ಈಕೆ ಅಭಲೆಯಲ್ಲ ಬಾಲಿವುಡ್‌ನ ಸ್ಟಂಟ್ ಮಾಸ್ಟರ್ – ಗೀತಾ ಟಂಡನ್

ಈಕೆ ಅಭಲೆಯಲ್ಲ ಬಾಲಿವುಡ್‌ನ ಸ್ಟಂಟ್ ಮಾಸ್ಟರ್ – ಗೀತಾ ಟಂಡನ್

ಹೆಣ್ಣು ಅಭಲೆಯಲ್ಲ ತಾನು ಪುರುಷ ಪ್ರಧಾನವಾದ ಸಮಾಜದಲ್ಲಿ ಪುರುಷನಿಗೆ ಸಮನಾದ ಸಾಧನೆಯನ್ನು ಮಾಡಿ ತನ್ನ ಬದುಕನ್ನು ತಾನೇ ಒಂಟಿಯಾಗಿ ಕಟ್ಟಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕಬಲ್ಲೆನೆಂದು ತೋರಿಸಿದ ಅದೆಷ್ಟೋ ಧೀಮಂತ ಮಹಿಳೆಯರನ್ನು ಇಂದು ನಾವು ಕಾಣಬಹುದು.

ತನ್ನ ಹದಿನೈದನೆಯ ವಯಸ್ಸಿಗೇ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗಿ ಗಂಡ ಹೆಂಡತಿ ಸಂಬಂಧದ ಅರ್ಥವನ್ನರಿಯುವ ವೇಳೆಗೆ ಸರ್ವಸ್ವವನ್ನೂ ಕಳೆದುಕೊಂಡು ಮನೆಯಿಂದ ಹೊರಬಿದ್ದು ಫಿನೀಕ್ಸ್ ಹಕ್ಕಿಯಂತೆ ಮೇಲೆದ್ದು ಬಂದ ಒಬ್ಬ ಧೈರ್ಯವಂತ ಮಹಿಳೆಯ ರೋಚಕ ಕಥೆ. ಈಕೆ ಬೇರಾರೂ ಅಲ್ಲ ಈಕೆಯೇ ಹಿಂದಿ ಚಿತ್ರರಂಗದ ಬಹು ಬೇಡಿಕೆಯ ಸಾಹಸ ನಟಿ ಗೀತಾ ಟಂಡನ್.

ಗಾಜಿನ ಮೇಲೆ ಜಿಗಿಯುವಿಕೆ, ರೋಚಕ ವೇಗದಲ್ಲಿ ಹಾಗೂ ಕಡಿದಾದ ರಸ್ತೆಯಲ್ಲಿ ವಾಹನವನ್ನು ಓಡಿಸುವಿಕೆ, ಬೆಂಕಿಯೊಂದಿಗೆ ಸರಸವಾಡುವಿಕೆ ಹಾಗೂ ಬಹುಮಹಡಿ ಕಟ್ಟಡಗಳಿಂದ ನಮ್ಮ ನೆಚ್ಚಿನ ನಟರು ಜಿಗಿಯುವ ಸಾಹಸ ದೃಶ್ಯಗಳನ್ನು ತೆರೆಯ ಮೇಲೆ ನಾವು ನೋಡಿದಾಗ ನಾವೆಲ್ಲ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕುತ್ತೇವೆ. ಆದರೆ ಅದರ ಹಿಂದೆ ಸಾಹಸ ನಟರ ಕೈಚಳಕವಿರುವುದರಿಂದಾಗಿ ನಟ ನಟಿಯರು ಶಿಳ್ಳೆ ಗಿಟ್ಟಿಸುತ್ತಿದ್ದಾರೆ ಎಂಬುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಇಂತಹ ಸಾಹಸವನ್ನು ಮಾಡಬೇಕಾದರೆ ಇದಕ್ಕೆ ಗುಂಡಿಗೆ ಗಟ್ಟಿ ಇರಬೇಕು ಹಾಗೂ ವಿಶೇಷ ತರಬೇತಿಗಳು ಅತೀ ಅವಶ್ಯಕವಾಗಿ ಬೇಕು. ಇಂತಹ ನಿತ್ಯ ಸಾವಿನೊಂದಿಗೆ ಸರಸವಾಡುವ ಕೆಲಸವನ್ನೇ ಉದ್ಯೋಗವಾಗಿ ಭಾರತದಲ್ಲಿ ಕೆಲವೇ ಕೆಲವು ಮಹಿಳೆಯರು ಆರಿಸಿಕೊಂಡಿದ್ದಾರೆ, ಅವರಲ್ಲಿ ಗೀತಾ ಟಂಡನ್ ಒಬ್ಬರು.

ಗೀತಾ ಟಂಡನ್ ಮಾತ್ರ ಇಂತಹ ಮಹಿಳೆಯರ ಪೈಕಿ ವಿವಿಧ ಅಡೆತಡೆಗಳ ಮಧ್ಯೆ ಕಾರ್‌ಗಳನ್ನು ಬೆನ್ನತ್ತುವಿಕೆ, ಕಡಿದಾದ ತಿರುವು ರಸ್ತೆಗಳಲ್ಲಿ ಕಾರ್‌ ಅನ್ನು ಸಾಹಸಮಯವಾಗಿ ಓಡಿಸುವ ಕೆಲಸಗಳಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಸುಮಾರು 2009 ನೇ ಇಸವಿಯಿಂದ ಹಿಂದಿ ಚಿತ್ರರಂಗದ ಅನಭಿಶಿಕ್ತ ಸಾಹಸ ನಟಿಯಾಗಿ ಮಿನುಗುತ್ತಿದ್ದಾರೆ.

ಮುಂಬೈಯಲ್ಲಿ ನೆಲೆಸಿದ್ದ ಪಂಜಾಬಿ ಮೂಲದ ಗೀತಾ ತನ್ನ ತಂದೆಯ ನಾಲ್ಕು ಮಂದಿ ಮಕ್ಕಳ ಪೈಕಿ ಮೂರನೆಯವರು, ದೊಡ್ಡವಳಿಗೆ ಅದಾಗಲೇ ಮದುವೆ ಮಾಡಲಾಗಿತ್ತು. ತನ್ನ 15ನೇ ವಯಸ್ಸಿಗೆ ಅಕ್ಕಪಕ್ಕದ ಮನೆಯ ಗೆಳೆಯರ ಜೊತೆ ಚಿನ್ನಿದಾಂಡು, ಕ್ರಿಕೆಟ್ ಆಟವಾಡುತ್ತಾ ಗಂಡುಭೀರಿಯಂತೆ ಬದುಕುತ್ತಿದ್ದ ಗೀತಾಳನ್ನು ಕಂಡ ಇವರ ಸಂಬಂಧಿಕರು ಈಕೆಗೆ ಮದುವೆಯನ್ನು ಮಾಡುವಂತೆ ಗೀತಾಳ ತಂದೆಗೆ ಒತ್ತಡವನ್ನು ಮಾಡುತ್ತಾರೆ. ಒತ್ತಾಯಕ್ಕೆ ಮಣಿದ ತಂದೆ ಎರಡೇ ದಿನದಲ್ಲಿ 24 ವರ್ಷದ ವಯಸ್ಸಿನ ಜೈಪುರದ ಯುವಕನೊಂದಿಗೆ ಮಗಳಿಗೆ ಬಾಲ್ಯ ವಿವಾಹವನ್ನು ಮಾಡಿಯೇ ಬಿಟ್ಟಿದ್ದ….!!!! ಮದುವೆ ಎಂದಾಕ್ಷಣ ತನ್ನ ಮನೆ, ಗಂಡನ ಪ್ರೀತಿ, ಹೊಸ ಹೊಸ ಕನಸು ಕಂಡಿದ್ದ ಗೀತಾಳ ಕನಸು ಕೆಲವೇ ದಿನಗಳಲ್ಲಿ ನುಚ್ಚುನೂರಾಯಿತು. ಗಂಡ ಎಂಬ ಪ್ರಾಣಿ ದಿನಾ ಕುಡಿದೇ ಮನೆಗೆ ಬರುತ್ತಿದ್ದ. ಬಾಲ್ಯ ವಿವಾಹವಾಗಿದ್ದ ಗೀತಾಗೆ ಮದುವೆ, ಗಂಡ, ಸಂಸಾರ ಎಂಬ ಯಾವ ಪರಿಕಲ್ಪನೆಯೂ ಇಲ್ಲದೆ ಅತ್ತೆ ಮನೆಯಲ್ಲಿ ಕೇವಲ ಸೇವಕಿಯಾಗಿ ಬದುಕು ಸಾಗಿಸುತ್ತಾಳೆ. ನಿತ್ಯ ಕಠಿಣ ಮನೆಗೆಲಸಗಳ ಜೊತೆಗೆ ಗಂಡನ ಮತ್ತು ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ ಹಿಂಸೆಗಳಿಂದ ಬೇಸತ್ತಿದ್ದಳು.

ಗಂಡ ಹೆಂಡತಿ ಸಂಬಂಧದ ಅರಿವೇ ಇಲ್ಲದ ಗೀತಾಳನ್ನು ಗಂಡನೇ ತನ್ನ ತಾಯಿಯ ಅಣತಿಯಂತೆ ಅತ್ಯಾಚಾರವೆಸಗಿಬಿಟ್ಟದ್ದ. ದಿನನಿತ್ಯ ದೈಹಿಕ ಹಲ್ಲೆಯ ಜತೆಗೆ ಅತ್ತೆ ಮನೆಯವರೇ ಈಕೆಗೆ ರಾಕ್ಷಸರಾಗಿ ಬಿಟ್ಟದ್ದರು. ಹಲವು ಬಾರಿ ಈಕೆಯನ್ನು ಮನೆಯಿಂದ ಓಡಿಸಿ ಬಿಡುವ ಯತ್ನಕ್ಕೂ ಕೈ ಹಾಕಿದ್ದರು. ಹೇಗಾದರೂ ಬದುಕಲೇ ಬೇಕೆನ್ನುವ ಛಲದೊಂದಿಗೆ ಒಂದು ಮಗು ಆದಾಗಲಾದರೂ ಈ ಎಲ್ಲಾ ದೌರ್ಜನ್ಯಗಳಿಂದ ಪಾರಾಗಬಹುದೆಂದು ಯೋಚಿಸುತ್ತಾಳೆ. ಆದರೆ ವಿಧಿಯ ಬರಹ ಬೇರೆಯೇ ಆಗಿದ್ದು, ಮೂರು ವರ್ಷದಲ್ಲಿ ಒಂದಲ್ಲ ಎರಡು ಮಕ್ಕಳಾದ ಮೇಲೂ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ವಿರಾಮ ಬೀಳಲೇ ಇಲ್ಲ. ಒಂದು ಬಾರಿ ಗಂಡನ ಹಿಂಸೆಯನ್ನು ತಾಳಲಾರದೆ ಪೋಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದ ಗೀತಾಗೆ ಪೋಲೀಸರು ಸಂಬಂಧಿಕರ ಮನೆಯಲ್ಲಿರುವಂತೆ ಸಲಹೆಯನ್ನು ನೀಡುತ್ತಾರೆ. ಸಂಬಂಧಿಕರ ಮನೆಗೂ ಕುಡಿದು ಬಂದ ಗಂಡ ತನ್ನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದಾಗ ಕೊನೆಗೆ ತನ್ನ ವಿವಾಹಿತ ಅಕ್ಕನ ಮನೆಗೆ ಸೇರುತ್ತಾಳೆ. ಭಾವ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂಬ ಅಭಯವನ್ನು ನೀಡಿದ್ದ. ಅಕ್ಕ ಭಾವನ ಪ್ರೀತಿಗೆ ಹಾತೊರೆಯುತ್ತಿದ್ದ ಗೀತಾಳ ಮೇಲೆ ತನ್ನ ಗಂಡನ ವಕ್ರದೃಷ್ಟಿ ಬಿದ್ದಿದ್ದನ್ನು ಗಮನಿಸಿ ಗೀತಾಳನ್ನು ಅಕ್ಕನೇ ಮನೆಯಿಂದ ಹೊರ ಹಾಕಿಬಿಡುತ್ತಾಳೆ.

ಅಲ್ಲಿಂದ ಮನೆ ಬಿಟ್ಟು ಮಕ್ಕಳೊಂದಿಗೆ ಬೀದಿ ಪಾಲಾಗಿ ಉಳಿದುಕೊಳ್ಳಲು ಸೂರು ಮತ್ತು ಹೊಟ್ಟೆ ಪಾಡಿಗಾಗಿ ಕೆಲಸಕ್ಕಾಗಿ ಕೇವಲ ಹತ್ತನೇ ತರಗತಿ ವಿದ್ಯಾಭ್ಯಾಸದ ಗೀತಾ ಹುಡುಕಾಟ ಪ್ರಾರಂಭಿಸುತ್ತಾಳೆ. ಕುಡುಕ ಗಂಡ ತನ್ನನ್ನು ಡ್ಯಾನ್ಸ್ ಬಾರ್‌ನಲ್ಲಿ ಡ್ಯಾನ್ಸ್ ಮಾಡಲು ಹಾಗೂ ಪರ ಪುರುಷರೊಂದಿಗೆ ಮಲಗುವ ಕೆಲಸವನ್ನು ಮಾಡುವಂತೆಯೂ ಒತ್ತಡ ಹಾಕಿದ್ದ ದಿನಗಳನ್ನು ನೆನೆದು ಕಣ್ಣೀರಿಡುತ್ತಾಳೆ. ಹೀಗೆ ಕೆಲಸವನ್ನರಸುತ್ತಿರುವಾಗ ಮಹಿಳೆಯೊಬ್ಬರ ಪರಿಚಯವಾಗಿ ಸುಮಾರು 4-6 ಮನೆಗಳ ಕೆಲಸ ಹಾಗೂ ತಿಂಗಳಿಗೆ ರೂ.1,200/- ಗಳ ಸಂಬಳಕ್ಕೆ ದಿನವೊಂದಕ್ಕೆ ಸರಾಸರಿ 250 ಚಪಾತಿ ಮಾಡಿ ಕೊಡುವ ಕೆಲಸವನ್ನು ಪ್ರಾರಂಭಿಸುತ್ತಾಳೆ. ಈ ಸಂದರ್ಭ ಕೆಲವು ಶ್ರೀಮಂತ ಹುಡುಗಿಯರ ಪರಿಚಯವಾಗಿ ಅವರಲ್ಲಿ ತನಗೊಂದು ಉದ್ಯೋಗವನ್ನು ಕೊಡಿಸುವಂತೆ ಕೇಳುತ್ತಾಳೆ. ಅದರಂತೆ ಅವರು ಕೆಲಸ ಮಾಡುತ್ತಿದ್ದ ಮಸಾಜ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರುತ್ತಾಳೆ. ಅಲ್ಲಿನ ಕೆಲವು ಹುಡುಗಿಯರ ಕಥೆಯನ್ನು ತಿಳಿದ ಗೀತಾ ನಾನು ಕೆಲಸ ಮಾಡುತ್ತಿರುವುದು ನಾಮಕಾವಸ್ಥೆಯ ಮಸಾಜ್ ಸೆಂಟರ್ ರೂಪದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಕೇಂದ್ರದಲ್ಲಿ ಎಂದು ಅರಿವಾಗಿ ಅಲ್ಲಿಂದ ಮತ್ತೆ ಗೀತಾ ಹೊರ ಬೀಳುತ್ತಾಳೆ.

ಅಲ್ಲಿಂದ 2008 ನೇ ಇಸವಿಯಲ್ಲಿ ಮತ್ತೊಬ್ಬ ಮಹಿಳೆಯ ಪರಿಚಯವಾಗಿ ಭಾಂಗ್ರಾ ಕಂಪನಿಯ ಕಿರುಚಿತ್ರದಲ್ಲಿ ರೂ.400/- ರ ಮೊತ್ತಕ್ಕೆ ಸಾಹಸ ದೃಶ್ಯದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ‘ಲಢಾಕ್’ ಚಿತ್ರದಲ್ಲಿ ಬೆಂಕಿಯ ಮೇಲಿಂದ ಹಾರುವ ದೃಶ್ಯದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರೂ, ಮುಖವೆಲ್ಲ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯನ್ನು ಸೇರಿ ಚೇತರಿಸಿಕೊಳ್ಳುತ್ತಾಳೆ. ಈ ಸುಟ್ಟ ಗಾಯಗಳೇ ಟಂಡನ್‌ಳ ಉತ್ಸಾಹಕ್ಕೆ ಮತ್ತಷ್ಟು ಕಿಚ್ಚನ್ನು ಹಚ್ಚಿತ್ತು ಎಂದರೆ ತಪ್ಪಾಗಲಾರದು. ಗೀತಾ ಇಂತಹ ಸಾಹಸ ದೃಶ್ಯಗಳಲ್ಲಿ ನಟಿಸುವುದರಲ್ಲೇ ಖುಷಿಯನ್ನು ಕಾಣಲಾರಂಭಿಸುತ್ತಾಳೆ. ಸಾಹಸ ದೃಶ್ಯಗಳ ಕುರಿತಾದ ತರಬೇತಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರೈಸಿ ಉತ್ತಮ ಸಾಹಸ ನಟಿಯಾಗಿ ರೂಪುಗೊಳ್ಳುತ್ತಾಳೆ. “ಖತರೋಂ ಕೀ ಖಿಲಾಡಿ” ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜಯಶಾಲಿಯಾಗುತ್ತಾಳೆ. ಭಾರತದಲ್ಲಿ ಕಾರ್‌ ಚೇಸಿಂಗ್ ದೃಶ್ಯಗಳಲ್ಲಿ ಯಾವ ಮಹಿಳೆಯೂ ಭಾಗವಹಿಸುವ ಧೈರ್ಯವನ್ನು ತೋರುತ್ತಿರಲಿಲ್ಲ, ಇವೆಲ್ಲ ಪುರುಷ ಪ್ರಧಾನ ಕ್ಷೇತ್ರಗಳು ಆದರೆ ನಾನು ಕಾರ್ ಅಥವಾ ಹಾರ‍್ಲಿಡೇವಿಡ್ ಸನ್, ಬುಲೆಟ್, ಡರ್ಟ್ ಬೈಕ್ ಇವೇ ಮೊದಲಾದ ಬೈಕ್‌ಗಳನ್ನು ಯಾವ ಭಯವೂ ಇಲ್ಲದೆ ಓಡಿಸಬಲ್ಲೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ.

ಯಾವುದೇ ಮಹಿಳೆ ದೀರ್ಘ ಕಾಲದವರೆಗೆ ಬಿಸಿಲು ಹಾಗೂ ಗಲೀಜು ಮಣ್ಣಲ್ಲಿ ಸಾಹಸ ಮಾಡುವುದನ್ನು ಬಯಸುವುದಿಲ್ಲ. ಇತ್ತೀಚೆಗೆ ಐಶ್ವರ್ಯ ರೈ ಅಭಿನಯದ “ಜಾಯ್‌ಬಾ” ಚಿತ್ರದಲ್ಲಿ ತೀರ ಕ್ಲಿಷ್ಟಕರ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಕಾರ್ ಓಡಿಸಿದಾಗ ಅಲ್ಲಿದ್ದ ಇಡೀ ಪ್ರೊಡಕ್ಷನ್ ತಂಡವೇ ಎದ್ದು ನಿಂತು ಶಹಬ್ಬಾಸ್ ಎಂದು ಬೆನ್ನು ತಟ್ಟುತ್ತಾರೆ. ಗೀತಾ ಸಾಹಸ ನಟಿಯರ ಸಂಘದಲ್ಲಿ ನೊಂದಾಯಿಸಿಕೊಂಡಿದ್ದು ಸಾಹಸ ದೃಶ್ಯಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ಹಲವಾರು ಬಾರಿ ಗಂಭೀರವಾಗಿ ಗಾಯಗೊಂಡಿದ್ದು ಅವರ (ಮೂಳೆಯ ತುದಿ ಮತ್ತು ಬೆನ್ನು ಹುರಿ ಮುರಿತ) ಆತ್ಮ ವಿಶ್ವಾಸವೇ ಶೀಘ್ರವಾಗಿ ಆಕೆ ಚೇತರಿಸುವಂತೆ ಮಾಡುತ್ತಿದೆ. ಕಿರು ಬಜೆಟ್ ಚಿತ್ರವಾದ “ಝೀನತ್ ಅಮಾನ್” ಚಿತ್ರದಲ್ಲಿ ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯದ ಸಂದರ್ಭದಲ್ಲಿ ಬಿದ್ದು ಬೆನ್ನಿಗೆ ಗಾಯ ಮಾಡಿಕೊಂಡರೂ ಅತೀ ಶೀಘ್ರ‍್ರವಾಗಿ ಚೇತರಿಸಿಕೊಂಡಿದ್ದಾರೆ.

ಇಂದು ಗೀತಾ ಅತ್ಯಂತ ಬೇಡಿಕೆಯ ಸಾಹಸ ನಟಿಯಾಗಿದ್ದು ಗಳಿಕೆಯು ಉತ್ತಮವಾಗಿದ್ದು ಮುಂಬೈಯ ಮಲಾಡ್‌ನಲ್ಲಿ ಸ್ವಂತ ಬಂಗಲೆಯನ್ನು ಹೊಂದಿದ್ದು ಖ್ಯಾತ ನಟಿಯರಾದ ಪರಿಣಿತಿಚೋಪ್ರಾ, ಕರಿನಾ ಕಪೂರ್, ಆಲಿಯಾಭಟ್, ದೀಪಿಕಾ ಪಡುಕೋಣೆ, ಐಶ್ವರ್ಯ ರೈ ರಂತಹ ಖ್ಯಾತ ಬಾಲಿವುಡ್ ನಟಿಯರಿಗೂ ಸಾಹಸ ದೃಶ್ಯ ಮಾಡಿದ ಹೆಗ್ಗಳಿಕೆ ಈಕೆಯದು. ಇವರೂ ಗೀತಾಳನ್ನು ಬಹಳ ಮಮತೆಯಿಂದ ಕಾಣುತ್ತಾರೆ.

ಈಗ ಗೀತಾಳ ಮಗಳು 16 ವರ್ಷ ಮತ್ತು ಮಗ 14 ವರ್ಷದವರಾಗಿದ್ದು, ಇವರಿಗೆ ಅತ್ಯುತ್ತಮವಾದ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಮತ್ತು ಈ ಕಂದಮ್ಮಗಳು ತಾಯಿಯ ಮಮತೆಯಲ್ಲಿ ಬೆಳೆಯುತ್ತಿದ್ದಾರೆ. ನನ್ನಿಬ್ಬರು ಮಕ್ಕಳು ಅವರು ಮದುವೆಯಾಗುವ ಪೂರ್ವದಲ್ಲೇ ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲುವಂತೆ ಮಾಡುವುದು ನನ್ನ ಗುರಿ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗೀತಾ. ನನ್ನ ಬದುಕೇ ನನ್ನ ಮಕ್ಕಳಿಗೆ ಜೀವನದ ಅತ್ಯಮೂಲ್ಯ ಪಾಠವಾಗಿದ್ದು, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಾಹಸ ಹಾಗೂ ಆತ್ಮರಕ್ಷಣೆಯ ಕಲೆಯನ್ನು ಕಲಿಸುವ ಶಾಲೆಯನ್ನು ತೆರೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಮಹಿಳೆ ಇತರರಿಂದ ದೌರ್ಜನ್ಯಕ್ಕೆ ಒಳಗಾಗದೇ ತಮ್ಮ ಸ್ವಂತ ಕಾಲಲ್ಲಿ ಸಮಾಜದಲ್ಲಿ ನಿಂತಾಗ ಸಮಾಜಕ್ಕೆ ಉತ್ತರವಾಗಬಲ್ಲದು ಎಂಬುದು ಆಕೆಯ ಆತ್ಮ ವಿಶ್ವಾಸದ ನುಡಿಯಾಗಿದ್ದು, ಈಕೆಯ ಆತ್ಮವಿಶ್ವಾಸಕ್ಕೆ ಶಹಬ್ಬಾಸ್ ಎನ್ನೋಣ.

ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಪೋಸ್ಟ್ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ದೂ:9742884160

ಫೋಟೋ ಕೃಪೆ: ಅಂತರ್ಜಾಲ

Related post

2 Comments

  • gxnpjkvhqfdtwxiohrrnfqgouemnms

  • peiqmluzrgqnmggupsvwfhpljlynkq

Leave a Reply

Your email address will not be published. Required fields are marked *