ಎಸ್ ಎಲ್ ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ ಹಾಗು ತಾರೆ – ಆಶಾ ರಘು

ಡಾ.ಎಸ್.ಎಲ್.ಭೈರಪ್ಪನವರ ಉತ್ತರಕಾಂಡದ ಸಂವಾದದಲ್ಲಿ ಮಂಡಿಸಿದ ಪ್ರಬಂಧ

ನಮ್ಮ ಭಾರತೀಯ ಪುರಾಣ ಪರಂಪರೆಯಲ್ಲಿ ರಾಮನದು ಆದರ್ಶಪಾತ್ರ. ಅವನೇ ರಾಮಾಯಣದ ನಾಯಕ. ಅವನ ಆಜ್ಞಾಧಾರಕ ಹಾಗೂ ಪ್ರತಿ ಹೆಜ್ಜೆಗಳನ್ನು ಅನುಸರಿಸಿ ನಡೆಯುವವನು ಲಕ್ಷ್ಮಣ. ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ’ಉತ್ತರಕಾಂಡ’ ದಲ್ಲಿ ರಾಮ ಕಥಾ ನಾಯಕನೂ ಹೌದು, ಆದರ್ಶಪ್ರಾಯನೂ ಹೌದು. ಆದರೆ ಅವನಷ್ಟೇ ಉದಾತ್ತ ಪಾತ್ರವಾಗಿ, ಸ್ವತಂತ್ರ ಆಲೋಚನೆ, ನಿರ್ಧಾರಗಳನ್ನ ಮಾಡಬಲ್ಲವನಾಗಿ, ಕೆಲವೊಮ್ಮೆ ರಾಮನನ್ನು ಪ್ರತಿರೋಧಿಸುವವನಾಗಿಯೂ ಕಾಣಿಸುಕೊಳ್ಳುವ ಪ್ರಬಲ ಪಾತ್ರವಾಗಿ ಲಕ್ಷ್ಮಣ ಚಿತ್ರಿತಗೊಂಡಿದ್ದಾನೆ! ರಾಮ ಭಾವುಕತೆಯಲ್ಲಿ ಮೈಮರೆತು ತೇಲಿಹೋಗುತ್ತಿದ್ದರೆ, ಲಕ್ಷ್ಮಣ ಮೈಕೈಯಿಗೆ ಮಣ್ಣುಮೆತ್ತಿಕೊಂಡು ಬೆವರಿಳಿಸಿ ದುಡಿಯುತ್ತಿರುವನು! ರಾಮ ಧರ್ಮಕ್ಕೆ ಕಟ್ಟುಬಿದ್ದು ಅಹಿತವಾದ ನಿರ್ಧಾರಗಳನ್ನು ತೆಗೆದುಕೊಂಡರೆ, ಲಕ್ಷ್ಮಣ ವಾಸ್ತವದ ಚಿಂತನೆಯಿಂದ ಪ್ರತಿಭಟಿಸಿ ನಿಲ್ಲುವನು! ರಾಮ ತನ್ನ ಆಜ್ಞೆಯೆಂದು ಹೇರಿದಾಗ, ಲಕ್ಷ್ಮಣ ಆಜ್ಞಾನುಸಾರ ಅನಿವಾರ್ಯವಾಗಿ ನಡೆದುಕೊಂಡರೂ, ನಂತರ ಮತ್ತೆಂದೂ ಅದಕ್ಕೆ ಒಳಪಡದಂತೆ ರಾಜ್ಯದ ಗಡಿಯನ್ನೂ ದಾಟಿ ದೂರ ಸರಿದುಬಿಡುವನು! ಸೀತೆಯ ಮೇಲೆ ರಾಮನಿಗೆ ದಾಂಪತ್ಯದ ಅಧಿಕಾರವಿದ್ದರೆ, ಲಕ್ಷ್ಮಣನಿಗೆ ಎಂದೂ ಬತ್ತದ ಅಕ್ಕರೆ, ಕಾಳಜಿಗಳಿವೆ! 

ಇಡೀ ಕಾದಂಬರಿ ಸೀತೆಯ ಮನೋಮಂಥನವಾಗಿದೆ. ಅಲ್ಲಿ ಸಹಜವಾಗಿ ರಾಮನಿದ್ದಾನೆ. ಆದರೆ, ರಾಮನಷ್ಟೇ ಪ್ರಮುಖವಾಗಿ ಲಕ್ಷ್ಮಣನೂ ಇದ್ದಾನೆ! ಅಷ್ಟರಮಟ್ಟಿಗೆ ತನ್ನ ಮೈದುನನ ಕುರಿತು ಚಿಂತಿಸಬೇಕೆಂದರೆ, ಅವನ ಕುರಿತು ಆಕೆಗೆ ಇರುವ ಆಸಕ್ತಿಯಾದರೂ ಎಂಥದು!? ಯಾವ ಬಗೆಯದು? ಇಲ್ಲಿ ಕಾಮದ ಲೇಪವಿಲ್ಲ, ಪರಸ್ಪರ ಸಹೋದರ ಸಂಬಂಧವೂ ಅಲ್ಲ, ಸ್ನೇಹವೇ..? ಎಂದರೆ ಅದು ಬಹಳ ಸರಳವಾದ ವ್ಯಾಖ್ಯಾನವೆನ್ನಿಸುತ್ತದೆ! ’ಅಂತಃಕರಣಕ್ಕೆ ಸಂಬಂಧವೇ ಆಗಬೇಕೇನು?’ ಎನ್ನುವ ಸೀತೆಯ ಮಾತು ಇದಕ್ಕೆ ಒಪ್ಪುತ್ತದೆ! ಈ ಸೀತಾ-ಲಕ್ಷ್ಮಣರ ಸಂಬಂಧವನ್ನು ಒಂದು ಉದಾತ್ತ ನೆಲೆಯಲ್ಲಿ ಚಿಂತಿಸಬೇಕಾಗುತ್ತದೆ. ಇದು ಸ್ತ್ರೀಪುರುಷ ಸಂಬಂಧದ ಒಂದು ಭಿನ್ನ ಆಯಾಮ. ಇಂತಹುದೇ ಉದಾತ್ತನೆಲೆಯ ಕೆಲವು ಹೆಣ್ಣು-ಗಂಡುಗಳ ಸಂಬಂಧವನ್ನು ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಕಾಣಬಹುದು. ಉದಾಹರಣೆಗೆ, ಪರ್ವ ಕಾದಂಬರಿಯ ಕುಂತಿ-ವಿದುರರ ಸಂಬಂಧ, ಸಾಕ್ಷಿ ಕಾದಂಬರಿಯ ಸಾವಿತ್ರಿ-ಸತ್ಯಪ್ಪರ ಸಂಬಂಧ, ಮಂದ್ರ ಕಾದಂಬರಿಯ ರಾಂಕುಮಾರಿ-ಗೋರೆ ಸಾಹೇಬರ ಸಂಬಂಧ ಹಾಗೂ ವಂಶವೃಕ್ಷದ ಲಕ್ಷ್ಮೀ-ಶ್ರೀನಿವಾಸ ಶ್ರೋತ್ರಿಗಳ ಸಂಬಂಧ. ಇಲ್ಲಿ ಪರಸ್ಪರ ನಿಕಟವಾದ ಒಡನಾಟವಿದೆ, ಕಷ್ಟಸುಖಗಳ ವಿನಿಮಯವಿದೆ, ಕರುಣೆ-ಪ್ರೀತಿ-ಕಾಳಜಿ-ಮಮತೆಗಳಿವೆ, ಆಪ್ತಭಾವ-ಔದಾರ್ಯಗಳಿವೆ. ಈ ಸುಂದರ ಸಖ್ಯದಲ್ಲಿ ನಿರ್ಮಲ ಭಾವದ ಗಾಳಿಯು ನಡುವೆ ನಿರಾತಂಕವಾಗಿ ಸುಳಿದಾಡುತ್ತದೆ. 

ಅಣ್ಣ ರಾಮನಿಗೆ ಅಪರಿಮಿತವಾದ ಆಧ್ಯಾತ್ಮದ ಒಲವು-ತಿಳಿವುಗಳಿದ್ದರೆ, ತಮ್ಮ ಲಕ್ಷ್ಮಣನಿಗೆ ಲೌಕಿಕ ಜ್ಞಾನ ಅಧಿಕ. ಯಾವುದೇ ವಿಷಯವನ್ನು ಅಣ್ಣನು ಧಾರ್ಮಿಕ, ಪರಂಪರೆಗಳ ಹಿನ್ನೆಲೆಯಲ್ಲಿ ವಿವೇಚಿಸುವವನಾದರೆ, ತಮ್ಮ ವಾಸ್ತವದ ಸಂಗತಿಗಳ ಅರಿವಿನಿಂದ ಸ್ಪಂದಿಸುವನು. ಆಧ್ಯಾತ್ಮ ತನಗೆ ಒಗ್ಗದ ವಿಚಾರವೆಂದು ತಾನೇ ಹೇಳಿಕೊಳ್ಳುವನು. ಲಕ್ಷ್ಮಣನ ಲೋಕ ಜ್ಞಾನವೆಂತಹುದು ಮತ್ತು ಎಂತಹ ಕಠಿಣವೆನ್ನಿಸುವ ತನ್ನ ಹಾಗೂ ತನ್ನವರ ಬದುಕನ್ನೂ ತನ್ನ ಬುದ್ಧಿವಂತಿಕೆಯಿಂದಲೂ, ದಕ್ಷ ಕಾರ್ಯದಿಂದಲೂ ಸಹ್ಯವಾಗಿಸಿಕೊಳ್ಳುವ, ಕ್ರಮೇಣ ಸುಖಪ್ರದವನ್ನಾಗಿಯೇ ತಿರುಗಿಸಿಕೊಳ್ಳುವ ಕಸುವು ಎಂತಹುದು ಅನ್ನುವುದು ವನವಾಸ ಕಾಲದಲ್ಲಿ ಎಳೆ ಎಳೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ವನವಾಸದ ಆರಂಭದಲ್ಲಿ ಮೊದಮೊದಲು ಕಂದಮೂಲಗಳು, ಹಣ್ಣುಹಂಪಲುಗಳು ಇಷ್ಟೇ ಈ ಮೂವರ ಜೀವಕ್ಕೆ ಆಧಾರವಾಗಿರುತ್ತದೆ. ’..ಅದರಿಂದ ಹೊಟ್ಟೆಯೂ ತುಂಬುತ್ತಿರಲಿಲ್ಲ, ನಾಲಿಗೆಯೂ ಸ್ವೀಕರಿಸುತ್ತಿರಲಿಲ್ಲ. ತಿಂದರೂ ಬಹುಬೇಗ ಅರಗಿ ಹೊಟ್ಟೆ ಪುನಃ ಚುರುಗುಟ್ಟತ್ತಿತ್ತು. ಆಗ ಲಕ್ಷ್ಮಣ ಕಾಡಿನ ಬಳ್ಳಿ ಪೊದೆಗಳ ಸಂದಿಯಲ್ಲಿ ಹುಡುಕಿ ಕಾಡು ಹುರುಳಿ, ಕಾಡು ನವಣೆ ಸಜ್ಜೆಗಳನ್ನು ಪತ್ತೆ ಮಾಡಿದ. ಅರಣ್ಯದ ಮರ ಗಿಡ ಬಳ್ಳಿ ಅವುಗಳ ಜಾತಿ ಗುಣ ಮತ್ತು ಉಪಯೋಗಗಳ ಬಗೆಗೆ ಅವನಿಗೆ ಸ್ಪಷ್ಟ ತಿಳಿವಳಿಕೆ ಇತ್ತು. ಪರೀಕ್ಷೆ ಮಾಡಿ ತಿಳಿವಳಿಕೆಯನ್ನು ಬೆಳೆಸಿಕೊಳ್ಳುತ್ತಿದ್ದ. ರಾಮನು ಸಸ್ಯಗಳ ಚೆಲುವು, ಸೌಂದರ್ಯ, ಭವ್ಯತೆಗಳನ್ನು ಸವಿಯುವುದರಲ್ಲಿ, ನನಗೆ ತೋರಿಸುತ್ತಾ ಆ ರೂಪಗಳನ್ನು ವರ್ಣಿಸುವುದರಲ್ಲಿ ಮೈ ಮರೆಯುತ್ತಿದ್ದ. ಲಕ್ಷ್ಮಣನು ಕಾಡಿನಲ್ಲಿ ದೊರೆಯುತ್ತಿದ್ದ ಧಾನ್ಯಗಳನ್ನು ಹುಡುಕಿ ಬಿಡಿಸಿತಂದು ಕಲ್ಲುಚಪ್ಪಡಿಯ ಮೇಲೆ ಅರೆದು ಹಿಟ್ಟು ಮಾಡಿ ಅವನೇ ದಾರಿಯುದ್ಧಕ್ಕೂ ಹೊತ್ತು ತರುತ್ತಿದ್ದ ಪಾತ್ರೆಯಲ್ಲಿ ಬೇಯಿಸಿ ಕಾಡಿನಲ್ಲಿ ದೊರೆಯುತ್ತಿದ್ದ ಮೆಣಸಿನ ಕಾಳುಗಳನ್ನು ಅರೆದು ಬೆರೆಸಿ ನಿಂಬೆ ಹುಣಿಸೆಗಳಂಥ ಹುಳಿ ಹಣ್ಣುಗಳ ರಸವನ್ನು ಹಿಂಡಿ ತಿನ್ನಲು ಅರ್ಹವಾಗುವಂತೆ ಮಾಡಲು ಆರಂಭಿಸಿದ ನಂತರ ಹೊಟ್ಟೆ ತುಂಬತೊಡಗಿತು. ಕೈ ಕಾಲುಗಳಲ್ಲಿ ಶಕ್ತಿ ಕೂಡಿಕೊಂಡಿತು’ ಎಂದು ಸೀತೆ ಸ್ಮರಿಸಿಕೊಳ್ಳುತ್ತಾಳೆ. ನಂತರ ಭಾವುಕಳಾಗಿ, ’ಲಕ್ಷ್ಮಣಾ, ಗಂಡನೊಡನೆ ಅರಣ್ಯದ ಸೌಂದರ್ಯವನ್ನು ಸವಿಯುತ್ತಾ ಹದಿನಾಲ್ಕು ವರ್ಷವನ್ನು ಹದಿನಾಲ್ಕು ದಿನದಂತೆ ಕಳೆಯಬಹುದೆಂಬ ಭಾವುಕ ಕಲ್ಪನೆಯಿಂದ ಹೊರಟ ನನ್ನ ಹೊಟ್ಟೆಯು ನೀನಿಲ್ಲದಿದ್ದರೆ ಬತ್ತಿ ಸತ್ತುಹೋಗುತ್ತಿತ್ತು’ ಎಂದು ಮನದಲ್ಲೇ ಲಕ್ಷ್ಮಣನಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾಳೆ. 

ಕೇವಲ ಹೊಟ್ಟೆಯ ಪಾಡಿಗೆ ದಾರಿ ಕೊಂಡುಕೊಂಡಿದ್ದು ಮಾತ್ರವಲ್ಲ. ಕಾಡು ಮೃಗಗಳಿಂದಲೂ, ಬಿಸಿಲು, ಮಳೆ, ಚಳಿ, ಗಾಳಿಗಳಿಂದಲೂ ರಕ್ಷಿಸಿಕೊಳ್ಳುವುದಕ್ಕೆ ಹೋದ ಹೋದ ಕಡೆಗಳಲ್ಲೆಲ್ಲಾ ಅಲ್ಲೇ ಸಿಕ್ಕುವ ಮರ, ಗರಿ, ಮಣ್ಣುಗಳಿಂದ ನಿರ್ಮಿಸಿದ ಮನೆಗಳೆಷ್ಟು!? ’ ನಾವು ಹೋದ ಹೋದ ಕಡೆಗಳಲ್ಲೆಲ್ಲ ನೀನು ಗಟ್ಟಿ ಮರಗಳನ್ನು ಗುರುತಿಸಿ ಕಡಿದು ಒಂದರ ಪಕ್ಕಕ್ಕೆ ಒಂದರಂತೆ ನೆಟ್ಟು ನಡುವೆ ಕಲಸಿದ ಮಣ್ಣನ್ನು ಮೆತ್ತಿ ಮಳೆಯ ನೀರು ಸೋರದಂತೆ ಚಾವಣಿಗೆ ಗರಿಗಳನ್ನು ಜೋಡಿಸಿ ಮರದ ಬಾಗಿಲನ್ನು ನಿರ್ಮಿಸದಿದ್ದರೆ ರಾತ್ರಿಯ ವೇಳೆ ಕಾಡುಮೃಗಗಳ ನಡುವೆ ನಾವಿಬ್ಬರೂ ನಿದ್ರಿಸಲು ಸಾಧ್ಯವಾಗುತ್ತಿತ್ತೆ? ಇಷ್ಟಾದರೂ ನೀನು ಇಡೀ ರಾತ್ರಿ ಎಚ್ಚರವಾಗಿದ್ದು ಬಿಲ್ಲುಬಾಣಗಳ ಜೊತೆಗೆ ಹಿರಿದ ಕತ್ತಿ ಹಿಡಿದು ಕಾಯದಿದ್ದರೆ ನಾವು ಉಳಿಯುತ್ತಿದ್ದೆವೆ? ಸೂರ್ಯೋದಯವಾದ ನಂತರ ನೀನು ಕಾಡಿನಲ್ಲಿ ಹುಡುಕಿ ಆಹಾರ ಸಂಚಯ ಮಾಡಿ ಅಡುಗೆ ಮಾಡಿ ನಮ್ಮಿಬ್ಬರಿಗೂ ಬಡಿಸಿದ ಮೇಲೆ ನೀನು ಉಂಡು ಮಲಗಿ ನಿದ್ರಿಸುತ್ತಿದ್ದೆ. ನಿನ್ನ ನಿದ್ರೆಯೂ ಅಲ್ಪಕಾಲವೇ.’ ಎಂದು ಸೀತೆ, ತನ್ನಾ ಹಾಗೂ ತನ್ನ ಗಂಡನಿಗಾಗಿ ಲಕ್ಷ್ಮಣ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳುತ್ತಾಳೆ. ಮತ್ತು ಊರ್ಮಿಳೆಯಿಂದ ತಿಳಿದ ಜನಪದವನ್ನು ಅಭಿವೃದ್ಧಿಪಡಿಸಿಕೊಂಡು, ಸ್ವತಂತ್ರವಾಗ ಬದುಕುವ ವಿಚಾರದ ಹಿನ್ನೆಲೆಯಲ್ಲಿ, ’ನೀನು ನಿನ್ನ ಜನಪದವನ್ನು ಅಯೋಧ್ಯೆಗಿಂತ, ಭರತಖಂಡದ ಇತರ ಎಲ್ಲ ರಾಜ್ಯಗಳಿಗಿಂತ ಹಸಿವಿಲ್ಲದ ಬರವಿಲ್ಲದ ನಾಡಾಗಿ ಪರಿವರ್ತಿಸುವುದು ಖಚಿತ. ನೀನು ಕಾರ್ಯಶೀಲ’ ಎಂದು ಮನದುಂಬಿ ಹಾರೈಸುತ್ತಾಳೆ. ಲಕ್ಷ್ಮಣ ಯಾವ ಉದ್ದೇಶವನ್ನು ಹೊತ್ತು ರಾಮಸೀತೆಯ ಹಿಂದೆ ವನವಾಸಕ್ಕೆ ತೆರಳಿದನೋ, ಅದನ್ನು ಹೊರಟ ಗಳಿಗೆಯಿಂದಲೇ ಆರಂಭಿಸಿ, ಕೊನೆಯ ತನಕ ಶ್ರದ್ಧೆಯಿಂದಲೂ, ಸಮರ್ಥವಾಗಿಯೂ ನಿರ್ವಹಿಸುತ್ತಾನೆ. ಅವರಿಗಾಗಿ ಹಣ್ಣುಹಂಪಲುಗಳನ್ನು ಆಯ್ದು ತರಬಲ್ಲ, ಧಾನ್ಯ ಕಾಳುಗಳನ್ನು ಬೆಳೆಯಬಲ್ಲ, ಅರೆದು ಪುಡಿ ಮಾಡಿ ಬೇಯಿಸಬಲ್ಲ, ಮನೆ ಕಟ್ಟಬಲ್ಲ, ತೆಪ್ಪ, ಪಾದುಕೆಗಳನ್ನೂ ಮಾಡಬಲ್ಲ, ನಿದ್ದೆಗೆಡಬಲ್ಲ, ಕಾವಲು ಕಾಯಬಲ್ಲ, ಶಸ್ತ್ರವನ್ನೂ ಹಿಡಿಯಬಲ್ಲ, ಮುರಿದುಬೀಳಲಿದ್ದ ಸಂಬಂಧವನ್ನು ತನ್ನ ಶಕ್ತ್ಯಾನುಸಾರ ಮರಳಿ ಜೋಡಿಸಬಲ್ಲ! ಇವೆಲ್ಲವನ್ನೂ ಅವನು ಅವರಿಗಾಗಿ ಮಾಡುತ್ತಾನೆ. ಲಕ್ಷ್ಮಣ ನಿಜವಾದ ಸೇವಕ! ರಕ್ಷಕ! 

ವೇದಾವತಿ ನದಿಯ ದಡದಲ್ಲಿ.. ಆಗ ಸುಮಂತ್ರರು ಇನ್ನೂ ಜೊತೆಯಲ್ಲಿದ್ದಾರೆ.. ಗುಹನ ಊರನ್ನೂ ತಲುಪದ ಹೊತ್ತು.. ರಾಮ, ಸೀತೆಯರು ಸ್ನಾನ ಮಾಡಿ ಬಂದು ನೋಡುತ್ತಾರೆ. ಲಕ್ಷ್ಮಣ ಅದೆಲ್ಲಿಂದಲೋ ಹಲಸಿನ ಹಣ್ಣನ್ನು ಪತ್ತೆ ಮಾಡಿ ತಂದು, ಬಿಡಿಸಿಟ್ಟಿದ್ದಾನೆ! ಗಂಗಾನದಿ ದಾಟಿದ ಮೇಲೆ, ಬಹುದೂರ ಭಾರ ಹೊತ್ತು ನಡೆದ ನಂತರ ಎದುರಿಗೆ ಒಂದು ಗುಡ್ಡ ಕಾಣಿಸುತ್ತೆ. ಎದೆ ಎತ್ತರದ ಕಿರು ಎಲೆಗಳ ಕಪ್ಪು ಹಸಿರಿನ ಗಿಡಗಳು ಕಾಣುತ್ತವೆ. ಲಕ್ಷ್ಮಣ ಅಲ್ಲಿ ಕ್ಷಣ ನಿಂತು ನೋಡ್ತಾನೆ, ಹೇಳ್ತಾನೆ ’ಅಣ್ಣ, ನಮಗೆ ಆಹಾರ ಸಿಕ್ಕಿದೆ. ದೇವರ ದಯ!’ ಗಿಡದ ಕಂಕುಳಿಗೆ ಕೈ ಹಾಕಿ, ಹಸಿರು ಹಣ್ಣುಗಳನ್ನು ಕಿತ್ತು, ತಾನು ಮೊದಲು ರುಚಿ ನೋಡಿ, ನಂತರ ಅವರಿಬ್ಬರಿಗೂ ಕೊಡ್ತಾನೆ. ತಾಯಿಯಂತೆ ಮುಂದಿನ ಹೊತ್ತಿನ ಊಟದ ಚಿಂತೆಯೂ ಮಾಡುವವನು ಅವನು. ರಾತ್ರಿಗೆ ಇರಲೆಂದು, ಇನ್ನಷ್ಟು ಕಿತ್ತು ಸೀತೆಯ ಮಡಿಲಿಗೆ ಹಾಕುತ್ತಾನೆ. ರಾಮ ಅದುವರೆಗೂ ತಾನು ತಿಂದಿರದ, ಆ ಹಣ್ಣಿನ ಹೆಸರೇನೆಂದು ಕೇಳುತ್ತಾನೆ. ಲಕ್ಷ್ಮಣ, ’ಕಕ್ಕೆ ಹಣ್ಣು ಅಂತ. ದೊಡ್ಡ ಮರಗಳ ಮಧ್ಯೆ ಬೆಳೆಯೋಲ್ಲ. ಕಲ್ಲು ನೊರಜಿನ ಭೂಮಿಯಲ್ಲಿ ಮಾತ್ರ ಬೆಳೆಯುತ್ತೆ’ ಅಂತ ಮಾಹಿತಿಯನ್ನೂ ಕೊಡುತ್ತಾನೆ.

ಅದರ ಮುಂದಿನ ಹೊತ್ತು.. ಯಾವುದೋ ಕಲ್ಲು ಮಂಟಪದಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ಒಣಗಿದ ತೊಗಟೆಗಳನ್ನು ಕಿತ್ತು ತಂದು, ಎರಡು ಕಲ್ಲುಗಳನ್ನು ಕುಕ್ಕಿ ಕಿಡಿ ಮಾಡಿ ತೊಗಟೆಗಳನ್ನು ಊದಿ ಬೆಂಕಿ ಹೊತ್ತಿಸಿ, ತನ್ನ ಗಂಟಿನಿಂದ ಬೆಳಗ್ಗೆ ತಿಂದ ಹಲಸಿನ ಹಣ್ಣಿನ ಬೀಜಗಳನ್ನು ಹೊರ ತೆಗೆದು ಆ ಬೆಂಕಿಗೆ ಹಾಕುತ್ತಾನೆ. ನಂತರ, ’ಹಾಂ, ಭೋಜನ ಸಿದ್ಧವಾಗಿದೆ. ಎದ್ದು ಕೈಕಾಲು ತೊಳೆಯಿರಿ. ಕಕ್ಕೆ ಹಣ್ಣು ನಾಳೆ ಬೆಳಗ್ಗೆಗೆ ಇರಲಿ’ ಅಂತಾನೆ. ಹೀಗೆ ವನವಾಸದ ಪ್ರತಿ ಹೊತ್ತಿನ ಹೊಟ್ಟೆಯ ಪಾಡಿಗೆ ತಂದು ಹಾಕುವ ತಂದೆಯೂ ಅವನೇ! ಮಾಡಿ ಬಡಿಸುವ ತಾಯಿಯೂ ಅವನೇ! ಲಕ್ಷ್ಮಣನಿಗೆ ಸಿಟ್ಟು, ಸೆಡವುಗಳು ಇರುವಂತೆ, ಅವನಿಗಿರುವ ಅನುಸರಿಸಿಕೊಳ್ಳುವ, ನಿರ್ಮಾಣವಾಗುವ ಹೊಸ ಸ್ಥಿತಿಗೆ ಹೊಂದಿಕೊಳ್ಳುವ ಗುಣವೂ ಇದೆ. ಕೇವಲ ಹಣ್ಣುಹಂಪಲುಗಳಿಂದಲೇ ದೇಹಕ್ಕೆ ಶಕ್ತಿ ಬರುವುದಿಲ್ಲವೆಂದು ಮನಗಂಡು, ಕಾಳು, ಧಾನ್ಯಗಳನ್ನು ಹುಡುಕಿ ತರುತ್ತಾನೆ. ಅದನ್ನು ಬಿತ್ತಿ ಬೆಳೆಯಲೂ ಆಲೋಚಿಸುತ್ತಾನೆ. ಇದರಲ್ಲಿ ರಾಮನಿಗೆ ಧರ್ಮಚ್ಯುತಿ ಕಾಣಿಸುತ್ತದೆ. ಕೃಷಿಜನ್ಯವಾದದ್ದು ಕೂಡದು, ವನಜನ್ಯವಾದದ್ದಷ್ಟೇ ಸೇವಿಸಬೇಕು ಎಂಬುದು. ಆಹಾರ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸುತ್ತಿದ್ದ ಲಕ್ಷ್ಮಣನಿಗೆ ಈ ಮಾತು ಕೇಳಿ ಸಿಟ್ಟೇ ಬರುತ್ತದೆ. ವನಜನ್ಯದ ಬೀಜದಿಂದಲೇ ಕೃಷಿಜನ್ಯವಾಗುವುದು ಅಂತ ವಾದಿಸಿ, ನಾವು ಮೂವರೂ ಹೇಗೆ ಬಡಕಲಾಗಿದ್ದೇವೆ ನೋಡು ಎಂದೆಲ್ಲಾ ಹೇಳಿ ಒಪ್ಪುವಂತೆ ಮಾಡುತ್ತಾನೆ. ಭರತನಿಗೆ ಪಾದುಕೆ ಕೊಟ್ಟ ಮೇಲೆ ಪಾದುಕೆ ಹಾಕಿಕೊಳ್ಳುವುದನ್ನೇ ರಾಮ ನಿರಾಕರಿಸಿಬಿಡುತ್ತಾನೆ. ನನ್ನ ಪಾದುಕೆಯನ್ನಾದರೂ ಹಾಕಿಕೋ ಎಂದು ಲಕ್ಷ್ಮಣ ಹೇಳಿದರೆ ಕೇಳುವುದಿಲ್ಲ. ರಾಮ ಬರಿಗಾಲಿನಲ್ಲಿ ನಡೆದಾಡುವಾಗ, ತಾನು ಉಪಯೋಗಿಸಬಹುದೇ ಎಂಬ ಪ್ರಶ್ನೆಯು ಹುಟ್ಟಿ ಲಕ್ಷ್ಮಣನೂ ಪಾದುಕೆಯನ್ನು ತ್ಯಜಿಸುತ್ತಾನೆ. ಇವರಿಬ್ಬರೂ ತ್ಯಜಿಸಿರುವಾಗ ತಾನೊಬ್ಬಳು ಉಪಯೋಗಿಸಿದರೆ ಚೆಂದವೇ ಎನ್ನುವ ವಿಚಾರದಿಂದ ಸೀತೆಯೂ ತ್ಯಜಿಸಿಬಿಡುತ್ತಾಳೆ. ಹೀಗೆ ಮೂವರೂ ಬರಿಗಾಲಿನಲ್ಲಿ ನಡೆಯುತ್ತಾ, ನಿತ್ಯ ಮುಳ್ಳು ತೆಗೆದುಕೊಳ್ಳುವುದಕ್ಕೆಂದೇ ಕೆಲ ಕಾಲ ಮೀಸಲಿರಿಸಬೇಕಾದ ಅನಿವಾರ್ಯತೆ ಬರುತ್ತದೆ. ಆಗ ರಾಮ, ಸೀತೆಯರಿಬ್ಬರ ಕಾಲುಗಳ ಮುಳ್ಳನ್ನೂ ಲಕ್ಷ್ಮಣ ತೆಗೆಯುತ್ತಿದ್ದನಷ್ಟೇ. 

ಚಿತ್ರಕೂಟದಲ್ಲಿ ಭರತ, ತಾಯಿಯಂದಿರು, ಮಂತ್ರಿ ಮೊದಲಾದವರೆಲ್ಲ ಬಂದು ಹೋದ ಮೇಲೆ ರಾಮನಿಗೆ ಆ ಜಾಗದಲ್ಲಿ ಇರುವುದಕ್ಕೆ ಇಷ್ಟವಾಗುವುದಿಲ್ಲ. ಅದಕ್ಕೆ ಅವನು ಕೊಡುವ ಕಾರಣಗಳು ಒಪ್ಪತಕ್ಕದ್ದೇ ಆದರೂ, ಆ ಜಾಗದಲ್ಲಿ ವಾಸಿಸಲು ಲಕ್ಷ್ಮಣ ಎಷ್ಟೆಲ್ಲಾ ಅನುಕೂಲಗಳನ್ನು ಆವರೆಗೆ ಮಾಡಿದ್ದಾನೆ! ಮನೆಮಾಡು, ಕೃಷಿ ಭೂಮಿ ಮೊದಲಾಗಿ ಎಲ್ಲಾ. ಆದರೆ, ರಾಮ ಹಾಗೆ ನುಡಿದ ಮೇಲೆ ಮರುಮಾತಾಡದೆ, ಇದ್ದದ್ದನ್ನು ಇದ್ದ ಹಾಗೆ ಬಿಟ್ಟು, ಎಷ್ಟನ್ನು ಹೊರಲು ಸಾಧ್ಯವಾಗುತ್ತದೆಯೋ, ಅಷ್ಟನ್ನು ಹೊತ್ತು ಹೊರಡಲು ಅನುವಾಗುತ್ತಾನೆ. ವರ್ಷಗಳ ಕಾಲ ಅಲೆಯುತ್ತಾ, ಎಲ್ಲೆಂದರಲ್ಲಿ ’ಕಟ್ಟು ಈ ಜಾಗದಲ್ಲೊಂದು ಬಿಡಾರವ’ ಎಂದೊಡನೆ ತಿಂಗಳುಗಟ್ಟಲೆ ಶ್ರಮಿಸಿ ಮತ್ತೆ ಕಟ್ಟುತ್ತಾನೆ. ’ಬಲಭುಜಕ್ಕೆ ಇಳಿ ಹಾಕಿಕೊಂಡ ಗುದ್ದಲಿ, ತಲೆಗೆ ಶಿರಸ್ತ್ರಾಣದಂತೆ ದಬ್ಬ ಹಾಕಿಕೊಂಡ ತಪ್ಪಲೆ, ಸೊಂಟಕ್ಕೆ ಸಿಕ್ಕಿಸಿಕೊಂಡ ಮಚ್ಚು, ರಾಮನೂ ಕೆಲವಸ್ತುಗಳನ್ನು ಹಿಡಿದಿದ್ದ.. ಆದರೆ ಅಣ್ಣನಿಗಿಂತ ತಮ್ಮನೇ ಹೆಚ್ಚುಭಾರ ಹೊತ್ತಿದ್ದ’ ಎಂಬ ಸೀತೆಯ ನೆನಪಿನ ಮಾತನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. 

ಯಾವುದೋ ಗ್ರಾಮದ ಜನ ಅಲ್ಲಿಯೇ ತಮ್ಮೊಂದಿಗೆ ಉಳಿಯಬೇಕೆಂದು ಕೇಳಿಕೊಂಡಾಗ, ಲಕ್ಷ್ಮಣ, ’ಇಲ್ಲೇ ಹತ್ತಿರದ ಕಾಡಿನಲ್ಲಿರೋಣ. ಈ ಊರೂ ಹತ್ತಿರ ಇರುತ್ತೆ. ಮಾತಿಗೆ ಮನುಷ್ಯಸಂಪರ್ಕವಿಲ್ಲದೆ ಇನ್ನೂ ಹೀಗೆಯೇ ಇದ್ದರೆ ಬುದ್ಧಿ ಕೆಡುಲ್ಲವೆ?’ ಎಂಬ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ರಾಮ, ’ಇಂತಹ ಅನುಕೂಲಕರ ಗ್ರಾಮದ ಒತ್ತಾಸೆಯ ಜೀವನ ವನವಾಸ ಹೇಗಾಗುತ್ತೆ? ನಿನಗೆ ವನವಾಸದ ಜೀವನ ಸಾಕಾಗಿದ್ದರೆ ಅಯೋಧ್ಯೆಗೆ ಹಿಂದಿರುಗು, ಸೀತೆಯನ್ನೂ ಬೇಕಿದ್ದರೆ ಕರೆದೊಯ್ಯಿ. ನಾನಂತೂ ನಿಜವಾದ ಅರಣ್ಯವಾಸ ಮುಗಿಸಿಯೇ ಬರುತ್ತೀನಿ’ ಅಂತಾನೆ. ’ಸ್ವಯಂ ಹಿಂಸೆ. ಅವಲಂಬಿತರ ಹಿಂಸೆಯೇ ನಿನ್ನ ಧರ್ಮದ ತಿರುಳೇನು? ಯಾಕೆ ಇಷ್ಟು ಅತಿ ಸೂಕ್ಷ್ಮವಾಗ್ತೀಯ?’ ಎಂದು ಬೇಸರ ವ್ಯಕ್ತ ಪಡಿಸುತ್ತಾನೆಯೇ ಹೊರತು, ರಾಮನ ಇಚ್ಛೆಯಂತೆ ಪಯಣ ಮುಂದುವರಿಸಲು ಸಜ್ಜಾಗುತ್ತಾನೆ. ’ ಹೀಗೆ, ಇಡೀ ರಾತ್ರಿ ನಿದ್ದೆಗೆಟ್ಟಿದ್ದರೂ, ತೋಲನ ತಪ್ಪದೆ ಮರುದಿನ ಮಣಭಾರ ಹೊತ್ತು ನಡೆಯಬಲ್ಲ ಲಕ್ಷ್ಮಣನು ಪರಿಸ್ಥಿತಿಯೊಂದಿಗೆ, ಅಣ್ಣ ಅತ್ತಿಗೆಯರ ಮನಸ್ಥಿತಿಯೊಂದಿಗೆ ಅನುಸರಿಸಿಕೊಂಡು ಸಹಪಯಣವನ್ನು ಮಾಡುತ್ತಾನೆ. ಲಕ್ಷ್ಮಣ ಯಾವ ತಪ್ಪನ್ನೂ ಮಾಡದೆ, ವಿನಾಕಾರಣನ ನಿಂದನೆಗೆ ಗುರಿಯಾಗುವ ಸಂದರ್ಭ ಮತ್ತೆ ಮತ್ತೆ ಬರುತ್ತೆ. 

ಗುಹನ ಸಹಾಯದಿಂದ ನದಿ ದಾಟುತ್ತಿರುವ ರಾಮ ಲಕ್ಷ್ಮಣ ಸೀತೆ

ಇಂತಹ ಒಂದು ಸಂದರ್ಭ, ಸೀತೆಯನ್ನ ವಾಲ್ಮೀಕಿ ಮಹರ್ಷಿಗಳ ಆಶ್ರಮದ ಸಮೀಪ ಬಿಟ್ಟು ಹೋಗುವುದು. ಆಗ, ’ಮಹಾರಾಣಿ, ನಾನು ರಾಜಾಜ್ಞೆಯನ್ನು ಕಾರ್ಯಗತಗೊಳಿಸಲು ಬಂದಿದ್ದೀನಿ. ಮಹಾರಾಜರು ತಮ್ಮನ್ನು ಪರಿತ್ಯಜಿಸಿದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ಹೇಳಿ ಯೋಧನ ಬಿರುಸಿನಿಂದ ಹೊರಟುಹೋಗುತ್ತಾನೆ! ಲಕ್ಷ್ಮಣನೆಂಥಾ ಕ್ರೂರಿ ಎನಿಸುತ್ತದೆ ಸೀತೆಗೆ! ’ನೀನು ಸತ್ತುಹೋಗು..’ ಎನ್ನುವ ಶಾಪವೂ ಅವಳ ನಾಲಿಗೆಯ ತುದಿಗೆ ಬಂದುಬಿಡುತ್ತದೆ! ಆದರೆ ಲಕ್ಷ್ಮಣನ ಮನೋಗಥ ಅವಳಿಗೇನು ಗೊತ್ತು? ರಾಮನ ನಿರ್ಧಾರವನ್ನ ವಿರೋಧಿಸಿ ಎಷ್ಟು ಸುದೀರ್ಘ ಚರ್ಚೆ ನಡೆಸಿದ್ದಾನೆ. ’ರಾವಣನಂಥ ಹಾದರಬಡಕನ ವಶದಲ್ಲಿದ್ದ ಹೆಂಡತಿ ರಾಜಸಿಂಹಾಸನದಲ್ಲಿ ಕೂತರೆ ರಾಜ್ಯದಲ್ಲಿ ಕ್ಷೋಭೆಯಾಗುತ್ತೆ’ ಅನ್ನುವ ಜನರ ಗುಲ್ಲಿಗೆ ಹೆದರಿ ಸೀತೆಯನ್ನ ಕಾಡಿಗೆ ಅಟ್ಟುವ ಬದಲು, ಸರಿಯಾದ ಬೇಹಗಾರರನ್ನ ಬಿಟ್ಟು ಇಂಥ ಗುಲ್ಲು ಎಬ್ಬಿಸುತ್ತಾ ಇರೋರಲ್ಲಿ ಒಂದಿಬ್ಬರನ್ನ ಕರೆತಂದು ನೇಣುಗಟ್ಟಿದರೆ ಆಗ ಗುಲ್ಲಿನ ಸದ್ದಡಗುತ್ತೆ’ ಅಂತ ಸಹಲೆ ಕೊಟ್ಟಿದ್ದಾನೆ, ವಾದಿಸಿದ್ದಾನೆ. ’ಇದು ನನ್ನಿಂದ ಆಗದ ಕೆಲಸ’ ಅಂತ ತಿರಸ್ಕರಿಸಿ ಕೂಡಾ ಇದ್ದಾನೆ. ಆನಂತರ ರಾಜಾಜ್ಞೆ ಎನ್ನುವ ಉರುಳಿಗೆ ಜೋತು ಬೀಳದೆ ಅನ್ಯ ಮಾರ್ಗ ಕಾಣದೆ ಅಸಹಾಯಕತೆಯಿಂದ ಹಲುಬಿದ್ದಾನೆ. ರಾಜಕೀಯ ವಿಷಯವಾದ್ದರಿಂದ ಹೆಂಡತಿ ಊರ್ಮಿಳೆಯಲ್ಲಿಯೂ ಹೇಳಿಕೊಳ್ಳದೆ, ಗರ್ಭಿಣಿ ಸೀತೆಯ ಮುಂದಿನ ಭವಿಷ್ಯವನ್ನ ನೆನೆದು ಒಬ್ಬನೇ ಕೊರಗುತ್ತಾನೆ. ರಾತ್ರಿ ಪೂರ್ತಿ ನಿದ್ದೆಯಿಲ್ಲದೆ ಕಳೆದಿರುತ್ತಾನೆ. ಸೀತೆಯನ್ನು ಬಿಟ್ಟು, ಆ ನೋವಿನ ಭಾರದಿಂದ ಅಲ್ಲಿಂದ ಹಿಂದಿರುಗಿದ ಮೇಲೆ ಮತ್ತೆ ರಾಜಾಜ್ಞೆಯ ಅಲಗಿಗೆ ಇನ್ನೆಂದೂ ಸಿಗಬಾರದೆಂಬ ಉದ್ದೇಶದಿಂದಲೂ, ಸೀತೆಯ ವಿಚಾರದಲ್ಲಿ ರಾಮ ತೆಗೆದುಕೊಂಡು ಅನ್ಯಾಯದ ನಿರ್ಧಾರವನ್ನು ತಿರಸ್ಕರಿಸುವ ನಿಟ್ಟಿನಿಂದಲೂ, ಅಯೋಧ್ಯೆಯಿಂದ ದೂರ ಸರಿದು ಸ್ವತಂತ್ರ ಜೀವನ ನಡೆಸುತ್ತಾನೆ ಎನ್ನುವುದು ಮುಂದಿನ ಮಾತು. 

ಇನ್ನೊಂದು ಸಂದರ್ಭ.. ಪಂಚವಟಿಯಲ್ಲಿ ಸೀತೆಯ ಅಪಹರಣದ ಅಹಿತಕರ ಸನ್ನಿವೇಶ. ರಾಮ ಸೀತೆಗಾಗಿ ಜಿಂಕೆಯನ್ನ ಹಿಡಿದು ತರೋಕ್ಕೆ ಹೋಗಿದ್ದಾನೆ. ಬಹಳ ಹೊತ್ತು ಕಳೆದರೂ ಹಿಂದಿರುಗಿಲ್ಲ. ಇದಾಗಲೇ ಅವಳಿಗೆ ಆತಂಕವಾಗಿದೆ. ಆ ಆತಂಕಕ್ಕೆ ಇನ್ನಷ್ಟು ಪುಷ್ಟಿ ಕೊಡಲು ’ಹಾ ಸೀತಾ, ಹಾ ಲಕ್ಷ್ಮಣ’ ಎನ್ನುವ ರಾಮನ ದನಿ ಕೇಳಿಸುತ್ತದೆ. ಅದೂ ಮತ್ತೆ ಮತ್ತೆ! ಲಕ್ಷ್ಮಣನಿಗೆ ’ರಾಮನ ದನಿ ಕೇಳಿಸ್ತಾ ಇಲ್ಲವೇ? ಅಪಾಯದಲ್ಲಿದ್ದಾನೆ! ಬೇಗ ಅವನ ರಕ್ಷಣೆಗೆ ಹೋಗು’ ಅಂತ ಮತ್ತೆ ಮತ್ತೆ ಹೇಳ್ತಾಳೆ. ಅವನು ’ಅದು ನಿನ್ನ ಭ್ರಮೆ. ಇದು ರಾಕ್ಷಸರ ಬೀಡು. ಇಲ್ಲಿ ನಿನ್ನ ಒಬ್ಬಳನ್ನೇ ಬಿಟ್ಟು ನಾನು ಹೋಗೋಲ್ಲ. ರಾಮನಿಗೆ ಅಂತಹ ಯಾವುದೇ ಅಪಾಯವಾಗೋಲ್ಲ’ ಅಂತ ಅವನೂ ಸಮಾಧಾನಪಡಿಸಲು ಯತ್ನಿಸ್ತಾನೆ. ಆಗ ಕೋಪಗೊಳ್ಳುವ ಸೀತೆ ಆಡಬಾರದ ಮಾತುಗಳನ್ನೆಲ್ಲಾ ಆಡಿ ಅವನನ್ನ ನಿಂದಿಸ್ತಾಳೆ. ’ನಿನಗೆ ನನ್ನ ಮೇಲೆ ಬಯಕೆಯಾಗಿದೆ. ಹನ್ನೊಂದು ವರ್ಷದಿಂದ ಹೆಂಡತಿಯ ಸಹವಾಸವಿಲ್ಲದೆ ಹಸಿದಿದ್ದೀಯ. ನಿನ್ನಣ್ಣ ಸತ್ತರೆ ನಿರಾತಂಕವಾಗಿ ನನ್ನನ್ನ ಅನುಭವಿಸಬಹುದು ಅನ್ನುವ ನೀಚಮನಸ್ಸಿನಿಂದ ಹೀಗೆ ಹೇಳ್ತಾ ಇದ್ದೀಯ. ಇಷ್ಟಕ್ಕೂ ನೀನು ರಾಮನ ಸ್ವಂತ ತಮ್ಮನಲ್ಲ, ದಾಯಾದಿ. ನಿನ್ನ ಯೋಗ್ಯತೆ ತಿಳಿಯಿತು’ ಅಂತೆಲ್ಲಾ ಹಳಿಯುತ್ತಾಳೆ. ಆಗ ಅವಳ ಮಾತಿಗೆ ಅಸಹ್ಯ ಹುಟ್ಟಿ, ನೊಂದುಕೊಂಡರೂ, ’ಗುಹೆಯ ಬಾಗಿಲಿಗೆ ಸೌದೆಕಟ್ಟುಗಳನ್ನಿಟ್ಟು ಭದ್ರಪಡಿಸಿಕೊಂಡು ಒಳಗಿರು’ ಎಂಬ ಕಾಳಜಿಯ, ಎಚ್ಚರಿಕೆಯ ಮಾತನ್ನು ಹೇಳಿ ಅಲ್ಲಿಂದ ಹೊರಡುತ್ತಾನೆ. ಜಿಂಕೆಯ ಬೆನ್ನತ್ತಿ ಕಾಡಿನ ಯಾವುದೋ ಮೂಲೆಗೆ ಹೋಗಿದ್ದ ರಾಮನನ್ನ ಸಂಧಿಸಿದರೆ, ಅಲ್ಲಿಯೂ ರಾಮನಿಂದ ಲಕ್ಷ್ಮಣನಿಗೆ ಮತ್ತದೇ ಬಗೆಯ ನಿಂಧನೆ! ’ಅವಿವೇಕಿ, ಸೀತೆ ಒಬ್ಬಳನ್ನೇ ಬಿಟ್ಟು ಬಂದೆಯಾ? ನಿನ್ನದು ಮನುಷ್ಯಬುದ್ಧಿಯೋ ಕತ್ತೆಯ ಬುದ್ಧಿಯೋ? ಇದು ಬರೀ ಕತ್ತೆಬುದ್ಧಿಯಲ್ಲ. ಹನ್ನೊಂದು ವರ್ಷ ನೀನು ಹೆಂಡತಿಯ ಸಾಮಿಪ್ಯವಿಲ್ಲದೆ ಶುಷ್ಕನಾಗಿದೀಯ. ನಾನು ನನ್ನ ಹೆಂಡತಿಯ ಸಾಮೀಪ್ಯದಲ್ಲಿರುವುದಕ್ಕೆ ಹೊಟ್ಟೆಕಿಚ್ಚಿನಿಂದ ಅವಳನ್ನ ಅಪಾಯಕ್ಕೆ ಒಡ್ಡಿ ನನ್ನ ರಕ್ಷಣೆಯ ನೆಪದಲ್ಲಿ ಓಡಿ ಬಂದಿದೀಯ. ನೀಚ ನೀನು!’ ಇದು ಲಕ್ಷ್ಮಣನ ನಿಷ್ಕಲ್ಮಶ ಕಾಳಜಿಗೂ, ಸೇವೆಗೂ ಈ ಗಂಡ-ಹೆಂಡಿರು ಕೊಡುವ ಪಾರಿತೋಷಕ! 

ರಾಮ ಸೀತೆಯರಿಗೆ ಲಕ್ಷ್ಮಣನ ಕಾವಲು

ರಾಮ,ಸೀತೆಯರು ಕಾಡಿಗೆ ಹೊರಟಾಗ, ಅಯೋಧ್ಯೆಯಲ್ಲಿ ಭರತನ ಪಟ್ಟವಾಗುವ ವಿಚಾರವಿತ್ತು. ಅವನು ರಾಜನಾದರೂ, ರಾಮನಿಲ್ಲದ ಜಾಗದಲ್ಲಿ ಅವನ ನಂತರದ ಹಿರೀಕ ಅನ್ನುವ ಗೌರವ, ಸ್ಥಾನಮಾನ ತನಗೆ ಖಂಡಿತಾ ಸಿಕ್ಕೇ ಸಿಗುತ್ತಿತ್ತು. ಭರತ ದುರ್ಬಲನಾದ ದೊರೆ ಅನ್ನಿಸಿಕೊಳ್ತಿದ್ದ ಅನ್ನುವ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸುವುದಾದರೆ, ಸೇನಾಬಲವನ್ನ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಲಕ್ಷ್ಮಣ ಅಯೋಧ್ಯೆಯ ಮೇಲೆ ಇನ್ನೆಷ್ಟು ಅಧಿಕಾರದ ಹಿಡಿತವನ್ನ ಸಾಧಿಸಬಹುದಿತ್ತು!? ಅದನ್ನೆಲ್ಲಾ ಬಿಟ್ಟು, ಅರಮನೆಯ ಸುಖ ಬಿಟ್ಟು, ಚೆಂದದ ಹೆಂಡತಿಯನ್ನ ಬಿಟ್ಟು, ಅಣ್ಣ-ಅತ್ತಿಗೆಯರ ಸೇವೆ ಮಾಡಿಕೊಂಡು, ರಕ್ಷಕನಾಗಿ ಇರ್ತೀನಿ ಅಂತ ರಾಮನ ಹಿಂದೆ ಹದಿನಾಲ್ಕು ವರ್ಷದ ವನವಾಸವನ್ನ ತಾನೂ ಸ್ವೀಕರಿಸಿ ಬಂದದ್ದಕ್ಕೆ ಆಗಬೇಕಾದ್ದೇ! ಲಕ್ಷ್ಮಣನ ಕುರಿತೇ ಚಿಂತಿಸುವಾಗ ಇಂತಹ ವಿಚಾರಗಳು ಹುಟ್ಟೋದು ಸಹಜ. ಆದರೆ, ಆಯಾ ಸಂದರ್ಭದ ಒತ್ತಡಗಳಿಂದ ರಾಮಸೀತೆಯರು ದುಡುಕಿನಿಂದ ಬಾಯ್ತಪ್ಪಿ ಹೇಳುವ ಮಾತಿದು ಅಂತ ಇದಕ್ಕೊಂದು ಅಡಿಟಿಪ್ಪಣಿ ಹಾಕದೆ ಹೋದರೆ, ಲಕ್ಷ್ಮಣನ ಉದಾತ್ತ ವ್ಯಕ್ತಿತ್ವವನ್ನ ಹೇಳುವ ಸಲುವಾಗಿ, ಆದರ್ಶ ಸತಿಪತಿಯರ ವ್ಯಕ್ತಿತ್ವಕ್ಕೆ ದಕ್ಕೆ ತಂದ ಅಪರಾಧವಾಗವುದು. ಇಲ್ಲಿ ಮತ್ತೊಂದು ಗಮನಾರ್ಹ ಅಂಶ ಎಂದರೆ, ಲಕ್ಷ್ಮಣ, ’ಸೀತೆಯ ಇಂತಹ ಮಾತುಗಳಿಂದ ನೊಂದು ನಿನ್ನನ್ನ ಹುಡುಕಿಕೊಂಡು ಬಂದೆ’ ಅಂತ ರಾಮನ ಹತ್ತಿರವಾಗಲೀ, ಅಥವಾ ರಾಮ ಹೀಗೆ ನಿಂಧಿಸಿದ ಅಂತ ಮತ್ತೊಬ್ಬರ ಬಳಿಯಾಗಲಿ ಎಂದೂ ಹೇಳಿಕೊಳ್ಳುವುದಿಲ್ಲ. ಸೀತೆ ತುಂಬಿದ ಧರ್ಮಸಭೆಯಲ್ಲಿ ಈ ಮಾತನ್ನ ಚರ್ಚೆಗೆ ತಂದಾಗಲಷ್ಟೇ ಈ ನಿಂಧನೆಯ ವಿಷಯಗಳು ಬಹಿರಂಗವಾಗುತ್ತೆ. ಆಗಲೂ ಲಕ್ಷ್ಮಣ ನಿರ್ಲಿಪ್ತಭಾವದಿಂದ ಅಗ್ನಿಕುಂಡದ ಹತ್ತಿರ ಕಟ್ಟಿನಿಲ್ಲಿಸಿದ್ದ ಕುದುರೆಯನ್ನ ನೋಡ್ತಾ ಕೂತಿರುತ್ತಾನೆ! ಸೀತೆ ತನ್ನನ್ನ ಕುರಿತು ಈ ಮಟ್ಟದಲ್ಲಿ ಕೀಳಾಗಿ ಯೋಚಿಸಬಹುದೇ ಎನ್ನುವ ಕಾರಣಕ್ಕೆ ಆಕೆಯೊಂದಿಗೆ ಮಾತನ್ನ ಬಿಡ್ತಾನೆಯೋ ಹೊರತು, ಅವಳ ಮೇಲಿನ ಅಂತಃಕರಣ ಅವನಿಗೆ ಎಂದೆಂದಿಗೂ ಬತ್ತುವುದಿಲ್ಲ. 
ಯುದ್ಧಾ ನಂತರ, ಸೀತೆಯನ್ನು ಸೆರೆಯಿಂದ ಬಿಡಿಸಿದ ಮೇಲೆ, ರಾಮ ಸೀತೆಯ ಶೀಲದ ಮೇಲೆ ಅಪನಂಬಿಕೆ ವ್ಯಕ್ತಪಡಿಸಿ, ’ನಾನು ನನ್ನ ವಂಶದ ಕೀರ್ತಿಗಾಗಿ ಯುದ್ಧ ಮಾಡಿದೆನೋ ವಿನಃ ನಿನಗಾಗಿ ಅಲ್ಲ. ಈಗ ನೀನು ಸ್ವತಂತ್ರಳು. ಎಲ್ಲಿಗೆ ಬೇಕಾದರೂ ಹೋಗಬಹುದು’ ಎಂದು ನುಡಿದುಬಿಟ್ಟಾಗ, ಕಂಗೆಡುವ ಸೀತೆ ತನ್ನ ಪಾತಿವ್ರತ್ಯವನ್ನ ಸಾಬೀತು ಮಾಡುವ ಸಲುವಾಗಿ, ಅಗ್ನಿಯನ್ನು ಪ್ರವೇಶಿಸುವ ತೀರ್ಮಾನ ಮಾಡುತ್ತಾಳೆ. ಅವಳು ಅಗ್ನಿಯನ್ನು ಪ್ರವೇಶಿಸುವ ಮೊದಲು, ಅದಕ್ಕೆ ಪ್ರದಕ್ಷಿಣೆ ಮಾಡತೊಡಗುತ್ತಾಳೆ. ರಾಮ ಮೌನವಾಗಿ ಕುಳಿತಿದ್ದರೆ, ಎರಡನೆಯ ಸುತ್ತಿಗೆ, ಅವಳ ಎಡರೆಟ್ಟೆ ಹಿಡಿದು, ಸಭೆಯೆದುರು ಎಳೆದುಕೊಂಡು ಹೋಗಿ ನಿಲ್ಲಿಸುವ ಲಕ್ಷ್ಮಣ ರಾಮನಿಗೆ, ’ಅಣ್ಣಾ, ನಿನ್ನ ಹೆಂಡತಿ ಉದ್ವಿಗ್ನಸ್ಥಿತಿಯಲ್ಲಿದಾಳೆ. ನಿನಗೆ ತಿಳಿಯುಲ್ಲವೇನು? ಪಾಪ ಮಾಡದವರನ್ನು ಅಗ್ನಿಯು ಸುಡುವುದಿಲ್ಲ ಎಂಬ ಪುರಾಣದ ಮನಸ್ಥಿತಿ ಅವಳಿಗೆ ಉಂಟಾಗಿದೆ. ನೀನು ನಿನ್ನ ಹೆಂಡತಿಯನ್ನು ಶಂಕಿಸಿದೆ. ತಾನು ರಾವಣನ ಅಧೀನದಲ್ಲಿದ್ದಾಗ ನೀನು ಶುದ್ಧವಾಗಿದ್ದುದಕ್ಕೆ ಸಾಕ್ಷಿ ಏನು ಅಂತ ಅವಳು ಕೇಳಿದರೆ ಏನು ಹೇಳುತ್ತೀ? ನನ್ನ ತಮ್ಮ ಲಕ್ಷ್ಮಣನೇ ಸಾಕ್ಷಿ, ಸುಗ್ರೀವ ಹನುಮಂತರೇ ಸಾಕ್ಷಿ ಅಂತೀಯಾ? ಲಕ್ಷ್ಮಣ ನಿನ್ನ ತಮ್ಮ, ಸುಗ್ರೀವ ನಿನ್ನಿಂದ ಉಪಕೃತ ಅಂದರೆ ನಿನ್ನ ಉತ್ತರವೇನು? ನಿನ್ನ ಬುದ್ಧಗೆಟ್ಟ ಮಾತಿನಿಂದ ಅವಳು ಬೆಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊತ್ತಾಳೆ. ಅಲ್ಲಿ ಉರಿಯುತ್ತಿರೂದು ಸತ್ಯಾಸತ್ಯಗಳನ್ನರಿಯದೆ ಸಮೀಪ ಬಂದದ್ದನ್ನೆಲ್ಲ ಸುಟ್ಟು ಬೂದಿ ಮಾಡುವ ಕ್ಷುದ್ರ ಬೆಂಕಿ. ನೀನು ಮಂತ್ರದಲ್ಲಿ ಹೇಳುವ ಅಗ್ನಿದೇವತೆಯಲ್ಲ. ಅದರಿಂದ ನಮ್ಮ ಇಕ್ಷ್ವಾಕುವಂಶದ ಕೀರ್ತಿ ವೃದ್ಧಿಸುತ್ತೆಯೇ?’ ಎಂದು ತರಾಟೆಗೆ ತೆಗೆದುಕೊಳ್ಳುತ್ತಾನೆ. ’ತಿಳಿದೂ ವ್ಯಭಿಚಾರ ಮಾಡಿದ ಅಹಲ್ಯೆಯನ್ನ ಕ್ಷಮಿಸುವಂತೆ ಚಿಕ್ಕಂದಿನಲ್ಲಿಯೇ ಗೌತಮರಿಗೆ ಹೇಳಿದ ನೀನು, ಈಗ ನಿಷ್ಕಳಂಕಳೆಂದು ಆಣೆ ಪ್ರಮಾಣ ಮಾಡುತ್ತಾ, ಸುರಮೆಯಂಥ ಸಾಧ್ವಿಯ ಸಾಕ್ಷಿಯನ್ನ ಹೇಳುತ್ತಿರುವ ನಿನ್ನ ಹೆಂಡತಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲದಿರುವಾಗ, ನಂಬುವುದೇ ಇಲ್ಲ ಅಂತೀಯಲ್ಲ, ಏನಾಗಿದೆ ನಿನಗೆ?’ ಎಂದು ರಾಮನಿಗೆ ಇನ್ನಷ್ಟು ಮಾತಿನ ಪಟ್ಟು ಹಾಕಿ, ಆ ನಂತರ ಇಬ್ಬರ ಕೈಯನ್ನೂ ಹಿಡಿಸಿ, ’ನೀವಿಬ್ಬರೂ ಅಗ್ನಿಸಾಕ್ಷಿಯಾಗಿ ಕೈಹಿಡಿದವರು. ಈಗ ಮತ್ತೊಮ್ಮೆ ಇಲ್ಲಿ ಜ್ವಲಿಸುತ್ತಿರುವ ಅಗ್ನಿಯ ಸಾಕ್ಷಿಯಲ್ಲಿ ಕೈಹಿಡಿದು ಪ್ರದಕ್ಷಿಣೆ ಮಾಡಿ ಪರಸ್ಪರ ನಂಬಿಕೆಯನ್ನು ಗಟ್ಟಿಮಾಡಿಕೊಳ್ಳಿ’ ಎಂದು ಅಗ್ನಿಯನ್ನು ಪ್ರದಕ್ಷಿಣೆ ಮಾಡುವಂತೆ ಮಾಡುತ್ತಾನೆ. ಆ ಮೂಲಕ ಅಗ್ನಿಗೆ ಆಹುತಿಯಾಗಿಬಿಡುವುದರಲ್ಲಿದ್ದ ಸೀತೆಯನ್ನು ರಕ್ಷಿಸುವುದಲ್ಲದೆ, ಅವಳನ್ನು ರಾಮ ಸ್ವೀಕರಿಸುವಂತೆ ಮಾಡುತ್ತಾನೆ. 
ರಾಜಾಜ್ಞೆಯಂತೆ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟುಹೋದರೂ, ಆ ವಿಚಾರದಿಂದಲೇ ರಾಮನಿಂದ ದೂರವಾಗಿ ಸ್ವತಂತ್ರ ನಾಡನ್ನು ಕಟ್ಟಿಕೊಳ್ಳುತ್ತಾನೆ. ಊರ್ಮಿಳೆ ತನ್ನ ಅಕ್ಕ ಸೀತೆಯಲ್ಲಿಗೆ ಅದೆಷ್ಟು ಬಾರಿ ಹೋದರೂ, ಬೇಕಾದ ಎಷ್ಟೇ ದವಸ ಧಾನ್ಯ ಇತ್ಯಾದಿಗಳನ್ನು ಕೊಂಡು ಹೋದರೋ ಆಕ್ಷೇಪಿಸುವುದಿಲ್ಲ. ಧರ್ಮಸಭೆಯ ನಂತರ ಸೀತೆ ಉಳಿದುಕೊಂಡಿದ್ದ ಸುಕೇಶಿಯ ಮನೆಗೆ ಹೆಂಡತಿಯೊಡನೆ ಹೋಗುವ ಲಕ್ಷ್ಮಣನು ಆಕೆಯೊಂದಿಗೆ ತನ್ನ ಮೌನ ಮುರಿದು ಮಾತನಾಡುತ್ತಾನೆ. ’ನಿನ್ನನ್ನ ಏನಂತ ಕರೆಯಲಿ? ಅತ್ತಿಗೆ ಅನ್ನುವ ಸಂಬಂಧ ಉಳಿದಿಲ್ಲ’ ಎನ್ನುತ್ತಾನೆ ಲಕ್ಷ್ಮಣ. ’ಅಂತಃಕರಣಕ್ಕೆ ಸಂಬಂಧವೇ ಆಗಬೇಕೇನು?’ ಎಂದು ಮರುಪ್ರಶ್ನೆ ಮಾಡುತ್ತಾಳೆ ಸೀತೆ. ಲಕ್ಷ್ಮಣನಿಗೆ ಕೈಯಾರೆ ಬಡಿಸಿ ಸಂತೋಷಪಡುತ್ತಾಳೆ, ’ಇಷ್ಟು ಕಡಿಮೆ ಉಂಡರೆ ಹ್ಯಾಗೆ?’ ಅಂತ ಉಪಚರಿಸುತ್ತಾಳೆ. ಇದೊಂದು ಭಾವುಕತೆಯೂ ಬೆರೆತ ಸಂಭ್ರಮದ ಕ್ಷಣ. ಮುಂದೆ ರಾಮನೇ ಲಕ್ಷ್ಮಣನ ಮನೆಗೆ ಆಗಮಿಸಿ, ತನ್ನ ಮಕ್ಕಳಿಗೆ ಮಾರ್ಗದರ್ಶಕನಾಗಿ ಇರಬೇಕೆಂದು ಕೇಳಿಕೊಳ್ಳುತ್ತಾನೆ. ಲಕ್ಷ್ಮಣ ಅದಕ್ಕೆ ಒಪ್ಪುವುದು ಮಾತ್ರವಲ್ಲ, ಅಣ್ಣನೊಂದಿಗಿದ್ದ ವಿರಸಕ್ಕೂ ತೆರೆಯೆಳೆಯುತ್ತಾನೆ. ಮುಂದೆ ರಾಮನ ಅಂತ್ಯ, ಹಿಂದೆಯೇ ಸೀತೆಯ ಇಚ್ಛಾಮರಣ. ಮಕ್ಕಳನ್ನು ಊರ್ಮಿಳೆಯು ತಬ್ಬಿ ಕರೆದೊಯ್ಯುವಲ್ಲಿ, ಎಳೆಯರಾದ ಅವರಿಗಿನ್ನೂ ಲಕ್ಷ್ಮಣ ಮಾರ್ಗದರ್ಶಿಯಾಗಿ ಮುಂದುವರೆಯಬೇಕಾಗಿರುವುದು ಅದರ ಸೂಚ್ಯ ಗ್ರಹಿಕೆ! ’ಹೇ ಲಕ್ಷ್ಮಣಾ, ನೀನಿಲ್ಲದೆ ರಾಮಸೀತೆಯರ ಕುಟುಂಬವೇ ಇಲ್ಲ, ’ಉತ್ತರಕಾಂಡ’ವೂ ಇಲ್ಲ!’ 

ರಾಮಾಯಣದಲ್ಲಿ ಊರ್ಮಿಳೆ, ಲಕ್ಷ್ಮಣ ರಾಮಸೀತೆಯರ ರಕ್ಷಣೆಯ ಹೊಣೆ ಹೊತ್ತು ಅವರೊಂದಿಗೆ ವನವಾಸಕ್ಕೆ ಹೋದಮೇಲೆ ಅತ್ತೆಯರ ಸೇವೆ ಮಾಡಿಕೊಂಡು, ತನ್ನ ಗಂಡ ಹಿಂದಿರುಗಿ ಬರುವುದನ್ನೇ ನಿರೀಕ್ಷಿಸುತ್ತಾ ಹದಿನಾಲ್ಕು ವರ್ಷಗಳು ಕಾಯುತ್ತಾಳೆ. ಸೀತೆಗಾದ ಅನ್ಯಾಯದ ಕುರಿತು ಎಲ್ಲರೂ ಮಾತಾಡ್ತಾರೆ, ಆದರೆ, ಊರ್ಮಿಳೆಗಾದ ಅನ್ಯಾಯದ ಕುರಿತು ಯಾರೂ ಪ್ರಸ್ತಾಪಿಸೋದೇ ಇಲ್ಲ. ಅಲ್ಲಿ ಊರ್ಮಿಳೆ ಅನುಕಂಪಕ್ಕೆ ಅರ್ಹವಾಗುವ ಪಾತ್ರ. ಆದರೆ, ಭೈರಪ್ಪನವರ ’ಉತ್ತರಕಾಂಡ’ ದ ಊರ್ಮಿಳೆ ತನ್ನ ವಿಭಿನ್ನ ವ್ಯಕ್ತಿತ್ವದಿಂದ, ನೇರ ನಡೆನುಡಿಗಳಿಂದ, ಸೂಕ್ಷ್ಮ ಗ್ರಹಿಕೆಯ ಗುಣದಿಂದ, ಹಾಸ್ಯ ಪ್ರವೃತ್ತಿಯಿಂದ, ವಾಕ್ಚತುರತೆಗಳಿಂದ ಓದುಗರನ್ನ ಆಕರ್ಷಿಸ್ತಾಳೆ. ಇಲ್ಲಿ ಲಕ್ಷ್ಮಣನನ್ನ ಅನುಸರಿಸಿ ಕಾಡಿಗೆ ಹೋಗದೆ, ಅರಮನೆಯಲ್ಲಿಯೇ ಉಳಿಯುವ ನಿರ್ಧಾರವನ್ನ ಮಾಡುವವಳು ಅವಳೇ! ಮೂಲಕ್ಕಿಂತ, ’ಉತ್ತರಕಾಂಡ’ ಕಾದಂಬರಿಯಲ್ಲಿ ಊರ್ಮಿಳೆಯ ಪಾತ್ರಕ್ಕೆ ಹೆಚ್ಚು ಅವಕಾಶಗಳಿವೆ. ಪಾತ್ರ ಬೆಳೆದಿದೆ. ಇದಕ್ಕೆ ಕಥೆಯನ್ನ ನಿರೂಪಿಸುವ ಸಲುವಾಗಿ ಮಾಡಿಕೊಳ್ಳಲಾಗಿರುವ ತಂತ್ರವೂ ಕಾರಣ ಅನ್ನಿಸುತ್ತದೆ. ಸೀತೆಯ ಮೂಲಕವೇ, ಅವಳ ಉತ್ತಮ ಪುರುಷ ನಿರೂಪಣೆಯಲ್ಲಿಯೇ ಕಾದಂಬರಿಯ ಕಥೆಯು ಉದ್ದಕ್ಕೂ ತೆರೆದುಕೊಳ್ಳುವುದು. ಆದ್ದರಿಂದ ಓದುಗರಿಗೆ ಸೀತೆಯು ವಾಲ್ಮೀಕಿ ಆಶ್ರಮದಲ್ಲಿದ್ದಾಗ, ಅಯೋಧ್ಯೆಯಲ್ಲಿ ನಡೆಯುವ ವರ್ತಮಾನಗಳ ವಿವರಗಳನ್ನ ಕೊಡಬೇಕಾದರೆ ಅದಕ್ಕೊಂದು ನೆಪ ಬೇಕು. ಅದಕ್ಕಾಗಿ ಅಲ್ಲಿಗೆ ಊರ್ಮಿಳೆಯ ಪ್ರವೇಶವಾಗಿದೆ. ಸೀತೆಯೊಂದಿಗೆ ಮಾತನಾಡುತ್ತಾ ಅಯೋಧ್ಯೆಯ ವರ್ತಮಾನಗಳನ್ನ ಹೇಳುತ್ತಾ ಹೋಗುತ್ತಾಳೆ. ಇದೇ ರೀತಿ ಕೆಲವು ಕಡೆ ಸುಕೇಶಿ, ಶತಾನಂದರ ಪತ್ನಿ ಶ್ರೀಲಕ್ಷ್ಮೀ, ಸುರಮೆ, ಹನುಮಂತ, ತಾರಕೇಶ್ವರರ ಪಾತ್ರಗಳು ತಮ್ಮ ಪಾತ್ರವನ್ನೂ ದಾಟಿ, ಸೀತೆ ಇರದ ಬೇರೊಂದು ಸನ್ನಿವೇಶದ ವಿವರಗಳನ್ನು ನಿರೂಪಿಸುವ ಕೆಲವನ್ನೂ ಮಾಡುತ್ತವೆ. ಇದರಿಂದ ಆ ಪಾತ್ರಗಳೂ ತಮ್ಮ ಮೂಲ ವ್ಯಕ್ತಿತ್ವವಲ್ಲದೆ, ದೃಷ್ಟಿಕೋನ, ವಿಶ್ಲೇಷಣೆ ಮಾಡುವ ಕ್ರಮ, ವಿವರಿಸಲು ಹೊರಟ ಸನ್ನಿವೇಶದಲ್ಲಿ ತಮ್ಮ ಪಾತ್ರ, ನಿರೂಪಿಸುವಾಗ ಸೀತೆಯೊಂದಿಗೆ ತೋರುವ ಪ್ರೀತಿ, ಸಲಿಗೆ, ಮತ್ತು ಅದಕ್ಕಾಗಿಯೇ ಏರ್ಪಡುವ ಒಂದು ಹೊಸ ಸನ್ನಿವೇಶ ಮೊದಲಾದವುಗಳಿಂದಾಗಿ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿವೆ. 
ಆದರೆ, ಊರ್ಮಿಳೆಯ ಪಾತ್ರಕ್ಕೆ ಇರುವ ವಿಭಿನ್ನ ಆಯಾಮಗಳನ್ನ ಗಮನಿಸಿದರೆ, ಕಾದಂಬರಿಕಾರರಿಗೆ ಈ ಪಾತ್ರವನ್ನು ಚಿತ್ರಿಸುವ ಹಿನ್ನೆಲೆಯಲ್ಲಿ ಕಥಾ ನಿರೂಪಣೆಯ ಉದ್ದೇಶವಿದ್ದಿರಬಹುದಾದರೂ, ಕೇವಲ ಇದೊಂದೇ ಕಾರಣಕ್ಕಾಗಿ ಬೆಳೆಸಿದ ಪಾತ್ರವಲ್ಲವೆಂದು ತೋರುತ್ತದೆ. ಒಂದೇ ಕುಟುಂಬದ ಹೆಣ್ಣುಮಕ್ಕಳಾದ, ಒಂದೇ ಕುಟುಂಬಕ್ಕೆ ಸೊಸೆಯರಾಗಿ ಬಂದ ಸೀತೆ, ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಯರಲ್ಲಿ ಸೀತೆ, ಊರ್ಮಿಳೆಯರು ಒಂದು; ಮಾಂಡವಿ, ಶ್ರುತಕೀರ್ತಿಯರು ಒಂದು. ಸೀತೆ, ಊರ್ಮಿಳೆಯರು ಜನಕರಾಜನ ಮಕ್ಕಳಾದರೆ, ಮಾಂಡವಿ, ಶ್ರುತಕೀರ್ತಿಯರು ಜನಕರಾಜನ ತಮ್ಮ ಕುಶಧ್ವಜನ ಮಕ್ಕಳೆಂಬುದೂ ಇದಕ್ಕೆ ಒಂದು ಕಾರಣ. ಸ್ವಭಾವಗಳಲ್ಲಿ ಬೇರೆ ಬೇರೆಯಾದರೂ, ಸೀತೆ-ಊರ್ಮಿಳೆಯರದು ಬಾಲ್ಯದಿಂದ ಅಂತ್ಯದವರೆಗೆ ನಿರಂತರವಾಗಿ ಹರಿಯುವ ಸ್ನೇಹ ಸಖ್ಯದ ಹೊಳೆ. ಮಿಥಿಲೆಯ ಬಾಲ್ಯದಲ್ಲಿ ಊರ್ಮಿಳೆಯದು ಹಾಸ್ಯ, ನೆಗೆತ, ಕುಣಿತ, ಈಜು, ಜಗಳ, ಮರಕೋತಿಗಳ ಆಯ್ಕೆಯಾದರೆ, ಸೀತೆಯದು ಏಕಾಂತವಾಗಿ ಕೂತು ಮರಗಿಡಗಳನ್ನೋ, ಹಾರುವ ಹಕ್ಕಿಯನ್ನೋ ನೋಡುತ್ತಾ ಕೂರುವ ಆಯ್ಕೆ. ಊರ್ಮಿಳೆಯ ಈ ಬಗೆಯ ಆಟಗಳನ್ನು ನೋಡಿ, ಯಾರಾದರೂ, ’ನೀನು ಹೀಗೆಲ್ಲ ಆಡಿದರೆ, ಯಾರೂ ನಿನ್ನ ಮದುವೆಯಾಗೋಲ್ಲ’ ಅಂದರೆ, ’ಯಾವನೂ ಆಗದಿದ್ದರೆ, ನಾನೇ ಅವನನ್ನ ಆಗ್ತೀನಿ’ ಅನ್ನುವಳು. ಅವಳು ಬೆಳೆದು ಗೃಹಿಣಿಯಾದರೂ, ಈ ಮಾತಿನ ಲಘು ಧಾಟಿ ಹಾಗೆಯೇ ಉಳಿಯುತ್ತದೆ. ’ಭರತ ಭಾವ ಪೆದ್ದು, ಆದರೆ ಒಳ್ಳೆಯವನು’ ’ನನ್ನ ಗಂಡ ನನ್ನನ್ನ ಒಂದು ಮಾತೂ ಹೇಳದೆ ಕೇಳದೆ ಗೋಸಾಯಿ ವೇಷ ತೊಟ್ಟಿದ್ದಾನೆ’ ’ಥೇಟ್ ಕೈಕೇಯಿ ದೇವಿ ಥರವೇ ರೂಪ ಜಯಂತಿಯದ್ದು’ ಎಂಬ ಕೆಲವು ಸಾಂದರ್ಭಿಕ ಮಾತುಗಳನ್ನು ಇದಕ್ಕೆ ಉದಾಹರಿಸಬಹುದು. 
ಸೊಸೆಯಂದಿರು ಅಯೋಧ್ಯೆಯನ್ನು ಪ್ರವೇಶಿಸಿದ ಆರಂಭದಲ್ಲಿ, ಸ್ವಭಾತಃ ಒಳ್ಳೆಯ ಮಾತುಗಾರ್ತಿಯಾದ ಊರ್ಮಿಳೆಯು ತನ್ನ ಅತ್ತೆಯರೊಂದಿಗೆ ವಿಶ್ವಾಸ ಬೆಳೆಸುತ್ತಿಲ್ಲ. ಅವಳು ಅತ್ತೆಯನ್ನು ನೋಡಲು ಬರುವಾಗಲೂ ಗಂಡನನ್ನು ಕರೆದೊಯ್ಯುತ್ತಾಳೆ, ಹೋಗುವಾಗಲೂ ಅವನೊಂದಿಗೇ ಹೊರಟುಹೋಗುತ್ತಾಳೆ ಎಂಬ ವಿಚಾರವನ್ನು ಸುಕೇಶಿಯಿಂದ ತಿಳಿದುಕೊಳ್ಳುವ ಸೀತೆಯು ಊರ್ಮಿಳೆಗೆ ಅದನ್ನು ತಿದ್ದಿಕೊಂಡು, ಅತ್ತೆಯರಿಂದ ಪ್ರೀತಿಯನ್ನು ಸಂಪಾದಿಸಬೇಕೆಂದು ಸೂಚಿಸುತ್ತಾಳೆ. ಹಾಗೆಯೇ ಊರ್ಮಿಳೆಯೂ, ಸೀತೆಯು ತನ್ನ ಶೀಲವನ್ನು ಶಂಕಿಸಿದ ರಾಮನೊಂದಿಗೆ ಹೇಗೆ ಹೊಂದಿಕೊಂಡು ಬಾಳುವುದೆಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ’ನೀನೇ ಮೊದಲು ಅವನನ್ನು ಮಾತಾಡಿಸು. ಮೊದಲಿನಂತೆ ಸಲಿಗೆ ಬೆಳೆಸು. ಆಮೇಲೆ ಈ ವಿಷಯ ತೆಗೆದು ಲಟಾಯಿಸಿ ಬುದ್ಧಿ ಕಲಿಸು’ ಎಂದು ತನ್ನ ಸ್ವಭಾವಕ್ಕೆ ತಕ್ಕ ಹಾಗೆ ಜಾಣ್ಮೆಯ ಉಪದೇಶ ಮಾಡುತ್ತಾಳೆ. 
ರಾಮ, ಸೀತೆ, ಲಕ್ಷ್ಮಣರು ಕಾಡಿಗೆ ಹೋಗುವ ಸಂದರ್ಭದಲ್ಲಿ, ’ನಾನು ಮಿಥಿಲೆಗೆ ಹೋಗ್ತೀನಿ. ಮುಂದೆ ಗಂಡು ದಿಕ್ಕಿಲ್ಲದ ಅಲ್ಲಿ ರಾಮ ಭಾವಯ್ಯನೇ ಮಹಾರಾಜ, ನೀನು ಮಹಾರಾಣಿ, ನಾನೂ ನನ್ನ ಗಂಡಯ್ಯ ಯುವರಾಣಿ, ಯುವರಾಜರಾಗಿರಬಹುದು’ ಎಂಬ ಅವಳ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ರಾಮ ಎಂದೂ ಅಲ್ಲಿಗೆ ಬರಲ್ಲ. ನೀನೂ ಈಗ ಅಲ್ಲಿಗೆ ಹೋಗಿ ತವರಿಗೆ ಕಳಂಕ ತರಬೇಡ. ಅತ್ತೆಮಾವಂದಿರ ಸೇವೆ ಮಾಡಿಕೊಂಡು ಇಲ್ಲಿಯೇ ಇರು’ ಎಂದು ಬುದ್ಧಿವಾದ ಹೇಳುತ್ತಾಳೆ. ಹೀಗೆ ಅಕ್ಕತಂಗಿಯರಲ್ಲಿ ಕೊಡು-ಕೊಳ್ಳುಗಳು ಆಗಾಗ ಆಪ್ತವಾಗಿ ನಡೆಯುತ್ತಲೇ ಇರುತ್ತವೆ. 
ದಶರಥ, ರಾಮ, ಲಕ್ಷ್ಮಣ, ಭರತ ಮೊದಲಾದವರೆಲ್ಲರ ನಡೆಗಳನ್ನು ಗಮನಿಸಿ, ವಿಡಂಬನಾತ್ಮಕವಾಗಿ ಟೀಕಿಸುತ್ತಾಳೆ ಊರ್ಮಿಳೆ. ಅವಳ ಟೀಕೆಗೆ ಸೀತೆಯೂ ಹೊರತಲ್ಲ. ರಾಮನನ್ನು ಅನುಸರಿಸಿ ಅವಳು ಕಾಡಿಗೆ ಹೊರಟ ಸಂದರ್ಭದಲ್ಲಿ, ’ಅಕ್ಕ ಇದೇನು ಹುಚ್ಚಾಟ? ನೀನೂ ಹೊರಟಿದೀಯಂತೆ!’ ಎಂದು, ’ಇರಲಿ, ಇದು ಗಂಡ ಹೆಂಡಿರ ಸಮಾಚಾರ. ನನ್ನ ಗಂಡ ನನಗೆ ಒಂದು ಮಾತೂ ಹೇಳದೆ, ಕೇಳದೆ ಹೊರಟು ಗೋಸಾಯಿಯ ವೇಷ ತೊಟ್ಟಿದ್ದಾನೆ. ಈ ರಾಜವಂಶದ ಪುತ್ರರಿಗೆ ಹೊಣೆಗಾರಿಕೆ ಇಲ್ಲವೆ?’ ಎಂದು ಪ್ರಶ್ನಿಸುತ್ತಾಳೆ. ಲಕ್ಷ್ಮಣನನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ’ಹೆಂಡತಿ ಮಕ್ಕಳಿಗೆ ಮಾಡಬೇಕಾದ ಕರ್ತವ್ಯಗಳನ್ನ ಪೂರೈಸದೆ, ಹೆಂಡತಿಯ ಅನುಮತಿ ಪಡೆಯದೆ ಸಂನ್ಯಾಸ ಸ್ವೀಕರಿಸಬಾರದು, ಅಂಥವನಿಗೆ ಸಂನ್ಯಾಸ ಕೊಡಕೂಡದು ಅಂತ ಶಾಸ್ತ್ರವೇ ಇದೆಯಂತೆ. ನಮಗೆ ಮಕ್ಕಳಾಗಿಲ್ಲ. ಪತಿಗೆ ಮಕ್ಕಳನ್ನ ಕೊಡೋದು ಪತ್ನಿಯ ಕರ್ತವ್ಯವಿದ್ದಂತೆ, ಪತ್ನಿಗೆ ಮಕ್ಕಳನ್ನು ಕೊಡೋದು ಪತಿಯ ಕರ್ತವ್ಯ ತಾನೆ? ನೀನು ಪೂರೈಸದೆ ಹೋಗಬಹುದೇ?’ ಎಂದು ಶಾಸ್ತ್ರದ ಆಧಾರದಲ್ಲಿ ವಾದಿಸುತ್ತಾಳೆ. ಮುಂದುವರೆದು, ’ಧರ್ಮೇಚ ಅರ್ಥೇಚ ಕಾಮೇಚ ನಾತಿ ಚರಾಮಿ ಅಂತ ಪ್ರತಿಜ್ಞೆ ಮಾಡಿ ವಿವಾಹವನ್ನ ಸಂಪನ್ನಗೊಳಿಸಿಕೊಂಡಿದೀವಿ. ಹೇಳದೆ ಕೇಳದೆ ಹದಿನಾಲ್ಕು ವರ್ಷ ಹೆಂಡತಿಯನ್ನ ಬಿಟ್ಟು ಹೋಗೋದು ಆ ಪ್ರತಿಜ್ಞೆಯಲ್ಲಿ ಸೇರಿತ್ತೆ?’ ಎನ್ನುತ್ತಾಳೆ. ’ನೀನೂ ಬಂದುಬಿಡು. ನಿನ್ನಕ್ಕನಿಗೂ ಜೊತೆಯಾಗುತ್ತೆ’ ಎಂದಾಗ ಮಾತ್ರ ಮೌನಕ್ಕೆ ಶರಣಾಗುತ್ತಾಳೆ. ಅವಳು ಆಗ ಹಾಗೆ ಒಪ್ಪಿಕೊಂಡು ಜೊತೆಯಲ್ಲಿ ಹೊರಡದ ಕಾರಣವನ್ನು ವಾಲ್ಮೀಕಿ ಆಶ್ರಮದಲ್ಲಿ ಸೀತೆಯೊಂದಿಗೆ ಮಾತನಾಡುತ್ತಾ ಹೇಳಿಕೊಳ್ಳುತ್ತಾಳೆ. 
ಜನಕ ಮಹಾರಾಜನಿಗೆ, ತಾನು ಆತನ ರಕ್ತ ಹಂಚಿಕೊಂಡು ಹುಟ್ಟಿದ ಮಗಳಾದರೂ, ಭೂಮಿಯಲ್ಲಿ ದೊರಕಿದ ಸಾಕುಮಗಳಾದ ಸೀತೆಯ ಮೇಲೆ ಅಪರಿಮಿತವಾದ ವಾತ್ಸಲ್ಯವಿದೆಯೆಂದು ಊರ್ಮಿಳೆಗೆ ಗೊತ್ತು. ಅದಕ್ಕೆ ಅವಳಲ್ಲಿ ಯಾವ ತಕರಾರೂ ಇಲ್ಲ. ಆದರೆ, ಪತಿಯನ್ನು ಅನುಸರಿಸಿ ಸೀತೆ ಅರಣ್ಯವಾಸಕ್ಕೆ ಹೋದದ್ದಕ್ಕಾಗಿ ಅಯೋಧ್ಯೆಯ ಪ್ರಜೆಗಳೆಲ್ಲ ಸೀತೆಯನ್ನು ಮಹಾಪತಿವ್ರತೆಯೆಂದು ಎತ್ತರದ ಪೂಜಾಸ್ಥಾನದಲ್ಲಿಟ್ಟು ಪೂಜಿಸತೊಡಗಿದಾಗ, ಗಂಡ ಲಕ್ಷ್ಮಣನನ್ನು ಅನುಸರಿಸದೆ ಅರಮನೆಯ ವಿಲಾಸ ಜೀವನಕ್ಕೆ ಅಂಟಿಕೂತಳು ಎಂದು ತನ್ನ ಕುರಿತು ಕುಹಕವಾಡಲು ತೊಡಗಿದಾಗ, ಸೀತೆಯ ಮೇಲೆ ನಿಜಕ್ಕೂ ಮತ್ಸರ ಭಾವನೆ ಉಂಟಾಗುತ್ತದೆ. ಅದನ್ನು ಅವಳೇ ಸೀತೆಯಲ್ಲಿ ಹೇಳಿಕೊಳ್ಳುತ್ತಾಳೆ. ಅಸೂಯೆ ಉಂಟಾಗುತ್ತದೆಯೇ ಹೊರತು, ತಾನೂ ಹೋಗಬೇಕಿತ್ತು ಎಂದು ಅವಳಿಗೆ ಅನಿಸುವುದೇ ಇಲ್ಲ. ಗಂಡ ನಾರುಮಡಿಯುಟ್ಟು ಬ್ರಹ್ಮಚಾರಿಯಾಗಿದಾನೆ. ತಾನು ಅವನನ್ನು ಅನುಸರಿಸಿ ಹೋದರೆ ಏನು ಸುಖವಿದೆ ಎನ್ನುವುದು ಅವಳ ಪ್ರಶ್ನೆ. ಒಂದು ವೇಳೆ ಅವನು ಬ್ರಹ್ಮಚರ್ಯ ಮುರಿದರೂ, ತನಗೆ ಮಗುವಾದರೆ, ಅದನ್ನು ಕಾಡಿನಲ್ಲಿ ಹೇಗೆ ಸಾಕುವುದು ಎಂದೂ ಯೋಚಿಸುತ್ತಾಳೆ. ’ಮದುವೆಯಾದ ಹೊಸದರಲ್ಲಿಯೇ ಮಗನನ್ನು ಕಾಡಿಗೆ ಕಳಿಸೂದು, ಹೆಂಡತಿಯನ್ನು ಹೇಳದೆ ಕೇಳದೆ ಅಣ್ಣನ ಸೇವೆಗೆ ಕಾಡಿಗೆ ಹೋಗೋದು, ಇವೆಲ್ಲ ಏನು ಹುಚ್ಚು ಅಂತ ನನಗೆ ಈ ಮನೆ, ಈ ಜನಗಳ ಮೇಲೆ ಕೋಪವೂ ಇತ್ತು. ಅಲ್ಲದೆ ಕಾಡಿಗೂ ಅನುಸರಿಸುವಷ್ಟು ನಿನಗೆ ರಾಮನ ಮೇಲೆ ಇದ್ದಷ್ಟು ಪ್ರೀತಿ ನನಗೆ ಲಕ್ಷ್ಮಣನ ಮೇಲೆ ಇರಲಿಲ್ಲವೇನೋ!’ ಎನ್ನುವಲ್ಲಿ ಮನೆಯವರ ಕುರಿತಾದ ತನ್ನ ತಿರಸ್ಕಾರ ಭಾವನೆಯನ್ನು ಹೇಳಿಕೊಳ್ಳುವುದರ ಜೊತೆಗೆ, ಲಕ್ಷ್ಮಣನ ಬಗೆಗೆ ತನಗೆ ಆಳವಾದ ಪ್ರೀತಿಯೂ ಇರಲಿಲ್ಲವೇನೋ ಎಂಬ ಆತ್ಮವಿಮರ್ಶೆಯನ್ನೂ ಮಾಡಿಕೊಳ್ಳುತ್ತಾಳೆ. 
ಮುಂದೆ, ದಶರಥನ ಸಾವಿನ ನಂತರ ಚಿತ್ರಕೂಟಕ್ಕೆ ಭರತ, ಅತ್ತೆಯರೊಡಗೆ ಹೋದಾಗ, ಭರತ ತಾನೂ ತನ್ನ ತಲೆಗೆ ಆಲದ ರಸವನ್ನು ಹಾಕಿಕೊಂಡು ಜಟಾಧಾರಿಯಾಗುವ ಸಂದರ್ಭದಲ್ಲಿ, ಪಕ್ಕದಲ್ಲಿ ಕುಳಿತಿದ್ದ ಸೀತೆಯ ಕಿವಿಯಲ್ಲಿ, ’ಇನ್ನು ಶತ್ರುಘ್ನ ಒಬ್ಬ ಈ ಅವತಾರ ತಾಳುವುದು ಬಾಕಿ ಉಳಿದಿದೆ’ ಎಂದು ಪಿಸುಗುಡುತ್ತಾಳೆ. ಅಷ್ಟರಮಟ್ಟಿಗೆ ಅವಳಿಗೆ ಈ ಸಹೋದರರ ನಡಾವಳಿಯನ್ನು ಕಂಡು ತಿರಸ್ಕಾರ ಹುಟ್ಟಿರುತ್ತದೆ! ಒಮ್ಮೆ ಆಶ್ರಮದಲ್ಲಿ ಬಹಳ ಹೊತ್ತಾದರೂ ಸೀತೆ ಸ್ನಾನದ ಗೃಹದಿಂದ ಹೊರಗೆ ಬರದೆ, ಅಳುತ್ತಿದ್ದ ಅವಳ ಅವಳಿ ಮಕ್ಕಳನ್ನು ಸಂತೈಸುವ ಸಲುವಾಗಿ ಆ ಇಬ್ಬರು ಮಕ್ಕಳಿಗೂ ತನ್ನ ಎರಡು ಮೊಲೆಗಳನ್ನೂ ಕೊಟ್ಟುಕೊಂಡು ಕೂರುವ ಊರ್ಮಿಳೆ ಎಂಥಹಾ ತಾಯಿ ಹೃದಯವನ್ನು ಉಳ್ಳವಳು ಎನ್ನಿಸುತ್ತದೆ! ಹೊರಬರುವ ಸೀತೆ ಆ ದೃಶ್ಯವನ್ನು ನೋಡಿ, ತನಗೂ ಸ್ಫೂರ್ತಿ ಹುಟ್ಟಿ, ಊರ್ಮಿಳೆಯ ಮಗುವಿಗೆ ತಾನೂ ಮೊಲೆಯನ್ನು ಕೊಟ್ಟುಕೊಂಡು ಕೂರುತ್ತಾಳೆ. ಅದೊಂದು ಅಂತರಂಗ ತುಂಬಿಬರುವ ಮಧುರವಾದ ಸನ್ನಿವೇಶ. ’ನಿನ್ನ ಈ ಇಬ್ಬರು ಮಕ್ಕಳನ್ನು ನನಗೇ ಕೊಟ್ಟುಬಿಡುತ್ತೀಯಾ?’ ಎಂಬ ಪ್ರಶ್ನೆ ಮಾಡಿ, ಆಗಲೆಂಬ ಉತ್ತರ ಪಡೆದ ಮೇಲೆ ಸೀತೆಗೆ, ’ನಿನಗೆ ಕೊಡುವ ಅಧಿಕಾರವಿದೆಯೇ?’ ಎಂದು ಮರುಪ್ರಶ್ನೆ ಮಾಡುತ್ತಾಳೆ. ಸೀತೆಗೆ ಇದು ಅರ್ಥವಾಗುವುದಿಲ್ಲ. ’ಪೆದ್ದೆ, ನಿನಗೆ ಯಾವತ್ತು ಅರ್ಥವಾಗುತ್ತೆ? ಭಾರ ಹೊತ್ತು, ನೋವು ಉಂಡು, ಎದೆಯ ಶಕ್ತಿಯನ್ನು ಉಣ್ಣಿಸಿ ಸಾಕೂಗೇ ಹೆಣ್ಣಿನ ಕರ್ತವ್ಯ; ಅಧಿಕಾರ ಅಪ್ಪನದು ಅಂತ ಶಾಸ್ತ್ರ ಹೇಳುತ್ತೆ’ ಅಂತ ವಿವರಿಸುತ್ತಾಳೆ. ಬಹುಶಃ ಊರ್ಮಿಳೆಗೆ ಇರುವ ಈ ತಿಳಿವು ಸೀತೆಗೆ ಇದ್ದಿದ್ದರೆ, ಅಥವಾ ಅವಳ ಈ ಮಾತನ್ನು ಸೀತೆ ಗಂಭೀರವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರೆ, ತನ್ನ ಮಕ್ಕಳು ರಾಮನ ಇಚ್ಛೆಯಂತೆ ಶಸ್ತ್ರಾಭ್ಯಾಸ ಕಲಿಯಲು ಹೋದರು ಎಂಬ ಸುದ್ದಿ ಬಂದಾಗ, ತನ್ನಿಂದ ದೂರವಾದರು ತನ್ನ ಮಕ್ಕಳು ಎಂದು ಹಲಬುತ್ತಿರಲಿಲ್ಲ. ರಾಜ್ಯದ ಮೋಹ ನನ್ನ ಮಕ್ಕಳಿಗೆ ಬರದಿರಲಿ, ತನ್ನಂತೆ ತನ್ನ ಮಕ್ಕಳು ಮಣ್ಣಿನ ಮಕ್ಕಳಾಗಲಿ ಎಂದು ಹಟದಂತೆ ಹಂಬಲಿಸುತ್ತಿರಲಿಲ್ಲ. ಅಥವಾ ಊರ್ಮಿಳೆ ಈ ಮಾತುನ್ನು ಹೇಳಿದ ಆ ಸಂದರ್ಭದಲ್ಲಿ ಇನ್ನೂ ಒಂದು ಆಯಾಮವಿತ್ತು. ಸೀತೆಯಿನ್ನೂ ರಾಮನಿಗಾಗಿ ಪರಿತಪಿಸುತ್ತಿದ್ದ ಕಾಲವದು. ಹತಾಶೆ ಪೂರ್ಣ ತಿರಸ್ಕಾರವಾಗಿ ಪರಿವರ್ತನೆಯಾಗದ ಕಾಲವದು. ಅಂತಹ ಹೊತ್ತಿನಲ್ಲಿ ಊರ್ಮಿಳೆಯ ಈ ಮಾತು ಅವಳಿಗೆ ವರವೇ ಆಗಬಹುದಿತ್ತು. ರಾಮ ತನ್ನನ್ನು ಪರಿತ್ಯಜಿಸಿದ್ದಾನೆಯೇ ಹೊರತು ಮಕ್ಕಳನ್ನು ಅಲ್ಲ. ಅವರಿಗಾಗಿ ಅವನು ಎಂದಾದರೂ ಬಂದೇ ಬರುತ್ತಾನೆ ಎಂಬ ವಿಶ್ವಾಸಕ್ಕೂ ಅದು ಪುಷ್ಟಿಯನ್ನು ನೀಡಬಲ್ಲದಾಗಿತ್ತು. ಆಧ್ಯಾತ್ಮದ ವಿಚಾರದಲ್ಲಿಯೇ ಆಸಕ್ತಿಯುಳ್ಳ ಸೀತೆಗೆ ಈ ಧರ್ಮಶಾಸ್ತ್ರದ ವಿಚಾರ ತಿಳಿಯದುದೇನಲ್ಲವಾದರೂ, ಬುದ್ಧಿಮಟ್ಟದ ವಿಚಾರವನ್ನು ಬಹುಶಃ ಭಾವಕ್ಕೆ ಇಳಿಸಿಕೊಂಡಂತೆ ಇಲ್ಲ.

 ಒಮ್ಮೆ ಊರ್ಮಿಳೆಯು ಆಶ್ರಮಕ್ಕೆ ಬಂದಾಗ, ಸೀತೆ ಋಷಿಪತ್ನಿಯರು ತನ್ನ ವಿರುದ್ಧ ಗುಸುಗುಸು ಆರಂಭಿಸಿದ್ದಾರೆಂಬ ವಿಚಾರವನ್ನು ಹಂಚಿಕೊಂಡು ನೊಂದುಕೊಳ್ಳುತ್ತಾಳೆ. ಆಗ ಊರ್ಮಿಳೆ ಸೀತೆಗೆ ತಮ್ಮ ಜೊತೆಗೇ ಏಕೆ ಬಂದು ಇದ್ದುಬಿಡಬಾರದು ಎಂಬ ಸಲಹೆ ಕೊಡುತ್ತಾಳೆ. ಅದಕ್ಕೆ ಸೀತೆ, ’ಇದಾಗಲೇ ನನ್ನ ಕಾರಣದಿಂದ ರಾಮ ಲಕ್ಷ್ಮಣರ ನಡುವೆ ಆಗಿರುವ ಮನಸ್ತಾಪವೇ ಸಾಕು, ನನಗೆ ಈಗ ಮತ್ತೊಮ್ಮೆ ಆಶ್ರಯ ಕೊಟ್ಟಲ್ಲಿ ಆ ವಿರಸ ಇನ್ನಷ್ಟು ಹಿಗ್ಗುವುದು. ನನ್ನನ್ನ ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಾಗಿಲಿನಲ್ಲಿ ತ್ಯಜಿಸುವುದು ರಾಮನ ಇಚ್ಛೆಯಾಗಿತ್ತು. ನಾನು ಈ ಆಶ್ರಮದಲ್ಲೇ ಅಥವಾ ಅದರ ಹತ್ತಿರವೇ ಎಲ್ಲಾದರೂ ಇರಬೇಕು’ ಎನ್ನುತ್ತಾಳೆ. ’ಅಥವಾ ಹತ್ತಿರವೇ ಅಂದರೆ, ಅವನ ಆಜ್ಞೆಯ ಪರಿಧಿಯಲ್ಲೇ ಇರಬೇಕು ಅಂತ ಅಲ್ಲವೆ ಅರ್ಥ? ಅವನ ಆಜ್ಞೆಯನ್ನು ಪಾಲಿಸುವ ದಾಸ್ಯ ಯಾಕೆ?’ ಎಂದು ಪ್ರಶ್ನಿಸುತ್ತಾಳೆ ಊರ್ಮಿಳೆ! ಈ ಮಾತಿನಿಂದ ಸೀತೆಗೆ ಚುರುಕು ಮುಟ್ಟಿದಂತಾಗುತ್ತದೆ. ಇಲ್ಲಿ ಊರ್ಮಿಳೆಯ ತಿರಸ್ಕಾರವು ಮತ್ತೊಮ್ಮೆ ಪ್ರಕಟಗೊಂಡಿದೆ. 
ತುಂಬಿದ ಧರ್ಮಸಭೆಯಲ್ಲಿ ಸೀತೆಯು ಲಕ್ಷ್ಮಣನನ್ನು ತಾನು ನಿಂಧಿಸಿದ ದೆಸೆಯಿಂದ, ಆತ ತನ್ನೊಂದಿಗೆ ಮಾತುಬಿಟ್ಟಿರುವ ವಿಚಾರವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸುತ್ತಾಳೆ. ಆಗ ಲಕ್ಷ್ಮಣನು ತನಗೆ ಸಂಬಂಧಿಸಿದ ಮಾತೇ ಅಲ್ಲವೆಂಬಂತೆ ಕುಳಿತಿದ್ದಾಗ, ಊರ್ಮಿಳೆಯು ಎದ್ದು ನಿಂತು ಪ್ರತಿಕ್ರಿಯಿಸುತ್ತಾಳೆ. ಸುತ್ತಿ ಬಳಸಿ ಹಲವು ಮಾತುಗಳಲ್ಲಿ ಲಕ್ಷ್ಮಣನ ಇಂದಿನ ತನ್ನ ಕುರಿತ ಭಾವನೆಯನ್ನು ತಿಳಿದುಕೊಳ್ಳಲು ಸೀತೆಯು ಯತ್ನಿಸುವ ಬದಲು, ನೇರವಾಗಿ ಹಂಚಿಕೊಂಡಿದ್ದಿದ್ದರೆ, ಇದಾಗಲೇ ಈ ತೆರೆಯು ಸರಿದುಬಿಡಬಹುದಿತ್ತು ಎನ್ನುತ್ತಾಳೆ. ’ಎಷ್ಟೇ ಆಪ್ತನಾದರೂ, ಹತ್ತಿರದ ಸಂಬಂಧಿಯಾದರೂ ಹೆಂಗಸಿಗೆ ಗಂಡಸಿನ ವಿಷಯದಲ್ಲಿ ಎಚ್ಚರಿಕೆಯ ಅನುಮಾನ ಇದ್ದೇ ಇರುತ್ತೆ. ತನ್ನ ಪರಿಶುದ್ಧತೆ ಕಾಪಾಡಿಕೊಳ್ಳುಕ್ಕೆ ಹೆಂಗಸಿಗೆ ಅಗತ್ಯವಾಗಿ ಇರಬೇಕಾದ ಎಚ್ಚರಿಕೆ ಇದು. ಗಂಡನ ಜೀವಕ್ಕೇ ಅಪಾಯವಿದೆ ಅನ್ನುವ ಸಂದರ್ಭದಲ್ಲಿ ನೀನು ನಿನ್ನ ಮೈದುನನನ್ನು ಸಂಶಯಿಸಿದ್ದು ತೀರ ಅಸಹಜವಲ್ಲ. ತಂದೆಯಾಗಲಿ, ಸೋದರನಾಗಲಿ, ಹತ್ತಿರದ ಬಂಧುವಾಗಲಿ ಹೆಂಗಸು ಏಕಾಂತದಲ್ಲಿರಬಾರದು ಅಂತ ಶಾಸ್ತ್ರಕಾರರು ಯಾಕೆ ಬರೆದಿದಾರೆ? ನೀನು ಅಂದ ಮಾತುಗಳನ್ನು ಲಕ್ಷ್ಮಣನು ರಾಮನಿಗೆ ಹೇಳದೆ ತಾನೇ ಭರ್ತ್ಸನೆಗೆ ಒಳಗಾದದ್ದು ಅವನ ದೊಡ್ಡತನ. ಆದರೆ ಇಪ್ಪತ್ತು ವರ್ಷವಾದರೂ ಕೋಪವನ್ನು ಮನಸ್ಸಿನಲ್ಲಿ ಹುದುಗಿಸಿಕೊಂಡಿರೂದು ಹೆಂಗಸಿನ ವಿಷಯದಲ್ಲಿ ಅವನ ಅಜ್ಞತೆಯನ್ನು ತೋರಿಸುತ್ತೆ. ಚಿಕ್ಕವಯಸ್ಸಿನಿಂದ ಅಕ್ಕ ತಂಗಿ ಜ್ಞಾತಿಸೋದರಿಯರ ಜೊತೆ ಬೆಳೆಯದ ಗಂಡಸರೆಲ್ಲ ಹೀಗೆಯೇ. ಹೆಂಗಸರ ಮನಸ್ಸಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳದ ಒರಟರು. ಅಯೋಧ್ಯೆಯ ನಾಲ್ಕುಜನ ಸೋದರರೂ ಅಷ್ಟೆ. ಶ್ರೀರಾಮ ಮಹಾರಾಜರೇನೂ ಇದಕ್ಕೆ ಹೊರತಲ್ಲ’ ಎಂದು ತೀರ್ಮಾನವನ್ನೇ ಕೊಟ್ಟುಬಿಡುತ್ತಾಳೆ. 
ಸೀತೆಯನ್ನು ಇಬ್ಬರೂ ಒಂದೊಂದು ವಿಧಾನದಲ್ಲಿ ನೋಯಿಸಿದ ರಾಮ, ಲಕ್ಷ್ಮಣರ ಹಿನ್ನೆಲೆಯ ಕುರಿತು ಊರ್ಮಿಳೆ ಸೂಚಿಸುವ ಈ ಆಯಾಮದಲ್ಲಿಯೂ ಚಿಂತಿಸಬೇಕಾಗುತ್ತದೆ. ಇಲ್ಲಿ ಮಹಾರಾಜನೂ, ಭಾವನೂ ಆದ ರಾಮನನ್ನು ಸಹ ಸಾರ್ವಜನಿಕವಾಗಿ ದೂಷಿಸುವುದಕ್ಕೆ ಹಿಂಜರಿಯದ ಹೆಣ್ಣುಮಗಳಾಗಿದ್ದಾಳೆ ಊರ್ಮಿಳೆ ಎಂಬುದನ್ನು ಗಮನಿಸಬೇಕು. ಮತ್ತು ಈ ಮಾತುಗಳು ಅವಳೆಷ್ಟು ಪ್ರೌಢಳು ಎಂಬ ತಿಳಿವಳಿಕೆಯನ್ನು ನೀಡುತ್ತದೆ. ಅಂತ್ಯದಲ್ಲಿ ರಾಮ, ಸೀತೆಯರಿಬ್ಬರೂ ವಿಧಿವಶರಾದಾಗ, ಮಕ್ಕಳ ಪಾಲಿಗೆ ದಿಕ್ಕಾಗಿ ಉಳಿಯುವವಳು, ತಬ್ಬಿಕೊಂಡು ಸಂತೈಸಿ ಕರೆದೊಯ್ಯುವ ಜವಾಬ್ದಾರಿಯುತ ತಾಯಿಯೂ ಸಹಜವಾಗಿ ಊರ್ಮಿಳೆಯೇ ಆಗಿದ್ದಾಳೆ.

ತಾರೆಯ ಕಲ್ಪನೆಯ ಚಿತ್ರ – ರಾಜ ರವಿವರ್ಮ


ತಾರೆಯ ಪಾತ್ರ ರಾಮಾಯಣದಲ್ಲಿರುವಂತೆಯೇ ’ಉತ್ತರಕಾಂಡ’ ದಲ್ಲಿಯೂ ಚಿತ್ರಿತವಾಗಿದೆ. ಒಂದು ಮಾತಿನಲ್ಲಿ ಈಕೆಯ ಬಗ್ಗೆ ವ್ಯಾಖ್ಯಾನಿಸಬೇಕಾಗಿದ್ದಲ್ಲಿ, ಅವಳನ್ನು ’ಅನುಕೂಲ ಸಿಂಧು’ ಎಂದು ಕರೆಯಬಹುದು. ಅಧಿಕಾರ ಯಾರಲ್ಲಿ ಇರುತ್ತದೆಯೋ ತಾರೆ ಅವರ ಮಗ್ಗುಲಲ್ಲಿ ಇರುತ್ತಾಳೆ. ರುಮೆಯೂ ಇದಕ್ಕೆ ಹೊರತಲ್ಲ. ಯುದ್ಧದಲ್ಲಿ ಯಾರು ಗೆಲ್ಲುತ್ತಾರೆಯೋ, ಸೋತವರ ಹೊನ್ನಿನೊಂದಿಗೆ ಹೆಣ್ಣನ್ನೂ ಹೊಂದುವರು ಎನ್ನುವಲ್ಲಿ ಇದು ಸರಿಯಾಗಿಯೇ ಇದೆ. ಆದರ ಇಲ್ಲಿ, ಅಧಿಕಾರದ ಸ್ಥಾನದಲ್ಲಿರುವ ರಾಜನ ಇಚ್ಛೆಗಿಂತ, ರಾಜನನ್ನು ತನ್ನ ಮೋಹದಲ್ಲಿ ಬಂಧಿಸಿ, ಅವನನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಅಧಿಕಾರದ ಸೂತ್ರವನ್ನೂ ತಾನು ಹಿಡಿಯಲು ಬಯಸುತ್ತಾಳೆ ತಾರೆ. ಇಲ್ಲಿಯೇ ತಾರೆಗೂ, ರುಮೆಗೂ ವ್ಯತ್ಯಾಸವಿರುವುದು. ತಾರೆಯ ಈ ಲೆಕ್ಕಾಚಾರಗಳು, ವಿವೇಕ, ಜಾಣ್ಮೆಗಳು ರುಮೆಗೆ ಇಲ್ಲ. ತಾರೆ ಅಣ್ಣ ವಾಲಿಯ ಹೆಂಡತಿಯಾದರೆ, ರುಮೆ ತಮ್ಮ ಸುಗ್ರೀವನ ಹೆಂಡತಿ. ರಾಜನಾಗಿದ್ದ ವಾಲಿಯನ್ನು ಶತೃಗಳು ಅಪಹರಿಸಿದ್ದ ಕಾಲದಲ್ಲಿ, ಸುಗ್ರೀವ ಪೀಠವನ್ನು ಅಲಂಕರಿಸುತ್ತಾನೆ. ಆಗ ಸುಗ್ರೀವನ ರಾಣಿವಾಸದಲ್ಲಿ ತಾರೆ ನಿರಾತಂಕವಾಗಿ ಇರುತ್ತಾಳೆ. ವಾಲಿ ಹಿಂದಿರುಗಿ ಬಂದು, ಸುಗ್ರೀವನನ್ನು ಬಡಿದಟ್ಟಿ, ಸಿಂಹಾಸನಾರೂಢನಾದಾಗ, ’ನಿನ್ನ ಅನುಪಸ್ಥಿತಿಯಲ್ಲಿ ನಿನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಪತಿವ್ರತೆ ನಾನು. ಇದೀಗ ಜೋಪಾನವಾಗಿ ನಿನ್ನ ಸ್ಥಾನವನ್ನು ನಿನಗೆ ಹಿಂದಿರುಗಿಸುತ್ತಿದ್ದೀನಿ’ ಎಂದು ನಾಟಕವಾಗಿ ವಾಲಿಯ ಪ್ರೀತಿಯನ್ನು ಪುನಃ ಗೆಲ್ಲುತ್ತಾಳೆ. ವಾಲಿಯನ್ನು ಸುಗ್ರೀವನ್ನು ಯುದ್ಧಕ್ಕೆ ಕರೆದು, ಮರೆಯಿಂದ ಬಂದ ರಾಮನ ಬಾಣವು ನಾಟಿ ವಾಲಿಯು ಸತ್ತಾಗ, ರೋಧಿಸುವುದಲ್ಲದೆ, ರಾಮನಲ್ಲಿ ಧರ್ಮಸೂಕ್ಷ್ಮದ ಪ್ರಶ್ನೆ ಮಾಡ್ತಾಳೆ. ಮುಂದೆ ರಾಜನಾಗುವ ಸುಗ್ರೀವನೊಂದಿಗೆ ಪುನಃ ಹೊಂದಾಣಿಕೆ ಮಾಡಿಕೊಂಡು, ರುಮೆಗಿಂತಲೂ ಒಂದು ಪಟ್ಟು ಹೆಚ್ಚು ನಿಕಟವಾಗಿ, ಅವನ ಆಪ್ತ ಸಲಹೆಗಾರ್ತಿಯಾಗಿ ಅವನ ಮೇಲೆ ಹಿಡಿತ ಸಾಧಿಸಿಕೊಂಡು ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಾಳೆ. ತನಗೆ ವಾಲಿಯಿಂದ ಹುಟ್ಟಿದ ಮಗ ಅಂಗದನಿಂದ ಸುಗ್ರೀವನಿಗಾಗಲೀ, ಸುಗ್ರೀವನಿಂದ ತನ್ನ ಮಗ ಅಂಗದನಿಗಾಗಲೀ ಯಾವುದೇ ರೀತಿಯ ತೊಂದರೆಯಾಗದಂತೆ ನಾಜೂಕಿನಿಂದ ದಾಳವನ್ನು ನಡೆಸುವ ಅವಳ ಜಾಣ್ಮೆಗೆ ಮೆಚ್ಚಬೇಕು. ತಾರೆಯ ಪಾತ್ರವು ಈಜಿಪ್ಟಿನ ರಾಣಿ ಕ್ಲಿಯೋಪಾತ್ರಳನ್ನು ನೆನಪಿಸುತ್ತದೆ.

ಆಶಾ ರಘು

ಸಾಹಿತ್ಯ ಮೈತ್ರಿ : ಪತ್ರಿಕೆಯ ತಂಡ ಮೇಲಿನ ಅವರ ಬರಹವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಆಶಾ ರಘು ರವರನ್ನು ವಿನಂತಿಸಿ ಅವರ ಒಪ್ಪಿಗೆ ಮೇರೆಗೆ ಪ್ರಕಟಿಸಿರುತ್ತದೆ. ಪತ್ರಿಕೆಯ ಮೇಲಿನ ಅವರ ಕಾಳಜಿ ಹಾಗು ಆಶೀರ್ವಾದಕ್ಕೆ ಚಿರಋಣಿ.

ಶ್ರೀಮತಿ ಆಶಾ ರಘು ಅವರ ಬರಹಗಳು https://asharaghunovelist.blogspot.com/ ನಲ್ಲಿ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.

Related post

Leave a Reply

Your email address will not be published. Required fields are marked *