ಒಂಟಿಮನೆ-2

ಹಿಂದಿನ ಸಂಚಿಕೆಯಲ್ಲಿ
ಶ್ವೇತ ವರ್ಣದ ಒಂಟಿ ಮನೆಯನ್ನು ದೈರ್ಯದಿಂದ ಕೊಂಡ ದಂಪತಿಗಳಿಗೆ ಮನೆಯಲ್ಲಿ ನೆಡೆದ ವಿಚಿತ್ರ ಘಟನೆಗಳು ದಿಕ್ಕೇ ತೋಚದಂತಾಗುತ್ತದೆ. ಮುಂದೆ…

ಎರಡು-

ಬೆಚ್ಚಿದ್ದ ದಂಪತಿಗಳು ತಮ್ಮ ಮಕ್ಕಳನ್ನು ಹಾಸಿಗೆಯ ಮದ್ಯೆ ಹಾಕಿ ಭಯದಲ್ಲೇ ಹೊದಿಕೆ ಹೊದ್ದು ಮಲಗಿದರು. ತಕ್ಷಣವೇ ಕೊಠಡಿಯ ಬಲ್ಬುಗಳು ತನ್ನಷ್ಟಕ್ಕೆ ತಾನೇ ಆರಿದವು. ಹೊದ್ದಿದ್ದ ಹೊದಿಕೆ ತಾನಾಗಿಯೇ ಹೊರ ಎಳೆಯ ತೊಡಗಿತು. ಕತ್ತರಿಸಿದ ಎರಡು ಕೈಗಳು ಹೆಂಡತಿಯ ಕಾಲಿನ ಪಾದವನ್ನಿಡಿದವು. ಕತ್ತರಿಸಿರುವ ಕೈಗಳಿಂದ ರಕ್ತದ ಹನಿ ಹೋಗುತ್ತಲೇ ಇತ್ತು, ಮಾಸಿದ ಮೂಳೆಗಳ ಮೇಲೆ ಸುಕ್ಕುಗಟ್ಟಿದ ಚರ್ಮದ ಕೈಗಳು.

ಭಯದಲ್ಲಿ ಹೆಂಡತಿ ಜೋರಾಗಿ ಕಿರುಚಿದಳು, ಕೈಗಳಿಂದ ತಪ್ಪಿಸಿಕೊಳ್ಳಲು ಕಾಲನ್ನು ಮೇಲೆ ಕೆಳಗೆ ಜೋರಾಗಿ ಒದ್ದಾಡಿಸಿದಳು. ಕೈಗಳು ಹಿಡಿದ ಪಾದವನ್ನು ತೊರೆಯುತ್ತಿಲ್ಲ,ಹಾಸಿಗೆಯಿಂದ ಎದ್ದವಳೆ ಕಾಲನ್ನು ಜಾಡಿಸತೊಡಗಿದಳು ಏನೂ ಉಪಯೋಗವಿಲ್ಲ ಯಾರೋ ಅಂಟಿಸಿದಂತೆ ಆ ಕೈಗಳು ಕಾಲುಗಳನ್ನು ಗಟ್ಟಿಯಾಗಿ ಹಿಡಿದಿತ್ತು.ಎದ್ದು ಬಂದ ಗಂಡ ಆ ಕೈಗಳನ್ನು ತನ್ನ ಕೈಗಳಿಂದ ಬಿಡಿಸಲು ಪ್ರಯತ್ನಿಸಿದ ಯಾವ ಪ್ರಯತ್ನವೂ ಸಫಲವಾಗಲಿಲ್ಲ.ಬಿಡಿಸಲು ಹೋದ ತನ್ನ ಕೈಗಳೂ ಸಹ ರಕ್ತಮಯವಾಗಿವೆ. ಮನುಷ್ಯನ ಎಲ್ಲ ಪ್ರಯತ್ನಗಳು ಸೋತಾಗ ಕೊನೆಗೆ ನೆನಪಾಗುವುದು ದೇವರೇ, ಹಾಗೆ ಇಬ್ಬರಿಗೂ ತೋಚಿದ್ದು ದೇವರ ಕೋಣೆ; ದೇವರ ಸನ್ನಿಧಿಯಲ್ಲಿ ಪೈಶಾಚಿಕ ಮುಕ್ತಿ ದೊರೆಯಬಹುದು ಎಂದು ದೇವರ ಕೋಣೆಯ ಕಡೆಗೆ ನಡೆಯುವ ಯತ್ನ. ಕೋಣೆಯ ಬಾಗಿಲನ್ನು ತೆರೆದು ನೋಡಿದರೆ ಏನೂ ಕಾಣದ ಕಗ್ಗತ್ತಲೆ. ಕೋಣೆಯಲ್ಲಿದ್ದ ಟಾರ್ಚ್ ತೆಗೆದುಕೊಂಡು ಬೆಳಕನ್ನು ಹಾಯಿಸಿದರೂ ಅದೇ ಕಗ್ಗತ್ತಲೆ ಏನೂ ಕಾಣುತ್ತಿಲ್ಲ. ಇದಾವ ಶಾಪದ ಪರಿಣಾಮವೋ
ಎಂದು ಯಾವುದಾದರೂ ಸಹಾಯಕ್ಕಾಗಿ ಪರಿತಪಿಸುತ್ತಿದ್ದಾರೆ, ಕೈಕಾಲುಗಳು ಸ್ತಬ್ದವಾಗುತ್ತಿವೆ, ಬಾಯಿಯಿಂದ ಮಾತುಗಳು ಕೂಡಾ ಹೊರಡದಂತಾಗಿದೆ, ಭಯದ ಆಟಕ್ಕೆ ಕಣ್ಣೀರಧಾರೆ ಧುಮ್ಮಿಕ್ಕುತ್ತಿದೆ.

ತಾ ಮಾಡಿದ ಕರ್ಮಕ್ಕೆ ರಾಮ ನಾಮ ಜಪವೇ, ಮನುಷ್ಯ ತಾ ಕರ್ಮಗಳ ಮಾಡುವಾಗ ದೇವರು ನೆನಪಿಗೆ ಬಾರನು, ಕರ್ಮದ ಫಲ ಸಂತೋಷವಾದರೆ ಆಗಲೂ ಸಹ ದೇವ ನೆನಪಿಗೆ ಬಾರನು, ಆದರೆ ಯಾವಾಗ ಮಾಡಿದ ಕರ್ಮದ ಫಲ ಋಣಾತ್ಮಕವಾಗಿ ಕೆಟ್ಟ ಅನುಭವವಾಗುವುದೋ ಆಗ ತನ್ನ ಸಹಾಯಕ್ಕೆಂದು ದೇವರನ್ನು ತಕ್ಷಣ ಪ್ರತ್ಯಕ್ಷನಾಗಿಸುವ ಮನುಷ್ಯ, ಇದೇ ಮನುಜ ಸ್ವಾರ್ಥ. ಹೀಗೆ ಗಂಡನೂ ಸಹ ಮನದಲ್ಲೇ ದೇವರ ನಾಮ ಜಪಿಸುತ್ತ ತನ್ನ ಹೆಂಡತಿಯ ಕೈ ಹಿಡಿದು ಮುಂದೆ ಸಾಗಿದ,ಗೊಡೆಯನ್ನೆ ದಿಕ್ಸೂಚಿಯನ್ನಾಗಿಸಿ ಅದರ ಆಸರೆ ಕೋರುತ ಸಾಗ ತೊಡಗಿದ. ಸಾಗುತ್ತಾ ಮೆಟ್ಟಿಲುಗಳು ದೊರತಂತಾಯ್ತು, ಕೆಳ ಇಳಿಯತೊಡಗಿದರು ಭಯದ ಕ್ರೂರತೆಗೆ ಕೋಣೆಯಲ್ಲಿ ಮಲಗಿದ ಮಕ್ಕಳ ಧ್ಯಾಸವೇ ಮರೆತು ಹೋಗಿತ್ತು. ಮೆಟ್ಟಿಲುಗಳು ಇಳಿದಂತೆ ಈ ಭಯದ ಬೆವರಿನ ಸನ್ನಿವೇಶದಲ್ಲಿ ತಂಪಾದ ಗಾಳಿ ಸೋಕುತ್ತಿದೆ,ಕಾಲಿಗೆ ಏನೋ ತಾಕಿದ ಅನುಭವ ಮುಂದೆ ಹೆಜ್ಜೆ ಇಡುತ್ತಿದ್ದಂತೆ ಹೂ ಬಳ್ಳಿಗಳು ಕಾಲಿಗೆ ತಾಗುತ್ತಿವೆ ಮನೆಯೊಳಗೆ ಬಳ್ಳಿಗಳು ಎಲ್ಲಿಂದ ಬಂದವು ಗಂಡನ ತಲೆಯಲ್ಲಿ ಯೋಚನೆ ಎದೆಯಲ್ಲಿ ನಡುಕ.

ದೇವರನ್ನೇ ನೆನೆಯುತ್ತಾ ತಲೆಯೆತ್ತಿದ ಗಂಡನಿಗೆ ತಕ್ಷಣ ಕಂಡಿದ್ದು ಆಕಾಶದಲ್ಲಿನ ಬೆಳದಿಂಗಳ ಚಂದ್ರ ಸುತ್ತಲೇ ಕತ್ತಲು ನೋಡಿದರೆ ಅವರು ತಲುಪಿದ್ದು ಮನೆಯ ಹೊರಗಿನ ಹೊರಾಂಗಣ.ಕಗ್ಗತ್ತಲೆಯ ಹೊರಾಂಗಣದಲ್ಲಿ ಮೂಲೆ ಮೂಲೆಯಲ್ಲಿ ಸತ್ತ ದೇಹಗಳ ಜೊತೆ ಆತ್ಮಗಳ ದರ್ಶನ. ಸುತ್ತಲೂ ನೋಡಿದರು ಎತ್ತ ನೋಡಿದರೂ ಹೆಣಗಳ ರಾಶಿ, ತಾವು ಇರುವುದು ತಮ್ಮ ಮನೆಯಲ್ಲಿಯೋ ಅಥವಾ ಸ್ಮಶಾನದಲ್ಲಿಯೋ ಎಂದು ಒಂದು ಕ್ಷಣ ದಿಗ್ಭ್ರಮೆಯಾಯಿತು. ಸ್ವಲ್ಪ ಮುಂದೆ ಮಣ್ಣಲ್ಲಿ ಅರ್ಧಂಬರ್ಧ ಅವಿತಿದ್ದ ಹೊಳೆಯುವ ಹಾಳೆಯೊಂದು ಪತಿಯ ಕೈದೊರಕಿತು. ತೆಗೆದು ನೋಡಿದರೆ ಅದು ತಾಮ್ರದ ಹಾಳೆ.ಅಲ್ಲಿ ದೊರೆತ ತಾಮ್ರದ ಹಾಳೆಯಲ್ಲಿ ಹೀಗೆ ಬರೆದಿತ್ತು ” ಈ ಮನೆಯಲ್ಲಿ ಯಾರೂ ಪ್ರವೇಶಿಸದ ಹೊರತು ಇಲ್ಲಿರುವ ಆತ್ಮಗಳು ಯಾರ ಕಣ್ಣಿಗೂ ಕಾಣವು, ಹಾಗೆ ಯಾರಾದರೂ ಪ್ರವೇಶಿಸಿ ವಾಸಿಸಿದಲ್ಲಿ ಈ ಆತ್ಮಗಳ ಪ್ರಭಾವಕ್ಕೆ ಒಳಪಡುತ್ತಾರೆ. ಆಗ ಅವರು ಈ ದಿಗ್ಬಂಧನದ ಪ್ರತೀ ಮನೆ ಪ್ರವೇಶಿಸಿ, ಅಲ್ಲಿ ಗೋಚರವಾಗುವ ಆ ಆತ್ಮಗಳ ಕಥನದ ಭಾಗವಾಗಿ, ಆ ನಡೆದ ನೈಜ ಕಥೆಯಲ್ಲಿ ಆತ್ಮಗಳ ಪಾತ್ರದ ಜೊತೆ ಪಾತ್ರಗಳಾಗಿ, ಆ ಕಥೆಯಲ್ಲಿ ಆತ್ಮದ ಪಾತ್ರಗಳು ಸಾಯುವ ಮುನ್ನವೇ, ಪಾತ್ರಗಳ ಜೊತೆ ಸೆಣಸಾಡಿ ಸಿಕ್ಕಿ ಹಾಕಿಸಿ ಆ ಕಥೆಯಲ್ಲಿ ಸಿಗುವ ಜಲ, ಅಗ್ನಿ ಅಥವಾ ವಾಯು ಮೂಲಗಳ ಮೂಲಕ ಕಥೆಯಿಂದ ನಿರ್ಗಮಿಸಿ, ಆ ಮನೆಯಲ್ಲಿನ ಆತ್ಮಗಳ ದೇಹವನ್ನು ಸುಟ್ಟು ಹಾಕಿ ಆತ್ಮಗಳಿಂದ ಮುಕ್ತಿ ಹೊಂದಬಹುದು, ಮುಂದಿನ ಮನೆ ಪ್ರವೇಶ ಮಾಡಬಹುದು. ಒಂದು ಮನೆಯಿಂದ ನಿರ್ಗಮಿಸದೆ ಮುಂದಿನ ಮನೆಗೆ ಹೋಗುವ ಪ್ರಯತ್ನ ಜೀವವನ್ನೇ ಆಹುತಿ ಪಡೆವುದು. ಮುಕ್ತಿ ಪಡೆದು ಮನೆಯಿಂದ ನಿರ್ಗಮಿಸುವವರೆಗೂ ಈ ಒಂಟಿ ಮನೆಯಲ್ಲೇ ಈ ಆತ್ಮಗಳ ಪ್ರಭಾವದಲ್ಲೇ ಇರುವರು. ಅಷ್ಟ ದಿಗ್ಬಂಧನ ಹಾಕಿದ ಬಿಳಿ ಗೆರೆಗಳು ಹುಣ್ಣಿಮೆಯ ಬೆಳಕನ್ನು ಹಿಂಗಿ ಕತ್ತಲೆಯನ್ನು ಕವಿದಿದ್ದವು. ಅಲ್ಲಿರುವ ಎಲ್ಲಾ ಆತ್ಮಗಳನ್ನು ಅದೇ ಮನೆಯ ಆವರಣದಲ್ಲಿ ಅಷ್ಟ ದಿಗ್ಬಂಧನಕ್ಕೆ ಒಳಪಡಿಸಿರುವುದು ಗಂಡನಿಗೆ ಅದರಿಂದ ಸ್ಪಷ್ಟವಾಗಿತ್ತು.

ದಿಗ್ಬಂಧನದ ಎಂಟು ಮನೆ ಬರೆದು ಎಂಟು ಆತ್ಮಗಳನ್ನು ಬಂಧಿಸಿರುವುದು ಗೋಚರವಾಗುತ್ತಿತ್ತು. ವಾಸ್ತವದಲ್ಲಿ ಅದು ಮನೆಯ ಆವರಣವಾದರೂ, ಪ್ರತೀ ಮನೆಯಲ್ಲೂ ಆ ಆತ್ಮಗಳು ಸತ್ತು ಅವುಗಳ ದೇಹಗಳನ್ನು ಹೂತಿಟ್ಟ ಗೋರಿಯ ಜಾಗ ಅದಾಗಿತ್ತು.ಒಂದು ಕ್ಷಣ ಗಂಡನಿಗೆ ತಾನು ಕೊಂಡಿದ್ದು ತೋಟವನ್ನಲ್ಲ ತೋಟದೊಳಗಿನ ಸ್ಮಶಾನವೆಂಬ ಅರಿವಾಯಿತು.ಆಗ ಪತಿಗೆ ತೋಚಿತು ಈ ಕಾರಣದಿಂದಲೇ ಮನೆ ಮಾರುವ ದಲ್ಲಾಳಿ ಮೋಸ ಮಾಡಿ ಎಲ್ಲವನ್ನೂ ಮುಚ್ಚಿಟ್ಟು,ಆತುರಾತುರವಾಗಿ ಸಿಕ್ಕ ಕಡಿಮೆ ಬೆಲೆಗೆ ಮನೆಯನ್ನು ಮಾರಿದ್ದನು ಎಂದು. ಇಷ್ಟೆಲ್ಲಾ ನಡೆಯುವ ಮಧ್ಯೆ ತನ್ನ ಹೆಂಡತಿಯ ಕಾಲನ್ನು ಹಿಡಿದಿದ್ದ ಕೈಯೊಂದು ತಾನಾಗೇ ಸರಿದು, ವಯಸ್ಸಾಗಿ ಸತ್ತು ಬಿದ್ದಿದ್ದ ಮಹಿಳೆಯ ಹೆಣದತ್ತ ಕೈದೋರುತ್ತ ಬೆರಳನ್ನೆ ಕಾಲಿನ ತರಹ ಬಳಸುತ್ತ ಆಕಡೆಯೆ ಸಾಗಿತು. ಹೀಗೆ ಸಾಗುತ್ತಿದ್ದ ಕೈಗಳನ್ನು ನೋಡುತ್ತಾ ಹೆಂಡತಿ ಭಯಭೀತರಾಗಿ ಹಿಂದೆ ಹಿಂದೆ ಸರಿಯುತ್ತಿದ್ದಳು. ಆ ದೇಹ ಸೇರುತ್ತಲೇ ಕೈಗಳು ಕತ್ತರಿಸಿದ್ದ ತನ್ನ ಉಳಿದ ಭಾಗದ ಮಣಿಕಟ್ಟಿನ ಜೊತೆ ಸೇರ್ಪಡೆಗೊಂಡು ಆಡತೊಡಗಿತು.

ಯಾವುದೋ ಮೂಲೆಯಲ್ಲಿ ಬಿಳಿಯ ಬೋರ್ಡಿನ ಮೇಲೆ ರಕ್ತದಲ್ಲಿ ಬರೆದಿತ್ತು “ನಮ್ಮ ನೋವಿನ ಪರಿವೆಯು ಇಷ್ಟರಲ್ಲೇ ನಿಮಗೆ ಅರಿವಾಗುವುದು”. ಇದನ್ನು ಕಂಡ ದಂಪತಿಗಳಲ್ಲಿ ನಡುಕ ಮತ್ತೆ ವಿಧಿ ತಮ್ಮನ್ನು ಯಾವ ಕಡೆ ಎಳೆಯುವುದೋ ಎಂದು. ನೋಡುನೋಡುತ್ತಿದ್ದಂತೆ ಹೆಂಡತಿಯ ಕಾಲು ಹಿಡಿದಿದ್ದ ಇನ್ನೊಂದು ಕೈ ಆಕೆಯನ್ನು ಆ ಹೆಣ್ಣಿನ ದೇಹದತ್ತ ಎಳೆಯ ತೊಡಗಿತು. ಅದನ್ನು ತಪ್ಪಿಸಲು ಗಂಡ ಆಕೆಯ ಕೈ ಹಿಡಿದು ಎಳೆಯ ತೊಡಗಿದ ಆದರೆ ಪ್ರಯೋಜನವಿಲ್ಲ ಕತ್ತರಿಸಿದ ಕೈ ಇಬ್ಬರನ್ನೂ ಆ ದೇಹದತ್ತ ಎಳೆದೊಯ್ಯಿತು. ಆಗ ಇನ್ನೊಂದು ಕೈಯೂ ಸಹ ಮುದುಕಿಯ ಸತ್ತ ದೇಹದ ಉಳಿದ ಭಾಗವನ್ನು ಸೇರಿಕೊಂಡಿತು. ಜೀವವಿರದ ಹೆಣದ ಪಕ್ಕದಲ್ಲೇ ಸತ್ತ ಮುದುಕಿಯ ಆತ್ಮ ಪ್ರತ್ಯಕ್ಷ.ವಯಸ್ಸಾದ ಮುದುಕಿ,ಸಂಪೂರ್ಣ ಬಿಳೀ ತುಂಬಿದ ಕಣ್ಣುಗಳು.ಆತ್ಮ ಇನ್ಹೇಗೆ ತಾನೇ ಇದ್ದೀತು.ಆತ್ಮವನ್ನು ನೋಡುತ್ತಲೇ ಹೆಂಡತಿಗೆ ಬಿಕ್ಕಿ ಬಿಕ್ಕಿ ಅಳು ಬರುತಿತ್ತು ಆದರೆ ಅಳಲಾಗದೆ ತನ್ನ ಅಳುವನ್ನು ಒತ್ತಿಹಿಡಿದು ಬಿಕ್ಕುತ್ತಿದ್ದಳು.ಆತ್ಮ ತನ್ನ ಕಥೆಯನ್ನು ಪ್ರಾರಂಭಿಸುತ್ತಲೇ, ಕಥೆಯ ಸನ್ನಿವೇಶಕ್ಕೆ ಆತ್ಮದ ಜೊತೆ ದಂಪತಿಗಳ ಪ್ರವೇಶ.
ಆ ಕಥೆಯೊಳಗೆ ಆತ್ಮದ ಪಾತ್ರದ ಜೊತೆ ತಾವೂ ಪಾತ್ರವಾದರು.

ಮುಂದುವರಿಯುವುದು ….

Related post

2 Comments

  • Story is thrilling pls continue

  • Story is thrilling

Leave a Reply

Your email address will not be published. Required fields are marked *