ಊಟಿ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳ

ಊಟಿ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳ

ದೇಶದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ತಮಿಳುನಾಡಿನ ಊಟಿಯು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಭೂಲೋಕದ ಸ್ವರ್ಗದಂತಿರುವ ಇಲ್ಲಿನ ಅದ್ಭುತವಾದ ಹವಾಮಾನ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಬೆರಗಾದ ಪ್ರವಾಸಿಗರೇ ಇಲ್ಲವೆಂದರೆ ತಪ್ಪಾಗಲಾರದು. ಹೊಸದಾಗಿ ಮದುವೆಯಾದ ದಂಪತಿಗಳ ಮಧುಚಂದ್ರದ ತಾಣವೆಂದೇ ಊಟಿಯು ಪ್ರಸಿದ್ಧಿಯನ್ನು ಪಡೆದಿದೆ. ಭಾರತ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಊಟಿಗೆ ಪ್ರವಾಸೋದ್ಯಮದಲ್ಲಿ ವಿಶಿಷ್ಟವಾದ ಸ್ಥಾನಮಾನವಿದ್ದು, ವಿದೇಶಿಯರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಆಗಮಿಸುತ್ತಾರೆ.

ಊಟಿಯು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 295 ಕಿ.ಮೀ ದೂರದಲ್ಲಿದ್ದು, ಕ್ಯಾಲಿಕಟ್ ಮತ್ತು ಕೊಯಂಬತ್ತೂರ್ ಊಟಿಗೆ ಹತ್ತಿರದ ವಿಮಾನ ನಿಲ್ದಾಣಗಳು. ಚೆನ್ನೈ, ಕೊಯಮುತ್ತೂರು, ಮೈಸೂರು ಮೂಲಕ ಬೆಂಗಳೂರಿಗೆ ಚಲಿಸುವ ರೈಲಿನಲ್ಲಿ ಪ್ರಯಾಣಿಸಿ ಮೆಟ್ಟುಪಾಳ್ಯಂ ಮೂಲಕ ಊಟಿ ತಲುಪಬಹುದು.

ಊಟಿಯು ಸಮುದ್ರ ಮಟ್ಟದಿಂದ 7,500 ಅಡಿ ಎತ್ತರದಲ್ಲಿದೆ. ಊಟಿ ಎಂಬ ಅದ್ಭುತ ಸ್ಥಳದಲ್ಲಿ ಅಬ್ಬಬ್ಬಾ ಎಂದರೂ ಕನಿಷ್ಠ 48 ಪ್ರವಾಸಿ ತಾಣಗಳಿವೆ. ಹಾಗಾಗಿ ಪ್ರವಾಸಿಗರು ಒಂದೇ ಪ್ರದೇಶದಲ್ಲಿ 48 ಅದ್ಭುತವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಈ ಎಲ್ಲ ಸ್ಥಳಗಳನ್ನು ಪ್ರವಾಸಿಗರು ವೀಕ್ಷಿಸಬೇಕೆಂದರೆ ಕನಿಷ್ಠ ಮೂರರಿಂದ ನಾಲ್ಕು ದಿನಗಳವರೆಗೆ ಊಟಿಯಲ್ಲೇ ಉಳಿದುಕೊಂಡು ಎಲ್ಲ ಪ್ರದೇಶಗಳನ್ನು ವೀಕ್ಷಿಸಬಹುದಾಗಿದೆ. ಅಂತಹ ಪ್ರೇಕ್ಷಣೀಯ ಸ್ಥಳಗಳ ಪೈಕಿ ಅತ್ಯಂತ ವಿಶಿಷ್ಟವಾದ ಕೆಲವೊಂದು ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬೊಟಾನಿಕಲ್ ಗಾರ್ಡನ್

ಊಟಿಯಲ್ಲಿ ಬೊಟಾನಿಕಲ್ ಗಾರ್ಡನ್ ವಿಶ್ವ ಪ್ರಸಿದ್ಧವಾದ ತಾಣವಾಗಿದ್ದು, ಈ ಗಾರ್ಡನ್ ಸುಮಾರು 22 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇಲ್ಲಿ ಹಲವಾರು ರೀತಿಯ ಸಸ್ಯಗಳು ಹಾಗೂ ವೈವಿಧ್ಯಮಯ ಪ್ರಭೇದದ ಸಸ್ಯಗಳನ್ನು ಕಾಣಬಹುದು. ಅಪರೂಪದ ಹೂವುಗಳು, ಅಲಂಕಾರಿಕ ಗಿಡಗಳು ಮತ್ತು ಪೊದೆಗಳನ್ನು ಕಂಡು ಅವುಗಳ ಸೌಂದರ್ಯವನ್ನು ಆಸ್ವಾಧಿಸಬಹುದಾಗಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ಹೂವುಗಳನ್ನು ಇಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಇಲ್ಲಿನ ಉದ್ಯಾನವನದ ಸೌಂದರ್ಯವಂತೂ ಬಣ್ಣಿಸಲಸಾಧ್ಯ. ಇಲ್ಲಿರುವ ಕೆಲವೊಂದು ವೃಕ್ಷಗಳು ಹಲವಾರು ವರ್ಷಗಳಷ್ಟು ಪುರಾತನವಾಗಿದ್ದು, ಸುಮಾರು 20 ದಶಲಕ್ಷ ಹಳೆಯ ಪಳೆಯುಳಿಕೆಗಳಂತಹ ಮರಗಳನ್ನೂ ಇಲ್ಲಿ ಕಾಣಬಹುದು. ಈ ಗಾರ್ಡನ್ ನಿರ್ವಹಣೆಯನ್ನು ತಮಿಳುನಾಡಿನ ತೋಟಗಾರಿಕಾ ಇಲಾಖೆಯು ಮಾಡುತ್ತಿದ್ದು, ಬಟಾನಿಕಲ್ ಗಾರ್ಡನ್ ಬೇಸಿಗೆ ಕಾಲದ ಫಲಪುಷ್ಪ ಪ್ರದರ್ಶನ ಅತ್ಯಂತ ವಿಶೇಷವಾದುದು.

ದೊಡ್ಡ ಬೆಟ್ಟ ಪೀಕ್

ದೊಡ್ಡಬೆಟ್ಟ ಪೀಕ್ ಎಂಬ ಸ್ಥಳವು ಊಟಿಯಲ್ಲಿಯೇ ಅತ್ಯಂತ ಎತ್ತರವಾದ ಪ್ರದೇಶವಾಗಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 2623 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟವನ್ನು ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಬೆಟ್ಟಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಈ ಬೆಟ್ಟದ ತುತ್ತ ತುದಿಯಲ್ಲಿ ನಿಂತು ಊಟಿಯ ವಿಶಾಲವಾದ ಸುಂದರವಾದ ಕಣಿವೆಗಳು, ಕೊಯಮುತ್ತೂರಿನ ಬಯಲು ಪ್ರದೇಶಗಳು ಮತ್ತು ಮೈಸೂರಿನ ಸಮತಟ್ಟಾದ ರಮಣೀಯ ಪ್ರದೇಶಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಕಣಿವೆ ಪ್ರದೇಶದಲ್ಲಿ ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯು ಟೆಲಿಸ್ಕೋಪ್ ಹೌಸನ್ನು ನಿರ್ಮಿಸಿ ನಿರ್ವಹಿಸುತ್ತಿದ್ದು, ಇದರ ಮೂಲಕ ಪ್ರವಾಸಿಗರು ಬೆಟ್ಟದ ಮೇಲಿಂದ ಸುಂದರವಾದ ಕಣಿವೆ ಹಾಗೂ ವಿವಿಧ ದೂರದ ಪ್ರದೇಶಗಳನ್ನು ನೋಡಬಹುದಾಗಿದೆ.

ಲಾವಂಚೆ ಅಭಯಾರಣ್ಯ

ಈ ಅಭಯಾರಣ್ಯವು ನೀಲಗಿರಿ ಪರ್ವತದ ಮಧ್ಯೆ ಇರುವ ಸುಂದರವಾದ ಅಭಯಾರಣ್ಯವೆಂದು ಕರೆಯಲಾಗಿದೆ. ಊಟಿಯಲ್ಲಿ ನೀಲಗಿರಿ ಅರಣ್ಯ ಮತ್ತು ಪರ್ವತವು ಅತ್ಯಂತ ವಿಶೇಷವಾದ ಸ್ಥಾನವನ್ನು ಪಡೆದಿದೆ. ಈ ಅಭಯಾರಣ್ಯವು ಊಟಿಯಿಂದ 25 ಕಿ.ಮೀ ದೂರದಲ್ಲಿದ್ದು, ಇಲ್ಲಿ ಶೋಲಾ ಮರಗಳು, ಆರ್ಕಿಡ್ ಮರಗಳನ್ನು ಹೇರಳವಾಗಿ ಕಾಣಬಹುದು. ಈ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ಮೈನವರೇಳಿಸುವ ಜೀಪ್ ಸಫಾರಿಯೂ ಲಭ್ಯವಿದ್ದು, ಇಲ್ಲಿಯೂ ಪ್ರವಾಸಿಗರು ತಮ್ಮ ಅಮೂಲ್ಯ ಸಮಯವನ್ನು ಕಳೆಯಬಹುದು. ಈ ಅಭಯಾರಣ್ಯವು ಹಲವಾರು ಪ್ರಭೇದದ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ತವರೂರಾಗಿದ್ದು, ಇಲ್ಲಿನ ಸರೋವರದಲ್ಲಿ ದೋಣಿ ವಿಹಾರದ ಸೌಲಭ್ಯವೂ ಪ್ರವಾಸಿಗರಿಗೆ ಲಭ್ಯವಿದೆ. ಈ ಅಭಯಾರಣ್ಯಕ್ಕೆ ಭೇಟಿ ನೀಡಲು ಸೂಕ್ತವಾದ ಅವಧಿಯೆಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳು.

ಕುನೂರ್ ಲ್ಯಾಬ್ಸ್ ರಾಕ್

ಊಟಿಯ ಕುನೂರು ಪ್ರದೇಶದಿಂದ ಒಟ್ಟು ಎಂಟು ಕಿಲೋಮೀಟರ್ ದೂರದಲ್ಲಿ ಲ್ಯಾಬ್ಸ್ ರಾಕ್ ಎಂಬ ವಿಶೇಷ ಪ್ರವಾಸಿ ತಾಣವಿದೆ. ಇಲ್ಲಿರುವ ಪರ್ವತದಂತಹ ಬಂಡೆಗಳು ಸಮುದ್ರ ಮಟ್ಟದಿಂದ ಸುಮಾರು 5,000 ಅಡಿ ಎತ್ತರದಲ್ಲಿವೆ. ಲಾಬ್ಸ್ ರಾಕ್ ಪ್ರವಾಸಿಗರಿಗೆ ಅತ್ಯದ್ಭುತವಾದ ವೀಕ್ಷಣಾ ಸ್ಥಳವನ್ನು ಒದಗಿಸಿದ್ದು, ಈ ಪ್ರದೇಶದಿಂದ ಕಾಡಿನ ರಮಣೀಯ ಸೌಂದರ್ಯ ಹಾಗೂ ಮೋಡಗಳಿಂದ ಆವರಿಸಿರುವ ಆಕಾಶವನ್ನು ನೋಡುವುದೇ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿ ಅತ್ಯದ್ಭುತವಾದ ಟ್ರೆಕ್ಕಿಂಗ್ ಪಾಯಿಂಟ್ ಇದ್ದು ಪ್ರವಾಸಿಗರು ಟ್ರೆಕ್ಕಿಂಗ್ ನ ಮಜಾವನ್ನು ಅನುಭವಿಸಬಹುದು. ಇಲ್ಲಿಗೆ ರಸ್ತೆ ಹಾಗೂ ರೈಲು ಸಂಪರ್ಕವಿದ್ದು ಪ್ರವಾಸಿಗರ ಅತ್ಯಂತ ಸುಲಭವಾಗಿ ತಲುಪಬಹುದಾಗಿದೆ. ನವ ವಿವಾಹಿತ ಜೋಡಿಗಳು ಅತ್ಯಂತ ಇಷ್ಟಪಡುವ ಸ್ಥಳ ಇದಾಗಿದ್ದು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಬೇಸಿಗೆ ಕಾಲ.

ಕೆಟ್ಟಿ ವ್ಯಾಲಿ

ಊಟಿಯ ಅತ್ಯಂತ ವಿಭಿನ್ನವಾದ ಪ್ರವಾಸಿ ತಾಣಗಳಲ್ಲಿ ಕೆಟ್ಟಿ ವ್ಯಾಲಿಯೂ ಒಂದು. ಊಟಿ ಬಸ್ ನಿಲ್ದಾಣದಿಂದ ಕಿಟ್ಟಿ ವ್ಯಾಲಿಗೆ ಒಟ್ಟು 4 ಕಿ.ಮೀ ದೂರವಿದೆ. ಊಟಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಬಹಳಷ್ಟು ಇಷ್ಟಪಡುವ ತಾಣವೆಂದರೆ ಕೆಟ್ಟಿ ವ್ಯಾಲಿ. ಇಲ್ಲಿಗೆ ಪರಿಸರ ಪ್ರೇಮಿಗಳು, ಸಾಹಸಿ ಮನೋವೃತ್ತಿಯವರು ಹಾಗೂ ಹೊಸ ಅನುಭವವನ್ನು ಪಡೆಯಲು ಇಷ್ಟಪಡುವ ಪ್ರವಾಸಿಗರು ಇಲ್ಲಿಗೆ ತೆರಳಬಹುದು. ಇಲ್ಲಿ ಊಟಿ ಸರೋವರ, ಸ್ಟೋನ್ ಹೌಸ್, ಮಾರಿಯಮ್ಮನ್ ದೇವಾಲಯ, ಊಟಿ ಗಾಲ್ಫ್ ಕೋರ್ಸ್, ಸೇಂಟ್ ಸ್ಟೀಫನ್ಸ್ ಚರ್ಚ್, ಪೈಕಾರ ಸರೋವರ ಇವೇ ಮೊದಲಾದ ವಿಶೇಷ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು.

ಊಟಿಯ ಈ ಎಲ್ಲ ವಿಶೇಷ ಸ್ಥಳಗಳನ್ನು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಅತ್ಯಂತ ಪ್ರಶಸ್ತವಾದ ಅವಧಿಯೆಂದರೆ ಪ್ರತೀ ವರ್ಷದ ಫೆಬ್ರುವರಿ ತಿಂಗಳಿನಿಂದ ಡಿಸೆಂಬರ್ ತಿಂಗಳುಗಳು. ಪ್ರವಾಸವೆಂದರೆ ಇಂದು ಬಹುತೇಕರು ಸ್ವಿಝರ್ಲ್ಯಾಂಡ್, ಮಲೇಷಿಯಾ, ಯೂರೋಪ್ ಎನ್ನುತ್ತಾ ವಿದೇಶ ಪ್ರವಾಸ ಮಾಡುವ ಬದಲು ನಮ್ಮ ದೇಶದಲ್ಲೇ ಅದರಲ್ಲೂ ನಮ್ಮ ರಾಜ್ಯದ ಪಕ್ಕದಲ್ಲೇ ಇರುವ ಊಟಿಯೆಂಬ ಭೂಲೋಕದ ಸ್ವರ್ಗಕ್ಕೆ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಭೇಟಿ ನೀಡುವುದು ಉತ್ತಮ. ಪ್ರವಾಸ ಹೋಗುವುದೇನೋ ಸರಿ ಆದರೆ ಇಲ್ಲಿನ ಪ್ರಕೃತಿಯ ಸೌದರ್ಯವನ್ನು ಹಾಳು ಮಾಡದೇ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮನೋವೃತ್ತಿಯನ್ನು ಹೊಂದುವುದೂ ಅವಶ್ಯವಾಗಿದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

Related post

Leave a Reply

Your email address will not be published. Required fields are marked *