ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ!

ಏಕವ್ಯಕ್ತಿ ಕಲಾ ಪ್ರದರ್ಶನ – ನಿಸರ್ಗದ ಮಧ್ಯೆ ಚೌಗಲೆ!

ಡಾ. ಡಿ ಎಸ್ ಚೌಗಲೆ ಅವರ ಕಲಾಕೃತಿಗಳ ಪ್ರದರ್ಶನವು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಮೇ 23 ರಿಂದ 31 ರವರೆಗೆ ಕೆ ಎಂ ಎಫ್ ಅವರ ಆಯೋಜಕತ್ವದಲ್ಲಿ ನಡೆಯುತ್ತಿದೆ.

ದಿ ನೇಚರ್ ವಿಥಿನ್‘ ಎಂಬ ಶೀರ್ಷಿಕೆಯಲ್ಲಿ ತಮ್ಮ ನೆಲೆಗಟ್ಟಿನ ಹಿನ್ನೆಲೆಯನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿದ್ದಾರೆ. ಗುಡ್ಡಗಳು ಅದರ ಮೇಲೆ ಮನೆಗಳನ್ನು ವರ್ಣರಂಜಿತವಾಗಿಸಿದ್ದಾರೆ. ತಮ್ಮೂರಿನ ಮಣ್ಣಿನ ಬಣ್ಣವನ್ನು ಕಲಾಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ದೇವಾಲಯದ ಒಳಾಂಗಣವನ್ನು ನೈಜ ವರ್ಣದ ಮೂಲಕ ಯಥಾವತ್ತಾಗಿ ಚಿತ್ರಿಸಿದ್ದಾರೆ. ಅತಿ ದೊಡ್ಡ ಕ್ಯಾನವಸಿನ ಮೇಲೆ ತಿಣುಕದೇ ಚಿತ್ರಿಸಿದ್ದಾರೆ. ನೋಡುಗನ ಕಣ್ಣಿಗೆ ಹಬ್ಬವಾಗಿಸುವಂತಿದೆ.

ಈ ಕಲಾ ಪ್ರದರ್ಶನದ ಅಭಿವ್ಯಕ್ತಿಯು ಕಲಾ ವೀಕ್ಷಕನ ಮನದಲ್ಲಿ ಸಕಾರಾತ್ಮಕ ಗುಣವನ್ನು ಹುಟ್ಟಿಸುತ್ತವೆ. ನೋಡುಗನ ಮನೋರಂಗದಲ್ಲಿ ಮೂಡುವ ಭಾವಾಭಿವ್ಯಕ್ತಿಗಳಿಗೆ ಇಲ್ಲಿನ ಕಲಾವಿದ ಚಿತ್ರರೂಪ ಕೊಟ್ಟಿದ್ದಾರೆ. ಇಲ್ಲಿನ ಅಮೂರ್ತ ಚಿತ್ರಗಳಲ್ಲಿಯ ಬಣ್ಣಗಳ ವಿಭಜನೆ ಹಾಗೂ ಕುಂಚದ ಹೊಡೆತವು ನೋಡುಗನನ್ನು ಸೆಳೆಯುತ್ತವೆ. ಈ ಅನುಭೂತಿಯು ಹೇಗೆ ಕಲಾವಿದನದ್ದೋ, ಹಾಗೆಯೇ ನೋಡುಗನ ಬದುಕಿನ ಅನುಭೂತಿಯೂ ಆಗಿದೆ ಎನ್ನಬಹುದಾಗಿದೆ.

ಇವರ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು ಅಲ್ಲದೇ ಮುಂಬಯಿ, ಪುಣೆ, ಕೊಚ್ಚಿನ, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಅಲ್ಲದೇ ಇವರ ಅನೇಕ ವರ್ಣ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲೂ ಪ್ರದರ್ಶನಗೊಂಡಿವೆ.

ಚೌಗಲೆ ಅವರು ಚಿತ್ರಕಲೆಯಲ್ಲೂ ಅಲ್ಲದೇ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಚೌಗಲೆ ಪ್ರಮುಖರು. ಮರಾಠಿ ಮೂಲದ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚೆಚ್ಚು ಕಾರ್ಯ ಮಾಡಿದ್ದಾರೆ. ಇತ್ತೀಚೆಗೆ `ಮಾತಂಗಿ ದೀವಟಿಗೆ’ ಸಿನಿಮಾದಲ್ಲೂ ನಟಿಸುವ ಮೂಲಕ ಚಿತ್ರರಂಗಕ್ಕೂ ಅಡಿ ಇಟ್ಟಿದ್ದಾರೆ.

ಚೌಗಲೆ ನೆಲೆಗಟ್ಟು ಹಾಗೂ ರಂಗಭೂಮಿಯ ನಂಟು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಳಗಾವಿಯ ನಗರದಲ್ಲಿ ಖಾಸಗಿ ಕಾಲೇಜಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಕನ್ನಡ ಮತ್ತು ಮರಾಠಿ ಆಧುನಿಕ ರಂಗಭೂಮಿ ವಿಷಯದಲ್ಲಿ ಸಂಶೋಧನೆ ನಡೆಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಗಾಂಧಿ-ಅಂಬೇಡ್ಕರ,ಪೇಯಿಂಗ್ ಗೆಸ್ಟ್, ಕಿರವಂತ, ‘ಚದುರಂಗ ಮತ್ತು ಕತ್ತೆ’, ಶುದ್ಧವಂಶ’, ‘ಸತ್ಯ ಶೋಧಕ’ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.

ಮೂಲ ಮರಾಠಿ ಭಾಷೆಯಿಂದ ದಲಿತ ಲೇಖಕ ಲಕ್ಷಣ ಗಾಯಕವಾಡರ ಉಚಲ್ಯಾ ಆತ್ಮ ಕಥನವನ್ನು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ನಾಟಕವಾಗಿ ರೂಪಾಂತರಿಸಿದ್ದಾರೆ. ಅಲ್ಲದೇ ಚೌಗಲೆ ಅವರ ಎಲ್ಲಾ ನಾಟಕಗಳು ಈಗ ಒಟ್ಟಿಗೆ ಸಂಕಲನದ ರೂಪದಲ್ಲಿ ದೊರೆಯುವಂತಾಗಿದೆ. ಕನ್ನಡ-ಮರಾಠಿ ಆಧುನಿಕ ರಂಗಭೂಮಿ’ ಸಂಶೋಧನ ಕೃತಿ, ಮರಾಠಿ ಚಿತ್ರಕ್ಕೆ ಕನ್ನಡ ಸಂಭಾಷಣೆಯನ್ನೂ ಬರೆದಿದ್ದಾರೆ.
ದಿಶಾಂತರ’, ವಖಾರಿಧೂಸ, ‘ಉದ್ದಷ್ಟ’ ನಾಟಕಗಳು ಮರಾಠಿ ಮತ್ತು ಇಂಗ್ಲಿಷ್‍ಗೆ ಅನುವಾದಗೊಂಡಿವೆ.

ಸಾಹಿತ್ಯ ಕ್ಷೇತ್ರಕ್ಕೆ ಚೌಗಲೆ ಕೊಡುಗೆ

ಬಹುಮುಖ ಪ್ರತಿಭೆಯ ಚೌಗಲೆ ಕೇವಲ ನಾಟಕಕಾರರಷ್ಟೇ ಅಲ್ಲ, ಕಥೆಗಾರರಾಗಿಯೂ ಗುರುತಿಸಿಕೊಂಡಿಸಿದ್ದಾರೆ. ಮೂರು ಕಥಾ ಸಂಕಲನಗಳನ್ನು ಹೊರ ತಂದಿದ್ದಾರೆ. ನೆರಳುಗಳು’ (ಕಾದಂಬರಿ), ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ಮರಾಠಿ ಕೈದಿಗಳ ಕವಿತೆಗಳು’ ಇವು ಚೌಗಲೆ ಅವರ ಪ್ರಮುಖ ಅನುವಾದಿತ ಕೃತಿಗಳು. ವಾರಸಾ’ , ಒಡಲ ಉರಿಯ ಹೊತ್ತು’, ಚೌಗಲೆ ಕತೆಗಳು’, ಜಂಗು ಹಿಡಿದ ಬ್ಲೇಡು’, ‘ಸೀಮೆಗೊಂದು ಅಟಾಟಿ’ ಅವರ ಕಥಾ ಸಂಕಲನಗಳು. ‘ಸುಡುಕಾವಿನ ಒಣ ಎಲೆ’ ಕವನ ಸಂಕಲನ.

ಪ್ರಶಸ್ತಿ-ಪುರಸ್ಕಾರಗಳು

ಚಿತ್ರಕಲೆ ಮತ್ತು ರಂಗಭೂಮಿ ಕುರಿತು ಹಲವು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕಕಾರ ಪ್ರಶಸ್ತಿ’, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ , ದಿಶಾಂತರ’ ನಾಟಕಕ್ಕೆ ಪ್ರತಿಷ್ಠಿತ ಚದುರಂಗ’ ಪ್ರಶಸ್ತಿ ಮತ್ತು ಜೋಳದರಾಶಿ ದೊಡ್ಡನಗೌಡ’ ಪ್ರಶಸ್ತಿಗಳಂತಹ ಹಲವಾರು ಪುರಸ್ಕಾರಗಳು ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ `ವರದರಾಜ ಆದ್ಯ’ ಪ್ರಶಸ್ತಿ ಲಭಿಸಿದೆ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚೌಗಲೆ ಅವರು ಮುಂಬೈ ವಿಶ್ವವಿದ್ಯಾಲಯದ ಜಾನಪದ ರಂಗಭೂಮಿಯ ವಿಭಾಗ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ನಾಟಕ ವಿಭಾಗದ ರಂಗತಜ್ಞರಾಗಿದ್ದಾರೆ.

ಮರಾಠಿ ಮೂಲದ ‘ಗಾಂಧಿ ವರ್ಸಸ್ ಗಾಂಧಿ’

1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಮರಾಠಿಯಿಂದ ಅನುವಾದಗೊಂಡ ನಾಟಕ ‘ಗಾಂಧಿ ವರ್ಸಸ್ ಗಾಂಧಿ’ ಚೌಗಲೆ ಅವರದ್ದೇ. ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ಈ ನಾಟಕದ ಮೂಲಕ ವ್ಯಕ್ತಿಯಾಗಿ ಗಾಂಧಿ ಹಾಗೂ ಹೆಸರು ಕೀರ್ತಿಯ ಗಾಂಧಿಯನ್ನು ತುಲನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಪ್ರದರ್ಶನಗೊಂಡಲೆಲ್ಲಾ ಉತ್ತಮ ಪ್ರತಿಕ್ರಿಯೆಗೆ ಭಾಜನವಾಗಿದೆ.

ಇಂತಹ ನಾಟಕಗಳು ಹೆಚ್ಚೆಚ್ಚು ಪ್ರಚಾರವಾದರೆ ಒಳಿತು. ಇಲ್ಲವಾದಲ್ಲಿ ಇಂತಹ ವಿಭಿನ್ನ ಪ್ರಯೋಗದ ನಾಟಕಗಳನ್ನು ವಿಡಿಯೋ ಮಾಡಿಟ್ಟು ಮುಂದಿನ ಜನಾಂಗಕ್ಕೆ ತಲುಪಿಸುವ ಪ್ರಯತ್ನ ಮಾಡಬೇಕು. ಹಾಗದಲ್ಲಿ ಇನ್ನು ಹತ್ತು ಹದಿನೈದು ವರ್ಷಗಳ ನಂತರ ಇಂತಹ ನಾಟಕಗಳು ಇದ್ದವೆಂದೂ ಹೇಳಬಹುದಷ್ಟೇ ಅದನ್ನು ನೋಡಿಸಲಾಗದು. ಮುಂದಿನ ಜನಾಂಗಕ್ಕೆ ಹಿಂದಿನ ಖ್ಯಾತ ನಾಟಕಗಳನ್ನು ತೋರಿಸುವ ಪ್ರಕ್ರಿಯೆಯು ಈ ತಂತ್ರಜ್ಞಾನ ಬಳಸಿಕೊಂಡು ತಲುಪಿಸಿದರೆ ಸೂಕ್ತ!

ತುಂಕೂರು ಸಂಕೇತ್

Related post

Leave a Reply

Your email address will not be published. Required fields are marked *