ಸಂಜೆ ಕೆಲಸವೆಲ್ಲ ಮುಗಿದ ಮೇಲೆ ತಣ್ಣನೆ ಗಾಳಿಯಲ್ಲಿ ವಾಯು ವಿಹಾರಕ್ಕೆ ಹೊರಟರೆ, ರಸ್ತೆಯ ತುದಿ ತಲುಪುವಷ್ಟರಲ್ಲಿ ಹಿತವಾದ ಸುಗಂಧ ನಮ್ಮನ್ನೇ ಅರಸಿ ಬರುವಂತೆ ಪಾರಿಜಾತದ ಪುಷ್ಪದ ಕಂಪು ಮನಸ್ಸಿಗೆ ಮುದ ನೀಡುತ್ತದೆ. ಈ ಸುಗಂಧಕ್ಕೆ ಮನ ಸೋತು ಅಲ್ಲೇ ನಿಲ್ಲುವ ಮನಸ್ಸಾಗುತ್ತದೆ.
ಪ್ರಾಚೀನ ಗ್ರಂಥಗಳಲ್ಲಿ ಪಾರಿಜಾತವನ್ನು ಅತಿ ಶ್ರೇಷ್ಠ ಹಾಗು ದೇವಾನುದೇವತೆಗಳಿಗೆ ಇಷ್ಟವಾದ ಪುಷ್ಪವೆಂದ, ದೇವಲೋಕದುದ್ದಕ್ಕೂ ಪಾರಿಜಾತದ ಮರಗಳು ತಲೆದೂಗಿಸುತ್ತವೆ ಎಂದು ವರ್ಣಿಸಲಾಗುತ್ತದೆ.
ಮರವಾಗಿ ಬೆಳೆವ ಪಾರಿಜಾತವು, ಅದರ ಎಳೆಗಳು ದಾಸವಾಳದ ಎಲೆಗಳನ್ನು ಹೋಲುತ್ತದೆ. ಇನ್ನು ಹೂವುಗಳು ಬಿಳಿಯ ಐದು ದಳಗಳಿಂದ ಕೂಡಿದ್ದು ಕೇಸರಿ ತೊಟ್ಟುಗಳಿಂದ ಕೂಡಿರುತ್ತವೆ. ಸಹಜವಾಗಿ ಎಲ್ಲ ವಾತಾವರಣಗಳಲ್ಲಿ ಬೆಳೆಯಬಲ್ಲದು ಕೂಡ
ಇರುಳ ಮಲ್ಲಿಗೆ ಎಂದೇ ಪ್ರಸಿದ್ದವಾಗಿರುವ ಈ ಸಸ್ಯವು ಏಷ್ಯಾ ಖಂಡದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. “ನೈಕಾಂಥಿಸ್ ಆರ್ಬೊರ್ ಟ್ರಿಸ್ಟಿಸ್” (Nyctanthes arbor-tristis) ಎಂಬ ವೈಜ್ಞಾನಿಕ ಹೆಸರುಳ್ಳ ಪಾರಿಜಾತ ಸರಿ ಸುಮಾರು 10 ಮೀಟರ್ ಉದ್ದದಷ್ಟು ಬೆಳೆಯುತ್ತದೆ. ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಪಾರಿಜಾತವು ದೇವರಿಗೆ ಸಲ್ಲುವ ಶ್ರೇಷ್ಠ ಪುಷ್ಪವೆಂದು ಭಾವಿಸಲಾಗಿದೆ.
ಪಾರಿಜಾತ ಬರಿ ಸುಗಂಧಕಷ್ಟೆ ಹೆಸರುವಾಸಿ ಆಗಿಲ್ಲ. ಈ ಗಿಡದ ಎಲೆಗಳನ್ನು ಆಯುರ್ವೇದ ಹಾಗು ಹೋಮಿಯೋಪಥಿ ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ. ಸಂಧಿವಾತದ ಖಾಯಿಲೆಗೆ ಈ ಎಲೆಯ ರಸ ಸಿದ್ದಔಷದ. ಮಕ್ಕಳಲ್ಲಿ ಜಂತು ಹುಳುವಿನ ಸಮಸ್ಯೆ ಇದ್ದಲ್ಲಿ ಪಾರಿಜಾತ ಎಲೆಗಳ ರಸವನ್ನು ನೀಡಲಾಗುತ್ತದೆ. ಅಲ್ಲದೆ ಜ್ವರ, ಚರ್ಮ ವ್ಯಾದಿಗಳಿಗೂ ಒಳ್ಳೆಯ ಉಪಾಯ.
ಇನ್ನು ಪಾರಿಜಾತದ ಹೂ ಮತ್ತು ಎಲೆಯ ರಸವು ತಲೆಗೆ ಲೇಪಿಸಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ. ಹೀಗೆ ಬಹಳಷ್ಟು ಉಪಯೋಗವುಳ್ಳ ಪಾರಿಜಾತವು ಮನೆಯಂಗಳದಲ್ಲಿ ಇದ್ದಾರೆ ಅದೆಷ್ಟು ಸೊಗಸು ಅಲ್ಲವೇ?
ಶಿಲ್ಪ