ಒಂಟಿಮನೆ-5

ಹಿಂದಿನ ಭಾಗದಲ್ಲಿ


ಮಾಂತ್ರಿಕನಿದ್ದ ಜಾಗ ಸಮೀಪಿಸುತ್ತಿದ್ದಂತೆ ಆಕೆ ಬಿಕ್ಕಿ ಬಿಕ್ಕಿ ಅಳ ತೊಡಗಿದಳು, ಆಕೆಯ ಅಳುವನ್ನು ಗಮನಿಸಿದ ಮಾಂತ್ರಿಕನ ಪ್ರಿಯತಮೆಯ ಆತ್ಮಕ್ಕೆ ಖುಷಿಯೋ ಖುಷಿ .. ಆತ್ಮ ಸೇರಿದ್ದ ಸೀಸೆಯನ್ನ ಮಾಂತ್ರಿಕನ ಕಾಲಿನ ಪಕ್ಕದ ಮುಂದೆ ಒಂದೆಡೆ ಇರಿಸಿ, ಮೂರ್ಚೆ ಹೋಗಿದ್ದ ಆಕೆಯ ಪತಿಯನ್ನು ಪಕ್ಕಕ್ಕೆ ಮಲಗಿಸಿ ಆಕೆಯನ್ನು ಪೂಜಾ ಕುಂಡದ ಮುಂದೆ ಕೂರಿಸಿ ಅವಳ ಮೇಲೆ ರಕ್ತ, ಕುಂಕುಮ, ಅರಿಶಿನವನ್ನು ಚೆಲ್ಲಿದರು. ಆ ಸನ್ನಿವೇಶದಲ್ಲಿ ಆಕೆ ಪೂಜೆಗೆ ಬಲಿ ಕೊಡುವ ಕುರಿಯಂತೆ ಕಾಣುತ್ತಿದ್ದಳು.


ಮುಂದುವರೆದ ಭಾಗ

ಹೀಗೆ ಆಕೆಯನ್ನು ಬಲಿಕೊಡಲು ಮಂತ್ರವನ್ನು ಪಠಿಸುತ್ತಾ ಮಾಂತ್ರಿಕ ಪೂಜೆಯನ್ನು ಮುಂದುವರಿಸಿದಾಗ, ಆ ಹೆಣ್ಣಿನ ಆತ್ಮವು ಆಕೆಯ ದೇಹವನ್ನು ಬಲಿಕೊಟ್ಟ ನಂತರ ಆಕೆಯ ದೇಹದ ಪ್ರವೇಶಿಸಿ ಹೊಸ ಜೀವನ ಪಡೆಯಲು ಖುಷಿಯಿಂದ ಕಾಯುತ್ತಾ ಆ ಬೆಂಕಿ ಕುಂಡದ ಸುತ್ತ ಸುತ್ತುತ್ತಿತ್ತು.ಮಾಂತ್ರಿಕ ಬೆಂಕಿ ಕುಂಡದಲ್ಲಿ ತನ್ನ ರಕ್ತದ ಹನಿಗಳನ್ನು ಚಿಮ್ಮುತ್ತ ಆ ಹೆಣ್ಣನ್ನು ಕರೆತರಲು ತಾನು ಆಹ್ವಾನಿಸಿದ್ದ ಆ ಆತ್ಮಗಳನ್ನು ಪೈಶಾಚಿಕ ಶಕ್ತಿಗಳೊಂದಿಗೆ ತನ್ನ ಯಜ್ಞದಲ್ಲಿ ಭಾಗವಹಿಸಲು ಆಹ್ವಾನಿಸುತ್ತಾನೆ. ಹೀಗೆ ಆಹ್ವಾನಿತರಾಗಿ ಆ ಆತ್ಮಗಳು ಗಾಳಿಯಲ್ಲಿ ಮತ್ತಷ್ಟು ಮೇಲೆ ಹಾರುತ್ತಾ ಯಜ್ಞ ಕುಂಡವನ್ನು ಮಧ್ಯಭಾಗವಾಗಿ ಕೇಂದ್ರೀಕರಿಸಿ ಗಹಗಹಿಸಿ ನಗುತ್ತಾ ಮೇಲೆ ಗಾಳಿಯಲ್ಲಿ ಅದನ್ನೇ ವೃತ್ತಾಕಾರದಲ್ಲಿ ಸುತ್ತತೊಡಗಿದವು. ತನ್ನ ಕೈಯಲ್ಲಿ ಬೆಳೆದಿದ್ದ ಉದ್ದವಾದ ಉಗುರಿನಿಂದ ಬಲಿಕೊಡಲು ಕೂತಿದ್ದ ಆ ಹೆಣ್ಣಿನ ಕೈ ಚರ್ಮವನ್ನು ಕೊಯ್ಯುತ್ತಿದ್ದಂತೆ ಅದರಿಂದ ಚಿಮ್ಮಿದ ರಕ್ತವು ಮಾಂತ್ರಿಕನ ಮುಖ, ಯಜ್ಞ ಕುಂಡ ಹಾಗೂ ಅಲ್ಲೇ ಮಲಗಿಸಿದ್ದ ಅವಳ ಪತಿಯ ಮುಖಕ್ಕೂ ಸಿಡಿಯಿತು. ಹೊರಚಿಮ್ಮುತ್ತಿದ್ದ ರಕ್ತವನ್ನು ಮಾಂತ್ರಿಕ ಒಂದು ಪಾತ್ರೆಯಲ್ಲಿ ಶೇಖರಿಸಿದ.ಅದನ್ನೇ ತನ್ನ ರಕ್ತದೊಂದಿಗೆ ಬೆರೆಸಿ ಯಜ್ಞ ಕುಂಡಕ್ಕೆ ಹಾಕತೊಡಗಿದ. ಯಜ್ಞ ಕುಂಡದಲ್ಲಿ ಬೀಳುತ್ತಿದ್ದ ಆ ರಕ್ತ ಆಹ್ವಾನಿತ ಆತ್ಮಗಳ ಪೈಶಾಚಿಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತಿತ್ತು. ಹೀಗೆ ಶಕ್ತಿ ಇಮ್ಮಡಿಗೊಳ್ಳುತ್ತಿದ್ದ ಆ ಆತ್ಮಗಳು ಮೇಲೆ ಗಾಳಿಯಲ್ಲಿ ಅತಿ ವೇಗವಾಗಿ ಸುತ್ತ ತೊಡಗಿದವು. ಆ ಆತ್ಮಗಳು ಸುತ್ತುತ್ತಿದ್ದ ವೇಗಕ್ಕೆ ಯಜ್ಞ ಕುಂಡದ ನೇರಕ್ಕೆ ಮೇಲೆ ಮೋಡದಂತೆ ಕಾಣುವ ಒಂದು ರಕ್ತ ಕೆಂಪಿನ ವೃತ್ತ ನಿರ್ಮಾಣವಾಯಿತು.ಇತ್ತ ಕಡೆ ತನ್ನ ಪತ್ನಿಯ ರಕ್ತ ತನ್ನ ಮುಖಕ್ಕೆ ಚಿಮ್ಮುತ್ತಿದ್ದಂತೆ ಮೆಲ್ಲನೆ ಕಣ್ಣು ಬಿಡುತ್ತಾ ಎಚ್ಚರಗೊಂಡ ಪತಿ ತನ್ನ ಕೈ ಕಾಲುಗಳನ್ನು ಕಟ್ಟಿ ಹಾಕಿದರು ಯಾರಿಗೂ ಗೊತ್ತಾಗದ ಹಾಗೆ ಮೆಲ್ಲನೆ ಅದರಿಂದ ಬಿಡಿಸಿಕೊಂಡು ತನ್ನ ಪತ್ನಿಯನ್ನು ಕಾಪಾಡುವ ಪ್ರಯತ್ನದಲ್ಲಿದ್ದ.ಹೀಗೆ ಪ್ರಯತ್ನಿಸುತ್ತಾ ತನ್ನ ಕಣ್ಣುಗಳನ್ನು ಆಚೆ ಈಚೆ ಹರಿಸಿದಾಗ ಒಂದು ಕಡೆ ಬಲಿಕೊಡುವ ಕುರಿಯಂತೆ ಅಳುತ್ತಾ ಕೂತಿದ್ದ ತನ್ನ ಹೆಂಡತಿ, ಅವಳ ಮುಂದೆ ಯಜ್ಞ ಕುಂಡಕ್ಕೆ ರಕ್ತಾಭಿಷೇಕ ಮಾಡುತ್ತಾ ಮಂತ್ರ ಪಠಿಸುತ್ತಿದ್ದ ಮಾಂತ್ರಿಕ, ಅವನ ಕಾಲಿನ ಪಕ್ಕದಲ್ಲೇ ಸೀಸೆಯಲ್ಲಿ ಸೆರೆಹಿಡಿದಿದ್ದ ಆತ್ಮ(ಆ ಆತ್ಮ ತಮ್ಮ ಸಹಾಯಕ್ಕೆ ಬಂದಿತೆಂದು ಅವನಿಗೆ ಯಾವ ಸುಳಿವೂ ಇರಲಿಲ್ಲ ಏಕೆಂದರೆ ಆ ಆತ್ಮ ಅವರ ಸಹಾಯಕ್ಕೆಂದು ಪ್ರವೇಶ ಮಾಡಿದ್ದು ಅವನ ದೇಹವೇ ಆಗಿದ್ದರಿಂದ), ಆ ಯಜ್ಞ ಕುಂಡಕ್ಕೆ ನೇರವಾಗಿ ಮೇಲೆ ಆತ್ಮಗಳಿಂದ ನಿರ್ಮಿತವಾದ ರಕ್ತ ಕೆಂಪಿನ ಒಂದು ವೃತ್ತಾಕಾರದ ಕೂಪ, ಇನ್ನೊಂದೆಡೆ ಮಾಂತ್ರಿಕನ ಯಜ್ಞಕ್ಕೆ ಸಹಾಯವಾಗಿ ಮಂತ್ರ ಪಠಿಸುತ್ತಾ ತಲೆ ಬಾಗಿ ಕೂತಿರುವ ಅವನ ಸಹಚರರು.

ಮಾಂತ್ರಿಕನ ಕಾಲ ಬಳಿಯಲ್ಲಿ ಆ ಸೀಸೆಯೊಳಗೆ ಸಿಲುಕಿ ಕೊಂಡಿದ್ದ ಆತ್ಮ ಆ ಸೀಸೆಯಿಂದಾಚೆ ಹೊರಬರಲು ಯಾರದೋ ಸಹಾಯವನ್ನು ಬೇಡುತ್ತಾ ಒಳಗಡೆಯೇ ಸುತ್ತುತ್ತಾ ಜೋರಾಗಿ ಕಿರುಚುತ್ತಾ ಪ್ರತ್ನಿಸುತ್ತಿತ್ತು.ಆದರೆ ಸೀಸೆಯ ಕಾರಣ ಅದರ ಧ್ವನಿ ಹೊರಗೆ ಕೇಳದಾಗಿತ್ತು.ಈ ಎಲ್ಲಾ ದೃಶ್ಯಗಳು ಬಂಧಿತವಾಗಿ ಸೂಕ್ಷ್ಮವಾಗಿ ಆಚೀಚೆ ಗಮನಿಸುತ್ತಿದ್ದ ಪತಿಯ ಕಣ್ಣಿಗೆ ಕಾಣುತ್ತಿದ್ದವ.
ತನ್ನ ಹತ್ತಿರವಿದ್ದ ಮಾಯ ತಲೆಬುರುಡೆಯನ್ನು ತೆಗೆದುಕೊಂಡು ಯಜ್ಞ ಕುಂಡದ ಮೇಲೆ ಹಿಡಿದು ಅದಕ್ಕೆ ರಕ್ತಾಭಿಷೇಕ ಮಾಡಲು ಶುರು ಮಾಡಿದ, ಹೀಗೆ ಮಾಡುತ್ತಿದ್ದಂತೆ ಆ ತಲೆಬುರುಡೆಯ ಕಂಗಳಿಂದ ರಕ್ತಕಾಂತಿ ಹೊಮ್ಮಿ ಬಲಿಗಾಗಿ ಕೂತಿದ್ದ ಆ ಪತ್ನಿಯನ್ನು ಮಾಂತ್ರಿಕನ ವಶಕ್ಕೆ ಪಡೆಯಿತು. ತಲೆಬುರುಡೆ ಹಿಡಿದಿದ್ದ ಮಾಂತ್ರಿಕ ಆ ಪತ್ನಿಯ ದೇಹವನ್ನು ಬಲಿಕೊಟ್ಟು ತನ್ನ ಪ್ರೇಯಸಿಯ ಆತ್ಮವನ್ನು ಅದರಲ್ಲಿ ಆಮಂತ್ರಿಸಲು ಹಾಗೆಯೇ ಕಣ್ಮುಚ್ಚಿ ತನ್ನ ವಿಚಿತ್ರ ಪೈಶಾಚಿಕ ಮಂತ್ರಗಳನ್ನು ಪಠಿಸುತ್ತ ಆ ಪತ್ನಿಯ ಆತ್ಮವನ್ನು ಆಕೆಯ ದೇಹದಿಂದ ಹೊರಗೆಳೆದ,ಅವನ ಪ್ರೇಯಸಿಯ ಆತ್ಮವು ಆ ಪತ್ನಿಯ ದೇಹದೊಳಗೆ ಪ್ರವೇಶಿಸಿತು. ಅವನ ಪ್ರೇಯಸಿಯ ಆತ್ಮವನ್ನು ಆ ಪತ್ನಿಯ ದೇಹದಲ್ಲಿ ಹೊಕ್ಕಿಸಿ ಆಕೆಯ ದೇಹದ ತಲೆಯನ್ನು ತನ್ನ ಪ್ರೇಯಸಿಯ ಸಮಾಧಿಯ ಮೇಲೆ ಕತ್ತರಿಸುವುದರಿಂದ ತನ್ನ ಪ್ರೇಯಸಿಯ ಆತ್ಮವು ಅದರೊಂದಿಗೆ ಹೊಸ ದೇಹ ಮತ್ತು ಜೀವನವನ್ನು ಪಡೆಯುತ್ತದೆ. ಆ ಪತ್ನಿಯ ದೇಹದಿಂದ ಹೊರ ಬಂದ ಆತ್ಮವನ್ನು ಆ ಯಜ್ಞ ಕುಂಡದ ಪಕ್ಕದಲ್ಲಿ ಒಂದು ತ್ರಿಕೋನಾಕಾರದ ಚಿತ್ರವನ್ನು ಬರೆದು ಅದರಲ್ಲಿ ಕೇಂದ್ರೀಕರಿಸಿದ. ತನ್ನ ಆತ್ಮ ಹೊರಹೋಗಿ ಮಾಂತ್ರಿಕನ ಪ್ರೇಯಸಿಯ ಆತ್ಮ ಹೊಕ್ಕ ಆ ಪತ್ನಿಯ ದೇಹ ಕಣ್ಣನ್ನು ಮುಚ್ಚಿ ಮಾಂತ್ರಿಕನ ಸೇಳೆತಕ್ಕೊಳಗಾಗಿ ಹಾಗೆಯೇ ಧ್ಯಾನ ಸ್ಥಿತಿಯಲ್ಲಿ ಕುಳಿತಿತು, ಇದನ್ನೆಲ್ಲಾ ಗಮನಿಸುತ್ತಿದ್ದ ಆಕೆಯ ಪತಿ ಎಚ್ಚರವಿದ್ದರೂ ಯಾವುದೇ ಶಬ್ದ ಮಾಡದೇ ಆ ಹಗ್ಗದ ಬಂಧನದಿಂದ ಬಿಡಿಸಿಕೊಳ್ಳಲು ಪ್ರಯತ್ನದಲ್ಲಿದ್ದ. ದಂಪತಿಗಳ ಸಹಾಯಕ್ಕೆಬಂದ ಆ ಸೀಸೆಯೊಳಗಿನ ಆತ್ಮ ಅದರಲ್ಲಿಯೇ ತನ್ನ ಕಣ್ಣುಗಳನ್ನು ಕೆಂಪುಗೊಳಿಸಿ ತನ್ನ ಸೇಡನ್ನು ತೀರಿಸಿಕೊಳ್ಳಲು ಜೋರಾಗಿ ಕಿರುಚುತ್ತಾ ತಿರುಗುತ್ತಿತ್ತು. ತಾನು ಹಿಡಿದಿದ್ದ ತಲೆಬುರುಡೆಯನ್ನು ಆ ಆತ್ಮದ ಸೀಸೆಯ ಪಕ್ಕದಲ್ಲಿರಿಸಿ ಆಕೆಯ ದೇಹ ಬಲಿಕೊಡಲು ಅಲ್ಲೇ ಇದ್ದ ಬಾಹು ಹಿಡಿತದ, ಚೂಪಾದ ತುದಿಯುಳ್ಳ ಕತ್ತಿಯನ್ನು ತೆಗೆದು ಕೊಂಡು ಆಕೆಯನ್ನು ತನ್ನ ಪ್ರೇಯಸಿಯ ಸಮಾಧಿಯ ಮೇಲೆ ತಲೆ ಇರಿಸಿ ಕೂರುವಂತೆ ಆಗ್ನೆಯಿತ್ತ. ಆ ಮಾಂತ್ರಿಕನ ಆಜ್ಞೆಯಂತೆ ಅವನ ಸೇಳೆತಕ್ಕೊಳಗಾದ ಆಕೆ ಅವನ ಪ್ರೇಯಸಿಯ ಸಮಾಧಿಯ ಮೇಲೆ ತಲೆಯಿಟ್ಟು ಕುಳಿತಳು.

ಇದ್ದಕ್ಕಿದ್ದ ಹಾಗೆ ಜೋರಾಗಿ ಗಾಳಿ ಬೀಸ ತೊಡಗಿ ಯಜ್ಞ ಕುಂಡದಲ್ಲಿದ್ದ ಬೆಂಕಿಯ ಉರಿ ಹೆಚ್ಚಾಗಿ ಅದು ಮಾಂತ್ರಿಕನ ದಿಕ್ಕಿನೆಡೆಗೆ ಹಾಯ್ದು, ಅವನು ಆಕೆಯ ತಲೆಯನ್ನು ಕತ್ತರಿಸಲು ಮುಂದಾದಾಗ ಯಜ್ಞ ಕುಂಡದ ಜೋರಾದ ಬೆಂಕಿ ಮಾಂತ್ರಿಕನ ಕಂಗಳಿಗೆ ಅಪ್ಪಳಿಸಿ ಅದರಿಂದ ತಪ್ಪಿಸಿಕೊಳ್ಳಲು ಅವನು ತನ್ನ ಪಕ್ಕಕ್ಕೆ ಆಯ ತಪ್ಪಿ ಬೀಳುತ್ತಿದ್ದಂತೆ, ಒಂದೆಡೆ ಅವನ ಕಾಲು ಆ ಆತ್ಮದ ಸೀಸೆಗೆ ಜೋರಾಗಿ ತಾಕಿದ ವೇಗಕ್ಕೆ ಆ ಸೀಸೆಯು ಯಜ್ಞ ಕುಂಡಕ್ಕೆ ತಾಗಿ ಒಡೆದು ಹೋಯಿತು, ಮತ್ತೊಂದೆಡೆಗೆ ಅಲ್ಲೇ ಮಂಡಿಯೂರಿ ಮಂತ್ರ ಪಠಿಸುತ್ತ ಕೂತಿದ್ದ ಸಹಚರರಲ್ಲಿ ಮೊದಲಿಗೆ ಕೂತ್ತಿದ್ದವನ ರುಂಡಕ್ಕೆ ಮಾಂತ್ರಿಕ ಹಿಡಿದಿದ್ದ ಚೂಪಾದ ಕತ್ತಿ ತಾಗಿ ದೇಹದಿಂದ ಬೇರ್ಪಟ್ಟು ಚೆಂಡಿನಂತೆ ನೆಲಕ್ಕುರುಳಿತು. ಚೂಪಾದ ಕತ್ತಿ ಹಗ್ಗದಿಂದ ಬಂಧಿತವಾಗಿದ್ದ ಪತಿಯ ಪಕ್ಕಕ್ಕೆ ಬಿದ್ದಿತು. ಮಾಂತ್ರಿಕ ಬೆಂಕಿ ಅಪ್ಪಳಿಸಿದ ತನ್ನ ಕಣ್ಣುಗಳನ್ನು ಉಜ್ಜುತ್ತಾ ಉರಿ ಉರಿ ಎಂದು ಆಚೀಚೆ ಓಡಾಡುತ್ತಾ ಒದ್ದಾಡ ತೊಡಗಿದ. ಪಕ್ಕಕ್ಕೆ ಬಿದ್ದ ಕತ್ತಿಯನ್ನು ಬಳಸಿ ತನ್ನ ಕೈಗೆ ಕಟ್ಟಿದ ಹಗ್ಗವನ್ನು ನಿಧಾನವಾಗಿ ಕತ್ತರಿಸಿಕೊಳ್ಳಲು ಮುಂದಾದ. ಯಜ್ಞ ಕುಂಡಕ್ಕೆ ತಾಗಿ ಒಡೆದಿದ್ದ ಆ ಗಾಜಿನ ಸೀಸೆಯಿಂದ ಅದರಲ್ಲಿ ಬಂಧನಕ್ಕೊಳಗಾದ ಪುರುಷ ಸಹಾಯಕನ ಆತ್ಮವು ಬಂಧನದಿಂದ ಮುಕ್ತಿ ಪಡೆದಿತ್ತು. ದಂಪತಿಗಳ ಸಹಾಯಕ್ಕೆ ಬಂದ ಆ ಆತ್ಮವು ತನ್ನ ಶಕ್ತಿಯನ್ನು ಉಪಯೋಗಿಸುತ್ತಾ ಪತ್ನಿಯ ದೇಹದಲ್ಲಿ ಸೇರಿದ್ದ ಮಾಂತ್ರಿಕನ ಪ್ರೇಯಸಿಯ ಆತ್ಮವನ್ನು ಹೊರಗೆಳೆದು ಬಿಸಾಡಿತು. ಹೀಗೆ ಅವಳ ದೇಹದಿಂದ ಆತ್ಮ ಹೊರಬರುತ್ತಿದ್ದಂತೆ ಆಕೆಯ ದೇಹವು ಸಮಾಧಿಯ ಪಕ್ಕಕ್ಕೆ ಬಿದ್ದಿತು. ಇತ್ತ ಆಕೆಯ ಪತಿ ಕತ್ತಿಯಿಂದ ಹಗ್ಗವನ್ನು ಕತ್ತರಿಸಿ ಅದರ ಹಿಡಿತದಿಂದ ಬಿಡುಗಡೆಗೊಂಡ.

ಮುಂದುವರೆಯುವುದು ……

Related post