ಇಲಿಗೂ ಒಂದು ದೇವಸ್ಥಾನ!!!!

ಇಲಿಗೂ ಒಂದು ದೇವಸ್ಥಾನ!!!!

ನಮ್ಮಲ್ಲಿನ ವಿವಿಧ ದೇವಾನುದೇವತೆಗಳಿಗೆ ದೇವಸ್ಥಾನ ಕಟ್ಟುವುದು ಗೊತ್ತು, ಪ್ರಾಣಿಗಳಲ್ಲಿ ಬಸವಣ್ಣ ಅಥವ ನಂದಿಗೆ ದೇವಸ್ಥಾನ ಇರುವುದು ನೋಡಿದ್ದೀರಿ, ಆದರೆ ಇಲಿಗಳಿಗಾಗಿ ದೇವಸ್ಥಾನವೊಂದಿದೆ ಗೊತ್ತಾ?! ಇಲಿಗಳಿಗೆ ದೇವಸ್ಥಾನವೆಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆಶ್ಚರ್ಯವಾದರೂ ಇದು ಸತ್ಯ.

ಇಲಿಗಳಿಗಾಗಿಯೇ ದೇವಸ್ಥಾನವೊಂದು ರಾಜಸ್ಥಾನದ “ಬಿಕನೇರ್” ನಿಂದ 30 ಕಿ.ಮಿ ದೂರದ “ದೇಶ್‌ನೋಕಿ” ಎಂಬ ಊರಿನಲ್ಲಿದೆ. ಇದು ಭಾರತದ ಪವಿತ್ರ ಯಾತ್ರಾಸ್ಥಳವೂ ಹೌದು. ಈ ಇಲಿಗಳ ದೇವಸ್ಥಾನ “ಕರ್ನಿ ಮಾತಾ ದೇವಸ್ಥಾನ” ವೆಂದು ಪ್ರಸಿದ್ಧಿಯಾಗಿದೆ. ಇದನ್ನು ಗಂಗಾಸಿಂಗ್ ಎಂಬ ಮಹಾರಾಜ 20 ನೇ ಶತಮಾನದ ಆದಿಯಲ್ಲಿ ಕಟ್ಟಿಸಿದ್ದನೆಂದು ಪ್ರತೀತಿ. ಮೊಘಲ್ ಶೈಲಿಯಲ್ಲಿರುವ ಈ ದೇವಸ್ಥಾನದಲ್ಲಿ ಅಮೃತಶಿಲೆಗಳನ್ನು ಹೆಚ್ಚಾಗಿ ಬಳಾಸಲಾಗಿದ್ದು, ದೇವಸ್ಥಾನ ನೋಡಲು ತುಂಬಾ ಆಕರ್ಷಣೀಯವಾಗಿದೆ.

ಅದಿರಲಿ, ಈ ಇಲಿಗಳಿಗೇಕೆ ದೇವಸ್ಥಾನ ಕಟ್ಟಿದರು ಎಂಬ ಸಂದೇಹ ನಿಮ್ಮ ಮನಸ್ಸಿನಲ್ಲಿರಬೇಕು ಅಲ್ಲವೇ ? ಇದರ ಹಿಂದೆಯೂ ಒಂದು ರೋಚಕ ಕಥೆಯಿದೆ. ಈ ದೇವಸ್ಥಾನದಲ್ಲಿ ಪೂಜಿಸಲ್ಪಡುವ ಕರ್ನಿ ಮಾತಾ 15 ನೇ ಶತಮಾನದಲ್ಲಿದ್ದ ಪವಿತ್ರ ಸನ್ಯಾಸಿನಿ, ಈಕೆ ದುರ್ಗೆಯ ಅವತಾರವೆಂದೇ ಅಲ್ಲಿನ ಜನ ನಂಬುತ್ತಾರೆ. ತನ್ನ 27 ನೇ ವರ್ಷದಲ್ಲಿ ಚರಣ್ ಎಂಬುವನೊಂದಿಗೆ ಈಕೆಯ ಮದುವೆಯಾಯಿತಾದರೂ ಬಹಳ ದಿನ ವೈವಾಹಿಕ ಜೀವನ ನಡೆಸಲಿಲ್ಲ. ಮದುವೆ ಮುರಿದುಬಿದ್ದ ಮೇಲೆ ಈಕೆ ಸನ್ಯಾಸ ಸ್ವೀಕರಿಸಿ ಬಡವರ ಸೇವೆ ಮಾಡುತ್ತಾ ಕಾಲ ಕಳೆಯುತ್ತಿದ್ದಳು.

ಒಮ್ಮೆ ಆ ಊರಿನಲ್ಲಿ ಹುಡುಗನೊಬ್ಬ ಚಿಕ್ಕ ವಯಸ್ಸಿನಲ್ಲೆ ಸಾವನ್ನಪ್ಪಿದ್ದನು, ಅವನನ್ನು ಬದುಕಿಸಲು ಕರ್ನಿ ಮಾತಾ ಪ್ರಯತ್ನಿಸುತ್ತಾಳೆ, ಆದರೆ ಆ ವೇಳೆಗಾಗಲೇ ಯಮ ಆ ಹುಡುಗನ ಆತ್ಮವನ್ನು ಸ್ವೀಕರಿಸಿ ಅವನಿಗೆ ಪುನರ್ಜನ್ಮ ನೀಡಿರುತ್ತಾನಂತೆ, ಹಾಗಾಗಿ ಆ ಹುಡುಗನನ್ನು ಬದುಕಿಸಲು ಕರ್ನಿ ಮಾತಾಗೆ ಸಾಧ್ಯವಾಗುವುದಿಲ್ಲ, ಆಗಿನ ಕಾಲದಲ್ಲಿ ತನ್ನ ಕೋಪಕ್ಕೆ ಹೆಸರಾಗಿದ್ದ ಕರ್ನಿ ಮಾತಾ ತನಗಾದ ಸೋಲನ್ನು ಸಹಿಸಿಕೊಳ್ಳಲಾಗದೆ ಕೋಪದಲ್ಲಿ ಆಕೆ ಇನ್ನು ಮುಂದೆ ನಮ್ಮ ವಂಶದವರ‍್ಯಾರು ನೇರವಾಗಿ ಯಮನ ವಶಕ್ಕೆ ಬೀಳುವುದಿಲ್ಲ ಎಂದು ಘೋಷಿಸಿ ಬಿಡುತ್ತಾಳೆ. ನಮ್ಮ ವಂಶದವರು ಸತ್ತರೆ ಅವರು ಮೊದಲು ಇಲಿ ಅವತಾರವನ್ನು ತಾಳುತ್ತಾರೆ, ತದನಂತರ ಯಮನ ಹತ್ತಿರ ಹೋಗುತ್ತಾರೆ ಹಾಗಾಗಿ ಕರ್ನಿ ಮಾತಾ ಮಂದಿರದಲ್ಲಿರುವ ಇಲಿಗಳೆಲ್ಲಾ ಚರಣ್ ವಂಶದವರು ಎಂದು ನಂಬುತ್ತಾರಲ್ಲದೆ ಅವುಗಳಿಗೆ ಬಹಳ ಮರ್ಯಾದೆಯನ್ನೂ ಕೊಡುತ್ತಾರೆ.

ಇನ್ನೊಂದು ಕಥೆಯ ಪ್ರಕಾರ ಕರ್ನಿ ಮಾತಾ ಸನ್ಯಾಸಿಯಾಗಿದ್ದ ಕಾಲದಲ್ಲಿ ಆ ಊರಿನಲ್ಲಿ ಭಯಂಕರ ಪ್ಲೇಗ್ ರೋಗ ಬಂದು ಅನೇಕ ಮಕ್ಕಳು ಸಾವಿಗೀಡಾಗುತ್ತಾರೆ ಆಗ ಆ ಮಕ್ಕಳ ತಂದೆ ತಾಯಿಯರು ಯಮನನ್ನು ಮಕ್ಕಳನ್ನು ಬದುಕಿಸಲು ಪ್ರಾರ್ಥಿಸುತ್ತಾರಂತೆ, ಆದರೆ ಯಮ ಇದಕ್ಕೆ ಒಪ್ಪುವುದಿಲ್ಲ, ಆಗ ಕರ್ನಿ ಮಾತಾ ಯಮನೊಡನೆ ಒಂದು ಒಪ್ಪಂದಕ್ಕೆ ಬಂದು ಪ್ರತಿಯೊಂದು ಇಲಿಗೆ ಆಹಾರ ಕೊಟ್ಟಾಗಲೂ ಸತ್ತ ಒಂದೊಂದು ಮಕ್ಕಳು ಇಲಿಯಾಗಿ ಹುಟ್ಟಬೇಕೆಂದು ಕೇಳುತ್ತಾಳೆ ಹಾಗಾಗಿ ಅಲ್ಲಿರುವ ಇಲಿಗಳೆಲ್ಲ ಮಕ್ಕಳ ಪುನರ್ಜನ್ಮವೆಂದು ಇಲ್ಲಿನ ಜನ ನಂಬುತ್ತಾರೆ. ಕರ್ನಿ ಮಾತಾ ಮೂರ್ತಿಯಿರುವ ಗರ್ಭಗುಡಿಯಲ್ಲಿ ಅನೇಕ ಬಿಲಗಳಿದ್ದು ಸಾವಿರಾರು ಇಲಿಗಳು ವಾಸ ಮಾಡಿಕೊಂಡಿದ್ದು ನಿರ್ಭಯವಾಗಿ ಭಕ್ತರ ನಡುವೆಯೆ ಓಡಾಡುತ್ತವೆ. ಈ ಇಲಿಗಳಿಗೆ ದಿನವೂ ಹಾಲಿನ ನೈವೇದ್ಯ ಹಾಗೂ ವರ್ಷಕ್ಕೊಮ್ಮೆ ಒಂದು ದಿನ ಜಾತ್ರೆ ಸಮಯದಲ್ಲಿ ಭೂರಿ ಭೋಜನದ ವ್ಯವಸ್ಥೆಯೂ ಇರುತ್ತದೆ. ಬೂದು ಬಣ್ಣದ ಇಲಿಗಳ ನಡುವೆ ಅಕಸ್ಮಾತ್ ಯಾರಿಗಾದರೂ ಬಿಳಿ ಇಲಿ ಕಂಡರೆ ಅಂಥಹವರಿಗೆ ಅದೃಷ್ಟ ಕುಲಾಯಿಸುತ್ತದೆ ಎಂಬ ನಂಬಿಕೆಯಿದೆ.

ಕರ್ನಿಮಾತಾ ದೇವಸ್ಥಾನ ನೋಡಲು ಬಿಕನೇರ್ ನಗರದಿಂದ ದೇಶ್‌ನೋಕಿ ಸ್ಥಳಕ್ಕೆ ಬಹಳಷ್ಟು ಬಸ್ಸುಗಳು ಸಂಚರಿಸುತ್ತವೆ ಅಥವಾ ತಮ್ಮದೇ ವಾಹನದಲ್ಲಿ ಹೋದರೆ ಕೇವಲ ಒಂದು ಘಂಟೆಯ ಅವಧಿಯಲ್ಲಿ ತಲುಪಬಹುದು.

ಡಾ. ಪ್ರಕಾಶ್ ಕೆ ನಾಡಿಗ್

Related post

Leave a Reply

Your email address will not be published. Required fields are marked *