ಇವಳು

ಇವಳು
ಬರಿದೆ ಅನಿಸಿಕೆಯ ಹೆಣ್ಣಲ್ಲ
ಅಥವ ಸುಮ್ಮಸುಮ್ಮನೆ ಹೆಂಡತಿ
ಸಹ ಅಲ್ಲ
ಇವಳೇ ಈ ಗೃಹದ ಧವಳರಾಶಿ!

ಇವಳು
ಬೆಳಗ್ಗೆಯ ಬೆಳಗು
ಅಲ್ಲದೆ ಬಿಡುವಿರದೆ ಪ್ರತಿ
ಮುಂಜಾನೆ
ಇವಳೇ ಮೊದಲು ಮೂಡುವುದು
ಆ ನೇಸರನನು ಬಡಿದೆಬ್ಬಿಸುವುದು!

ಪರಿವಾರದೂಳಿಗದ ಅನವರತ
ಹೊಣೆಗೆ ಕೆತ್ತಿ ಕಡೆದಿಟ್ಟ
ಇವಳ ಅಂಗಾಂಗ
ಗುಡಿಯಲುರಿವ ಉಕ್ಕುಭರವಸೆಯ
ಮನೋದೀಪ
ಹೊತ್ತುಗೊತ್ತಿರದೆ ವ್ಯಾಪಿಸುವ
ಬೆಳಕ ಹೊನಲು!

ಹಗಲಿರುಳೆನದೆ
ಸೂರಡಿಯ ಸಂಸಾರದೂರ
ಹಾದಿಬೀದಿ ಗುಡಿಸಿ
ಸಾರಿಸಿ ಸ್ವಚ್ಟ!

ಸರಪಳಿ ಕೊಂಡಿಗಳ ನೇಯುವ
ಹಾಗೆ ಒಂದರಪಕ್ಕ
ಒಂದೊಂದು ಕೂಡಿಸಿ ಹೆಣೆವ
ಗುಣಾಕಾರದ ಕಾಯಕಗಳ
ಸೋನೆ ಸುರಿಮಳೆ
ಇವಳು
ಹಗಲು ಕಪ್ಪಿಡುವ ಹೊತ್ತಿಗೆ
ಕೋಡಿ ಹರಿವ ತುಂಬು ಹೊಳೆ!

ರಾತ್ರಿ
ಒಲುಮೆ ತುಳುಕುವ ನಲ್ಲನ
ತೆಕ್ಕೆಯಪ್ಪುಗೆ
ಉತ್ಕಟ ಬಯಕೆ
ಬೆವರ ಬಿಸಿ ಸರೋವರದಲಿ
ಮುಳುಗಿ ಮುಲುಕಿ
ತೇಲಿ ಈಜಿ
ಮತ್ತೆಮತ್ತೆ ತೇಲಿ ಈಜೀಜಿದರೂ
ಇವಳು
ಇವಳಂಥವರು
ಮಾತ್ರ ಅಂತಲ್ಲ
ಲಕ್ಷ್ಮಣನ ಜನನಕು ಮೊದಲೆ
ಹೆಣ್ಣಿಗಿಲ್ಲಿ ಆ ರೇಖೆಯ
ಅರಿವು ಪರಿಮಿತಿಯಿದೆ!

ಇಂಥ ಇವಳು
ದಿಢೀರನೆ
ಸದ್ದುಗದ್ದಲವಿಲ್ಲದೆ
ಹೊರಟೇಬಿಟ್ಟರೆ
ಇಲ್ಲುಳಿದು ಬದುಕಿದ ಗಂಡ
ತಂಗಳು
ಮತ್ತೆಂದೆಂದೂ ಬಿಸಿಯಾಗದ
ಬಹುಶಃ ಅಸಹ್ಯ ಪ್ರಸರಣದ
ಅಪ್ಪಟ ತಂಗಳು
ಭಗ್ನ ಶಿಲಾಮೂರ್ತಿ!

ಇವಳು ಎಂದೆಂದಿಗೂ
ಇಲ್ಲೇ ಸಂದಿಗೊಂದಿಗಳಲಿ
ತದೇಕ ತುಡಿವ ಮಿಡಿವ
ನನ್ನೆದೆಯ
ಹೃದಯ ಕುಂಕುಮಾರತಿ…!

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post