ಅವಳು ಅವಳಲ್ಲ!
ಕ್ಷಮಿಸಿ,
ಎಲ್ಲರೂ ಊಹಿಸಿದ ಹಾಗಲ್ಲ!
ಅವನೊಳಗೆ ಅವಳಾಗಿ
ಎಲ್ಲ ಭಾವಗಳಲ್ಲೊಂದಾಗಿ
ಗೊಂದಲಕ್ಕೀಡು ಮಾಡುತ್ತಾಳೆ
ನನ್ನನ್ನೇ ನಾ ಪ್ರಶ್ನೆ ಮಾಡಿಕೊಳ್ಳವಂತೆ!
ಗಂಡಸಿನ ನಡೆ
ಗಡಸು ಕಾಲುಗಳು
ಮಾತೂ ಕೂಡ ಒರಟು
ಹೆಚ್ಚು ಕೆಮ್ಮಿದರೆ ಒಂದೇ ಏಟು
ಪಟಾಕಿ ಸಿಡಿಯುವ ಹಾಗೆ
ಸಿಡಿಲಾಗಿ ಭೋರ್ಗರೆವಳು
ಕೋಪಕ್ಕೆ ಇವಳದೇ ರೂಪವಿರಬೇಕು
ಮೋಟು ಜಡೆಯ
ಜೀನ್ಸ್ ತೊಡುಗೆಯ
ಗೋಧಿ ಬಣ್ಣದ ಒಣಕಲು ದೇಹ
ಕಾಜಲ್ ಬೇಡದ ಕಣ್ಣುಗಳು
ಲಿಪ್ಸ್ಟಿಕ್ಕನ್ನೇ ಹೋಲುವ ತುಟಿಗಳು
ಗುಳಿಕೆನ್ನೆಗಳೇ ಅವಳ ಅಲಂಕಾರ
ಮೂಗುತಿಯೇ ದೃಷ್ಟಿಬೊಟ್ಟು
ಮುಟ್ಟಿದರೆ ಖಂಡಿತ ದೊಡ್ಡ ಪೆಟ್ಟು
ಆದರೂ..
ನನ್ನವಳು ನೀವಂದುಕೊಂಡ ಹಾಗಲ್ಲ!
ಹೂದೋಟಕ್ಕೇ ಸುಗಂಧ ಸೂಸುವ ದುಂಬಿ
ಇಳೆಗೆ ಮಳೆಯ ಆಹ್ವಾನಿಸೋ ಮೂರುತಿ
ರಾಶಿ ಹಣ್ಣುಗಳಲ್ಲಿನ ಸ್ವಾದ
ಮನಬಿಚ್ಚಿ ಹಾರಾಡೋ ಹಕ್ಕಿ
ರಚ್ಚೆ ಹಿಡಿವಳು ಬಿಕ್ಕಿ ಬಿಕ್ಕಿ
ನನ್ನನ್ನೇ ಧ್ಯಾನಿಸುತ
ಮೌನ ಮರೆತು ಹಾಡುವಳು
ಆಗ ಭುವಿ ಹಸಿರ ಚೆಲ್ಲುವುದು
ಮಗುವಿಗಿಂತ ಸರಳ ಹೃದಯ
ತೊಟ್ಟಿಲಲ್ಲಿ ಮಲಗಲು ಸೈ
ನನ್ನ ಹಾಗೆ ಪಂಚೆ ಕಟ್ಟಿ..
ಬಣ್ಣ ಎರಚಲು ಸೈ
ಕುಂಟೆ ಬಿಲ್ಲೆ, ಕೂಸು ಮರಿ
ಬೆಳದಿಂಗಳ ಚುಕ್ಕಿಯ ಹೋಲುವ ಚಕೋರಿ
ಎಲ್ಲರಂತಲ್ಲ ನನ್ನ ಹಳ್ಳಿ ಕುವರಿ
ಅನಂತ ಕುಣಿಗಲ್