇಹಕ್ಕೆ ಅಗತ್ಯವಿರುವ “ಬಿ ಜೀವಸತ್ವ” ವನ್ನು ಹೇರಳವಾಗಿ ಉತ್ಪಾದಿಸುತ್ತದೆ. ಇನ್ನೊಂದು ಕುತುಹಲಕರ ಸಂಗತಿಯೆಂದರೆ ದಿನವೂ ಇಡ್ಲಿ ತಿನ್ನುವವರಿಗೆ ತಲೆನೋವು ಭಾದಿಸುವುದಿಲ್ಲವಂತೆ. ಏಕೆಂದರೆ ಉದ್ದಿನಬೇಳೆಯಲ್ಲಿರುವ ಔಷಧೀಯ ಅಂಶ ತಲೆನೋವನ್ನು ಉಪಶಮನ ಮಾಡುವ ಶಕ್ತಿಯಿದೆ. ಇಡ್ಲಿಯ ಜೊತೆಯಲ್ಲಿ ಸವಿಯುವ ಪುದೀನಾ ಚಟ್ನಿ ಹಾಗೂ ಅನೇಕ ತರಕಾರಿಗಳಿಂದ ಮಾಡಿದ ಸಾಂಬಾರ್ ದೇಹಕ್ಕೆ ಅಗತ್ಯವಿರುವ ಜೀವಸ್ತತ್ವ ಗಳನ್ನು ಒದಗಿಸುತ್ತದೆಯಲ್ಲದ್ದೆ ಅಸಿಡಿಟಿ, ಅಜೀರ್ಣದಿಂದ ಮುಕ್ತಿಕೊಡುತ್ತದೆಯಲ್ಲದೆ ಇದರಲ್ಲಿರುವ ಮಸಾಲೆ ಪಧಾರ್ಥ ಹಾಗೂ ಇಂಗು ದೇಹವನ್ನು ಆರೋಗ್ಯವಾಗಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಮೂಲ ಉದ್ದಿನ ಹಿಟ್ಟಿನ ಇಡ್ಲಿ ಹಲವಾರು ರೂಪಾಂತರಗಳನ್ನು ಕಂಡಿದೆ. ಹುಳಿಮೊಸರು ಸೇರಿಸಿ ಮಾಡುವ ರವಾ ಇಡ್ಲಿ, ಬಾಳೆ ಎಲೆಯಲ್ಲಿ ಬೇಯಿಸುವ ಕೊಟ್ಟೆ ಇಡ್ಲಿ, ರಾಗಿ ಇಡ್ಲಿ, ತಟ್ಟೆ ಇಡ್ಲಿ, ಸಾಂಬಾರ್‌ನಲ್ಲಿ ಮುಳುಗಿಸಿದ ಬಟನ್ ಇಡ್ಲಿ ಹೀಗೆ ಹಲವಾರು ರೂಪ ಹಾಗೂ ರುಚಿಯಲ್ಲಿ ಕಾಲಕ್ಕೆ ತಕ್ಕಂತೆ ಇಡ್ಲಿಯೂ ಬದಲಾಗಿದೆ ಹಾಗೂ ಜನರ ಬ್ರೇಕ್ ಫಾಸ್ಟ್ ಲಿಸ್ಟ್ ನಲ್ಲಿ ಮೂಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು.
ಡಾ. ಪ್ರಕಾಶ್.ಕೆ.ನಾಡಿಗ್