ಋಣಮುಕ್ತೆ
ಕವಿತಾ ಮನೆಯಲಿರುವ ದಿವಾನಿಗೊರಗಿ ಯೋಚಿಸುತ್ತಿದ್ದಳು ಕಳೆದುಹೋದ ತನ್ನ ಗತಜೀವನದ ದಿನಗಳನು. ಅಷ್ಟರಲಿ 8 ವರ್ಷದ ಪುಟಾಣಿ ಮಗಳು ದೀಪ್ತಿ ಸ್ಕೂಲಿಂದ ಬಂದವಳೇ ಶೂಸ್ ಸಹ ಬಿಚ್ಚದೇ ಅಲ್ಲಿಯ ವರದಿಗಳನು ಅಮ್ಮನಿಗೊಪ್ಪಿಸಲು ಶುರು ಮಾಡಿದಳು ಎಂದಿನಂತೆ.ಕವಿತಾ ಅನ್ಯಮನಸ್ಕತೆಯಿಂದ ಹುಂ ಹುಂ ಅನ್ನುತಿರುವುದ ಕೇಳಿ “ನೀ ಹೋಗಮ್ಮಾ, ಯಾವಾಗ್ಲೂ ಹೀಗೇ ನಾ ಹೇಳೊದನ್ನ ಕೇಳಲ್ಲ ಸರಿಯಾಗಿ..ಅದೇ ಪಪ್ಪ ನನ್ನ ಮಾತನು ಅದೆಷ್ಟು ಚೆಂದ ಕೇಳ್ತಿದ್ರು..ನಾ ಪಪ್ಪನ ಬಳಿ ಹೋಗುವೆ” ಅಂತಂದು ಸಿಟ್ಟಾಗಿ ರೂಮಿಗೆ ಓಡಿದಳು.ತನ್ನ ತಪ್ಪಿನರಿವಾಗಿ ಕವಿತಾ ಸಾರಿ ಕಣೆ ಪುಟ್ಟಕ್ಕಾ ಅಂತ ಮಗಳನು ರಮಿಸಿ ತಿಂಡಿ ತಿನ್ನಿಸಿ ಆಟವಾಡಲು ಕಳಿಸಿ,ಉಳಿದ ಮನೆಗೆಲಸಗಳ ಮುಗಿಸಿ ಮತ್ತೆ ಉಸ್ಸಪ್ಪಾ ಅಂತ ಸೋಫಾದಲಿ ಬಂದು ಕುಳಿತಳು. ತಕ್ಷಣ ತನ್ನ ಮಾಜಿ ಗಂಡ ಪ್ರದೀಪ ತಿಂಗಳ ಕೊನೆಯಾದ ನಾಳೆಯ ದಿನಾಂಕಕೆ ತನ್ನ ಅಕೌಂಟಿಗೆ ಎಷ್ಟು ಹಣ ಕಳಿಸುವನೊ 6 ವರ್ಷದ ಹಿಂದೆಯೇ ಡೈವೊರ್ಸ್ ಆದ ಶಿಕ್ಷೆಗಾಗಿ ಅಂತ ಚಿಂತಿಸತೊಡಗಿದಳು. ಅಥವಾ ಈ ಸಲವೂ ಏನಾದ್ರೂ ಸಬೂಬು ಹೇಳಿ ಕಮ್ಮಿ ಕಳಿಸುವನೇನೊ ಅಂತಲೂ ದಿಗಿಲಾಯ್ತು ಅವಳಿಗೆ.
ಅವಳ ಮನಸು ಮತ್ತೆ ತನ್ನ ದಾಂಪತ್ಯದ ಬದುಕನು ಮೆಲುಕು ಹಾಕಲು ತೊಡಗಿತು.ಅದೆಷ್ಟು ಚೆಂದದ ಸುಖಸಂಸಾರ ತನ್ನ ಪಾಲಿಗಿತ್ತು. ಪುಟ್ಟ ದೀಪ್ತಿ, ಪ್ರೀತಿಸುವ ಗಂಡ ಪ್ರದೀಪ, ತಲೆ ಮೇಲಿನ ಸ್ವಂತ ಸೂರು..ಎಲ್ಲಾ ಸರಿಯಿದ್ದರೆ ದೇವರಿಗೇನು ಕೆಲಸ ಮತ್ತೆ ಅಂತ ಹೇಳುವ ಹಾಗೆ ಅವನು ಅದೊಂದು ದಿನ ಹೇಳಿದ ಸುದ್ದಿ ಬರಸಿಡಿಲಿನಂತೆ ಕಿವಿಗಪ್ಪಳಿಸಿತ್ತು ಅವಳಿಗೆ. ಅವನು ನುಡಿದಂತಹ “ಕವಿತಾ ತನಗಿನ್ನು ನಿನ್ನೊಂದಿಗೆ ಬದುಕುವ ಇಚ್ಛೆಯಿಲ್ಲ, ತಾನು ತನ್ನಾಫೀಸಲಿ ಸೆಕ್ರಟರಿಯಾಗಿರುವ ಚೈತ್ರಾಳನು ವಿವಾಹವಾಗುವವನಿದ್ದೇನೆ..ನಿನಗೆ ಡೈವೋರ್ಸ್ ಮಾಡಿದರೂ ಜೀವನಾಂಶವಾಗಿ ಒಂದಷ್ಟು ಹಣವನು ನಿನಗೂ, ಪುಟ್ಟಿಯ ಅಕೌಂಟಿಗೆ ಹಾಕುವೆ ” ಎಂದಾಗ ತಾನು ಹೋಗ್ರಿ ಸುಮ್ಮನೆ ತಮಾಷೆ ಮಾಡಬೇಡಿ ಎಂದಂದು ತನ್ನ ಕೆಲಸದಲಿ ತೊಡಗಿದ್ದು..ನಂತರ ಅವನು ಹೇಳಿದ ವಿಷಯ ಗಂಭೀರವಗಿತ್ತೆಂದು ತಿಳಿಯಲು ಕವಿತಾಗೆ ಸುಮಾರು ಎರಡು ತಿಂಗಳು ಬೇಕಾಯ್ತು.
ಅವನು ಮರುವಾರವೇ ಹೊರಟು ಹೋಗಿದ್ದ ತನ್ನ ಬಳಿ ಒತ್ತಾಯದಿಂದ ಸಹಿ ಹಾಕಿಸಿಕೊಂಡು ವಿಚ್ಛೇದನದ ಪತ್ರಗಳಿಗೆ.. ತಾ ಮೌನವಾಗಿ ರೋಧಿಸಿ ಸಹಿ ಹಾಕಿಕೊಟ್ಟಿದ್ದೆ ಹೇಳುವಷ್ಟು ಹೇಳಿನೋಡಿ, ಅತ್ತೂ ಕರೆದು ರಂಪ ಮಾಡಿದಾಗಲೂ, ಅವನಿರದ ಬದುಕನು ತಾ ಕಲ್ಪಿಸಲಾರದೆ ತಾನೆಷ್ಟು ಬಾರಿ ಅವನ ಆಫೀಸಿಗೆ ಹೋಗಿ ವಿನಂತಿಸಿದರೂ ಅವನ ಮನಸು ಕರಗದೆ ಇದ್ದದ್ದು ಕಂಡು.ಕಡೆಗೆ ಮನಸನು ಎಲ್ಲ ರಗಳೆಗಳಿಂದ ಹತೋಟಿಗೆ ತಂದುಕೊಂಡು ತನ್ನ ಹಾಗೂ ಪುಟ್ಟಿಯ ಭವಿಷ್ಯದತ್ತ ಗಮನಕೊಡಲು,ಕಟುವಾಸ್ತವದ ಬದುಕನು ಎದುರಿಸಲು ಶುರು ಮಾಡಿದ್ದನು ನೆನಸಿಕೊಂಡಳು ಕವಿತಾ.
ಒಂದು ದಿನ ದೀಪ್ತಿಗೆ ಹೋಟೆಲಿನಲಿ ತಿಂಡಿ ತಿನಿಸಲು ಹೊರಟಾಗ ವಯೋಸಹಜ ಆಸೆಯಿಂದ ಅವಳು ಬಲು ದುಬಾರಿಯಾದ ತಿನಿಸನು ಕೇಳಿದಾಗ ಕವಿತಾ ಅದನು ಕೊಡಿಸಲಾರದೆ ಏನೊ ಕಡಿಮೆ ಬೆಲೆಯ ತಿನಿಸನು ಕೊಡಿಸಿ ಮಗಳ ಮೊಗ ಚಿಕ್ಕದಾಗಿದ್ದನು ಕಂಡು ಹತಾಶೆಗೊಂಡಿದ್ದಳು. ಪುಟ್ಟಿ ಯಾಕಮ್ಮ ಅಂತ ಕೇಳಿದಾಗ ಪಪ್ಪಾ ನಾಳೆ ಅಕೌಂಟಿಗೆ ದುಡ್ಡು ಕಳಿಸ್ತಾರಮ್ಮ ಆಗ ಕೊಡಿಸುವೆ ಅಂದಿದ್ದಳು. ಆದರೆ ತಾನಿನ್ನು ಅವನದೇ ಋಣದಲಿರೋದು ಬೇಡವೆನಿಸಿತ್ತು ಮನಸಿಗೆ. ತಾನೆ ಏಕೆ ಕೆಲಸಕೆ ಸೇರಿ ಮಗುವಿಗೆಲ್ಲವನು ಕೊಡಿಸಬಾರದೆಂದು ಅನಿಸಿದ್ದು ಸುಳ್ಳಲ್ಲ ಕವಿತಾಳಿಗೆ. ಆದರೆ ತನ್ನ ಓದೆಲ್ಲಾ ಗುಡ್ಡ ಹತ್ತಿರೊವಾಗ ತನಗ್ಯಾರು ಕೆಲಸ ಕೊಡ್ತಾರೆ ಅನ್ನೊ ಹತಾಶೆಯೂ ಕಾಡಿ ಮೌನವಹಿಸಿದ್ದಳು. ಆದರೆ ತನ್ನ ಬದುಕಿನ ತಿರುವು ಮಗಳ ಮತ್ತೊಂದು ಮಾತಲಿ ಅಡಗಿತ್ತು ಅಂತ ತಿಳಿಯಿತು ಕವಿತಾಗೆ. ಒಂದು ದಿನವಂತೂ ದೀಪ್ತಿ ತಮ್ಮ ಮೊದಲ ದಿನಗಳೇ ಚೆನ್ನಾಗಿತ್ತಮ್ಮ ಪಪ್ಪಾ ಕೇಳಿದ್ದನು ಕೊಡಿಸ್ತಿದ್ರು ನೀ ಯಾಕೆ ಹೀಗೆ ಮಾಡ್ತಿ ಲೆಕ್ಕಾಚಾರವೆಂದಾಗ ಮಾತ್ರ ತಾನಿನ್ನು ದುಡಿಯದೆ ಬೇರೆ ದಾರಿಯಿಲ್ಲವೆಂದೆಣಿಸಿ ಮರೆತು ಹೋದ ಕಂಪ್ಯೂಟರ್ ಕೋರ್ಸ್ಗಳಿಗೆ ಸೇರಿದಳು. ನಿಧಾನವಾಗಿ ಆದರೆ ಧೃತಿಗೆಡದೆ ಮರೆತಿದ್ದೆಲ್ಲವನೂ ಒಂದು ವರ್ಷದಲಿ ಓದಿ ಒಂದು ಕಂಪನೀಲಿ ಕೆಲಸಕ್ಕೆ ಸೇರಿದಳು. ಸಂಬಳ ಕಡಿಮೆಯಿದ್ದರೂ ಹನಿಹನಿಗೂಡಿದರೆ ಹಳ್ಳ ಎಂದು ಮನಸನು ಸಮಾಧಾನಿಸಿಕೊಂಡು ಮಗಳು ಆಸೆಪಟ್ಟಿದ್ದು ಅಗತ್ಯವೆನಿಸಿದರೆ ಕೊಡಿಸುವ ಹಂತಕೆ ಬಂದು ನಿಂತಳು ಕವಿತಾ.
ಅಚಾನಕಾಗಿ ಒಮ್ಮೆ ಮಾಜಿ ಪತಿ ಪ್ರದೀಪ ಸಿಕ್ಕಿ ಸಾರಿ ಕವಿತಾ ದುಡ್ಡು ಅಕೌಂಟಿಗೆ ಹಾಕಲು ತಡವಾಯ್ತು ಸಂಸಾರ ತಾಪತ್ರಯದಿಂದ ಅಂತ ಹೇಳಿದಾಗ ಕವಿತಾ ಇನ್ನು ದುಡ್ಡು ಕಳಿಸದಿರು ನೀನು… ಅದೇ ದುಡ್ಡನು ಈಗಿರುವ ನಿನ್ನ ಹೊಸ ಪತ್ನಿಯ ಅಕೌಂಟಿಗೆ ಹಾಕು, ಮುಂದೆ ನೀ ಇನ್ನೊಬ್ಬಳನು ಮದುವೆಯಾದ್ರೆ ಪಾಪ ಈಗಿನ ಹೆಂಡತಿಗೆ ಅದೇ ದುಡ್ಡು ಉಪಯೋಗಕೆ ಬರುತ್ತೆ. ನಾನಿನ್ನು ನಿನ್ನ ಋಣದಲಿರಲು ಇಷ್ಟಪಡಲ್ಲ ಅಂತ ಹೇಳಿ ಆತ್ಮವಿಶ್ವಾಸದಿಂದ ಮಗಳು ದೀಪ್ತಿಯ ಕೈಹಿಡಿದು ನಡೆದಳು ತನ್ನ ಮನೆಯತ್ತ. ದೀಪ್ತಿ ಬೈ ಪಪ್ಪಾ ಅನ್ನೊದನು ಕೇಳ್ತಾ ಬಿಟ್ಟಕಣ್ಣು ಬಿಟ್ಟಂತೆ ನೋಡುವ ಸರದಿ ಮಾತ್ರ ಮಾಜಿ ಪತಿಯದ್ದಾಗಿತ್ತು ಅಂದು.
ತಾನು ಆತನಿಂದ, ಆತನ ನೆನಪಿನಿಂದ ಋಣಮುಕ್ತೆಯಾದ ಭಾವವು ಅದೊಂದು ರೀತಿಯಲಿ ಕವಿತಾಳ ಮನಸನ್ನು, ಅಂತರಾಳವನು ತಂಗಾಳಿಯಂತೆ ಮುದಗೊಳಿಸಿತ್ತು.
ಸುಮನಾ ರಮಾನಂದ