ಪ್ರಸ್ತುತ ರಂಗಭೂಮಿಯಲ್ಲಿ ಚಾಲನೆಯಲ್ಲಿರುವ ಕತೆಗಾರ, ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ಎಸ್ ಎನ್ ಸೇತೂರಾಂ ಅವರು ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಇವರ ನಾಟಕಗಳ ಓಘವೇ ಬೇರೆ ರೀತಿಯದು. ಇವರ ನಾಟಕಗಳಿಗೆ ಇವರದ್ದೇ ಆದ ಪ್ರೇಕ್ಷಕ ವರ್ಗವಿದೆ.
ಸೇತೂರಾಂ ಅವರ ನಾಟಕಗಳಲ್ಲಿ ಮಾತಿರುತ್ತೆ, ಮಾತಿನ ಚಾಟಿಯಷ್ಟೇ ಪ್ರಾಧಾನ್ಯತೆಯಿರುವ ಮೌನವಿರುತ್ತೆ! ಆಗ ಮೌನವೇ ಹೆಚ್ಚು ವಿಷಯಗಳನ್ನು ಸ್ಪುರಿಸುತ್ತೆ. ಎಲ್ಲಾ ದೃಶ್ಯದಲ್ಲಿನ ಡೈಲಾಗ್‍ಗಳು ನಾಟಕದಿಂದ ಹೊರ ಬಂದ ನಂತರವೂ ಮನದ ಮೂಲೆಯಲ್ಲೇ ಕೂತು ರಿಂಗಣಿಸುತ್ತಲೇ ಇರುತ್ತೆ.
ಯಾವುದೇ ರಂಗಸಜ್ಜಿಕೆಯ ವೈಭವೀಕರಣವನ್ನು ಬಯಸದ, ಕೆಲವೊಮ್ಮೆ ರಂಗ ಪರಿಕರಗಳನ್ನು ಅಪೇಕ್ಷಿಸದ ದೃಶ್ಯಗಳು ಇವರ ನಾಟಕಗಳಲ್ಲಿರುತ್ತೆ. ಇವೇನೂ ಇಲ್ಲದೆಯೂ ನಾಟಕವನ್ನು ತೂಗಿಸುವ, ಪ್ರೇಕ್ಷಕರ ಮನಸ್ಸನ್ನು ಹೊರ ಹರಿಯಗೊಡದೇ ರಂಗದಲ್ಲೇ ಕೇಂದ್ರೀಕರಿಸುವ ಗುರುತ್ವಾಕರ್ಷಣ ಶಕ್ತಿ ಸೇತೂರಾಂ ಅವರಲ್ಲಿದೆ. ಕ್ಷಣ ಕಾಲ ಪ್ರೇಕ್ಷಕನ ಚಿತ್ತ ಬೇರೆಡೆ ಸರಿದರೆ ತೂಕದ ಮಾತುಗಳು ಕಳೆದು ಹೋಗುತ್ತವೆ. ಪ್ರತಿ ಮಾತೂ ಪಾತ್ರದ ಜೀವಾಳ.
‘ಅತೀತ’ ನಾಟಕ ಇಂಗ್ಲಿಷ್ ರಂಗಕ್ಕೆ
ಸೇತೂರಾಂ ಅವರ ‘ಅತೀತ’ ನಾಟಕವನ್ನು ಇಂಗ್ಲಿಷಿನಲ್ಲಿ ‘Incomprehensible’ ಎಂಬ ಹೆಸರಲ್ಲಿ ಪ್ರದರ್ಶಿಸುತ್ತಿದ್ದಾರೆ. ‘ಸಾಲಿಡ್ ಬೈ ಪ್ಯಾಶನ್’ ಎಂಬ ತಂಡದ ಮೂಲಕ ಕ್ಯಾಲಿಫೋರ್ನಿಯಾದಲ್ಲಿ ಇದೇ ಏಪ್ರಿಲ್‍ನಲ್ಲಿ ಪ್ರದರ್ಶಿಸುವ ಯೋಜನೆಯಿದೆ. ಕನ್ನಡಿಗರಾದ ‘ಮೇಘಾ ಹೆರೂರ್’ ಅವರು ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ಈ ನಾಟಕವನ್ನು ತರ್ಜುಮೆ ಮಾಡಿದ್ದಲ್ಲದೇ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಹಾಗಾಗಿ ಸೇತೂರಾಂ ಅವರ ‘ಅತೀತ’ ನಾಟಕವು ಇಂಗ್ಲೀಷರಿಗೂ ತಲುಪುತ್ತಿರುವುದು ಹೆಮ್ಮೆಯ ಸಂಗತಿ.
ಫೆ.3 ರಂದು ‘ಉಚ್ಛಿಷ್ಟ’ ನಾಟಕ ಪ್ರದರ್ಶನ
‘ಉಚ್ಛಿಷ್ಟ’ ನಾಟಕವನ್ನು ಸೇತೂರಾಂ ಅವರೇ ರಚಿಸಿ, ನಿರ್ದೇಶಿಸಿದ್ದಾರೆ. ಅಲ್ಲದೇ ಇದರಲ್ಲಿ ತಾವೂ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ‘ಅನನ್ಯ’ ತಂಡದ ಮೂಲಕ ಈ ನಾಟಕವನ್ನು ಈ ಫೆಬ್ರವರಿ 3 ರಂದು ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶಿಸುತ್ತಿದ್ದಾರೆ. ಇಲ್ಲಿ ಮೂರೇ ಪಾತ್ರಗಳಿವೆ. ಅಮ್ಮ-ಮಗಳಾಗಿ ದಿವ್ಯ ಕಾರಂತ್ ಹಾಗೂ ಸೌಮ್ಯ ಅನಿಲ್ ರಾಜ್ ಹಾಗೂ ಪ್ರೊಫೇಸರ್ ಪಾತ್ರದಲ್ಲಿ ಸೇತೂರಾಮ್ ಇದ್ದಾರೆ. ಈ ನಾಟಕವು 2019 ರ ಸೆಪ್ಟೆಂಬರ್ 26ರಂದು ರಂಗಶಂಕರದಲ್ಲಿ ಮೊದಲ ಪ್ರದರ್ಶನವನ್ನು ಕಂಡಿತ್ತು.
ಈ ‘ಉಚ್ಛಿಷ್ಟ’ ನಾಟಕದ ಬಗ್ಗೆ ಸೇತೂರಾಂ ಅವರು ಇಲ್ಲಿ ಹಂಚಿಕೊಂಡಿದ್ದಾರೆ.
‘ಉಚ್ಛಿಷ್ಟ’ ಎನ್ನುವುದಕ್ಕೆ ಎಂಜಲು ಎನ್ನುವ ಅರ್ಥವಿದೆ. ತ್ಯಾಜ್ಯವೂ ಉಚ್ಛಿಷ್ಟವೇ, ಪಿತೃಶೇಷವೂ ಉಚ್ಚಿಷ್ಟವೇ! ಗುರು ಮುಖೇನ ಶಿಷ್ಯ ಸ್ವೀಕರಿಸುವ ವಿದ್ಯೆಯೂ ಕೂಡ ಉಚ್ಛಿಷ್ಟವೇ ಆಗಿರುತ್ತದೆ. ನಾವೀಗ ಬರೆಯುವ ಕತೆ, ಕಾದಂಬರಿ, ಕಾವ್ಯ ಎಲ್ಲದರಲ್ಲಿ ಬರುವ ಎಲ್ಲ ಪಾತ್ರಗಳೂ ಮಹಾಭಾರತದಲ್ಲಿ ಬಂದು ಹೋಗಿದೆ. ಹಾಗಾಗಿ ಅದನ್ನು ಮೀರಿ ಏನೂ ಬರೆಯುವಂತಿಲ್ಲ. ಹಾಗಾಗಿ ನಾವು ಏನೇ ಬರೆದರೂ ಅದು ‘ವ್ಯಾಸೋಚ್ಛಿಷ್ಟ’, ವ್ಯಾಸನ ಎಂಜಲು ಎನಿಸುವುದು. ಅದನ್ನೂ ಮೀರಿ ಯಾರೂ ಬರೆಯಲು ಸಾಧ್ಯವಿಲ್ಲ! ಹಾಗಾಗಿ ವ್ಯಾಸೋಚಿಷ್ಟ ಪದದ ಬಳಕೆ ಪ್ರಸ್ತುತ.
ನಾನಿಲ್ಲಿ ‘ಉಚ್ಛಿಷ್ಟ’ ಎನ್ನುವುದನ್ನು ಬಳಸುತ್ತಿರುವುದು ಬೇರೆ ಥರದಲ್ಲಿ. ಅಂದರೆ ಸಲ್ಲದ ಸಂಬಂಧಗಳನ್ನು ಮಾಡಿಕೊಂಡಿರ್ತಾರೆ. ಅಲ್ಲಿ ಕುಡಿಯೊಡೆದು ಬಿಟ್ಟಿರುತ್ತೆ. ಅದು ಈ ಸಮಾಜದಲ್ಲಿ ಉಳಿದು ಬಿಟ್ಟಿರುತ್ತೆ. ಅವುಗಳಿಗೊಂದು ಮುಕ್ತಾಯ ಹಾಡದೇ ಆ ಕಾರಣೀಕರ್ತರು ನಿರ್ಗಮಿಸಿ ಬಿಡ್ತಾರೆ. ಆಗ ಇಲ್ಲಿ ಉಳಿದುಕೊಂಡವರು ‘ಉಚ್ಚಿಷ್ಟ’ ಆಗ್ತಾರೆ. ಅದೇ ಈ ನಾಟಕದಲ್ಲಿನ ‘ಉಚ್ಛಿಷ್ಟ’ ದ ಅರ್ಥ!
ನನಗೆ ಈ ಸಿಂಗಲ್ ಪೇರೆಂಟಿಂಗ್ ಬಗ್ಗೆ ಆಲೋಚನೆ ಬಂತು. ಒಬ್ಬ ಪ್ರೊಫೆಸರ್ ಗೆ ಒಂದು ಹೆಂಗಸಿನೊಂದಿಗೆ ಸ್ನೇಹ ಇರುತ್ತೆ, ಅವರಿಗೊಂದು ಮಗುವೂ ಇರುತ್ತೆ. ಆ ಮಗುವಿನ ಮದುವೆಯ ವಿಷಯದಿಂದ ಈ ನಾಟಕ ತೆರೆದುಕೊಳ್ಳುತ್ತದೆ. ‘ಬದುಕು ಉದಾಹರಣೆ ಆಗದಿದ್ದರೆ ಬರಹ ಭಗವದ್ಗೀತೆ ಆಗಲ್ಲ’ ಎಂಬಂತಹ ಸಂಭಾಷಣೆ ಇಲ್ಲಿದೆ. ಒಂದೂವರೆ ಗಂಟೆಯಲ್ಲಿ ನಾಟಕವನ್ನು ಕಟ್ಟಿಕೊಡಲಾಗಿದೆ.
ಈ ಅಕಾಮಿಡಿಯೇಷನ್ಸ್ ಅನ್ನು ಸಾಹಿತ್ಯ ಲೋಕದಲ್ಲಿ ಸಾಕಷ್ಟು ಜನ ಮುಟ್ಟಿಲ್ಲ. ಹಾಗಾಗಿ ನಾನು ಈ ಸಾರಿ ಈ ಸಾರಸ್ವತ ಲೋಕದ ದಿಗ್ಗಜರ ಸ್ವಾರಸ್ಯಕರ ವ್ಯಕ್ತಿತ್ವಗಳನ್ನು ರಂಗಕ್ಕೆ ತಂದಿದ್ದೇನೆ. ಡಾಕ್ಟರೇಟ್ ಹಾಗೂ ಗೋಲ್ಡ್ ಮೆಡಲ್ ಗಳ ಹಿಂದಿನ ಕತೆಗಳ ಪದರಗಳನ್ನು ಪರಿಚಯಿಸಿದ್ದೇನೆ. ಅಲ್ಲಿ ಎಲ್ಲವೂ ನೇರ, ಆದರೆ ಅದನ್ನು ಕಂಡರೂ ಕಾಣದಂತೆ ಇರುವವರೇ ಹೆಚ್ಚು. ಆ ಪರಿಸರದಲ್ಲಿನ ಹೆಣ್ಣು ಮಕ್ಕಳ ಸ್ಥಿತಿಗತಿಗಳು ದಾರುಣವಾಗಿರುತ್ತವೆ.
ನಿಮ್ಮ ಇನ್ನಿತರ ನಾಟಕ ಹಾಗೂ ಕತೆಗಳಂತೆಯೇ ಇಲ್ಲಿಯೂ ಹೆಣ್ಣಿನ ಒಳಮನಸ್ಸಿಗೆ ಮಾತು ಕೊಟ್ಟಿದ್ದೀರಾ? ಎಂದ ಪ್ರಶ್ನೆಗೆ ಸೇತೂರಾಮ್ ಅವರು ಹೀಗೆ ಹೇಳುತ್ತಾರೆ:
“ಖಂಡಿತವಾಗಿಯೂ, ತ್ಯಾಜ್ಯವಾದ ಹೆಣ್ಣನ್ನು ಮೊದಲ ಪಂಕ್ತಿಯಲ್ಲಿ ಕೂರಿಸೊಲ್ಲ. ಮೇನ್ ಸ್ಟ್ರೀಮ್‍ನಲ್ಲಿ ಇಟ್ಕೋಳೊಲ್ಲ. ಸನ್ಮಾನಗಳಾಗಬಹುದು, ಮರ್ಯಾದೆಗಳನ್ನು ಮಾಡಬಹುದು, ಮೆಡಲ್‍ಗಳನ್ನು ಕೊಡಬಹುದು. ಎಲ್ಲಾನೂ ಮಾಡ್ತಾರೆ. ಆದರೆ ಸಾಂಸಾರಿಕ ಸಂಬಂಧಗಳಲ್ಲಿ ಒಂದು ಪಟ್ಟ ಕೊಡಲ್ಲ. ಅದೆಲ್ಲವೂ ಸಮಾಜದಲ್ಲಿ ಎಲ್ಲರಿಗೂ ಗೊತ್ತಿದ್ದರೂ ಅದನ್ನು ಕಂಡೂ ಕಾಣದಂತೆ ಇರುತ್ತಾರೆ. ಬಹಿರಂಗವಾಗಿಯೇ ನಡೆದರೂ ಚಕಾರವೆತ್ತರು. ದನಿ ಇರದ ಮಾತು ಆದಾಗಿರುತ್ತೆ! ಇದೇ ನಾಟಕದ ಹೂರಣ”.
ರಂಗಭೂಮಿಯಿಂದ ಸಾಹಿತ್ಯ ಕ್ಷೇತ್ರಕ್ಕೂ ಲಗ್ಗೆ
ಟಿ ಎನ್ ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯ ‘ನಾರಾಯಣಮೂರ್ತಿ’ ಆಗಿ ಖ್ಯಾತರಾದರು. ಆನಂತರ ತಮ್ಮದೇ ನಿರ್ದೇಶನದ ವಿಶಿಷ್ಟ ಧಾಟಿಯ `ಮಂಥನ’ ಧಾರಾವಾಹಿಯಿಂದಲೂ ಮತ್ತಷ್ಟು ಖ್ಯಾತರಾದರು.
ಅಷ್ಟಕ್ಕೆ ಸುಮ್ಮನೆ ನಿರದ ಸೇತೂರಾಂ ನಾಟಕ ಕ್ಷೇತ್ರಕ್ಕೂ ಕಾಲಿಟ್ಟರು. 2013 ರಲ್ಲಿ ತಮ್ಮ ಹೊಸ ನಾಟಕ ‘ನಿಮಿತ್ತ’ ದ ಮೂಲಕ ಪೂರ್ಣ ಪ್ರಮಾಣದಲ್ಲಿ ನಟನೆ ಹಾಗೂ ನಿರ್ದೇಶನಕ್ಕೆ ಇಳಿದರು. ಅಲ್ಲಿಂದ ಒಂದರ ಹಿಂದೆ ಒಂದರಂತೆ ಗತಿ, ಅತೀತ ನಾಟಕಗಳನ್ನು ಬರೆದು ನಟಿಸಿ ನಿದೇರ್ಶಿಸುತ್ತಾ ಬಂದರು. ಆನಂತರದಲ್ಲಿ ‘ಸ್ತ್ರೀ’ ನಾಟಕವನ್ನು ಬರೆದು ನಿರ್ದೇಶಿಸಿದರು.
ಇದರೊಂದಿಗೆ ‘ನಿಮಿತ್ತ’ ಹಾಗೂ ‘ಗತಿ’ ನಾಟಕವನ್ನು ಪುಸ್ತಕ ರೂಪಕ್ಕೂ ತಂದರು. ಅದು ಪಠ್ಯ ಪುಸ್ತಕಕ್ಕೂ ಆಯ್ಕೆಯಾಯ್ತು. ‘ನಾವಲ್ಲ’ ಹಾಗೂ ‘ದಹನ’ ಕಥಾಗುಚ್ಛವನ್ನು ಬರೆದು ಸಾಹಿತ್ಯ ಲೋಕಕ್ಕೂ ಕಾಲಿಟ್ಟರು. ‘ಗತಿ’ ಹಾಗೂ ‘ಅತೀತ’ ನಾಟಕಗಳನ್ನು ನಿರಂತರ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಅದರೊಂದಿಗೆ ಈ ಎರಡೂ ನಾಟಕಗಳನ್ನು ವಿಡಿಯೋ ರೂಪಕ್ಕೆ ತಂದು ಯೂಟ್ಯೂಬ್ ಕ್ಷೇತ್ರದ ಮೂಲಕ ಪ್ರೇಕ್ಷಕ ವೃಂದವನ್ನು ವಿಸ್ತರಿಸಿಕೊಂಡಿದ್ದಾರೆ.
‘ನಾವಲ್ಲ’ ಎರಡು ಕತೆಗಳು ರಂಗಕ್ಕೆ
ಸೇತೂರಾಂ ಅವರ ‘ನಾವಲ್ಲ’ ಪುಸ್ತಕದಲ್ಲಿನ ನೀಳ್ಗತೆ ‘ಕಾತ್ಯಾಯಿನಿ’ ಅನ್ನು ನಾಗೇಂದ್ರ ಶಾ ಹಾಗೂ ಮತ್ತೊಂದು ಕತೆ ‘ಮೋಕ್ಷ-ಮೌನಿ’ ಅನ್ನು ಭಗತ್ ರಾಜ್ ನಿರ್ದೇಶಿಸಿ ರಂಗಕ್ಕೆ ತಂದಿದ್ದಾರೆ. ಹೀಗಾಗಿ ಸೇತೂರಾಮ್ ಅವರ ಎರಡು ಕತೆಗಳು ಬೇರೆಯವರ ನಿರ್ದೇಶನದಲ್ಲಿ ರಂಗಕ್ಕೆ ಬಂದಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಹೊಸ ಧಾರಾವಾಹಿ ‘ಯುಗಾಂತರ’
ಸೇತೂರಾಂ ಅವರು ಹದಿನೈದು ವರ್ಷಗಳ ನಂತರ ಮತ್ತೆ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಸಿರಿಕನ್ನಡಕ್ಕಾಗಿ ‘ಯುಗಾಂತರ’ ವನ್ನು ಕತೆ ಹಾಗೂ ಸಂಭಾಷಣೆಯೊಂದಿಗೆ ನಿರ್ದೇಶನ ಮಾಡುತ್ತಿದ್ದಾರೆ. ನಾಡಿನ ಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಶೀರ್ಷಿಕೆ ಗೀತೆಯನ್ನು ಬರೆದಿದ್ದಾರೆ. ಪ್ರವೀಣ್ ಡಿ ರಾವ್ ಅವರ ಸಂಗೀತದಲ್ಲಿ ವಾರೀಶ್ರೀ ಅವರು ಹಾಡಿದ್ದಾರೆ. ಈ ಧಾರಾವಾಹಿಯಲ್ಲಿ ಸೇತೂರಾಂ ಅವರು ಪ್ರಮುಖ ಪಾತ್ರವನ್ನು ಕೂಡ ಮಾಡುತ್ತಿದ್ದಾರೆ. ಸಧ್ಯಕ್ಕೆ ಶ್ರೀ ಪತಿ ಮಂಜನ ಬೈಲು ಹಾಗೂ ದಿವ್ಯಾ ಕಾರಂತ್ ಅವರು ಆಯ್ಕೆಯಾಗಿದ್ದು ಉಳಿದ ಪಾತ್ರ ವರ್ಗಗಳು ಸೇರ್ಪಡೆಯಾಗಲಿವೆ. ‘ಮಂಥನ’ ಧಾರಾವಾಹಿಯ ನಂತರ ಈ ‘ಯುಗಾಂತರ’ದ ಮೂಲಕ ಮತ್ತೆ ತಮ್ಮ ಮಾತಿನ ಮೋಡಿಯಲ್ಲಿ ವಾರಕ್ಕೆ ಐದು ದಿನಗಳು ಪ್ರೇಕ್ಷಕರನ್ನು ಹಿಡಿದಿಡಲಿದ್ದಾರೆ.
ತುಂಕೂರ್ ಸಂಕೇತ್