ಉಕ್ಕಿನ ಮನುಷ್ಯನಿಗೊಂದು ಏಕತೆಯ ಪ್ರತಿಮೆ
ದೇಶದ ಮತ್ತು ಪ್ರಪಂಚದ ವಿವಿಧ ಸ್ಥಳಗಳಲ್ಲಿ ಹಲವಾರು ಮಹಾನ್ ಸಾಧಕರ ಹಾಗೂ ವಿಶೇಷ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದು ನಾವೆಲ್ಲರೂ ನೋಡಿದ್ದೇವೆ. ಅವುಗಳ ಪೈಕಿ ಅಮೇರಿಕಾದ ನ್ಯೂಯಾರ್ಕ್ ನಗರದ ಲಿಬರ್ಟಿ ಪ್ರತಿಮೆಯು ಅತ್ಯಂತ ವಿಶೇಷವಾದ ಹಾಗೂ ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪ್ರತಿಮೆಯೆಂದು ಇದುವರೆಗೂ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ ಈ ಹೆಗ್ಗಳಿಕೆಯು 31 ಅಕ್ಟೋಬರ್ 2018 ರ ನಂತರ ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 142 ನೇ ಜನ್ಮದಿನದಂದು ಉಕ್ಕಿನ ಮನುಷ್ಯನ ಬೃಹತ್ ಏಕತೆಯ ಪ್ರತಿಮೆಯ ಪಾಲಾಗಿದೆ.
ಭಾರತದ ಉಕ್ಕಿನ ಮನುಷ್ಯನೆಂದೇ ಖ್ಯಾತಿವೆತ್ತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಾಗೂ ಸ್ವಾತಂತ್ರ್ಯಾ ನಂತರ ಇಡೀ ದೇಶವನ್ನೇ ಒಗ್ಗೂಡಿಸಿದ ಸರ್ದಾರ್ ವಲ್ಲಭ ಪಟೇಲ್ ಅವರ ಹೆಸರನ್ನು ಅಜರಾಮರಗೊಳಿಸುವುದಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬೃಹತ್ ಕಂಚಿನ ಮೂರ್ತಿ ಸ್ಥಾಪನೆಗಾಗಿ ದೇಶದ ಮೂಲೆ ಮೂಲೆಗಳಿಂದ ಲೋಹಗಳನ್ನು ಸಂಗ್ರಹಿಸುವ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದ್ದರು. ನಿರಂತರ ಪ್ರಯತ್ನದ ಫಲವಾಗಿ ಆ ಲೋಹಗಳಿಂದ ಇಂದು ವಿಶ್ವದ ಅತ್ಯಂತ ದೊಡ್ಡದಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕಂಚಿನ ಏಕತೆಯ ಪ್ರತಿಮೆಯು ನಿರ್ಮಾಣಗೊಂಡಿದೆ.
ಈ ಪ್ರತಿಮೆಯನ್ನು ಒಟ್ಟು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿತ್ತು, ಆದರೆ ಈ ಯೋಜನೆಯನ್ನು ಅತ್ಯಂತ ಬದ್ಧತೆಯಿಂದ ಅನುಷ್ಠಾನಗೊಳಿಸಿರುವುದರ ಫಲವಾಗಿ ಕೇವಲ ಮೂರು ವರ್ಷ ಐದು ತಿಂಗಳಲ್ಲೇ ಈ ಬೃಹತ್ ಏಕತಾ ಪ್ರತಿಮೆಯ ತಲೆಯೆತ್ತಿ ನಿಂತಿದೆ. ಈ ಪ್ರತಿಮೆಯನ್ನು 2018 ರ ಆಗಸ್ಟ್ 31ರ ಪಟೇಲರ ಜನ್ಮ ದಿನದಂದೇ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದು ವಿಶೇಷ. ಒಟ್ಟು 182 ಅಡಿಗಳಷ್ಟು ಎತ್ತರವಿರುವ ಈ ಬೃಹತ್ ಪ್ರತಿಮೆಯ ನಿರ್ಮಾಣದ ಜವಾಬ್ದಾರಿಯನ್ನು ದೇಶದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಎಲ್&ಟಿ ಸಂಸ್ಥೆಯು ವಹಿಸಿಕೊಂಡು ಅತ್ಯದ್ಭುತವಾಗಿ ನಿರ್ಮಿಸಿದೆ. ಸರ್ದಾರ್ ಪಟೇಲರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಈಗಾಗಲೇ ಘೋಷಿಸಲಾಗಿದ್ದು ಈ ಬಾರಿಯ ಏಕತಾ ದಿನದಂದು ಬೃಹತ್ ಏಕತಾ ಪ್ರತಿಮೆಯು ಲೋಕಾರ್ಪಣೆಗೊಂಡಿದೆ.
ಭಾರತವನ್ನು ಒಗ್ಗೂಡಿಸಿದ ಮಹಾನಾಯಕನ ಪ್ರತಿಮೆ ವಿಶ್ವದ ಅತಿದೊಡ್ಡ ಪ್ರತಿಮೆಯಾಗಿ ಹೊರಹೊಮ್ಮಿರುವುದು ದೇಶದ ಹೆಗ್ಗಳಿಕೆಯೂ ಹೌದು. ಈ ಪ್ರತಿಮೆಯು ಲಕ್ಷಾಂತರ ಜನ ಪ್ರವಾಸಿಗರನ್ನು ವರ್ಷವಿಡೀ ಆಕರ್ಷಿಸಿ ಭಾರತ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿಯೂ ಬದಲಾಗಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯತೆ. ಈ ಪ್ರತಿಮೆ ನಿರ್ಮಾಣದ ಸಮಗ್ರ ಜವಾಬ್ದಾರಿಯನ್ನು ಕೇಂದ್ರ ಸರಕಾರ ಹಾಗೂ ಗುಜರಾತ್ ರಾಜ್ಯ ಸರಕಾರಗಳು ಹಗಲಿರುಳು ನಿರಂತರವಾಗಿ ಪರಿಶೀಲಿಸಿ ನಿರ್ವಹಿಸಿದ್ದು, ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಡೀ ಭಾರತ ದೇಶವನ್ನು ಜಾತಿ, ಮತ, ಪಂಥದ ಬೇಧವಿಲ್ಲದೇ ಒಗ್ಗೂಡಿಸಿದ ಸರ್ದಾರ್ ಪಟೇಲರಿಗೆ ಸಲ್ಲಬೇಕಾದ ಗೌರವವನ್ನು ಈ ಮೂಲಕ ಕೇಂದ್ರ ಸರಕಾರ ಪಟೇಲರ ಬೃಹತ್ ಏಕತೆಯ ಕಂಚಿನ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಅತ್ಯಂತ ವಿಭಿನ್ನವಾಗಿ ಸಲ್ಲಿಸಿದೆ.
ವಿಶ್ವದ ಅತೀ ಎತ್ತರದ ಪ್ರತಿಮೆಯೆಂಬ ಹೆಗ್ಗಳಿಕೆಯನ್ನು ಈ ಏಕತೆಯ ಪ್ರತಿಮೆಯು ಪಡೆದಿದ್ದು, ಉಕ್ಕಿನಷ್ಟೇ ಗಟ್ಟಿಯಾಗಿ ತಲೆಯೆತ್ತಿ ನಿಂತಿದೆ. ಈ ಬೃಹತ್ ಪ್ರತಿಮೆಯ ಕೆತ್ತನೆಯ ಕೆಲಸವನ್ನು ನಿರ್ಮಿಸಿದವರು 93 ವರ್ಷ ವಯಸ್ಸಿನ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ “ಶ್ರೀ ರಾಮ್ ವಾನ್ ಜೀ ಸುತಾರ್” ಎಂಬವರು. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಹಾಗೂ 220 ಕಿಲೋಮೀಟರ್ ವೇಗದಲ್ಲಿ ಬೀಸುವ ಚಂಡಮಾರುತವನ್ನು ಸಹಿತ ಈ ಮೂರ್ತಿ ತಡೆದುಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿದೆ. ಭೂಮಿಯ ಸುಮಾರು 10 ಕಿ.ಮೀ ಆಳದಲ್ಲಿ ಹಾಗೂ 15 ಕಿ.ಮೀ ಸುತ್ತಳತೆಯ ವ್ಯಾಪ್ತಿಯಲ್ಲಿ ತೀವ್ರ ಭೂಕಂಪ ಸಂಭವಿಸಿದರೂ ಈ ಏಕತೆಯ ಮೂರ್ತಿಗೆ ಯಾವುದೇ ರೀತಿಯ ಹಾನಿಯಾಗದಂತೆ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆ ಹಾಗೂ ಸಿಡಿಲಿನಿಂದ ಪ್ರತಿಮೆಗೆ ಯಾವುದೇ ರೀತಿಯ ಹಾನಿಯಾಗದಂತೆ ರೇಡಿಯೋ ತಂತ್ರಜ್ಞಾನವನ್ನೂ ಅಳವಡಿಸಿರುವುದು ಇಲ್ಲಿನ ವಿಶೇಷ. ಒಟ್ಟು 182 ಮೀಟರ್ ಎತ್ತರವಿರುವ ಪಟೇಲರ ಈ ಮೂರ್ತಿಯು ವಿಶ್ವದಾಖಲೆಯ ಸ್ಥಾನವನ್ನು ತನ್ನ ಎತ್ತರದಿಂದ ಪಡೆದುಕೊಂಡಿದೆ. ಈ ಮೂರ್ತಿಯನ್ನು ಸುಮಾರು 2,989 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮುಂದಿನ 15 ವರ್ಷಗಳ ಕಾಲ ಸುಮಾರು ರೂ.657 ಕೋಟಿ ವೆಚ್ಚದಲ್ಲಿ ಎಲ್&ಟಿ ಸಂಸ್ಥೆಯು ಈ ಪ್ರತಿಮೆಯ ನಿರ್ವಹಣೆಯನ್ನು ಮಾಡಲಿದೆ.
ಸುಮಾರು 7 ಕಿ.ಮೀ ದೂರದಿಂದಲೇ ಈ ಏಕತೆಯ ಪ್ರತಿಮೆಯು ಬರಿಗಣ್ಣಿಗೆ ಕಾಣಿಸುತ್ತಿದೆ. ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಹನ್ನೊಂದು ವರ್ಷವಾಗಿದ್ದು ಇದರ ಎತ್ತರ 153 ಮೀಟರ್, ಜಪಾನ್ ದೇಶದ ಉಶೀಕು ದೈಬುಟ್ಸು ಬುದ್ಧನ ಪ್ರತಿಮೆಯು 120 ಮೀಟರ್ ಎತ್ತರವಿದ್ದರೆ ಅಮೇರಿಕಾದ ಸ್ಟ್ಯಾಚ್ಯು ಆಫ್ ಲಿಬರ್ಟಿ 93 ಮೀಟರ್ ಎತ್ತರ, ರಷ್ಯಾದ ಮದರ್ಲ್ಯಾಂಡ್ ಕಾರ್ಟ್ ಪ್ರತಿಮೆಯ 85 ಮೀಟರ್ ಹಾಗೂ ಬೆಝಿಲ್ ದೇಶದ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆಯು 38 ಮೀಟರ್ ಎತ್ತರವಿದೆ.
ಈ ಪ್ರತಿಮೆಯನ್ನು ನರ್ಮದಾ ನದಿಯ ಸರ್ದಾರ್ ಸರೋವರದ ಅಣೆಕಟ್ಟೆಯಿಂದ 5 ಕಿ.ಮೀ ದೂರದಲ್ಲಿರುವ ಗರುಡೇಶ್ವರ ಬಳಿಯ ಸಾಧು ದ್ವೀಪದಲ್ಲಿ ನಿರ್ಮಿಸಲಾಗಿದೆ. ಈ ಮೂರ್ತಿಯ ನಿರ್ಮಾಣಕ್ಕೆ ಒಟ್ಟು 1850 ಮೆಟ್ರಿಕ್ ಟನ್ ಕಂಚಿನ ಹಾಳೆ, 24,200 ಮೆಟ್ರಿಕ್ ಟನ್ ಉಕ್ಕು ಮತ್ತು 22,500 ಮೆಟ್ರಿಕ್ ಟನ್ ಸಿಮೆಂಟ್ ಹಾಗೂ ಸುಮಾರು 3,500 ಕೆಲಸಗಾರರನ್ನು ನಿರಂತರವಾಗಿ ಬಳಕೆ ಮಾಡಲಾಗಿರುವುದನ್ನು ಗಮನಿಸಿದಾಗ ಈ ಪ್ರತಿಮೆಯ ಅಗಾಧತೆಯ ಅರಿವಾಗುತ್ತದೆ. ಈ ಪ್ರತಿಮೆಯ ಪಕ್ಕದಲ್ಲಿ ಪಟೇಲರ ಜೀವನಗಾಥೆ ಸಾರುವ ವಸ್ತು ಸಂಗ್ರಹಾಲಯವಿರುವ ‘ಶ್ರೇಷ್ಠ ಭಾರತ ಭವನ’ವನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆಗೆ ವಿಭಿನ್ನವಾಗಿ ಲೇಸರ್ ಬೆಳಕನ್ನು ಅಳವಡಿಸಿರುವುದರಿಂದ ಇಲ್ಲಿನ ಲೇಸರ್ ಲೈಟ್ ಪ್ರದರ್ಶನವೂ ವಿಭಿನ್ನವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇಲ್ಲಿ ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಾಧನೆಗಳ ಅಧ್ಯಯನ ನಡೆಸಲು 264 ಆಸನ ಸಾಮರ್ಥ್ಯದ ಸಂಶೋಧನಾ ಕೇಂದ್ರ, ವಸ್ತು ಸಂಗ್ರಹಾಲಯ ಹಾಗೂ ಆಡಿಯೋ ವೀಡಿಯೋ ಗ್ಯಾಲರಿಯನ್ನು ಸ್ಥಾಪಿಸಲಾಗಿದೆ. 52 ಕೊಠಡಿಗಳಿರುವ ಸ್ಟಾರ್ ಹೋಟೆಲ್, ಸರೋವರದ ಪ್ರದೇಶದಲ್ಲಿ ವಿಶೇಷವಾಗಿ ಜಲವಿಹಾರ ಮತ್ತು ಜಲ ಕ್ರೀಡೆಗೆ ವಿಶೇಷವಾದ ಅವಕಾಶವನ್ನು ಒದಗಿಸಲಾಗಿದೆ. ದೇಶದ ವಿವಿಧ ರಾಜ್ಯಗಳ ವಿಶೇಷತೆಗಳು ಹಾಗೂ ಮಹತ್ವವನ್ನು ಸಾರುವ ವಿಶೇಷವಾದ ಪ್ರದರ್ಶನ ಕೇಂದ್ರವನ್ನು ಹಾಗೂ ಪ್ರತಿಮೆಯ ಉದ್ದಕ್ಕೂ ಮೇಲಕ್ಕೇರಲು ಮತ್ತು ಕೆಳಕ್ಕೆ ಇಳಿಯಲು ವಿಶೇಷವಾದ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಮೂರ್ತಿಯ ಒಳಭಾಗದ ಮೆಟ್ಟಿಲುಗಳನ್ನು ಏರಿದಾಗ 135 ಅಡಿ ಎತ್ತರದಲ್ಲಿ ಬೃಹತ್ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಪ್ರತಿಯೆಯ ಸುತ್ತಮುತ್ತಲ ಪ್ರದೇಶ ಹಾಗೂ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸರ್ದಾರ್ ಸರೋವರ ಅಣೆಕಟ್ಟಿನ ವಿಹಂಗಮ ನೋಟವನ್ನು ಸುಮಾರು 400 ಅಡಿ ಎತ್ತರದಿಂದಲೇ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.
ಉಕ್ಕಿನ ಮನುಷ್ಯನ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ಬಹುಪಾಲು ಲೋಹವನ್ನು ದೇಶದ ಮೂಲೆ ಮೂಲೆಗಳ ಎಲ್ಲ ಗ್ರಾಮಗಳಿಂದ ಸಂಗ್ರಹಿಸಲು ಲೋಹ ಅಭಿಯಾನವನ್ನು ವಿಶೇಷವಾಗಿ ನಡೆಸಿ ರೈತರಿಂದ ನಿರುಪಯುಕ್ತವಾದ ಕೃಷಿ ಸಲಕರಣೆಗಳ ಲೋಹಗಳನ್ನು ಸಂಗ್ರಹಿಸಲಾಯಿತು. ಹೀಗೆ ಒಟ್ಟು 6.60 ಲಕ್ಷ ಲೋಹದ ತುಣುಕುಗಳನ್ನು ಸಂಗ್ರಹಿಸಿ ಅವುಗಳನ್ನು ಮತ್ತೆ ಕರಗಿಸಿ ಪ್ರತಿಮೆ ನಿರ್ಮಾಣದಲ್ಲಿ ಬಳಸಲಾಗಿರುವುದು ನಿರುಪಯುಕ್ತ ವಸ್ತುಗಳನ್ನು ಈ ಮೂಲಕವೂ ಪುನರ್ಬಳಕೆ ಮಾಡಬಹುದು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಈ ಪ್ರತಿಮೆಯನ್ನು ಕೇವಲ ಪಟೇಲರ ಮೇಲಿನ ಗೌರವದಿಂದಷ್ಟೇ ನಿರ್ಮಿಸಲಾಗಿಲ್ಲ ಬದಲಾಗಿ ಬೃಹತ್ ಪ್ರವಾಸೋದ್ಯಮವನ್ನು ಸಹ ಗಮನವಿಟ್ಟುಕೊಂಡು ನಿರ್ಮಿಸಲಾಗಿದೆ. ಇಲ್ಲಿಗೆ ಜಗತ್ತಿನ ಮೂಲೆ ಮೂಲೆಗಳಿಂದ ವರ್ಷದಲ್ಲಿ ಕನಿಷ್ಠವೆಂದರೂ ಸುಮಾರು ಮೂರು ಕೋಟಿ ಪ್ರವಾಸಿಗರ ಆಗಮನವನ್ನು ಅಂದಾಜಿಸಲಾಗಿದ್ದು ಇದರ ಲಾಭ ಸಂಪೂರ್ಣವಾಗಿ ಅಲ್ಲಿನ ಪ್ರಾದೇಶಿಕ ವ್ಯಾಪಾರಿಗಳು, ಆ ಪ್ರದೇಶದ ಜನರಿಗೆ ಆಗುವಂತೆ ನೋಡಿಕೊಳ್ಳಲಾಗಿದೆ. ಇದರಿಂದ ವಿಶೇಷವಾಗಿ ಕ್ಯಾಬ್ ಚಾಲಕರಿಗೆ, ಹೊಟೇಲ್ ಉದ್ಯಮಿಗಳಿಗೆ, ಬೀದಿ ವ್ಯಾಪಾರಸ್ಥರಿಗೆ, ಆಟೋ ಚಾಲಕರಿಗೆ, ದೇಶದಾದ್ಯಂತ ಇರುವ ಟ್ರಾವೆಲ್ ಏಜೆನ್ಸಿಗಳಿಗೆ, ರಸ್ತೆ ಬದಿಯ ಟೀ ವ್ಯಾಪಾರಿಗಳಿಗೆ, ಬೇಕರಿ ಉದ್ಯಮದವರಿಗೆ, ಪ್ರವಾಸಿ ಗೈಡ್ ಗಳಿಗೆ, ಸೆಕ್ಯುರಿಟಿ ಗಾರ್ಡ್ ಗಳಿಗೆ ಬೃಹತ್ ಉದ್ಯೋಗಾವಕಾಶ ದೊರಕುವಂತೆ ಮಾಡಲಾಗಿದೆ.
ಒಟ್ಟಾರೆಯಾಗಿ ಸ್ವತಂತ್ರ ಭಾರತದ ಮೊತ್ತ ಮೊದಲ ಗೃಹ ಸಚಿವರು ಹಾಗೂ ರಾಷ್ಟ್ರದ ಉಕ್ಕಿನ ಮನುಷ್ಯನೆಂದು ಹೆಸರು ಪಡೆದ ಸರ್ದಾರ್ ಪಟೇಲರ ಪ್ರತಿಮೆ ತನ್ನ ವೈಶಿಷ್ಟ್ಯತೆಯಿಂದ ಜಗತ್ತಿನ ಗಮನವನ್ನು ಸೆಳೆದು ದೇಶದ ಹೆಮ್ಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160