ಊರ್ಮಿಳೆಗೆ…..
ನೀನು ಅಲ್ಲಿ ಸೊರಗುತ್ತಿದ್ದೆ
ನಾನು ಇಲ್ಲಿ ಕೊರಗುತ್ತಿದ್ದೆ
ಎಲ್ಲವಿದ್ದೂ ಇಲ್ಲದಂತೆ
ಒಳಗುದಿಯು ಕಾಣದಂತೆ
ನಾವು ಬದುಕುತ್ತಿದ್ದೆವು….
ನನ್ನ ಎದೆಯ ತುಂಬಾ ಪ್ರೀತಿ
ನಿನ್ನ ಮನದ ಕಕ್ಕಲಾತಿ
ಅನುಜನವನು ನನ್ನ ರಾಮ
ಭಾರ್ಯೆ ನೀನು ನನ್ನ ಭಾಮೆ
ನಯನಗಳೆರೆಡು ನೀವು…
ಅಪ್ಪನಾಜ್ಞೆ ಮೀರಲಿಲ್ಲ
ಅವನು ನನ್ನ ರಾಮ
ವನವಾಸಕೆ ಹೆದರಲಿಲ್ಲ
ಅವಳು ಮಾತೆ ಸೀತೆ
ನೀನು ಮಾತ್ರ ತ್ಯಾಗಮೂರ್ತಿ
ಮನದ ಒಡತಿ ಊರ್ಮಿಳೆ…
ನಿನ್ನ ಬಿಟ್ಟು ನಾನು ಬಂದೆ
ಮನವನಲ್ಲೇ ನೆಟ್ಟು ಬಂದೆ
ಹೂವು ದುಂಬಿ ಬೇರೆಯಾಗಿ
ಮಕರಂದವು ಕರಗಿದಾಗ
ರಾಗವಿರದ ಪರಾಗ…
ಮನದ ಗುಡಿಯಲಿದ್ದೆ ನೀನು
ಕಾಡಿನ ಜೋಪಡಿಯಲಿ ನಾನು
ಅರಮನೆಯ ಶೃಂಗಾರಕೂ
ವೈರಾಗ್ಯದ ಸಿಂಚನ
ಬಿಡಲಾಗದ ಭಾವಬಂಧನ…
ಇನ್ನು ಕಾಯಲಾರೆ ನಾನು
ನನ್ನ ಮನದ ಅರಸಿ ನೀನು
ವಿಧಿಯ ಆಟ ಮುಗಿಯಲಿಹುದು
ನಾನು ನೀನು ಮತ್ತೆ ಸೇರಿ
ಬಾಳ ಬಂಡಿ ಹೂಡುವಾ…
ಸುನೀಲ್ ಹಳೆಯೂರು